|
ಹಲೋ ಶ್ರೀಸಾಮಾನ್ಯ,...
ವ್ಯಂಗ್ಯವೆಂಬುದು ಕೆಲವೊಮ್ಮೆ ಎಷ್ಟು ಹಿತವಾಗಿರುತ್ತದೆ ನೋಡಿ! ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪದವೀಧರ ವಕೀಲರೊಬ್ಬರು ಮಂಡಿಸಿದ್ದ 1997ರ ಆ ಬಜೆಟ್ 'ಕನಸಿನ ಬಜೆಟ್' ಎಂದೇ ಜನಪ್ರಿಯಗೊಂಡಿತ್ತು. ಏಕೆಂದರೆ ಅಂಥ ಬಜೆಟ್ ರಚಿಸುವುದು ಕನಸಿನ ಮಾತೇ ಆಗಿತ್ತು! ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಅಧಿಕಾರಕ್ಕೇರಿದ್ದ ತೃತೀಯರಂಗದ ಸರ್ಕಾರದಲ್ಲಿ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದರು.
ಆದರೆ, ಅವರು ಬಜೆಟ್ ಮಂಡಿಸುವ ವೇಳೆಗಾಗಲೇ ಸರ್ಕಾರವೇ ಉರುಳುವ ಸ್ಥಿತಿಯಲ್ಲಿತ್ತು. ಹಿರಿಯ ಮುತ್ಸದ್ದಿ ಮಾರ್ಕ್ಸ್‌ವಾದಿ ನಾಯಕ ಇಂದ್ರಜಿತ್ ಗುಪ್ತ ಆಗಿನ ಗೃಹ ಸಚಿವ. ಹರ್ಷೋದ್ಗಾರಗಳಿಂದ ಎಲ್ಲರೂ ಆ ಬಜೆಟ್‌ನ್ನು ಸ್ವಾಗತಿಸುತ್ತಿದ್ದರೆ ತೆರೆಮರೆಯಿಂದ ಹಠಾತ್ತನೆ ಹೊರಬಿದ್ದ ಹವಾಲಾ ಹಗರಣ ದಲಾಲ್ ಸ್ಟ್ರೀಟ್‌ನ್ನು ಕಂಗೆಡಿಸಿತು. ಯಾವುದೇ ಕ್ಷಣದಲ್ಲಾದರೂ ಕಾಂಗ್ರೆಸ್ ಕೈಕೊಡಲಿದೆ ಎಂಬುದು ಖಚಿತವಾಯಿತು. ಚುನಾವಣೆ ಎದುರಿಸುವ ಭೀತಿಯಲ್ಲಿ ಮತದಾರರನ್ನು ಓಲೈಸುವ ಪ್ರಯತ್ನವಾಗಿ ಸರ್ಕಾರ 5ನೇ ವೇತನ ಆಯೋಗದ ನೆಪದಲ್ಲಿ ಸರ್ಕಾರಿ ನೌಕರರ ವೇತನವನ್ನು ಹೆಚ್ಚಿಸಿತು.
ನಿರೀಕ್ಷೆಯಂತೆಯೇ ಸರ್ಕಾರ ಉರುಳಿ, ಮುಂದಿನ ಚುನಾವಣೆಯಲ್ಲಿ ತೃತೀಯರಂಗ ನಾಮಾವಶೇಷವಾಯಿತು. 'ಹಾರ್ವರ್ಡ್ ಪದವೀಧರ' ನಿಯತಕಾಲಿಕಗಳ ಪೂರ್ಣಾವಧಿ ಅಂಕಣಕಾರರಾದರು. ಉಳಿದ ಸಮಯ ಪ್ರಭಾವಿ ಕಂಪನಿಗಳ ಪರ ವಕಾಲತ್ತು ವಹಿಸಿದರು. ನಂತರದ ಸುಮಾರು ಏಳು ವರ್ಷ ರಾಜಕಾರಣದ ಮೊಗಸಾಲೆಯತ್ತ ಚಿದಂಬರಂ ಸುಳಿಯಲೇ ಇಲ್ಲ.
ಆ 'ಕನಸಿನ ಬಜೆಟ್' ಮಂಡಿಸಿ ಹನ್ನೊಂದು ವರ್ಷಗಳೇ ಉರುಳಿಹೋಗಿವೆ. ಪಿ. ಚಿದಂಬರಂ ಈಗ ಮತ್ತೊಮ್ಮೆ ಹಣಕಾಸು ಸಚಿವರಾಗಿದ್ದಾರೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ. ಮಾರ್ಕ್ಸ್‌ವಾದಿ 'ಬಾಹ್ಯ ಬೆಂಬಲ'ವೆಂಬ ಕೃಪಾಕಟಾಕ್ಷದಲ್ಲಿ ಉರುಳಿಬೀಳುವ ಆತಂಕದಲ್ಲಿ ದಿನ ಕಳೆಯುವ ಸರದಿ ಈಗ ಯುಪಿಎಯದ್ದು. 'ಶೋಮ್ಯಾನ್' ಶಿವರಾಜ್ ಪಾಟೀಲ್ ಕೇಂದ್ರ ಗೃಹ ಸಚಿವರ ಸ್ಥಾನ ಅಲಂಕರಿಸಿದ್ದಾರೆ. ಬಜೆಟ್ ಮಂಡಿಸುವುದಕ್ಕಿಂತ ಮುಂಚೆಯೇ ದಲಾಲ್ ಸ್ಟ್ರೀಟ್‌ನ ಧೈರ್ಯ ಉಡುಗಿದೆ. ತೆರೆಮರೆಯಿಂದ ಇನ್ಯಾವುದಾದರೂ ಹಗರಣ ಧುತ್ತೆಂದು ಹೊರಬಂದೀತೇ ಎಂಬ ಆತಂಕದಲ್ಲಿ ಹೂಡಿಕೆದಾರರು ಹಾಗೂ ವ್ಯವಹಾರಸ್ಥರು ಏದುಸಿರುಬಿಡುತ್ತಿದ್ದಾರೆ. ನಡುನೀರಲ್ಲಿ ಕೈಬಿಡುವ ಎಲ್ಲಾ ಲಕ್ಷಣಗಳನ್ನು ಎಡಪಕ್ಷಗಳು ತೋರುತ್ತಿವೆ. ಇದೇನಿದ್ದರೂ ಸರ್ಕಾರ ಶತಾಯಗತಾಯ ಪ್ರಯತ್ನ ಮಾಡಿ ಮತದಾರರನ್ನು ಓಲೈಸುವ ಸಮಯ. ಸರ್ಕಾರಿ ನೌಕರರ ವೇತನವನ್ನು ಹೆಚ್ಚಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದ್ದು, ಅದಕ್ಕೆ ಈ ಬಾರಿ ಆರನೇ ವೇತನ ಆಯೋಗದ ನೆಪವಿದೆ!
ಹಾಗಾದರೆ, ಮುಂಬರುವ ಸಾರ್ವತ್ರಿಕ ಚುನಾವಣೆಯ ನಂತರ ಚಿದಂಬರಂ ಮತ್ತೆ ನಿಯತಕಾಲಿಕೆಗಳ ಪೂರ್ಣಾವಧಿ ಅಂಕಣಕಾರ ಹಾಗೂ ಪ್ರಭಾವಿ ಕಂಪನಿಗಳ ವಕೀಲರಾಗಲಿದ್ದಾರೆಯೇ?
ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಅಧಿನಾಯಕಿ ಸೋನಿಯ ಗಾಂಧಿ ಬಲದೊಂದಿಗೆ ಕುಸಿದುಬೀಳುವ ಭೀತಿಯಲ್ಲೇ ಹಣಕಾಸು ಸಚಿವ ಪಿ. ಚಿದಂಬರಂ 2008 ಫೆಬ್ರುವರಿ 29ರಂದು ಯುಪಿಎ ಆಡಳಿತದ 'ಕೊನೆಯ' ಬಜೆಟ್ ಮಂಡಿಸಲಿದ್ದಾರೆ. ಐದು ವರ್ಷಗಳ 'ಶ್ರೀಸಾಮಾನ್ಯನ ಪರ ಧೋರಣೆಗಳು', ಮುಖ್ಯವಾಗಿ 'ಶ್ರೀಸಾಮಾನ್ಯನಿಗಾಗಿಯೇ ತಂದ ಯೋಜನೆಗಳು' ಮತ್ತು ಅವರ ಬಗೆಗಿನ ಸರ್ಕಾರದ ಕಾಳಜಿ ಯಾವುವೂ ಮತದಾರರನ್ನು ಮರುಳುಮಾಡುವ ಯಾವ ಸೂಚನೆಯೂ ತೋರುತ್ತಿಲ್ಲ! ಉತ್ತರಾಧಿಕಾರಿ ರಾಹುಲ್ ಗಾಂಧಿಯ ಬೆಣ್ಣೆ ಮಾತುಗಳ ಅಭಿಯಾನದ ಹೊರತಾಗಿಯೂ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಮಾಯಾವತಿ 'ಆನೆ' ಬಲದ ಮುಂದೆ ಹೀನಾಯವಾಗಿ ಸೋತು ಸುಣ್ಣವಾಯಿತು. ತಾವು ಮಾತ್ರವಲ್ಲ, ಬಿಜೆಪಿಯೂ ಅಷ್ಟೇ ಅವಮಾನಕಾರಿಯಾಗಿ ಸೋತಿದೆ ಎಂಬ ಸುದ್ದಿ ಕಾಂಗ್ರೆಸ್‌ಗೆ ಕೊಂಚ ಸಮಾಧಾನ ತಂದಿರಬಹುದು. ಆದರೆ, ಉತ್ತರಖಂಡ್ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್‌ನ್ನು ಮಣಿಸಿತು. ಹಿಮಾಚಲದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. ಮತ್ತೆ ಗುಜರಾತ್; ಮೋದಿಯ ಭರ್ಜರಿ ಮೋಡಿಯಲ್ಲಿ ಕಾಂಗ್ರೆಸ್ ಅದೆಲ್ಲಿ ಮಾಯವಾಯಿತೋ...! ಒಟ್ಟಾರೆ ಸತತ ಸೋಲುಗಳ ಸೂತಕದ ಮನೆಯಂತಾಗಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಒಂದೇ ಪ್ರಶ್ನೆ ಅನುರಣಿಸುತ್ತಿದೆ: ಮುಂದೇನು?
ರಾಜಕೀಯ ಪಗಡೆಯಾಟದಲ್ಲಿ ಸೋನಿಯ ಗಾಂಧಿ ಹಾಗೂ ಅವರ ಮತಿವಿಭ್ರಾಂತ ಪಡೆಯ ಕೊನೆಯ ದಾಳ ಫೆಬ್ರುವರಿ 29ರ ಬಜೆಟ್. ಟಿಎಸ್‌ಐ ಜೊತೆ ಮಾತನಾಡಿದ ಅರ್ಥಶಾಸ್ತ್ರಜ್ಞರು, ಔದ್ಯಮಿಕ ಪ್ರತಿನಿಧಿಗಳು, ವಿಶ್ಲೇಷಕರು ಹಾಗೂ ರಾಜಕಾರಣಿಗಳು ಒಂದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ: ಈ ಬಜೆಟ್ ಶ್ರೀಸಾಮಾನ್ಯನಿಗೆ ಉಡುಗೊರೆಯ ಮಹಾಪೂರವನ್ನೇ ಹರಿಸಲಿದೆ- ಕಳೆದ ಐದು ವರ್ಷಗಳಿಂದ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಈ ಬಾರಿಯ ಮಾಂತ್ರಿಕ ಬಜೆಟ್ ಮೂಲಕ ಅದನ್ನು ಮುಂದುವರಿಸಲಿದೆ ಎಂಬುದು ಎಲ್ಲರಿಗೂ ಗೊತ್ತಿರುವುದೇ! ಕಳೆದ ಕೆಲವು ತಿಂಗಳಿಂದ ಇದರ ಎಲ್ಲಾ ಮುನ್ಸೂಚನೆಗಳೂ ಕಂಡುಬರುತ್ತಿವೆ. ಅರಣ್ಯ ಬುಡಕಟ್ಟು ಮತ್ತು ಗಿರಿಜನರಿಗೆ ರಾಜ್ಯ ಸರ್ಕಾರಗಳು ಉಚಿತವಾಗಿ ಭೂಮಿ ನೀಡುವ ಮಸೂದೆ ಈಗಾಗಲೇ ದಿಢೀರನೆ ಕಾಯ್ದೆಯಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಯೋಜನೆಗೆ ಪ್ರತಿವರ್ಷದ 50,000 ಕೋಟಿ ರೂಪಾಯಿ ವಿನಿಯೋಗಿಸಲು ಸಿದ್ಧವಾಗಿದೆ! ಸಿಎಜಿ
(ಕಂಟ್ರೋಲರ್ ಆಂಡ್ ಆಡಿಟರ್ ಜನರಲ್) ವರದಿಯ ಪ್ರಕಾರ 2005ರಿಂದೀಚೆಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಬಂದ 200 ಜಿಲ್ಲೆಗಳಲ್ಲಿ ಸರ್ಕಾರದ ಉದ್ದೇಶ ಸಾಫಲ್ಯ ಕೇವಲ ಶೇ.5ರಷ್ಟು ಮಾತ್ರ. ಆದರೂ ಯೋಜನೆ ಹೆಸರಲ್ಲಿ ಪ್ರತಿವರ್ಷ 50,000 ಕೋಟಿ ರೂಪಾಯಿ ಸಾರ್ವಜನಿಕ ತೆರಿಗೆ ಹಣವನ್ನು ಜೂಜಿಗೊಡ್ಡಲು ನಿಂತಿರುವ ಸರ್ಕಾರದ ನಿರ್ಧಾರ, ಅಧಿಕಾರದ ಲಾಲಸೆಯ ಅತ್ಯುತ್ತಮ ನಿದರ್ಶನವಲ್ಲದೆ ಮತ್ತೇನು? ಅಷ್ಟೇ ಅಲ್ಲ. ಸಾರ್ವಜನಿಕ ವಲಯದ ತೈಲ ಸಂಸ್ಥೆಗಳು ನಷ್ಟದಲ್ಲಿ ಮುಳುಗಿ ಸಾಲಭಾದೆಯಿಂದ ಕಂಗೆಟ್ಟಾಗಲೂ ತಿಂಗಳಾನುಗಟ್ಟಲೆ ಯಾವುದೇ ಪೂರಕ ಕ್ರಮ ಕೈಗೊಳ್ಳದೆ ಗೊಂದಲದಲ್ಲೇ ಮುಳುಗಿದ್ದ ಸರ್ಕಾರ, ಅಂತೂ ಕೊನೆಗೆ ಪೆಟ್ರೋಲ್ ದರವನ್ನು ಲೀಟರ್‌ಗೆ ಎರಡು ರೂಪಾಯಿ ಏರಿಸಿ ಕೈತೊಳೆದುಕೊಂಡಿದೆ. ಭಾರೀ ನಷ್ಟ ಅನುಭವಿಸುತ್ತಿದ್ದರೂ ಜಾಣ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಸಿಲ್ಲ. ನಮ್ಮ- ನಿಮ್ಮಂಥ ಭಾರತೀಯರು ಪ್ರತಿ ಸಿಲಿಂಡರ್ ಮೇಲೆ 200 ರೂಪಾಯಿ ಧನಸಹಾಯ ಪಡೆಯುತ್ತಿದ್ದೇವೆ ಎಂಬುದು ಗೊತ್ತಿದ್ದರೂ ಸರ್ಕಾರ ಅದರ ಬೆಲೆ ಹೆಚ್ಚಳಕ್ಕೆ ಯೋಚನೆ ಮಾಡಲಿಲ್ಲ. ಅಕ್ಕಿಯ ಕನಿಷ್ಠ ಬೆಂಬಲ ಬೆಲೆಯನ್ನು ಶೇ.70ರಷ್ಟು ಏರಿಸಬೇಕೆಂದು 'ಕೃಷಿ ವೆಚ್ಚ ಮತ್ತು ಬೆಲೆ ಆಯೋಗ' ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕಿಲೋ ಒಂದಕ್ಕೆ 15 ರೂ. ಇರುವ ಅಕ್ಕಿಯ ಬೆಲೆ ಇದ್ದಕ್ಕಿದ್ದಂತೆ 23 ರೂಪಾಯಿಗಳಿಗೆ ಏರಿದರೆ ಒಪ್ಪೊತ್ತಿನ ಊಟಕ್ಕೂ ಪರದಾಡುವ ಬಡವರ ಸ್ಥಿತಿ ಏನಾಗಬೇಕು? ಈ ಬಗ್ಗೆ ಯಾರೂ ಗಮನಹರಿಸಿದಂತಿಲ್ಲ.
ಆಹಾರ ಧಾನ್ಯ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಸೋತಿರುವುದು ಮಾನ್ಯ ಚಿದಂಬರಂ ಅವರಿಗೂ ಗೊತ್ತು. ತಿಂಗಳಿಂದ ತಿಂಗಳಿಗೆ ಅಡುಗೆ ಎಣ್ಣೆ, ಅಕ್ಕಿ- ಹಿಟ್ಟು, ಹಾಲು, ತರಕಾರಿ ಎಲ್ಲದ್ದಕ್ಕೂ ದುಬಾರಿ ಬೆಲೆ ತೆರುತ್ತಿರುವ ಜನರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಒಂದಾದ ಮೇಲೆ ಒಂದರಂತೆ ಸಂಸತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಿದೆ. ಹಾಗಿದ್ದರೆ ಚಿದಂಬರಂ ಮುಂದಿನ ಹೆಜ್ಜೆ ಯಾವ ಕಡೆಗೆ? ಮೊದಲೇ ಹೇಳಿದಂತೆ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮುಖ ಉಳಿಸಿಕೊಳ್ಳಲು ಕಾಂಗ್ರೆಸ್ ಪಾಲಿಗೆ ಉಳಿದಿರುವ ಒಂದೇ ಒಂದು ದಾರಿಯೆಂದರೆ ಕೊನೆಯ ದಾಳವನ್ನು ಉರುಳಿಸುವುದು ಹಾಗೂ ಶ್ರೀಸಾಮಾನ್ಯನ ಮೇಲೆ ಹಣ ಸುರಿಯುವುದು. ಅಂದಹಾಗೆ ಸರ್ಕಾರದ ಬಡವರ ವಿರೋಧಿ ಹಾಗೂ ರೈತಪರ ಕೊಡುಗೆಗಳ ವಿಪರ್ಯಾಸಗಳಿಗೆ ಸಿದ್ಧರಾಗಿ. ನೀವು ಸರ್ಕಾರಿ ನೌಕರರಾಗಿದ್ದಲ್ಲಿ ಸಂಬಳ ಏರಿಕೆಯ ಮೂಲಕ ನಿಮ್ಮ ಹೊಸ್ತಿಲು ದಾಟಲಿರುವ ಧನ ಲಕ್ಷ್ಮಿಯ ಸ್ವಾಗತಕ್ಕೆ ತಯಾರಾಗಿ. ಅದಕ್ಕಾಗಿ ಮತ್ತೆ 50,000 ಕೋಟಿ ರೂಪಾಯಿ ಭಾರಿ ಹಣದ ಹೊಳೆ ಹರಿದರೇನಂತೆ, ಅದಕ್ಕಾಗಿ ರಾಜ್ಯ ಸರ್ಕಾರಗಳು ಮತ್ತೊಮ್ಮೆ ದಿವಾಳಿಯಾದರೇನಂತೆ!!
ಈ ಕೊನೆಯ ದಾಳ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಯುಪಿಎಯ ಭವಿಷ್ಯವನ್ನು ಅದಾಗಲೇ ನಿರ್ಧರಿಸಿದೆಯೇ? ಎಂಬುದು ಮಾತ್ರ ನಿಜವಾಗಿಯೂ 50,000 ಕೋಟಿ ರೂಪಾಯಿ ಪ್ರಶ್ನೆಯೇ!
ಟಿಎಸ್‌ಐ
|