|
| ಪಾಲ್ ಕ್ರುಗ್ಮನ್ |
ಅರ್ಥಶಾಸ್ತ್ರಜ್ಞ,
’ದ ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ |
'ಬಾಲ್ಯದ ಬಡತನ ಮಾನಸಿಕ ಆರೋಗ್ಯಕ್ಕೆ ಮೃತ್ಯು' -ಇದು ಕಳೆದ ವಾರ ಅಮೆರಿಕನ್ ಅಸೋಸಿಯೇಷನ್‌ನಲ್ಲಿ ವಿಜ್ಞಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ವರದಿಯ ಆರಂಭದ ಸಾಲು. ಈ ಲೇಖನದಲ್ಲಿ ಹೇಳಿರುವಂತೆ: ಬಡತನ ಹಾಗೂ ಅತ್ಯಂತ ಕೆಳಮಟ್ಟದ ಸಾಮಾಜಿಕ ವಾತಾವರಣದಲ್ಲಿ ಬೆಳೆಯುವ ಬಹಳಷ್ಟು ಮಕ್ಕಳು ತೀವ್ರ ಒತ್ತಡದ ಅನಾರೋಗ್ಯಕರ ಹಾರ್ಮೊನ್‌ಗಳಿಗೆ ತುತ್ತಾಗುತ್ತಾರೆ. ಇದು ಅವರ ನರಗಳ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ ಎಂದು ನರವಿಜ್ಞಾನಿಗಳು ಹೇಳುತ್ತಾರೆ.
ಇದು ಆ ಮಕ್ಕಳ ಮುಂದಿನ ಜೀವಿತಾವಧಿಯಲ್ಲಿ ಅವರ ಸಂವಹನ ಕಲೆ ಹಾಗೂ ಜ್ಞಾಪಕಶಕ್ತಿಯ ಬೆಳವಣಿಗೆಗೆ ಪೆಟ್ಟು ನೀಡುವ ಜೊತೆಗೆ ಅವರಲ್ಲಿ ಬಡತನದಿಂದ ಪಾರಾಗುವ ಸಾಮರ್ಥ್ಯವನ್ನೂ ಕುಂದಿಸುತ್ತದೆ. ಹೀಗಾಗಿ ಬಡತನ ಎದುರಿಸುವಲ್ಲಿ ಅಮೆರಿಕ ವಿಫಲಗೊಂಡಿರುವುದಕ್ಕಿರುವ ಕಾರಣಗಳ ಪಟ್ಟಿಗೆ ಮತ್ತೊಂದು ಬಲವಾದ ಕಾರಣ ಸೇರಿಕೊಂಡಂತಾಗಿದೆ.
ಲಿಂಡೋ ಬಿ. ಜಾನ್ಸನ್ (ಅಮೆರಿಕದ ಮಾಜಿ ಅಧ್ಯಕ್ಷ) ಅವರು 44 ವರ್ಷಗಳ ಹಿಂದೆ 'ಬಡತನದ ವಿರುದ್ಧ ಸಮರ' ಸಾರಿದ್ದರು. ಪರಿಣಾಮವಾಗಿ ಅವರ ಅಧ್ಯಕ್ಷಾವಧಿಯ ನಂತರದ ಕೆಲವು ವರ್ಷ ಗಳಲ್ಲಿ ಬಡತನದ ಪ್ರಮಾಣದಲ್ಲಿ ಬಹಳಷ್ಟು ಇಳಿಕೆ ಕಂಡು ಬಂತು. 1963ರಲ್ಲಿ ಶೇ. 23ರಷ್ಟಿದ್ದ ಬಡತನದ ಪ್ರಮಾಣ 1969ರಲ್ಲಿ ಶೇ. 14ಕ್ಕೆ ಕುಸಿಯಿತು.
ಆದರೆ ತದನಂತರ ಈ ಪ್ರಗತಿ ಸಂಪೂರ್ಣವಾಗಿ ಕುಸಿಯಿತು. ಅಮೆರಿಕದ ರಾಜಕಾರಣಿಗಳು ಬಡವರ ತೊಂದರೆಗಳತ್ತ ಗಮನ ಕೊಡುವುದರ ಬದಲಾಗಿ ಇತರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಲಾರಂಭಿಸಿದರು. ಅಲ್ಲಿಗೆ ಬಡತನದ ವಿರುದ್ಧದ ಸಮರಕ್ಕೆ ಸಂಪೂರ್ಣ ತೆರೆ ಬಿತ್ತು. 2006ರಲ್ಲಿ ಶೇ. 17.4ರಷ್ಟು ಮಕ್ಕಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವಿಸಿದ್ದರು. ಖಂಡಿತವಾಗಿಯೂ ಇದು 1969ರಲ್ಲಿದ್ದ ಬಡತನ ರೇಖೆಗಿಂತ ಬಹಳಷ್ಟು ಹೆಚ್ಚಾಗಿತ್ತು. ಪ್ರಾಯಶಃ ಈ ಅಂಕಿ-ಅಂಶಗಳು ಕೂಡಾ ಮಕ್ಕಳು ನಿಜವಾಗಿಯೂ ಅನುಭವಿಸಿದ ನೋವಿನ ತೀವ್ರತೆಯನ್ನು ಬಿಂಬಿಸಲಾರವು.
ಬಡತನದಲ್ಲಿ ಅಥವಾ ಅಂತಹ ಪರಿಸರದಲ್ಲಿ ಬೆಳೆಯುವುದು ಯಾವಾಗಲೂ ಸಮಾಜದ ಮುಖ್ಯವಾಹಿನಿಯಿಂದ ದೂರವಾದಂತೆ. ಆದರೆ ಈಗ ನಮ್ಮ ಮತ್ತು ಬಡವರ ನಡುವಿನ ಅಂತರ 40 ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಹೆಚ್ಚಾಗಿದೆ. ಅಮೆರಿಕನ್ನರ ಆದಾಯ ಹೆಚ್ಚಾಗುತ್ತಿದ್ದರೂ ಬಡತನ ರೇಖೆ ಮಾತ್ರ ಇದ್ದ ಜಾಗದಲ್ಲೇ ಇದೆ. ಹೀಗಾಗಿ ಬಡವರ ಸಂಖ್ಯೆ ವಾಸ್ತವ ಲೆಕ್ಕಾಚಾರಕ್ಕಿಂತ ಹೆಚ್ಚಾಗಿಯೇ ಇದೆ. ಅಮೆರಿಕದಲ್ಲಿ ಬಡವರಾಗಿರುವುದೆಂದರೆ ನಿಮ್ಮದೇ ನಾಡಿನಲ್ಲಿ ಬಹಿಷ್ಕೃತರಾಗಿದ್ದಂತೆ. ಇದು ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ನರವಿಜ್ಞಾನಿಗಳು. ಬಡತನವನ್ನು, ಅದರಲ್ಲೂ ವಿಶೇಷವಾಗಿ 'ಮಕ್ಕಳ ಬಡತನ'ವನ್ನು ನಿರ್ಮೂಲನೆ ಮಾಡುವಲ್ಲಿನ ವೈಫಲ್ಯ ಅಮೆರಿಕದ ಆತ್ಮವಿಮರ್ಶೆಯನ್ನು ಪ್ರೋತ್ಸಾಹಿಸಬೇಕು. ಆದರೆ ದುರದೃಷ್ಟವಶಾತ್ ಅದು ಆಗಾಗ ಪ್ರೋತ್ಸಾಹಿಸುತ್ತಿರುವುದು ಈ ನಿರ್ಲಕ್ಷ್ಯಕ್ಕೆ ಸಬೂಬು ಹೇಳುವುದಕ್ಕೆ ಮಾತ್ರ.
ಇಂತಹ ಕೆಲವು ಸಬೂಬುಗಳೇ ಮುಂದೆ ಅಮೆರಿಕದಲ್ಲಿರುವ ಬಡವರು ಅಸಲಿಗೆ ಬಡವರೇ ಅಲ್ಲ ಎನ್ನುವಂತಹ ಹೇಳಿಕೆಗಳಾಗಿ ಬದಲಾಗುತ್ತವೆ. ಇಂತಹ ಹೇಳಿಕೆಗಳನ್ನು ನೀಡುವವರು ಅಮೆರಿಕಕ್ಕೆ ಕತ್ರೀನಾ ಚಂಡಮಾರುತ ಬಂದು ಅಪ್ಪಳಿಸಿದಾಗ ಯಾವುದಾದರೂ ಕಿರುತೆರೆ ವಾಹಿನಿಗಳಲ್ಲಿ ಆ ಸನ್ನಿವೇಶವನ್ನು ನೋಡಿದ್ದಾರೆಯೇ? ಅಥವಾ ಇದಕ್ಕೆ ಸಂಬಂಧಿಸಿದಂತೆ ಅಮೆರಿಕದ ಯಾವುದಾದರೂ ದೊಡ್ಡ ನಗರಕ್ಕೆ ಭೇಟಿ ನೀಡಿದಾಗ ತಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಸರಿಯಾಗಿ ಗಮನಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಮುಖ್ಯವಾಗಿ ಹೇಳುವುದಾದರೆ, ಬಡತನ ಕುರಿತಾದ ನೆಪ ಅಥವಾ ಖಚಿತ ಹೇಳಿಕೆ: ಅಮೆರಿಕ ಎನ್ನುವುದು ಅವಕಾಶಗಳ ನಗರ, ಇಲ್ಲಿ ಜನರು ಬಡವರಾಗಿ ಕೆಲಸ ಪ್ರಾರಂಭಿಸಿ ಕಠಿಣ ಪರಿಶ್ರಮದ ಮೂಲಕ ಶ್ರೀಮಂತರಾಗಬಹುದು ಎನ್ನುವುದನ್ನು ಆಧರಿಸಿದೆ.
ಆದರೆ ಹೊರಾಷಿಯೋ ಆಲ್ಗರ್‌ನ ಕಾದಂಬರಿಗಳಲ್ಲಾಗುವಂತೆ ಬಡವರು ಶ್ರೀಮಂತರಾಗುವಂತಹ ಕಥೆಗಳು ಬಹಳ ವಿರಳ, ಅಲ್ಲದೆ ತಮ್ಮ ಪೋಷಕರ ಬಡತನದಿಂದಾಗಿ ಬಳಲುವ ಮಕ್ಕಳ ಕಥೆಗಳು ತೀರಾ ಸಾಮಾನ್ಯ ಎಂಬುದೇ ವಾಸ್ತವ. ಇತ್ತೀಚೆಗಿನ ವರದಿ ಪ್ರಕಾರ, ಆದಾಯ ಹಂಚಿಕೆಯ ಮಟ್ಟದಲ್ಲಿ ಕೆಳಗಿನಿಂದ ನಾಲ್ಕನೇ ಸ್ತರದಲ್ಲಿರುವ ಪೋಷಕರಿಗೆ ಜನಿಸಿದ ಮಕ್ಕಳು ಅಲ್ಲಿಯೇ ಉಳಿಯುವ ಸಾಧ್ಯತೆ ಶೇ. 50ರಷ್ಟು. ಅವರು ನೀಗ್ರೋಗಳಾಗಿದ್ದಲ್ಲಿ ಈ ಸಾಧ್ಯತೆ ಮೂರನೇ ಎರಡರಷ್ಟು.
ಇದರಲ್ಲಿ ಅಚ್ಚರಿಪಡುವಂತಾದ್ದೇನಿಲ್ಲ. ಬಡತನ ಮಟ್ಟದಲ್ಲಿ ಏರಿಕೆಯಾಗುವುದು ಪ್ರತಿಯೊಂದು ಹಂತದಲ್ಲಿಯೂ ನಿಮಗೆ ಅಡ್ಡಗಾಲಾಗುತ್ತದೆ.
ಬಾಲ್ಯದಲ್ಲಿ ಮೆದುಳಿನ ಬೆಳವಣಿಗೆಗಳ ಕುರಿತು ನ್ಯಾಷನಲ್ ಸೆಂಟರ್ ಫಾರ್ ಎಜುಕೇಷನ್ ಸ್ಟಾಟೆಸ್ಟಿಕ್ ನಡೆಸಿದ ಅಧ್ಯಯನವನ್ನು ನಾನಿಲ್ಲಿ ಉದಾಹರಿಸಲು ಬಯಸುತ್ತೇನೆ. ಈ ಸಂಸ್ಥೆ 1988ರಲ್ಲಿ 8ನೇ ಶ್ರೇಣಿಯಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದನ್ನು ಅಧ್ಯಯನಕ್ಕಾಗಿ ಆರಿಸಿಕೊಂಡಿತ್ತು. ಸ್ಥೂಲವಾಗಿ ಹೇಳುವುದಾದರೆ, ಆ ಫಲಿತಾಂಶದಿಂದ ಆಧುನಿಕ ಅಮೆರಿಕದಲ್ಲಿ ಹೆತ್ತವರ ಆರ್ಥಿಕ ಸ್ಥಾನಮಾನ ಮಕ್ಕಳ ಗೆಲುವಿನ ಸಾಧನ ಎನ್ನುವುದು ಸಾಬೀತಾಯಿತು. ಇದರ ಪ್ರಕಾರ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದ, ಆದರೆ ಬಡತನದ ಹಿನ್ನಲೆಯಿದ್ದ ವಿದ್ಯಾರ್ಥಿಗಳು ಕಾಲೇಜು ಪ್ರವೇಶಿಸುವ ಸಾಧ್ಯತೆ ಅಷ್ಟೇನೂ ಅಂಕ ಗಳಿಸದ ಆದರೆ ಉತ್ತಮ ಆರ್ಥಿಕ ಹಿನ್ನಲೆಯಿಂದ ಬಂದ ವಿದ್ಯಾರ್ಥಿಗಳಿಗಿಂತ ಕಡಿಮೆಯಾಗಿತ್ತು.
ಇದ್ಯಾವುದೂ ಅನಿರೀಕ್ಷಿತವಲ್ಲ. ಬಹಳಷ್ಟು ಯುರೋಪಿಯನ್ ರಾಷ್ಟ್ರಗಳಲ್ಲಿನ ಬಡತನದ ಪ್ರಮಾಣ ಅಮೆರಿಕಕ್ಕಿಂತ ತೀರಾ ಕಡಿಮೆಯಿದೆ. ಇದಕ್ಕೆ ಮುಖ್ಯ ಕಾರಣ ಬಡವರಿಗೆ ಹಾಗೂ ಅದೃಷ್ಟಹೀನರಿಗೆ ನೆರವಾಗುವಂತಹ ಅಲ್ಲಿನ ಸರ್ಕಾರದ ಯೋಜನೆಗಳು. ಇಚ್ಛಾಶಕ್ತಿಯುಳ್ಳ ಸರ್ಕಾರಗಳಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. 1997ರಲ್ಲಿ ಬ್ರಿಟನ್‌ನಲ್ಲಿ ಅಧಿಕಾರಕ್ಕೆ ಬಂದ ಲೇಬರ್ ಸರ್ಕಾರ ಬಡತನ ನಿರ್ಮೂಲನೆಯನ್ನೇ ತನ್ನ ಗುರಿಯಾಗಿಸಿಕೊಂಡಿತ್ತು. ಕೆಲವೊಂದು ಅಡಚಣೆಗಳ ಹೊರತಾಗಿಯೂ ಆ ಸರ್ಕಾರದ ಹಲವು ಯೋಜನೆಗಳು ಉತ್ತಮ ಸಾಧನೆ ಮಾಡಿದವು. ಅಮೆರಿಕದ ಹೇಳಿಕೆಗಳಿಗೆ ಹತ್ತಿರವಾದಂತಹ ವಿಧಾನಗಳನ್ನು ಉಪಯೋಗಿಸಿಕೊಂಡೇ ಬ್ರಿಟನ್ ಮಕ್ಕಳ ಬಡತನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಿದೆ.
ಇಂತಹ ಸನ್ನಿವೇಶದಲ್ಲಿ ಈ ದೇಶದಲ್ಲಿ ಏನಾದರೂ ಉತ್ತಮವಾದದ್ದು ನಡೆಯುತ್ತದೆ ಎಂದು ಆಶಿಸುವುದು ಕಷ್ಟವಾಗುತ್ತದೆ. ಅದಿರಲಿ. ಅತ್ತ ಹಿಲರಿ ಕ್ಲಿಂಟನ್, ಬಾರಕ್ ಒಬಾಮ ಇಬ್ಬರೂ ಬಡತನದ ವಿರುದ್ಧ ಹೊಸ ಯೋಜನೆಗಳನ್ನು ಹೊಂದಿದ್ದಾರೆ. ಆದರೆ ಅವರ ಉದ್ದೇಶ ಉತ್ತಮವಾಗಿದ್ದರೂ ಪ್ರಚಾರದಿಂದ ಮಾತ್ರ ದೂರವಾಗಿದೆ.
ಇದಕ್ಕಾಗಿ ನಾನು ಅವರನ್ನು ದೂಷಿಸುವುದಿಲ್ಲ. ಒಂದು ವೇಳೆ ಪ್ರೋಗ್ರೆಸ್ಸಿವ್ ಪಕ್ಷ ಚುನಾವಣೆಯಲ್ಲಿ ಗೆದ್ದರೆ, ಅದು ಮಧ್ಯಮ ವರ್ಗದವರನ್ನು ಓಲೈಸುವ ಕ್ರಮದಿಂದಾಗಿಯೇ ಹೊರತು ಬಡವರಿಗೆ ಸಹಾಯ ನೀಡುವ ಭರವಸೆಯಿಂದಲ್ಲ. ಇನ್ನು ಡೆಮಾಕ್ರೆಟ್ ಪಕ್ಷದ ಆಡಳಿತಕ್ಕೆ ಆರೋಗ್ಯ ರಕ್ಷಣಾ ವಿಷಯ ಪ್ರಮುಖವಾಗುತ್ತದೆಯೇ ಹೊರತು ಬಡತನದ ನಿರ್ಮೂಲನೆಯಲ್ಲ. ಕೊನೆಯದಾಗಿ, ನಮ್ಮ ರಾಷ್ಟ್ರ ತಾನು ಮರೆತಿರುವ ಕಾರ್ಯವನ್ನು ಮತ್ತೆ ಆರಂಭಿಸುತ್ತದೆ ಎಂಬ ಭರವಸೆ ಇಟ್ಟು ಕೊಳ್ಳೋಣ. ಯಾಕೆಂದರೆ, ಬಡತನ ಇಂದಿಗೂ ಬಹಳಷ್ಟು ಅಮೆರಿಕನ್ನರ ಜೀವನವನ್ನು ಹಾಳು ಮಾಡುತ್ತಲೇ ಇದೆ.
ಟಿಎಸ್‌ಐ |