ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಿಚ್ಚು ಮಾತು
ಮತ್ತೆ ಅಬ್ಬರಿಸಿದ 'ಯುವರಾಜ'
 

ರಾಬರ್ಟ್ ಲೂಯಿ ಸ್ಟೀವನ್‌ಸನ್ ಅವರ 'ದ ಸ್ಟ್ರೇಂಜ್ ಕೇಸ್ ಆಫ್ ಡಾ. ಜೆಕಿಲ್ ಆಂಡ್ ಮಿ. ಹೈಡ್' ಕಾದಂಬರಿಗೂ ಹಾಗೂ ಯುವರಾಜ್ ಸಿಂಗ್ ವ್ಯಕ್ತಿತ್ವಕ್ಕೂ ಪರಸ್ಪರ ಸಂಬಂಧ ಇದ್ದಂತೆ ಕಾಣುತ್ತದೆ. ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಫಾರ್ಮ್ ಕಂಡುಕೊಳ್ಳಲು ಯುವರಾಜ್ ಹೆಣಗಾಡುತ್ತಿದ್ದ ಪರಿ ಎಂಥವರಿಗೂ ಬೇಸರ ಮೂಡಿಸುವಂತಿತ್ತು. ಕಳೆದ ಋತುವಿನಲ್ಲಿ ಅದ್ಭುತ ಬ್ಯಾಟಿಂಗ್ ವೈಭವದ ಮೂಲಕ ಯುವರಾಜ್ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ಆದರೆ ಏನಾಯಿತೋ ಏನೋ ನಂತರದ ದಿನಗಳಲ್ಲಿ ಯುವಿ ಅಬ್ಬರ ಮರೀಚಿಕೆಯಾಗುತ್ತ ಹೋಯಿತೇ ವಿನಃ ಕ್ರಿಕೆಟ್ ಮೈದಾನದಲ್ಲಿ ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿಸುವುದೇ ಅಸಾಧ್ಯವಾಯಿತು. ಫಾರ್ಮ್ ಕಳೆದುಕೊಂಡು ಪೆಚ್ಚಾಗಿದ್ದ ಯುವರಾಜ್‌ಗೆ ಇಷ್ಟು ದಿನ ಆಸ್ಟ್ರೇಲಿಯ ಪ್ರವಾಸ ಎಂಬುದು 'ರಜಾದಿನ'ವಾದಂತಿತ್ತು. ಆದರೂ ಕೊನೆಗೂ ಯುವರಾಜ್‌ರ ಬ್ಯಾಟ್‌ಗೆ ಶಕ್ತಿ ಬಂದಿದೆ ಎನ್ನಬಹುದು. ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಂದು ಅಂಕಿ ರನ್ ತೆಗೆಯಲೂ ಒದ್ದಾಡುತ್ತಿದ್ದ ಯುವರಾಜ್, ಏಕದಿನ ಸರಣಿಯ ಮೂರು ನಾಲ್ಕು ಪಂದ್ಯಗಳಲ್ಲೂ ತಮ್ಮ ಕಳಪೆ ಬ್ಯಾಟಿಂಗ್ ಮುಂದುವರಿಸಿದ್ದರು. ಮಧ್ಯಮ ಕ್ರಮಾಂಕದ ಅವರ ಸ್ಥಾನಕ್ಕೂ ಕುತ್ತು ಬರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿತ್ತು. ಆದರೆ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಸಕಾಲದಲ್ಲಿ ಯುವರಾಜ್‌ರ ಬೆನ್ನುತಟ್ಟಿ, ಯುವರಾಜ್ ಉತ್ತಮ ನಿರ್ವಹಣೆ ತೋರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದರು. ತಂಡದಲ್ಲಿ ಯುವರಾಜ್‌ಗೆ ಅವಕಾಶ ನೀಡಿದ್ದಕ್ಕೆ ಧೋನಿ ಸಾಕಷ್ಟು ಟೀಕೆಗಳಿಗೂ ಗುರಿಯಾದರು. ಅವರ ಸ್ಥಾನದಲ್ಲಿ ಯುವ ಆಟಗಾರ ಸುರೇಶ್ ರೈನಾ ಅವರನ್ನು ಆಡಿಸುವ ಕುರಿತಾಗಿಯೂ ಮಾತು ಕೇಳಿ ಬಂದಿತ್ತು. ಅದೇನೆ ಇರಲಿ, ಇಷ್ಟೆಲ್ಲಾ ಅವಾಂತರಗಳ ಬಳಿಕ ಯುವರಾಜ್ ಬ್ಯಾಟ್ ಮತ್ತೆ ಮಾತನಾಡಿದೆ. ಶ್ರೀಲಂಕಾಕ್ಕೆ ಒಲಿಯಬೇಕಿದ್ದ ವಿಜಯಲಕ್ಷ್ಮಿಯನ್ನು ಭಾರತಕ್ಕೆ ಒಲಿಸುವಲ್ಲಿ ಯುವರಾಜ್ ನೆರವಾಗಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಲಂಕನ್ನರ ವಿರುದ್ಧ ಯುವಿ 70 ಎಸೆತಗಳಲ್ಲಿ 76 ರನ್ ಚಚ್ಚುವ ಮೂಲಕ ಭಾರತಕ್ಕೆ ಗೆಲುವು ತಂದಿತ್ತಿದ್ದಾರೆ. ಅಡಿಲೇಡ್ ಪಂದ್ಯದಲ್ಲಿ ಪರ್ವೇಜ್ ಮಹರೂಫ್ ಅವರ ಬೌಲಿಂಗ್‌ಗೆ ಯುವರಾಜ್ ಬಾರಿಸಿದ ಮನಮೋಹಕ ಕವರ್ ಡ್ರೈವ್ ಎಲ್ಲವನ್ನೂ ಹೇಳುತ್ತದೆ. ಆಸ್ಟ್ರೇಲಿಯದ ಪರಿಸ್ಥಿತಿಗೆ ಯುವರಾಜ್ ಹೊಂದಿಕೊಂಡಿಲ್ಲ ಎನ್ನುವ ಟೀಕಾಕಾರರ ಬಾಯಿಗೆ ಯುವರಾಜ್ ಈಗ ಬೀಗ ಜಡಿದಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಹಾರಾಜ ಕಳೆದ ಕೆಲವು ತಿಂಗಳಲ್ಲಿ ಅನುಭವಿಸಿದ ಟೀಕೆ, ನೋವು ಹಾಗೂ ಬ್ಯಾಟಿಂಗ್‌ನಲ್ಲಿ ಕಂಡುಕೊಂಡ ಏರಿಳಿತ ಸೇರಿದಂತೆ ಮುಂದಿನ ಕ್ರಿಕೆಟ್ ಋತುವಿನ ಸವಾಲುಗಳ ಕುರಿತು ಟಿಎಸ್‌ಐನ ನೇಹಾ ಸರೀನ್ ಮತ್ತು ತಾರಿಖ್ ಲಷ್ಕರ್ ಜೊತೆ ಮಾತನಾಡಿದ್ದಾರೆ

ಇತ್ತೀಚಿನ ದಿನಗಳಲ್ಲಿ ಯುವರಾಜ್ ಸಿಂಗ್ ಯಾಕೋ ಬಹಳ ಬ್ಯುಸಿಯಾಗಿರೋ ಹಾಗಿದೆಯಲ್ಲ. ಕಾರಣ?

ಕ್ರಿಕೆಟ್! ಮತ್ತಿನ್ನೇನು?

ನಿಮ್ಮ ಬಿರುಸಿನ ಹೊಡೆತಗಳು ಮಾಯವಾದಂತಿದೆ. ಆಸ್ಟ್ರೇಲಿಯದ ಪರಿಸ್ಥಿತಿಗೆ ನೀವು ಹೊಂದಿಕೊಂಡಿಲ್ಲವೇ?

ಇಲ್ಲಿನ ಪರಿಸ್ಥಿತಿ ಬಗ್ಗೆ ದೂರುವಂತಿಲ್ಲ. ಎದುರಾಳಿ ತಂಡದ ಬೌಲಿಂಗನ್ನು ದಂಡಿಸುವಲ್ಲಿ ವಿಫಲನಾಗುತ್ತಿದ್ದೇನೆ ಅಷ್ಟೆ.

ಯುವರಾಜ್ ಸಿಂಗ್ ಒಬ್ಬ ಆಕ್ರಮಣಕಾರಿ ಆಟಗಾರ ಹಾಗೂ ಅತ್ಯುತ್ತಮ ಕ್ಷೇತ್ರರಕ್ಷಕ. ಈ ಕೌಶಲ್ಯಗಳನ್ನು ಹೊಂದುವಲ್ಲಿ ಹೇಗೆ ಸಫಲರಾದಿರಿ? ಇಂದಿನ ಸ್ಪರ್ಧಾತ್ಮಕ ಕ್ರಿಕೆಟ್ ಲೋಕದಲ್ಲಿ ಯಶಸ್ಸು ಕಾಣಲು ಯುವ ಕ್ರಿಕೆಟರ್ ಹೇಗೆ ಸಜ್ಜಾಗಬೇಕೆಂದು ನೀವು ಹೇಳುತ್ತೀರಿ?

ನನ್ನ ಕೌಶಲ್ಯಗಳ ಬಗ್ಗೆ ಹೇಳುವುದಾದರೆ ಅವುಗಳನ್ನು ನಾನು ಸ್ವಾಭಾವಿಕವಾಗಿಯೇ ಮೈಗೂಡಿಸಿಕೊಂಡದ್ದು. ಯಾರೇ ಆಗಲಿ ಕೌಶಲ್ಯಗಳನ್ನು ಸಾಧಿಸಬೇಕೆಂದರೆ ಸೂಕ್ತ ರೀತಿಯಲ್ಲಿ ಅಭ್ಯಾಸ ನಡೆಸುವುದು ಅಗತ್ಯ. ಇನ್ನು ಕೆಲವು ಆಟಗಾರರಲ್ಲಿ ಕ್ರೀಡಾ ಕೌಶಲ್ಯಗಳು ಸ್ವಾಭಾವಿಕವಾಗಿಯೇ ಮೊಳಕೆಯೊಡೆಯುತ್ತವೆ ಮತ್ತು ಅವುಗಳನ್ನು ಸಣ್ಣ ವಯಸ್ಸಿನಲ್ಲೇ ಮೈಗೂಡಿಸಿಕೊಂಡಿರುತ್ತಾರೆ. ಹಾಗಾಗಿಯೇ ಅಂತಹ ಆಟಗಾರರು ಇತರರಿಗಿಂತ ಭಿನ್ನರಾಗಿ ಕಾಣುತ್ತಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೆಡೆ ಯಶಸ್ಸು ಕಂಡಿದ್ದರೆ ಇನ್ನೊಂದೆಡೆ ವಿಫಲರೂ ಆಗಿದ್ದೀರಿ. ಬ್ಯಾಟಿಂಗ್ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಎಡವುತ್ತಿರುವುದಕ್ಕೆ ಕಾರಣ?

ಸದ್ಯ ನಾನು ಆ ಕುರಿತು ಯೋಚಿಸುವುದನ್ನೇ ನಿಲ್ಲಿಸಿದ್ದೇನೆ. ವೈಫಲ್ಯದ ಕುರಿತೇ ಸದಾ ಯೋಚಿಸುತ್ತಿದ್ದರೆ ನನ್ನ ಮೇಲೆ ನಾನೇ ಒತ್ತಡ ಹಾಕಿಕೊಂಡಂತಾಗುತ್ತದೆ. ಏನು ನಡೆಯಬೇಕೋ ಅದು ನಡೆದೇ ತೀರುತ್ತದೆ. ಯಾರೂ ಅದನ್ನು ತಡೆಯುವಂತಿಲ್ಲ. ಆದರೆ ಯಶಸ್ಸಿಗಾಗಿ ನನ್ನ ಹೋರಾಟವನ್ನು ಎಂದೂ ನಿಲ್ಲಿಸುವುದಿಲ್ಲ.

ಇಂಗ್ಲೆಂಡ್ ಹಾಗೂ ಟ್ವೆಂಟಿ-20 ವಿಶ್ವಕಪ್ ಸಂದರ್ಭದಲ್ಲಿ ನಿಮ್ಮ ಬ್ಯಾಟಿಂಗ್ ಫಾರ್ಮ್ ಅತ್ಯುತ್ತಮವಾಗಿತ್ತು. ಟ್ವೆಂಟಿ-20 ವಿಶ್ವಕಪ್‌ನ ಅನುಭವ ಹೇಗಿತ್ತು? 6 ಎಸೆತಗಳಲ್ಲಿ ಭರ್ಜರಿ 6 ಸಿಕ್ಸರ್ ಬಾರಿಸಿದಾಗ ಏನನ್ನಿಸಿತು?

ಓಹ್! ಅದೊಂದು ಅದ್ಭುತ ಅನುಭವ... ಒತ್ತಡಗಳಿಲ್ಲದೆ ಬ್ಯಾಟ್ ಮಾಡಿದಾಗ ನಾನು ನಿಜವಾಗಿಯೂ ಉಲ್ಲಸಿತನಾಗಿದ್ದೆ. 6 ಸಿಕ್ಸರ್ ಹೊಡೆದದ್ದು ವಿಶೇಷ ಖುಷಿ ತಂದರೂ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧದ ಅರ್ಧ ಶತಕ ಮರೆಯಲಾಗದ್ದು.

ನೀವು ಬಾಲಿವುಡ್‌ನಿಂದ ಆಕರ್ಷಿತರಾದಂತೆ ಕಾಣುತ್ತೀರಿ. ನಿಮ್ಮ ನೆಚ್ಚಿನ ಚಿತ್ರ ಹಾಗೂ ಕಲಾವಿದರು ಯಾರು? ಯುವರಾಜ್ ಬೆಳ್ಳಿತರೆಗೆ ಕಾಲಿಡಲಿದ್ದಾರೆಯೇ?

ಇಲ್ಲ. ಬಾಲಿವುಡ್ ಬಗ್ಗೆ ನಾನು ಹೆಚ್ಚು ಯೋಚಿಸಿಲ್ಲ. ಆದರೆ ಹಿಂದಿ ಚಿತ್ರಗಳು ನನಗೆ ಅಚ್ಚುಮೆಚ್ಚಿನವು ಎಂಬುದರಲ್ಲಿ ಅನುಮಾನವೇ ಇಲ್ಲ. ಕ್ರಿಕೆಟ್ ಬಗ್ಗೆ ಸದಾ ಚಿಂತಿಸುತ್ತಿರುತ್ತೇನೆಯೇ ಹೊರತು ಬಾಲಿವುಡ್ ಕಡೆ ಗಮನಹರಿಸಿಲ್ಲ.

ಕ್ರಿಕೆಟ್‌ನಲ್ಲಿ ನೀವೊಬ್ಬ ಅರೆಕಾಲಿಕ ಬೌಲರ್. ಆದರೆ ಬೆಂಗಳೂರಿನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮೂಲಕ ಪಾಕ್ ಬ್ಯಾಟಿಂಗ್ ಪಡೆಗೆ ಬಿಸಿ ಮುಟ್ಟಿಸಿದ್ದಿರಿ. ಬೌಲಿಂಗ್ ನಡೆಸುವಾಗ ಮನದಲ್ಲಿ ಏನನ್ನು ಯೋಚಿಸುತ್ತಿರುತ್ತೀರಿ?

ನನ್ನ ಬೌಲಿಂಗ್ ಕುರಿತಾಗಿ ನಾನು ಹೆಚ್ಚು ಯೋಚಿಸಲು ಹೋಗಿಲ್ಲ. ಬೌಲಿಂಗ್ ಮಾಡುತ್ತೇನೆ ಅಷ್ಟೆ.

ಪ್ರಸ್ತುತ ಭಾರತ ಕ್ರಿಕೆಟ್ ತಂಡದಲ್ಲಿ ಹಲವಾರು ಉತ್ಸಾಹಿ ಯುವ ಆಟಗಾರರಿದ್ದಾರೆ. ಭಾರತ ತಂಡದ ಭವಿಷ್ಯದ ಯೋಜನೆಗಳ ಕುರಿತು ನೀವೇನು ಹೇಳುತ್ತೀರಿ? ಮುಂದಿನ 5 ವರ್ಷಗಳವರೆಗೆ ತಂಡ ನಿರಂತರ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ಯಶಸ್ಸು ಸಾಧಿಸಲು ಏನು ಮಾಡಬೇಕು?

ಯುವ ಆಟಗಾರರಿಗೆ ಸೂಕ್ತ ತರಬೇತಿ ನೀಡುವುದು ಹಾಗೂ ಅವರಲ್ಲಿ ಸಾಕಷ್ಟು ಆತ್ಮವಿಶ್ವಾಸ ಬೆಳೆಯುವಂತೆ ಮಾಡಬೇಕು. ಉತ್ತಮ ಯುವ ಬೌಲರ್‌ಗಳು ಹಾಗೂ ಅದ್ಭುತ ಕ್ಷೇತ್ರರಕ್ಷಕರ ಪಡೆಯೇ ನಮ್ಮಲ್ಲಿದೆ. ಹಾಗಾಗಿ ಈಗಿನಿಂದಲೇ ಹೆಚ್ಚಿನ ಅಭ್ಯಾಸ ನಡೆಸಿದಲ್ಲಿ ಮುಂಬರುವ ವಿಶ್ವಕಪ್‌ಗೆ ಭಾರತ ತಂಡ ಸಕಲ ರೀತಿಯಲ್ಲಿ ಸಜ್ಜಾಗುವಲ್ಲಿ ಸಂಶಯವೇ ಇಲ್ಲ.

ಇತ್ತೀಚೆಗೆ ಹುಟ್ಟಿಕೊಂಡಿರುವ ಬಿಸಿಸಿಐ ಪ್ರಾಯೋಜಿತ 'ಇಂಡಿಯನ್ ಪ್ರೀಮಿಯರ್ ಲೀಗ್' (ಐಪಿಎಲ್) ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಐಪಿಎಲ್ ಆಟಗಾರನಾಗಬೇಕೆಂಬ ಆಕಾಂಕ್ಷೆ ನಿಮಗಿದೆಯೇ? ಹಾಗಿದ್ದಲ್ಲಿ ಐಪಿಎಲ್‌ನಿಂದ ನೀವೇನನ್ನು ನಿರೀಕ್ಷಿಸುತ್ತೀರಿ ಮತ್ತು ಅದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ?

ಹೌದು, ಐಪಿಎಲ್ ನಿಜವಾಗಿಯೂ ಉತ್ಸಾಹಿ ಕ್ರಿಕೆಟ್ ಸಂಸ್ಥೆ. ಅಂತರ್ ರಾಷ್ಟ್ರೀಯ ಕ್ರಿಕೆಟ್ ಆಟಗಾರರೊಂದಿಗೆ ಆಡಲು ಇಲ್ಲಿ ಅವಕಾಶ ದೊರಕುವುದರಿಂದ ಕ್ರಿಕೆಟ್‌ನಲ್ಲಿ ನಾವು ಹೆಚ್ಚಿನದನ್ನು ಕಲಿಯಲು ಸಾಧ್ಯ. ಹಾಗೇ ಪ್ರಥಮ ದರ್ಜೆ ಹಾಗೂ 21ರ ವಯೋಮಿತಿ ಒಳಗಿನ ಆಟಗಾರರಿಗೆ ಅಂತರ್ ರಾಷ್ಟ್ರೀಯ ಆಟಗಾರರೊಂದಿಗೆ ಬೆರೆಯಲು ಉತ್ತಮ ಅವಕಾಶ. ಆದರೆ ನನ್ನ ಪ್ರಕಾರ ಎರಡನೇ ವರ್ಷದಲ್ಲಿ ಐಪಿಎಲ್ ಉತ್ತಮ ಸಂಸ್ಥೆಯಾಗಿ ಹೊರಹೊಮ್ಮಲು ಸಾಧ್ಯ.

 ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .