ಎಂಥಾ ನಟನೆ
ಕೈರಾ ನೈಟ್ಲಿ ಎಂಬ ೨೨ರ ಚೆಲುವೆಗೆ ಮಾಧ್ಯಮ ಎಂದರೆ ಸ್ವಲ್ಪ ಹೆಚ್ಚೇ ಪ್ರೀತಿ ಎನ್ನುವುದೇನೋ ಹೌದು. ಆದರೆ ಅವುಗಳಿಂದ ನುಣುಚಿಕೊಳ್ಳುವ ಉಪಾಯಗಳೂ ಗೊತ್ತಿವೆ. ರೆಡ್ ಕಾರ್ಪೆಟ್ ಅದೆಷ್ಟೋ ಅಪರಿಚಿತ ರೂಪಸಿಯರನ್ನು ಪರಿಚಯಿಸುತ್ತದೆ. ಫೋಟೋಗ್ರಾಫರ್, ಮಾಧ್ಯಮ ಮತ್ತು ಸಾರ್ವಜನಿಕರಂತೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈಕೆಯನ್ನು ಬಿಡದೆ ಕಾಡುತ್ತಾರೆ. ಅದೇನೇನೋ ಆಟ ಆಡಿ ಕೈರಾ ಅವರ ಕಣ್ಣಿಂದ ತಪ್ಪಿಸಿ ಕೊಳ್ಳುತ್ತಾಳಂತೆ. ಓಹೋ ಪರ್‍ವಾಗಿಲ್ವೇ! ರೀಲ್ ಲೈಫ್‌ನಲ್ಲಿ ಮಾತ್ರವಲ್ಲ. ರಿಯಲ್ ಲೈಫ್‌ನಲ್ಲೂ ಚೆನ್ನಾಗೇ ನಟಿಸುತ್ತಾಳೆ ಹುಡುಗಿ!
ಅಷ್ಟು ಸುಲಭವೇ?
'ಗ್ಲಿಟರ್' ಚಿತ್ರದಲ್ಲಿ ಅತಿ ಕೆಟ್ಟದಾಗಿ ನಟಿಸಿದರೂ ಮಾರಿಯಾ ಕ್ಯಾರೆಗೆ 'ಟೆನ್ನೆಸ್ಸೆ' ಚಿತ್ರದಲ್ಲಿ ಅದು ಹ್ಯಾಗೆ ಅವಕಾಶ ಸಿಕ್ಕಿತೋ. ಈ ಚಿತ್ರದಲ್ಲಿ ಮಾರಿಯಾ ಸಾಮಾನ್ಯ ಸ್ತ್ರೀ. ಪರಿಚಾರಿಕೆಯ ಪಾತ್ರದಲ್ಲಿ ಆಕೆ ನಕಲಿ ಮೂಗು ಮತ್ತು ಪೊದೆ ಹುಬ್ಬುಗಳನ್ನು ಹೊತ್ತು ಭಾರೀ ಕಷ್ಟಪಟ್ಟು ಅಭಿನಯಿಸಿದ್ದಾಳೆ! ಇಷ್ಟೆಲ್ಲಾ ಕಷ್ಟ ಯಾಕಪ್ಪಾ? ಸುಮ್ಮನೆ ಹಾಡುತ್ತಾ ಇದ್ದರೆ ಸಾಲದೇ? ಅಭಿನಯ ಎನ್ನುವುದು ಅಷ್ಟು ಸುಲಭವಲ್ಲ ಬಾಲೆ!
ಮತ್ತದೇ ಪ್ರೀತಿ?
ಭಾರತೀಯ ಚಿತ್ರ ನಿರ್ಮಾಪಕರ ಹಾಲಿವುಡ್ ಸೆಳೆತ ಇಂದು ನಿನ್ನೆಯದಲ್ಲ. ಡಿಸ್ನಿಯ 'ಎನ್‌ಚ್ಯಾಂಟೆಡ್' ಚಿತ್ರ ಒಂದೆರಡಲ್ಲ ಮೂರು ನಿರ್ಮಾಪಕರ ಮನ ಸೆಳೆದಿದೆ. ಎಲ್ಲರೂ ಯಥಾ ಪ್ರಕಾರ ಹುಡುಗ- ಹುಡುಗಿ ಭೇಟಿ.. ಪ್ರೀತಿಯನ್ನು ನೆಚ್ಚಿಕೊಂಡವರೇ. ಒಬ್ಬ ನಿರ್ಮಾಪಕರು ಮುಖ್ಯ ಪಾತ್ರಕ್ಕೆ ಖಾನ್ ಮತ್ತು ರೀಲ್ ಲೈಫ್ ರಾಣಿ ಪಾತ್ರಕ್ಕೆ ಐಶ್, ಕರೀನಾ ಅಥವಾ ಕಾಜೋಲ್ ಡೇಟ್ಸ್ ಪಡೆಯಲು ಪರದಾಡುತ್ತಿದ್ದಾರೆ. ಇನ್ನಿಬ್ಬರು ಚಿತ್ರೀಕರಣ ಮುಗಿಸುವ ಆತುರದಲ್ಲಿ ಮಾಮೂಲಿ ಬಜೆಟ್‌ನಲ್ಲಿ, ಹೊಸಬರನ್ನು ಆರಿಸುವ ತರಾತುರಿಯಲ್ಲಿದ್ದಾರೆ. ಹ್ಯಾಪಿ ಹ್ಯಾಪಿ ಎಂಡಿಂಗ್ ಈ ಮೂವರ ಪಾಲಿಗೆ ಸ್ಯಾಡ್ ಆಗದಿದ್ದರೆ ಸಾಕು!
ಪಾಪಚ್ಚಿ ಸ್ಪರ್ಧೆ...
ಈ ಒಂಭತ್ತರ ಪೋರ ದರ್ಶೀಲ್ ಸಫಾರಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾನೆ. ದರ್ಶೀಲ್ ಎನ್ನುವುದಕ್ಕಿಂತ ಇಶಾನ್ ಆವಸ್ತಿ ಎಂದರೆ ತಕ್ಷಣ ನೆನಪಾಗುವುದೇನೋ? ಇತ್ತೀಚೆಗೆ ನಡೆದ 'ಸ್ಕ್ರೀನ್ ಅವಾರ್ಡ್ಸ್'ನಲ್ಲಿ ತನ್ನನ್ನು ಉತ್ತಮ ನಟ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿಲ್ಲ ಎಂದು ಈತ ಅಸಮಾಧಾನಗೊಂಡಿದ್ದ. ಈಗ ೫೩ನೇ ಫಿಲ್ಮ್‌ಫೇರ್ ಪ್ರಶಸ್ತಿಗೆ ದರ್ಶೀಲ್ ಉತ್ತಮ ನಟ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದಾನೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಬಾಲನಟನೊಬ್ಬ ಬಾಲಿವುಡ್ ಘಟಾನುಘಟಿಗಳಿಗೆ ಸವಾಲು ಒಡ್ಡಿದ್ದಾನೆ. ದರ್ಶೀಲ್‌ಗೂ ಇದು ಪ್ರಥಮಾನುಭವ. ಅಲ್ವೇ ಪಾಪಚ್ಚೀ?
'ಮಿಥ್ಯ' ಸೈಡ್ ಎಫೆಕ್ಟ್!
'ಮಿಥ್ಯ' ಚಿತ್ರದ ನಟನೆಗೆ ರಣವೀರ್ ಪ್ರಶಂಸೆಗಳ ಸುರಿಮಳೆ ಪಡೆಯುತ್ತಿರುವುದು ನಿಜಾನೇ. ಆದರೆ ಸುಖಾಸುಮ್ಮನೆ ಬೈಸಿಕೊಳ್ಳೋದು ಅಂದ್ರೆ? ಇತ್ತೀಚೆಗೆ ಪ್ರೀತೀಶ್ ನಂದಿಯ 'ಅಗ್ಲಿ ಔರ್ ಪಗ್ಲಿ' ಚಿತ್ರೀಕರಣ ಸಂದರ್ಭ ಚಂಡಿ ಅವತಾರವೆತ್ತಿದ ಮಲ್ಲಿಕಾ ಶೆರಾವತ್, ರಣವೀರ್ ಮೇಲೆ ಹರಿಹಾಯ್ದಿದ್ದಾಳೆ. ಈ ಪ್ರತಿಭಾವಂತ ನಟನಿಗೆ ವೈರಲ್ ಜ್ವರ ಬಂದು ಸೆಟ್‌ಗೆ ಬರೋದು ಸ್ವಲ್ಪ ತಡವಾದದ್ದೇ ಇದಕ್ಕೆಲ್ಲ ಕಾರಣ. ಸ್ಟಾರ್‌ಪಟ್ಟದ ಲೆಕ್ಕ ಹಾಕೋದು ಅಭಿನಯ ಕೌಶಲ್ಯದಿಂದಲ್ಲ, ದುಡ್ಡು ಎಷ್ಟು ತಗೋತಾ ಇದೀರಾ ಅನ್ನೋದರ ಮೇಲೆ. ಎಲ್ಲರ ಮೂಡ್ ಒಂದೇ ಥರಾ ಇರೋದಿಲ್ಲಪ್ಪಾ ಮಿಸ್ಟರ್ ಶೋರೆ! ಸ್ವಲ್ಪ ಎಚ್ಚರ!
ಗಣೇಶನ ಮದುವೆ: ತವಕ-ತಲ್ಲಣ
ಅಬ್ಬಬ್ಬಾ! ಆ ಹುಡುಗಿ ಅದೇನು ಅದೃಷ್ಟ ಮಾಡಿದ್ದಳೋ... ಅಂತೂ 'ಮಿಂಚಾಗಿ ಬಂದು' ನಮ್ಮ ಗೋಲ್ಡನ್ ಸ್ಟಾರ್ ಮನದನ್ನೆ ಆಗಿ ಬಿಟ್ಟಳಲ್ಲಾ? ತಾರೆಯಾಗುವ ಕನಸು ಕಂಡಿದ್ದ ಶಿಲ್ಪಾ ತಾರಾಪತ್ನಿಯಾದಳು. ಆದರೆ ಆ ಪಟ್ಟದಲ್ಲಿ ಕೂತರೆ ಸಾಕೆ? ಹಿಂದೆಯೇ ಬಿಡುಬೀಸಾಗಿ ಬರುವ ಪ್ರಚಾರ- ಅಪಪ್ರಚಾರವನ್ನೂ ಸಹಿಸಲೇಬೇಕು. ಮಾಧ್ಯಮಗಳು ಈ ಯುವತಿಯ ಪೂರ್ವಾಪರ ಜಾಲಾಡುವ ಜಿದ್ದಿಗೆ ಬಿದ್ದಿವೆ. ಇದರಿಂದಾಗಿ ಯುವ ದಂಪತಿ ಹನಿಮೂನ್ ಬದಲು ಹ್ಯಾಪ್‌ಮೋರೆ ಹಾಕಬೇಕಾಗಿ ಬಂದಿದೆ. ಮದುವೆಯ ಮರುರಾತ್ರಿಯೇ ಪತ್ರಿಕೆಗಳ ಕಚೇರಿಗೆ ಅಡತಾಕಿದ್ದ ಈ ಗೋಲ್ಡನ್ ಸ್ಟಾರ್, ತಮ್ಮಿಬ್ಬರ ಪವಿತ್ರ ಪ್ರೇಮಕ್ಕೆ ಗೌರವ ನೀಡಿ ಬೇಡಿಕೊಂಡದ್ದೂ ಆಯಿತು. ಆದರೆ ರಾತ್ರೋರಾತ್ರಿ ನಡೆದ ಗಣೇಶನ ಮದುವೆಯ ಗದ್ದಲ ಅಷ್ಟು ಬೇಗನೇ ಆರೋ ಹಂಗೆ ಕಾಣಿಸ್ತಿಲ್ಲ. ಅದಕ್ಕೆ ತಕ್ಕ ಹಾಗೆ ಗಣೇಶ್ ಈ ಹಿಂದೆ ನಿಗದಿಯಾಗಿದ್ದ ಅದೇ ಮುಹೂರ್ತದಲ್ಲಿ, ಅದ್ದೂರಿಯಾಗಿ ಶಿಲ್ಪಾಳನ್ನೇ ಮತ್ತೊಂದು ಬಾರಿ ಮದುವೆಯಾಗುತ್ತಿದ್ದಾರೆ! ಹಾಗಿದ್ದಲ್ಲಿ ತರಾತುರಿಯ ಮದುವೆಯಾದರೂ ಏತಕ್ಕೆ? ಗಣೇಶ್ ಅಭಿಮಾನಿಗಳು ಆತ್ಮಹತ್ಯೆಯ ಬೆದರಿಕೆ ಒಡ್ಡಿದ್ದರಂತೆ! ಅಂತೂ ಅಡಿಕೆಮಾರನಹಳ್ಳಿ ಗಣೇಶ್ ಲೈಫೂ 'ಗಾಳಿಪಟ' ಕ್ಲೈಮ್ಯಾಕ್ಸ್ ಆಯ್ತು ಅನ್ನಿ! ಪಾಪ ತಾಳಿ ಕಟ್ಟಿದ ಮರುದಿನ 'ಬೆಚ್ಚಗೆ' ಪತ್ನಿಯೊಂದಿಗೆ ಕಾಲ ಕಳೆಯುವ ಬದಲು ಪತ್ರಿಕೆಗಳ ಕಚೇರಿಗೆ ಅಲೆಯುವ ಮಟ್ಟಕ್ಕೂ 'ಗೋಲ್ಡನ್ ಸ್ಟಾರ್' ಬಂದು ಬಿಟ್ಟನಲ್ಲಾ ಗುರು! ಎಲ್ಲ ಮೇಲಿರೋ ಆ 'ಗಣೇಶ'ನ ಮಹಿಮೆ!
ಎನ್.ಕೆ. ಸುಪ್ರಭಾ, ಪ್ರಸಿದ್ಧ ಮೆನನ್