ಕ್ರಿ.ಶ. 1095ರಲ್ಲಿ ಬೈಜಾಂಟೈನ್ ಚಕ್ರಾಧಿಪತಿ ಒಂದನೇ ಅಲೆಕ್ಸಿಯಸ್ ಕೊಮೆನೋಸ್ ಅಧಿಪತ್ಯವಿದ್ದ 'ಏಷ್ಯಾ ಮೈನರ್'ನ ಬಹುತೇಕ ಪ್ರದೇಶವನ್ನು ಸೆಲ್ಜಕ್ ಟರ್ಕರು ಆಕ್ರಮಿಸಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಕೊಮೆನೋಸ್ ತನ್ನ ಜನರಿಗೆ ನೆರವು ನೀಡುವಂತೆ ಪೋಪ್ ಎರಡನೇ ಅರ್ಬನ್ ಅವರಿಗೆ ಕೋರಿದ್ದ. ನಂತರ ಪೋಪ್ ಅರ್ಬನ್ ಅವರು 'ಕೌನ್ಸಿಲ್ ಆಫ್ ಕ್ಲರ್ಮಂಟ್'ನಲ್ಲಿ ಮುಸ್ಲಿಮರ ದಬ್ಬಾಳಿಕೆಯಿಂದ ಬಿಡುಗಡೆ ಹೊಂದಲು ಕ್ರೈಸ್ತರು, ಗ್ರೀಕರ ನೆರವಿಗೆ ಧಾವಿಸಬೇಕು ಎಂದು ವಿನಂತಿಸಿದ್ದರು. ನಂತರ ಅವರು ಮುಸ್ಲಿಮರ ವಿರುದ್ಧ ಹೋರಾಡುವುದರ ಅಗತ್ಯವನ್ನು ಸಾರಿ ಧರ್ಮರಕ್ಷಕ ಪಡೆಗೆ ಬಹಿರಂಗ ಪತ್ರ ಬರೆದರು. ಹಾಗೇ ಯುದ್ಧದ ಬಗ್ಗೆ ಕೂಡ ಅವರು ಧರ್ಮರಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಸಲಹೆಗಳನ್ನೂ ನೀಡಿದರು.
ರೋಮ್ ಫೆಬ್ರುವರಿ 1095
ಪ್ರೀತಿಯ ಸಹೋದರರೇ,
ಬಿಷಪ್ ಹಾಗೂ ಚರ್ಚ್‌ನ ಇತರ ಉನ್ನತ ಅಧಿಕಾರಿಗಳ ಅನುಮತಿ ಮೇರೆಗೆ ನಾನು ದೇವರ ಸೇವಕರಾದ ನಿಮಗೆಲ್ಲರಿಗೆ (ಅರ್ಬನ್) ದೈವಿಕ ಮೆಚ್ಚುಗೆಯ ರಾಯಭಾರಿಯಾಗಿ ನಿಮ್ಮ ಜೊತೆಗಿದ್ದೇನೆ. ದೇವರ ಮೇಲೆ ಅಪಾರ ನಂಬಿಕೆ ಹಾಗೂ ಅಷ್ಟೆ ಶ್ರದ್ಧೆಯಿಂದ ಆತನ ಸೇವೆಯಲ್ಲಿ ನೀವು ನಿತ್ಯ ನಿರತಾಗಿರುತ್ತೀರಿ ಎಂದು ನಾನು ನಂಬಿದ್ದೇನೆ. ತನ್ನವರ ರಕ್ಷಣೆಗಾಗಿ ಪರಮಾತ್ಮ ನಿಮ್ಮನ್ನು ಕಾವಲುಗಾರರನ್ನಾಗಿ ನೇಮಿಸಿದ್ದಾನೆ. ನಿಮ್ಮ ಆ ಕರ್ತವ್ಯದಲ್ಲಿ ನಂಬಿಕೆಯನ್ನು ಉಳಿಸಿಕೊಂಡಲ್ಲಿ ಆತನಿಗೆ ಸಂತೋಷವಾಗಲಿದೆ. ನಿಮ್ಮನ್ನು ಕ್ರೈಸ್ತರ ರಕ್ಷಕರು ಎನ್ನುತ್ತಾರೆ. ಹಾಗಿರುವಾಗ ನೀವು ಲಾಭಕ್ಕಾಗಿ ಮಾತ್ರ ಕೆಲಸ ಮಾಡಲಾಗದು. ಹಾಗಾಗಿ ನಿಜವಾದ ರಕ್ಷಕರಾಗಲು ಪ್ರಯತ್ನಿಸಿ, ಸದಾ ಕೈಯಲ್ಲಿ ಕತ್ತಿಯ ಕೋಲು ಇರಲಿ. ಅರೆಕ್ಷಣ ಕೂಡ ಮೈಮರೆಯಬೇಡಿ. ನಿಮನ್ನು ನಂಬಿಕೊಂಡಿರುವ ಸಮುದಾಯವನ್ನು ಸರ್ವರೀತಿಯಲ್ಲೂ ರಕ್ಷಿಸುವುದು ನಿಮ್ಮ ಧ್ಯೇಯವಾಗಬೇಕು. ಒಂದುವೇಳೆ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ವರ್ತನೆಯಿಂದಾಗಿ ಒಬ್ಬನೇ ಒಬ್ಬ ಅನುಯಾಯಿಯನ್ನು ಶತ್ರುಪಡೆ ಕಿತ್ತುಕೊಂಡರೆ ದೇವರ ಬಳಿ ನಿಮಗಾಗಿ ಕೊಡುಗೆ ದಕ್ಕವುದಿಲ್ಲ. ಆ ನಂತರ ಆದ ತಪ್ಪಿಗೆ ಎಷ್ಟೇ ಪಶ್ಚಾತ್ತಾಪಪಟ್ಟರೂ ಸಾವಿನ ಅರಮನೆಯಾದ ನರಕದಲ್ಲಿ ಜೀವ ಸವೆಸುವುದು ತಪ್ಪುವುದಿಲ್ಲ.
ಓ ದೇವರ ಅನುಯಾಯಿಗಳೇ, ಚರ್ಚ್‌ನ ಹಕ್ಕುಗಳನ್ನು ರಕ್ಷಿಸಲು ಹಾಗೂ ಶಾಂತಿ ಕಾಪಾಡಲು ನೀವು ಕಟಿಬದ್ಧರಾಗಿದ್ದೀರಿ ಎಂಬುದು ನಮಗೆ ತಿಳಿದಿದೆ. ಆದರೂ ನಿಮ್ಮಿಂದ ಒಂದು ಬಹುಮುಖ್ಯವಾದ ಕಾರ್ಯ ನೆರವೇರಬೇಕಿದೆ. ಇನ್ನೊಂದು ಮಹತ್ತರ ಕಾರ್ಯಕ್ಕೆ ನೀವೆಲ್ಲರೂ ನಿಮ್ಮ ನೈತಿಕ ಬಲವನ್ನು ಇನ್ನಷ್ಟು ಸದೃಢಗೊಳಿಸಿಕೊಂಡು ಮುನ್ನುಗ್ಗಿ. ಟರ್ಕರು ಹಾಗೂ ಅರಬರು ಗ್ರೀಕ್ ಚಕ್ರಾಧಿಪತ್ಯದ ರೊಮೇನಿಯಾವನ್ನು ಆಕ್ರಮಿಸಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಮೆಡಿಟರೇನಿಯನ್‌ನಿಂದ ಹ್ಯಾಲ್‌ಸ್ಪಾಟ್‌ವರೆಗಿನ 'ಸಂತ ಜಾರ್ಜ್ ಅವರ ಕೈ' ಎಂದು ನಂಬಿರುವ ಪ್ರದೇಶವನ್ನು ಸಂಪೂರ್ಣ ಆಕ್ರಮಿಸಿದ್ದಾರೆ. ಹಾಗಾಗಿ ನಿಮ್ಮೆಲ್ಲರಲ್ಲಿ ನಾನು ಮನವಿಯೊಂದನ್ನು ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಜನರ ವಿರುದ್ಧದ ಆಕ್ರಮಣದ ಕುರಿತು ಇಡೀ ಜಗತ್ತಿನಲ್ಲಿ ಅರಿವು ಮೂಡಿಸಬೇಕು. ಕಾಲಾಳುಗಳಿಂದ, ಸೇನಾಧಿಕಾರಿಗಳವರೆಗೆ, ಯಾವುದೇ ಪದವಿ, ಸ್ಥಾನ-ಮಾನವಿರಲಿ ಎಲ್ಲರೂ ಬಡವ-ಶ್ರೀಮಂತ ಎಂಬಂತಹ ಎಲ್ಲಾ ತಾರತಮ್ಯಗಳನ್ನೂ ಮೀರಿ ಕ್ರೈಸ್ತ ಸಮುದಾಯದ ನೆರವಿಗೆ ಮುಂದಾಗಬೇಕು. ಹಾಗೇ ನಮ್ಮ ಸ್ನೇಹಿತರ ನಾಡಿನಿಂದ ಆ ದಾಳಿಕೋರರನ್ನು ಹೊಡೆದೋಡಿಸಲು ನಿಮ್ಮ ಸಹಾಯ ಅತ್ಯಗತ್ಯ. ಇಲ್ಲಿ ನೆರೆದಿರುವ ಮತ್ತು ಇಲ್ಲಿರದ ಪ್ರತಿಯೊಬ್ಬರಿಗೂ ನನ್ನ ಈ ಮಾತು ಅನ್ವಯಿಸುತ್ತವೆ.
ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಜೀವ ಬಿಡಲೇಬೇಕು. ಆದರೆ, ಅನಾಗರಿಕರ ವಿರುದ್ಧದ ಹೋರಾಟದಲ್ಲಿ ಜೀವತ್ಯಾಗ ಮಾಡಿದವರ ಪಾಪಗಳನ್ನು ಪರಮಾತ್ಮ ಮನ್ನಿಸುತ್ತಾನೆ. ಅಂತಹವರ ತಪ್ಪುಗಳಿಗೆ ದೇವರೇ ನೀಡಿದ ಶಕ್ತಿಯ ಮೂಲಕ ನಾನು ಕ್ಷಮೆ ದಯಪಾಲಿಸುತ್ತೇನೆ.
ಸೈತಾನನನ್ನು ಪೂಜಿಸುತ್ತಿರುವ ಹಾಗೂ ದಬ್ಬಾಳಿಕೆ ನಡೆಸುತ್ತಿರುವ ಜನರು ಸರ್ವಶಕ್ತನಾದ ದೇವರನ್ನು ಆರಾಧಿಸುತ್ತಿರುವ ಜನರ ವಿರುದ್ಧ ದಬ್ಬಾಳಿಕೆ ನಡೆಸುತ್ತಿರುವುದು ನಿಜಕ್ಕೂ ಅವಮಾನಕಾರಿ, ಅವರೇನಾದರೂ ಅದರಲ್ಲಿ ಜಯಶಾಲಿಗಳಾದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ.