ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಗೌತಮ್ ಭಿಮಾನಿ
ತವರಿಗೆ ಮರಳುವ ತವಕದ ನಡುವೆ...
 

ಗೊ ಗೊನಲ್ಲಿ ಭಾರತೀಯ ತಿಂಡಿಪೋತರ ಸಂತೆ ನೆರೆದಾಗ

ಕಳೆದ 29 ವರ್ಷಗಳಿಂದ ಸತತವಾಗಿ ಆಸ್ಟ್ರೇಲಿಯದಲ್ಲಿ ತ್ರಿಕೋನ ಸರಣಿ ನಡೆಯುತ್ತಲೇ ಬಂದಿದೆ. ಈ ಬಾರಿ ಆಸ್ಟ್ರೇಲಿಯ-ಭಾರತ-ಶ್ರೀಲಂಕಾ ನಡುವೆ ನಡೆಯುತ್ತಿರುವುದು ಅಂತಹ 29ನೇ ಸರಣಿ. ಈ ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದು ಹೋಗಲಿದೆ. ಈ ದೀರ್ಘ ಅವಧಿಯ ನಡುವೆ ಸರಣಿಯ ಪ್ರಾಯೋಜಕರು ಬದಲಾಗಿದ್ದಾರೆ. ಹಲವು ಬಾರಿ ಸರಣಿಯ ಹೆಸರುಗಳು ಕೂಡ ಬದಲಾಗಿವೆ. ಅವೆಲ್ಲದರ ನಡುವೆ ಆತಿಥೇಯ ಆಸ್ಟ್ರೇಲಿಯ 18 ಬಾರಿ ತ್ರಿಕೋನ ಸರಣಿಯನ್ನು ಗೆದ್ದ ಖ್ಯಾತಿ ಪಡೆದಿದೆ. ಈ ಬಾರಿ ದೀರ್ಘವಾಗಿರುವ ಸರಣಿ ಮುಗಿದರೆ ಸಾಕು ಎಂದು ಕೆಲವರಂತೂ ಜಪ ಮಾಡಲಾರಂಭಿಸಿಯಾಗಿದೆ. ಅದರಲ್ಲಂತೂ ಕಳೆದ ಎರಡು ತಿಂಗಳಿಗಿಂತ ಹೆಚ್ಚು ಅವಧಿಯಷ್ಟು ಕಾಲ ಸರಣಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಆಟಗಾರರು ಮತ್ತು ಮಾಧ್ಯಮ ಪ್ರತಿನಿಧಿಗಳು ತವರಿಗೆ ಮರಳುವ ತವಕದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಗಳಿಸಿದ ರನ್‌ಗಳ ಸಂಖ್ಯೆ ಅಥವಾ ಬಿದ್ದ ವಿಕೆಟ್‌ಗಳ ಸಂಖ್ಯೆ ಮತ್ತು ಹೊಟೇಲ್ ಕೋಣೆಯ ಸಂಖ್ಯೆಯ ನಡುವಿನ ವ್ಯತ್ಯಾಸ ತಿಳಿಯದ ಮಟ್ಟಿಗೆ ನಾವಿಲ್ಲಿ ಮುಳುಗಿ ಹೋಗಿದ್ದೇವೆ. ನಾವು ಮುಂದೆ ಹಿಡಿಯಬೇಕಾದ ವಿಮಾನದ ಸಂಖ್ಯೆಯೆಷ್ಟು, ನಮ್ಮ ಜೊತೆಯಲ್ಲಿ ಸದಾ ಇರುವ ಸೂಟ್‌ಕೇಸ್‌ನ 'ಕಾಂಬಿನೇಷನ್ ಲಾಕ್' ತೆಗೆಯಲು ಬಳಸಬೇಕಾದ ರಹಸ್ಯ ಸಂಖ್ಯೆಯೇನು ಎಂಬ ಗೊಂದಲ ಕೂಡ ಕಾಡಲಾರಂಭಿಸಿದೆ. ಇಲ್ಲಿನ ಕ್ವಾಂಟಾಸ್ ಏರ್‌ಲೈನ್ಸ್‌ನ ಸಿಬ್ಬಂದಿಗೆ ಈಗ ನಾವು ಎಷ್ಟರ ಮಟ್ಟಿಗೆ ಪರಿಚಯಸ್ಥರಾಗಿ ಬಿಟ್ಟಿದ್ದೇವೆಂದರೆ ಸೀದಾ ನಮ್ಮ ಹೆಸರು ಹಿಡಿದು ಅವರು ಕರೆಯಲಾರಂಭಿಸಿದ್ದಾರೆ. ಅಲ್ಲಿ ತವರಿನಲ್ಲಿರುವ ನಮ್ಮ ಕುಟುಂಬದ ಸದಸ್ಯರು ನಮ್ಮ ಹೆಸರು ಮರೆಯದೇ ಹೋದಲ್ಲಿ ಅದೇ ನಮ್ಮ ಪುಣ್ಯ! ಕಾರವಾನ್‌ಗಳ ಬಗ್ಗೆ ಬರೆಯಲು ಹೊರಟಿರುವ ನಾನು ಈ ನಡುವೆ ಒಂದು ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪಿಸದೇ ಹೋದಲ್ಲಿ ಅದು ಅಪೂರ್ಣವಾಗಿ ಹೋಗಲಿದೆ. ಆ ಘಟನೆಯಂತೂ ಸರಣಿಗಿಂತ ದೊಡ್ಡ ಘಟನೆಯಾಗಿ ಹೊರಹೊಮ್ಮಿದೆ. ಅದು ಯಾವುದೆಂದರೆ ಆಸ್ಟ್ರೇಲಿಯದ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ನಿವೃತ್ತಿಯ ವಿಷಯ. ಆಸ್ಟ್ರೇಲಿಯ ಮತ್ತು ಶ್ರೀಲಂಕಾ ನಡುವೆ ಪರ್ತ್‌ನ ವಾಕಾ ಮೈದಾನದಲ್ಲಿ ನಡೆದ ಏಕದಿನ ಪಂದ್ಯದ ಮೇಲೆ ಗಿಲ್ಲಿ ನಿವೃತ್ತಿಯ ದಟ್ಟ ಮೋಡ ಕವಿದಿತ್ತು. ಗಿಲ್ಲಿ ಪಾಲಿಗೆ ವಾಕಾ ತವರು ಮನೆ. ಅದು ತವರಿನಲ್ಲಿ ಅವರಾಡುತ್ತಿದ್ದ ಕೊನೆಯ ಪಂದ್ಯ. ತವರಿನ ಜನ ಅವರ ಗಿಲ್ಲಿಗೆ ವಿದಾಯ ಹೇಳಲು ವಿಶೇಷವಾದ ಗ್ಲೌವ್ ಕಟೌಟ್ ಧರಿಸಿ ನಿಂತಿದ್ದರು. ಅದೂ 10,000ದಷ್ಟು ಕಟೌಟ್‌ಗಳು! 2004ರಲ್ಲಿ ಸ್ಟೀವ್ ವಾ ನಿವೃತ್ತರಾದಾಗ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅವರ ಅಭಿಮಾನಿಗಳು ಕೆಂಪು ಬಣ್ಣದ ಕರ್ಚೀಫ್‌ಗಳನ್ನು ಕೈಯಲ್ಲಿ ಹಿಡಿದು ವಿದಾಯ ಗೀತೆ ಹಾಡಿದ್ದರು. ಇಲ್ಲಿ ಗ್ಲೌವ್ ಕಟೌಟ್ ಹಿಡಿದ ಪ್ರೇಕ್ಷಕರು ಗಿಲ್ಲಿಗೆ ಗೌರವ ಸಲ್ಲಿಸಿದರು. ಗಿಲ್ಲಿ ಕೂಡ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಶತಕ ಸಿಡಿಸುವ ಮೂಲಕ ಭರ್ಜರಿ ವಿದಾಯ ಹೇಳಿದರು. ಲಿಲ್ಲಿ- ಮಾರ್ಷಲ್ ಸ್ಟ್ಯಾಂಡ್‌ನ ಮೊದಲ ಸಾಲಿನಲ್ಲಿ ಕೂತಿದ್ದ ಸಹೋದರನನ್ನು ಮೈದಾನದ ಹೊರ ಬಂದ ಕೂಡಲೇ ಅಪ್ಪಿಕೊಂಡ ಗಿಲ್ಲಿ ಅವರ ಕಣ್ಣೀರು ಒರೆಸಿದರು. ಗಿಲ್ಲಿ ಅಡಿಲೇಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಅವರ ಸಹೋದರನನ್ನು ಬಿಟ್ಟು ಕುಟುಂಬದ ಬೇರೆಲ್ಲ ಸದಸ್ಯರೂ ಅಲ್ಲಿ ಹಾಜರಿದ್ದಿದ್ದರು. ಅದು ಹೇಗಾಯಿತು ಎಂದರೆ ಸೆಲ್‌ಫೋನ್ ರೇಂಜ್ ಇರದ ಒಂದು ನಿಗೂಢ ಸ್ಥಳದಲ್ಲಿ ಅವರ ಸಹೋದರ ರಜಾದ ಮಜಾವನ್ನು ಅನುಭವಿಸುತ್ತಿದ್ದರಂತೆ. ಆ ಕಾರಣದಿಂದಾಗಿ ಗಿಲ್ಲಿಗೆ ಒಡ ಹುಟ್ಟಿದವನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಆ ಐತಿಹಾಸಿಕ ಕ್ಷಣದಲ್ಲಿ ಅವರಿಗೆ ಅಡಿಲೇಡ್‌ಗೆ ಬರಲಾಗಲಿಲ್ಲ. ಇನ್ನು ನಮ್ಮ ವೀಕ್ಷಕ ವಿವರಣೆಗಾರರ ತಂಡವಂತೂ ಕ್ರಿಕೆಟ್ ಮೈದಾನದ ಒಳಗಿನ ಘಟನೆಗಳ ಜೊತೆಗೆ ಹೊರಗಿನ ವಿಷಯಗಳ ಮೇಲೆ ಕೂಡ ಸಾಕಷ್ಟು ಗಮನ ಕೇಂದ್ರೀಕರಿಸಿತ್ತು. ಅದಕ್ಕೆ ಹಲವಾರು ಸ್ಪಷ್ಟ ಕಾರಣಗಳೂ ಇದ್ದವು. ಆ ಪೈಕಿ ಒಂದು ಕಾರಣ ಗೊ ಗೊ ಮದ್ರಾಸ್ ಕರಿ ಹೌಸ್. ಗೊ ಗೊ ಕರಿಹೌಸ್‌ನ ಗೋವರ್ಧನ ಇಲ್ಲಿನ ಅತ್ಯಂತ ಸುಪ್ರಸಿದ್ಧ ವ್ಯಕ್ತಿ. ವಾಕಾದಲ್ಲಿ ಪ್ರತಿ ಬಾರಿ ಕ್ರಿಕೆಟ್ ಪಂದ್ಯ ನಡೆದಾಗಲೂ ಆತಿಥೇಯ ಹಾಗೂ ಪ್ರವಾಸಿ ತಂಡದ ಹೊಟ್ಟೆ ತುಂಬಿಸುವ ಜವಾಬ್ದಾರಿಯನ್ನು ಗೋವರ್ಧನ ಹೊರುತ್ತಾರೆ. ಗೊ ಗೊನಲ್ಲಿ ಕುರಿ ಮರಿಯ ಮೀನಖಂಡದ ಮಾಂಸದಿಂದ ತಯಾರಿಸಿದ ಖಾದ್ಯ ಮೂಲತಃ ಬಾಣಸಿಗನಾದ ಮ್ಯಾಥ್ಯು ಹೇಡನ್ ಪಾಲಿಗೆ ಅಚ್ಚುಮೆಚ್ಚು. ಇನ್ನು ಹಿಂದೊಮ್ಮೆ ಸಚಿನ್ ತೆಂಡೂಲ್ಕರ್ ಈ ಮಾಂಸದ ಖಾದ್ಯ ಬೇಕು ಎಂದಾಗ ಪರ್ತ್‌ನಿಂದ ತಾವೇ ಸ್ವತಃ 'ವಿಶಿಷ್ಟ ಖಾದ್ಯ'ವನ್ನು ತೆಗೆದುಕೊಂಡು ಮುಂಬೈಗೇ ಬಂದಿಳಿದಿದ್ದರು ಗೋವರ್ಧನ. ಅಂತಹ ಗೋವರ್ಧನರ ಗೊ ಗೊಗೆ ನಾವೆಲ್ಲ ಒಂದು ರಾತ್ರಿ ದಾಳಿಯಿಟ್ಟೆವು. ನಾವೆಲ್ಲ ಎಂದರೆ ಗಾವಸ್ಕರ್, ಅಕ್ರಮ್, ಶಾಸ್ತ್ರಿ, ಭೋಗ್ಲೆ ಮತ್ತು ನಾನು. ಜೀವಂತಿಕೆಯ ಸಂಕೇತವಾಗಿರುವ ಬೀಫೋರ್ಟ್ ಸ್ಟ್ರೀಟ್‌ನಲ್ಲಿ ಗೊ ಗೊ ಇದೆ. ಅಪ್ಪಟ ಭಾರತೀಯ ರುಚಿಯಿದ್ದ ಹಪ್ಪಳಗಳೊಂದಿಗೆ ಮಾರ್ಗರೇಟ್ ನದಿಯ ವೈನ್ ಯಾರ್ಡ್‌ನಲ್ಲಿ ರೂಪ ತಳೆದ ಶಿರಾಜ್ ವೈನ್ ಬಾಟಲ್‌ಗಳನ್ನು ನಾವು ಖಾಲಿ ಮಾಡಿದೆವು. ಅದೇ ಸಮಯದಲ್ಲಿ ಗೊ ಗೊನಲ್ಲಿ ಇದ್ದ ಸಚಿನ್ ತೆಂಡೂಲ್ಕರ್ ಅಂಗಿ, ಬ್ಯಾಟ್; ಗ್ಲೆನ್ ಮೆಕ್‌ಗ್ರಾತ್ ಅವರ ಬೂಟು ಮತ್ತು ಮ್ಯಾಥ್ಯು ಹೇಡನ್ ಅವರ ಪಾಕಶಾಸ್ತ್ರದ ಪುಸ್ತಕಗಳು ಕೂಡ ನಮ್ಮ ಗಮನ ಸೆಳೆದವು. ಹಾ! ಮತ್ತೊಂದು ವಿಷಯ. ಕಳೆದ ತಿಂಗಳು ನಾವು ಗೊ ಗೊಗೆ ಊಟಕ್ಕೆ ಹೋಗಿದ್ದಾಗ ಅಲ್ಲಿನ ಪಾಕಶಾಲೆಗೆ ಸದಾ ಭೇಟಿ ನೀಡುವ ಮ್ಯಾಥ್ಯು ಹೇಡನ್ ಅವರು ಅಲ್ಲಿಯೇ ಇದ್ದರು. ಮಾತ್ರವಲ್ಲ ನಮಗೆ ಅವರೇ ಸ್ವತಃ ನಾನ್ ಮತ್ತು ದಾಲ್ ತಯಾರಿಸಿ ಉಣ ಬಡಿಸಿದ್ದರು. ಈ ಬಾರಿಯ ಪಂದ್ಯದ ಪುರುಷೋತ್ತಮ 'ನಲ್ಲಿ ಗೋಷ್ಟ್' (ಫಿಶ್ ಕರಿ) ಕೊನೆಗೂ ನಮ್ಮ ಟೇಬಲ್ ಅಲಂಕರಿಸಿತು. ನಾವು ಅದರ ಮೇಲೆ ದಾಳಿ ಮಾಡಿ ಪ್ಲೇಟ್ ಖಾಲಿಯಾಗುವಷ್ಟರಲ್ಲಿ ಸುನಿಲ್ ಗಾವಸ್ಕರ್ ಅವರ ಮತ್ತೊಂದು ಮುಖ ಕಾಣಿಸಿತು! ಗಾವಸ್ಕರ್ ವರ್ಷಕ್ಕೆ ಐದಾರು ಬಾರಿ ಹೀಗೆ ತಿಂಡಿಪೋತರಾಗಿ ಬಿಡುತ್ತಾರಂತೆ. ಹಾಗಂತ ಅವರೇ ಹೇಳಿದ್ದು. ಈ ಬಾರಿ ಕೂಡ ಅವರ ಪ್ಲೇಟ್ ಕಂಡಾಗ ಅದು ಖಚಿತವಾಯಿತು. ಅವರ ಪ್ಲೇಟ್ ಸಂಪೂರ್ಣವಾಗಿ ಖಾಲಿಯಾದ ಯುದ್ಧಭೂಮಿಯಂತೆ ಕಂಡು ಬಂತು! ನಿಜ ಹೇಳಬೇಕೆಂದರೆ ನಾನು ವಿದೇಶಿ ಪ್ರವಾಸದಲ್ಲಿ ಇದ್ದಾಗ ಭಾರತೀಯ ಆಹಾರಕ್ಕಾಗಿ ಚಡಪಡಿಸುವುದಿಲ್ಲ. ಆದರೂ, ಪರ್ತ್‌ನಿಂದ ಹೊರ ನಡೆಯುವ ಮೊದಲು ಗೊ ಗೊ ಊಟ ನಿಜಕ್ಕೂ ಅರ್ಥ ಪೂರ್ಣವಾಗಿತ್ತು. ಏಕೆಂದರೆ ಇದು ವಿಶ್ವದ ಅತ್ಯಂತ ಏಕಾಂಗಿ ರಾಜಧಾನಿ!

ಟಿಎಸ್‌ಐ

ಇತರ ಪ್ರಸ್ತುತ ಲೇಖನಗಳು

ಭಾರತದ ಮರು ಸಂಶೋಧನ

ಅಂಗಾಂಗ ಮಾರಾಟ ಜಾಲ: ನಿಥಾರಿ ತಿರುವು?

ಮುಂಬೈ ಸಂಘರ್ಷ :ಉರಿವ ಬೆಂಕಿಗೆ ತುಪ್ಪ ಸುರಿದವರು

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .