ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪಾಕ್ ಚುನಾವಣೆ
ಮುಷರಫ್ ಸೋಲು ಪ್ರಜಾಪ್ರಭುತ್ವದ ಗೆಲುವು
 

ಅಮೆರಿಕ ಅಧ್ಯಕ್ಷ ಬುಷ್ 2009ರಲ್ಲಿ ಅಧಿಕಾರದಿಂದ ಕೆಳಗಿಳಿಯುವುದು ಎಲ್ಲರಿಗೂ ಗೊತ್ತು. ಇನ್ನು ನೆರೆಯ ಪಾಕ್ ಅಧ್ಯಕ್ಷ ಮುಷರಫ್ 2008ರಲ್ಲೇ ಕೆಳಗಿಳಿಯುತ್ತಾರೆಯೇ? ಪಾಕಿಸ್ತಾನದಿಂದ ಶಾಹಿದ್ ಹುಸೇನ್ ವಿಶ್ಲೇಷಣೆ


ಫೆಬ್ರುವರಿ 18ರ ಸಾರ್ವತ್ರಿಕ ಚುನಾವಣೆಯಲ್ಲಿ 'ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ' ಹಾಗೂ 'ಪಾಕಿಸ್ತಾನ್ ಮುಸ್ಲಿಂ ಲೀಗ್(ಎನ್)' ಭಾರೀ ಜಯ ಕಂಡಿರುವುದು ಪರ್ವೇಜ್ ಮುಷರಫ್ ಅವರನ್ನು ತೀವ್ರ ಅವಮಾನಕ್ಕೊಳಪಡಿಸಿದೆ. ಪಿಎಂಎಲ್(ಎನ್) ನಾಯಕ ಮಿಯಾನ್ ನವಾಜ್ ಶರೀಫ್ ಹಾಗೂ ಪಿಪಿಪಿ ಉಪಾಧ್ಯಕ್ಷ ಆಸಿಫ್ ಆಲಿ ಜರ್ದಾರಿ, ಈಗಾಗಲೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮುಷರಫ್ ಅವರನ್ನು ಒತ್ತಾಯಿಸಿದ್ದಾರೆ. ಮುಷರಫ್ ಬೆಂಬಲಿತ ಪಿಎಂಎಲ್ (ಕ್ಯು) ಹೀನಾಯವಾಗಿ ಸೋತ ಬಳಿಕ ನವಾಜ್ ಶರೀಫ್ ಹಾಗೂ ಆಸಿಫ್ ಆಲಿ ಜರ್ದಾರಿ ಪ್ರತ್ಯೇಕ ಹೇಳಿಕೆ ನೀಡಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಮುಷರಫ್ ಒಮ್ಮೆ 'ಜನತೆ ಹೇಳಿದರೆ ಮರುಕ್ಷಣ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧ' ಎಂದಿದ್ದರು. ಈಗ ಜನ ತಮ್ಮ ಇಚ್ಛೆಯನ್ನು ಮತಗಳ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನವಾಜ್ ಸೂಚ್ಯವಾಗಿ ಹೇಳಿದ್ದಾರೆ. ನಮ್ಮ ಈ ಬೇಡಿಕೆಯನ್ನು (ಅಧ್ಯಕ್ಷರ ರಾಜೀನಾಮೆ) ನಾವು ಸಂಸತ್ತಿನಲ್ಲಿ ಪ್ರಸ್ತಾಪಿಸಲಿದ್ದೇವೆ. ಯಾವೆಲ್ಲಾ ರಾಜಕೀಯ ಪಕ್ಷಗಳು ನಮಗೆ ಬೆಂಬಲ ನೀಡುತ್ತವೆ ಎಂದು ನೋಡುತ್ತೇವೆ ಎಂದು ಜರ್ದಾರಿ 'ಬಿಬಿಸಿ' ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ನಿರೀಕ್ಷೆಯಂತೆ ಮುಷರಫ್ ಚುನಾವಣಾ ಫಲಿತಾಂಶದ ಬಳಿಕವೂ ಅಧ್ಯಕ್ಷ ಸ್ಥಾನ ತ್ಯಜಿಸಲು ನಿರಾಕರಿಸಿದ್ದಾರೆ. ಆ ಮೂಲಕ ತಾವು ಅಧಿಕಾರದಿಂದ ಕೆಳಗಿಳಿಯಲು ಸಿದ್ಧರಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ನಿವೃತ್ತ ಜನರಲ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಒತ್ತಾಯಗಳನ್ನು ತಳ್ಳಿ ಹಾಕಿರುವ ಮುಷರಫ್ ಅವರ ವಕ್ತಾರ ಮೇಜರ್ ಜನರಲ್ ರಶೀದ್ ಖುರೇಶಿ, ಎಎಫ್‌ಸಿ ವಾರ್ತಾ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಅವರ ಬೇಡಿಕೆಗಳು ಮಿತಿಮೀರುತ್ತಿವೆ. ಇದು ಅಧ್ಯಕ್ಷೀಯ ಚುನಾವಣೆಯೂ ಅಲ್ಲ. ಮುಷರಫ್ ಚುನಾಯಿತರಾಗಿ ಬಂದಿದ್ದು ಐದು ವರ್ಷಗಳ ಅಧಿಕಾರವಧಿಗೆ ಎಂದು ಅಧ್ಯಕ್ಷರ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಯಾವುದೇ ಚುನಾಯಿತ ಪ್ರತಿನಿಧಿಯ ಜೊತೆ ಸರ್ಕಾರ ನಡೆಸಲು ಮುಷರಫ್ ಸಿದ್ಧ ಎಂದು ಖುರೇಶಿ ಸ್ಪಷ್ಟಪಡಿಸಿದ್ದಾರೆ. ಯಾವುದೇ ಪಕ್ಷ ಗೆದ್ದು ಬಂದು ಸರ್ಕಾರ ರಚಿಸಲಿ ಅವರೊಂದಿಗೆ ಆಡಳಿತ ನಡೆಸಲು ಸಿದ್ಧ ಎಂದು ಈ ಹಿಂದೇಯೇ ಮುಷರಫ್ ಹೇಳಿದ್ದಾರೆ. ದೇವರ ಇಚ್ಛೆಯಂತೆ ನಾವು ನಡೆಯುತ್ತೇವೆ ಎಂಬ ಅರ್ಥಗರ್ಭಿತ ಮಾತುಗಳನ್ನೂ ಖುರೇಶಿ ಆಡಿದ್ದಾರೆ. ಮತ ಚಲಾಯಿಸಿದ ಬಳಿಕ ಪಾಕಿಸ್ತಾನದ ಸರ್ಕಾರಿ ಟಿವಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಮುಷರಫ್ ಚುನಾವಣೆಯಲ್ಲಿ ಯಾರೇ ಆಯ್ಕೆಯಾಗಿ ಬಂದರೂ ಪಾಕಿಸ್ತಾನದ ಅಧ್ಯಕ್ಷನಾಗಿ ನಾನು ಅವರೊಂದಿಗೆ ಸಾಮರಸ್ಯದೊಂದಿಗೆ ಸರ್ಕಾರ ನಡೆಸಲು ಸಿದ್ಧ ಎಂದು ಹೇಳಿದ್ದಾರೆ. ಮುಷರಫ್ ಸಿದ್ಧರಾಗಿರಬಹುದು. ಆದರೆ, ಮುಷರಫ್ ಜೊತೆ ಸರ್ಕಾರ ನಡೆಸಲು ನವಾಜ್ ಶರೀಫ್ ಸುತಾರಾಂ ಒಪ್ಪುತ್ತಿಲ್ಲ. ಪ್ರಧಾನಿಯಾಗಿದ್ದಾಗ ಸೇನಾ ಮುಖ್ಯಸ್ಥನ ಸ್ಥಾನದಿಂದ ಮುಷರಫ್ ಅವರನ್ನು ಕೆಳಗಿಳಿಸಿದ್ದ ನವಾಜ್, ನಂತರ 1999ರಲ್ಲಿ ಅದೇ ಮುಷರಫ್‌ರಿಂದ- ಭಾರೀ ಸುದ್ದಿಗೆ ಗ್ರಾಸವಾಗಿದ್ದ ಸೌದಿರಾಷ್ಟ್ರಗಳ ಜೊತೆಗಿನ ಒಪ್ಪಂದದ ಬಳಿಕ- ನವಾಜ್ ಶರೀಫ್ ದೇಶಭ್ರಷ್ಟರಾಗಿದ್ದರು. ತನ್ನನ್ನು ದೇಶಭ್ರಷ್ಟನನ್ನಾಗಿಸಿದ ವ್ಯಕ್ತಿಯ ಜೊತೆ ಮೈತ್ರಿಯೇ? ಖಂಡಿತಾ ಇಲ್ಲ ಎಂಬುದು ನವಾಜ್ ಹಠ. ಹಾಗೆ ಮುಷರಫ್ ಜೊತೆ ಸರ್ಕಾರ ನಡೆಸಲು ಜರ್ದಾರಿಯೂ ಸಿದ್ಧರಿಲ್ಲ. ಏಕೆಂದರೆ ಪಿಪಿಪಿ ಅಧಿನಾಯಕಿ ಬೆನಜೀರ್ ಭುಟ್ಟೊ ಹತ್ಯೆಗೆ ಮುಷರಫ್ ಕಾರಣ ಎಂಬ ಗುಲ್ಲೆದ್ದಿದೆ. ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸುವಲ್ಲಿ ಮುಷರಫ್ ಹೊಣೆಗೇಡಿತನ ತೋರಿಸಿದ್ದೇ ಬೆನಜೀರ್ ಹತ್ಯೆಗೆ ಕಾರಣ ಎಂಬುದು ಪಕ್ಷದ ಸದಸ್ಯರ ವಾದ. ಅಲ್ಲದೆ ಫೆಬ್ರುವರಿ 18ರ ಚುನಾವಣೆ ಬೆನಜೀರ್ ಹತ್ಯೆಯ 'ಅನುಕಂಪದ ಮತ'ಗಳನ್ನು ಭಾರೀ ಪ್ರಮಾಣದಲ್ಲೇ ತಂದುಕೊಟ್ಟಿದೆ. ಅಂಥ ಸಂದರ್ಭದಲ್ಲಿ ಮುಷರಫ್ ಕೈ ಕುಲುಕಿದರೆ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂಬ ವಿವೇಚನೆ ಜರ್ದಾರಿ ಅವರಿಗಿದ್ದಂತಿದೆ. ಮುಷರಫ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಂಸತ್‌ನಲ್ಲಿ ಪ್ರತಿಪಕ್ಷಗಳಿಗೆ ಮೂರನೇ ಎರಡರಷ್ಟು ಬಹುಮತ ಬೇಕು. ಈಗಿನ ಸ್ಥಿತಿಯಲ್ಲಿ ಎರಡೂ ಪಕ್ಷಗಳನ್ನು ಒಟ್ಟು ಸೇರಿಸಿದರೆ ಆ ಬಹುಮತ ಇದ್ದೇ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು. ಮುಷರಫ್ ಅವರಿಗೆ ಇನ್ನು ಇಲ್ಲಿ ಯಾವುದೇ ಕೆಲಸವಿಲ್ಲ, ಅವರ ಉಪಸ್ಥಿತಿ ಸಂಸತ್ ಕಾರ್ಯವೈಖರಿಗೆ ಅಡ್ಡಗಾಲಾಗುತ್ತದೆ ಎನ್ನುತ್ತಾರೆ ಕರಾಚಿ ಉರ್ದು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ವಿಭಾಗದ ಸಹಾಯಕ ಪ್ರೊಫೆಸರ್ ಹಾಗೂ ರಾಜಕೀಯ ವಿಶ್ಲೇಷಕ ತೌಸೀಫ್ ಅಹ್ಮದ್ ಖಾನ್. ಜೊತೆಗೆ ಹೊಸ ಸರ್ಕಾರ ಸಂವಿಧಾನ ತಿದ್ದುಪಡಿ ಮೂಲಕ ತಂದಿರುವ ಸೇನಾ ಸರ್ವಾಧಿಕಾರಿ ಧೋರಣೆಯ ರಕ್ಷಣೆ ಹಾಗೂ ರಾಷ್ಟ್ರೀಯ ಭದ್ರತಾ ಸಮಿತಿಯ ಮೇಲೆ ನಿರ್ಬಂಧ ಹೇರುವ ಅನುಚ್ಛೇದ ೫8-2(ಬಿ)ವನ್ನು ರದ್ದುಪಡಿಸಬೇಕು, ಅಲ್ಲದೆ, ಸರ್ವಾಧಿಕಾರಿ ಆಡಳಿತ ನವೆಂಬರ್ ತಿಂಗಳಲ್ಲಿ ಪದಚ್ಯುತಗೊಳಿಸಿದ ನ್ಯಾಯಾಧೀಶರುಗಳಿಗೆ ಅವರವರ ಸ್ಥಾನವನ್ನು ಮರಳಿಸಬೇಕು ಎಂದೂ ತೌಸೀಫ್ ಪ್ರತಿಪಾದಿಸುತ್ತಾರೆ. ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಮಹಮ್ಮದ್ ಚೌಧರಿ ಹಾಗೂ ಇತರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬೆನಜೀರ್ ಭುಟ್ಟೊ ಅಂಥ ಪ್ರಯತ್ನಗಳನ್ನೇನೂ ಮಾಡಲಿಲ್ಲ. ಆದರೆ, ನವಾಜ್ ಕೈ ಕಟ್ಟಿ ಕೂರಲಿಲ್ಲ. ಪದಚ್ಯುತ ನ್ಯಾಯಮೂರ್ತಿಯವರಿಗೆ ನವಾಜ್ ಭಾರೀ ಬೆಂಬಲವನ್ನೇ ನೀಡಿದ್ದರು. ಅಲ್ಲದೆ ತಾವು ಅಧಿಕಾರಕ್ಕೆ ಬಂದ ಮೇಲೆ ಅವರ ಸ್ಥಾನಮಾನವನ್ನು ಮರಳಿಸಲಾಗುವುದು ಎಂದಿದ್ದರು. ಬಡವ- ಬಲ್ಲಿದ ಎನ್ನದೆ ಪಾಕಿಸ್ತಾನದ ಜನತೆಯಲ್ಲಿ ಸಂಚಲನ ಸೃಷ್ಟಿಸುವಲ್ಲಿ ನ್ಯಾಯಮೂರ್ತಿ ಚೌಧರಿ ಅವರ ಪಾತ್ರ ಹಿರಿದು. ಈಗ ಪದಚ್ಯುತಗೊಂಡ ಇತರ ನ್ಯಾಯಮೂರ್ತಿಯವರೊಂದಿಗೆ ಚೌಧರಿ ಮರಳಿ ಅಧಿಕಾರಕ್ಕೇರಿದರೆ ಅದು ಮುಷರಫ್ ಪಾಲಿನ ಅತಿ ದೊಡ್ಡ ಕಂಟಕವಾಗಲಿದೆ. ಫೆsಬ್ರುವರಿ 18ರ ಫಲಿತಾಂಶ ಒಂದು ವಿಷಯವನ್ನು ಬಹಳ ಸ್ಪಷ್ಟವಾಗಿ ಹೇಳಿದೆ. ಜನರಲ್ ಝಿಯಾ ಉಲ್ ಹಕ್ ಕಾಲದಿಂದಲೂ ನಡೆದುಬಂದ ಮೂಲಭೂತವಾದವನ್ನು ಜನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಜನತೆ ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಮೊರೆ ಹೋಗಿದ್ದಾರೆ. ಜಾತ್ಯತೀತ ಪಕ್ಷವಾದ ಪಿಪಿಪಿಗೆ ಜನರ ವ್ಯಾಪಕ ಬೆಂಬಲ ದೊರೆತಿದೆ. ತಾಲಿಬಾನ್ ಹಾಗೂ ಇಸ್ಲಾಂ ಮೂಲಭೂತವಾದಿಗಳ ಕಟ್ಟಾ ವಿರೋಧಿಯಾದ ಪಿಪಿಪಿಯ ಅಭಿವೃದ್ಧಿ ಪರ ಧೋರಣೆಗಳು ಹಾಗೂ ಸೌಮ್ಯ ನಿಲುವುಗಳು ಜನಮನ ಗೆಲ್ಲುವಲ್ಲಿ ಸಫಲವಾಗಿವೆ. ಅದೇ ರೀತಿ, ಪ್ರಕ್ಷುಬ್ಧ ವಾಯುವ್ಯ ಗಡಿ ಪ್ರಾಂತ (ಎನ್‌ಡಬ್ಲ್ಯುಎಫ್‌ಪಿ), ಅಸ್‌ಫಂದ್ಯಾರ್ ವಾಲಿ ನೇತೃತ್ವದ ಅವಾಮಿ ನ್ಯಾಷನಲ್ ಪಾರ್ಟಿ ಈ ಚುನಾವಣೆಯಲ್ಲಿ ಯಶಸ್ಸು ಗಳಿಸಿದೆ. ಹಲವು ಬಲಪಂಥೀಯ ರಾಜಕೀಯ ಪಕ್ಷಗಳ ಮೈತ್ರಿಕೂಟ ಮುತಾಹಿದಾ ಮಜ್ಲಿಸ್ ಇ ಅಮಲ್ ಹೀನಾಯವಾಗಿ ಸೋಲು ಕಂಡಿದೆ. ಅಂದರೆ, ಈ ಚುನಾವಣಾ ಫಲಿತಾಂಶ ಪಾಕಿಸ್ತಾನದ ಜನತೆ ತಾಲಿಬಾನೀಕರಣ, ಮಾನವ ಬಾಂಬ್ ಹಾಗೂ ಅಲ್ ಖೈದಾ ಹಿಂಸಾಚಾರಗಳ ವಿರುದ್ಧ ತಿರುಗಿ ಬಿದ್ದಿರುವುದರ ಸ್ಪಷ್ಟ ನಿದರ್ಶನವಾಗಿದೆ. ಪದೇ- ಪದೇ ಸ್ವಾರ್ಥಸಾಧಕ ಜನರಲ್‌ಗಳ ಬಲಪ್ರಯೋಗದ ರಾಜಕೀಯದಿಂದ ಹೈರಾಣಾಗಿದ್ದ ಪಾಕಿಸ್ತಾನಕ್ಕೆ ಈಗ ಜ್ಞಾನೋದಯವಾದ ಜನಸಮುದಾಯದ ಮಾದರಿ ರಾಷ್ಟ್ರವಾಗಿ ಹೊರಹೊಮ್ಮುವ ಅವಕಾಶ ದೊರೆತಿದೆ. ಆ ಅವಕಾಶವನ್ನು ಯಾವ ದಿಕ್ಕಿನಲ್ಲಿ ಅಲ್ಲಿನ ರಾಜಕೀಯ ನಾಯಕರು ಬಳಸಿಕೊಳ್ಳುತ್ತಾರೆ ಎಂಬುದು ಸದ್ಯದ ಪ್ರಶ್ನೆ!

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .