|
| ಕೆ.ಪಿ.ಎಸ್. ಗಿಲ್
|
ಪಂಜಾಬ್‌ನ ಮಾಜಿ ಡಿಜಿಪಿ ಮತ್ತು ದಂಗೆ ನಿಯಂತ್ರಣಾ ತಜ್ಞ
|
ಕಾನೂನು ಮತ್ತು ಸುವ್ಯವಸ್ಥೆಗಿರುವ ಅಪಾಯ ಎದುರಿಸಲು ಅತ್ಯಗತ್ಯವಾಗಿ ಬೇಕಾಗಿರುವು ದೆಂದರೆ ಅದು ಸತ್ವಯುತ ರಾಜಕೀಯ ಇಚ್ಛಾಶಕ್ತಿ. ಭಯೋತ್ಪಾದಕ ಶಕ್ತಿಗಳನ್ನು ದಮನ ಮಾಡಲು ಪ್ರಬಲ ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಹೋದಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಛತ್ತೀಸ್‌ಗಡ್‌ನಲ್ಲಿ ಈ ಪ್ರಾಥಮಿಕ ಸಮಸ್ಯೆಯೇ ನಕ್ಸಲರ ವಿರುದ್ಧ ಕೇಂದ್ರೀಕೃತ ಕಾರ್ಯಾಚರಣೆಗೆ ನಿರಂತರ ಆಪತ್ತು ತಂದೊಡ್ಡುತ್ತಿದೆ.
ಇಲ್ಲಿ ಗಮನಹರಿಸಲೇಬೇಕಾದ ಕೆಲವೊಂದು ಅಂಶಗಳಿವೆ. ಮೊದಲನೆಯದಾಗಿ, ಈ ಕಾರ್ಯಕ್ಕೆ ರಾಜಕೀಯ ಇಚ್ಛಾಶಕ್ತಿಯ ಸಮಗ್ರ ಕೊರತೆ ಇದೆ. ಎರಡನೆಯದು, ನಕ್ಸಲ್ ಹಾವಳಿ ಹತ್ತಿಕ್ಕಲು ಸಮರ್ಥವಾದ ತಂತ್ರಜ್ಞಾನದ ಅಭಾವ. ಇದರ ಜೊತೆಗೆ ನಕ್ಸಲರನ್ನು ಮಟ್ಟಹಾಕುವ ಹೊಣೆ ವಹಿಸಿಕೊಂಡಿರುವವರ ಅನನುಭವ ಹಾಗೂ ಸಮರ್ಥ ನಾಯಕತ್ವದ ಕೊರತೆ, ಪೊಲೀಸ್ ಪಡೆಗೆ ಭರ್ತಿಯಾಗುವ ಪ್ರಕ್ರಿಯೆಯಲ್ಲಿ ನಡೆಯುವ ಭ್ರಷ್ಟಾಚಾರ, ವರ್ಗಾವಣೆ ಮತ್ತು ನಿಯೋಜನೆಯಲ್ಲಿ ರಾಜಕೀಯ. ಈ ಎಲ್ಲಾ ಕಾರಣಗಳಿಂದ ನಕ್ಸಲ್ ನಿಗ್ರಹದ ಜವಾಬ್ದಾರಿಯನ್ನು ತಾವೊಬ್ಬರೇ ಹೊರಲು ಸಾಧ್ಯವಿಲ್ಲದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಇವೆಲ್ಲವುಗಳಿಂದಾಗಿ ನಕ್ಸಲ್ ಸಮಸ್ಯೆ ಭೀಕರವಾಗಿ ಪರಿಣಮಿಸಿದ್ದರೂ ತೀರಾ ಹಾಸ್ಯಾಸ್ಪದ ಎನ್ನುವಂತಹ ರಾಜಕೀಯ ಸ್ಥಿತಿ ನಿರ್ಮಾಣವಾಗಿದೆ. ಅದೆಂದರೆ ಇಲ್ಲಿ ಕೇಂದ್ರ ಗೃಹ ಸಚಿವರು ತಮ್ಮ ಜವಾಬ್ದಾರಿಯನ್ನು ಮರೆತು, ನಕ್ಸಲರನ್ನು ಹತ್ತಿಕ್ಕುವ ಕಾರ್ಯವನ್ನು ಆಯಾಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೀಡುತ್ತಾರೆ. ಆ ಮೂಲಕ ಅವರ ಜವಾಬ್ದಾರಿಯ ವರ್ಗಾವಣೆಯಾಗುತ್ತದೆ. ವಿಪರ್ಯಾಸವೆಂದರೆ, ಈ ದೇಶದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿ ಇವರಿಬ್ಬರಿಗೂ ಸಮಾನವಾಗಿ ಹಾಗೂ ಸಂವಿಧಾನಾತ್ಮಕವಾಗಿಯೇ ಅಮಾಯಕ ಜನರ ಬದುಕನ್ನು ರಕ್ಷಿಸುವ ಹೊಣೆ ಇದೆ. ನಾನೀಗಾಗಲೇ ಲೆಕ್ಕವಿಲ್ಲದಷ್ಟು ಬಾರಿ ಯೋಜನಾಬದ್ಧ ಏಕೀಕೃತ ಆದೇಶದ ಕುರಿತು ಮಾತನಾಡಿದ್ದೇನೆ. ಹಿಂದೊಮ್ಮೆ ಅದು ಅಸ್ಸಾಂನಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಈಗ ಅಂತಹುದೇ, ಪ್ರಾಯಶಃ ಆ ವಿಫಲ ಕಾರ್ಯಕ್ರಮದ ಇನ್ನೊಂದು ಅವತರಣಿಕೆ ಎಂದೇ ಹೇಳಬಹುದಾದಂತಹ, ಮತ್ತೊಂದು ಆದೇಶವನ್ನು ಛತ್ತೀಸ್‌ಗಡ್‌ನಲ್ಲಿ ಜಾರಿಗೆ ತರುವ ಕುರಿತು ಯೋಚಿಸಲಾಗುತ್ತಿದೆ. ಒಂದೊಮ್ಮೆ ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾದರೂ, ಕೆಲವೇ ದಿನಗಳಲ್ಲಿ ಛತ್ತೀಸ್‌ಗಡದಲ್ಲಿ ನಕ್ಸಲ್ ಹಾವಳಿ ದಟ್ಟವಾಗಿ ಹಬ್ಬುವುದನ್ನು ಪ್ರತಿಯೊಬ್ಬರೂ ಕಾಣಬೇಕಾಗಬಹುದು.
ಪ್ರಸ್ತುತ ಸನ್ನಿವೇಶದಲ್ಲಿ, ಕಾಂಗ್ರೆಸ್‌ನ ಕೇಂದ್ರ ಗೃಹಸಚಿವ ಮತ್ತು ಛತ್ತೀಸ್‌ಗಡದ ಬಿಜೆಪಿಯ ಮುಖ್ಯಮಂತ್ರಿ ಇವರಿಬ್ಬರಲ್ಲೂ ರಾಜಕೀಯ ಸಂಕಲ್ಪದ ಕೊರತೆ ಇದೆ. ಹಾಗೂ ಇಬ್ಬರೂ ನಾಯಕತ್ವದ ದಿವಾಳಿತನ ತೋರಿಸುತ್ತಿದ್ದಾರೆ. ಅಲ್ಲದೆ ಈ ಎರಡೂ ದೊಡ್ಡ ರಾಜಕೀಯ ಪಕ್ಷಗಳು (ಕಾಂಗ್ರೆಸ್ ಮತ್ತು ಬಿಜೆಪಿ) ತಮ್ಮ ರಾಜಕೀಯ ಆಟದಲ್ಲಿಯೇ ನಿರತವಾಗಿವೆ. ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಪ್ರೇರಿತ ಕ್ರಾಂತಿ ತಲೆಯೆತ್ತಿದಾಗ ಈ ಎರಡೂ ಪಕ್ಷಗಳು ಸಂತಸಪಟ್ಟಿದ್ದವು. ಬಿಜೆಪಿಯಂತೂ ಪಶ್ಚಿಮ ಬಂಗಾಳದಲ್ಲಿನ ಗಲಭೆಯನ್ನು ಬೆಂಬಲಿಸುವ ಮಟ್ಟಕ್ಕೂ ತಲುಪಿತು. ಹಾಗಾದರೆ ಯಾವ ಮಾನದಂಡವನ್ನಿಟ್ಟುಕೊಂಡು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮಾತ್ರ ನಕ್ಸಲ್ ನೀತಿಯನ್ನು ಬೆಂಬಲಿಸಿ ಉಳಿದೆಡೆ ಅದನ್ನು ವಿರೋಧಿಸುತ್ತಿದೆ?
ನಕ್ಸಲ್‌ವಾದದ ಬಗ್ಗೆ ರಾಜಕೀಯ ಪಕ್ಷಗಳ ದ್ವಂದ್ವ ನಿಲುವು ಹಾಗೂ ಅಭಿಪ್ರಾಯ ಅವರ ಸೋಲಿಗೆ ಹಿಡಿದ ಕೈಗನ್ನಡಿ. ರಾಜಕೀಯ ಪಕ್ಷಗಳು ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ಇನ್ನು ಭದ್ರತೆಯನ್ನು ಹೆಚ್ಚಿಸುವ ಸರ್ಕಾರದ ಕ್ರಮಗಳ ಕುರಿತು ಹೇಳುವುದಾದರೆ, ಛತ್ತೀಸ್‌ಗಡದಲ್ಲಿ ಪೊಲೀಸರಿಗೆ ಶಸ್ತ್ರಸಜ್ಜಿತ ವಾಹನಗಳನ್ನು ನೀಡಲಾಗಿದೆ. ಆದರೆ ಭದ್ರತಾ ಪಡೆಗಳ ಸಂಖ್ಯೆ ಹೆಚ್ಚಿಸುವುದು ಹಾಗೂ ಅವರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡುವುದು ಭದ್ರತೆಯನ್ನು ಕೊಂಚ ಮಾತ್ರ ಹೆಚ್ಚಿಸುತ್ತದೆ. ಭದ್ರತೆಯನ್ನು ಸಮರ್ಪಕವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಬಿಗಿಗೊಳಿಸಬೇಕೆಂದರೆ ಕಾನೂನು ಸುವ್ಯವಸ್ಥೆಯ ಮೂಲ ಘಟಕಗಳಾಗಿರುವ ಪೊಲೀಸ್ ಠಾಣೆಗಳನ್ನು ಇನ್ನಷ್ಟು ಸುಭದ್ರಗೊಳಿಸಿ, ಅದರ ವ್ಯಾಪ್ತಿಯಲ್ಲಿ ಸಂಭವಿಸುವ ಯಾವುದೇ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಲು ಸನ್ನದ್ಧವಾಗಿರುವಂತೆ ಮಾಡಬೇಕಾಗಿದೆ. ದುರದೃಷ್ಟವಶಾತ್ ಈ ಕಾರ್ಯ ಎಲ್ಲಿಯೂ ನಡೆಯುತ್ತಿಲ್ಲ ಹಾಗೂ ಇದರಿಂದಾಗಿಯೇ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ.
ಈ ದೇಶಕ್ಕೆ ನಕ್ಸಲಿಸಂ ಅತಿದೊಡ್ಡ ಅಪಾಯ ತಂದೊಡ್ಡುತ್ತಿದೆ ಎನ್ನುವ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾತನ್ನು ನಾನೂ ಒಪ್ಪುತ್ತೇನೆ. ಏಕೆಂದರೆ, ಕಾಶ್ಮೀರದಲ್ಲಷ್ಟೇ ಸಕ್ರಿಯರಾಗಿರುವ ಭಯೋತ್ಪಾದಕರಂತಲ್ಲದೆ, ನಕ್ಸಲರು ಹಲವಾರು ರಾಜ್ಯಗಳಲ್ಲಿ ಅಂಕೆ ಮೀರಿ ಬೆಳೆದಿದ್ದಾರೆ. ಈ ರೀತಿಯ ಸಮಸ್ಯೆಗಳ ನಿರ್ವಹಣೆಗೆ ಉತ್ತಮವಾದ ಆಡಳಿತ ವ್ಯವಸ್ಥೆ ಇರಬೇಕಾದುದು ಅತಿ ಮುಖ್ಯ.
ನಕ್ಸಲೀಯರು ಹಾಗೂ ಐಎಸ್‌ಐ ನಡುವೆ ಏನಾದರೂ ನಂಟು ಇದೆಯೇ? ಈ ಪ್ರಶ್ನೆಗೆ ಖಚಿತ ಉತ್ತರ ಇಲ್ಲ. ನೀವೊಂದು ವೇಳೆ ನಕ್ಸಲರ ವೆಬ್‌ಸೈಟನ್ನು ನೋಡಿದರೆ ಅವರು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ತಮ್ಮ ತಂಡ ಇದೆ ಎನ್ನುತ್ತಾರೆ. ಆ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇಲ್ಲಿ ಅವಕಾಶವಾದಿ ರಾಜಕಾರಣದ ಮೌಢ್ಯವೂ ಇದೆ. ನಕ್ಸಲರ ಬಗ್ಗೆ ವಿವಿಧ ವೇದಿಕೆಗಳಲ್ಲಿ ರಾಜಕೀಯ ಪಕ್ಷಗಳು ಏನೇ ಹೇಳಿದರೂ, ಚುನಾವಣೆಯ ಸಮಯದಲ್ಲಿ ಮಾತ್ರ ಗೆಲ್ಲುವುದಕ್ಕಾಗಿ ನಕ್ಸಲರೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಯಾವ ಪಕ್ಷವೂ ಹೊರತಲ್ಲ. ಉದಾಹರಣೆಗೆ ಕಾಂಗ್ರೆಸ್‌ನ ಮಹೇಂದ್ರ ಕರ್ಮ ಛತ್ತೀಸ್‌ಗಡ್‌ನಲ್ಲಿ ನಕ್ಸಲರನ್ನು ವಿರೋಧಿಸಿದರೂ, ಚುನಾವಣೆಯ ಸಂದರ್ಭದಲ್ಲಿ ಅವರದೇ ಪಕ್ಷ ನಕ್ಸಲರೊಂದಿಗೆ ಒಪ್ಪಂದ ಮಾಡಿಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಆಗ ಅವರಿಗೆ ಚುನಾವಣೆಯಲ್ಲಿ ಮತಗಳನ್ನು ಗೆಲ್ಲುವುದಷ್ಟೇ ಮುಖ್ಯವಾಗಿರುತ್ತದೆ.
ನಕ್ಸಲ್‌ವಾದ ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೇ ಅಥವಾ ಅದು ನೇರವಾಗಿ ಆರ್ಥಿಕತೆಯ ಅಂಶಗಳಿಗೂ ಸಂಬಂಧಿಸಿದೆಯೇ? ಇದಕ್ಕೆ ಉತ್ತರ ಕೊಂಚ ಕಷ್ಟ. ಈ ಸನ್ನಿವೇಶದಲ್ಲಿ, ಛತ್ತೀಸ್‌ಗಡದಲ್ಲಿ ನಕ್ಸಲರ ಬಂದೂಕಿಗೆ ಆಹಾರ ಒದಗಿಸುತ್ತಿರುವ ಹಾಗೂ ಅವರನ್ನು ಬೆಂಬಲಿಸುತ್ತಿರುವ ಗುಂಪು ಯಾವುದೇ ಸಾಮಾಜಿಕ ಪರಿಧಿಗೆ ಒಳಪಟ್ಟಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಇನ್ನೂ ವಿವರವಾಗಿ ಹೇಳುವುದಾದರೆ, ನಕ್ಸಲರ ಉದ್ದೇಶದ ಕುರಿತು ಮೃದು ಧೋರಣೆ ತಾಳದೇ ಇರದಂತಹ, ಅವರನ್ನು ಬೆಂಬಲಿಸದಂತಹ ಸಾವಿರಾರು ಬುಡಕಟ್ಟು ಪಂಗಡಗಳು ಈಗಲೂ ಛತ್ತೀಸ್‌ಗಡದಲ್ಲಿವೆ. ಆದರೆ ಈ ಪಂಗಡಗಳ ಸಮಸ್ಯೆಗಳತ್ತ ಗಮನಹರಿಸಲು ಸರ್ಕಾರ ಏಕೆ ವಿಫಲವಾಗುತ್ತಿದೆ ಎಂಬುದು ಮಾತ್ರ ನನಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ಸರ್ಕಾರ ಈ ಬಗ್ಗೆ ಗಮನ ನೀಡದಿದ್ದಲ್ಲಿ ಅದು ನಕ್ಸಲರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಕಾನೂನು ಮತ್ತು ಸುವ್ಯವಸ್ಥೆ, ಅಭಿವೃದ್ಧಿ ಯೋಜನೆಗಳ ವಿಫಲ ಪ್ರಯೋಗಗಳ ಹೊರತಾಗಿ ನಕ್ಸಲರನ್ನು ಹತ್ತಿಕ್ಕುವ ಛತ್ತೀಸ್‌ಗಡದ ಸಾಮರ್ಥ್ಯದಲ್ಲಿ ಭಯಾನಕ ಕುಸಿತ ಉಂಟಾಗಿದೆ. ಆಂಧ್ರಪ್ರದೇಶದ ಗ್ರೇಹೌಂಡ್‌ನಲ್ಲಿ ನಕ್ಸಲವಾದ ಎಂಬ ಗಂಭೀರ ಸಮಸ್ಯೆಯನ್ನು ನಿಯಂತ್ರಿಸಲು ವಿಶೇಷ ಪಡೆ ಸ್ಥಾಪಿಸುವುದನ್ನು ನಾನು ಬೆಂಬಲಿಸುತ್ತೇನೆ. ಇದಕ್ಕೆ ಮಾನವ ಹಕ್ಕು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತವೆ ಅನ್ನುವುದರ ಅರಿವು ನನಗಿದೆ. ಆದರೆ ನಕ್ಸಲರನ್ನು ನಿಗ್ರಹಿಸಲು ರಾಜ್ಯ ಸರ್ಕಾರ ಯಾವುದೇ ದೃಢ ನಿರ್ಧಾರ ಕೈಗೊಳ್ಳಲು ಮುಂದಾದಾಗಲೂ ಅವರು ಪ್ರತಿಭಟಿಸುವುದು ಸಾಮಾನ್ಯ. ಇಲ್ಲೂ ಅಷ್ಟೆ.
ಟಿಎಸ್‌ಐ |