ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಸಣ್ಣ ಕಥೆ
ಕೆಂಪು ಆತ್ಮಗಳು
 
 

ಸುಮಾರು ಇನ್ನೂರು ವರ್ಷಗಳ ಹಿಂದೆ ಸಂಭವಿಸಿದ ಭೂಕಂಪದಿಂದ ನೆಲಸಮವಾದ ಸೂರ್‍ನಳ್ಳಿ ಎಂಬ ಹಳ್ಳಿ ಮತ್ತೆ ಹೊಸದಾಗಿ ನಿರ್ಮಾಣಗೊಂಡು ಸುರಪುರವಾದ ಬಹಳ ಕಾಲದ ಬಳಿಕವೂ ಸುರಪುರ ಎಂಬ ಪಟ್ಟಣದ ಹೃದಯಭಾಗದಲ್ಲಿ ಕಾಲು ಎಕರೆ ಭೂಮಿ ಖಾಲಿಯಾಗಿಯೇ ಉಳಿದುಕೊಂಡಿತ್ತು. ಮಂದಿ ಅದನ್ನು ಆಕ್ರಮಣ ಮಾಡಿಕೊಳ್ಳಲಿಲ್ಲ. ಅಂಗೈಯಗಲ ಭೂಮಿ ಕಂಡರೂ ಒತ್ತುವರಿ ಮಾಡಿಕೊಳ್ಳದಿರಲಾಗದ ಭೂಲಾಲಸೆಯ ಮಂದಿ ಕೂಡ ಅದರತ್ತ ಕಾಲಿಡಲಿಲ್ಲ ಎಂದರೆ ಅದಕ್ಕೆ ಬಲವಾದ ಕಾರಣವಿರಲೇಬೇಕು. ಒಂದಲ್ಲ ಹಲವು ಕಾರಣಗಳಿದ್ದವು. ಅದರಲ್ಲಿ ಮುಖ್ಯವಾದ ಕಾರಣಗಳು ಎರಡು. ಹಿಂದೆ ಅಲ್ಲೊಂದು ದೇವಮಂದಿರವಿತ್ತು ಎಂಬ ನಂಬಿಕೆ ಒಂದು. ಅದು ಸ್ಮಶಾನಸಹಿತವಾದ ದೇವಮಂದಿರವಾಗಿತ್ತು ಮತ್ತು ಈಗಲೂ ಅಲ್ಲಿ ಅಸಂಖ್ಯಾತ ಆತ್ಮಗಳು ವಾಸವಾಗಿವೆ ಎನ್ನುವ ನಂಬಿಕೆ ಇನ್ನೊಂದು. ಅದು ಯಾವ ದೇವರ ಮಂದಿರ ಎನ್ನುವುದು ಯಾರಿಗೂ ಸ್ಪಷ್ಟವಿರದಿದ್ದುದರಿಂದ ಯಾರೂ ಆ ಕಾಲೆಕರೆ ಭೂಮಿಯ ಗೊಡವೆಗೆ ಹೋಗಿರಲಿಲ್ಲ. ಅಲ್ಲಲ್ಲಿ ಇನ್ನೂ ಉಳಿದಿದ್ದ ಇಟ್ಟಿಗೆ ಮತ್ತು ಗಾರೆಯ ಚೂರುಗಳಿಂದ ಆ ಮಂದಿರ ಇಗರ್ಜಿಯೋ ಮಸೀದಿಯೋ ಆಗಿತ್ತು ಎನ್ನುವುದು ಕೆಲ ಮಂದಿಯ ಊಹೆಯಾಗಿತ್ತು. ಏನೇ ಆಗಿದ್ದರೂ ಜೀರ್ಣೋದ್ಧಾರದ ಕುರಿತು ಯಾರೂ ಯೋಚಿಸಲಿಲ್ಲ. ಯೋಚಿಸದಿರಲು ಅದು ಎಂಥ ದೇವಾಲಯವಾಗಿತ್ತು ಎಂದು ಖಚಿತವಾಗಿ ನಿರ್ಧರಿಸಲು ಆಗದಿದ್ದುದು ಒಂದು ಕಾರಣ. ಅದಕ್ಕಿಂತ ಮುಖ್ಯವಾಗಿ, ದೇವಾಲಯ ನಿರ್ಮಾಣಕ್ಕೆ ಬೇಕಾದ ಹಣ ಮಂದಿಯ ಬಳಿ ಇರದಿದ್ದುದು ಇನ್ನೊಂದು ಕಾರಣ. ಮಂದಿಯ ಬಳಿ ಹಣ ಇದೆಯೆಂದಾದರೆ, ದೇವರು ಎಷ್ಟು ಶತಮಾನಗಳಿಂದ ಅವಶೇಷಗಳಡಿ ಚಿಂದಿ- ಚಿಂದಿಯಾಗಿ ಬಿದ್ದುಕೊಂಡಿದ್ದರೂ ಅದು ಯಾವ ದೇವರು ಎಂದು ಹಣವೇ ನಿರ್ಧರಿಸಿಬಿಡುತ್ತದೆ. ತಮ್ಮ ದೇವರು ತಮ್ಮ ದೇವರು ಎನ್ನುವ ಕಲಹ ಆರಂಭಗೊಳ್ಳಲು ಕೂಡ ಜೀರ್ಣೋದ್ಧಾರದ ಯೋಚನೆಯ ಬೀಜ ಮಣ್ಣಿನ ಮೇಲೆ ಬೀಳಬೇಕಲ್ಲ? ಈ ಕಾಲೆಕರೆ ಖಾಲಿ ಭೂಮಿ ಅಷ್ಟು ಕಾಲದಿಂದಲೂ ಪೊದೆ ಪೊದರುಗಳಂತಿರಲಿ, ಹುಲ್ಲು ಸಹ ಬೆಳೆಯದೆ ಬರಡಾಗಿಯೇ ಇತ್ತು. ಒಂದು ಗದ್ದೆ ಅಥವಾ ಹೊಲ ಅಥವಾ ಮನೆಯ ಅಂಗಳ, ಹೆಚ್ಚೇಕೆ, ಕಾಂಕ್ರೀಟು ತಾರಸಿಯನ್ನು ಕೂಡ ಮಳೆಗಾಲದ ನಡುವೆ ಒಂದಿಂಚೂ ಬಿಡದೆ ಹುಲ್ಲು ಹಾವಸೆ ಮತ್ತು ಕಳೆಗಿಡಗಳು ಆಕ್ರಮಿಸಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತವೆ. ಅಂಥಾದ್ದರಲ್ಲಿ ಕಾಲು ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಎರಡು ಶತಮಾನ ಕಾಲ ಏನೂ ಬೆಳೆಯದಿರುವುದೆಂದರೆ ಅದಕ್ಕಿಂತ ದೊಡ್ಡ ವಿಚಿತ್ರ ಏನು? ಆದರೂ ಸುರಪುರದ ಮಂದಿಗೆ ಅದು ವಿಚಿತ್ರ ಎನಿಸಿರಲಿಲ್ಲ. ಹಾಗನಿಸದಿದ್ದುದಕ್ಕೆ ಅಂಥದ್ದನ್ನು ಗಮನಿಸುವ ಮನಸ್ಸು ಸುರಪುರದ ಮಂದಿಗೆ ಇರದಿದ್ದುದೇ ಕಾರಣ. ಕಾರಣಗಳ ಸರಮಾಲೆ ಇನ್ನೂ ಉದ್ದವಿದೆ. ಅದು ಇಗರ್ಜಿ ಅಥವಾ ಮಸೀದಿ ಆಗಿತ್ತು ಎಂದಾದರೆ, ಅದು ಭಾಗಶಃ ರುದ್ರಭೂಮಿ ಸಹ ಆಗಿರಬೇಕಲ್ಲ? ರುದ್ರಭೂಮಿಯಿಲ್ಲದ ಪಟ್ಟಣವಿಲ್ಲ. ಸುರಪುರಕ್ಕೂ ಒಂದು ರುದ್ರಭೂಮಿ ಇತ್ತು. ಪಟ್ಟಣದ ನಡುವೆ ಇನ್ನೊಂದು ರುದ್ರಭೂಮಿ ಬೇಡ ಎನ್ನುವುದು ಜನರ ಭಾವನೆಯಾಗಿತ್ತು. ಸಾಯುತ್ತಿರುವವರಿಗೋಸ್ಕರ ರುದ್ರಭೂಮಿ ಸಹಿತವಾದ ಯಾವುದೇ ದೇವರನ್ನು ಪ್ರತಿಷ್ಠಾಪಿಸುವ ಅಗತ್ಯ ಸಹ ಮಂದಿಗಿರಲಿಲ್ಲ. ಹಿಂದೆ ಸಂಭವಿಸಿದ ಭೂಕಂಪದಲ್ಲಿ ಮನುಷ್ಯರು ಮಾತ್ರವಲ್ಲ ದೇವರುಗಳು ಸಹ ಬೇರು ಸಮೇತ ನಾಶವಾಗಿದ್ದರು. ದೇವರ ಜೊತೆ ಜಾತಿ ಮತಗಳು ಸಹ ನಿರ್ನಾಮವಾಗಿದ್ದುವು. ಈಗ ಪ್ರತಿಯೊಂದು ಮನೆಯಲ್ಲಿಯೂ ಅವರವರದೇ ಆದ ದೇವರಿದ್ದರು. ಅಂದರೆ, ಸುಮಾರು ಒಂಬತ್ತು ಸಾವಿರ ಮನೆಗಳಿರುವ ಸುರಪುರದಲ್ಲಿ ಅಷ್ಟೇ ಸಂಖ್ಯೆಯ ದೇವರಿದ್ದರು ಎನ್ನಬಹುದು. ಮಂದಿ ತಂತಮ್ಮ ಮನೆಯಲ್ಲಿ ತಂತಮ್ಮ ದೇವರನ್ನು ತಂತಮ್ಮ ಶೈಲಿಯಲ್ಲಿ ಪೂಜಿಸುತ್ತಿದ್ದರು. ತಂತಮ್ಮ ಭಾಷೆಯಲ್ಲಿ ಪ್ರಾರ್ಥನೆ, ಭಜನೆ ಮಾಡುತ್ತಿದ್ದರು. ಸುರಪುರದಲ್ಲಿ ನೆಲಸಿರುವ ನಿರಂತರ ಶಾಂತಿಗೆ ಈ ಅನೇಕತೆಯಲ್ಲಿ ಇರುವ, ಅಥವಾ ಇಲ್ಲದಿರುವ ಏಕತೆಯೇ ಕಾರಣ. ಮಂದಿಯ ಈ ಅನೇಕತಾ ಏಕತೆಯಿಂದಾಗಿ 'ಸುರಪುರ' ಎಂಬ ಹೆಸರನ್ನು 'ನಿರೀಶ್ವರ ನಗರ' ಎಂದು ಬದಲಾಯಿಬೇಕು ಎಂದು ಸುರಪುರದಿಂದ ಹೋಗಿ ರಾಜಧಾನಿಯಲ್ಲಿ ನೆಲಸಿದ ಮಂದಿ ಹೇಳುತ್ತಿದ್ದರು. ಕರ್ನಾಟಕ ರಾಜ್ಯದಲ್ಲಿ ಎಲ್ಲಿ ಏನೇ ಬದಲಾವಣೆಯಾದರೂ ಸುರಪುರದ ಮಂದಿಯ ಬದುಕು ಮಾತ್ರ ಆರಕ್ಕೇರದೆ ಮೂರಕ್ಕಿಳಿಯದೆ ಸಾಗುತ್ತಿತ್ತು. ಸುರಪುರದ ಮಂದಿಯನ್ನು ಲೋಕದ ಕಣ್ಣಿಗೆ ಕಾಣಿಸುವಂತೆ ಮೇಲಕ್ಕೆತ್ತಲು ಅವರ ಸ್ವಂತ ದೇವರುಗಳಿಂದಲೂ ಆಗಿರಲಿಲ್ಲ. ದೇವರನ್ನು ಲೋಕಕ್ಕೇ ಕಾಣಿಸುವಂತೆ ಮೇಲಕ್ಕೆತ್ತಲು ಅವರಿಂದಲೂ ಆಗಿರಲಿಲ್ಲ. ಆದ್ದರಿಂದ ದೇವರ ಕುರಿತಾದ ಪ್ರಶ್ನೆಗಳಿಗೆ ಹಾಗೂ ದೇವರು ಇದ್ದಾನೆಯೆ ಇಲ್ಲವೆ ಎಂಬ ಸಂದೇಹಗಳಿಗೆ ಆಸ್ಪದವೇ ಇಲ್ಲದೆ ಸುರಪುರದ ಮಂದಿ ಅನ್ಯೋನ್ಯವಾಗಿದ್ದರು. ಸುರಪುರದ ಮಂದಿಯ ಬಗ್ಗೆ ಪತ್ರಿಕೆ, ಟಿವಿ ಮುಂತಾದ್ದು ಕೂಡ ಮಾತಾಡುತ್ತಿರಲಿಲ್ಲ. ರಾಜಧಾನಿಯಿಂದ ನೂರಾರು ಮೈಲಿ ದೂರದ ಸುರಪುರ ಎಂಬ ಪಟ್ಟಣದ ಕಡೆಗೆ ಸರ್ಕಾರದ ಗಮನ ಯಾವತ್ತೂ ಹರಿಯಲಿಲ್ಲ. ಹೀಗಿರಲು, ಒಂದು ಮಳೆಗಾಲದಲ್ಲಿ ಎರಡು ವಾರಗಳ ಕಾಲ ಸುರಪುರದಲ್ಲಿ ಧೋ ಧೋ ಎಂದು ಎಂಥ ಮಳೆ ಸುರಿಯಿತೆಂದರೆ ಮಳೆಯ ನಡುವೆ ಪ್ರತಿ ದಿನ ನಡೆದ ಸಿಡಿಲು ಮಿಂಚಿನ ದಾಳಿಗೆ ಇದು ಮತ್ತೊಂದು ಭೂಕಂಪವೇ ಆಗಿರಬಹುದು ಎಂದು ಮಂದಿಗೆ ಅನಿಸತೊಡಗಿತು. ಮಳೆ ನಿಂತು, ಒಂದು ದಿನ ಸೂರ್ಯ ಕಣ್ಣುಬಿಟ್ಟಾಗ ಮಂದಿಯ ದೃಷ್ಟಿ ತಟ್ಟನೆ ಆ ಕಾಲೆಕರೆ ಪಾಳು ಭೂಮಿಯ ಕಡೆಗೆ ಹೊರಳಿತು. ಅವರ ಗಮನವನ್ನು ಸೆಳೆದದ್ದು ಸ್ವಲ್ಪ ತಗ್ಗಾಗಿದ್ದ ಕಡೆ ಸುಮಾರು ಇನ್ನೂರು ಚದರಡಿ ವಿಸ್ತಾರದಲ್ಲಿ ಗುಂಪಾಗಿ ಸೊಂಪಾಗಿ ನೆಲ ಕಾಣದಂತೆ ಬೆಳೆದಿದ್ದ ಒಂದು ಸಸ್ಯ. ತಾವರೆಯೆಲೆಯಂತೆ ತೋರುವ ಅದರ ಎಲೆಗಳು ತಾವರೆಯೆಲೆಯ ಎರಡು ಪಾಲು ದಪ್ಪಗಿದ್ದುವು. ಅಲ್ಲದೆ, ತಾವರೆಯೆಲೆಗಿಂತಲೂ ವಿಸ್ತಾರವಾಗಿದ್ದುವು. ದಂಟು ಕೂಡ ತಾವರೆ ದಂಟಿನಂತೆಯೇ ಇದ್ದು, ನೆಲದಿಂದ ಸುಮಾರು ಮೂರು ಅಡಿ ಎತ್ತರ ಬೆಳೆದಿತ್ತು. ಇದೆಲ್ಲಕ್ಕಿಂತಲೂ ಗಮನೀಯವಾಗಿದ್ದುದು ಆ ಸಸ್ಯದ ಬಣ್ಣ. ಅದರ ಎಲೆ ಮತ್ತು ದಂಟು ಎಷ್ಟು ಕೆಂಪಗಿತ್ತೆಂದರೆ ರಕ್ತದಲ್ಲಿ ತೊಯ್ದಂತಿತ್ತು. ಆ ಸಸ್ಯಪುಂಜ ಅಷ್ಟು ದಿನ ಬೆಳೆಯುತಿದ್ದುದು ತಮಗೇಕೆ ಕಾಣಿಸಲಿಲ್ಲ ಎಂದು ಎಲ್ಲರೂ ಆಶ್ಚರ್ಯಪಟ್ಟರು. ವಾಸ್ತವದಲ್ಲಿ, ಸುರಪುರದ ಮಂದಿಗೆ ಅಷ್ಟು ದಿನ ಆ ಸಸ್ಯದ ಬೆಳವಣಿಗೆ ಕಾಣಿಸದಿದ್ದುದು ಸ್ವಾಭಾವಿಕವೇ ಆಗಿತ್ತು. ಅತ್ತಿತ್ತ ನೋಡದೆ ಬದುಕುವುದು ತಲೆತಲಾಂತರದಿಂದ ಅವರ ರೂಢಿಯಾಗಿತ್ತು. ಆ ರೂಢಿಗೆ ಭೂಕಂಪದ ಹಿನ್ನೆಲೆಯಿದೆ ಎಂದು ಹೇಳಬಹುದು. ಭೂಕಂಪದ ಅನಾಹುತದ ಬಳಿಕ ಕ್ಷಾಮಡಾಮರಗಳ ನಡುವೆ ಒಂದೆರಡು ತಲೆಮಾರು ವಸತಿ ಪುನರ್ನಿರ್ಮಾಣದಲ್ಲಿ ಮಂದಿ ತಮ್ಮನ್ನೇ ತಾವು ಕಳೆದುಕೊಂಡಂತಿದ್ದರು. ಭೂಕಂಪವು ವಸತಿ ಅಥವಾ ಮನೆ ಎನ್ನುವುದು ಎಷ್ಟು ನಶ್ವರ ಎಂದು ತೋರಿಸುವುದರೊಂದಿಗೆ ಅದು ಮನುಷ್ಯನಿಗೆ ಎಷ್ಟು ಅನಿವಾರ್ಯ ಎನ್ನುವುದನ್ನು ಕೂಡ ತೋರಿಸಿಕೊಟ್ಟಿತ್ತು. ವಸತಿಯೆನ್ನುವುದಾದ ಬಳಿಕ ಮರಳಿ ಮರಳಿ ಅದನ್ನು ನವೀಕರಿಸುವುದರಲ್ಲಿ ಮತ್ತು ಅನಂತರ ಅದರೊಳಗೆ ಬದುಕುವ ವ್ಯಸ್ತತೆಯಲ್ಲಿ ತಮ್ಮ ಬದುಕನ್ನು ತಾವೇ ಕಾಣದವರಾಗಿದ್ದರು ಸುರಪುರದ ಮಂದಿ! ಎಷ್ಟು ವ್ಯಸ್ತರಾಗಿದ್ದರು ಎಂದರೆ, ಬದುಕಿರುವವರು ಬದುಕಿದ್ದಾರೆ ಎಂಬ ಕಾರಣದಿಂದ ಅವರಂತೆ ಬದುಕಿರುವ ಇತರರ ಗಮನಕ್ಕೆ ಬೀಳುತ್ತಿರಲಿಲ್ಲ. ಆದುದರಿಂದ ತನ್ನಂತಿರುವ ಇತರರು ಬದುಕಿರುವರು ಎಂಬುದು ಮಂದಿಯ ಗಮನಕ್ಕೆ ಹೋಗುವುದು ಇತರರು ಸತ್ತಾಗ ಮಾತ್ರ. ಆಗ ಬದುಕಿರುವ ಮಂದಿ ತಪ್ಪದೆ ಸತ್ತವರನ್ನು ಕಾಣಲು ಹೋಗುತ್ತಿದ್ದರು. ಕಂಡು ಕಣ್ಣೀರು ಮಿಡಿಯುತ್ತಿದ್ದರು. ಜೀವಂತವಾಗಿರುವವರೆಗೆ ಯಾರೂ ಅತ್ತ ಸುಳಿಯುತ್ತಿರಲಿಲ್ಲ. ಸತ್ತವರನ್ನು ಕಾಣಲು ಹೋಗುವುದು ಎಂದರೆ ಮಂದಿಗೆ ತಾವು ಬದುಕಿದ್ದೇವೆ ಎನ್ನುವುದನ್ನು ತಮಗೆ ತಾವೇ ದೃಢೀಕರಿಸುವ ಒಂದು ಸಂಪ್ರದಾಯವಾಗಿತ್ತು. ನೋಡನೋಡುತ್ತಿರುವಂತೆಯೇ, ಕೆಲವೇ ದಿನಗಳಲ್ಲಿ ಆ ವಿಚಿತ್ರ ಸಸ್ಯವು ಕಾಲೆಕರೆ ಖಾಲಿ ಭೂಮಿಯನ್ನು ಪೂರ್ತಿಯಾಗಿ ಆವರಿಸಿಕೊಂಡಿತು.ಅದರ ಚಿತ್ರಗಳು ಪತ್ರಿಕೆಗಳಲ್ಲಿ ಮತ್ತು ಟಿವಿಯಲ್ಲಿ ಕಾಣಿಸಿಕೊಂಡವು. ಯಾರೋ ಒಬ್ಬರು ಜಗದ್ಗುರು ಸಸ್ಯಪುಂಜವನ್ನು ಟಿವಿಯಲ್ಲಿ ನೋಡಿ 'ಇದು ಪವಿತ್ರ ಸಸ್ಯ' ಎಂದದ್ದೇ, ಅದೇ ಹೆಸರು ಪ್ರತೀತವಾಯಿತು. ಮಂದಿ ತಂತಮ್ಮ ಸ್ವಂತ ದೇವರುಗಳನ್ನು ಮರೆತು ಪವಿತ್ರ ಸಸ್ಯವನ್ನು ನಾನಾ ರೀತಿಯಲ್ಲಿ ಪೂಜಿಸತೊಡಗಿದರು. 'ಯಾರೂ ಪವಿತ್ರ ಸಸ್ಯವನ್ನು ಮುಟ್ಟಿ ಮಲಿನಗೊಳಿಸಬಾರದು' ಎಂದು ಸ್ವಾಮೀಜಿ ಅಪ್ಪಣೆ ಕೊಡಿಸಿದ್ದರಿಂದ ಮಂದಿ ಭಕ್ತಿ ಭಾವದಿಂದ ದೂರದಲ್ಲೇ ಧೂಪ, ದೀಪ ಇರಿಸಿ ಸಾಷ್ಟಾಂಗ ವಂದನೆ ಮಾಡತೊಡಗಿದರು. ಆ ಕಾಲೆಕರೆ ಭೂಮಿಯ ಸುತ್ತ ಆರಡಿ ಎತ್ತರದ ಪ್ರಾಕಾರ ಏರಿಸಿದರು. ಪ್ರಕಾರಕ್ಕೆ ಹೊಂದಿಕೊಂಡು ಒಂದು ವೃತ್ತಾಕಾರದ ದೇವಾಲಯವನ್ನು ನಿರ್ಮಿಸುವ ಯೋಚನೆ ಕೂಡ ಮೂಡಿ ಬಂತು. ಪವಿತ್ರ ಸಸ್ಯವನ್ನು ಕಣ್ಣಾರೆ ಕಾಣಲು ಮಂದಿ ಹಿಂಡು ಹಿಂಡಾಗಿ ಬರತೊಡಗಿದರು. ಕಾಲಿರಿಸಲು ಕೂಡ ಎಡೆಯಿಲ್ಲ ಎಂಬಂತೆ ಸುರಪುರ ಎಂದೂ ಕಾಣದಂಥ ಜನಸಂದಣಿಯಿಂದ ತುಂಬಿಹೋಯಿತು. ಸಸ್ಯ ವಿಜ್ಞಾನಿಗಳು ಬಂದರು. ಅವರ ಜತೆಯಲ್ಲಿ ಇತರ ಜ್ಞಾನಿಗಳು ಕೂಡ ಬಂದರು. ಯಾರೂ ಅದರ ಒಂದು ಎಲೆಯನ್ನು ಕೂಡ ಮುಟ್ಟುವ ಧೈರ್ಯ ತೋರಲಿಲ್ಲ. ಯಾಕೆಂದರೆ, 'ಪವಿತ್ರ'ವಷ್ಟೇ ಅಲ್ಲ, ಅದು ಒಂದು 'ಅಲೌಕಿಕ ಸಸ್ಯ' ಎನ್ನುವುದು ಮಂದಿಯ ನಂಬಿಕೆಯಾಗಿಬಿಟ್ಟಿತ್ತು. ಅದರಿಂದಾಗಿ ಸುರಪುರಕ್ಕೆ ಏನೋ ಒಳ್ಳೆಯದಾಗಲಿದೆ ಎಂದು ಮಂದಿ ಆಡಿಕೊಳ್ಳುತಿದ್ದರು. ಇದು ಭೂಮಿಯ ಮೇಲಿರುವ ಅತ್ಯಂತ ಸುಂದರ ಸಸ್ಯ ಎಂದು ಕೆಲವರು ಬಣ್ಣಿಸಿದರೆ, ಕೆಲವು ಕವಿಗಳು ಕೆಂಪು ಸಸ್ಯದ ಕುರಿತು ಕವಿತೆಗಳನ್ನು ರಚಿಸಿದರು. ಅಲೌಕಿಕ ಎಂದು ಕೊಂಡಾಡಿದರು. ಶ್ವೇತವರ್ಣ ಲೋಕಕ್ಕೇ ಚೆಂದ. ಆದರೆ ಸುರಪುರೀಯರಿಗೆ ಶ್ವೇತವರ್ಣಕ್ಕಿಂತಲೂ ಪಾಟಲವರ್ಣ ಹೆಚ್ಚು ಚೆಂದ ಕಾಣತೊಡಗಿತು. ಯಾಕೆಂದರೆ ಆ ಸಸ್ಯದ ಕೆಂಪು ಅಪೂರ್ವವಾಗಿತ್ತು. ಆದರೂ ಒಂದು ದಿನ ಒಬ್ಬ ಸಸ್ಯವಿಜ್ಞಾನಿ ಜಗತ್ತಿನಲ್ಲೇ ಅಪೂರ್ವವಾದ ಆ ಸಸ್ಯದ ಗುಣ ಧರ್ಮಗಳೇನು ಎಂದು ತಿಳಿದುಕೊಳ್ಳುವುದು ಅಗತ್ಯ ಇದೆ ಎಂದು ಒಂದು ಗಿಡವನ್ನು ಬುಡದಿಂದ ಕತ್ತರಿಸಿ ತೆಗೆದ. ಆಗ ಸಂಭವಿಸಿತು ಎಲ್ಲೂ ಯಾವತ್ತೂ ನಡೆಯದ ವಿಚಿತ್ರ! ಗಿಡವನ್ನು ಕತ್ತರಿಸಿದಲ್ಲಿ ಕಾಂಡದಿಂದ ಒಂದೇ ಸಮನೆ ನೆತ್ತರಿನಂಥ ದ್ರವ ಹರಿಯತೊಡಗಿತು. ಒಂದೇ ಗಿಡದಿಂದ ಹತ್ತು ಲೀಟರಿನಷ್ಟು ರಕ್ತಸದೃಶ ದ್ರವದ ಪ್ರವಾಹ! ಇದೆಂಥ ವಿಚಿತ್ರ ಎಂದು ಮಂದಿ ವಿಸ್ಮಿತರಾದರು. ಅಷ್ಟು ದ್ರವ ಸಸ್ಯದಿಂದಲೇ ಬಂತು ಎಂದು ನಂಬುವುದು ಮಂದಿಗೆ ಕಷ್ಟವೆನಿಸಿತು. ಆದರೂ ನಂಬಲೇ ಬೇಕಾಗಿತ್ತು. ಮಂದಿಯ ವಿಸ್ಮಯ ಅಲ್ಲಿಗೇ ನಿಲ್ಲಲಿಲ್ಲ. ಸಸ್ಯದ್ರವದಿಂದ ಮೆಲ್ಲನೆ ಹೊರಟ ನೆತ್ತರ ವಾಸನೆಯಂಥ ವಾಸನೆ ಎಲ್ಲಾ ಕಡೆ ಪಸರಿಸಿತು. ಈಗ ಮಂದಿ ಭಯಭೀತರಾದರು. ಅಲ್ಲಿಯ ವರೆಗೆ ಕೆಂಪು ಸಸ್ಯರಾಶಿಯನ್ನು ಹತ್ತಿರದಿಂದ ವೀಕ್ಷಿಸುತ್ತಿದ್ದ ಮಂದಿ ಹತ್ತೈವತ್ತು ಅಡಿ ದೂರಕ್ಕೆ ನೆಗೆದರು. ಆದರೆ ಒಂದೆರಡು ದಿನಗಳಲ್ಲಿಯೇ ಅದು ನೆತ್ತರ ವಾಸನೆಯಂತಿಲ್ಲ ಒಂದು ನವಿರಾದ ಸುಗಂಧದಂತಿದೆ, ಸುಮಾರಾಗಿ ಶ್ರೀಗಂಧದ ವಾಸನೆಯಂತಿದೆ ಎಂದು ಕೆಲವರಿಗನಿಸಿತು. ಸುರಪುರೀಯರ ಸಹಜ ಸ್ವಭಾವದಂತೆ ಕೆಲವರಿಗನಿಸಿದ್ದು ಎಲ್ಲರಿಗೂ ಅನಿಸತೊಡಗಿತು. ಎಲ್ಲರೂ ಶ್ವಾಸವನ್ನೂ ಒಳಗೆಳೆದು ಪರಿಕಿಸಿಕೊಂಡು 'ಹೌದಲ್ಲ, ಹೌದಲ್ಲ' ಎನ್ನತೊಡಗಿದರು. ಒಂದು ದಿನ ಒಬ್ಬ ದಿವ್ಯ ವಿಜ್ಞಾನಿಯ ಸಂಶೋಧನಾ ಲೇಖನವೊಂದು ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಆತನ ಪ್ರಕಾರ ಕೆಲವು ಶತಮಾನಗಳ ಹಿಂದೆ ಆ ಭೂಮಿ ಒಂದು ಸರ್ವಧರ್ಮೀಯ ಸ್ಮಶಾನವಾಗಿತ್ತು. ಈಗ ಕೆಂಪು ಸಸ್ಯಪುಂಜದ ರೂಪದಲ್ಲಿ ಕಾಣಿಸಿಕೊಂಡಿರುವುದು ಅಲ್ಲಿ ಹೂಳಲ್ಪಟ್ಟವರ ಆತ್ಮಗಳು ಎನ್ನುವುದು ಅವನ ವಾದವಾಗಿತ್ತು. ಹೂವನ್ನು ಅಥವಾ ಗಿಡವನ್ನು ಕತ್ತರಿಸಿದಾಗ ಹೊರಡುವ ಸುಗಂಧವು ಆತ್ಮಗಳ ಕೊನೆಯ ಪುನರ್ಜನ್ಮಕ್ಕೆ ಮೊದಲಿನ ಜನ್ಮದ ಸುಗಂಧ ಎಂದ. ಅವೆಲ್ಲವೂ ಮುಂದೆ ಮಾನವಜನ್ಮ ತಾಳಲಿರುವ ಪುಣ್ಯಾತ್ಮಗಳು ಎಂದ. ಆ ವಿಜ್ಞಾನಿ ವಿಷದೀಕರಿಸಿ ಹೇಳಿದ್ದೇನೆಂದರೆ, 'ಒಂದು ಆತ್ಮವು ಸುಮಾರು ಏಳು ಕೋಟಿ ಜನ್ಮಗಳನ್ನು ಪಡೆಯುತ್ತದೆ. ಜನ್ಮವೆಂಬುದು ಪ್ರಾಣಿ, ಪಕ್ಷಿ, ಸಸ್ಯ, ಕ್ರಿಮಿ- ಕೀಟ, ಸರೀಸೃಪ, ನೆಲಚರ, ಜಲಚರ ಇತ್ಯಾದಿ ಯಾವುದೂ ಆಗಿರಬಹುದು. ಕೆಲವು ಜನ್ಮಗಳ ಅಸ್ತಿತ್ವ ಕೆಲವೇ ಕ್ಷಣಗಳು ಅಥವಾ ನಿಮಿಷಗಳಾಗಿರಬಹುದು. ಭೂ ಗ್ರಹದ ಮೇಲಿರುವ ಆತ್ಮಗಳ ಸಂಖ್ಯೆ ಸ್ಥಿರ. ಜನ್ಮ ಪುನರ್ಜನ್ಮ ಈ ಆತ್ಮಗಳಲ್ಲೇ ನಡೆಯುವ ರೀಸೈಕ್ಲಿಂಗ್ ಪ್ರಕ್ರಿಯೆ. ಇದರಲ್ಲಿ ಮಾನವ ಜನ್ಮ ಕೊಟ್ಟ ಕೊನೆಯದು. ಯಾಕೆಂದರೆ, ಮಾನವ ಜನ್ಮದಲ್ಲಿ ಮಾತ್ರ ದೇವರನ್ನು ಪೂಜಿಸಿ ಮೋಕ್ಷವನ್ನು ಪಡೆಯಲು ಸಾಧ್ಯ. ಮೋಕ್ಷವನ್ನು ಪಡೆಯುವುದು ಎಂದರೆ ಮತ್ತೆ ರೀಸೈಕ್ಲಿಂಗಿಗೆ ಒಳಗಾಗದಿರುವುದು, ಅರ್ಥಾತ್ ಪರಮಾತ್ಮನಲ್ಲಿ ಲೀನವಾಗುವುದು ಎಂದು ಅರ್ಥ. ಈ ಬಯಕೆ ಸಕಲ ಮಾನವರ ಆತ್ಮದೊಳಗೆ ಸಹಜವಾಗಿಯೇ ಇರುವಂಥದು. ಆದರೆ ಪ್ರತಿಯೊಬ್ಬನ ಕರ್ಮ ಮತ್ತು ಅವನ ಭೌತಿಕ ವಾಂಛೆಗಳು ಅವನ ಆತ್ಮಾಂತರ್ಗತ ಬಯಕೆಗೆ ತಕ್ಕಂತೆ ಇಲ್ಲದಿರುವುದರಿಂದ ಅವನು ಅನಿವಾರ್ಯವಾಗಿ ಪುನಃ ಯಾವುದೋ ಸಸ್ಯ, ಪ್ರಾಣಿ, ಪಕ್ಷಿ, ಕ್ರಿಮಿ-ಕೀಟ ಮುಂತಾದ ಜನ್ಮ ಪಡೆಯುತ್ತಾನೆ. ಮನುಷ್ಯ ಜನ್ಮದಿಂದ ನೇರ ಮೋಕ್ಷ ಹೊಂದುವವರ ಸಂಖ್ಯೆ ಕ್ಷೀಣಿಸುತ್ತಾ ಇರುತ್ತದೆ. ಈ ಕಾರಣದಿಂದ, ಕೆಲವು ಮಿಲಿಯ ವರ್ಷಗಳ ಅವಧಿಯಲ್ಲಿ ಮನುಷ್ಯರಾಗಿ ಜನ್ಮ ತಳೆಯುವ ಅರ್ಹತೆಯುಳ್ಳ ಆತ್ಮಗಳ ಸಂಖ್ಯೆ ತೀರಾ ಕುಸಿದಾಗ, ಅಂದರೆ (ಭೌತಿಕವಾದ ನಿಮಿತ್ತವು ಏನೇ ಆಗಿರಲಿ) ಭೂಮಿಯ ಮೇಲೆ ಮಾನವರ ಸಂಖ್ಯೆ ಬಹುತೇಕ ನಾಶದ ಅಂಚಿಗೆ ತಲುಪಿದಾಗ, ಸಸ್ಯ ಮತ್ತಿತರ ಜೀವರಾಶಿಯ ಸಂಖ್ಯೆ ವರ್ಧಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, (ಭೌತಿಕವಾದ ನಿಮಿತ್ತವು ಏನೇ ಆಗಿರಲಿ) ಮನುಷ್ಯರಾಗುವ ಅರ್ಹತೆಯುಳ್ಳ ಆತ್ಮಗಳ ಸಂಖ್ಯೆ ವರ್ಧಿಸಿ ಜನಸಂಖ್ಯೆ ಅಧಿಕವಾದಾಗ ಸಸ್ಯ ಮತ್ತು ಇತರ ಜೀವ ಸಂಕುಲದ ಸಂಖ್ಯೆ ಕುಸಿಯುತ್ತದೆ. ನಿಸರ್ಗದಲ್ಲಿ ಹೀಗೆಲ್ಲ ಯಾಕೆ ನಡೆಯುತ್ತದೆ, ಅದಕ್ಕೆ ಇದೆಲ್ಲ ಯಾಕೆ ಬೇಕು ಎನ್ನುವ ಪ್ರಶ್ನೆ ಅಸಂಗತ. ಯಾಕೆಂದರೆ, 'ಬೇಕು ಬೇಡ' ಎನ್ನುವುದು ನಿಸರ್ಗದಲ್ಲಿ ಇಲ್ಲ. ಅದು ಮಾನವ ಭಾವನೆ'. ಹುಟ್ಟಿರುವ ಮತ್ತು ಮರುಹುಟ್ಟು ಪಡೆಯಲಿರುವ ಸಕಲ ಆತ್ಮಗಳೂ ಸೇರಿದಂತೆ ಇಡೀ ಭೂಮಿಯನ್ನು ಒಟ್ಟಾಗಿ ನಿಸರ್ಗ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಕೆಂಪು ಸಸ್ಯದ ಬಗ್ಗೆ ವಿಜ್ಞಾನಿ ಹೇಳಿದ್ದೇನೆಂದರೆ, 'ಬಹಳ ಅಪರೂಪಕ್ಕೆ ನೂರಾರು ಅಥವಾ ಸಾವಿರಾರು ವರ್ಷಗಳ ಕಾಲ ಅನಾಥವಾಗಿ ಮಣ್ಣಿನಡಿಯಲ್ಲಿಯೇ ಬೀಜರೂಪವಾಗಿ ಉಳಿದುಬಿಡುವ ಸಾವಿರಾರು ಆತ್ಮಗಳು ಭಕ್ಷಾರ್ಹ ಅಣಬೆಗಳಾಗಿ ಅಥವಾ ಪೂಜಾರ್ಹ ಸಸ್ಯಗಳಾಗಿ ಜನ್ಮ ಪಡೆಯುತ್ತವೆ. ಇದು ಮಾನವ ಜನ್ಮವನ್ನು ಪಡೆಯುವ ಆತ್ಮಗಳ ಪೂರ್ವಜನ್ಮ, ಅಂದರೆ ಇವು ಮತ್ತೆ ಹುಟ್ಟುವುದು ಮಾನವರಾಗಿ. ಈ ಕೆಂಪು ಸಸ್ಯ ಅಶ್ವತ್ಥವೃಕ್ಷ, ಶ್ರೀಗಂಧ, ತುಳಸಿ ಮುಂತಾದ ಸಸ್ಯವರ್ಗಕ್ಕೆ ಸೇರಿದ್ದಾಗಿದೆ'. ಸುರಪುರದ ಮಂದಿ ಪತ್ರಿಕೆಯಲ್ಲಿ ಪ್ರಕಟವಾದುದನ್ನು ಮತ್ತು ಟಿವಿಯಲ್ಲಿ ವರದಿಯಾದುದನ್ನು ಅಕ್ಷರಶಃ ಹಾಗೂ ಚಿತ್ರಶಃ ನಂಬುವ ಗುಣಹೊಂದಿದ್ದರು. ಈ ಸಂಶೋಧನಾ ಲೇಖನವನ್ನು ಬರೆದವನು ಬರೀ ಸಸ್ಯಶಾಸ್ತ್ರಜ್ಞನಾಗಿರಲಿಲ್ಲ. ಅವನು ಅಮೆರಿಕೆಯ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಸಸ್ಯಶಾಸ್ತ್ರದಲ್ಲಿ ಒಂದು ಮತ್ತು ಭೌತಶಾಸ್ತ್ರದಲ್ಲಿ ಒಂದು ಹೀಗೆ ಎರಡು ಪಿಎಚ್‌ಡಿಗಳನ್ನು ಪಡೆದವನಾಗಿದ್ದ ಹಾಗೂ ನೊಬೆಲ್ ಪ್ರಶಸ್ತಿಗೆ ನಾಮಕರಣಗೊಂಡವನಾಗಿದ್ದ. ಆದುದರಿಂದ ಸುರಪುರದ ಮಂದಿ ಅವನ ಲೇಖನದಲ್ಲಿ ಬರೆದಿರುವುದನ್ನು ನಂಬಿಯೇ ನಂಬಿದರು. ನಂಬಿಕೆಯಲ್ಲಿ ಶಾಂತರಾದರು. ಆದರೆ ಕೆಂಪು ಬಣ್ಣದ ವಿಚಿತ್ರ ಸಸ್ಯ ಶಾಂತವಾಗಿರಲಿಲ್ಲ. ಅದು ಕಾಲೆಕರೆಯ ತುಂಬ ಒಂದಿಂಚೂ ಬಿಡದೆ ಹಬ್ಬಿತು. ಅದರಲ್ಲಿ ಎಲೆಯಷ್ಟೇ ಕೆಂಪಾದ ಹೂವುಗಳು ಅರಳಿದವು. ಎಲೆ ಮತ್ತು ಹೂಗಳಿಂದಾಗಿ ಕಾಲೆಕರೆ ನೆಲ ಒಂದು ರಕ್ತಸರೋವರದಂತೆ ಕಾಣಿಸತೊಡಗಿತು. ಯಾವ ಗಿಡದಲ್ಲಿ ಯಾವ ದಿನ ಮೊಗ್ಗು ಹೂವಾಗಿ ಅರಳಿತೋ ಮರುದಿನ ಆ ಗಿಡ ಸತ್ತುಬಿತ್ತು. ಮತ್ತು ಈ ಸಾವಿನೊಂದಿಗೆ ವಾಸನೆ ಊರಿಡೀ ಹರಡಿತು. ಈಗ ಅದರ ದಟ್ಟವಾದ ವಾಸನೆ ಸುವಾಸನೆಯಂತೆ ತೋರಲಿಲ್ಲ. ಅದು ತಾಜಾ ನೆತ್ತರು ವಾಸನೆಯಾಗಿತ್ತು. ದಿನದಿಂದ ದಿನಕ್ಕೆ ಅದು ದಟ್ಟವಾಗುತ್ತಾ ಹೋಯಿತು. ಸುರಪುರದ ಮಂದಿ ಸಹಿಸಲಾಗದ ಈ ಬೀಭತ್ಸ ಸಸ್ಯಗಂಧದಿಂದ ಕಂಗಾಲಾದರು. ವಾಸನೆಯಿಂದಾಗಿ ಉಣ್ಣಲಾಗದ ತಿನ್ನಲಾಗದ ಪರಿಸ್ಥಿತಿ ಉದ್ಭವವಾಯಿತು. ಏನನ್ನು ಬಾಯಿಗಿರಿಸಿದರೂ ಒಂದೇ ವಾಸನೆ, ನೆತ್ತರು ವಾಸನೆ. ತಿಂದದ್ದು ಗಂಟಲು ತಲಪುವ ಮೊದಲೇ ವಾಂತಿ ಮಾಡಿಸುವ ವಾಸನೆ. ಏನಿದಕ್ಕೆ ಪರಿಹಾರ ಎಂಬ ಚಿಂತೆ ಸುರಪುರೀಯರನ್ನು ಕಾಡತೊಡಗಿತು. ಸುರಪುರೀಯರ ಸಹಜ ಸ್ವಭಾವದಂತೆ ಪರಹಾರವೇನೆಂದು ಒಬ್ಬರಿನ್ನೊಬ್ಬರನ್ನು ಕೇಳಿದರು. 'ಮೊದಲ ಗಿಡ ಹುಟ್ಟಿದಾಗಲೇ ಗಿಡವನ್ನು ಕಿತ್ತು ಸುಟ್ಟುಹಾಕಬೇಕಾಗಿತ್ತು' ಎನ್ನುವ ಪರಿಹಾರವನ್ನು ಒಬ್ಬರಿನ್ನೊಬ್ಬರಿಗೆ ನೀಡಿದರು. ಸುರಪುರೀಯರು ಶತಮಾನಗಳಿಂದ ನಾನಾ ವಿಧದ ಪರಿತಾಪವನ್ನೇ ಪರಿಹಾರ ಎಂದುಕೊಳ್ಳುವವರಾಗಿದ್ದರಿಂದ ಪರಿತಾಪವೇ ಸಕಲ ಪರಿತಾಪಗಳಿಗೆ ಕೊನೆಯ ಪರಿಹಾರವಾಗಿತ್ತು. 'ಬೀಜವಿಲ್ಲದ ಹೂವಿನಿಂದ ಮತ್ತೆ ಗಿಡ ಬರುವುದಿಲ್ಲ' ಎಂದು ಕೆಲವು ಪೂರ್ವ ಸೂರಿಗಳು ಹೇಳಿದ್ದನ್ನು ಕೆಲವು ಉತ್ತರ ಸೂರಿಗಳು ಪುನರುಚ್ಚರಿಸಿದರು. ಸುರಪುರದ ಮಂದಿ ಇಂಥ ಜ್ಞಾನದಲ್ಲಿ ಪೂರ್ಣ ವಿಶ್ವಾಸವುಳ್ಳವರಾಗಿದ್ದುದರಿಂದ 'ಎಲ್ಲಾ ಗಿಡಗಳು ಸತ್ತು ಮುಗಿಯುವವರೆಗೆ ಹೇಗಾದರೂ ಸಹಿಸುವುದು' ಎಂದುಕೊಂಡರು. ಆದರೆ ಒಂದು ಗಿಡದ ಸಾವಿನ ಬೇರಿನಿಂದ ಮತ್ತೆ ಅಂಥದೇ ಹಲವು ಗಿಡಗಳು ಮೇಲಕ್ಕೇಳುವುದನ್ನು ಕಂಡು ಮಂದಿ ಕಂಗೆಟ್ಟರು. 'ಇವು ಪವಿತ್ರ ಸಸ್ಯಗಳಲ್ಲ, ಅಪವಿತ್ರ ಸಸ್ಯಗಳು' ಎಂದು ಮಂದಿ ಆಡಿಕೊಳ್ಳತೊಡಗಿದರು. ಪಾಪಾತ್ಮರು ಸಸ್ಯ ರೂಪದಲ್ಲಿ ಹುಟ್ಟಿ ಮನುಷ್ಯರನ್ನು ಕಾಡುತ್ತಿದ್ದಾರೆ ಎಂದು ಹೇಳತೊಡಗಿದರು. ರಕ್ತವಾಸನೆ ಶಾಶ್ವತ ಎಂಬಂತಾಯಿತು. ಇದಕ್ಕಿರುವುದು 'ಇನ್ನು ಒಂದೇ ಪರಿಹಾರ ಆ ಕಾಲೆಕರೆ ಭೂಮಿಯ ಮೇಲೆ ಬೀಳುವ ಬಿಸಿಲನ್ನು ತಡೆಯುವುದು, ಬಿಸಿಲು ಬೀಳುವಲ್ಲಿ ಸಸ್ಯಗಳು ಬೆಳೆಯುವುದಿಲ್ಲ' ಎಂದು ದಿವ್ಯಜ್ಞಾನಿಗಳೆನಿಸಿಕೊಂಡಿರುವ ನವ ಸೂರಿಗಳು ಹೇಳಿದರು. ಶಾಶ್ವತ ಪರಿಹಾರವೆಂದರೆ, ಅಷ್ಟು ವಿಸ್ತೀರ್ಣದಲ್ಲಿ ಒಂದು ದೇವಮಂದಿರವನ್ನು ನಿರ್ಮಿಸುವುದು ಎಂದು ಸಿರಿವಂತ ಸೂರಿಗಳು ಹೇಳಿದರು. ಆದರೆ ಕಾಲೆಕರೆ ವಿಸ್ತಾರದ ದೇವಮಂದಿರ ನಿರ್ಮಾಣಕ್ಕೆ ಕೆಲವು ಕೋಟಿ ರುಪಾಯಿಗಳು ಬೇಕಾಗುತ್ತವೆ. ಆದ್ದರಿಂದ ಸದ್ಯಕ್ಕೆ ಒಂದು ಭಜನಾ ಶೆಡ್ಡನ್ನು ನಿರ್ಮಿಸುವುದು ಎಂದು ನೆಲ ಮಟ್ಟದ ಬಲ್ಲಿದರು ಹೇಳಿದರು. ಪರಿತಾಪದ ಹೊಟ್ಟೆಯಿಂದ ಹೊರಬಂದ ಈ ಪರಿಹಾರ ಕಾಣಿಸಿದ್ದೇ ತಡ ಮಂದಿ ತಕ್ಷಣ ಕಾರ್ಯಪ್ರವೃತ್ತರಾದರು. ಎಲ್ಲರೂ ಮೂಗಿಗೆ ಬಟ್ಟೆ ಸುತ್ತಿಕೊಂಡು ಸಸ್ಯಗಳಿಂದ ಚಿಮ್ಮುವ ರಕ್ತದ್ರವವನ್ನು ಕಣ್ಣಿಂದ ನೋಡಲು ಸಹ ಕಷ್ಟವಾದರೂ ಕಾಣುತ್ತಿಲ್ಲ ಎಂಬಂತೆ, ಅಪವಿತ್ರ ಸಸ್ಯಗಳ ಮೇಲೆ ಪರಿಸರಸಮರವನ್ನು ಸಾರಿದರು. ಸಸ್ಯವನ್ನು ಬೇರುಸಹಿತ ಕಿತ್ತು ಲಾರಿಗಳಲ್ಲಿ ತುಂಬಿ ದೂರದ ಕಾಡುಗಳಲ್ಲಿ ಎಸೆದರು. ಕಿತ್ತ ಸಸ್ಯದ ಬೇರುಗಳಿಂದ ಮತ್ತೆ ಗಿಡಗಳು ಹುಟ್ಟಬಹುದೆಂಬ ಭಯದಿಂದ ಅವಸರ ಅವಸರವಾಗಿ ಭಜನಾ ಶೆಡ್ಡನ್ನು ಏರಿಸಿದರು. ನೆಲದಲ್ಲಿ ಹಬ್ಬಿದ ಸಸ್ಯದ ಕೆಂಪು ದ್ರವ ಆರುತ್ತಿರುವಾಗಲೇ ಸಿಮೆಂಟಿನಿಂದ ನೆಲವನ್ನು ಸಾರಿಸಿ ಪರಿಮಳ ದ್ರವ್ಯ ಚಿಮುಕಿಸಿ ಟನ್‌ಗಟ್ಟಳೆ ಅಗರು ಚಂದನ ಉರಿಸಿ ಭಜನೆ ಆರಂಭಿಸಿಯೇ ಬಿಟ್ಟರು ಸುರಪುರದ ಮಂದಿ! ಅದರ ಜೊತೆಯಲ್ಲಿಯೇ ದೇವಾಲಯ ನಿರ್ಮಾಣಕ್ಕೆ ಊರಿನಲ್ಲಿ, ಪರವೂರಿನಲ್ಲಿ ಮಾತ್ರವಲ್ಲ ಸ್ವದೇಶ ವಿದೇಶಗಳಲ್ಲಿ ಕೂಡ ಚಂದಾ ಎತ್ತುವ ಕಾರ್ಯ ಭರದಿಂದ ಆರಂಭಗೊಂಡಿತು. ಹಣದ ಹೊಳೆ ಹರಿದುಬರತೊಡಗಿತು. ಎರಡು ಶತಮಾನಗಳ ಹಿಂದೆ ಸಂಭವಿಸಿದ ಭೂಕಂಪದಿಂದ ಸರ್ವನಾಶವಾದ ಕಾಲದಲ್ಲಿ ಬಂದಿದ್ದರ ಹತ್ತು ಪಟ್ಟು ಆರ್ಥಿಕ ನೆರವು ಬಂತು. ಕೆಂಪು ಸಸ್ಯದ ಸುತ್ತ ವೃತ್ತಾಕಾರದ ಪೂಜಾಮಂದಿರವನ್ನು ಕಟ್ಟಬೇಕೆಂದುಕೊಂಡಿದ್ದ ಸುರಪುರೀಯರ ಬಯಕೆ ಈಗ ಆತ್ಮರಕ್ಷಕೇಶ್ವರ ದೇವಾಲಯ ನಿರ್ಮಾಣದಲ್ಲಿ ಸಾಕಾರಗೊಂಡಿತು. ಶತಮಾನಗಳಿಂದ ಅದೃಶ್ಯವಾಗಿದ್ದ ಏಕದೈವಭಯ ಮತ್ತು ಪುನಃ ಶಾಂತಿ ನೆಲೆ ನಿಂತು, ನೋಡ ನೋಡುತ್ತಲೇ ದೇವರು ಆರಕ್ಕೇರುವ ಮೊದಲೇ ಸುರಪುರದ ಮಂದಿ ದೈವಕೃಪೆಯಿಂದ ಎಂಟಕ್ಕೇರಿದರು. ಭೂಕಂಪದಿಂದಾಗಿ ಹರಿದು ಹಂಚಿ ಹೋಗಿ ಸಾವಿರಾರಾಗಿದ್ದ ದೇವರುಗಳು ಕೇವಲ ಹತ್ತಿಪ್ಪತ್ತು ದೇವರುಗಳಾಗಿ ಏಳತೊಡಗಿದರು. ಈ ದೇವ ಪುನರುತ್ಥಾನದ ವೈಭವಕ್ಕೊಪ್ಪುವ ಹೊಸ ಹೊಸ ಹರಕೆಗಳು, ಹಬ್ಬಗಳು, ಉತ್ಸವಗಳು, ಪೂಜೆಗಳು, ಆರಾಧನೆಗಳು, ಕಲಶೋತ್ಸವಗಳು, ಯಜ್ಞ ಯಾಗಾದಿಗಳು, ಉತ್ಸವೋತ್ಸವಗಳು ಆರಂಭಗೊಂಡವು. ನವ ನವೀನ ಶಾಂತಿ ನೆಲೆಗೊಂಡಿತು. ಇದೇ ಹೊತ್ತಿನಲ್ಲಿ, ಕಾಡಿನಲ್ಲಿ ಚೆಲ್ಲಲ್ಪಟ್ಟ ಕೆಂಪು ಸಸ್ಯಗಳು ಅಲ್ಲೇ ಬೇರೂರಿ ಪುಷ್ಕಳವಾಗಿ ಬೆಳೆಯುತ್ತಲಿದ್ದವು. ಅವುಗಳು ಹಬ್ಬಿದ ಬೇರುಗಳು ಮತ್ತು ಬೇರಾಬೇರುಗಳಿಂದ ಹಿಂಡು ಹಿಂಡಾಗಿ ಮತ್ತೆ ಹೊಸ ಸಸ್ಯಗಳು ಮೇಲೇಳುತ್ತಿದ್ದವು. ನಾಡಿನಲ್ಲಿ ನಡೆಯುತ್ತಿದ್ದ ನಾನಾ ಉತ್ಸವಗಳಲ್ಲಿ ಸಿಡಿಮದ್ದು ಸಿಡಿಯುತ್ತಿದ್ದ ಹಾಗೆಯೇ ಕಾಡಿನಲ್ಲಿ ಒಂದು ದಿನ ಕೆಂಪು ಸಸ್ಯಗಳಲ್ಲಿ ಹೂವುಗಳು ಪುಟಪುಟನೆ ಪುಟಿದುವು. ವೃಕ್ಷಾರಣ್ಯ ಪುಷ್ಪಾರಣ್ಯದಂತೆ ಕಂಗೊಳಿಸಿತು. ಹೂವುಗಳು ಹೊರಬಂದೊಡನೆ ಅದನ್ನು ಹೊರತಂದ ಗಿಡ ಸಾಯುತ್ತಿತ್ತು. ಕಾಡಿನಿಂದ ಬೀಸಿ ಬಂದ ಗಾಳಿಯಲ್ಲಿ ಮತ್ತೆ ಸುರಪುರದ ತುಂಬಾ ರಕ್ತದ ವಾಸನೆ ತುಂಬಿಕೊಂಡಿತು. ದಿನದಿಂದ ದಿನಕ್ಕೆ ವಾಸನೆ ದಟ್ಟವಾಗತೊಡಗಿತು. ಮಂದಿಗೆ ಉಸಿರುಕಟ್ಟುವಂತಾಯಿತು. ಭಜನೆ ಮಾಡಲು ಆಗಲಿಲ್ಲ. ದೇವಾಲಯ ಕಟ್ಟುವ ಕೆಲಸ ಕೂಡ ಕುಂಟತೊಡಗಿತು. ದೇವರ ವಿಚಾರವಂತಿರಲಿ, ಅಟ್ಟ ಅಡುಗೆಯನ್ನು ನೆಮ್ಮದಿಯಿಂದ ಉಣ್ಣಲು ಕೂಡ ಆಗಲಿಲ್ಲ. ಮಂದಿ ಸಮಸ್ಯೆಗೆ ಪರಿಹಾರ ಕಾಣದೆ ದಿಕ್ಕೆಟ್ಟರು. ಕಾಡಿಗೆ ಹೋಗಿ ಸಸ್ಯವನ್ನು ಸಂಪೂರ್ಣವಾಗಿ ನಾಶ ಮಾಡುವ ಸಾಧ್ಯತೆಯ ಬಗ್ಗೆ ಚಿಂತನೆ ನಡೆಸಿದರು. ಕಾಲೆಕರೆ ಭೂಮಿಯಲ್ಲಿಯೇ ಸಸ್ಯವನ್ನು ನಾಶಪಡಿಲು ಆಗಲಿಲ್ಲ, ಕಾಡಿನಲ್ಲಿ ಎಲ್ಲೆಲ್ಲೋ ಬೆಳೆದುಕೊಂಡಿರುವ ಸಸ್ಯದ ಹುಟ್ಟಡಗಿಸುವುದಾದರೂ ಹೇಗೆ? ಕಾಡನ್ನು ಸವರಿ ಕಾಡಿನಗಲಕ್ಕೆ ಭಜನಾಮಂದಿರ, ದೇವಮಂದಿರ ನಿರ್ಮಿಸಲು ಸಾಧ್ಯವೆ? ಬಯಲಿನಲ್ಲಿ ಕೆಂಪು ಸಸ್ಯದ ಬಗ್ಗೆ ವ್ಯಾಖ್ಯಾನ ಮಾಡಿದ ಸ್ವಾಮೀಜಿಗಳು ಮತ್ತು ಲೇಖನ ಬರೆದ ಜ್ಞಾನಿಗಳು ವಿಜ್ಞಾನಿಗಳು ಮತಿಗೆಟ್ಟವರಂತೆ ಮೌನವಾಗಿದ್ದರು. ಸಸ್ಯಗಳು ಬಯಲಲ್ಲಿದ್ದಾಗಲೇ ಅವುಗಳನ್ನು ಸ್ಪರ್ಶಿಸದೆ ದೂರದಿಂದಲೇ ಅವುಗಳ ಮೇಲೆ ಸಂಶೋಧನೆ ನಡೆಸಿ ಪುಟಗಟ್ಟಳೆ ಸಂಶೋಧನಾ ಲೇಖನಗಳನ್ನು ಬರೆಯುತ್ತಿದ್ದ ವಿಜ್ಞಾನಿಗಳಿಂದ ಸಸ್ಯಗಳು ಕಾಡು ಸೇರಿದ ಮೇಲೆ ಅವುಗಳ ಮೇಲೆ ಸಂಶೋಧನೆ ನಡೆಸುವುದು ಸಾಧ್ಯವೆ? ಅವರು ಬಾಯಿ ಮುಚ್ಚಿ ಕುಳಿತರು. ಪವಿತ್ರ ಸಸ್ಯ ಎಂದು ನಾಮಕರಣ ಮಾಡಿದ ಜಗದ್ಗುರುಗಳು ಕಣ್ಣು ಮುಚ್ಚಿ ಕುಳಿತರು. ಆದರೆ ಕಾಡಿನ ಅಂಚಿನಲ್ಲಿರುವ ಸುರಪುರ ಎಂಬ ನಗರದ ಮಂದಿ ಕಂಗಾಲಾದರು. ಬಾಯಿ ಮುಚ್ಚಿಕೊಳ್ಳಬಹುದು, ಕಣ್ಣು ಮುಚ್ಚಿಕೊಳ್ಳಬಹುದು. ಮೂಗು ಮುಚ್ಚಿಕೊಳ್ಳಲಾಗದಲ್ಲ? ಸುರಪುರದ ಮಂದಿ ತಾತ್ಕಾಲಿಕ ಉಪಶಮನಕ್ಕಾಗಿ ನಾನಾ ಬಗೆಯ ಅತ್ತರು, ಅಗರು ಚಂದನ, ಸ್ವದೇಶೀ ವಿದೇಶೀ ಪರಿಮಳ ದ್ರವ್ಯಗಳನ್ನು ತರಿಸಿ ಮನೆ ತುಂಬ ಚೆಲ್ಲಿಕೊಂಡು, ಮೈ ಮುಖ ಮೂತಿಗೂ ಹಚ್ಚಿಕೊಂಡರು. ಹೊಸ ಹೊಸ ಸುಗಂಧವನ್ನು ತಯಾರಿಸುವ ನೂರಾರು ಕಂಪೆನಿಗಳು ಹುಟ್ಟಿಕೊಂಡವು. ಈ ವಾಸನೆ ಹತ್ತಿರದ ಭವಿಷ್ಯದಲ್ಲಿಯೇ ದೇಶವ್ಯಾಪಿಯಾಗಲಿದೆ ಎಂದು ತರ್ಕಿಸಿದ ಶ್ವೇತತ್ವಚೆಗಾಗಿ ಕ್ರೀಮು ತಯಾರಿಸುವ ಬಹುರಾಷ್ಟ್ರೀಯ ಕಂಪೆನಿಗಳು ಸುಗಂಧತ್ವಚೆಯ ಕ್ರೀಮುಗಳನ್ನು ಹೊರತಂದರು. ಆದರೆ ಏನು ಕ್ರೀಮು ಹಚ್ಚಿದರೂ ಎಷ್ಟು ಸುಗಂಧ ಚೆಲ್ಲಿದರೂ ಕಾಡಿನೊಳಗೆ ಕಾಡಾಗಿಯೇ ಬೆಳೆಯುತ್ತಿದ್ದ ಕೆಂಪು ಸಸ್ಯದ ನೆತ್ತರಿನ ವಾಸನೆಯನ್ನು ತಡೆಯಲಾಗಲಿಲ್ಲ. ಅದು ದಿನೇ ದಿನೇ ದಟ್ಟವಾಗುತ್ತಿತ್ತು, ನಿರ್ಭರವಾಗುತ್ತಿತ್ತು. ನಿಸರ್ಗಕ್ಕೆ ಸಮಸ್ಯೆಗಳಿಲ್ಲ. ನಿಸರ್ಗದಿಂದ ಮಾನವನಿಗುಂಟಾಗುವ ಸಮಸ್ಯೆಗಳು ನಿರಂತರ. ಮಾನವನಿರುವ ಕಾರಣದಿಂದಲೇ ಸಮಸ್ಯೆ, ಮತ್ತದಿರುವುದು ಮಾನವ ಜೀವಿಗೆ ಮಾತ್ರ. ಆದ್ದರಿಂದ ನಿಸರ್ಗ ಮಾನವನಿಗೆ ಸಮಸ್ಯೆಯಾದಾಗ ಅದನ್ನು ಪರಿಹರಿಸಲು ನಿಸರ್ಗದಿಂದಲ್ಲದೆ ಬೇರೆ ಯಾರಿಂದ ಸಾಧ್ಯ? ನಿಸರ್ಗವೇ ತಮಗೆ ಪರಿಹಾರ ನೀಡಬೇಕೆಂದು ಪ್ರಾರ್ಥಿಸುತ್ತಾ ಸುರಪುರದ ಮಂದಿ ಆಶಾಭಾವನೆಯಿಂದ ಮತ್ತೊಂದು ಭೂಕಂಪವನ್ನು ಎದುರುನೋಡತೊಡಗಿದರು.

ಟಿಎಸ್‌ಐ

ಕೆ.ಟಿ. ಗಟ್ಟಿ