|
ರಾಧೆಗೆ ಕೃಷ್ಣನೆಡೆಗಿದ್ದ ಅನುರಾಗ, ಕರ್ಣ-ದುರ್ಯೋಧನರಲ್ಲಿದ್ದ ಸ್ನೇಹ, ಲೈಲಾ-ಮಜ್ನು ಪ್ರೇಮ, ಮೀರಾಳ ಭಕ್ತಿ, ತಾಯಿ ತನ್ನ ಮಗುವಿಗೆ ತೋರುವ ವಾತ್ಸಲ್ಯ, ಶಿಷ್ಯ ಗುರುವಿಗೆ ನೀಡುವ ಗೌರವ... ಇಲ್ಲೆಲ್ಲಾ ಇರುವುದು ಪ್ರೀತಿಯ ವಿವಿಧ ಮುಖಗಳು. ಅದನ್ನು ಅಭಿವ್ಯಕ್ತಿಗೊಳಿಸುವ ರೀತಿ ಮಾತ್ರ ವಿಭಿನ್ನ. ಪ್ರೀತಿಗೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯೆ ನೀಡಬಹುದು. ಆದರೆ ಪ್ರತಿ ಜೀವಸೆಲೆಯ ಮೂಲವಿರುವುದೇ ಪ್ರೀತಿಯಲ್ಲಿ. ಬದುಕಿಗೆ ಪರಿಪೂರ್ಣತೆ ಸಿಗುವುದೇ ಪ್ರೀತಿಯಿಂದ..
ಇಂತಹ ಆಶಯದಲ್ಲಿ ಹುಟ್ಟಿಕೊಂಡದ್ದೇ ಮಾನಸಿ ಪ್ರಸಾದ್ ಪರಿಕಲ್ಪನೆಯ 'ಒಲವೇ ಜೀವನ ಸಾಕ್ಷಾತ್ಕಾರ' ಎಂಬ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ಪ್ರೀತಿಯ ವಿವಿಧ ಮುಖಗಳನ್ನು ಶಾಸ್ತ್ರೀಯ ಸಂಗೀತ ಕಛೇರಿ ಮೂಲಕ ಸಂಭ್ರಮದಿಂದ ಅಭಿವ್ಯಕ್ತಿಗೊಳಿಸುವುದೇ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಈ ಅಪರೂಪದ ಕಾರ್ಯಕ್ರಮದ ಉದ್ದೇಶವಾಗಿತ್ತು.
ಪಶ್ಚಿಮ ದಿಗಂತದಲ್ಲಿ ರವಿ ಲಜ್ಜೆಯ ಹೆಜ್ಜೆಯಿಟ್ಟು ಬಾನಿಂದ ಮರೆಯಾಗುವ ಹೊತ್ತಿಗೆ ಬಹುದಾರಿ ರಾಗದಲ್ಲಿ ಆರಂಭಗೊಂಡ 'ಹೃದಯದ ಹಾಡಿಗೆ ಶ್ರುತಿಯೇ ಪ್ರೀತಿ' ಗೀತೆಯಿಂದ ಮುಸ್ಸಂಜೆಯ
ಲಜ್ಜೆಗೇ ಬಣ್ಣದೋಕುಳಿ ಚೆಲ್ಲಿದ ಅನುಭವ. ಅಂತರಂಗಗಳ ಬಿರುಕನು ಬೆಸೆಯಲು, ಚಿಂತಾ ಚಿತೆಗಳ ಶಮನಿಸಲು ಪ್ರೀತಿ ಮೂಲ ಎಂಬ ಸಾರಾಂಶದ ಗೀತೆಗೆ ಜೀವ ನೀಡಿದ್ದು ಮಾನಸಿ ಅವರ ಸುಶ್ರಾವ್ಯ ಗಾಯನ. ಪ್ರೀತಿ ಎನ್ನುವುದು ಎರಡು ಜೀವಗಳ ನಡುವಿನ ಸಂಬಂಧವಷ್ಟೇ ಅಲ್ಲ. ಅದು ಮನಸುಗಳನ್ನು ಬೆಸೆಯುವ ಒಂದು ಅದ್ಭುತ ಪ್ರಕ್ರಿಯೆ. ಹಾಗಾದಾಗಲೇ ಪ್ರೀತಿಗೆ ಶೇಷ್ಠತೆ ಬರುವುದು. ಬದುಕಿಗೆ ಲಯ ದೊರಕುವುದು ಎಂಬುದನ್ನು ಅರ್ಥೈಸುವ ಪ್ರಯತ್ನವೇ ಈ ಗೀತೆ.
ರಾಧೆಯೆಂಬ ಹಳ್ಳಿಯ ಚೆಲುವಿಗೆ ಕೃಷ್ಣನೆಡೆಗೆ ಇದ್ದದ್ದು ನಿಷ್ಕಲ್ಮಶ ಪ್ರೇಮ. 'ಬೃಂದಾವನ ನಿಲಯೇ ರಾಧೆ' ಎಂಬ ಗೀತೆ ಈ ನಿರ್ಮಲ ಪ್ರೇಮವನ್ನೇ ಸೂಚ್ಯವಾಗಿ ಹೇಳುತ್ತದೆ. ಆದರೆ ಕರ್ಣನದ್ದು ಸ್ನೇಹಕ್ಕಾಗಿ ಜೀವ ಕೊಡುವ ಹೃದಯ ವೈಶಾಲ್ಯ. ಅದು ಪ್ರೀತಿ ಮತ್ತು ಸ್ನೇಹ ಎರಡರ ಮಿಶ್ರಣ ಎಂಬುದು ಸುಶ್ರ್ಯಾವ ಗಾಯನವಾಗಿ ಹೊರಬಂತು.
ಪ್ರೀತಿಯಲ್ಲಿ ಪ್ರತಿಯೊಂದೂ ಸುಂದರ. ಅಲ್ಲಿ ಅಧರ, ವದನ, ನಯನ, ನಗು, ಹೃದಯ ಎಲ್ಲವೂ ಮಧುರ. ಇದಕ್ಕೆ ಪೂರಕವಾಗಿ 'ಮಧುರಾಧಿಪತೇ ಅಖಿಲಂ ಮಧುರಂ' ಎನ್ನುತ್ತಾ ಮೃತ್ಯುವಲ್ಲೂ ಅನುರಾಗವನ್ನು ಕಾಣುವ ಬಗೆಯನ್ನು ಹಾಡಿನಲ್ಲೇ ತೆರೆದಿಟ್ಟರು. ವ್ಯಕ್ತಿಯ ಸೌಂದರ್ಯ ನೋಡಿ ಪ್ರೀತಿಸುವುದಲ್ಲ. ಬದಲಿಗೆ ಪ್ರೀತಿಸಿದಾಗ ಕುರೂಪವೂ ಸುಂದರವಾಗುತ್ತದೆ ಎಂಬ ಮಾತು ನಿಜವೇನೋ ಎಂದಿಲ್ಲಿ ಅನಿಸದೆ ಇರಲಾರದು.
ಈ ಕಾರ್ಯಕ್ರಮದ ವಿಶೇಷ ಎಂದರೆ ಪ್ರತಿ ಗೀತೆ ಆರಂಭಗೊಳ್ಳುವ ಮೊದಲು ಮಾನಸಿ ಅವರು ಆ ಗೀತೆಗೊಂದು ವಿಶ್ಲೇಷಣೆ ನೀಡಿ ನಂತರ ಹಾಡುತ್ತಿದ್ದರು. ಗೀತೆಗೆ ಪ್ರೀತಿಯ ಮಧುರ ಸ್ಪರ್ಶವೊಂದನ್ನು ನೀಡುತ್ತಿದ್ದರು. ಸಂಪೂರ್ಣ ಕಾರ್ಯಕ್ರಮ ಮೂಡಿಬಂದದ್ದು ಪ್ರೀತಿಯ ಪರಿಕಲ್ಪನೆಯಲ್ಲಿ. ಈ ಕಲ್ಪನೆಗೆ ಕಾರಣ?
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬಹಳ ಜನಕ್ಕೆ ತಲುಪಿಸುವ ಉದ್ದೇಶ ನನ್ನದು. ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತದಲ್ಲಿ ತಾತ್ವಿಕ ಸಂದೇಶಗಳೇ ಇರುತ್ತವೆ. ಇದರಿಂದ ಯುವ ಜನಾಂಗವನ್ನು ತಲುಪುವಲ್ಲಿ ಸೋಲುತ್ತದೆ. ಪ್ರೀತಿ ಎನ್ನುವುದು ಪ್ರತಿಯೊಬ್ಬನೂ ಅನುಭವಿಸುವ ಭಾವ. ಇದು ಸರ್ವವ್ಯಾಪಿ. ಹಾಗಾಗಿ ನಾನು ಪ್ರತಿ ವ್ಯಕ್ತಿಯ ಮನಸ್ಸನ್ನು ತಟ್ಟಬಹುದಾದ ವಿಷಯದ ಕಲ್ಪನೆಯನ್ನಿಟ್ಟುಕೊಂಡು ಅದಕ್ಕೆ ಭಾವನೆಗಳ ಸ್ಪರ್ಶ ಕೊಟ್ಟೆ ಎನ್ನುತ್ತಾರೆ ಮಾನಸಿ ಪ್ರಸಾದ್.
ಪ್ರತಿ ಹಾಡಿಗೂ ವಿವರಣೆ ನೀಡುತ್ತಾ ಪ್ರಸ್ತುತಿ ಪಡಿಸಲು ಮುಖ್ಯ ಕಾರಣ ಪ್ರೇಕ್ಷಕ ಹಾಗೂ ಗಾಯನದ ನಡುವಿನ ಸಂವಹನ ಉತ್ತಮಗೊಳ್ಳಲಿ ಎಂಬ ಉದ್ದೇಶ ಎನ್ನುವುದು ಅವರ ಅಭಿಪ್ರಾಯ.
ಎರಡು ವರ್ಷಗಳ ಹಿಂದೆ ಪ್ರಯೋಗ ಶೀಲೆ ಮಾನಸಿ ಪ್ರಸಾದ್ ಅವರು 'ಮೀರಾ' ಎಂಬ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅದು ಸಂಗೀತ, ನೃತ್ಯ, ನಾಟಕಗಳ ಅನುಪಮ ಮಿಶ್ರಣ. ಮೂರೂ ಪ್ರಕಾರವನ್ನೂ ಮಾನಸಿ ಒಬ್ಬರೇ ಪ್ರಸ್ತುತ ಪಡಿಸಿದ್ದು ಅದರ ವಿಶೇಷತೆಯಾಗಿತ್ತು. ಲೌಕಿಕ ಹಾಗೂ ಆಧ್ಯಾತ್ಮಿಕ ಜಗತ್ತನ್ನು ಮೀರಾಳ ಭಕ್ತಿಪ್ರೇಮದ ಮೂಲಕ ನೃತ್ಯ ಮಾಧ್ಯಮದ ಮುಖಾಂತರ ತೆರೆದಿಡುವ ಪ್ರಯತ್ನ ಮಾಡಿದ್ದರು. ನೃತ್ಯದ ಪ್ರೇರಣೆಯಿಂದಲೇ 'ಒಲವೇ ಜೀವನ ಸಾಕ್ಷಾತ್ಕಾರವೂ' ಹುಟ್ಟಿದ್ದು. ಸಾಮಾನ್ಯವಾಗಿ ನೃತ್ಯದಲ್ಲಿ ಹಲ ವಿಧದ ಸೃಜನಶೀಲ ಪ್ರಯೋಗಗಳು ನಡೆಯುತ್ತವೆ. ಹಾಗಿದ್ದಲ್ಲಿ ಸಂಗೀತದಲ್ಲೂ ಇಂತಹ ಪ್ರಯೋಗ ಮಾಡಿದರೆ ಹೇಗೆ ಎಂಬ ಯೋಚನೆಯೇ ಇದರಲ್ಲಿ ತೊಡಗುವಂತೆ ಮಾಡಿತು ಎನ್ನುತ್ತಾರೆ ಸ್ವತಃ ನೃತ್ಯಗಾತಿಯೂ ಆಗಿರುವ ಮಾನಸಿ.
ಜಗತ್ತಿನಲ್ಲಿ ಯಾವುದೂ ಒಂಟಿಯಲ್ಲ. ಪ್ರತಿಯೊಂದು ಜೀವವೂ ಇನ್ನಾವುದೋ ಜೀವವನ್ನು ಅವಲಂಬಿಸಿಕೊಂಡೇ ಬದುಕುತ್ತಿರುತ್ತದೆ. ಆದರೆ ಅವಲಂಬನೆ ಕೇವಲ ಸ್ವಾರ್ಥ ಸಾಧನೆಯಷ್ಟೇ ಆದಾಗ ಅದಕ್ಕೆ ಅರ್ಥವಿರುವುದಿಲ್ಲ. ಯಾವಾಗ ಅವಲಂಬನೆ ಹಿತವಾದ ಅನುಭೂತಿಯಾಗುತ್ತದೆಯೋ ಆಗ ಅದಕ್ಕೆ ನಿಜವಾದ ಅರ್ಥ. ಪ್ರೀತಿ ಇದ್ದಲ್ಲಿ ಮುನಿಸು, ಅಗಲಿಕೆ ಎಲ್ಲವೂ ಇರುತ್ತದೆ. ಆದರೆ ಅಂತಿಮವಾಗಿ ಉಳಿದುಕೊಳ್ಳುವುದು ಪ್ರಬುದ್ಧ ಪ್ರೀತಿ. ಅಲ್ಲಿ ಅತಿಯಾದ ಹುಮ್ಮಸ್ಸು ಇಲ್ಲ. ಕಾಲ ಸರಿದಂತೆ ಇದು ತನ್ನ ಸಾರ ಕಳೆದುಕೊಳ್ಳುವುದಿಲ್ಲ. ಅಂತಿಮವಾಗಿ ಒಂದರೊಳಗೊಂದು ಬಂಧಿಯಾಗುತ್ತದೆ. ಪ್ರತಿ ಮನುಷ್ಯ ಬಯಸುವುದೂ ಇಂತಹ ಪ್ರೀತಿಯನ್ನೇ. ಇದನ್ನೇ ಮಾನಸಿ ಪ್ರಸಾದ್ ಅವರು ತಮ್ಮ 'ಒಲವೆ ಜೀವನ ಸಾಕ್ಷಾತ್ಕಾರ'ದ ಮೂಲಕ ಹೇಳಲು ಹೊರಟಿದ್ದು.
ಪ್ರೀತಿ ಕೇವಲ ಮೋಹವಲ್ಲ, ತ್ಯಾಗ. ಅದು ಭಕ್ತಿ ಮತ್ತು ಶೃಂಗಾರ ಎರಡೂ ಸಮ್ಮಿಳಿತವಾಗಿರುವ, ಗೋಪಿಕಾ ಸ್ತ್ರೀಯರಿಗೆ ಕೃಷ್ಣನೆಡೆಗೆ ಇದ್ದಂತಹ ಒಲವಾಗಬೇಕು ಎಂಬ ಸಾರದ ತ್ಯಾಗರಾಜರ ಕೃತಿಯೊಂದಿಗೆ 'ಒಲವೇ ಜೀವನ....' ಮುಕ್ತಾಯಗೊಂಡರೆ ಪಡುವಣದ ಬಾನಲ್ಲಿ ಅನುರಾಗದ ಬಣ್ಣದಾಟ ಮುಂದುವರಿದಿತ್ತು.
ಟಿಎಸ್‌ಐ
ಡಿ.ಎಸ್. ಶ್ರೀಕಲಾ |