ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೆ!!
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್
ಸದ್ಯದ ರಾಜಕೀಯ ಸನ್ನಿವೇಶವನ್ನು ಅವಲೋಕಿಸಿದರೆ, ಈ ಹಿಂದೆ ನಾನು ಸಂಪಾದಕೀಯವೊಂದರಲ್ಲಿ ಬರೆದಂತೆ ಮುಂಬರುವ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬರಲಿದೆ. ತೃತೀಯ ರಂಗದ ಕುರಿತು ಆಸೆಗಳು ಗರಿಬಿಚ್ಚುವಂತೆ ಮಾಡಿದ್ದು ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್. ಅಷ್ಟು ಮಾತ್ರವಲ್ಲ ತೃತೀಯ ರಂಗ ರಚನೆಗೆ ತಾನೇ ಪ್ರಯತ್ನ ಮಾಡುತ್ತೇನೆ ಎಂದು ಕೂಡ ಅವರು ಹೇಳಿದ್ದರು. ದೇಶದ ಎರಡು ಅತಿ ದೊಡ್ಡ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ಗಳು ಅವುಗಳದ್ದೇ ಸ್ವಂತ ಕಾಲಿನ ಮೇಲೆ ನಿಂತು ಕೇಂದ್ರದಲ್ಲಿ ಸರ್ಕಾರ ರಚಿಸುವ ಶಕ್ತಿಯನ್ನು ಈಗ ಹೊಂದಿಲ್ಲ! ಕಳೆದ ಕೆಲವು ವರ್ಷಗಳಿಂದ ಆ ಎರಡೂ ಪಕ್ಷಗಳು ಒಟ್ಟಾರೆ ರಾಷ್ಟ್ರದ ಮೇಲಿನ ತಮ್ಮ ರಾಜಕೀಯ ಹಿಡಿತವನ್ನು ಕಳೆದುಕೊಂಡಾಗಿದೆ. ಅವುಗಳು ಸವೆದು ಹೋಗುತ್ತಿದ್ದರೆ, ಆ ಅವಕಾಶವನ್ನು ಪ್ರಾದೇಶಿಕ ಪಕ್ಷಗಳು ಸಮರ್ಥವಾಗಿ ಬಳಸಿಕೊಳ್ಳಲಾರಂಭಿಸಿವೆ. ಅದರಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳಂತೂ ಅಕ್ಷರಶಃ ಮೇಲಿನೆರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆದು ನಿಲ್ಲಲಾರಂಭಿಸಿವೆ.
ಆ ಎಲ್ಲ ಪ್ರಾದೇಶಿಕ ಪಕ್ಷಗಳ ಪೈಕಿ ಕಾಂಗ್ರೆಸ್-ಬಿಜೆಪಿಗೆ ಹೆಚ್ಚಿನ ಹಾನಿ ಮಾಡಿರುವ ಪಕ್ಷವೆಂದರೆ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ). ಇತಿಹಾಸದ ಪುಟಗಳನ್ನೇ ಮಗುಚಿ ಹೇಳುವುದಾದರೆ ಯಾವ ಪಕ್ಷ ಉತ್ತರ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತದೋ, ಆ ಪಕ್ಷ ನಂತರ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಪ್ರಭಾವ ಬೀರಿ ದೆಹಲಿಯ ಅಧಿಕಾರದ ಗದ್ದುಗೆ ಏರಿ ಕೂತು ಕೊಳ್ಳುತ್ತದೆ. ಒಂದು ಕಾಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಭದ್ರಕೋಟೆಯಂತಿದ್ದ ಉತ್ತರ ಪ್ರದೇಶದಲ್ಲಿ ಮಾಯಾವತಿ ಅವೆರಡೂ ಪಕ್ಷಗಳ ಬೇರನ್ನೇ ಕಿತ್ತು ಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿಯನ್ನು ಹಿಂದಕ್ಕೆ ಹಾಕಿದ್ದು ಮಾತ್ರವಲ್ಲ, ಈಗ ದೇಶದ ವಿವಿಧ ರಾಜ್ಯಗಳಲ್ಲಿ ತನ್ನ ಬಲವನ್ನು ಬಿಎಸ್‌ಪಿ ಹೆಚ್ಚಿಸಿಕೊಳ್ಳಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎಸ್‌ಪಿ ಮಹತ್ವದ ಪಾತ್ರವನ್ನು ವಹಿಸಲಿದೆ.
ಈಗ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಮೂರು ಸಾಧ್ಯತೆಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಮುಂದಿನ ಸಾರ್ವತ್ರಿಕ ಚುನಾವಣೆಯ ನಂತರ ಮಾಯಾವತಿ ಮತ್ತು ಸಿಪಿಐ(ಎಂ) ಬಾಹ್ಯ ಬೆಂಬಲ ಪಡೆದು ಕಾಂಗ್ರೆಸ್ ಸರ್ಕಾರ ರಚಿಸಬಹುದು. ಇದು ಮೊದಲ ಸಾಧ್ಯತೆ. ಎರಡನೇಯದಾಗಿ ಬಿಜೆಪಿ ಅವೇ ಎರಡು ಪಕ್ಷಗಳ ಬಾಹ್ಯ ಬೆಂಬಲ ಪಡೆದು ಅಧಿಕಾರದ ಗದ್ದುಗೆಗೇರಿ ಕುಳಿತುಕೊಳ್ಳಬಹುದು. ಇಲ್ಲವಾದಲ್ಲಿ ತೃತೀಯ ರಂಗದ ನೆರಳಲ್ಲಿ ವಿವಿಧ ಪಕ್ಷಗಳು ಒಂದಾಗಿ ಸರ್ಕಾರ ರಚಿಸುವುದು. ಇನ್ನು ಒಂದು ಹಾಗೂ ಎರಡನೇ ಸಂದರ್ಭಗಳಲ್ಲಿ ಬಿಎಸ್‌ಪಿ ಮತ್ತು ಸಿಪಿಐ(ಎಂ) 'ಮೂರ್ಖ ಮೌಲ್ಯ'ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಇವರ ಸಹವಾಸವೇ ಬೇಡ ಎನ್ನಲೂಬಹುದು.
ಇನ್ನು ತೀರಾ ಅನಿವಾರ್ಯವಾದಲ್ಲಿ ಮಾತ್ರ ಆ ಎರಡು ಪಕ್ಷಗಳು ಮೂರ್ಖರ ಸಹಾಯಕ್ಕೆ ಕೈವೊಡ್ಡಬಹುದು. ಇದು ಮೂರನೇ ಅವಕಾಶಕ್ಕೆ ಎಡೆ ಮಾಡಿಕೊಡುತ್ತದೆ. ಹಾಗಾದಲ್ಲಿ ಪ್ರಕಾಶ್ ಕಾರಟ್ ಅವರ ತೃತೀಯ ರಂಗದ ಸರ್ಕಾರ ರಚನೆಯಾಗಲಿದೆ. ಬಿಜೆಪಿಯ ಮಾಜಿ ಜೊತೆಗಾರ ಚಂದ್ರ ಬಾಬು ನಾಯ್ಡು ಅವರು ಈಗಾಗಲೇ ತೃತೀಯ ರಂಗ ರಚನೆ ಪ್ರಕ್ರಿಯೆಯನ್ನು ಸ್ವಾಗತಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅನುಭವಿಸಿದ ಮುಖಭಂಗದ ಸೇಡನ್ನು ತೀರಿಸಿಕೊಳ್ಳುವ ತವಕ ಬಾಬು ಅವರದ್ದು. ಯುಪಿಎ ಸಮ್ಮಿಶ್ರ ಸರ್ಕಾರದ ಅಂಗವಾಗಿರುವ ಎನ್‌ಸಿಪಿ ಮತ್ತು ಆರ್‌ಜೆಡಿ ಕೂಡ ತೃತೀಯ ರಂಗ ಸೇರಲು ಹಿಂಜರಿಯಲಾರವು. ಏಕೆಂದರೆ ಎನ್‌ಸಿಪಿ ಮಟ್ಟಿಗೆ ಹೇಳುವುದಾದರೆ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಅದಕ್ಕೆ ಕಾಂಗ್ರೆಸ್ ಪಕ್ಷವೇ ಪ್ರತಿಸ್ಪರ್ಧಿ. ಇನ್ನು ಆರ್‌ಜೆಡಿಗೆ ಬಿಹಾರ್ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಎದುರಾಳಿ. ಇನ್ನು ಕರ್ನಾಟಕದಲ್ಲಿ ಜೆಡಿ(ಎಸ್)ಗೂ ಇದು ಅನ್ವಯಿಸುತ್ತದೆ. ಇಂತಹ ಒಂದು ಭಾರಿ ಅವಕಾಶ ಇದೆ. ಆದರೂ ಆ ಎಲ್ಲ ಪಕ್ಷಗಳನ್ನು ತೃತೀಯ ರಂಗವಾಗಿ ಒಗ್ಗೂಡಿಸುವುದು ಪ್ರಕಾಶ್ ಕಾರಟ್ ಪಾಲಿಗೆ ಬಹುದೊಡ್ಡ ಸವಾಲಾಗಲಿದೆ. ಅದಕ್ಕಿಂತ ದೊಡ್ಡ ಸವಾಲೆಂದರೆ ತೃತೀಯ ರಂಗ ಒಗ್ಗೂಡಿದರೂ, ಆ ಪೈಕಿ ಮೈತ್ರಿ ಮಾಡಿಕೊಂಡಿರುವ ಯಾವ ಪಕ್ಷದವರು ರಂಗವನ್ನು ಮುನ್ನಡೆಸಬೇಕು ಎನ್ನುವುದು. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ತೃತೀಯ ರಂಗವನ್ನು ಮುನ್ನಡೆಸುವ ಶಕ್ತಿ ಇರುವುದು ಮಾಯಾವತಿಗೆ ಅವರಿಗೆ ಮಾತ್ರ. ಆದರೆ ಸಿಪಿಐ(ಎಂ) ನಾಯಕತ್ವ ಈ ವಾಸ್ತವವನ್ನು ಜೀರ್ಣಿಸಿಕೊಳ್ಳಲಾರದು. ಆ ಮೂಲಕ ಹೆಚ್ಚಿನ ಪಕ್ಷ ತೃತೀಯ ರಂಗ ರಚನೆಯ ಸಾಧ್ಯತೆಯೇ ಕುಸಿದು ಬೀಳಲಿದೆ.
ಹಾಗಿದ್ದರೆ ಈ ಬಗೆಹರಿಯದ ಕಗ್ಗಂಟಾದ ಸಮಸ್ಯೆಗೆ ಉತ್ತರವಾದರೂ ಏನು? ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ನಿಂತು ನೋಡಿದಲ್ಲಿ ಬದ್ಧ ವಿರೋಧಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಯಾಗಿ ಸಮ್ಮಿಶ್ರ ಸರ್ಕಾರ ರಚಿಸುವುದನ್ನು ಕನಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲ. ಆದರೂ, ಹಾಗೇಕೆ ಆಗಬಾರದು?
ಮೇಲೆ ತಿಳಿಸಿದ ತೃತೀಯ ರಂಗದ ಸರ್ಕಾರಕ್ಕಿಂತ ಕಾಂಗ್ರೆಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಯಾವತ್ತಿದ್ದರೂ ಅತ್ಯುತ್ತಮವೇ. ಕೇಂದ್ರ ಸರ್ಕಾರದಲ್ಲಿ ಮೂರ್ಖರ ಸಂತೆ ಸೇರುವ ಬದಲು ಈ ಮೂಲಕ ಒಂದು ಸ್ಥಿರ ಸರ್ಕಾರ ಸ್ಥಾಪಿಸುವಂತಾದರೆ ಏಕೆ ಬೇಡ? ಅದಕ್ಕಿಂತ ಹೆಚ್ಚಾಗಿ ಎನ್‌ಡಿಎ ಹಾಗೂ ಯುಪಿಎ ಸರ್ಕಾರಗಳು ಹಾಕಿಕೊಂಡಂತಹ ಜನಪರ ಯೋಜನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅಂತಹ ಯಾವುದೇ ಭಯಂಕರ ವ್ಯತ್ಯಾಸವಿದ್ದಂತೆ ಕಾಣುತ್ತಿಲ್ಲ. ಎರಡೂ ಗುಂಪು ತಾವು- ತಾವು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಹಲವಾರು ಯೋಜನೆಗಳಲ್ಲಿ ಸಾಮ್ಯತೆ ಇದೆ. ಮೇಲಿನೆರಡೂ ಬಣಗಳಲ್ಲಿನ ಪ್ರಮುಖವಾದ ಎರಡೂ ಪಕ್ಷಗಳಿಗೂ ಸುಧಾರಣೆಯ ಬಗ್ಗೆ ಭರವಸೆ ಇದೆ. ದೇಶವನ್ನು ಆರ್ಥಿಕವಾಗಿ ಬಲಶಾಲಿಯಾಗಿಸುವ ತವಕವಿದೆ. ಸುವರ್ಣ ಚತುಷ್ಪಥದಿಂದ ಹಿಡಿದು ನಾಗರಿಕ ಪರಮಾಣು ಒಪ್ಪಂದದವರೆಗೆ ಎರಡೂ ಪಕ್ಷಗಳು ಹೆಚ್ಚು-ಕಡಿಮೆ ಒಂದೇ ನಿಲುವನ್ನು ತೋರಿವೆ. ಇನ್ನು ವಿರೋಧ ಪಕ್ಷವಾಗಿದ್ದಾಗ ವಿರೋಧ ವ್ಯಕ್ತಪಡಿಸಲೇಬೇಕು ಎಂಬ ಕಟ್ಟುಪಾಡನ್ನು ಬಿಟ್ಟರೆ ಅವೆರಡೂ ಪಕ್ಷಗಳು ಆರ್ಥಿಕ ಸುಧಾರಣೆಯ ಬಗ್ಗೆ ದೃಢ ವಿಶ್ವಾಸ ಇಟ್ಟುಕೊಂಡಿವೆ. ಎರಡೂ ಪಕ್ಷಗಳು ಸರ್ಕಾರದ ಮಂಚೂಣಿಯಲ್ಲಿ ನಿಂತಿದ್ದಾಗ ದೇಶವು ಸರಿಸಮಾನವಾಗಿ ಅದೇ ದಿಕ್ಕಿನಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. ಆರ್ಥಿಕವಾಗಿ ಸದೃಢವಾಗಿವೆ. ಹೀಗೆ ಹಲವಾರು ಸಾಮ್ಯಗಳಿರುವಾಗ ಕಾಂಗ್ರೆಸ್- ಬಿಜೆಪಿ ಏಕೆ ಜೊತೆಯಾಗಿ ಸಮ್ಮಿಶ್ರ ಸರ್ಕಾರ ಸ್ಥಾಪಿಸಬಾರದು? ದೇಶದ ಹಿತದೃಷ್ಟಿಯ ಹಿನ್ನೆಲೆಯಲ್ಲಿ ತಮ್ಮೊಳಗಿನ ತಾತ್ವಿಕ ಸಿದ್ಧಾಂತಗಳಿಗೆ ತಿಲಾಂಜಲಿಯಿಟ್ಟು ಐದು ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡಲು ಇವೆರಡೂ ಪಕ್ಷಗಳು ಸಿದ್ಧವಾಗಬೇಕು. ಈ ಎರಡೂ ಪಕ್ಷಗಳ ನಡುವಿನ ರಾಜಕೀಯ ಮೈತ್ರಿ ಯಾವ ರೂಪ ತಳೆದು ನಿಲ್ಲುತ್ತದೆ ಎನ್ನುವುದು ಯಾರಿಗೆ ಗೊತ್ತು. ಮುಂದಿನ ಐದು ವರ್ಷಗಳು ಮಾತ್ರವಲ್ಲ, ಎಲ್ಲವೂ ಸರಿಯಾದಲ್ಲಿ ಬಹುಕಾಲ ಈ ಸಮ್ಮಿಶ್ರ ಸರ್ಕಾರ ನಡೆದುಕೊಂಡು ಹೋಗಬಹುದು.
ಕೆಲವು ದಿನಗಳ ಹಿಂದೆ ರಾಷ್ಟ್ರಪತಿ ಭವನದಲ್ಲಿ ನಡೆದ ಒಂದು ಸಮಾರಂಭದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಮತ್ತು ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಜೊತೆಯಾಗಿ ನಗು-ನಗುತ್ತಲೇ ಮಾತನಾಡುತ್ತಿದ್ದರು. ನಗು ಹಂಚಿಕೊಳ್ಳುವ ಆ ಭಾವನೆಯನ್ನು ಅವರು ಮುಂದಿನ ಚುನಾವಣೆವರೆಗೆ ವಿಸ್ತರಿಸಿದರೆ ಭಾರಿ ದೊಡ್ಡ ಸಮ್ಮಿಶ್ರ ಸರ್ಕಾರ ಸ್ಥಾಪನೆಯಾಗಬಹುದು!!