|
ಕ್ರಿಕೆಟ್
ಜಗತ್ತಿನ ದಂತಕಥೆಗಳಾದ ಡಾ.ಡಬ್ಲ್ಯು.ಜಿ. ಗ್ರೇಸ್ ಮತ್ತು ರಾಜಕುಮಾರ ರಣಜಿತ್
ಸಿನ್ಹಜಿ ಜೊತೆಯಾಗಿ ನಿಂತ ಅಪರೂಪದ ಛಾಯಾಚಿತ್ರ; 1726ರಿಂದ 1930ರವರೆಗೆ
ಕ್ರಿಕೆಟ್ ಬ್ಯಾಟ್ ವಿಕಾಸ ಹೊಂದಿದ ಬಗೆ: 1925ರಲ್ಲಿ ಇಂಗ್ಲೆಂಡ್ ಪ್ರವಾಸ
ಕೈಗೊಂಡ ಆಸ್ಟ್ರೇಲಿಯ ತಂಡದ ಆಟಗಾರರು ಆಟೋಗ್ರಾಫ್ ಮಾಡಿದ ಅಮೂಲ್ಯ ಬ್ಯಾಟ್...
ಇಂತಹ ಇನ್ನೂ ಹಲವು ಅಪರೂಪದ ಕ್ರಿಕೆಟ್ ಸ್ಮರಣಿಕೆಗಳನ್ನು ಕಾಣಬೇಕೆ?
ಹಾಗಿದ್ದರೆ ಬೆಂಗಳೂರಿನ ಎಂ.ಜಿ. ರಸ್ತೆಯ ಕರ್ನಾಟಕ ರಾಜ್ಯ ಕ್ರಿಕೆಟ್
ಸಂಸ್ಥೆಯ (ಕೆಎಸ್‌ಸಿಎ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಡಗಿರುವ ಕ್ರಿಕೆಟ್
ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ. ಲಾರ್ಡ್ಸ್‌ನಲ್ಲಿರುವ ಎಂಸಿಸಿ
ಕ್ರಿಕೆಟ್ ವಸ್ತು ಸಂಗ್ರಹಾಲಯ ನಮ್ಮ ಈ ಸಾಹಸಕ್ಕೆ ಮೂಲ ಸ್ಫೂರ್ತಿಯಾಗಿದ್ದು.
ಕಳೆದ ಹಲವಾರು ದಶಕಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಲೋಕಕ್ಕೆ ಹಲವು
ದಿಗ್ಗಜರನ್ನು ಉಡುಗೊರೆಯಾಗಿ ನೀಡಿದೆ. ನಮ್ಮ ಮುಂದಿನ ಪೀಳಿಗೆಗೆ ಕ್ರಿಕೆಟ್
ಇತಿಹಾಸದ ಅರಿವು ಮೂಡಿಸುವ ಸಲುವಾಗಿಯೇ ನಾವು ಈ ಯೋಜನೆ ಹಾಕಿಕೊಂಡಿದ್ದು
ಎನ್ನುತ್ತಾರೆ ಕೆಎಸ್‌ಸಿಎ ಕಾರ್ಯದರ್ಶಿ ಹಾಗೂ ಭಾರತ ತಂಡದ ಮಾಜಿ ಕ್ರಿಕೆಟ್
ಆಟಗಾರ ಬ್ರಜೇಶ್ ಪಟೇಲ್. ಅಂತಹ ಒಂದು ನಿಖರ ಗುರಿಯಿಟ್ಟುಕೊಂಡೇ ಕೆಎಸ್‌ಸಿಎ
ಹಲವಾರು ಅಪರೂಪದ ಛಾಯಾಚಿತ್ರಗಳು, ವರ್ಣಚಿತ್ರಗಳು, ಆಟಗಾರರು ಬಳಸಿದ
ಬ್ಯಾಟ್-ಬಾಲ್-ಅಧಿಕೃತ ಕೋಟು-ಟೋಪಿ, ಕೈಬೆರಳಚ್ಚು... ಮುಂತಾದ ಐತಿಹಾಸಿಕ
ವಸ್ತುಗಳನ್ನು ಕಲೆ ಹಾಕಿತು. ನಮ್ಮ ಈ ಪ್ರಾಮಾಣಿಕ ಪ್ರಯತ್ನಕ್ಕೆ ಮಾಜಿ
ಕ್ರಿಕೆಟ್ ಆಟಗಾರರು, ಕೆಲವು ಅಪರೂಪದ ವಸ್ತು ಸಂಗ್ರಾಹಕರು ಮತ್ತು ಹಲವಾರು
ಸಂಸ್ಥೆಗಳು ಉತ್ತಮವಾಗಿ ಸ್ಪಂದಿಸಿದರು. ಇದರ ಪರಿಣಾಮ 2005ರಲ್ಲಿ ಈ
ಮ್ಯೂಸಿಯಂ ಅಸ್ತಿತ್ವಕ್ಕೆ ಬಂತು ಎಂದು ಬ್ರಜೇಶ್ ಪಟೇಲ್ ಅವರು ವಿವರ
ನೀಡುತ್ತಾರೆ. ಕೆಎಸ್‌ಸಿಎ ಪದಾಧಿಕಾರಿಗಳ ಚೇಂಬರ್ ನಡುವೆ
ಕೇಂದ್ರೀಕೃತವಾಗಿರುವ ಈ ಮ್ಯೂಸಿಯಂನ ಕೇಂದ್ರ ಭಾಗದಲ್ಲಿ ಕರ್ನಾಟಕದ ಕ್ರಿಕೆಟ್
ದಂತಕಥೆಗಳ ಪರಿಚಯ ಮಾಡಿಕೊಡಲಾಗಿದೆ. ಅಲ್ಲಿಯೇ ಹಲವಾರು ಅಂತರ್ ರಾಷ್ಟ್ರೀಯ
ಆಟಗಾರರು ಸಹಿ ಮಾಡಿದ ಚೆಂಡುಗಳನ್ನು ಸಂಗ್ರಹಿಸಿಡಲಾಗಿದೆ. ಇದೇ ಭಾಗದಲ್ಲಿ
ಮೈಸೂರಿನ ಪರ ಮೊದಲ ಬಾರಿಗೆ ಅನಧಿಕೃತ ಟೆಸ್ಟ್ ಆಡಿದ ಕೆ. ಶ್ರೀನಿವಾಸನ್
ಮತ್ತು ಸ್ಪಿನ್ ದಂತಕಥೆ ಇ.ಎ.ಎಸ್. ಪ್ರಸನ್ನ ಬಳಸಿದ ಅಧಿಕೃತ ಕೋಟುಗಳನ್ನು
ಕೂಡ ಸಂಗ್ರಹಿಸಿ ಇಡಲಾಗಿದೆ. ಇಲ್ಲಿಯೇ ಒಂದು ಅತ್ಯಮ್ಯೂಲವಾದ ಇತಿಹಾಸದ
ತುಣುಕು ಇದೆ. 1933-34ರಲ್ಲಿ ಇಂಗ್ಲೆಂಡ್‌ನ ಎಂಸಿಸಿ ಕ್ರಿಕೆಟ್ ತಂಡ ಭಾರತ
ಪ್ರವಾಸ ಕೈಗೊಂಡಿತ್ತು. ಆ ಸಂದರ್ಭದಲ್ಲಿ ತಂಡದ ಎಲ್ಲ 16 ಆಟಗಾರರೂ
ಆಟೋಗ್ರಾಫ್ ಪುಸ್ತಕವೊಂದರಲ್ಲಿ ಸಹಿ ಮಾಡಿದ್ದರು. ಅದೇ ಪಟ್ಟಿಯಲ್ಲಿ 17ನೇ
ಆಟಗಾರರಾಗಿ ಮಹಾತ್ಮ ಗಾಂಧೀಜಿ ಸಹಿ ಮಾಡಿದ್ದಾರೆ! ಮೂಲತಃ ಲಕ್ಷ್ಮಿ ಮರ್ಚಂಟ್
ಅವರ ಕೈಗೆ ಈ ಅಮೂಲ್ಯ ಆಟೋಗ್ರಾಫ್ ಪುಸ್ತಕದ ಪುಟ ಸಿಕ್ಕಿತು. ನಂತರ ಅವರು
ಅದನ್ನು ಬೆಂಗಳೂರಿನ ಕ್ರಿಕೆಟ್ ಸಂಖ್ಯಾ ಶಾಸ್ತ್ರಜ್ಞ ಎಚ್.ಆರ್.
ಗೋಪಾಲಕೃಷ್ಣ ಅವರಿಗೆ ಉಡುಗೊರೆಯಾಗಿ ನೀಡಿದರು. ಗೋಪಾಲಕೃಷ್ಣ ಅವರು ಅದನ್ನು
ಈಗ ಕೆಎಸ್‌ಸಿಎ ಮ್ಯೂಸಿಯಂ ಮಡಿಲಿಗೆ ಹಾಕಿದ್ದಾರೆ. ಇದೆಲ್ಲದರ
ಜೊತೆಗೆ
ಮ್ಯೂಸಿಯಂನ ಒಂದು ಭಾಗದಲ್ಲಿ 1950ರಿಂದ ಇದುವರೆಗೆ ಕರ್ನಾಟಕ ಕ್ರಿಕೆಟ್
ವಿಕಾಸ ಹೊಂದಿದ ಬಗೆಯನ್ನು ಛಾಯಾಚಿತ್ರಗಳ ಮೂಲಕ ಪ್ರದರ್ಶಿಸಲಾಗಿದೆ. ಯುವ
ಆಟಗಾರರಿಗಂತೂ ಈ ವಿಭಾಗ ಸ್ಫೂರ್ತಿಯ ಸೆಲೆ. "ಈ ವಿಭಾಗದಲ್ಲಿ
ಓಡಾಡುತ್ತಿದ್ದರೆ ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ,
ಬಿ.ಎಸ್.ಚಂದ್ರಶೇಖರ್, ಜಾವಗಲ್ ಶ್ರೀನಾಥ್, ಬಿ.ಕೆ. ವೆಂಕಟೇಶ್ ಪ್ರಸಾದ್,
ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರಂತಹ ಮಹಾನ್ ಆಟಗಾರರ
ಸಾಧನೆಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ನಾವೀಗ ಎಲ್ಲಿ ನಿಂತಿದ್ದೇವೆ.
ನಮ್ಮ ಗುರಿ ಏನಾಗಬೇಕು ಎಂದು ಕೂಡ ಅವು ನಮಗೆ ಹೇಳುತ್ತವೆ ಎಂದು ಕರ್ನಾಟಕದ
ಯುವ ವೇಗದ ಬೌಲರ್ ಎನ್.ಸಿ. ಅಯ್ಯಪ್ಪ ಹೇಳುತ್ತಾರೆ. ಹಾಗೆಯೇ ಮ್ಯೂಸಿಯಂನ
ಮೊದಲ ಮಹಡಿಯಲ್ಲಿರುವ ಪೆವಿಲಿಯನ್, ಡ್ರೆಸ್ಸಿಂಗ್ ರೂಮ್ ಹಾಗೂ ಡೈಮಂಡ್
ಬಾಕ್ಸ್ ಹಿಂದಿನ ಡೈನಿಂಗ್ ಹಾಲ್‌ಗೆ ಭೇಟಿ ನೀಡಿದರೆ ಇತಿಹಾಸದ ಪುಟಗಳಲ್ಲಿ
ಇಣುಕಿ ನೋಡಲು ಸಾಧ್ಯವಾಗುತ್ತದೆ. ಸದಸ್ಯರ ಪೆವಿಲಿಯನ್ ಹಿಂಭಾಗದ ಡೈನಿಂಗ್
ಹಾಲ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಎಲ್ಲ ಆಟಗಾರರ
ಬೃಹತ್ ವರ್ಣ ಚಿತ್ರಗಳಿವೆ. ಅಲ್ಲೇ ಕೆಳಗೆ ಸರ್ ವಿವಿಯನ್ ರಿಚರ್ಡ್ಸ್, ಕಪಿಲ್
ದೇವ್, ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್ ಮುಂತಾದ ಮಹಾನ್ ಆಟಗಾರರ
ಹಸ್ತದ ಅಚ್ಚಿನ ಸಂಗ್ರಹವನ್ನೂ ಕಾಣಬಹುದು. 1975ರಿಂದ 2007ರ ವಿಶ್ವಕಪ್
ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಆಟಗಾರರೂ ಸಹಿ ಮಾಡಿರುವ
ಬ್ಯಾಟ್‌ಗಳ ಸಂಗ್ರಹ ಡ್ರೆಸ್ಸಿಂಗ್ ರೂಮ್ ಮುಂಭಾಗದ ಡೈನಿಂಗ್ ಹಾಲ್‌ನಲ್ಲಿ
ಇದೆ. ಇನ್ನು ಡೈಮಂಡ್ ಬಾಕ್ಸ್ ಹಿಂಭಾಗದ ಹಾಲ್‌ನಲ್ಲಿ ಎರಡು ಅಪರೂಪದ
ಛಾಯಾಚಿತ್ರಗಳಿವೆ. ಆ ಪೈಕಿ ಡಾ.ಡಬ್ಲ್ಯು.ಜಿ. ಗ್ರೇಸ್ ಮತ್ತು ರಾಜಕುಮಾರ
ರಣಜೀತ ಸಿನ್ಹಜಿ ಜೊತೆಯಾಗಿ ನಿಂತಿರುವುದು. ಆ ಕಪ್ಪು-ಬಿಳುಪು
ಚಿತ್ರದಲ್ಲಿರುವ ಡಾ.ಡಬ್ಲ್ಯು.ಜಿ. ಗ್ರೇಸ್ ಕೈಯಲ್ಲಿ ಗಾಲ್ಫ್ 'ಕ್ಲಬ್ಸ್'ಗಳಿವೆ!
ಅದರ ಪಕ್ಕದಲ್ಲಿಯೇ ಸರ್ ಡಾನ್ ಬ್ರಾಡ್ಮನ್ ಅವರ ಒಂದು ಅಪರೂಪದ
ಛಾಯಾಚಿತ್ರವಿದೆ. 1977-78ರ ಆಸ್ಟ್ರೇಲಿಯ ಪ್ರವಾಸದ ಸಂದರ್ಭದಲ್ಲಿ ಕಾಂಗರೂ
ನೆಲದಲ್ಲಿ ಭಾರತ ಗಳಿಸಿದ ಮೊದಲ ಜಯ!? ಅದನ್ನು ಮರೆಯಲು ಹೇಗೆ ಸಾಧ್ಯ.
ಮೆಲ್ಬರ್ನ್ ಟೆಸ್ಟ್‌ನಲ್ಲಿ ಭಾರತದ ಗೆಲುವಿನ ರೂವಾರಿ, ಪಂದ್ಯದ ಪುರುಷೋತ್ತಮ
ಬಿ.ಎಸ್. ಚಂದ್ರಶೇಖರ್ ಕೈಯಲ್ಲಿ ಆ ಚೆಂಡು ಮತ್ತು ಟ್ರೋಫಿ ಹಿಡಿದು ನಗು ಸೂಸಿ
ನಿಂತ ಚಿತ್ರ ಕೂಡ ಇಲ್ಲಿದೆ. ಒಟ್ಟಾರೆ, ಇಲ್ಲಿ ಇಂತಹ ಹಲವಾರು ಅಮೂಲ್ಯ
ಸ್ಮರಣಿಕೆಗಳು ಕಣ್ಣಿಗೆ ಬೀಳುತ್ತವೆ. ಆದರೂ, ಪ್ರಪಂಚ ಸುತ್ತಿ ಬಂದವರ ಪಾಲಿಗೆ
ಕೆಎಸ್‌ಸಿಎ ತನ್ನ ಮಹತ್ವಾಕಾಂಕ್ಷೆಯ ಯೋಜನೆ ಕ್ರಿಕೆಟ್ ಮ್ಯೂಸಿಯಂಗೆ ಶೇಕಡಾ
100ರಷ್ಟು ನ್ಯಾಯ ಸಲ್ಲಿಸಿಲ್ಲ ಎಂದು ಕೂಡ ಅರಿವಾಗುತ್ತದೆ. ಬೆಂಗಳೂರು ಮೂಲದ
ಖ್ಯಾತ ಇತಿಹಾಸಜ್ಞ ಹಾಗೂ ಕ್ರಿಕೆಟ್ ಬರಹಗಾರರಾದ ರಾಮಚಂದ್ರ ಗುಹಾ,
ಇತಿಹಾಸವನ್ನು ರಕ್ಷಿಸಬೇಕು ಮತ್ತು ಇತಿಹಾಸದ ತುಣುಕುಗಳನ್ನು ಪ್ರದರ್ಶಿಸಬೇಕು
ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ನಾನು ಮೆಲ್ಬರ್ನ್ ಕ್ರಿಕೆಟ್ ಮೈದಾನ
ಮತ್ತು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿನ ಕ್ರಿಕೆಟ್ ಮ್ಯೂಸಿಯಂಗಳನ್ನು
ನೋಡಿದ್ದೇನೆ. ಅಲ್ಲಿ ಅವರು ಪಕ್ಕಾ ವೃತ್ತಿಪರ ಮನೋಭಾವ ತೋರಿಸಿ ಐತಿಹಾಸಿಕ
ಸತ್ಯಗಳನ್ನು ತಿರುಚದೇ ಮ್ಯೂಸಿಯಂ ಸ್ಥಾಪಿಸಿದ್ದಾರೆ. ನಿಜ ಹೇಳಬೇಕೆಂದರೆ
ಕೆಎಸ್‌ಸಿಎ ಮ್ಯೂಸಿಯಂ ನನಗೆ ತೃಪ್ತಿ ನೀಡಿಲ್ಲ. ಏಕೆಂದರೆ ಇಲ್ಲಿ ವೃತ್ತಿಪರ
ಮನೋಭಾವದ ಅಭಿವ್ಯಕ್ತಿಯಾಗಿಲ್ಲ. ಕೆಟ್ಟ ಅಥವಾ ಸತ್ಯವಲ್ಲದ ಇತಿಹಾಸವನ್ನು
ರಕ್ಷಿಸುವುದಕ್ಕಿಂತ ಅದನ್ನು ರಕ್ಷಿಸದೇ ಇರುವುದು ಒಳ್ಳೆಯದು ಎಂಬ ಅಭಿಪ್ರಾಯ
ವ್ಯಕ್ತಪಡಿಸಿದರು. ಕೆಎಸ್‌ಸಿಎ ಪದಾಧಿಕಾರಿಗಳ ಕಿವಿಗೆ ಈ ಮಾತುಗಳು ಕೇಳಿದರೆ
ಒಳಿತು. ಏಕೆಂದರೆ ಹಿರಿಯ ಕ್ರಿಕೆಟ್ ಆಟಗಾರ ಸುಧಾಕರ್ ರಾವ್ ಅವರ ಪ್ರಕಾರ
ಕೆಎಸ್‌ಸಿಎ ಮ್ಯೂಸಿಯಂಗಾಗಿಯೇ ಅಲ್ಲಿ ಪ್ರತ್ಯೇಕ ಸ್ಥಳವೊಂದನ್ನು ಅಣಿ
ಮಾಡುತ್ತಿದೆ. ಒಮ್ಮೆ ಆ ಭಾಗ ಸಂಪೂರ್ಣವಾಗಿ ಸಿದ್ಧವಾದ ಮೇಲೆ ಪೂರ್ಣ
ಪ್ರಮಾಣದ ಮ್ಯೂಸಿಯಂ ಅಲ್ಲಿ ಅಸ್ತಿತ್ವಕ್ಕೆ ಬರಲಿದೆ. ಕನಿಷ್ಠ ಆಗಲಾದರೂ
ವೃತ್ತಿಪರ ಮನೋಭಾವ ಮೆರೆದರೆ ಭಾರತೀಯ ಕ್ರಿಕೆಟ್ ರಂಗದಲ್ಲಿ ಕೆಎಸ್‌ಸಿಎ ಒಂದು
ಆಕರ್ಷಕ, ಅಪರೂಪದ ಮೈಲುಗಲ್ಲನ್ನು ನೆಟ್ಟಂತಾಗುತ್ತದೆ.
ಇತಿಹಾಸದ ಕೈಗನ್ನಡಿ ಎಂಸಿಸಿ ಮ್ಯೂಸಿಯಂ
|
ಇತಿಹಾಸ ನಿಜಕ್ಕೂ ಸ್ಫೂರ್ತಿಯ ಸೆಲೆಯೇ?
ಈ ಪ್ರಶ್ನೆ ಕೇಳುವವರು ಒಮ್ಮೆ ಲಂಡನ್‌ನಲ್ಲಿರುವ ಐತಿಹಾಸಿಕ ಲಾರ್ಡ್ಸ್
ಮೈದಾನಕ್ಕೆ ಭೇಟಿ ನೀಡಿ, ಪ್ರವಾಸಿ ತಂಡ ತಂಗುವ ಬಾಲ್ಕನಿಗೆ ಹೋಗಿ
ನಿಲ್ಲಬೇಕು. ಭಾರತೀಯ ಕ್ರಿಕೆಟ್ ಪ್ರೇಮಿಯೊಬ್ಬ ಆ ಬಾಲ್ಕನಿಗೆ ಹೋಗಿ
ನಿಂತರೆ ಖಂಡಿತ 'ಕಪಿಲ್ ಡೆವಿಲ್ಸ್' 1983ರಲ್ಲಿ ಅಲ್ಲಿ ವಿಶ್ವಕಪ್
ಹಿಡಿದು ಸಂಭ್ರಮ ಪಟ್ಟ ಕ್ಷಣದ ಚಿತ್ರಗಳು ಕಣ್ಣ ಮುಂದೆ ಹಾದು ಹೋಗುತ್ತವೆ.
ಹಾಗೆಯೇ ಲಾರ್ಡ್ಸ್‌ನಲ್ಲಿಯೇ ಇರುವ ಜಗತ್ತಿನ ಅತ್ಯಂತ ಸುಸಜ್ಜಿತ ಕ್ರೀಡಾ
ವಸ್ತುಸಂಗ್ರಹಾಲಯ, ಎಂಸಿಸಿ ಮ್ಯೂಸಿಯಂಗೆ ಭೇಟಿ ನೀಡಿ ಅಲ್ಲಿನ
ಕಪಾಟಿನಲ್ಲಿರುವ ನಿಜವಾದ 'ಪ್ರುಡೆನ್ಷಿಯಲ್ ಕಪ್' ಎದುರು ಹೋಗಿ ನಿಂತರೆ
ರೋಮಾಂಚನದ ಅಲೆ ಏಳುತ್ತದೆ. ಅದೊಂದು ಇತಿಹಾಸದ ಅಧಿಕೃತ ಭಂಡಾರ.
ಹೌದು. ಎಂಸಿಸಿ ಮ್ಯೂಸಿಯಂ ಪ್ರಪಂಚದಲ್ಲಿನ ಅತ್ಯಂತ ಹಳೆಯದಾದ ಹಾಗೂ
ಅತ್ಯಂತ ಸುಸಜ್ಜಿತವಾದ ಕ್ರಿಕೆಟ್ ಮ್ಯೂಸಿಯಂ. ಸುಮಾರು 140 ವರ್ಷಗಳಿಂದ
ಇಲ್ಲಿರುವ ಅಮೂಲ್ಯವಾದ ಕ್ರಿಕೆಟ್ ಸ್ಮರಣಿಕೆಗಳನ್ನು ಪ್ರಪಂಚದ ವಿವಿಧ
ಮೂಲೆಯಿಂದ ಸಂಗ್ರಹಿಸಲಾಗಿದೆ. ಭಾರತೀಯರ ಪಾಲಿಗೆ ಇಲ್ಲಿರುವ 'ಪ್ರುಡೆನ್ಷಿಯಲ್
ಕಪ್' ಆತ್ಮೀಯವಾದರೆ, ವೆಸ್ಟ್ ಇಂಡೀಸ್ ಮೂಲದವರಿಗೆ ಮಾಲ್ಕಂ ಮಾರ್ಷಲ್
ಟ್ರೋಫಿ ಪ್ರೀತಿ ಪಾತ್ರವಾಗುತ್ತದೆ. ಇನ್ನು ಸಾಂಪ್ರದಾಯಿಕ
ಎದುರಾಳಿಗಳಾದ ಇಂಗ್ಲೆಂಡ್- ಆಸ್ಟ್ರೇಲಿಯದ ಕ್ರಿಕೆಟ್ ಅಭಿಮಾನಿಗಳ
ಪಾಲಿಗೆ 'ಆಷಸ್' ಕರಂಡಕ ಅಚ್ಚುಮೆಚ್ಚು.
ಇಲ್ಲಿರುವ ಸ್ಮರಣಿಕೆಗಳು ಕೇವಲ ಪ್ರದರ್ಶನದ ವಸ್ತುಗಳಲ್ಲ. ಅವು ಒಂದೊಂದು
ಒಂದೊಂದು ಕಥೆ ಹೇಳುತ್ತವೆ. ಆಷಸ್ ಕರಂಡಕ ಇವುಗಳ ಪೈಕಿ ಅತ್ಯಂತ
ಜನಪ್ರಿಯವಾದರೂ, ಭಾರತದ ಮಧ್ಯಮ ವೇಗದ ಬೌಲರ್ ಡಾ. ಜಹಾಂಗೀರ್ ಖಾನ್ ಅವರ
'ಗುಬ್ಬಚ್ಚಿ' ಕಥೆ ಕೂಡ ಅಷ್ಟೇ ಜನಪ್ರಿಯ. ಭಾರತದ ಪರ ಅಧಿಕೃತ ಟೆಸ್ಟ್
ಆಡಿದ ತಂಡದಲ್ಲಿದ್ದ ಖಾನ್ 1936ರಲ್ಲಿ ಎಂಸಿಸಿ ವಿರುದ್ಧ ಕೌಂಟಿ ಪಂದ್ಯ
ಆಡಿದ ಸಂದರ್ಭ ಅದು. ಅವರು ಎಸೆದ ಚೆಂಡು ಬ್ಯಾಟ್ಸ್‌ಮನ್ ವಂಚಿಸಿ ವಿಕೆಟ್‌ಗೆ
ಬಡಿದು ಬೇಲ್ಸ್ ಎಗರಿಸಿತು. ಕೆಳಗಿದ್ದ ಬೇಲ್ಸ್ ಮೇಲೆತ್ತಲು ಹೋದವರಿಗೆ
ಅಚ್ಚರಿಯೊಂದು ಕಾದಿತ್ತು. ಅಲ್ಲೊಂದು ಗುಬ್ಬಚ್ಚಿಯ ಹೆಣ! ಜಹಾಂಗೀರ್
ಎಸೆದ ಚೆಂಡಿನ ಹೊಡೆತಕ್ಕೆ ಸಿಕ್ಕು ಆ ಗುಬ್ಬಚ್ಚಿ ಪ್ರಾಣತ್ಯಾಗ ಮಾಡಿತು
ಎಂದು ನಂಬಲಾಗಿದೆ. ಆ ಗುಬ್ಬಚ್ಚಿ 'ಸ್ಟಫ್ಡ್' ಆಗಿ ಈಗ ಇಲ್ಲಿನ
ಮ್ಯೂಸಿಯಂನಲ್ಲಿ ಸ್ಥಾನ ಪಡೆದಿದೆ. ಇಲ್ಲೊಂದು ಮಾತು. ಪಕ್ಕಾ ವೃತ್ತಿಪರ
ಭಂಡಾರವಾಗಿರುವ ಎಂಸಿಸಿ ಮ್ಯೂಸಿಯಂನಿಂದ ಕೆಎಸ್‌ಸಿಎ ಕಲಿಯಬೇಕಾದ ಪಾಠಗಳು
ಬಹಳಷ್ಟಿವೆ.
|
ಟಿಎಸ್‌ಐ
|