ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಮುಖಪುಟ ಲೇಖನ :
ಮಂಜಿನ ಪರದೆಯ ಹಿಂದಿನ ಗೆರಿಲ್ಲಾ ಪಡೆ
ರೋಮಾಂಚಕ ಟಿಎಸ್‌ಐ ಎಕ್ಸ್‌ಕ್ಲೂಸಿವ್

ಅಭೇದ್ಯ ದಂಡಕಾರಾಣ್ಯದ ನಡುವೆ ಮಾವೋವಾದಿಗಳೇ ಕಾಡಿನ ರಾಜರು. ಭದ್ರತಾ ಪಡೆ ಮತ್ತು ಆಡಳಿತ ವ್ಯವಸ್ಥೆಯ ಪಾಲಿಗೆ ಕಂಟಕವಾಗಿರುವ ಅವರು ವೃತ್ತಿಪರ ಕ್ರಾಂತಿಕಾರರು ಎಂದು ತಮ್ಮನ್ನು ತಾವೇ ಕರೆದುಕೊಳ್ಳುತ್ತಾರೆ. ಟಿಎಸ್‌ಐನ ಕಾರ್ಯ ನಿರ್ವಾಹಕ ಸಂಪಾದಕ ಸಂಜಯ್ ಬಾಸಕ್ ಮತ್ತು ಛಾಯಾಚಿತ್ರ ವಿಭಾಗದ ಸಹ ಸಂಪಾದಕ ರಂಜನ್ ಬಸು ಹತ್ತು ದಿನಗಳ ಕಾಲ ಆ ಗೆರಿಲ್ಲಾ ಪಡೆಯ ಜೊತೆಯಿದ್ದು 'ಕೊಲೆಗಡುಕ ಯಂತ್ರ'ಗಳ ಮತ್ತೊಂದು ಮುಖದತ್ತ ಬೆಳಕು ಚೆಲ್ಲಿದ್ದಾರೆ.

ಅದು ಚಳಿಗಾಲದ ಮುಂಜಾವು. ದಟ್ಟವಾಗಿ ಹರಡಿದ್ದ ಮಂಜಿನ ಪರದೆಯ ನಡುವೆ ನಿಶ್ಶಕ್ತವಾಗಿದ್ದ ಸೂರ್ಯನ ಕಿರಣಗಳು ಇಣುಕುವ ಯತ್ನ ಮಾಡುತ್ತಿದ್ದವು. ಮೊದಲ ಬಾರಿಗೆ ನಾವು ಆಕೆಯನ್ನು ನೋಡಿದ್ದು ಆಗಲೇ. ಹಸಿರು ಬಣ್ಣದ ಸಮವಸ್ತ್ರ ಧರಿಸಿದ್ದ ಆಕೆ ಪಾಯಿಂಟ್ 303 ರೈಫಲ್ಲನ್ನು ದೃಢವಾಗಿ ಎಡಗೈಯಲ್ಲಿ ಹಿಡಿದುಕೊಂಡಿದ್ದಳು. ಭಯ ಹುಟ್ಟಿಸುವ ಮಾವೋವಾದಿ ಪಡೆಯ ಕಾಮ್ರೆಡ್ ಆಗಿದ್ದ ಆಕೆ ಅತ್ಯಂತ ಅಪಾಯಕಾರಿ ಸೇನಾನಿ. ಕೈಯಲ್ಲಿ ರೈಫಲ್ ಹಿಡಿದೇ ನಮ್ಮ ಮುಂಜಾನೆಯ ಉಪಾಹಾರ, ಅವಲಕ್ಕಿ ತಯಾರಿಯ ಮೇಲ್ವಿಚಾರಣೆ ವಹಿಸಿಕೊಂಡಿದ್ದಳು ಆಕೆ.
ಅದಕ್ಕಿಂತ ಒಂದು ದಿನ ಮೊದಲು, ನಾವು ಬೊಲೆರೊದಲ್ಲಿ ಕೂತು ನಮ್ಮ ಗುರಿಯತ್ತ ಹೊರಟಿದ್ದೆವು. ನಿರ್ಮಾನುಷವಾಗಿದ್ದ ಪಖಾಂಜುರ್ ರಸ್ತೆ ಮಾವೋವಾದಿಗಳ ಕುಖ್ಯಾತ ನೆಲಬಾಂಬ್‌ಗಳಿಗೆ ಹೆಸರುವಾಸಿ. ಅಪಾಯದ ಮಡಿಲ ನಡುವೆ ನಾವು ಛತ್ತೀಸಗಢದ ಕಾಂಕೆರ್ ಜಿಲ್ಲೆಯ ಹಳ್ಳಿಯೊಂದರತ್ತ ಪಯಣ ಬೆಳೆಸಿದ್ದೆವು. ರಾತ್ರಿ ಒಂಬತ್ತು ಗಂಟೆಯಾಗಿತ್ತು. ಸತತವಾಗಿ ಏಳು ಗಂಟೆ ಪ್ರಯಾಣ ಮಾಡಿದ್ದ ನಾವು, ಆ ನಡುವೆ ದುರ್ಗಮ ಕೋಟೆಯಂತಿದ್ದ ಹಲವಾರು ಪೊಲೀಸ್ ಚೌಕಿಗಳನ್ನು ದಾಟಿ ಮುನ್ನಡೆದಿದ್ದೆವು. ಕೊನೆಗೂ ನಾವು ಕೂತಿದ್ದ ವಾಹನ ಮನುಷ್ಯನ ಲವಲೇಷವೂ ಇಲ್ಲದ ಒಂದು ಸ್ಥಳದಲ್ಲಿ ಧುತ್ತೆಂದು ನಿಂತಿತು.
ಕತ್ತಲೆಯ ಕಾನನದ ನಡುವೆ, ಮೌನದ ಗಾಢಾಂಧಕಾರದ ಮಧ್ಯೆ ನಾವು ವಾಹನದೊಳಗೇ ಕಾದು ಕುಳಿತೆವು. ಸ್ವಲ್ಪ ಹೊತ್ತಿನ ಬಳಿಕ ರಸ್ತೆಯ ಪಕ್ಕದಲ್ಲಿನ ಪೊದೆಯ ನಡುವಿನಿಂದ ಒಬ್ಬ ಮನುಷ್ಯ ಹೊರ ಬಂದು ನಮ್ಮ ವಾಹನವೇರಿ ಕೂತ. ಅವನ ಮಾರ್ಗದರ್ಶನದ ನಡುವೆ ನಾವು ಹಳ್ಳಿಯೊಂದನ್ನು ತಲುಪಿದೆವು. ಅಲ್ಲಿಂದ ನಮ್ಮ ರೋಮಾಂಚಕ ಪಯಣ ಆರಂಭವಾಯಿತು. ನಾವೀಗ ಮಾವೋವಾದಿಗಳ ಸಾಮ್ರಾಜ್ಯದ ಹೃದಯ ಭಾಗ ಪ್ರವೇಶಿಸಿಯಾಗಿತ್ತು. ಸ್ವಲ್ಪ ದೂರ ನಡೆದು ಸಾಗಿದ ಮೇಲೆ ಮತ್ತೊಂದು ಗುಪ್ತ ಸ್ಥಳ ತಲುಪಿದೆವು. ನಮ್ಮ ಸಾಮಾನು-ಸರಂಜಾಮಿದ್ದ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಅವರು ಹೇಳಿದ ಬೈಕುಗಳನ್ನೇರಿ ಕೂತೆವು. ಏರು-ತಗ್ಗಿನಿಂದ ಕೂಡಿದ್ದ ಮಣ್ಣಿನ ರಸ್ತೆಯಲ್ಲಿ ನಾವು ಕೂತಿದ್ದ ಬೈಕ್‌ಗಳು ಮುನ್ನುಗ್ಗಿದವು. ಆ ರಸ್ತೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿದ್ದ ಸಾಲ್ ಮರಗಳು, ದಟ್ಟವಾದ ಮುಳ್ಳಿನ ಪೊದೆಗಳು ನಮಗೆ ಸ್ವಾಗತ ಕೋರಿದವು. ಕುಣಿದು, ಕುಣಿದು ಸಾಗುತ್ತಿದ್ದ ನಮ್ಮ ಪಯಣ ನದಿಯೊಂದು ಎದುರಾದಾಗ ತಾತ್ಕಾಲಿಕವಾಗಿ ಕೊನೆಗೊಂಡಿತು. ಸಂಪೂರ್ಣ ಕತ್ತಲಿನ ಸಾಮ್ರಾಜ್ಯದ ನಡುವೆ ನಾವು ಕಾಲಲ್ಲಿದ್ದ ಶೂಗಳನ್ನು ಕಳಚಿ ಎದುರಿದ್ದ ನದಿ ದಾಟಿದೆವು. ಮೊಣಕಾಲವರೆಗೆ ಇದ್ದ ನೀರಿನಲ್ಲಿ ಹೆಜ್ಜೆ ಹಾಕುತ್ತ ಆಚಿನ ದಡ ಸೇರಿದ ಮೇಲೆ ನಾಗರಿಕ ಸಮಾಜ ನಮ್ಮಿಂದ ದೂರವಾದಂತೆ ಭಾಸವಾಯಿತು. ನಮ್ಮನ್ನು ಅಲ್ಲಿದ್ದ ಗುಡಿಸಲೊಂದರ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಲಾಯಿತು.
ಇಲ್ಲಿ ವಿದ್ಯುತ್ ಬೆಳಕಿನ ಸೌಲಭ್ಯ ಇಲ್ಲ ಎಂದು ನಮ್ಮ ಗೈಡ್ ಹೇಳಿದ. ಅದಾದ ನಂತರ 10 ದಿನಗಳ ಕಾಲ ನಾವು ವಿದ್ಯುತ್ ಬೆಳಕನ್ನೇ ಕಾಣಲಿಲ್ಲ. ಅದೂ ಅಲ್ಲದೇ ಸರ್ಕಾರಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮಾವೋವಾದಿಗಳು ಕತ್ತಲೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸತ್ಯವೂ ಅರಿವಿಗೆ ಬಂತು.
ದಟ್ಟ ಕತ್ತಲ ನಡುವಿನ ಆ ಗುಡಿಸಿಲಿನ ಆವರಣದಲ್ಲಿ ಇಬ್ಬರು ಯುವಕರು ಕುಳಿತಿದ್ದರು. ಪುಟ್ಟದಾದ ಬೆಂಕಿ ಹಾಕಿಕೊಂಡು ಚಳಿ ಕಾಯಿಸುತ್ತಿದ್ದ ಅವರನ್ನೇ ನಾವು ನೋಡುತ್ತ ನಿಂತೆವು. ಹಿಂದಿನಿಂದ ಕೇಳಿ ಬಂದ ಲಾಲ್ ಸಲಾಂ ಎಂಬ ಗಡುಸಾದ ಮಹಿಳಾ ದನಿ ನಮ್ಮನ್ನು ಎಚ್ಚರಿಸಿತು. ಉರಿಯುತ್ತಿದ್ದ ಬೆಂಕಿಯ ಬೆಳಕಲ್ಲಿ ಮೂಡಿಬಂದ ಆಕೆ ಷರ್ಟ್ ಮತ್ತು ಕಡು ಹಸಿರಿನ ಪ್ಯಾಂಟ್ ಧರಿಸಿದ್ದರು. ಸೆಲ್ಫ್ ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್) ಎಡಗೈಯಲ್ಲಿ ಹಿಡಿದಿದ್ದ ಆಕೆ, ಬಲಗೈಯನ್ನು ಮುಂದಕ್ಕೆ ಚಾಚಿ, ಲಾಲ್ ಸಲಾಂ ಕಾಮ್ರೇಡ್‌ಗಳೇ ಎಂದು ನಕ್ಕಳು. ನಾವು ಕೂಡ ಅದೇ ರೀತಿಯಲ್ಲಿ ಆಕೆಗೆ ಗೌರವ ಸಲ್ಲಿಸಿದೆವು. ಒಂದು ವಿಭಾಗದ ಕಮಾಂಡರ್ ತಾನು ಎಂದು ಆಕೆ ಸ್ವಯಂ ಪರಿಚಯ ಮಾಡಿಕೊಂಡಳು. ನಮ್ಮ ಪಯಣದ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದ ನಂತರ ಈಗ ವಿಶ್ರಾಂತಿ ತೆಗೆದುಕೊಳ್ಳಿ ಎಂಬ ಆದೇಶ ಹೊರಬಿತ್ತು. ಮಧ್ಯರಾತ್ರಿ ದಾಟಿ ಹೋಗಿತ್ತು. ನಮ್ಮನ್ನು ಗುಡಿಸಿಲ ಒಳಗಿದ್ದ ಕೋಣೆಯೊಂದಕ್ಕೆ ಕರೆದುಕೊಂಡು ಹೋದರು. ಗುಡಿಸಲ ಬಾಗಿಲ ಬಳಿ ಇಬ್ಬರು ಹಸಿರು ಸಮವಸ್ತ್ರ ಧರಿಸಿದ ಯುವಕರು ಕೈಯಲ್ಲಿ ರೈಫಲ್ ಹಿಡಿದು ಕಾವಲಿಗೆ ನಿಂತಿದ್ದರು. ಈಗ ಬಹಳಷ್ಟು ರಾತ್ರಿಯಾಗಿದೆ, ನೀವು ನಿದ್ರೆ ಮಾಡಿ. ನಾಳೆ ನಾವೊಂದು ಸ್ಥಳ ತಲುಪಬೇಕು. ಈಗ ಅಲ್ಲಿಗೆ ಹೊರಡಲು ಸಾಕಷ್ಟು ತಡರಾತ್ರಿಯಾಗಿದೆ ಎಂದು ಆಕೆ ಹೇಳಿದಳು. ನಾವು ತಲುಪಬೇಕಾದ ಸ್ಥಳ ಯಾವುದು? ನಮ್ಮ ಗುರಿ ಯಾವುದು? ಇಂತಹ ಯಾವುದೇ ಪ್ರಶ್ನೆಗಳಿಗೆ ನನ್ನ ಬಳಿ ನಿಖರ ಉತ್ತರವಿರಲಿಲ್ಲ. ನಿಖರ ಉತ್ತರ ಅವರಿಂದ ಅದುವರೆಗೆ ಸಿಕ್ಕಿರಲೂ ಇಲ್ಲ. ಆ ಹಿನ್ನೆಲೆಯಲ್ಲಿ, ನಿಮಗೆ ತೊಂದರೆಯಿಲ್ಲದೇ ಇದ್ದಲ್ಲಿ ಈಗ ಕೂಡ ಅಲ್ಲಿಗೆ ಹೋಗಲು ನಾವು ಸಿದ್ಧರಾಗಿದ್ದೇವೆ ಎಂದು ನಾನು ಹೇಳಿದೆ. ನನ್ನ ಮಾತಿಗೆ ನಗುವಿನ ಉತ್ತರ ನೀಡಿದ ಆಕೆ, ನೀವಿಗ ಮಲಗಿಕೊಳ್ಳಿ ಎಂದು ತಕ್ಷಣ ನಾವಿದ್ದ ಕೋಣೆಯಿಂದ ಹೊರ ನಡೆದಳು.
ಬೆಳಗಿನ ಜಾವ. ಖಾಕಿ ಪ್ಯಾಂಟ್, ಕಪ್ಪು ಷರ್ಟ್ ಧರಿಸಿ ಕೈಯಲ್ಲಿ ಎಕೆ-೪7 ರೈಫಲ್ ಹಿಡಿದಿದ್ದ ಒಬ್ಬ ವ್ಯಕ್ತಿ ಬಂದು ನಮ್ಮನ್ನು ಎಬ್ಬಿಸಿದರು. ನನ್ನ ಹೆಸರು ರಾಮು (ಹೆಸರು ಬದಲಿಸಲಾಗಿದೆ) ಎಂದು ಪರಿಚಯ ಮಾಡಿಕೊಂಡ ಆತ ಏರಿಯ ಕಮಾಂಡರ್ ಅಂತೆ. ಕಳೆದ ರಾತ್ರಿ ನಾವು ಭೇಟಿ ಮಾಡಿದ ಮಹಿಳೆಗಿಂತ ಹಿರಿಯ ರ್‍ಯಾಂಕ್ ಇವನದ್ದು. ಚಹಾ ಮತ್ತು ಬೆಳಗಿನ ಉಪಾಹಾರದ ನಂತರ ನಿಮ್ಮನ್ನು ಕೆಲವು ಕಾಮ್ರೇಡ್‌ಗಳು ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ಸಂದೇಶವನ್ನು ರಾಮು ನೀಡಿದ. ನಾವೆಲ್ಲಿಗೆ ಹೋಗುತ್ತಿದ್ದೇವೆ. ನೀವು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ? ಎಂಬ ಪ್ರಶ್ನೆಗೆ ಆತ, ನನಗೇನೂ ಗೊತ್ತಿಲ್ಲ. ಕಾಮ್ರೇಡ್‌ಗಳು ನಿಮಗೆ ಆ ವಿವರ ನೀಡುತ್ತಾರೆ ಎಂದಷ್ಟೆ ಹೇಳಿದ. ಯಾವುದೇ ಕಾರಣಕ್ಕೆ ಭವಿಷ್ಯದ ಯೋಜನೆ ಏನು, ಮುಂದೆಲ್ಲಿಗೆ, ಮುಂದೇನು ನಡೆಯುತ್ತದೆ...ಮುಂತಾದ ವಿವರಗಳನ್ನು ಕಾಮ್ರೇಡ್‌ಗಳು ಬಿಟ್ಟು ಕೊಡುವುದಿಲ್ಲ.
ಇಂತಹ ಸನ್ನಿವೇಶದ ನಡುವೆ ಮೊತ್ತ ಮೊದಲ ಬಾರಿಗೆ ನಾವು ಮಂಜಿನ ಪರದೆಯ ನಡುವೆ ಪ್ರತ್ಯಕ್ಷವಾದ ರೇವತಿ (ಹೆಸರು ಬದಲಿಸಲಾಗಿದೆ)ಯನ್ನು ನೋಡಿದ್ದು. ನಮ್ಮನ್ನು ಮುಂದಿನ ಆರು ದಿನಗಳ ಕಾಲ ಮುನ್ನಡೆಸಿಕೊಂಡು ಹೋಗಲಿದ್ದ ರೇವತಿ ಬೆಳಗಿನ ಉಪಾಹಾರದ ಸಿದ್ಧತೆಯಲ್ಲಿ ತೊಡಗಿದ್ದಳು. ಉಪಾಹಾರ ಮುಗಿಸಿ ನಾವು ಆ ಸ್ಥಳ ಬಿಟ್ಟು ಮುಂದಿನ ಪಯಣಕ್ಕೆ ಸಿದ್ಧವಾದೆವು. ಆಗ ಏರಿಯ ಕಮಾಂಡರ್ ರಾಮು ಯಾವುದೇ ಕಾರಣಕ್ಕೆ ಹೈಕಮಾಂಡ್ ಅಥವಾ ಕೇಂದ್ರ ಸಮಿತಿಯ ಪೂರ್ವಾನುಮತಿ ಇಲ್ಲದೇ ಕಾಮ್ರೇಡ್‌ಗಳ ಛಾಯಾಚಿತ್ರ ಮಾತ್ರ ತೆಗೆಯಬೇಡಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ. ಸಿಪಿಐ (ಮಾವೋವಾದಿ)ಯ ಎಲ್ಲ ನಿರ್ಧಾರಗಳನ್ನೂ ಕೈಗೊಳ್ಳುವ ಅತ್ಯುನ್ನತ ಕೇಂದ್ರ ಸಮಿತಿ (ಸಿಸಿ)ಯ ಕೆಲವು ಸದಸ್ಯರನ್ನು ಕೂಡ ನಾವು ಭೇಟಿ ಮಾಡುವ ಸಾಧ್ಯತೆಯಿದೆ ಎಂಬ ಗುಟ್ಟನ್ನು ರಾಮು ಬಿಟ್ಟುಕೊಟ್ಟ.
ಫೆಬ್ರುವರಿ 5. ಬೆಳಗಿನ ಜಾವ 6.30. ದಟ್ಟವಾಗಿ ಮುಸುಕಿದ್ದ ಮಂಜಿನ ನಡುವೆ ನಮ್ಮ ದಂಡಕಾರಣ್ಯ ಯಾತ್ರೆ ಆರಂಭವಾಯಿತು. ರೇವತಿ ಮತ್ತು ಅವಳಂತೆಯೇ ಕಡು ಹಸಿರು ಬಣ್ಣದ ಸಮವಸ್ತ್ರ ಧರಿಸಿದ್ದ ಮೂವರ ನಡುವೆ ನಾವಿಬ್ಬರು ಹೆಜ್ಜೆ ಹಾಕಲಾರಂಭಿಸಿದೆವು. ಆನಂತರ ಹತ್ತು ದಿನಗಳ ಕಾಲ ಮಾವೋವಾದಿಗಳ ಮಡಿಲಲ್ಲಿ ಕಳೆದ ನಾವು ಅವರ ಮಾನವೀಯ ಮುಖದ ಪರಿಚಯ ಕೂಡ ಮಾಡಿಕೊಂಡೆವು. ಅದು ಕೊಲೆಗಡುಕ ಯಂತ್ರಗಳ ಮಾನವೀಯ ಮುಖ!
'ಲಾಲ್ ಸಲಾಂ' ನಂತರ ರೇವತಿ, ಮೂರು ಗಂಟೆಗಳ ಕಾಲ ನಾವು ನಡೆಯಬೇಕು ಎಂದು ಹೇಳಿದಳು. ಮಾವೋವಾದಿಗಳು ಎಂದೂ ಕಿಲೋಮೀಟರ್ ಲೆಕ್ಕದಲ್ಲಿ ದೂರವನ್ನು ಲೆಕ್ಕ ಹಾಕುವುದಿಲ್ಲ. ಏಕೆಂದರೆ ಈ ಕಗ್ಗಾಡಿನಲ್ಲಿ ಆ ಲೆಕ್ಕಾಚಾರ ಹಾಕಿದರೆ, ಲೆಕ್ಕವೇ ತಪ್ಪಿ ಹೋಗುತ್ತದೆ. ಆ ಕಾರಣದಿಂದಲೇ ಅವರು ಎರಡು ಸ್ಥಳಗಳ ನಡುವಿನ ದೂರವನ್ನು ಸಮಯದ ಆಧಾರದ ಮೇಲೆ ಲೆಕ್ಕ ಹಾಕುತ್ತಾರೆ. ಅವರ ಅಂದಾಜಿನ ಪ್ರಕಾರ ಒಬ್ಬ ವ್ಯಕ್ತಿ ಒಂದು ಗಂಟೆಯಲ್ಲಿ 10 ಕಿ.ಮೀ. ದೂರ ಕ್ರಮಿಸಬಹುದು. ಅದೂ ದಂಡಕಾರಣ್ಯದ ದಟ್ಟ ಕಾಡಿನ ಕಲ್ಲುಮುಳ್ಳಿನ, ನದಿಪಾತ್ರದ, ಬೆಟ್ಟ-ಗುಡ್ಡಗಳ ಹಾದಿಯಲ್ಲಿ.
ಭುಜದ ಮೇಲೆ ಪಾಯಿಂಟ್ 303 ರೈಫಲ್. ಆರು ಗ್ರೇನೆಡ್ ಮತ್ತು 20 ಗುಂಡುಗಳಿದ್ದ ಎದೆ ಪಟ್ಟಿಯನ್ನು ತೊಟ್ಟಿದ್ದ ರೇವತಿ ನಮ್ಮ ತಂಡವನ್ನು ಮುನ್ನಡೆಸಿದಳು. ಆಕೆಯ ಬಗಲಲ್ಲಿ ಇದ್ದ ಸಣ್ಣ ಚೀಲದ ಮೇಲೆ ಪಿಎಲ್‌ಜಿಎ (ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ) ಎಂದು ಬರೆದಿತ್ತು. ಆ ಚೀಲದಲ್ಲಿ ತೀರಾ ಅಗತ್ಯ ವಸ್ತುಗಳಿದ್ದವು. ಅವುಗಳೆಂದರೆ ಎರಡು ಸೋಪು (ಒಂದು ಲೈಫ್‌ಬಾಯ್ ಮತ್ತು ಒಂದು ರಿನ್), ತೆಂಗಿನ ಎಣ್ಣೆ ಬಾಟಲ್, ಟವಲ್, ವ್ಯಾಸಲೀನ್ (ಚಳಿಗಾಲವಾದ್ದರಿಂದ), ಡೆಟ್ಟಾಲ್, ಟಾರ್ಚ್ ಮತ್ತು ಹೊದಿಕೆ. ನಮ್ಮ ಮುಂದೆ ರೇವತಿ ಮತ್ತು ಮತ್ತೊಬ್ಬ ಮಹಿಳಾ ಕಾಮ್ರೇಡ್ ಇದ್ದರೆ ಹಿಂದೆ ಇಬ್ಬರು ಪುರುಷ ಕಾಮ್ರೇಡ್‌ಗಳು ಹಿಂಬಾಲಿಸುತ್ತಿದ್ದರು. ಪ್ರತಿಯೊಬ್ಬರೂ ಸುಸಜ್ಜಿತ ಶಸ್ತ್ರಧಾರಿಗಳಾಗಿದ್ದರು ಎನ್ನಲ್ಲಡಿಯಿರಲಿಲ್ಲ. ಸುಮಾರು ಒಂದು ಗಂಟೆ ನಿರಂತರವಾಗಿ ನಡೆದ ನಂತರ ನಾವು ಏದುಸಿರು ಬಿಡಲಾರಂಭಿಸಿದೆವು. ನಮ್ಮ ಬೆನ್ನ ಮೇಲಿದ್ದ ಹೊರೆ ಸಮಯ ಕಳೆದಂತೆ ಭಾರವಾಗತೊಡಗಿದವು. ನಾವು ಸುಧಾರಿಸಿಕೊಳ್ಳುತ್ತಲೇ ಕಾಲೆಳೆಯುತ್ತಾ ಸಾಗಿದರೆ, ಕಾಮ್ರೇಡ್‌ಗಳು ಚಿರತೆಯಂತೆ ಮುನ್ನುಗ್ಗುತ್ತಿದ್ದರು. ಅದೂ ಸಮತಟ್ಟಾಗಿರದ ಭತ್ತದ ಗದ್ದೆಗಳ ಅಂಚು, ದಟ್ಟವಾದ ಕಾಡಿನ ನಡುವೆ ಎಗ್ಗಿಲ್ಲದ ಪಯಣ. ನಡುವೆ ಅವರ ಕಣ್ಣುಗಳು ಎಲ್ಲಾದರೂ ಶತ್ರುಗಳು ಅಡಗಿ ಕೂತಿದ್ದಾರೆಯೇ ಎಂದು ಹುಡುಕುತ್ತಿದ್ದವು.
ಮೂರು ಗಂಟೆಗಳ ಕಾಲ ಕಷ್ಟಕರವಾದ ಹಾದಿ ಸವೆಸಿದ ನಂತರ ನಾವು ಕಾಡಿನಂಚಿನಲ್ಲಿದ್ದ ಒಂದು ಹಳ್ಳಿಯ ಹೊರ ಭಾಗವನ್ನು ತಲುಪಿದೆವು. ಮಾವೋವಾದಿಗಳು ಯಾವಾಗಲೂ ಹಳ್ಳಿಯ ಹೊರಭಾಗದ ಕಾಡಂಚಿನಲ್ಲಿ ತಮ್ಮ ಶಿಬಿರ ಹೂಡಿರುತ್ತಾರೆ. ಏಕೆಂದರೆ ಎಲ್ಲಾದರೂ ಭದ್ರತಾ ಪಡೆಯವರು ದಾಳಿ ಮಾಡಿದರೆ ತಕ್ಷಣ ಕಾಡಲ್ಲಿ ಮರೆಯಾಗಲು ಸಾಧ್ಯ ಎನ್ನುವ ಕಾರಣದಿಂದ. ನಮ್ಮನ್ನು ಹಳ್ಳಿಯ ಹೊರ ಭಾಗದಲ್ಲಿದ್ದ ಗದ್ದೆಗಳ ನಡುವೆ ರಾಶಿ ಹಾಕಲಾಗಿದ್ದ ಬಣವೆಗಳಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು. ಸುತ್ತಲೂ ಬೇಲಿ ಹಾಕಿ ಅಲ್ಲಿ ಬಣವೆಗಳನ್ನು ರಾಶಿ ಹಾಕಲಾಗಿತ್ತು. ನಡುವೆ ಹುಲ್ಲಿನ ತೆರೆದ ಮಾಡಿನಡಿಯಲ್ಲಿ ಒಂದು ಮಂಚವಿತ್ತು. ನಾವು ಮಂಚದ ಮೇಲೆ ಕುಸಿದು ಬಿದ್ದೆವು. ಆದರೆ ಕಾಮ್ರೇಡ್‌ಗಳು ಉಸಿರಾಡಲು ಕೂಡ ವಿಶ್ರಾಂತಿಯ ಮೊರೆ ಹೋಗಲಿಲ್ಲ. ಒಬ್ಬ ಯುವತಿ ನಮ್ಮ ಕಾವಲಿಗೆ ನಿಂತಳು. ರೇವತಿ ಜೊತೆಯಲ್ಲಿ ಇನ್ನುಳಿದ ಇಬ್ಬರು ಯುವಕರು ಹಳ್ಳಿಯೊಳಕ್ಕೆ ಹೋದರು.
ಹೀಗೆ ಮಾವೋವಾದಿಗಳು ಹಳ್ಳಿಯಂಚಿನಲ್ಲಿ ಶಿಬಿರ ಹೂಡಿದ ಪ್ರತಿಯೊಂದು ಸಂದರ್ಭದಲ್ಲಿಯೂ, ಆ ಹಳ್ಳಿಗಳಲ್ಲಿ ವಾಸಿಸುವ 'ಜನಸೇನೆ'ಯ ಸದಸ್ಯರು ಇವರಿಗೆ ಅಗತ್ಯವಾದ ಅಕ್ಕಿ-ಬೇಳೆ, ತರಕಾರಿ ಮತ್ತು ಸಾಂಬಾರು ಪದಾರ್ಥ ಒದಗಿಸುತ್ತಾರೆ. ಮಾವೋವಾದಿ ಪಡೆ ಹಳ್ಳಿಗಳ ಅಂಚಿನಲ್ಲಿ ತಾತ್ಕಾಲಿಕ ಶಿಬಿರ ಹೂಡಿ, ಅಡುಗೆ ಮಾಡುವ ಸಂದರ್ಭದಲ್ಲಿ ಹಳ್ಳಿಯೊಳಗಿರುವ 'ಜನಸೇನೆ'ಯ ಸದಸ್ಯರನ್ನೂ ಭೋಜನ ಕೂಟಕ್ಕೆ ಬರುವಂತೆ ಆಹ್ವಾನಿಸುತ್ತಾರೆ. ಆಗ 'ಜನಸೇನೆ'ಯಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಕೂಡ ತಾತ್ಕಾಲಿಕ ಶಿಬಿರಕ್ಕೆ ಬಂದು ಭೋಜನ ಕೂಟದಲ್ಲಿ ಭಾಗವಹಿಸುತ್ತಾರೆ. ಅಡುಗೆ ಮಾಡಲು ಬೇಕಾದ ಪಾತ್ರೆಗಳನ್ನು 'ಜನಸೇನೆ'ಯ ಸದಸ್ಯರೇ ಒದಗಿಸುತ್ತಾರೆ. ಅಂತಹ ವಾತಾವರಣ ನಡುವೆ ನಾವು ಮಂಚದ ಮೇಲೆ ಜೀವ ಪಡೆಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ರೇವತಿ ಮತ್ತು ಉಳಿದಿಬ್ಬರು ಕಾಮ್ರೇಡ್‌ಗಳು ಪಾತ್ರೆ-ಪಗಡೆ ಹಿಡಿದುಕೊಂಡು ಹಳ್ಳಿಯಿಂದ ವಾಪಸಾದರು. ಜೊತೆಯಲ್ಲಿದ್ದ ಹಳ್ಳಿಗರ ಕೈಯಲ್ಲಿ ಅಡುಗೆ ಮಾಡಲು ಅಗತ್ಯವಾದ ಎಲ್ಲ ರೇಷನ್ ಮತ್ತು ಪರಿಕರಗಳು ಇದ್ದವು. ನಮ್ಮ ಆ ದಿನದ ಅಡುಗೆ ಸಿದ್ಧ ಮಾಡುವ ಸಲುವಾಗಿ ಕಾಮ್ರೇಡ್‌ಗಳು ಕಟ್ಟಿಗೆ ಸಂಗ್ರಹಿಸಲು ಹೊರಟರು.
ಮಾವೋವಾದಿ ಪಡೆ ಕಾಡಿನಲ್ಲಿ ವಾಸವಾಗಿದ್ದರೂ, ಶುಚಿತ್ವದ ಬಗ್ಗೆ ಅವರಿಗೆ ಅಪಾರ ಕಾಳಜಿಯಿದೆ. ರೇವತಿ ಮತ್ತು ಆಕೆಯ ಸಹವರ್ತಿ ಕೂಡಲೇ ತಂದಿದ್ದ ಪಾತ್ರೆಗಳನ್ನು ಚೊಕ್ಕವಾಗಿ ತೊಳೆದು, ಒಂದು ಪಾತ್ರೆಯಲ್ಲಿ ನೀರು ಕುದಿಸಲು ಇಟ್ಟರು. ಈಗ ಅನ್ನ ಮಾಡುತ್ತೀರಾ? ಎಂದು ನಾನು ಕೇಳಿದೆ. ಇಲ್ಲ ಕುಡಿಯೋದಿಕೆ ನೀರು ಕುದಿಸುತ್ತಾ ಇದೀನಿ ಎಂದು ರೇವತಿ ಹೇಳಿದಳು. ಯಾವುದೇ ಕಾರಣಕ್ಕೆ ನೀರನ್ನು ಅವರು ಕುದಿಸದೇ ಕುಡಿಯುವುದಿಲ್ಲ. ಅದು ಕೊಳವೆ ಬಾವಿ ಅಥವಾ ಹರಿವ ನೀರು...ಯಾವುದೇ ಆಗಿರಲಿ ಅದನ್ನು ಕುದಿಸಿಯೇ ಇವರು ಕುಡಿಯುವುದು. ರಾಜ್ಯ ಸರ್ಕಾರ ಇಲ್ಲಿ ತೊಡಿಸಿರುವ ಕೊಳವೆ ಬಾವಿಗಳಲ್ಲಿನ ನೀರಿನಲ್ಲಿ ಕಬ್ಬಿಣದ ಅಂಶ ಬಹಳವಿದೆ. ಆ ಕಾರಣದಿಂದಲೇ ಹಳ್ಳಿಗರು ಅನಾರೋಗ್ಯ ಪೀಡಿತರಾಗುತ್ತಾರೆ. ಅದೂ ಅಲ್ಲದೇ ಕಲುಷಿತ ನೀರಿನ ಮೂಲಕ ಉದ್ಭವವಾಗುವ ಹೆಪಟೈಟಿಸ್ ಎ ಮತ್ತು ಬಿ ನಂತಹ ರೋಗಗಳು ಇವರನ್ನು ನಿರಂತರವಾಗಿ ಕಾಡುತ್ತಿರುತ್ತವೆ. ನೀರನ್ನು ಕುದಿಸಿ ಕುಡಿಯಿರಿ ಎಂದು ತಿಳಿ ಹೇಳುವ ಸಲುವಾಗಿಯೇ ಮಾವೋವಾದಿಗಳು ಹಳ್ಳಿಗಳಲ್ಲಿ ಪ್ರಚಾರಾಂದೋಲನ ಕೂಡ ಕೈಗೊಂಡಿದ್ದಾರಂತೆ.
ಹೇಯ್! ಏಳಿ! ಅಲ್ಲಿಂದ ಮೇಲೆ ಎದ್ದೇಳಿ ಜೊತೆಯಲ್ಲಿದ್ದ ಯುವಕ ಜೋರಾಗಿ ಕೂಗಿ ಕೊಂಡಾಗ ನಾವು ಅದುರಿ ಹೋದೆವು. ನನ್ನ ಸ್ನೇಹಿತ ಅಲ್ಲಿಯೇ ರಾಶಿ ಹಾಕಿದ್ದ ಬಣವೆಯ ಮೇಲೆ ಅಡ್ಡಲಾಗಿ ಹೊರಳಾಡುತ್ತಿದ್ದರು. ಅದನ್ನು ಕಂಡವನೇ ಆ ಯುವ ಕಾಮ್ರೇಡ್ ಕೂಗು ಹಾಕಿದ್ದ. ಕಾರಣ! ಆ ಬಣವೆಯೊಳಗೆ ಅವರು ಒಂದಿಷ್ಟು ಗ್ರೆನೇಡ್, ಶಸ್ತ್ರಾಸ್ತ್ರ ಹಾಗೂ ಇನ್ನಿತರ ವಸ್ತುಗಳನ್ನು ಹುದುಗಿಸಿಟ್ಟಿದ್ದರು. ಅದರ ಮೇಲೆ ನನ್ನ ಗೆಳೆಯ ಹೊರಳಾಡುತ್ತಿದ್ದರು. ಅದೇ ಕೊನೆ. ನಂತರ ಅವರ ಜೊತೆಯಿದ್ದ ಯಾವುದೇ ಕ್ಷಣ ನಾವು ಬಣವೆಗಳ ಕಡೆ ಸುಳಿಯಲಿಲ್ಲ. ನಂತರ ಅದೇ ಬಣವೆಯ ಕೆಳಗಿದ್ದ ನೀಲಿ ಬಣ್ಣದ ಟಾರ್ಪಲಿನ್ ಎಳೆದ ಅವರು ಅದನ್ನು ಬೇರೆ-ಬೇರೆಯಾಗಿ ಕತ್ತರಿಸಲಾರಂಭಿಸಿದರು. ಟಾರ್ಪಲಿನ್ ಕತ್ತರಿಸುತ್ತಿರುವುದು ಏಕೆ? ಎಂಬ ನಮ್ಮ ಪ್ರಶ್ನೆಗೆ, ಮಲಗಿಕೊಳ್ಳಲು ಎಂಬ ಉತ್ತರ ಸಿಕ್ಕಿತು. ಮಂಚದ ಮೇಲೆ ಮಲಗಿದ್ದ ನಾವು, ನಮಗೆ ಇದೇ ಆರಾಮವಾಗಿದೆ. ಸುಮ್ಮನೇ ತೊಂದರೆ ತೆಗೆದುಕೊಳ್ಳಬೇಡಿ ಎಂದಾಗ ರೇವತಿ ನಕ್ಕು ಬಿಟ್ಟಳು. ಈಗಲ್ಲ. ರಾತ್ರಿ ಮಲಗೋದಿಕ್ಕೆ. ಈಗ ನಾವು ಇಲ್ಲಿಂದ ಹೊರಡಬೇಕು ಎಂದು ಆಕೆ ವಿವರ ನೀಡಿದಳು. ಆ ದಿನದ ನಂತರ ಆ ಟಾರ್ಪಲಿನ್ ತುಂಡು (ಜ್ಹಿಲ್ಲಿ)ಗಳು ನಮ್ಮ ಪಾಲಿಗೆ 'ಸ್ಲೀಪಿಂಗ್ ಬ್ಯಾಗ್'ಗಳಾಗಿ ಪರಿವರ್ತನೆಗೊಂಡವು. ಮಹಿಳಾ ಕಾಮ್ರೇಡ್‌ಗಳ ಜೊತೆ ಹೆಚ್ಚೆಚ್ಚು ಸಮಯ ಕಳೆದಂತೆ, ಹೆಣ್ಣು ಹೃದಯದ ನಡುವಿನ ಕಾಠಿಣ್ಯ, 'ಜನಸಾಮಾನ್ಯರ ಬಿಡುಗಡೆ'ಗಾಗಿ ಅವರಿಗಿದ್ದ ತುಡಿತ, 'ಸಾಮ್ರಾಜ್ಯ ಶಾಹಿ ಆಡಳಿತದ ವಿರುದ್ಧ ದೀರ್ಘ ಕಾಲೀನ ಯುದ್ಧ'ದ ಮೇಲಿದ್ದ ಮೋಹ... ಎಲ್ಲವೂ ನಮ್ಮ ಅರಿವಿಗೆ ಬರಲಾರಂಭಿಸಿದವು.
ಫಲ ನೀಡದ ಇಂತಹ ಸಾವಿನೊಂದಿಗಿನ ಸೆಣಸಾಟದ ಆಟ ಏಕೆ ಬೇಕು ಎಂದು ನಾನು ಒಮ್ಮೆ ಕೇಳಿಯೇ ಬಿಟ್ಟೆ. ಆಗ ರೇವತಿ ಹುಬ್ಬೇರಿ ಬಿಟ್ಟಿತು. ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ನಾವು ಯುದ್ಧ ಮಾಡಲೇಬೇಕು. ವಿರೋಧಿಗಳನ್ನು ಕೊಲ್ಲಲೇಬೇಕು. ನಾವು ಕೂಡ ಸಾಯಬೇಕು ಎಂಬ ಉತ್ತರ ಆಕೆಯಿಂದ ಬಂತು. ಯಾವ ಕೈಗಳು ಪಾತ್ರೆ ತೊಳೆದು, ಅಡುಗೆ ಮಾಡಿ, ಕಸ ಗುಡಿಸಿವೆಯೋ ಅವೇ ಕೈಗಳು ಕೊಲೆ ಮಾಡಲು ಹಿಂಜರಿಯಲಾರವು, ಎಂಥಾ ದುರ್ಗಮ ಅರಣ್ಯದಲ್ಲಾದರೂ ಹಗಲು ರಾತ್ರಿ ಭೇದವಿಲ್ಲದೆ ಜೀವನ ನಡೆಸಬಲ್ಲವು ಎನ್ನುವುದು ನಾವು ಕಂಡುಕೊಂಡ ಸತ್ಯ.
25 ವರ್ಷ ವಯಸ್ಸಿನ ರೇವತಿ ಒಂದು ಪ್ರದೇಶದ ಕಮಾಂಡರ್. ಆಕೆ ನಿಖರ ಗುರಿ ಇಡುವ ಶೂಟರ್ ಮಾತ್ರವಲ್ಲ ಒಬ್ಬ ಸ್ಫೋಟಕ ತಜ್ಞೆ ಕೂಡ. ಆಕೆಯ ಬಳಿ ಪಾಯಿಂಟ್ 303 ರೈಫಲ್ ಅಲ್ಲದೇ ನೆಲಬಾಂಬ್ ಸ್ಫೋಟಿಸಲು ಅಗತ್ಯವಾದ ಬಿಲ್ಟ್ ಮೀಟರ್ ಕೂಡ ಇತ್ತು. ಜೊತೆಗೆ ಟಾರ್ಗೆಟ್ ಬೋರ್ಡ್ ಬೇರೆ. ಇವೆಲ್ಲ ಆಕೆಯ 'ಬ್ಯಾಟಲ್ ಕಿಟ್'ನ ಅವಿಭಾಜ್ಯ ಅಂಗಗಳಾಗಿದ್ದವು. ಮಾವೋವಾದಿಗಳ ಬಳಿಯಲ್ಲಿರುವ ಎಲ್ಲ ಸ್ಫೋಟಕಗಳು ಒಂದೋ ಭದ್ರತಾ ಪಡೆಯ ಮೇಲೆ ದಾಳಿ ಮಾಡಿ ದೋಚಿದವು ಅಥವಾ ಸ್ಥಳೀಯವಾಗಿ ತಯಾರಿಸಿದವು. ಯಾವ ಕಾಮ್ರೇಡ್ ಬಳಿ ಬಂದೂಕು ಇರುವುದಿಲ್ಲವೋ, ಅವರ ಬಳಿ ಬಿಲ್ಲು-ಬಾಣಗಳಿರುತ್ತವೆ. ಅವು ಬಂದೂಕುಗಳಿಗಿಂತ ಅಪಾಯಕಾರಿ. ಈ ಭೀಕರ ಯುದ್ಧ ಭೂಮಿಯಲ್ಲಿ ಬಾಣಗಳೇ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿವೆ.
ಊಟ ಮಾಡಿ ಬನ್ನಿ ಪ್ರೀತಿಯ ಕರೆ ಬಂತು. ಕ್ರಮೇಣ ನಾವು ಸೇವಿಸುವ ಆಹಾರದ ಪ್ರಮಾಣವೇ ಅವರಿಗೆ ತಮಾಷೆಯಾಗಿ ಕಾಣಲಾರಂಭಿಸಿತು. ನೀವು ಎಷ್ಟೊಂದು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುತ್ತೀರಿ? ಎಂದು ಪದೇ, ಪದೇ ನಮ್ಮನ್ನು ಕೇಳಲಾರಂಭಿಸಿದರು. ಗಂಟೆಗಟ್ಟಲೇ ಕಡಿದಾದ ಹಾದಿಯಲ್ಲಿ ನಡೆದ ಮೇಲೆ ನಾವು ಕುಸಿದು ಕೂತರೆ, ಈ 'ವೃತ್ತಿಪರ ಕ್ರಾಂತಿಕಾರಿಗಳು' ಕಡಿಮೆ ಆಹಾರ ಸೇವಿಸಿದ್ದರ ಪರಿಣಾಮವೇ ಇದು ಎಂದು ನಮ್ಮನ್ನು ಟೀಕಿಸಲಾರಂಭಿಸದರು. ಚೆನ್ನಾಗಿ ತಿನ್ನಿ, ಜೋರಾಗಿ ನಡೆಯಿರಿ ಎನ್ನುವುದು ಅವರ ಉಳಿವಿನ ಮಂತ್ರ. ಅತ್ಯಂತ ಉನ್ನತ ಮಟ್ಟದಲ್ಲಿನ ಕಮಾಂಡರ್‌ಗಳನ್ನು ಬಿಟ್ಟರೆ ಉಳಿದಂತೆ ಮಾವೋವಾದಿ ಪಡೆಯಲ್ಲಿ ಇರುವುದು 15ರಿಂದ 25 ವರ್ಷ ವಯಸ್ಸಿನೊಳಗಿನ ಕಾಮ್ರೇಡ್‌ಗಳು. ಇನ್ನು ಅನಾಥರಾದ ಕೆಲವು ಮಕ್ಕಳು ಕೂಡ ಈ ಪಡೆಯಲ್ಲಿ ಇದ್ದಾರೆ. ಅವರ ಪೋಷಕರು ಒಂದೋ ಸಹಜ ಸಾವಿಗೀಡಾಗಿದ್ದರು ಅಥವಾ ಪೊಲೀಸ್ ವಿರುದ್ಧದ ಹೋರಾಟದಲ್ಲಿ ಜೀವ ತೆತ್ತಿದ್ದರು. ಇಂತಹ ಅನಾಥ ಮಕ್ಕಳು ಮಾವೋವಾದಿ ಪಡೆಯೊಂದಿಗೆ ಓಡಾಡುತ್ತಿರುತ್ತಾರೆ.
ನಮ್ಮ ಹೋರಾಟಕ್ಕಾಗಿ ನಾವು ಅವರನ್ನು ಬಳಸಿಕೊಳ್ಳು ವುದಿಲ್ಲ. ಬದಲಾಗಿ ನಾವು ಅವರಿಗೆ ಸೂಕ್ತ ಶಿಕ್ಷಣ ನೀಡಲು ಯತ್ನಿಸುತ್ತೇವೆ ಎಂದು ಕೇಂದ್ರ ಸಮಿತಿಯ ಸದಸ್ಯ ಸೋನು ನಂತರ ನನ್ನ ಬಳಿ ಸ್ಪಷ್ಟನೆ ನೀಡಿದರು. ಮಾವೋ ಇತಿಹಾಸವು ಬುಡಕಟ್ಟು ಜನರ ಸ್ವಾತಂತ್ರ್ಯಕ್ಕೆ ಹೋರಾಡುವಂತೆ ಮತ್ತು ನೆಹರು-ಗಾಂಧಿ ತತ್ವವನ್ನು ವಿರೋಧಿಸುವಂತೆ ಅಲ್ಲಿನ ಮಕ್ಕಳನ್ನು ಹುರಿದುಂಬಿಸುತ್ತಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷಗಳಾದ ಸಿಪಿಐ (ಎಂ) ಹಾಗೂ ಸಿಪಿಐಗಳನ್ನು ಅವರು 'ಫ್ಯಾಸಿಸ್ಟ್ ಶಕ್ತಿ'ಗಳು ಎಂದು ಸಂಬೋಧಿಸುತ್ತಾರೆ. ಅವರ ಪ್ರಕಾರ 'ಕೇವಲ ನಕ್ಸಲೀಯರು ಮಾತ್ರ ನಿಜವಾದ ದೇಶ ಭಕ್ತರು.' ಮಾವೋವಾದಿಗಳ ತತ್ವ-ಸಿದ್ಧಾಂತಗಳನ್ನು ಪ್ರಚುರ ಪಡಿಸುವ ಪ್ರಮುಖ ಸಂಸ್ಥೆಯೆಂದರೆ 'ಚೇತನ ನಾಟ್ಯ ಮಂಚ್' (ಸಿಎನ್‌ಎಂ).
ಎರಡನೇ ದಿನ ಮಧ್ಯಾಹ್ನದ ಊಟ ಮುಗಿಸಿದ ಮೇಲೆ, ರೇವತಿ ನಾವು ಇಲ್ಲಿಂದ ಇನ್ನು ಸ್ವಲ್ಪ ಹೊತ್ತಿನ ನಂತರ ಹೊರಡಬೇಕು. ಈಗ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದಳು. ನಿಗದಿಯಾದ ಪ್ರಕಾರ ನಾವು ಮಧ್ಯಾಹ್ನ 2.30ಕ್ಕೆ ನಮ್ಮ ಪಯಣ ಮುಂದುವರಿಸಬೇಕಿತ್ತು. ಸಾಮಾನ್ಯವಾಗಿ ಮಾವೋವಾದಿಗಳು ಪ್ರತಿ ದಿನ ಎರಡು ಹಂತಗಳಲ್ಲಿ ತಮ್ಮ ಪ್ರಯಾಣ ಮಾಡುತ್ತಾರೆ. ಬೆಳಿಗ್ಗೆ 6.30ರಿಂದ 10.00 ಗಂಟೆಯವರೆಗಿನದು ಮೊದಲ ಹಂತ. ಎರಡನೇ ಹಂತದ ನಡಿಗೆ ಆರಂಭವಾಗುವುದು ಮಧ್ಯಾಹ್ನ 2.30ರಿಂದ. ಪೊಲೀಸ್ ಅಥವಾ ಭದ್ರತಾ ಪಡೆ ಸಾಮಾನ್ಯವಾಗಿ ಬೆಳಿಗ್ಗೆ ೯.30ರಿಂದ ಮಧ್ಯಾಹ್ನ 2.30ರವರೆಗೆ ಚುರುಕಾಗಿ ಕೂಂಬಿಂಗ್ ಆಪರೇಷನ್ ನಡೆಸುತ್ತವೆ. ಆದರೆ, ಬಿಸಿಲೇರಿ ಇಳಿಯಲಾರಂಭಿಸಿದಂತೆ ಅವರು ಹಸಿವು ಮತ್ತು ಬಳಲಿಕೆಯಿಂದ ನರಳುತ್ತಾರೆ. ಆ ಕಾರಣ ಇಂತಹ ಒಂದು ವ್ಯವಸ್ಥೆ ಎಂಬ ವಿವರ ನಮಗೆ ದೊರಕಿತು. ಕೇವಲ ಪ್ರಯಾಣ ಮಾತ್ರವಲ್ಲ ದಾಳಿ ಮಾಡಲು ಕೂಡ ಮಾವೋವಾದಿಗಳು ಇದೇ ಎರಡು ಸಮಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಲ್ಲದೇ ಕತ್ತಲಿನ ನಡುವೆ ಪೊಲೀಸ್ ಅಥವಾ ಭದ್ರತಾ ಪಡೆಯ ಮೇಲೆ ದಾಳಿ ಮಾಡುವುದೆಂದರೆ ಇವರಿಗೆ ಅಚ್ಚುಮೆಚ್ಚು.
ಸುಮಾರು ಐದು ಗಂಟೆಯಷ್ಟು ವಿಶ್ರಾಂತಿ ಪಡೆದ ಮೇಲೆ ಮತ್ತೆ ನಾವು ಪಯಣ ಮುಂದುವರಿಸಿದೆವು. ರೇವತಿ ತಲೆಯ ಮೇಲೆ ಅಕ್ಕಿಯ ಚೀಲವೊಂದು ಭದ್ರವಾಗಿ ಕೂತಿತ್ತು. ಆಕೆ ಬಿರುಸಾಗಿ ನಡೆಯುತ್ತಾ ನದಿಯೊಂದನ್ನು ದಾಟಿ ಮುನ್ನಡೆದಳು. ಆಗ ಕೂಡ ಅಕ್ಕಿ ಚೀಲ ಹಂದಾಡಲಿಲ್ಲ. ನದಿ ದಾಟಿದ ಮೇಲೆ ಆಕೆ ನಮ್ಮ ಬಳಿ, ನಿಮ್ಮ ಲಗೇಜ್ ನನಗೆ ಕೊಡಿ. ನಾವು ಈಗ ಬೆಟ್ಟವೇರಬೇಕು ಎಂದಳು. ನಮ್ಮ ಆತ್ಮಗೌರವ ಬೇಡ ಎಂದಿತು. ನನ್ನ ಕೈಗೆ ಕೊಟ್ಟು ಬಿಡಿ. ನಿಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಆಕೆ ಮತ್ತೆ ಒತ್ತಾಯ ಮಾಡಿದರು. ನಾವು ಕೊಡಲಿಲ್ಲ. ಒಮ್ಮೆ ನಸುನಗು ಸೂಸಿದ ಆಕೆ ಮುಂದಡಿಯಿಟ್ಟಳು. ದಟ್ಟವಾದ ಕಲ್ಲು-ಮುಳ್ಳಿನಿಂದ ದುರ್ಗಮವಾದ ಏರು ದಾರಿಯದು. ಹದಿನೈದೇ ನಿಮಿಷಗಳಲ್ಲಿ ನಾವು ಏದುಸಿರು ಬಿಡುತ್ತ ನಿಂತು ಬಿಟ್ಟೆವು. ನನ್ನ ಸಹವರ್ತಿಯಂತೂ ಇನ್ನು ಸಾಧ್ಯವೇ ಇಲ್ಲ ಎಂದು ನೆಲಕ್ಕುರುಳಿಯೇ ಬಿಟ್ಟರು. ನಿಮ್ಮ ಲಗೇಜ್ ನಮಗೆ ನೀಡಿ ರೇವತಿ ಮತ್ತೆ ಕೇಳಿದಳು. ನಮ್ಮ ಆತ್ಮಗೌರವ ಮಣ್ಣು ಮುಕ್ಕಿಯಾಗಿತ್ತು. ಲಗೇಜ್ ಅವರ ಕೈಗಿತ್ತೆವು. ಹೀಗೆ ಮುಂದೆ ನಾವು ಅವರೊಂದಿಗಿದ್ದ ಪ್ರತಿ ದಿನವೂ ತಲಾ 7 ಗಂಟೆಗಳ ಕಾಲ ನಡೆದು ಸೊರಗಿದೆವು. ಆ ಸಂಜೆ 7.00 ಗಂಟೆಯ ಹೊತ್ತಿಗೆ ನಾವು ಒಂದು ಹಳ್ಳಿಯನ್ನು ತಲುಪಿದೆವು. ನಮ್ಮನ್ನು ಹಳ್ಳಿಯ 'ಘೊತುಲ್' (ಸಾಂಸ್ಕೃತಿಕ ಕೇಂದ್ರ)ಗೆ ಕರೆದುಕೊಂಡು ಹೋದರು. ನಮ್ಮ ಬರವಿಗಾಗಿ ಅಲ್ಲಿ 'ಜನಸೇನೆ'ಯ ಸದಸ್ಯರು ಕಾದು ಕುಳಿತಿದ್ದರು. 'ಘೊತುಲ್' ಒಳಗೆ ತಕ್ಷಣ ಒಂದು 'ಕ್ಯಾಂಪ್ ಫೈರ್' ಹಾಕಲಾಯಿತು. ದೈಹಿಕವಾಗಿ ಸಂಪೂರ್ಣವಾಗಿ ಕುಸಿದಿದ್ದ ನಾವಿಬ್ಬರೂ 'ಕ್ಯಾಂಪ್ ಫೈರ್' ಪಕ್ಕದಲ್ಲಿಯೇ ಹಾಕಲಾಗಿದ್ದ ಮಂಚಗಳ ಮೇಲೆ ಉರುಳಿದೆವು. ಅಷ್ಟರೊಳಗೆ ಕಾಮ್ರೇಡ್‌ಗಳು ನಮಗಾಗಿ ಚಹಾ ತಯಾರಿಸಲು ಶುರು ಮಾಡಿಯಾಗಿತ್ತು.
ನಿಧಾನವಾಗಿ ನಾವು ನೋವುಗಳಿಂದ ಮುಕ್ತಿಯಾಗುವ ಸಮಯದಲ್ಲಿಯೇ ಕಾಮ್ರೇಡ್‌ಗಳ ಬಾಯಿಂದ ಸಣ್ಣದಾಗಿ ಹಾಡುಗಳು ಹರಿಯಲಾರಂಭಿಸಿದವು. ಇದು ಯಾವ ಹಾಡು? ಎಂದು ನಾವು ಹೇಳಿದಾಗ, ರೇವತಿ ನಮಗೆ ಹಿಂದಿ ಹಾಡು ಬರುವುದಿಲ್ಲ ಎಂದಳು. ನಾವು ಬಹಳ ಬೇಡಿಕೊಂಡ ಮೇಲೆ ಕಾಮ್ರೇಡ್‌ಗಳು ಅವರದೇ ಆದ ಗೀತೆಯೊಂದನ್ನು ಹಾಡಲು ಪ್ರಾರಂಭಿಸಿದರು. ಹೋರಾಟದಲ್ಲಿ ಅಸು ನೀಗಿದ ಕಾಮ್ರೇಡ್ ಮಂಟು ದಾದಾ ಸ್ಮರಣಾರ್ಥವಾಗಿತ್ತು ಆ ಹಾಡು. ರೆ...ರೆ...ಲೊಯೆ...ರೆ...ರೆ...ರೆ...ಲಾ, ಹೀಗೆ ಶುರುವಾದ ಆ ಹಾಡಿನ ಗಾನ ಮಾಧುರ್ಯ ದಂಡಕಾರಾಣ್ಯದಲ್ಲಿ ಪ್ರತಿಧ್ವನಿಸಿತು.
ಮಾವೋವಾದಿಗಳು ಅಪ್ಪಟ ನಾಸ್ತಿಕರು. ನಮಗೆ ದೇವರ ಮೇಲೆ ನಂಬಿಕೆಯಿಲ್ಲ. ಏನಿದ್ದರೂ ನಮ್ಮ ಮೇಲೆ ಮಾತ್ರ ನಮಗೆ ನಂಬಿಕೆ ಇರುವುದು ಎಂದು ಪಪ್ಪಾಯಿ ಹಣ್ಣು ಕತ್ತರಿಸುತ್ತಿದ್ದ ರೇವತಿ ಹೇಳಿದಳು. ದಂಡಕಾರಣ್ಯದ ನಿವಾಸಿಗಳಾದ ಬುಡಕಟ್ಟು ಜನಾಂಗದಲ್ಲಿ ಕೂಡ ನಾಸ್ತಿಕವಾದ ಹರಡಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪಾಲಿಗೆ ಧರ್ಮವೆಂದರೆ ಮೂಢನಂಬಿಕೆಯ ಮೂಲ. ಈ ಹಿಂದೆ ಮಲೇರಿಯದಿಂದ ನರಳುತ್ತಿದ್ದ ರೋಗಿಯನ್ನು ಕುಟುಂಬದವರು ವೈದ್ಯರ ಬಳಿ ಕರೆದುಕೊಂಡು ಹೋಗುತ್ತಿರಲಿಲ್ಲ. ಬದಲಾಗಿ ಅದರ ನಿಯಂತ್ರಣಕ್ಕೆ ಕಂದಾಚಾರಗಳಿಗೆ ಮೊರೆ ಹೋಗುತ್ತಿದ್ದರು ಎಂದು ಎಸ್‌ಝಡ್‌ಸಿ ಸದಸ್ಯನೊಬ್ಬ ನಮಗೆ ಹೇಳಿದ.
ಈ ಪ್ರದೇಶದಲ್ಲಿ ಮಲೇರಿಯ ವ್ಯಾಪಕವಾಗಿ ಇದೆ. ಆದ್ದರಿಂದಲೇ ಮಾವೋವಾದಿಗಳ ಬಳಿಯಲ್ಲಿ ಸದಾ ಕ್ಲೋರೊಕ್ವಿನ್ ಮತ್ತು ಪ್ಯಾರಸೆಟೊಮೊಲ್‌ನಂತಹ ಗುಳಿಗೆಗಳು ಇರುತ್ತವೆ. ಅದನ್ನು ಅವರು ಬುಡಕಟ್ಟು ಜನರಿಗೆ ಹಂಚುತ್ತಾರೆ ಮತ್ತು ತಾವೂ ಅಗತ್ಯ ಬಿದ್ದಲ್ಲಿ ಉಪಯೋಗಿಸುತ್ತಾರೆ. ಜೊತೆ-ಜೊತೆಗೆ ವಿಟಮಿನ್ ಇಂಜೆಕ್ಷನ್ ಕೊಡುವ ಮೂಲಕ ನಿಶ್ಶಕ್ತರ ಸೇವೆ ಕೂಡ ಮಾಡುತ್ತಾರೆ. ಹಳ್ಳಿಗರ ಮನ ಗೆದ್ದು ಪಡೆಯ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಬಟ್ಟೆ ಹಾಗೂ ಹೊದಿಕೆಯ ಆಮಿಷ ಕೂಡ ಒಡ್ಡುತ್ತಾರೆ. ಮೂಲತಃ ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಯ್ಲುಜಿ)ಗೆ ಸೇರಿದ ಆಂಧ್ರದ ನಕ್ಸಲೀಯರು ಛತ್ತೀಸಗಢ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದು 2000ರಲ್ಲಿ. ಐತಿಹಾಸಿಕವಾಗಿ ಮತ್ತು ಸಾಮಾನ್ಯವಾಗಿ ಬಸ್ತರ್‌ನ ಬುಡಕಟ್ಟು ಜನರು ಹೊರಗಿನ ಯಾರನ್ನೂ ಅವರ ಹಳ್ಳಿಗಳಲ್ಲಿ ಬಿಟ್ಟುಕೊಳ್ಳುತ್ತಿರಲಿಲ್ಲ. ಆದರೂ, ಆಂಧ್ರ ಮೂಲದ ನಕ್ಸಲೀಯರನ್ನು ಅವರು ಸ್ವಾಗತಿಸಿದ್ದಕ್ಕೆ ಅದರದ್ದೇ ಆದ ಕಾರಣಗಳು ಇವೆ ಎಂದು ನಾರಾಯಣಪುರದ ಸ್ಥಳೀಯ ಪತ್ರಕರ್ತರೊಬ್ಬರು ನನ್ನ ಬಳಿ ಹೇಳಿದರು. ಬುಡಕಟ್ಟು ಜನರಿಗೆ ಹಲವು ಅನುಕೂಲ ಮಾಡಿಕೊಡುವ ಮೂಲಕ ನಕ್ಸಲರು ಅವರ ಮನ ಗೆದ್ದಿದಂತೂ ಸತ್ಯ.
ಇಲ್ಲಿ ಬದುಕು ಅತ್ಯಂತ ಭೀಕರ. ಯಾವುದೇ ಕ್ಷಣದಲ್ಲಿ, ಯಾವುದೇ ರೂಪದಲ್ಲಾದರೂ ಸಾವು ನಿಮ್ಮ ಮೇಲೆ ಬಂದು ಅಪ್ಪಳಿಸಬಹುದು. ಒಂದೋ ಗುಂಡಿನ ರೂಪದಲ್ಲಿ, ಇಲ್ಲವಾದರೆ ಬೇರೆ-ಬೇರೆ ರೋಗಗಳ ರೂಪದಲ್ಲಿ ಸಾವು ಮನುಷ್ಯನನ್ನು ನುಂಗಿ ಹಾಕುತ್ತದೆ. ಬೆನ್ನು ಮೂಳೆಗೆ ಚಳಿ ಹಿಡಿದುಕೊಂಡ ಕಾರಣ ನಾವು ಕೆಲವು ರಾತ್ರಿಗಳನ್ನು ನಿದ್ರೆಯಿಲ್ಲದೇ ದಟ್ಟ ಅರಣ್ಯದಲ್ಲಿ ಕಳೆದೆವು. ತಾತ್ಕಾಲಿಕ ಟೆಂಟ್‌ಗಳಲ್ಲಿ ನಾವು ನಿದ್ರೆ ಮಾಡುವ ಯತ್ನ ಮಾಡುತ್ತಿದ್ದರೆ ಮೇಲಿಂದ ಉದುರಿತ್ತಿದ್ದ ಮಂಜಿನ ಹನಿಗಳ ಪಟ, ಪಟ ಸದ್ದು ಕಾಡುತ್ತಿದ್ದವು. ಈ ನಡುವೆ ನಮ್ಮ ಜೊತೆಯಲ್ಲಿದ್ದ ಯುವಕ-ಯುವತಿಯರು ಸರದಿಯ ಮೇಲೆ ಕಾವಲು ಕಾಯುವ ಹೊಣೆ ಹೊತ್ತಿದ್ದರು. 'ಕೆಂಪು ಬದುಕಿ'ನಲ್ಲಿ ಪಹರಿ ಕಾಯುವುದು ಅತ್ಯಂತ ಪ್ರಮುಖ ಕಾರ್ಯ. ಹೊಸದಾಗಿ ನಕ್ಸಲ್ ಬದುಕಿಗೆ ಆಗಮಿಸಿದ ಸೈನಿಕ ಮೊದಲು ತರಬೇತಿ ಪಡೆಯುವುದೇ ಪಹರಿ ಕಾಯುವುದರಲ್ಲಿ.
ಕಾವಲು ಕಾಯುತ್ತಿದ್ದ ಆ ಯುವತಿಯರಂತೂ ಬಂಡೆಗಲ್ಲಿ ನಂತೆ ಕೈಯಲ್ಲಿ ಬಂದೂಕು ಹಿಡಿದು, ಯಾವುದೇ ಕ್ಷಣದಲ್ಲಿ ಕೂಡ ಎದುರಾಳಿಗಳ ಮೇಲೆ ಗುಂಡಿನ ಸುರಿಮಳೆ ಸುರಿಯಲು ಸನ್ನದ್ಧರಾದವರಂತೆ ನಿಂತಿರುತ್ತಿದ್ದರು. ಪ್ರತಿ ಅರ್ಧ ಗಂಟೆಗೆ ಒಬ್ಬರಂತೆ ಪಾಳಿಯ ಮೇಲೆ ಅವರು ಕಾವಲು ಕಾದರು.
ಮೂಲ ಸೌಕರ್ಯ ಗಳ ಕೊರತೆ ಇವರ ಶಕ್ತಿಯನ್ನು ಕುಂದಿಸಿಲ್ಲ. ಅದನ್ನೇ ಅವರು ತಮ್ಮ ಬಲವಾಗಿಸಿಕೊಂಡಿದ್ದಾರೆ. ನಾವು ಮೊಬೈಲ್ ಅಥವಾ ಸ್ಯಾಟಲೈಟ್ ಫೋನ್ ಬಳಸಿದರೆ ಪೊಲೀಸರು ನಮ್ಮ ನೆಲೆಯನ್ನು ಪತ್ತೆ ಹಚ್ಚಬಹುದು. ಆದರೆ, ಮಾನವ ಸಂಪರ್ಕ ವ್ಯವಸ್ಥೆಯನ್ನು ಭೇದಿಸಲು ಅವರ ಕೈಯಿಂದ ಸಾಧ್ಯವಿಲ್ಲ ಎಂದು ಕಮಾಂಡರ್ ಒಬ್ಬ ನಮಗೆ ವಿವರ ನೀಡಿದ. ನಡೆದು ಸಾಗುವ ವ್ಯಕ್ತಿಗಳ ಕೈಯಲ್ಲಿ ಪತ್ರಗಳನ್ನು ಕಳುಹಿಸಿ ಕೊಡುವ ಮೂಲಕ ಇಲ್ಲಿ ಮಾಹಿತಿ ಒಂದೆಡೆಯಿಂದ ಮತ್ತೊಂದೆಡೆಗೆ ಹರಿದು ಹೋಗುತ್ತದೆ. ಇನ್ನು ಕಾಡಿನಲ್ಲಿ ಇದ್ದಾಗ ಹಲವು ಪ್ರಾಣಿ-ಪಕ್ಷಿಗಳ ದನಿಗಳನ್ನು ಅನುಕರಿಸುವ ಮೂಲಕ ಮಾವೋವಾದಿಗಳು ಸಂದೇಶಗಳನ್ನು ಹರಡುತ್ತಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅಭೇದ್ಯವಾದ ಈ ಅರಣ್ಯ ಪ್ರದೇಶದ ಸ್ಪಷ್ಟ ಚಿತ್ರಣಗಳೇ ನಮ್ಮ ಭದ್ರತಾ ಪಡೆಗಳ ಕೈಯಲ್ಲಿ ಇಲ್ಲ. ದಂಡಕಾರಣ್ಯದಲ್ಲಿ ನಡೆದಾಡುವಾಗ ಇದ್ದಕ್ಕಿದ್ದಂತೆ ಹಲವಾರು ದಾರಿಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಇಲ್ಲಿ ಹಾದಿ ತಪ್ಪಿದರೆ ಮುಗಿದೇ ಹೋಯಿತು. ಇಂತಹ ಸನ್ನಿವೇಶದ ನಡುವೆ ನಮ್ಮ ಜೊತೆಯಲ್ಲಿದ್ದವರೂ ಒಮ್ಮೆಯೂ ಹಾದಿ ತಪ್ಪಲಿಲ್ಲ. ಅಷ್ಟು ಬೃಹತ್ತಾದ ದಟ್ಟ ಕಾಡಿನ ಇಂಚಿಂಚನ್ನೂ ಅವರು ಬಲ್ಲರು.
ಮಾವೋವಾದಿಗಳು ಮದ್ಯಪಾನ ವಿರೋಧಿಗಳು. ಇನ್ನು ಅವರ ಪೈಕಿ ಕೆಲವೇ ಕೆಲವರು ಧೂಮಪಾನ ಮಾಡುತ್ತಾರೆ. ಇಷ್ಟಲ್ಲದೇ ಅವರು ಬುಡಕಟ್ಟು ಜನರ ಹಳ್ಳಿಗಳಲ್ಲಿ ಮದ್ಯಪಾನ ವಿರೋಧಿ ಪ್ರಚಾರಾಂದೋಲನ ಕೂಡ ನಡೆಸುತ್ತಾರೆ. ಆ ಹಳ್ಳಿಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಬಹಳಷ್ಟು ನಡೆಯುತ್ತದೆ. ಅದರಿಂದಾಗಿಯೇ ಹೆಚ್ಚು, ಹೆಚ್ಚು ಯುವತಿಯರು ನಮ್ಮ ಸಂಘಟನೆಯನ್ನು ಸೇರುತ್ತಿದ್ದಾರೆ. ಮಹಿಳೆಯರ ಸಮಾನತೆಯ ನಿಟ್ಟಿನಲ್ಲಿ ನಾವು ಸದಾ ಜಾಗೃತರಾಗಿರುತ್ತೇವೆ ಎಂದು ಆತ ಹೇಳಿದ. ಪಿಎಲ್‌ಜಿಎನಲ್ಲಿರುವ ಯೋಧರ ಪೈಕಿ ಶೇಕಡಾ ೪0ರಷ್ಟು ಮಂದಿ ಮಹಿಳೆಯರು.
ಪಕ್ಷವು ತನ್ನ ಕಾಮ್ರೇಡ್‌ಗಳ ಜೀವನದ ಮೇಲೆ ಸಂಪೂರ್ಣ ಹಿಡಿತವಿಟ್ಟು ಕೊಂಡಿರುತ್ತದೆ. ಪಕ್ಷದ ಮುಖ್ಯಸ್ಥರ ಅನುಮತಿ ಯಿಲ್ಲದೇ ಯಾರೂ ಮದುವೆಯಾಗುವ ಹಾಗಿಲ್ಲ. ಅದೂ ಹೊರಗಿನ ಸದಸ್ಯರ ಜೊತೆ ವಿವಾಹ ನಿಷಿದ್ಧ. ಇನ್ನು ಸಂತಾನಾಭಿವೃದ್ಧಿ ಕೇಳಲೇಬೇಡಿ. ಕಮಾಂಡರ್ ರೇವತಿ ಕೂಡ ವಿವಾಹಿತೆ. ಆಕೆಯ ಪತಿ ಕೂಡ ಪಿಎಲ್‌ಜಿಎ ಕಾಮ್ರೇಡ್. ವರ್ಷಕ್ಕೆ ಒಂದು ಅಥವಾ ಎರಡು ಬಾರಿ ನಾವು ಭೇಟಿಯಾಗುತ್ತೇವೆ. ನಾವಿಬ್ಬರೂ ಪಕ್ಷಕ್ಕಾಗಿ ಕೆಲಸ ಮಾಡಲೇಬೇಕು ಎನ್ನುವ ಆಕೆಯ ಬಳಿ ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲವೇ? ಎಂದು ಕೇಳಿದರೆ, ಅದಕ್ಕೆ ಕಾಲ ಕೂಡಿ ಬಂದಿಲ್ಲ ಎಂಬ ಉತ್ತರ ಬಂತು. ಮಾವೋವಾದಿಗಳ ನಿಗೂಢ ಕ್ಯಾಂಪ್ ಮೇಲೆ ಪೊಲೀಸ್ ದಾಳಿ ನಡೆದ ಸಂದರ್ಭದಲ್ಲಿ ಅಪಾರ ಪ್ರಮಾಣದ ಗರ್ಭ ನಿರೋಧಕಗಳು ಸಿಗುವುದಕ್ಕೆ ಇದೇ ಕಾರಣ.
ಸ್ವತಃ ಸಂತಾನ ನಿಯಂತ್ರಣ ಯೋಜನೆಯಲ್ಲಿ ಬಂಧಿಯಾಗಿರುವ ಮಾವೋವಾದಿಗಳು ಬುಡಕಟ್ಟು ಜನರಲ್ಲಿ ಸಂತಾನಾಭಿವೃದ್ಧಿ ಹೆಚ್ಚಾಗಬೇಕು ಎಂದು ಹೇಳುತ್ತಿದ್ದಾರೆ. ಏಕೆಂದರೆ ದಿನದಿಂದ ದಿನಕ್ಕೆ ಅವರ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ಮೂಲ ಕಾರಣ ವಿವಿಧ ಕೊಲೆಗಡುಕ ರೋಗಗಳು. ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಿರಿ ಎಂದು ಪಕ್ಷ ಈಗ ಬುಡಕಟ್ಟು ಕುಟುಂಬಗಳಿಗೆ ಸಲಹೆ ಮಾಡುತ್ತಿದೆ. ಈ ಬುಡಕಟ್ಟು ಕುಡಿಗಳೇ ಪಕ್ಷದ ಮುಂದಿನ ಸೇನಾನಿಗಳು ಎಂಬ ಅರಿವು ಮಾವೋವಾದಿಗಳಿಗಿದೆ.
ಐದನೇ ದಿನ. ಕನಿಷ್ಠ ಇನ್ನೆರಡು ದಿನಗಳ ಕಾಲ ನಾವು ಇದೇ ಹಳ್ಳಿಯಲ್ಲಿ ಉಳಿಯಬೇಕಾಗಿ ಬರಬಹುದು ಎಂಬ ಸಂದೇಶ ರೇವತಿಯಿಂದ ನನಗೆ ಬಂತು. ಮುಂದೇನು, ಮುಂದೆಲ್ಲಿಗೆ ಎಂಬ ಮಾಹಿತಿ ನನಗೆ ಹಿರಿಯ ಸದಸ್ಯರಿಂದ ಬಂದಿಲ್ಲ. ಆ ಕಾರಣ ನಾವು ಇಲ್ಲಿಯೇ ಉಳಿಯಬೇಕು ಎನ್ನುವುದು ಆಕೆಯ ವಿವರವಾಗಿತ್ತು. ನಾವು ಇದುವರೆಗೆ ಮಾವೋವಾದಿ ಕೇಂದ್ರ ಸಮಿತಿಯ ಯಾವುದೇ ಒಬ್ಬ ಸದಸ್ಯನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಮುಂದಿನ ಗುರಿ ಯಾವುದು ಎಂಬ ಸ್ಪಷ್ಟ ಅರಿವು ಸಿಕ್ಕಿರಲಿಲ್ಲ. ಮಧ್ಯಾಹ್ನದ ಊಟ ಮುಗಿಸಿ ನಾವು ಬಿದ್ದುಕೊಂಡಿದ್ದೆವು. ರೇವತಿ ಪಕ್ಷದ ಪ್ರಚಾರಾ