|
| ಪ್ರಶಾಂತೊ ಬ್ಯಾನರ್ಜಿ |
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್
|
ಇದು ವಿಶಿಷ್ಟ ಪ್ರತಿಭೆಯ ಸರಳ ವ್ಯಕ್ತಿಯೊಬ್ಬನ ಕಥೆ. ಜನ ಇವರನ್ನು ಮಹಂತ್ ಜೈರಾಮ್ ದಾಸ್ ಎಂದು ಕರೆಯುತ್ತಾರೆ.
ತೆರೆ ಬಿದ್ದಂತೆ ಚಕ್ಕನೆ ಆ ಪ್ರದೇಶವನ್ನೆಲ್ಲಾ ಕತ್ತಲು ಆವರಿಸಿತು. ಆಶ್ರಮ ಮತ್ತಷ್ಟು ತಣ್ಣಗಾಯಿತು. ಕೆಲವು ಕ್ಷಣಗಳ ಹಿಂದೆ ಈ ಪ್ರದೇಶದಲ್ಲೆಲ್ಲಾ ಕಪಿಗಳ ಕಾರುಬಾರು ನಡೆಯುತ್ತಿತ್ತು. ನಸುಗಂದು ಬಣ್ಣದ ಪುಟ್ಟ ಕೋತಿಗಳು ಕಚ್ಚಾಡುತ್ತಾ, ಎಗರಾಡುತ್ತಾ, ಒಂದನ್ನೊಂದು ತಳ್ಳುತ್ತಾ ದಬ್ಬುತ್ತಾ ತೋಚಿದ್ದನ್ನೆಲ್ಲಾ ಮಾಡುತ್ತಾ ಅಲ್ಲೆಲ್ಲಾ ಸುತ್ತಾಡುತ್ತಿದ್ದವು. ಪಶ್ಚಿಮ ದಿಕ್ಕು ಕೆಂಪಾಗುತ್ತಿದ್ದಂತೆ ವಾನರಪಡೆ ಚಂಗನೆ ಮರವೇರಿ ತಮ್ಮ ದಿನಚರಿಯನ್ನು ಮುಗಿಸುತ್ತವೆ. ಎಲೆಗಳ ಮರ್ಮರ ಜೀರುಂಡೆಗಳ ಜೀಕಾರ ಬಿಟ್ಟರೆ ರಾತ್ರಿಯೆಲ್ಲಾ ಮೌನ ಸಾಮ್ರಾಜ್ಯ. ಬಾವಿ ಕಟ್ಟೆಗೆ ಒರಗಿ ಕುಳಿತು ನಾನು ಕಾಯುತ್ತಿದ್ದೆ...
ಆಗ್ರಾ ಬಳಿಯ ಕಾಡಿನ ನಡುವೆ ಇರುವ ಆಶ್ರಮದಲ್ಲಿ ಒಬ್ಬ ವಿಶಿಷ್ಟ ಸಿದ್ಧಿಯಿರುವ ವ್ಯಕ್ತಿ ಇದ್ದಾರೆ ಎಂದು ನನಗೆ ಯಾರೋ ಹೇಳಿದ್ದರು. ಪ್ರಾಣಿ ಪಕ್ಷಿ ಕೀಟಾದಿಗಳ ಬಳಿ ವ್ಯವಹರಿಸುವ ಕಲೆ ಹೊಂದಿದ್ದ ಆ ವ್ಯಕ್ತಿ ಡಾ. ಡೋಲಿಟ್‌ಲ್‌ನ ಜೀವಂತ ರೂಪವಿದ್ದಿರಬೇಕು! ಬಾಲ್ಯದಲ್ಲಿ ಹ್ಯೂ ಲಾಫ್ಟಿಂಗ್ ಕಥೆಗಳ ನಾಯಕ ಡಾ. ಡೋಲಿಟ್‌ಲ್‌ನ ಪ್ರಭಾವಕ್ಕೊಳಗಾಗಿದ್ದ ನಾನು ನಾಯಿಯಂತೆ ಬೊಗಳಲು, ಗೂಬೆಯಂತೆ ಹೂಂಗುಟ್ಟಲು, ಕರ್ಣ ಕಠೋರವಾಗಿ ಕಿರುಚಲು ಅಭ್ಯಾಸಮಾಡುತ್ತಿದ್ದೆ. ಯಾವುದಿಲ್ಲದಿದ್ದರೂ ಆ ಮೂರನೇ ಪ್ರಕಾರದಲ್ಲಿ ನನ್ನನ್ನು ಮೀರಿಸುವವರು ಯಾರೂ ಇಲ್ಲ ಎಂದು ಅಪ್ಪ- ಅಮ್ಮ ಹೇಳುತ್ತಿದ್ದರು. ಆದರೂ, ನನ್ನನ್ನು ಕತ್ತೆಯೊಂದು ಹಿಂಗಾಲಿನಿಂದ ಒದ್ದು ನನ್ನ ಏಕಾಗ್ರತೆಯ ಅಭ್ಯಾಸಕ್ಕೆ ಭಂಗ ತಂದ ಮೇಲೆ ಆ ಮೂರನೇ ಪ್ರಕಾರದಲ್ಲೂ ನಾನು ಸೋತೆ. ಅಂದೇ ನನ್ನ ಪ್ರಾಣಿ ಮಿಮಿಕ್ರಿಗೆ ಫುಲ್‌ಸ್ಟಾಪ್ ಇಟ್ಟೆ. ಆದರೂ ನನಗೆ ಆಗಾಗ ಅನಿಸುತ್ತಿತ್ತು, ಬಾಲ್ಯದ ಆ ಹವ್ಯಾಸವನ್ನು ಮುಂದುವರಿಸಿದ್ದರೆ ಜೀವವೈಚಿತ್ರ್ಯದ ಭೇದ ತೊರೆದು ಸಂಪೂರ್ಣ ವಿಭಿನ್ನವಾದ ಜೀವಿಯ ಬಳಿ 'ಹಲೋ' ಎಂದಾದರೂ ಹೇಳಲು ಸಾಧ್ಯವಾಗುತ್ತಿತ್ತೇನೋ ಎಂದು. ಸಾಕು ಪ್ರಾಣಿಗಳ ಬಳಿ ಮಾತ್ರವಲ್ಲ, ಕಾಡುಪ್ರಾಣಿಗಳ ಬಳಿಯೂ ಮಾತನಾಡಬಲ್ಲ ವ್ಯಕ್ತಿ ಇದ್ದಾನೆ ಎಂದು ಯಾರೋ ಹೇಳಿದಾಗ 'ಎಲ್ಲಾದರೂ ಉಂಟೇ' ಎಂದು ನಾನು ಮೂಗು ಮುರಿದಿದ್ದೆ. ಅಂದರೂ ಏನೋ ಒಂದು ಬಗೆಯ ಕುತೂಹಲ, ಎಲ್ಲೋ ಒಂಚೂರು ಹೊಟ್ಟೆ ಉರಿ ಬೇರೆ!
ನಿಮಿಷಗಳು ಉರುಳಿದಂತೆ ಚಳಿ ಹೆಚ್ಚುತ್ತಿತ್ತು. ಮರಗಟ್ಟಿಸುವ ಚಳಿ. ಚರ್ಮ, ನರನಾಡಿ ಕೊನೆಗೆ ಮೂಳೆಯಾಳಕ್ಕೂ ಇಳಿದ ಚಳಿ ನನ್ನ ಸ್ಪರ್ಶ ಜ್ಞಾನದ ಹುಟ್ಟಡಗಿಸಿತೇ ಎನ್ನುವ ಸಂಶಯ ಕಾಡದಿರಲಿಲ್ಲ. ಅಸಹ್ಯ ದಣಿವು ಬೇರೆ. ಎಷ್ಟು ದಣಿದಿದ್ದೆ ಎಂದರೆ ಆ ಚಳಿಯಲ್ಲೂ ನಾನು ತೂಕಡಿಸುತ್ತಿದ್ದೆ. ಗಾಢವಾಗಿ ನಿದ್ದೆ ಹತ್ತಿರಲಿಲ್ಲ ಎಂದೆನಿಸುತ್ತದೆ ಯಾರೋ 'ಎದ್ದೇಳು, ಎದ್ದೇಳು' ಎಂದು ಕರೆಯುತ್ತಿದ್ದಿದ್ದು ಕೇಳಿಸಿತು. ಎಲ್ಲೆಲ್ಲೂ ಕತ್ತಲಿನ ರಾಜ್ಯಭಾರ. ಯಾರೋ ನನ್ನ ಭುಜ ಅಲ್ಲಾಡಿಸುತ್ತಾ ಅವರು ಇಲ್ಲೇ ಇದ್ದಾರೆ ಎಂದು ಕಿವಿಯಲ್ಲುಸುರಿದ. ಪ್ರಯತ್ನಪೂರ್ವಕವಾಗಿ ಕಣ್ಣು ಬಿಟೆ. ದುಂಡಗಿದ್ದ ಕುಳ್ಳ ವ್ಯಕ್ತಿಯೊಬ್ಬರು ಎದುರು ನಿಂತಿದ್ದರು. ಇನ್ನೂ ನಿದ್ದೆ ಮಂಪರಿನಲ್ಲೇ ಇದ್ದ ನನಗೆ ಪರಿಸ್ಥಿತಿ- ಪರಿಸರದ ಅರಿವು ಬರಲು ಒಂದರೆಕ್ಷಣ ಬೇಕಾಯಿತು. ನೀವು ಮಹಂತ್ ಜೀ ಅವರೇ? ಆ ಮನುಷ್ಯ ತಲೆ ಅಲ್ಲಾಡಿಸುತ್ತಾ ಬೇಗ ಎದ್ದೇಳು, ಅವರೆಲ್ಲಾ ಇದ್ದಾರೆ ಎಂದರು. ಪಂಚೆ, ಕಂಬಳಿ ಹಾಗೂ ಶಾಲನ್ನು ಬಿಟ್ಟರೆ ಪ್ರಸನ್ನ ವದನರಾಗಿದ್ದ ಆ ಕುಳ್ಳಗಿನ ಮನುಷ್ಯ ನನ್ನ ಬಾಲ್ಯದ ಡಾ. ಡೋಲಿಟ್‌ಲ್‌ನ ಸಾಕ್ಷಾತ್ ಸ್ವರೂಪ! ಅವರು ಇಲ್ಲೇ ಇದ್ದಾರೆ... ನಿನಗೆ ಕೇಳಿಸುತ್ತಿರಬಹುದು. ಕಿವಿಯನ್ನು ಸೂಕ್ಷ್ಮವಾಗಿಸಿದೆ... ಏನೂ ಕೇಳಿಸುತ್ತಿಲ್ಲ. ಜೈರಾಮ್ ಟಾರ್ಚ್ ಹೊತ್ತಿಸಿದರು. ಅದರ ಬೆಳಕು ನಮ್ಮಿಂದ ಕೆಲವೇ ಮೀಟರ್ ಅಂತರದಲ್ಲಿದ್ದ ತವರದ ಷೆಡ್ಡಿನ ಮೇಲೆ ಬಿತ್ತು. ಆ ಹಳದಿ ಕಿರಣಗಳು ಷೆಡ್ಡಿನ ಮೇಲೆ ನರ್ತಿಸಿದವು. ಅಲ್ಲಿ ಏನೂ ಇರಲಿಲ್ಲ. ಫಕ್ಕನೆ ಎರಡು ಕೆಂಪು ನಕ್ಷತ್ರ ಹೊಳೆದಂತಾಯಿತು... ಅಲ್ಲೇ ಪಕ್ಕದಲ್ಲಿ ಇನ್ನೆರಡು... ಅರೆ ಪುನುಗು ಬೆಕ್ಕುಗಳು!
ಮಹಂತ್ ಜಯರಾಮ್ ಆ ಅಪರೂಪದ ಪ್ರಾಣಿಗಳ ಬಳಿ ಹೆಜ್ಜೆ ಇಟ್ಟರು. ಈ ಎರಡು ಕಾಲಿನ ಪ್ರಾಣಿಯನ್ನು ಕಂಡು ಬೆದರಿ ಓಡುವುದು ಬಿಟ್ಟು ಅವು ಷೆಡ್ಡಿನ ಅಂಚಿನ ಕಡೆಗೆ ನಡೆಯುತ್ತಿದ್ದ ಜೈರಾಮ್‌ನನ್ನು ಹಿಂಬಾಲಿಸಿದವು. ಒಂದೆರಡು ವಾಕ್ಯಗಳಲ್ಲಿ ಪುನುಗುಗಳನ್ನು ವಿವರಿಸುತ್ತೇನೆ; ಇವು ನಿಶಾಚರಿಗಳು. ತುಂಬಾ ನಾಚಿಕೆ ಸ್ವಭಾವದ ಈ ಪ್ರಾಣಿಗಳು ಮನುಷ್ಯರನ್ನು ಯಾವಾಗಲೂ ಅನುಮಾನದ ದೃಷ್ಟಿಯಲ್ಲೇ ಕಾಣುತ್ತವೆ. ಪುನುಗು ಬೆಕ್ಕುಗಳಲ್ಲಿ ಗಂಡು ಹಾಗೂ ಹೆಣ್ಣು ಪ್ರಭೇದಗಳೆರಡರಲ್ಲೂ ಬಾಲದ ಕೆಳಗೆ ವಿಶೇಷವಾದ ಗ್ರಂಥಿಗಳಿರುತ್ತವೆ. ಇವುಗಳಿಗೆ ಆ ಗ್ರಂಥಿಗಳಿಂದ ಸುಗಂಧವನ್ನು ಹೊರಸೂಸುವ ಸಾಮರ್ಥ್ಯವಿರುತ್ತದೆ. ಹಾಗೆ ಸುಲಭದಲ್ಲಿ ಕಣ್ಣಿಗೆ ಬೀಳುವ ಪ್ರಾಣಿಗಳಲ್ಲ ಇವು. ಅದಕ್ಕೇ ಅವುಗಳ ಛಾಯಾಚಿತ್ರಗಳೂ ದುರ್ಲಭ. ಆದರೆ ಇಲ್ಲಿ ಬೆಕ್ಕಿನ ಮರಿಗಳಂತೆ ಅವು ನಮ್ಮ ಜೈರಾಮ್‌ನ ಹಿಂದಿಂದೆ ಸಾಗುತ್ತಿವೆ! ಜೈರಾಮ್‌ನ ಜಾದೂ ಅಷ್ಟಕ್ಕೇ ನಿಲ್ಲಲಿಲ್ಲ. ಪುನುಗು ಬೆಕ್ಕುಗಳು ಮಾಂಸಾಹಾರಿಗಳು. ಆದರೆ ಆ ಮಾಂಸಭಕ್ಷಕಗಳಿಗೆ ಹಾಲಲ್ಲಿ ಅದ್ದಿದ ರೊಟ್ಟಿ ತುಣುಕುಗಳನ್ನು ಜೈರಾಮ್ ಕೈಯಾರೆ ಉಣಿಸುತ್ತಿದ್ದರು... ಅದೊಂದು ಮಾಯಾಲೋಕದಂತೆ ಕಂಡಿತು.
ಜೈರಾಮ್‌ನ ಜಾದೂ ಪುನುಗು ಬೆಕ್ಕುಗಳಿಗೆ ಮಾತ್ರ ಸೀಮಿತವಲ್ಲ. ಅರಣ್ಯದೊಳಕ್ಕೆ ನಡೆಯುತ್ತಿದ್ದಂತೆ ಆ ಕತ್ತಲೆಯನ್ನು ಸೀಳುತ್ತಾ ಒಂದು ಹಿಂಡು ಪ್ರಾಣಿಗಳು ಎದುರಾದವು; ಜಿಂಕೆ, ನೀಲ್ಗಾಯ್, ಮುಳ್ಳು ಹಂದಿಗಳು... ಜೈರಾಮ್ ಕೈಯಿಂದ ಆಲೂಗೆಡ್ಡೆ, ಪಾರ್ಲೆ- ಜಿ (ಕಣ್ಣುಜ್ಜಬೇಡಿ, ಸರಿಯಾಗೇ ಓದಿದ್ದೀರಿ!) ತಿನ್ನಲು ಗುಂಪಾಗಿ ಬಂದವು. ಜೈರಾಮ್‌ನ ಅಡುಗೆಕೋಣೆಯಲ್ಲಿ ಎರಡು ನೀಲ್ಗಾಯ್ ಕರುಗಳು ರಾಮು ಮತ್ತು ಶ್ಯಾಮು ಮಲಗಿದ್ದವು. ಅದೂ ಮಧ್ಯಾಹ್ನದ ನಿದ್ದೆಯಲ್ಲಿ ಮುಳುಗಿದ್ದ ಠಕ್ಕ ನರಿಯ ಬಗಲಲ್ಲಿ. ನಂದನವನದ ಸೌಹಾರ್ದತೆ! ಜನ ಜೈರಾಮ್‌ನನ್ನು ಸಿದ್ಧ ಪುರುಷ ಎಂದು ಕರೆಯುತ್ತಾರೆ. ಆನಂದ ಪರವಶನಾಗಿ ಅದೇ ರಾತ್ರಿ ಆ ಕಾಡಿನಿಂದ ಹೊರಬಿದ್ದರೂ ಆ ಮೋಡಿ ಮಾತ್ರ ಇನ್ನೂ ಕಾಡುತ್ತಲೇ ಇದೆ.
ಕಚ್ಚಾಡುತ್ತಿದ್ದ ಕೋತಿಗಳಿಗೆ ಹಾಗೂ ಮೋಡಿ ಮಾಡಿದ ಮಹಂತ್‌ಗೆ ನನ್ನ ಧನ್ಯವಾದ. ಡಾ. ಡೋಲಿಟ್‌ಲ್ ಆಗುವ ನನ್ನ ಕನಸನ್ನು ಬಿಟ್ಟೆ. ಆದರೆ ನಾನು ಟಾರ್ಜನ್, ನನ್ನ ಜೊತೆ ಆಟವೇ? ಎನ್ನುವ ಬಾಲ್ಯದ ನನ್ನ ಇನ್ನೊಬ್ಬ ಹೀರೋ ಈಗಲೂ ಜೊತೆಗಿದ್ದಾನೆ!
ಯಾವ ಜನ್ಮದ ಮೈತ್ರಿ...
ಪ್ರಾಣಿಗಳಿಗೆ ಮಾತು ಬರುತ್ತಿದ್ದರೆ? ಖಂಡಿತಾ ಅವು ಮಾನವರ ಬಳಿ ಹರಟೆ ಕೊಚ್ಚುತ್ತಿರಲಿಲ್ಲ ಬಿಡಿ! ಜಾರ್ಜ್ ಆರ್ವೆಲ್ 'ಅನಿಮಲ್ ಫಾರ್ಮ್'ನಲ್ಲಿ ಹೇಳಿದ ನಾಲ್ಕು ಕಾಲಿನ ಪ್ರಾಣಿಯನ್ನು ನಂಬು, ಎರಡು ಕಾಲಿನ ಪ್ರಾಣಿಯನ್ನಲ್ಲ ಎಂಬ ಮಾತನ್ನು ನಾವು ಆಗಾಗ ಸಾಬೀತು ಮಾಡುತ್ತೇವೆ. ಪ್ರಾಣಿಗಳ ಜೊತೆ ಅವುಗಳದ್ದೇ ಭಾಷೆಯಲ್ಲಿ ಮಾತನಾಡುವ ಕಾಲ್ಪನಿಕ ಕಥಾ ಪಾತ್ರ ಡಾಕ್ಟರ್ ಡೊಲಿಟ್‌ಲ್ಸ್‌ನ ಅಪರಾವತಾರ ಎಂಬಂತೆ ಇಂದಿಗೂ ಕೆಲವು ಪ್ರಾಣಿ ಪ್ರೇಮಿಗಳಿದ್ದಾರೆ.
ಸ್ಟೀವ್ ಇರ್ವಿನ್: ಈ 'ಮೊಸಳೆ ಪ್ರೇಮಿ'ಯ ಮೈನವಿರೇಳಿಸುವ ಸಾಹಸದ ಬಗ್ಗೆ ಟೀಕಾಕಾರರು ಏನೇ ಹೇಳಲಿ ಆದರೆ ಮೊಸಳೆ- ಹಾವು ಮುಂತಾದ ಹೇವರಿಕೆ ಹುಟ್ಟಿಸುವ ಪ್ರಾಣಿಗಳನ್ನೂ ಪ್ರೀತಿಸಲು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದ 'ಆಸ್ಟ್ರೇಲಿಯಾ ಝೂ' ವ್ಯವಸ್ಥಾಪಕನ ಸಾಧನೆಯ ಬಗ್ಗೆ ಎರಡು ಮಾತಿಲ್ಲ. 2006ರಲ್ಲಿ ಸ್ಟಿಂಗ್ ರೇ ಆಕ್ರಮಣದಿಂದ ದುರಂತ ಅಂತ್ಯ ಕಂಡ ಈತನ ಸಂವಹನ ಕಲೆಗೆ ಈಗ ಪತ್ನಿ ಟೆರ್ರಿ ಹಾಗೂ ಮಕ್ಕಳು ಬಿಂದಿ, ರೋಬರ್ಟ್ ವಾರಸುದಾರರು.
ಜೆಫ್ ಕಾರ್ವಿನ್: ಸ್ಫುರದ್ರೂಪಿ- ಉತ್ಸಾಹದ ಚಿಲುಮೆ ಕಾರ್ವಿನ್. 'ಎಮ್ಮಿ ಪ್ರಶಸ್ತಿ' ಪುರಸ್ಕೃತ ಕಾರ್ಯಕ್ರಮ ನಿರ್ವಾಹಕ ಕಾರ್ವಿನ್ ವೈಶಿಷ್ಟ್ಯವೆಂದರೆ ಕಾಡಾನೆ ಹಾಗೂ ವಿಷಪೂರಿತ ಹಾವುಗಳ ಜೊತೆ ಅವರಿಗಿರುವ ಸಲುಗೆ! 'ಕಾರ್ವಿನ್ ಕ್ವೆಸ್ಟ್' ಟೆಲಿವಿಷನ್ ಕಾರ್ಯಕ್ರಮದ ಮೂಲಕ ಪ್ರಾಣಿಗಳ ಸ್ವಭಾವ ವೈಚಿತ್ರ್ಯ ಹಾಗೂ ಪರಿಸರ ವಿಜ್ಞಾನದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಟೊಂಕಕಟ್ಟಿ ನಿಂತಿದ್ದಾರೆ.
ಟಿಪ್ಪಿ: 18ರ ಹರೆಯದ ಟಿಪ್ಪಿ ಡೆಗ್ರೆ ತನ್ನ ಜೀವನದ ಮೊದಲ 9 ವರ್ಷ ಕಳೆದಿದ್ದು ನಮಿಬಿಯನ್ ಗುಡ್ಡಗಳು ಹಾಗೂ ಮರುಭೂಮಿಯಲ್ಲಿ. ಚಿರತೆ, ಕೊಂಬಿನಾನೆಗಳ ಜೊತೆ ಕಾಲ ಕಳೆಯುತ್ತಾ, ಭಾರೀ ಗಾತ್ರದ ಕಪ್ಪೆಗಳ ಜೊತೆ ಆಟವಾಡುತ್ತಾ ಮೀರ್‌ಕ್ಯಾಟ್‌ಗಳ ಜೊತೆ ಜೂಟಾಟ ಆಡುತ್ತಾ! ಈಗ ಪ್ಯಾರಿಸ್‌ನಲ್ಲಿರುವ ಈ ಪೋರಿಗೆ ಹುಟ್ಟೂರು ಆಫ್ರಿಕಾಕ್ಕೆ ಮರಳುವ ತವಕ.
ಐಐಪಿಎಂ
ಥಿಂಕ್ ಟ್ಯಾಂಕ್ |