ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ದೂರದೂರಿಂದ
 
 

ಈಸ್ಟ್ ತೈಮೂರ್: ಅಂತರ್ ಕಲಹ

ಪುಟ್ಟದೇಶಕ್ಕೆ ಸವಾಲಾದ ಕಠಿಣ ಹಾದಿ

ದೀರ್ಘಕಾಲೀನ ಭದ್ರತಾ ವ್ಯವಸ್ಥೆ ಹೊಣೆ ದುಃಸ್ವಪ್ನವಾಗಿ ಕಾಡಲಿದೆ

ಏಷ್ಯಾ ಖಂಡದ ಪುಟ್ಟ ದೇಶ ಈಸ್ಟ್ ತೈಮೂರ್‌ನ ಇಬ್ಬರು ಹಿರಿಯ ನಾಯಕರಾದ ಅಧ್ಯಕ್ಷ ಜೋಸ್ ರಾಮೋಸ್-ಹೋರ್ಟಾ ಮತ್ತು ಪ್ರಧಾನಿ ಕ್ಸನಾನ ಗುಸ್ಮಾವೋ ಮೇಲೆ ಕಳೆದ ವಾರ ಹತ್ಯೆ ಪ್ರಯತ್ನ ನಡೆದಿತ್ತು. ಆದರೆ ಆ ದಾಳಿ ವಿಫಲವಾಗಿದೆ. ಫೆಬ್ರುವರಿ 11, 2008ರಂದು ಒಂದೇ ದಿನ ಈ ಇಬ್ಬರು ನೇತಾರರ ಕೊಲೆಗೆ ಪಿತೂರಿ ನಡೆಸಲಾಗಿತ್ತು. ಸಂಶಯವೇ ಇಲ್ಲ, ಇದು ಉದಯೋನ್ಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮತ್ತು ಈಗಷ್ಟೇ ಸ್ವಾತಂತ್ರ್ಯದ ರುಚಿ ಕಾಣುತ್ತಿರುವ ದೇಶಗಳಿಗೆ ನಿಜಕ್ಕೂ ಅಪಾಯದ ಮುನ್ಸೂಚನೆ ಎನ್ನಬಹುದು. ಅಭಿವೃದ್ಧಿ ಹೊಂದಿದ ದೇಶಗಳ ಹಿರಿಯ ನಾಯಕರ ದೀರ್ಘಕಾಲೀನ ಭದ್ರತಾ ವ್ಯವಸ್ಥೆಯ ಹೊಣೆ ದುಸ್ವಪ್ನವಾಗಿ ಕಾಡಲಿದೆ ಎನ್ನುವ ಸೂಚನೆ ಎನ್ನಬಹುದು. ವಿಶ್ವ ಸಂಸ್ಥೆಯ ಶಾಂತಿ ಸ್ಥಾಪನಾ ಪಡೆಗಳ ನಿರ್ಲಕ್ಷ್ಯವನ್ನು ಇದು ಬಹಿರಂಗಗೊಳಿಸಿದೆ. ಈ ನಾಯಕರು ಗಂಡಾಂತರದಲ್ಲಿದ್ದಾರೆ ಎಂಬುದನ್ನು ಅರಿತೂ ಅದು ಅಲಕ್ಷ್ಯ ಧೊರಣೆ ತೋರಿದೆ. ಏಷ್ಯಾ ಖಂಡದ ಎರಡು ರೋಮನ್ ಕ್ಯಾಥೊಲಿಕ್ ದೇಶಗಳಲ್ಲಿ ಒಂದಾಗಿರುವ ಪುಟ್ಟ ದೇಶ ಈಸ್ಟ್ ತೈಮೂರ್. ಆದರೆ 16ನೆಯ ಶತಮಾನದಲ್ಲಿ ಪೋರ್ಚುಗೀಸರು ಈ ನಾಡನ್ನು ವಸಾಹತನ್ನಾಗಿಸಿದರು. ಅಲ್ಲಿಂದ ನಿರಂತರವಾಗಿ ವಸಾಹತಿನ ನಿಯಂತ್ರಣಕ್ಕೊಳಪಟ್ಟಿದ್ದ ಈಸ್ಟ್ ತೈಮೂರ್‌ಗೆ ಕೊನೆಗೂ ವರುಷಗಳ ಪೋರ್ಚುಗೀಸ್ ಆಡಳಿತದ ಬಳಿಕ 1975ರಲ್ಲಿ ದೇಶದಲ್ಲಿ ಸ್ವಾತಂತ್ರ್ಯದ ಘೋಷಣೆಯಾಗಿತ್ತು. ಆದರೆ ಈ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ಏಕೆಂದರೆ ಕೆಲ ದಿನಗಳಲ್ಲೇ ಇಂಡೋನೇಷ್ಯಾ ಸೇನೆ ದೇಶವನ್ನು ಆಕ್ರಮಿಸಿತ್ತು. ಅಂದಿನಿಂದ ಈ ದೇಶ ಸ್ವಾತಂತ್ರ್ಯಕ್ಕಾಗಿ ತುಡಿಯುತ್ತಿತ್ತು. ಅಂತಿಮವಾಗಿ 2002ನಲ್ಲಿ ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದ ಸಾರ್ವಭೌಮ ರಾಷ್ಟ್ರವಾಗಿ ಉದಯಿಸಿತು. ಶಾಂತಿಯ ಕನಸು ಕಂಡಿದ್ದ ನಾಯಕರಾದ ರಾಮೋಸ್- ಹೋರ್ಟಾ ಮತ್ತು ಬಿಷಪ್ ಕಾರ್ಲೋಸ್ ಬೇಲೋ ಅವರು ಸಮಾಧಾನದಿಂದ ನಿಟ್ಟುಸಿರು ಬಿಟ್ಟಿದ್ದರು. ಇಂಡೋನೇಷ್ಯಾದಿಂದ ಈಸ್ಟ್ ತೈಮೂರ್ ಸ್ವಾತಂತ್ರ್ಯಕ್ಕಾಗಿ ಇವರಿಬ್ಬರು ನಡೆಸಿದ ಅಹಿಂಸಾತ್ಮಕ ಹೋರಾಟಕ್ಕಾಗಿ 1996ರಲ್ಲಿ ನೋಬೆಲ್ ಶಾಂತಿ ಪುರಸ್ಕಾರವನ್ನೂ ಪಡೆದಿದ್ದಾರೆ. ಹಾಗೆಯೇ ಅವರ ಸಾಮರ್ಥ್ಯ ಮತ್ತು ಜನಪ್ರಿಯತೆಯಿಂದ ಆಕರ್ಷಿತರಾಗಿರುವ ಈಸ್ಟ್ ತೈಮೂರ್‌ನ ಪ್ರಜೆಗಳು ರಾಮೋಸ್ ಅವರಿಗೆ ಅತೀ ಅಮೂಲ್ಯವಾದ ಕೊಡುಗೆಯನ್ನೇ ನೀಡಿದ್ದಾರೆ. ಹೌದು, ಸತತ ಎರಡನೇ ಅವಧಿಗೆ ಅವರು ರಾಷ್ಟ್ರದ ಅಧ್ಯಕ್ಷ ಸ್ಥಾನವನ್ನು ಏರಿದ್ದಾರೆ. ಆದರೆ ಈ ಬೆಳವಣಿಗೆಗಳಿಂದ ಅನೇಕ ಕ್ರಾಂತಿಕಾರಿ ಸಮೂಹಗಳು ಉರಿದು ಬಿದ್ದಿವೆ. ಹತ್ಯಾ ಪ್ರಯತ್ನದಲ್ಲಿ ಅಧ್ಯಕ್ಷರು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದರೂ, ಗಂಭೀರ ಗಾಯಗಳಾಗಿವೆ. ಅವರು ಈಗ ಉತ್ತರ ಆಸ್ಟ್ರೇಲಿಯಾದ ಡಾರ್ವಿನ್‌ನಲ್ಲಿ ವೈದ್ಯಕೀಯ ಶುಶ್ರೂಷೆಯಲ್ಲಿದ್ದಾರೆ. ಕ್ಸನಾನ ಅವರ ಮೇಲೂ ಹತ್ಯಾ ಪ್ರಯತ್ನ ನಡೆದಿದ್ದು ಅವರು ಪಾರಾಗಿದ್ದಾರೆ. ಈಸ್ಟ್ ತಮೂರ್‌ನ ಪರಿಸ್ಥಿತಿಯನ್ನು ತಹಬದಿಗೆ ತರಲು ಆಸ್ಟ್ರೇಲಿಯಾ ತನ್ನ ಪಡೆಯನ್ನು ಕಳುಹಿಸಿದೆಯಾದರೂ, ಪ್ರಧಾನಿ ಗುಸ್ಮಾವೋ ಅವರ ಬೇಡಿಕೆಯ ನಂತರ ಇನ್ನೂ ಹೆಚ್ಚಿನ ಸೇನಾ ನೆರವನ್ನು ಕಲ್ಪಿಸುವ ಆಶ್ವಾಸನೆ ನೀಡಿದೆ. ಈ ದಾಳಿಯ ಉದ್ದೇಶ ಮತ್ತು ಹಿಂದಿರುವ ವ್ಯಕ್ತಿಗಳು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಆಸ್ಟ್ರೇಲಿಯಾ ಸೇನೆ ಕ್ರಾಂತಿಕಾರಿ ನಾಯಕ ಅಲ್ಫ್ರೆಡೋ ರೈನಡೋ ಅವರ ಮೇಲೆ ಆರೋಪ ಹೊರಿಸಿದೆ. ಆದರೆ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿರುವ ಸತ್ಯವೆಂದರೆ, ಉದಯೋನ್ಮುಖ ರಾಷ್ಟ್ರಗಳು ಸ್ಥಿರತೆ ಮತ್ತು ಶಾಂತಿ ಕಾಪಾಡುವಲ್ಲಿ ಸೋಲುತ್ತಿವೆ. ದಿನೇ ದಿನೇ ಬಿಕ್ಕಟ್ಟು ಉಲ್ಬಣಿಸುತ್ತಿದೆ. ಕೊಲೆ ಯತ್ನದ ಬಳಿಕ ದೇಶದಲ್ಲಿ ಹಿಂಸೆ ಮತ್ತಷ್ಟು ತೀವ್ರವಾಗಿದೆ. ಇದರಿಂದ ನಿರಂಕುಶ ಪ್ರಭುತ್ವ ಉದಯೋನ್ಮುಖ ರಾಷ್ಟ್ರಗಳಿಗೆ ಅಪಾಯ ತಂದೊಡ್ಡಲಿದೆ ಎನ್ನುವ ಮುನ್ಸೂಚನೆ ದೊರೆತಿದೆ. ಆದರೆ ಈ ಅರಾಜಕತೆಯಿಂದ ದೇಶ ಹೇಗೆ ಸುಭಿಕ್ಷತೆಯೆಡೆಗೆ ತೆರಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಟಿಎಸ್‌ಐ

ಅಕ್ರಂ ಹಕ್

ಡೆನ್ಮಾಕ್: ಪ್ರತಿಭಟನೆ

ಮತ್ತೆ ಭುಗಿಲೆದ್ದ ವ್ಯಂಗ್ಯಚಿತ್ರ ವಿವಾದ

ಕ್ಷಮೆ ಯಾಚನೆ ಒತ್ತಾಯ: ಡ್ಯಾನಿಷ್ ಸಚಿವರ ಇರಾನ್ ಪ್ರವಾಸ ರದ್ದು

ಇಸ್ಲಾಂ ಭೀತಿಯ ಅಮಲು ಅಂಟಿಸಿಕೊಂಡಿರುವ ಮಾಧ್ಯಮಗಳು ದಾರಿಯಲ್ಲಿ ಹೋಗುತ್ತಿರುವ ಮಾರಿಯನ್ನು ಮನೆಗೆ ಕರೆದುಕೊಳ್ಳುತ್ತಿವೆ. ಹೀಗೆ ಸಂಕಷ್ಟವನ್ನು ಆಹ್ವಾನಿಸಿಕೊಳ್ಳುವ ಮಾಧ್ಯಮಗಳ ಕಾತುರತೆಗೆ ಇಲ್ಲಿದೆ ಅತ್ಯುತ್ತಮ ಉದಾಹರಣೆ. ಡ್ಯಾನಿಷ್ ಪೊಲೀಸರು ವ್ಯಂಗ್ಯಚಿತ್ರಕಾರನೊಬ್ಬನ ಕೊಲೆ ಸಂಚನ್ನು ಭೇದಿಸಿದ ಮರುದಿನವೇ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಕನಿಷ್ಠ 17 ಡ್ಯಾನಿಷ್ ವೃತ್ತ ಪತ್ರಿಕೆಗಳು ಆ ವಿವಾದಾಸ್ಪದ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ್ದವು. ಎರಡು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಮುಸ್ಲಿಮರ ತೀವ್ರ ವಿರೋಧಕ್ಕೆ ತುತ್ತಾಗಿ ಹಿಂಸೆ ತಾಂಡವವಾಡಿದ ಪ್ರವಾದಿ ಮಹಮ್ಮದ್ ಅವರ ಆ ವ್ಯಂಗ್ಯಚಿತ್ರ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಬೆನ್ನಲ್ಲೇ ನೂರಾರು ಮುಸ್ಲಿಂ ಯುವಕರು ಡೆನ್ಮಾರ್ಕ್‌ನ ರಸ್ತೆಗಳಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. 2005ರ ಸೆಪ್ಟೆಂಬರ್ 30ರಂದು ಮೊತ್ತ ಮೊದಲ ಬಾರಿ ವೆಸ್ಟರ್‌ಗಾರ್ಡ್ ಅವರ 12 ಕಲಾಕೃತಿಗಳನ್ನು ಪ್ರಕಟಿಸಿದ 'ಜಿಲ್ಲಾಂಡ್ಸ್- ಪೋಸ್ಟನ್ ಪತ್ರಿಕೆ ಈಗ ಮತ್ತೆ ಅದೇ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ. 'ಪೊಲಿಟಿಕನ್' ಮತ್ತು 'ಬರ್ಲಿಂಗ್‌ಸ್ಕೆ ಟಿಡೆಂಡ್' ಸೇರಿದಂತೆ ಇತರ ಹಲವು ಪ್ರಮುಖ ದಿನಪತ್ರಿಕೆಗಳು ಈ ವ್ಯಂಗ್ಯಚಿತ್ರವನ್ನು ಮರುಪ್ರಕಟಿಸಿವೆ. ಈ ವ್ಯಂಗ್ಯಚಿತ್ರದಲ್ಲಿ ತಲೆ ಮೇಲೆ ಕಿಡಿ ಹೊತ್ತಿಕೊಂಡ ಬಾಂಬ್ ಆಕಾರದ ಪಗಡಿ ಸುತ್ತಿಕೊಂಡ ಪ್ರವಾದಿ ಮಹಮ್ಮದ್ ಚಿತ್ರವಿದೆ. ಕಳೆದ ವಾರ ಪ್ರತಿಭಟನಕಾರರು ಕೋಪನ್‌ಹೇಗನ್ ಬಳಿ ಶಾಲೆಯೊಂದಕ್ಕೆ ಬೆಂಕಿ ಇಟ್ಟಿದ್ದರು. ನಾಲ್ಕು ದಿನಗಳ ಕಾಲ ದೇಶದಾದ್ಯಂತ ಹಿಂಸೆ ಕಾವೇರಿತ್ತು. ಈ ನಡುವೆ ದಿನ ಪತ್ರಿಕೆಗಳು ತಮ್ಮದೇ ವಾದವನ್ನು ಮುಂದಿಟ್ಟಿವೆ. ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್‌ಗಾರ್ಡ್ ಅವರ ಕೊಲೆ ಪಿತೂರಿ ರಚಿಸಿದ ಆರೋಪದಲ್ಲಿ ಒಬ್ಬ ಡ್ಯಾನಿಷ್ ಪ್ರಜೆಯೂ ಸೇರಿ ಮೂವರು ಮುಸ್ಲಿಮರನ್ನು ಡ್ಯಾನಿಷ್ ಅಧಿಕಾರಿಗಳು ಬಂಧಿಸಿದ ಹಿನ್ನೆಲೆಯಲ್ಲಿ ಈ ವ್ಯಂಗ್ಯಚಿತ್ರವನ್ನು ಮರು ಪ್ರಕಟಿಸಲಾಗಿದೆ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿವೆ. ಈ ನಡುವೆ ಪ್ರಕರಣಕ್ಕೆ ಹೊಸ ತಿರುವು ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಸೌದಿ ಮೂಲದ ಮುಸ್ಲಿಂ ಜಾಗತಿಕ ಒಕ್ಕೂಟ ಭಾನುವಾರ ಇದನ್ನು ಖಂಡಿಸಿದೆ. ಆದರೆ ಅತಿಯಾಗಿ ಪ್ರತಿಕ್ರಿಯೆ ನೀಡದಂತೆ ಮುಸ್ಲಿಂ ಸಮುದಾಯವನ್ನು ಕೋರಿಕೊಂಡಿದೆ. ಈ ಬೆಳವಣಿಗೆಗೆ ನಿಜಕ್ಕೂ ಆಶ್ಚರ್ಯ ತಂದಿದೆ ಮತ್ತು ಇಸ್ಲಾಂ ಮತ್ತು ಪ್ರವಾದಿಯನ್ನು ನೋಯಿಸುವ ಹಠಮಾರಿತನಕ್ಕೆ ಬಿದ್ದಿರುವವರನ್ನು ನಾವು ಉಗ್ರವಾಗಿ ಖಂಡಿಸಿದ್ದೇವೆ ಎಂದು ಸಂಘಟನೆಯ ಅಧಿಕೃತ ವೆಬ್‌ಸೈಟ್ ಹೇಳಿದೆ. ಈ ವಿವಾದಾಸ್ಪದ ವ್ಯಂಗ್ಯಚಿತ್ರವನ್ನು ಮರು ಪ್ರಕಟಿಸುವುದರಿಂದ ದ್ವೇಷದ ಉರಿ ಹೆಚ್ಚಾಗಲಿದೆ ಎಂದು ಅದು ಎಚ್ಚರಿಸಿದೆ ಮತ್ತು ಪ್ರವಾದಿಗೆ ಅವಮಾನಿಸುವುದನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಡೆನ್ಮಾರ್ಕ್ ಸರ್ಕಾರವನ್ನು ಕೋರಿದೆ. ಈ ನಡುವೆ ಗಾಜಾದಿಂದ ಪಾಕಿಸ್ತಾನದವರೆಗೆ ಮುಸ್ಲಿಂ ಸಮುದಾಯ ಡ್ಯಾನಿಷ್ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ ಮತ್ತು ವ್ಯಂಗ್ಯಚಿತ್ರಕಾರನನ್ನು ಕೊಲೆ ಮಾಡಬೇಕು ಎಂದು ಬೊಬ್ಬಿರಿದಿದ್ದಾರೆ. ಮತ್ತೊಂದು ಕಡೆ, ಇಸ್ಲಾಂ ವಿರೋಧಿ ವ್ಯಂಗ್ಯಚಿತ್ರವನ್ನು ಮರುಪ್ರಕಟಿಸಿದ್ದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಟೆಹರಾನ್ ಒತ್ತಾಯಿದ್ದರಿಂದ ಡ್ಯಾನಿಷ್ ಸಚಿವರು ತಮ್ಮ ಇರಾನ್ ಪ್ರವಾಸವನ್ನು ರದ್ದು ಪಡಿಸಿದ್ದಾರೆ. ಪ್ರವಾಸದ ಎರಡು ದಿನಗಳಿಗೆ ಮುನ್ನ, ಸಚಿವರು ಇರಾನ್‌ಗೆ ಭೇಟಿ ಕೊಟ್ಟಾಗ ವ್ಯಂಗ್ಯಚಿತ್ರ ಪ್ರಕಟಿಸಿರುವುದಕ್ಕೆ ಕ್ಷಮೆ ಯಾಚಿಸಬೇಕು ಎಂದು ಇರಾನ್ ಬೇಡಿಕೆ ಇಟ್ಟಿತ್ತು.

ಟಿಎಸ್‌ಐ

ಸೌರಭ್ ಕುಮಾರ್ ಶಾಹಿ

ಯುರೋಪ್: ಸಂಕಷ್ಟ

ಹೊಸ ಕೂಸು ಕೊಸೊವೊ

ಹೊಸ ರಾಷ್ಟ್ರದ ಉದಯ ಸರ್ವಸಂಕಷ್ಟಗಳ ಸರಮಾಲೆಯೇ?

ಕೊಸೊವೊ. ಭಾನುವಾರವಷ್ಟೇ ಯುರೋಪ್‌ನ ಈ ಹೊಸ ರಾಷ್ಟ್ರದ ಉದಯವಾಗಿದೆ. ಕೊಸೊವೊ ರಾಜಧಾನಿ ಪ್ರಿಸ್ಟಿನಾ ಕಿವಿಗಡಚಿಕ್ಕುವ ಪಟಾಕಿ ಶಬ್ದಗಳಿಂದ ತುಂಬಿ ಹೋಗಿತ್ತು. ಸರ್ಬಿಯಾದಿಂದ ಸ್ವತಂತ್ರಗೊಂಡ ಸಂಭ್ರಮಾಚರಣೆ ಎಲ್ಲೆಡೆ ಕಂಡು ಬಂದಿದೆ. ಅಮೆರಿಕ ಮತ್ತು ಬಹುತೇಕ ಯುರೋಪ್‌ನ ಎಲ್ಲ ದೇಶಗಳು ಈ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿವೆ. ವಿಶ್ವ ಸಂಸ್ಥೆಯ ಭದ್ರತಾ ಸಭೆಯ ಅಂಗೀಕಾರದ ಮೇರೆಗೆ ಅಧಿಕೃತವಾಗಿ ಸ್ವತಂತ್ರ ರಾಷ್ಟ್ರವಾಗಿ ಮುಂದುವರಿಯುವ ಹೊಣೆ ಹೊತ್ತುಕೊಂಡಿದೆ. ಆದರೆ ರಷ್ಯಾ ಮಾತ್ರ ಕೊಸೊವೊ ಸ್ವಾತಂತ್ರ್ಯವನ್ನು ಯುಕ್ತವಾದುದಲ್ಲ ಎಂದೇ ವಾದಿಸಿದೆ. ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಅವರ ಮಾತಿನಲ್ಲೇ ಹೇಳುವುದಾದರೆ ಈ ಸ್ವಾತಂತ್ರ್ಯ ಘೋಷಣೆ 'ಸರ್ವಸಂಕಷ್ಟಗಳ ಮೂಲ'. ಈ ಹಿಂದೆ, ಹೊಸ ದೇಶದ ಪ್ರಧಾನ ಮಂತ್ರಿ ಹಶಿಮ್ ತಾಸಿ ಸಂಸತ್ತಿನಲ್ಲಿ 'ಹೆಮ್ಮೆ, ಸ್ವತಂತ್ರ ಮತ್ತು ಮುಕ್ತ' ಕೊಸೊವೊ ದೇಶದ ಅಸ್ತಿತ್ವವನ್ನು ಘೋಷಿಸಿದ್ದರು. 'ಒಂದು ಪ್ರಜಾಸತ್ತಾತ್ಮಕ, ಜಾತ್ಯತೀತ ಮತ್ತು ಬಹು ಜನಾಂಗೀಯ ಗಣರಾಜ್ಯ'ದ ಅಧಿಕೃತ ಪ್ರಕಟಣೆಯ ಸಂದರ್ಭದಲ್ಲಿಯೇ, ಕೊಸೊವೊ ಸಾರ್ವಭೌಮತೆಗೆ ಅಂತರ್ ರಾಷ್ಟ್ರೀಯ ಕಾವಲು ಪಡೆಗಳು ರಕ್ಷಣೆ ನೀಡುವುದನ್ನು ಅಂಗೀಕರಿಸಲಾಗಿದೆ. ನ್ಯಾಟೋ ಸೇನೆ ಗಡಿ ಭದ್ರತೆ ಮತ್ತು ಜನಾಂಗೀಯ ಗುಂಪುಗಳ ಅಂತರ್ ಕಲಹವನ್ನು ಅಡಗಿಸುವ ಹೊಣೆ ಹೊತ್ತಿದೆ. ಆದರೆ ಈ ನಡೆಯಿಂದ ಈಗಾಗಲೇ ಇರುವ ಜನಾಂಗೀಯ ಬಿರುಕನ್ನು ಕಂದಕವಾಗಿಸಲಿದೆ. ಈ ಅಂತರ್ ಕಲಹ ಜಾಗತಿಕ ನೆಲೆಯಲ್ಲಿ ಸ್ಫೋಟಿಸುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಈ ನಡೆಯ ಬೆಂಬಲಿಗರು ಮಾತ್ರ ಕೊಸೊವೊ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿ ವಿಮರ್ಶಿಸಬೇಕು ಎಂದು ಅಭಿಪ್ರಾಯಪಡುತ್ತಾರೆ. ಯೂಗೊಸ್ಲಾವಿಯದ ವಿಭಜನೆ, ಸರ್ಬಿಯನ್ ದೇಶದ ನೇತಾರರು ಬಾಲ್ಕನ್‌ನಲ್ಲಿ ಸರ್ಬ್‌ರಲ್ಲದ ಜನಾಂಗದವರನ್ನು ಪ್ರತ್ಯೇಕಿಸಿರುವುದು, ಬಹುಸಂಖ್ಯಾತ ಅಲ್ಬೇನಿಯನ್ನರು ದ್ವಿತೀಯ ದರ್ಜೆಯ ಪ್ರಜೆಗಳಾಗಿರುವುದು ಮತ್ತು ಬೆಲ್‌ಗ್ರೇಯ್ಡ್‌ನ್ನು ತಮ್ಮ ರಾಜಧಾನಿಯಾಗಿ ಒಪ್ಪಿಕೊಳ್ಳಲು ಅವರ ನಿರಾಕರಣೆ, ಒಂದು ಪ್ರತ್ಯೇಕ ಐತಿಹಾಸಿಕ, ನೈತಿಕ ಮತ್ತು ವಾಸ್ತವಿಕ ಒಕ್ಕೂಟದ ಘೋಷಣೆಗೆ ನಾಂದಿಯಾಯಿತು. ಲಂಡನ್‌ನಿಂದ ಟಿಎಸ್‌ಐಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲ್ಕನ್ ಕುರಿತ ಪ್ರಮುಖ ರಾಜಕೀಯ ವಿಮರ್ಶಕ ಮತ್ತು ಸರ್ಬಿಯಾದ ಕೊಸೊವೊ ಅಲ್ಬೇನಿಯನ್ ಕಿಮ್ ಬೈಟೈಸಿ, ಇದೊಂದು ಭದ್ರತಾ ಆಶ್ವಾಸನೆ. ಒಂದು ದಿನ ಮಿಲೊಸೊವಿಕ್‌ಗಳು ಆಕಸ್ಮಿಕವಾಗಿ ಯಾವುದೇ ಶಾಲೆಯನ್ನು ಮುಚ್ಚುವ ಪ್ರಸಂಗ ಅಥವಾ ಅರೆಸೇನಾ ಪಡೆಗಳು ದೇಶವನ್ನು ತಮ್ಮ ಕವಚವಾಗಿಸಿಕೊಂಡು ಕಾನೂನು ಬಾಹಿರ ಬೇಡಿಕೆಗಳನ್ನು ಇಡುವುದು, ಆಸ್ತಿಯನ್ನು ವಶಪಡಿಸಿಕೊಳ್ಳುವುದು, ಭಯೋತ್ಪಾದಕರು ಎಂಬ ಹಣೆಪಟ್ಟಿ, ಅಸ್ತಿತ್ವದ ದಾಖಲೆಗಳನ್ನೇ ತಿರುಚುವುದು ಮತ್ತು ಮನೆಗಳಿಂದ ಹೊರ ಗಟ್ಟುವುದು... ಮೊದಲಾದ ಕುಕೃತ್ಯಗಳಿಂದ ಒಂದು ರಕ್ಷಣೆ ಇದು. ಈ ನಡುವೆ ಭಾನುವಾರ ರಾತ್ರಿ ವಿಶ್ವಸಂಸ್ಥೆ ಭದ್ರತಾ ಆಯೋಗದ ಸಭೆಯಲ್ಲಿ ಈ ಸ್ವಾತಂತ್ರ್ಯವನ್ನು ಅನಧಿಕೃತ ಎಂದು ಕರೆದ ರಷ್ಯಾ ಮತ್ತೊಂದು ಬಿಕ್ಕಟ್ಟು ಸೃಷ್ಟಿಸಿದೆ. ಇಲ್ಲಿನ ಸಮಸ್ಯೆ ಮತ್ತು ಈ ಪ್ರಾಂತ್ಯದ ಜನಾಂಗೀಯ ಕಲಹಗಳ ವ್ಯಾಪ್ತಿಯನ್ನು ವೃದ್ಧಿಸಲಾಗಿದೆ ಹಾಗೂ ಬಾಲ್ಕನ್‌ನಲ್ಲಿ ಹೊಸ ಬಿಕ್ಕಟ್ಟು ಕುಡಿಯೊಡೆದಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೊಸೊವೊ ಒಂದು ಬಡ ರಾಷ್ಟ್ರ. ಬಹುತೇಕ ಎರಡು ಮಿಲಿಯನ್ ಮುಸ್ಲಿಂ ಜನಸಂಖ್ಯೆ ಇರುವ ದೇಶ. 1999ರಿಂದ ವಿಶ್ವಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿತ್ತು. 16,000 ನ್ಯಾಟೋ ಸೈನಿಕರು ಭದ್ರತಾ ವ್ಯವಸ್ಥೆಯ ಹೊಣೆ ಹೊತ್ತಿದ್ದಾರೆ. ಇಲ್ಲಿನ ನಿರುದ್ಯೋಗ ದರ ಶೇ. 60 ಮತ್ತು ಸರಿಸುಮಾರು ಮಾಸಿಕ ವೇತನ 250 ಡಾಲರ್‌ಗಳು. ಇದು ಯುರೋಪ್‌ನಲ್ಲೇ ಅತೀ ಕಡಿಮೆ ಮಾಸಿಕ ಸಂಭಾವನೆ ಎನ್ನಬಹುದು.

ಟಿಎಸ್‌ಐ

ಸೌರಭ್ ಕುಮಾರ್ ಶಾಹಿ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .