ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ದೇಸಿ ದನಿ
 
 

ಕಾಶ್ಮೀರ: ಚುನಾವಣೆ

ಮೆಹಬೂಬ- ಫರೂಕ್ ವಾಕ್ ಸಮರ

ಚುನಾವಣೆಯಲ್ಲಿ ಪ್ರತ್ಯೇಕತಾವಾದದ ಹಿಡಿತ...

ಇದನ್ನು ಹತಾಶೆಯಿಂದ ನೀಡಿದ ಹೇಳಿಕೆ ಎಂದು ಪರಿಗಣಿಸಬಹುದು ಅಥವಾ ಚುನಾವಣಾ ಸಮಯದಲ್ಲಿ ಏನು ನಡೆಯಲಿದೆ ಎಂಬ ಸೂಚನೆಯೂ ಆಗಿರಬಹುದು. ನ್ಯಾಷನಲ್ ಕಾನ್‌ಫರೆನ್ಸ್ ಪೋಷಕ ಮತ್ತು ಮಾಜಿ ಮುಖ್ಯಮಂತ್ರಿ ಡಾ. ಫರೂಕ್ ಅಬ್ದುಲ್ಲಾ ಅವರ ಆರೋಪಗಳಿಗೆ 'ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ' ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿರುವುದಂತೂ ನಿಜ. ಈ ಆರೋಪ- ಪ್ರತ್ಯಾರೋಪಗಳು ಜಮ್ಮು ಮತ್ತು ಕಾಶ್ಮೀರದ ಚುನಾವಣೆಗೆ ವೇದಿಕೆ ಸಜ್ಜು ಮಾಡಿದಂತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಈ ನಡುವೆ ರಾಜ್ಯದ ಬದ್ಧ ರಾಜಕೀಯ ವೈರಿಗಳು ಕತ್ತಿ ಮಸೆಯುತ್ತಿದ್ದಾರೆ. ಪರಸ್ಪರರ ಮೇಲೆ ಕೊಲೆ ಆರೋಪ ಹೊರಿಸುತ್ತಿದ್ದಾರೆ. ಕಳೆದ ಶನಿವಾರ ಜಮ್ಮುವಿನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಫರೂಕ್ ವಾಕ್‌ಸಮರಕ್ಕೆ ಚಾಲನೆ ನೀಡಿದ್ದರು. ಅವರು ಕೇಂದ್ರ ಸಚಿವ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಪೋಷಕರೂ ಆಗಿರುವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಮೇಲೆ ಮಿರ್ವಾಯಿಜ್ ಮೌಲ್ವಿ ಮಹಮ್ಮದ್ ಫರೂಕ್ ಅವರ ಕೊಲೆ ಆರೋಪ ಹೊರಿಸಿದ್ದರು. ಹುರಿಯತ್ ಕಾನ್‌ಫರೆನ್ಸ್ ಅಧ್ಯಕ್ಷ ಮಿರ್ವಾಯಿಜ್ ಉಮರ್ ಫರೂಕ್ 1990ರ ಮೇ 21ರಂದು ಶ್ರೀನಗರದ ಈದ್ಗಾದಲ್ಲಿ ಅಪರಿಚಿತ ಹಂತಕನ ಗುಂಡಿಗೆ ಬಲಿಯಾಗಿದ್ದರು. ಮೌಲ್ವಿ ಮಹಮ್ಮದ್ ಫರೂಕ್ ಅವರ ಕೊಲೆಗೆ ಮುಫ್ತಿ ಮಹಮ್ಮದ್ ಸಯೀದ್ ಅವರೇ ಜವಾಬ್ದಾರರು. ಮೌಲ್ವಿ ಫರೂಕ್ ಅವರು ರಕ್ಷಣೆ ಬಯಸಿ ಕೇಂದ್ರ ಸರ್ಕಾರ ಮತ್ತು ಆ ಬಳಿಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಆದರೆ ಆಗ ಕೇಂದ್ರ ಸಚಿವರಾಗಿದ್ದ ಮುಫ್ತಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮುಫ್ತಿ ಅವರಿಂದಲೇ ಆರಿಸಲ್ಪಟ್ಟ ರಾಜ್ಯಪಾಲರೂ ಮೌಲ್ವಿ ಅವರ ಕೋರಿಕೆಗೆ ಮನ್ನಣೆ ನೀಡಲಿಲ್ಲ. ವಾಸ್ತವದಲ್ಲಿ ನಡೆದಿರುವುದನ್ನೇ ನಾನು ಹೇಳುತ್ತಿದ್ದೇನೆ ಎಂದು ಫರೂಕ್ ಹೇಳಿದ್ದಾರೆ. ಮರುದಿನವೇ ಪಿಡಿಪಿ ಅಧ್ಯಕ್ಷೆ ತಮ್ಮ ತಂದೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ ನ್ಯಾಷನಲ್ ಕಾನ್‌ಫರೆನ್ಸ್ ಪೋಷಕರ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ನಿರಂತರ ಮುನ್ನೆಚ್ಚರಿಕೆಗಳ ತರುವಾಯವೂ ಅವರು ಹುರಿಯತ್ ಅಧ್ಯಕ್ಷರು, ಅಬ್ದುಲ್ ಗನಿ ಲೋನ್ ಮಾತ್ರವಲ್ಲ, ಅವರದೇ ಸಚಿವರುಗಳಾದ ಮುಷ್ತಕ್ ಅಹಮದ್ ಲೋನ್ ಮತ್ತು ಗುಲಾಮ್ ಹುಸೇನ್ ಭಟ್... ಮೊದಲಾದವರ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಮೆಹಬೂಬಾ ಜಮ್ಮು ಪ್ರಾಂತ್ಯದ ನಾಗ್ರೋಟದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ. ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲು ಬಂದೂಕಿನ ಬೆದರಿಕೆಯ ಅಗತ್ಯವಿಲ್ಲ ಎಂಬ 'ಯುನೈಟೆಡ್ ಜಿಹಾದಿ ಕೌನ್ಸಿಲ್' ಉಗ್ರಗಾಮಿ ಸಂಘಟನೆಯ ಅಧ್ಯಕ್ಷ ಸಯ್ಯದ್ ಸಲಾವುದ್ದೀನ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಫರೂಕ್ ಹೇಳಿಕೆ ಮಹತ್ವ ಪಡೆದಿದೆ. ಈ ಹೇಳಿಕೆ ಪ್ರತ್ಯೇಕತಾವಾದಿಗಳು ಹಿಡಿತ ಸಾಧಿಸಲು ಪ್ರಯತ್ನಿಸುವ ಸೂಚನೆ ನೀಡಿದೆ ಮತ್ತು ಫರೂಕ್ ಮತ್ತು ಮೆಹಬೂಬ ಅವರೂ ಇದನ್ನೇ ಗುರಿಯಾಗಿಸಿದ್ದಾರೆ ಎನ್ನುವುದು ಖಚಿತ.

ಟಿಎಸ್‌ಐ

ಜುಬೇರ್ ಎ. ದಾರ್

ತಮಿಳುನಾಡು: ರಾಜಕೀಯ

ಕೌಟುಂಬಿಕ 'ಕೇಬಲ್' ಕಲಹ

ರಾಜ್ಯ ಸರ್ಕಾರದ ಆಧಿಪತ್ಯದಲ್ಲಿ ಹೊಸ ಕೇಬಲ್ ಜಾಲ

ಡಿಎಂಕೆ ಕೌಟುಂಬಿಕ ಕಲಹ ಬಹಿರಂಗವಾಗಿ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಕೇಬಲ್ ಯುದ್ಧ ತೀವ್ರ ಸ್ವರೂಪ ಪಡೆದಿದೆ. ಪರಿತ್ಯಕ್ತ ಮಾರನ್ ಸಹೋದರರು ಈ ಕೇಬಲ್ ಯುದ್ಧದ ಬೇಗೆಯಲ್ಲಿ ನಿರಂತರವಾಗಿ ಬೇಯುತ್ತಿದ್ದಾರೆ. ಕರುಣಾನಿಧಿ ಅವರ ಹಿರಿಯ ಮಗ ಅಳಗಿರಿ ಚೆನ್ನೈಗೆ 'ಹಾತ್‌ವೇ ಕೇಬಲ್' ತರುವ ನಿರ್ಧಾರ ತಳೆದು, ಒಂದು ಕಾಲದಲ್ಲಿ ಕೇಬಲ್ ಉದ್ಯಮದಲ್ಲಿ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟ ಮಾರನ್ ಸಹೋದರರನ್ನು ಬಹಿರಂಗ ಯುದ್ಧಕ್ಕೆ ಆಹ್ವಾನಿಸಿದ್ದಾರೆ. ಒಂದೊಮ್ಮೆ ಸನ್ ನೆಟ್‌ವರ್ಕ್ ಸಮೂಹದಿಂದ ಇದೇ ಹಾತ್‌ವೇ ಕೇಬಲ್ ಚೆನ್ನೈನಿಂದ ಹೊರ ದೂಡಿಸಿಕೊಂಡಿತ್ತು. ಈಗ ಮತ್ತೆ ಅದೇ ಪಿಶಾಚಿ ಗವಾಕ್ಷೀಲಿ ತಿರುಗಿ ಬಂದಿದೆ! ತಮಿಳುನಾಡಿನ ಕೇಬಲ್ ಮಾರುಕಟ್ಟೆಯಲ್ಲಿ ಸನ್ ನೆಟ್‌ವರ್ಕ್ ಅವರ ಕೇಬಲ್ ಶಾಖೆ 'ಸುಮಂಗಲಿ ಕೇಬಲ್ ವಿಷನ್' (ಎಸ್‌ಸಿವಿ) ಏಕಸ್ವಾಮ್ಯವಿದೆ. ಮಾರನ್ ಸಹೋದರರು ತಮ್ಮ ಅಜ್ಜ ಕರುಣಾನಿಧಿಯ ಕುಟುಂಬವನ್ನು ತೊರೆದ ಬಳಿಕ ಡಿಎಂಕೆ ತನ್ನದೇ ಆದ ಮನೋರಂಜನಾ ವಾಹಿನಿ 'ಕಲೈಂಗರ್ ಟಿವಿ' ಮತ್ತು ಒಂದು ಮ್ಯೂಸಿಕ್ ಚಾನಲ್ ಆರಂಭಿಸಿತ್ತು. ಟಿವಿ ವಾಹಿನಿಯೊಂದನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದಲ್ಲಿ ಕೇಬಲ್ ನೆಟ್‌ವರ್ಕ್ ಮೇಲೆ ಬಿಗಿ ಹಿಡಿತವಿರಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಆಧಿಪತ್ಯದಲ್ಲಿ 'ಅರಸು ಕೇಬಲ್ ಟಿವಿ ಕಾರ್ಪೋರೇಷನ್' ಆರಂಭಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ಇದು ಸನ್ ಸಮೂಹದ ಎಸ್‌ಸಿವಿಯನ್ನು ಹತ್ತಿಕ್ಕಲು ಇಟ್ಟ ಹೆಜ್ಜೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಕೇಬಲ್ ನೆಟ್‌ವರ್ಕ್‌ನಲ್ಲಿ ತಮ್ಮನ್ನು ಗುರಿಯಾಗಿಸಿ ಕಾರ್ಯಯೋಜನೆಗಳನ್ನು ಸಿದ್ಧ ಪಡಿಸಲಾಗುತ್ತಿದೆ ಎಂಬ ಅರಿವಿದ್ದೂ, ಸನ್ ನೆಟ್‌ವರ್ಕ್ ಸಮೂಹ 'ಸನ್ ಡೈರೆಕ್ಟ್' ಎಂಬ ಡಿಟಿಎಚ್ ಸೇವೆಯನ್ನು ಆರಂಭಿಸಿತು. ಆದರೆ ಸರ್ಕಾರದ ನಿರ್ಧಾರವನ್ನು ಅನುಸರಿಸಿ ಕೇಬಲ್ ಟಿವಿ ಅಪರೇಟರ್‌ಗಳು ಎರಡು ಗುಂಪುಗಳಾಗಿ ಚದುರಿ ಹೋದರು. ಒಂದು ಸಮೂಹ ಸರ್ಕಾರವನ್ನು ಬೆಂಬಲಿಸಿದರೆ ಮತ್ತೊಂದು ಸಮೂಹ ಸನ್ ಸಮೂಹವನ್ನು ಬೆಂಬಲಿಸಿತು. ಈ ನಡುವೆ, ಕಳೆದ ವಾರ ಅಳಗಿರಿ ಮತ್ತು ಕೆಲ 'ಕಲೈಂಗರ್ ಟಿವಿ' ಅಧಿಕಾರಿಗಳು ಚೆನ್ನೈನ ಕೇಬಲ್ ಅಪರೇಟರ್‌ಗಳನ್ನು ಭೇಟಿಯಾಗಿದ್ದು, ಹಾತ್‌ವೇಗೆ ಸಹಕರಿಸಲು ಕೋರಿದ್ದಾರೆ. ಚೆನ್ನೈನ ಕೆಲ ಭಾಗಗಳಲ್ಲಿ ಎಸ್‌ಸಿವಿ ಕೇಬಲ್‌ಗಳನ್ನು ಕಡಿದು ಹಾಕಲಾಗಿದೆ ಮತ್ತು ಅಪರೇಟರ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸಂಸದ ದಯಾನಿಧಿ ಮಾರನ್ ಕಳೆದ ಶುಕ್ರವಾರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಪ್ರಕರಣ ದಾಖಲಿಸಿದರು. ಆದರೆ ಪ್ರಮುಖ ಪೊಲೀಸ್ ಅಧಿಕಾರಿಗಳು ಅವರ ಭೇಟಿಯಿಂದ ನುಣುಚಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಕಚೇರಿಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯ ಬಳಿ ಅವರು ಪ್ರಕರಣ ದಾಖಲಿಸಿದರು ಮತ್ತು ನೆರೆದಿದ್ದ ಪತ್ರಿಕಾ ಸಮುದಾಯದ ಬಳಿ ತಮ್ಮ ರೋಷವನ್ನು ಕಾರಿದರು. ಈವರೆಗೆ ನಾನು ಮತ್ತು ನನ್ನ ಕುಟುಂಬದವರು ಮಾತ್ರ ಅನುಭವಿಸುತ್ತಿದ್ದ ಸಮಸ್ಯೆ ಈಗ ನಮ್ಮನ್ನು ನಂಬಿ ಉದ್ಯಮ ನಡೆಸುತ್ತಿರುವವರಿಗೂ ಹಬ್ಬಿದೆ. ಪೊಲೀಸರು ಅನೇಕ ಎಸ್‌ಸಿವಿ ಅಪರೇಟರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಹಾತ್‌ವೇ ಕೇಬಲ್‌ಗೆ ವರ್ಗಾವಣೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ನಾನು ಈ ಪ್ರಕರಣ ದಾಖಲಿಸಿದ್ದೇನೆ. ಮುಖ್ಯಮಂತ್ರಿ ಅಗತ್ಯ ಕ್ರಮ ಕೈಗೊಳ್ಳುವರು ಎಂಬ ನಿರೀಕ್ಷೆಯಲ್ಲಿರುವೆ ಎಂದು ದಯಾನಿಧಿ ಹೇಳಿದ್ದಾರೆ. ಪರಿಣಾಮ? ರಾಜ್ಯ ಮಾಲೀಕತ್ವದ ಕೇಬಲ್ ಟಿವಿ ಕಾರ್ಪೋರೇಷನ್ ಅನುಷ್ಠಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಿದ್ದೇ ಈ ಪ್ರಕರಣಕ್ಕೆ ಸರ್ಕಾರ ನೀಡಿದ ಉತ್ತರ! ಎಸ್‌ಸಿವಿಯನ್ನು ಛಿದ್ರಗೊಳಿಸುವ ಪ್ರಯತ್ನದಲ್ಲಿ ಯಾವುದೇ ಪ್ರಶ್ನಾರ್ಹ ಚಟುವಟಿಕೆಗಳನ್ನು ನಡೆಸದಿರುವಂತೆ ಮುಖ್ಯಮಂತ್ರಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಟಿಎಸ್‌ಐ

ಎ. ಪಳನಿಯಪ್ಪನ್

ಕೇರಳ: ಡೀಸೆಲ್ ಸೋರಿಕೆ

ಡೀಸೆಲ್ ಹರಿದೆಡೆ ಸುಗ್ಗಿಯೋ ಸುಗ್ಗಿ

ಅಪಾಯಕಾರಿ ಸ್ಥಿತಿಯಲ್ಲೂ ಎಚ್ಚೆತ್ತುಕೊಳ್ಳದ ಬಿಪಿಸಿಎಲ್

ಅಂದು ಫೆಬ್ರುವರಿ 9ರ ಮುಸ್ಸಂಜೆ. ಕೊಚ್ಚಿಯ ಬಂದರಿನಿಂದ ವಿಮಾನ ನಿಲ್ದಾಣದವರೆಗೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲರೂ 'ಉಚಿತ ಡೀಸೆಲ್' ಸಂಗ್ರಹಿಸುವುದರಲ್ಲಿ ನಿರತರಾಗಿದ್ದರು! ಕೊಚ್ಚಿಯ ಇರುಂಬನಂನಲ್ಲಿರುವ ಭಾರತ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್ (ಬಿಪಿಸಿಎಲ್) ಆವರಣದ ಮುಖ್ಯ ಡೀಸೆಲ್ ಕೊಳವೆ ಸೋರಿಕೆಯಾಗಿ ಸುತ್ತಮುತ್ತಲ ಪ್ರದೇಶ ಡೀಸೆಲ್‌ನಲ್ಲಿ ಮಿಂದೆದ್ದವು. ಆದರೂ ಬಿಪಿಸಿಎಲ್ ಆಡಳಿತ ಮಂಡಳಿಗೆ ಈ ದುರ್ಘಟನೆ ಕುರಿತು ತಿಳಿದಿರಲಿಲ್ಲ. ಸ್ಥಳೀಯರು ಮಾಹಿತಿ ನೀಡಿದ ಮೇಲೆ ಎಚ್ಚೆತ್ತ ಆಡಳಿತ ಮಂಡಳಿ, ಮರುದಿನ ರಾತ್ರಿ 2.30ಕ್ಕೆ ತೂತುಬಿದ್ದ ಕೊಳವೆಯನ್ನು ಸರಿಪಡಿಸಿತು. ಈ ನಡುವೆ ಬಿಪಿಸಿಎಲ್ ಆವರಣದಲ್ಲಿ ಲೀಟರುಗಟ್ಟಲೆ ಡೀಸೆಲ್ ತುಂಬಿಕೊಂಡಿತ್ತು. ಕೆಲ ಸಮಯದಲ್ಲೇ ಅಕ್ಕಪಕ್ಕದ ಹೊಲ ಗದ್ದೆಗಳಿಗೂ ವ್ಯಾಪಿಸಿತು. ಡೀಸೆಲ್ ಸೋರಿಕೆಯ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಸ್ಥಳೀಯರು ಉಚಿತ ಡೀಸೆಲ್ ಸಂಗ್ರಹಿಸಲು ಮುಂದಾದರು. ಒಂದು ರೀತಿಯಲ್ಲಿ ಹೇಳುವುದಾದರೆ ಈ ಸೋರಿಕೆ ಅಲ್ಲಿನ ಜನರಿಗೆ ಡೀಸೆಲ್ ಸುಗ್ಗಿಯಾಗಿತ್ತು. ಡಬ್ಬಗಳು, ಬಕೆಟ್‌ಗಳು, ಬಾಟಲ್‌ಗಳಲ್ಲಿ ಡೀಸೆಲ್ ಹೊತ್ತೊಯ್ದರು. ಬಿಪಿಸಿಎಲ್ ಸಿಬ್ಬಂದಿ ವರ್ಗವೂ ಡೀಸೆಲ್ ಸಂಗ್ರಹದಲ್ಲಿ ಸ್ಥಳೀಯರನ್ನು ಕೂಡಿಕೊಂಡಿತು! ಡೀಸೆಲ್ ಸೋರಿಕೆ ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯರ ಜೊತೆ ಬಿಪಿಸಿಎಲ್ ಸಿಬ್ಬಂದಿಗಳೂ ಡೀಸೆಲ್ ಸಂಗ್ರಹಿಸುವುದನ್ನು ಕಂಡು ಮೌನಪ್ರೇಕ್ಷಕರಾದರು. ಬೆಂಕಿಯ ಪುಟ್ಟ ಕಿಡಿ ಬಿದ್ದರೂ, ಪೂರ್ತಿ ಬೆಂಕಿ ಆವರಿಸಿಕೊಳ್ಳುವಂಥ ಅಪಾಯಕಾರಿ ಸನ್ನಿವೇಶದಲ್ಲಿ ಜನರು ದುರ್ಘಟನೆಯ ಲಾಭ ಪಡೆಯುವತ್ತಲೇ ಗಮನ ಹರಿಸಿದ್ದರು. ಸಮಸ್ಯೆಯನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಬಿಪಿಸಿಎಲ್ ವಿಳಂಬ ಮಾಡಿದ್ದರಿಂದ, ಜನರು ತಮ್ಮ ಅಮೂಲ್ಯ ಆಸ್ತಿಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇತ್ತು. ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಕಂಡು ಸ್ಥಳೀಯರು ಜೀವ ಭಯದಿಂದ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದರು. ಬೆಳಿಗ್ಗೆ 11ರ ತನಕ ಕಂಪನಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸೋರಿಕೆಯಾದ ಸ್ಥಳಕ್ಕೆ ಆಗಮಿಸಿರಲಿಲ್ಲ. ಎಂದು ಸ್ಥಳೀಯರು ಆರೋಪಿಸಿದರು. ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದರೂ ಎಚ್ಚೆತ್ತುಕೊಳ್ಳದ ಬಿಪಿಸಿಎಲ್ ಆಡಳಿತ ಮಂಡಳಿಯ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಈ ಬಾರಿ ಯಾವುದೇ ಅಪಾಯ ಸಂಭವಿಸದೆ ಪರಿಸ್ಥಿತಿ ಹತೋಟಿಗೆ ಬಂದಿದೆ. ಆದರೆ ಪ್ರತೀ ಬಾರಿ ಹೀಗೇ ಆಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೆ? ಅಪಾಯಕಾರೀ ಸ್ಥಳದಲ್ಲಿ ನೆಲೆಸಿರುವವರ ಬಗ್ಗೆ ಸಂಸ್ಥೆ ತಿಲ ಮಾತ್ರವೂ ಕಾಳಜಿ ತೋರಿಲ್ಲ ಎಂದಿದ್ದಾರೆ ಜನರು. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸದೆ ಇರಲು ಕಾರಣವೇನು ಮತ್ತು ಸೋರಿಕೆಯ ಪ್ರಮಾಣವನ್ನು ಕಡಿಮೆಗೊಳಿಸಲು ವಿಫಲವಾದುದೇಕೆ ಎಂದು ಬಿಪಿಸಿಎಲ್ ವಿವರಿಸಬೇಕಿದೆ. ಮುಖ್ಯವಾಗಿ, ಈ ಸ್ಥಳದಿಂದ ಬಿಪಿಸಿಎಲ್ ಮಾಲೀಕತ್ವದ 'ಕೊಚ್ಚಿ ರಿಫೈನರೀಸ್ ಲಿಮಿಟೆಡ್'ಗೆ ಒಂದು ಕಿಲೋ ಮೀಟರ್ ಅಂತರವೂ ಇಲ್ಲ ಎಂಬ ಸತ್ಯದ ಅರಿವಿದ್ದೂ ಇಂಥ ಅಲಕ್ಷ್ಯ ಸರಿಯೆ?

ಟಿಎಸ್‌ಐ

ಟಿ. ಸತೀಶನ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .