|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಮೊನ್ನೆ ಪತ್ನಿಯ ಜೊತೆ ನಮ್ಮ ಸಮೂಹದ ಹೊಚ್ಚ ಹೊಸ ಚಲನ ಚಿತ್ರ 'ಮಿಥ್ಯ' ನೋಡುತ್ತಿದ್ದೆ. ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು. ಮನೆಯಲ್ಲಿ ಏನೋ ಸಮಸ್ಯೆ ಎದುರಾಗಿದೆ ಎಂದು ಸಹೋದರ ಒಂದೇ ಉಸಿರಿನಲ್ಲಿ ಹೇಳುತ್ತಿದ್ದ. ಸಮಸ್ಯೆಯ ಪೂರ್ವಾಪರ ಪ್ರಶ್ನಿಸಿದಾಗ ತಿಳಿಯಿತು ಮನೆಯ ಏಕಮಾತ್ರ ಎಲ್‌ಪಿಜಿ ಸಿಲಿಂಡರ್ ಮುಗಿದಿದೆ. ಅಲ್ಲದೆ ಅಂದು ಭಾನುವಾರ ಬೇರೆ, ಇನ್ನೊಂದು ಸಿಲಿಂಡರ್ ಸಿಗುವುದು ಕನಸಿನ ಮಾತು. ಸಮಸ್ಯೆ ನಾನು ಅಂದುಕೊಂಡಿದ್ದಕ್ಕಿಂತಲೂ ಬಿಗಡಾಯಿಸಿತ್ತು. ಸಿಲಿಂಡರ್ ವಿತರಕ ಗಾಡಿಗಳು, ಆಟೋ ರಿಕ್ಷಾದವರನ್ನು ಕೇಳಿದಾಗ ವಿಷಯ ತಿಳಿಯಿತು. ಸಿಲಿಂಡರ್‌ಗಳ ಕೊರತೆ ಇದೆ, ಇನ್ನೊಂದು ಸಿಲಿಂಡರ್ ಸಿಗಬೇಕೆಂದರೆ ಹದಿನೈದು ದಿನಗಳು ಕಾಯುವುದು ಅನಿವಾರ್ಯ!
ಮಧ್ಯಮ ವರ್ಗದ ಆರ್ಥಿಕ ಬದುಕಿನಲ್ಲಿ ಎಲ್‌ಪಿಜಿ ಸಿಲಿಂಡರ್ ಪ್ರಮುಖ ಪಾತ್ರ ವಹಿಸುತ್ತದೆ. ಮಧ್ಯಮವರ್ಗದ ಬಹುಪಾಲು ಜನರು ಇಂದಿಗೂ 'ಆರ್ಥಿಕ ಕೊರತೆ'ಯಿಂದ ಹೊರಬಂದಿಲ್ಲ. ಅಲ್ಲದೆ ಅಡುಗೆಮನೆ ಉಪಯೋಗಕ್ಕೆ ಎಲ್‌ಪಿಜಿ ಸಿಲಿಂಡರ್ ಹೊರತಾದ ಬೇರಾವ ಇಂಧನ ಮೂಲವೂ ಇವರಲ್ಲಿಲ್ಲ. ಆದ್ದರಿಂದ ಆ ಸಮಸ್ಯೆಗಳ ಸುತ್ತಲಿನ ಎಲ್ಲಾ ಕಾರಣಗಳಿಗೂ -ಅದು ಪೂರೈಕೆ ಅಥವಾ ಬೆಲೆಯ ಸಮಸ್ಯೆಯಾಗಿರಬಹುದು- ಇವರು ಕಿಡಿಕಾರುತ್ತಾರೆ. ಎಲ್ಲಿಯವರೆಗೆ ಎಂದರೆ, ಅಂತರ್ ರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿದ್ದರೂ ಎಲ್‌ಪಿಜಿ ಸಿಲಿಂಡರ್ ಬೆಲೆಯೇರಿಸಿ ಮಾರುಕಟ್ಟೆ ದರವನ್ನು ಸಮತೋಲನದಲ್ಲಿರಿಸುವ ಧೈರ್ಯ ಯಾವುದೇ ಸರ್ಕಾರಕ್ಕೂ ಬರುವುದಿಲ್ಲ!
ಬೆಲೆಯೇರಿಕೆ ವಿಷಯದಲ್ಲಿ ಪೂರ್ವಾಪರ ಯೋಚನೆಗಳಿಲ್ಲದೆ ಒರಟಾಗಿ ವರ್ತಿಸುವುದು ರಾಜಕೀಯ ಜೀವನದಲ್ಲಿ ಆತ್ಮಹತ್ಯೆ ಮಾಡಿಕೊಂಡಂತೆ ಎಂಬುದು ನಮ್ಮ ನಾಯಕರಿಗೆ ಚೆನ್ನಾಗೇ ತಿಳಿದಿದೆ. ಸರ್ಕಾರದ್ದು ಅಸಹಾಯಕ ಸ್ಥಿತಿ ಎನಿಸಿದರೂ, ಬೆಲೆಯ ಸಂಪೂರ್ಣ ವಿಷಯವನ್ನು ರಾಜಕೀಯಕ್ಕೆ ತಳಕು ಹಾಕಿ ಪರಿಹಾರ ಕಾಣದ ಗೊಂದಲಗಳನ್ನು ಸೃಷ್ಟಿಸುತ್ತಿರುವವರೂ ನಮ್ಮ ರಾಜಕೀಯ ಪುಢಾರಿಗಳೇ. ಎಲ್ಲಾ ತೈಲ ಸಂಸ್ಥೆಗಳನ್ನು ನಷ್ಟದ ಕೂಪಕ್ಕೆ ತಳ್ಳಿ, ಮಾರುಕಟ್ಟೆಯನ್ನು ಬುಡಮೇಲು ಮಾಡುವುದು ಬಿಟ್ಟರೆ ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಕೆಲಸಗಳೂ ಇವರಿಂದ ಸಾಧ್ಯವಿಲ್ಲ. ಉತ್ತರ ಪ್ರದೇಶ, ಉತ್ತರಖಂಡ್, ಹಿಮಾಚಲ ಪ್ರದೇಶ, ಬಿಹಾರ, ಜಮ್ಮು ಕಾಶ್ಮೀರ, ರಾಜಸ್ತಾನ, ಹರಿಯಾಣ ಮತ್ತು ನವದೆಹಲಿಯಲ್ಲಿ ಸಿಲಿಂಡರ್‌ಗಳ ಕೊರತೆ ಎದುರಾಗುವಾಗ ಇದೇ ಮಧ್ಯಮ ವರ್ಗದ ಜನರು ಕಾಳಸಂತೆಯಲ್ಲಿ ಸಿಲಿಂಡರ್ ಒಂದಕ್ಕೆ 600ರಿಂದ 700ರೂ. ತೆತ್ತು (ಅಂದರೆ ದುಪ್ಪಟ್ಟು ಬೆಲೆ!) ಮನೆಯ ಗ್ಯಾಸ್ ಪೂರೈಕೆಯನ್ನು ಖಾತ್ರಿಪಡಿಸುತ್ತಾರೆ. ಆದರೆ ಖುದ್ದಾಗಿ ಸರ್ಕಾರವೇ ಅಡುಗೆ ಅನಿಲದ ಬೆಲೆಯನ್ನು ಸ್ವಲ್ಪವೇ ಏರಿಸಿದರೂ ತಿರುಗಿ ಬೀಳುವುದೂ ಇವರೇ! ಅಲ್ಲದೆ ಸರ್ಕಾರದ ಜನಪ್ರಿಯ ಯೋಜನೆಗಳು, ಸಹಾಯಧನ-ರಿಯಾಯಿತಿ ಕೊಡುಗೆಗಳು ಹೇಗೆ ರಾಷ್ಟ್ರೀಯ ನಷ್ಟದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಖಾಸಗಿಯವರಿಗೆ ಲಾಭ ತರುತ್ತಿದೆ ಎನ್ನುವುದಕ್ಕೆ ಮತ್ತೊಂದು ಅತ್ಯುತ್ತಮ ಉದಾಹರಣೆ ಇದು.
ಪ್ರತಿ ಎಲ್‌ಪಿಜಿ ಸಿಲಿಂಡರ್ 380 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದೆ ಎಂಬ ಒಂದು ವರದಿ ಓದಿದ್ದೆ. ಆದರೆ ಇನ್ನೊಂದು ವರದಿಯಲ್ಲಿ ಈ ನಷ್ಟದ ಪ್ರಮಾಣ 256.35 ರೂಪಾಯಿಗಳು ಎಂದಿತ್ತು. ಇವುಗಳ ಸರಾಸರಿ ತೆಗೆದು ನಷ್ಟದ ಲೆಕ್ಕಾಚಾರ ಹಾಕಿದರೂ ಸಿಗುವ ಉತ್ತರ ನಮ್ಮಂಥ ಅಭಿವೃದ್ಧಿ ಪಥದಲ್ಲಿರುವ ಆರ್ಥಿಕತೆಗೆ ಅದರಲ್ಲೂ ತೈಲ ಸಂಸ್ಥೆಗಳಿಗೆ ಪೂರಕಾಗಿದ್ದಲ್ಲ. ನಷ್ಟಭರ್ತಿಗಾಗಿ ಸರ್ಕಾರ ತಂದ ತೈಲ ಒಡಂಬಡಿಕೆಯೂ ಎಡವಿತು. ಇದು ಹೆಚ್ಚುವರಿ ಪರೋಕ್ಷ ಅನುದಾನಗಳನ್ನು ನೀಡಿ ವರಮಾನ ಇಲಾಖೆಯನ್ನು ನಷ್ಟಕ್ಕೆ ತಳ್ಳಿತಲ್ಲದೆ ಬೇರೇನೂ ಸಾಧ್ಯವಾಗಲಿಲ್ಲ. ಒಂದು ಕಡೆ ಹೀಗೆ ಅಡುಗೆ ಅನಿಲಕ್ಕೆ ಸರ್ಕಾರ ನೀಡಿದ ಸಹಾಯಧನ ಹೊರೆಯಾಗುತ್ತಿದ್ದರೆ, ಮತ್ತೊಂದು ಕಡೆ ಅಡುಗೆ ಅನಿಲವನ್ನು ವಾಹನಗಳಿಗೆ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ.
ಬೆಲೆ ಏರಿಕೆಯ ಪರಿಣಾಮ ಅದೇನೇ ಇದ್ದರೂ ಮಾರುಕಟ್ಟೆ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಜವಾಬ್ದಾರಿಯುತ ಹೆಜ್ಜೆ ಇಡಲೇಬೇಕು. ಈ ಹೆಜ್ಜೆಯಿಂದ ಪ್ರತಿಭಟನೆಯ ಅಲೆ ಎದುರಿಸಬೇಕು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಪರಿವರ್ತನೆಯನ್ನು ಸುಗಮಗೊಳಿಸಲು ವ್ಯವಸ್ಥಿತ ಹಾಗೂ ಸಹಯೋಗದ ಮಧ್ಯಸ್ಥಿಕೆಯ ಅಗತ್ಯವಿದೆ. ಸರ್ಕಾರದಿಂದಲೇ ಆರಂಭಗೊಳ್ಳಬೇಕಾಗಿರುವ ಈ ಮಧ್ಯಸ್ಥಿಕೆಯಲ್ಲಿ ಪಾರದರ್ಶಕತೆ ಹಾಗೂ ಉದ್ದೇಶ ಸಾಫಲ್ಯದ ಗುರಿ ನಿಚ್ಚಳವಾಗಿರಬೇಕು. ಎಲ್‌ಪಿಜಿ ಸಿಲಿಂಡರ್‌ಗಳು ಬರೀ ಗೃಹ ಬಳಕೆಗೆ ಮಾತ್ರ ಸೀಮಿತವಾಗಿರಬೇಕು. ವಾಣಿಜ್ಯ ಹಾಗೂ ಇಂಧನಕ್ಕಾಗಿ ಬಳಸುವುದಕ್ಕೆ ಕಟ್ಟುನಿಟ್ಟಾಗಿ ನಿಯಂತ್ರಣ ಹಾಕಬೇಕು.
ಐಐಪಿಎಂ
'ಥಿಂಕ್ ಟ್ಯಾಂಕ್' |