ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಕಾಲದ ನೆರಳು

ಮತಾಂಧರು ಕಸಿದುಕೊಂಡ ಕೂಸಿಗೆ ಹುಡುಕಾಟ

 

ಗೋಧ್ರಾ ದುರಂತ (ಫೆಬ್ರುವರಿ 27, 2002) ನಂತರ ದಾರಾ ಮತ್ತು ಆತನ ಪತ್ನಿ, ತಮ್ಮ ಮನೆಯ ಮೇಲಾದ ದಾಳಿಯ ವೇಳೆ ಮಗನನ್ನು ಕಳೆದು ಕೊಂಡರು. ಅವರ ಸ್ನೇಹಿತ, ಪ್ರಸಿದ್ಧ ಚಿತ್ರ ನಿರ್ಮಾಪಕರಾದ ರಾಹುಲ್ ಧೊಲಾಕಿಯಾ ಈ ನೋವನ್ನೇ 'ಪರ್ಜಾನಿಯ' ಚಿತ್ರವನ್ನಾಗಿಸಿದ ಸನ್ನಿವೇಶವನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ...

ತಲತಲಾಂತರಗಳಿಂದ ನಮ್ಮ ಕುಟುಂಬದ ಹಲವಾರು ಮಂದಿ ಒಂದಲ್ಲಾ ಒಂದು ರೀತಿಯಲ್ಲಿ ಗುಜರಾತ್ ರಾಜ್ಯಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಬಾಂಬೆ ಆಳ್ವಿಕೆಯಿಂದ ಮುಕ್ತಿ ಪಡೆದು ಗುಜರಾತ್‌ಗೆ ಸ್ವಾತಂತ್ರ್ಯ ದೊರಕಿಸುವಲ್ಲಿ ನನ್ನ ಅಜ್ಜ ಪ್ರಮುಖ ಪಾತ್ರ ವಹಿಸಿದ್ದರು. 1242ರಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ವಿದ್ಯಾರ್ಥಿ ಚಳವಳಿಯಲ್ಲಿ ನನ್ನ ತಂದೆ ಸಕ್ರಿಯ ಕಾರ್ಯಕರ್ತರಾಗಿದ್ದರು. ಹಾಗಾಗಿ ಗುಜರಾತ್‌ನಲ್ಲಿ ಸಂಚಲನ ಮೂಡಿಸುವ ಎಂತಹ ಘಟನೆ ಸಂಭವಿಸಿದರೂ ಅದು ನಮ್ಮ ಆತಂಕಕ್ಕೆ ಕಾರಣವಾಗುತ್ತದೆ. ಹಬ್ಬ- ಹರಿದಿನ ಅಥವಾ ಮದುವೆ ಸಮಾರಂಭ ಬಂತೆಂದರೆ ನಮ್ಮ ಮನೆಮಂದಿಯೆಲ್ಲ ಅಹಮದಾಬಾದ್‌ನಲ್ಲಿ ಒಂದಾಗುತ್ತಿದ್ದೆವು. ನಾವು ಎಲ್ಲಿ, ಏನೇ ಮಾಡುತ್ತಿದ್ದರೂ 'ಉತ್ರಾನ್' ಹಬ್ಬವನ್ನು (ಮಕರ ಸಂಕ್ರಾಂತಿ) ಅಹಮದಾಬಾದ್‌ನಲ್ಲೇ ಆಚರಿಸುತ್ತಿದ್ದೆವು. 2002ರ ಜನವರಿ 14ರಂದು ಅದೇ ಉತ್ಸಾಹ ಕುಟುಂಬದ ಎಲ್ಲರಲ್ಲೂ ನೆಲೆಯೂರಿತ್ತು. ನನ್ನ ಗೆಳೆಯ ದಾರಾ ಆತನ ಮಡದಿ ಹಾಗೂ ಇಬ್ಬರು ಮಕ್ಕಳೊಂದಿಗೆ ಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ. ಆತನೊಂದಿಗೆ ಮುಂಜಾನೆ 6ರಿಂದ ತಡರಾತ್ರಿಯವರೆಗೆ ಅಂದು ನಾವೆಲ್ಲಾ ಗಾಳಿಪಟ ಹಾರಿಸುತ್ತಾ ಹಬ್ಬದ ಸಂಭ್ರಮ ಅನುಭವಿಸಿದೆವು. ಆದರೆ ಆತನ ಬದುಕಿನ ಉಲ್ಲಾಸದ ಕ್ಷಣಗಳನ್ನು ನಾವು ನೋಡುವುದು ಇದೇ ಕೊನೆಯ ಬಾರಿ ಎಂಬುದು ಯಾರಿಗೂ ಗೊತ್ತಿರಲಿಲ್ಲ! ಫೆಬ್ರುವರಿ 27ರಂದು ಗೋಧ್ರಾದ ಘೋರ ದುರಂತ ಸಂಭವಿಸಿಯೇ ಬಿಟ್ಟಿತು. ರೈಲ್ವೇ ಬೋಗಿಯೊಂದಕ್ಕೆ ಬೆಂಕಿ ಹಚ್ಚಿದ್ದರ ಪರಿಣಾಮವಾಗಿ 58 ಮಂದಿ ಹಿಂದೂಗಳೂ ಸಜೀವದಹನವಾದರು. ಮರುದಿನ, ಅಂದರೆ ಫೆಬ್ರುವರಿ 28ರಂದು ಭಾರತ ಕಂಡು-ಕೇಳರಿಯದ ಅತ್ಯಂತ ಘೋರ ಹತ್ಯಾಕಾಂಡವೊಂದಕ್ಕೆ ಅಹಮದಾಬಾದ್ ಸಾಕ್ಷಿಯಾಯಿತು. ಒಂದು ಲಕ್ಷಕ್ಕೂ ಅಧಿಕ ಮಂದಿ ಬೀದಿಗಿಳಿದು ಹಿಂದೂಯೇತರ ಅಮಾಯಕರ ಮೇಲೆ ಸಾಮೂಹಿಕ ದಾಳಿ ನಡೆಸಿದರು. ದಾರಾನ ಕುಟುಂಬದ ಮೇಲೂ ಧರ್ಮಾಂಧ ಶಕ್ತಿಗಳು ದಾಳಿ ನಡೆಸಿದವು. ಆತನ ಮಗ ಕಾಣೆಯಾದ! ಆ ದಿನ ಮುಂಜಾನೆ 10 ಗಂಟೆ ಸುಮಾರಿಗೆ ಗಲಭೆಕೋರರು ಹಿಂಸಾಚಾರ ಆರಂಭಿಸಿದರು. ಇದು ಒಂದು ಯೋಜಿತ ಕೃತ್ಯವಾಗಿದ್ದು, ಪ್ರತಿಯೊಬ್ಬ ಗಲಭೆಕೋರನಿಗೂ ಅಲ್ಲಿನ ಹಿಂದು ಹಾಗೂ ಮುಸ್ಲಿಮರ ಮನೆಗಳ ಪಟ್ಟಿ ನೀಡಲಾಗಿತ್ತು. ದುರಂತವೆಂದರೆ ನಾಗರಿಕರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾಗ ಯಾವೊಬ್ಬ ಪೊಲೀಸನೂ ನೆರವಿಗೆ ಮುಂದಾಗಲಿಲ್ಲ! ಸಂಜೆ ಹೊತ್ತಿಗೆ ಹೆಚ್ಚಿನ ಎಲ್ಲಾ ನಿವಾಸಿಗಳು ಒಂದೋ ಕೊಲೆಯಾದರು, ಇಲ್ಲವೇ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದರು. ಸುಮಾರು 20 ಅಮಾಯಕರು ಈ ದಾಳಿಯಲ್ಲಿ ಅಮಾನುಷವಾಗಿ ಕೊಲೆಯಾದರು. ಹತ್ತಿರದ ನಗರಗಳಲ್ಲಿ ಮಕ್ಕಳನ್ನು ಸುಮೋವೊಂದರಲ್ಲಿ ತುಂಬಿ ಅದಕ್ಕೆ ಬೆಂಕಿ ಹಚ್ಚಿ ಸಜೀವದಹನ ಮಾಡಲಾಯಿತು. ಆ ಹತ್ಯಾಕಾಂಡದ ನಡುವೆ ಜೈ ಶ್ರೀರಾಮ್ ಎಂಬ ಉನ್ಮಾದದ ಉದ್ಘೋಷಣೆ ಮಾತ್ರ ಮೊಳಗುತ್ತಲೇ ಇತ್ತು. ಅಷ್ಟು ಮಾತ್ರವಲ್ಲ, ಕ್ರೌರ್ಯದ ಪರಮಾವಧಿ ಎಷ್ಟಿತ್ತೆಂದರೆ ಗಲಭೆಕೋರರು ಮೃತದೇಹಗಳ ತಲೆಬುರುಡೆಯನ್ನು ಬಳಸಿ ಕ್ರಿಕೆಟ್ ಆಡುತ್ತಿದ್ದರು!! ಈ ಎಲ್ಲಾ ದುಷ್ಕೃತ್ಯ, ಹಿಂಸಾಚಾರ, ಕೊಲೆಗಳು ಮೂರು ದಿನಗಳ ಕಾಲ ನಿರಂತರವಾಗಿ ಮುಂದುವರಿದವು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಣ್ಣಗೆ ಕೂತು ಎಲ್ಲವನ್ನೂ ವೀಕ್ಷಿಸುತ್ತಾ ಸ್ಥಿತಪ್ರಜ್ಞರಾಗಿದ್ದರು. ಗುಜರಾತ್‌ನಲ್ಲಿ ಹತ್ಯಾಕಾಂಡ ನಡೆದು ಇಂದಿಗೆ ಆರು ವರ್ಷ ಕಳೆದಿವೆ. ದಾರಾ ಹಾಗೂ ಆತನ ಪತ್ನಿ ಮಗ 'ಅಜರ್' ಮರಳಿ ಸಿಗುತ್ತಾನೆ ಎಂಬ ನಿರೀಕ್ಷೆಯಲ್ಲೇ ಜೀವ ಹಿಡಿದುಕೊಂಡಿದ್ದಾರೆ. ತಮ್ಮ ಕುಟುಂಬದ ಕುಡಿಯನ್ನೇ ಕಳೆದುಕೊಂಡ ಅವರಿಗೆ ಇನ್ನೇನೂ ಉಳಿದಿಲ್ಲ. ಅದನ್ನು ಹೇಳಲು ನಾನು 'ಪರ್ಜಾನಿಯ' ಸಿನಿಮಾ ಮಾಡಬೇಕಾಯಿತು. ಆದರೆ, ಗುಜರಾತ್ ತನ್ನ ಹೊಸ 'ದೊರೆ'ಯ ಸಂಭ್ರಮದಲ್ಲಿ ಮೈಮರೆತಿದೆ. ಗಾಂಧಿಯ ನೆಲದಲ್ಲಿ ನಡೆದ ಘೋರ ಸಾಮೂಹಿಕ ಹತ್ಯೆಯ ರೂವಾರಿಗಳ ಬಗ್ಗೆ ಆ ದೊರೆ ಈತನಕ ಯಾವ ತಕರಾರನ್ನೂ ಎತ್ತಿಲ್ಲ!

ಟಿಎಸ್‌ಐ

ನಿರೂಪಣೆ: ಪ್ರಸಿದ್ಧ ಮೆನನ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .