|
| ಪ್ರಶಾಂತೊ ಬ್ಯಾನರ್ಜಿ |
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್
|
ಡಿಂಪಲ್ ಏದುಸಿರು ಬಿಡುತ್ತಿದ್ದಳು! ಹೌದು, ನನ್ನ ಇಷ್ಟದ ಜೀಪಿಗೆ ನಾನಿಟ್ಟ ಹೆಸರು ಡಿಂಪಲ್ ಎಂದೇ! ಏಕೆಂದರೆ, ಅವಳ ಮೈಮೇಲೆಲ್ಲಾ ಈಗ ಡಿಂಪಲ್ ಬಿದ್ದಿವೆ. ಮೂತಿ, ಬಾಗಿಲು, ಮೇಲ್ಭಾಗ ಎಲ್ಲಾ ಕಡೆ ಗುನ್ನಗಳೇ ಅಲಂಕರಿಸಿರುವುದರಿಂದ ಆಕೆಗೆ ಡಿಂಪಲ್ ಎನ್ನದೇ ಇನ್ನೇನು ಹೇಳಲು ಸಾಧ್ಯ? ಆದರೆ, ಈಗ ವಿಷಯ ಅದಲ್ಲ, ಆಕೆ ಮುನಿಸಿಕೊಂಡಂತೆ ನಡುದಾರಿಯಲ್ಲಿ ಜಪ್ಪೆನ್ನದೆ ನಿಂತುಬಿಟ್ಟಿದ್ದಾಳೆ. ಪಾಪ ಅವಳನ್ನೇ ಬೈಯುವುದು ಸರಿಯಲ್ಲ ಬಿಡಿ, ಏಕೆಂದರೆ, ಆ ಜಾಗ ಮತ್ತು ದಾರಿ ನೋಡಿದರೆ ಅವಳದೇನೂ ತಪ್ಪಿಲ್ಲ ಎಂಬುದು ಯಾರಿಗಾದರೂ ಅರ್ಥವಾದೀತು. ಆಕೆಯ ಮೈಯನ್ನೆಲ್ಲಾ ಆವರಿಸಿದ್ದ ಕೆಂಪು ದೂಳು ಮತ್ತು ತೀರಾ ಪ್ರಯಾಸಪಟ್ಟು ಬೆಟ್ಟವೇರಿದ್ದರಿಂದ ಟೈರುಗಳು ಪ್ಲಾಸ್ಟಿಕ್ ಸುಟ್ಟಂಥ ಘಾಟು ವಾಸನೆ ಹೊಮ್ಮಿಸುತ್ತಿದ್ದವು. ನಿಧಾನವಾಗಿ ಬಾಗಿಲು ತೆರೆದು ಹೊರಬಿದ್ದೆ. ಸ್ವಚ್ಛಂದ ಆಕಾಶದತ್ತ ಒಮ್ಮೆ ದೃಷ್ಟಿ ಹರಿಸಿ, ಡಿಂಪಲ್‌ನತ್ತ ಹೊರಳಿದೆ. ಒಂದು ಕಡೆ ಆಳವಾದ ಕಂದಕ ಮತ್ತೊಂದು ಕಡೆ ಭಾರಿ ಗಾತ್ರದ ಬಂಡೆಗಲ್ಲುಗಳು... ನಡುವಿನ ಕಿರಿದಾದ ದಾರಿಯಲ್ಲಿ ಮುಂದಿನ ಒಂದು ಚಕ್ರ ಕಲ್ಲೊಂದರ ಮೇಲೂ, ಮತ್ತೊಂದು ನೆಲದಿಂದ ಮೇಲೆ ತೇಲುತ್ತಲೂ ಇರುವ ಸ್ಥಿತಿಯಲ್ಲಿ ಡಿಂಪಲ್ ನಿಂತಿದೆ! ನೂರಾರು ಅಡಿ ಆಳದ ಕ್ವಾರಿಯೊಂದರಿಂದ ಹೊರಬರಲು ಇದ್ದದ್ದು ನನಗೆ ಇದೊಂದೇ ದಾರಿ ಬೇರೆ! ಈಗ ಹಠಕ್ಕೆ ಬಿದ್ದಂತೆ ಡಿಂಪಲ್ ನಡುದಾರಿಯಲ್ಲಿ ನಿಂತು ನನ್ನನ್ನು ಪೇಚಿಗೆ ಸಿಲುಕಿಸಿದ್ದಾಳೆ. ಆದರೆ, ಈಗ ಅದನ್ನೆಲ್ಲಾ ಲೆಕ್ಕಾ ಹಾಕುತ್ತಾ ಕೂರುವ ಸಮಯವಲ್ಲ, ಇಲ್ಲಿಂದ ಹೇಗಾದರೂ ನಾವಿಬ್ಬರೂ ಪಾರಾಗಲೇಬೇಕಿದೆ.
ಅಷ್ಟಕ್ಕೂ ನಾನಿಲ್ಲಿ ಏಕೆ ಬಂದು ಸಿಕ್ಕಿಕೊಂಡೆ ಎಂದಿರೋ? ಅದೇ ಹುಲಿರಾಯನ ದೆಸೆಯಿಂದಾಗಿ! ಹೌದು, ಹರಿಯಾಣದ ಗುರ್‌ಗಾಂವ್ ಸಮೀಪದ ಟಿಕ್ಲಿ ಗ್ರಾಮಸ್ಥರ ಹೊಲದ ಬಳಿ ಹುಲಿಯೊಂದು ಕಾಣಿಸಿಕೊಂಡಿದ್ದು, ಅದು ಸಾರಿಸ್ಕಾ ಅಭಯಾರಣ್ಯದ್ದೇ ಇರಬಹುದು ಎಂದು ಮಾಧ್ಯಮಗಳು ಹುಯಿಲೆಬ್ಬಿಸಿದ್ದವು. ಲಖಿ ರಾಮ್ ಎಂಬ ಗ್ರಾಮದ ವಯೋವೃದ್ಧ ಹೊಲದಂಚಿನಲ್ಲಿ ಹುಲಿಯ ಹೆಜ್ಜೆ ಗುರುತುಗಳು ಮೂಡಿರುವುದನ್ನು ಕಂಡಿರುವುದಾಗಿ ಹೇಳಿದ್ದ. ಹಾಗಾಗಿ ನಾನು ಮತ್ತು ಡಿಂಪಲ್ ಇಬ್ಬರೂ ಆ ಲಖಿ ರಾಮನನ್ನು ಹುಡುಕಿ ಹೊರಟಿದ್ದೆವು. ಗುರ್‌ಗಾಂವ್‌ನ ಯಾವುದೇ ಎತ್ತರದ ಪ್ರದೇಶದಲ್ಲಿ ನಿಂತು ಒಂದು ಕಲ್ಲು ಬಿಸಾಕಿದರೆ ಟೆಕ್ಲಿಯ ಒಂದಲ್ಲಾ ಒಂದು ಬದಿಯ ದಾರಿಯಲ್ಲಿ ಸಾಗುವ ಗ್ರಾಮಸ್ಥರ ಮೇಲೇ ಬೀಳುತ್ತದೆ. ಹಾಗಿದೆ ಆ ಊರು. ನಮ್ಮ ಜಗತ್ತಿನಂತಲ್ಲ, ಅಲ್ಲಿ ಅತ್ಯಂತ ವಾಹನ ದಟ್ಟಣೆಯ ರಸ್ತೆಯ ಒಂದು ಬದಿಗೆ ಹೊರಳಿದರೆ ಸಾಕು, ಮರು ಕ್ಷಣವೇ ಕೆಂಪು ಇಟ್ಟಿಗೆಯ ಗೋಡೆ ಮನೆಗಳು, ಸುತ್ತಲ ಸಾಸಿವೆ ಹೊಲದ ಹಳದಿ ಹೂವಿನ ಚೆಂದದ ನಡುವಿನ ಅರಾವಳಿಯ ಕಣಿವೆ ಅದು. ಲಖಿ ರಾಮನ ಮನೆಯ ಆ ಹಾದಿಯಲ್ಲಿ ಸಾಗಿ ಆತನನ್ನು ಜೊತೆಗೆ ಕರೆದುಕೊಂಡು ಹೊರಟೆ. ಆದರೆ, ಆ ದಢೂತಿ ಮನುಷ್ಯ ನನ್ನ ಜೀಪಿನ ಬಾಗಿಲುಗಳಿಗೆ ಹೇಳಿ ಮಾಡಿಸಿದವನಾಗಿರಲಿಲ್ಲ. ಅಂತೂ ಹೇಗೋ ಕಷ್ಟಪಟ್ಟು ಉಸಿರು ಬಿಗಿ ಹಿಡಿದು ಕೂತಿದ್ದ ಆತ ಆ ಹುಲಿಯ ಜಾಡಿನ ತಾವಿಗೆ ಕರೆದೊಯ್ದ.
ಅಲ್ಲಿ, ಆತ ಹುಲಿ ಹೆಜ್ಜೆ ಗುರುತುಗಳನ್ನು ತೋರಿಸುತ್ತಿದ್ದರೆ, ಅಷ್ಟರಲ್ಲಾಗಲೇ ಮಾಸಿದ್ದ ಜಾಡನ್ನು ಗ್ರಹಿಸುವುದು ಯಾರಿಗಾದರೂ ಕಷ್ಟವೇ ಆಗಿತ್ತು. ಆದರೂ, ನನ್ನ ಎಂದಿನ ಅಭ್ಯಾಸದಂತೆ ಆತ ಹೆಜ್ಜೆ ಗುರುತು ತೋರುತ್ತಿದ್ದಂತೆ ಫೋಟೋ ಕ್ಲಿಕ್ಕಿಸಿದೆ. ನಂತರ ಆತ ಹಸುವಿನ ಅಸ್ಥಿಪಂಜರವೊಂದನ್ನು ತೋರಿಸಿ ಅದು ಹುಲಿ ಉಳಿಸಿದ ಸಾಕ್ಷಿ ಎಂದ. ಅದೇನೂ ಮಾತನಾಡುತ್ತಿರಲಿಲ್ಲವಾದ್ದರಿಂದ ಅದನ್ನು ಕೂಡ ನಿರ್ಣಾಯಕ ಸಾಕ್ಷಿ ಎನ್ನುವಂತಿರಲಿಲ್ಲ. ನಂತರ ನಾನು ಮತ್ತಷ್ಟು ಹೆಜ್ಜೆ ಗುರುತುಗಳಿಗಾಗಿ ಹುಡುಕಾಡುತ್ತಿದ್ದೆ. ಅಷ್ಟರಲ್ಲಿ ಒಂದು ಕುರಿ ಮಂದೆಯೂ ಅದರ ಹಿಂದೆ ಒಬ್ಬ ಎತ್ತರದ ಒಂಟಿ ಕಣ್ಣಿನ ಕಾವಲುಗಾರನೂ ಪ್ರತ್ಯಕ್ಷನಾದ. ಆತನ ಹೆಸರು ದಯಾ ರಾಮ, ಆ ಪ್ರಾಣಿ ಇಲ್ಲೇ ಇದೆ. ನನ್ನ ಎರಡು ಕುರಿಗಳನ್ನು ಅದು ತಿಂದು ಹಾಕಿದೆ. ಒಂದನ್ನಂತೂ ಕಳೆದ ವಾರವಷ್ಟೇ ಬಲಿ ತೆಗೆದುಕೊಂಡಿತು ಎಂದ ಆತ.
ಹೌದಾ, ಹಾಗಾದರೆ ಅದು ಎಲ್ಲಿರುತ್ತದೆ ಎಂದರೆ, ಆತ ಎದುರಿನ ಬೆಟ್ಟದತ್ತ ಬೆರಳು ಮಾಡಿ ಅಲ್ಲಿ ಹೋಗು, ಅಲ್ಲಿನ ಪೊದೆಗಳಲ್ಲೇ ಅದು ಇರುತ್ತದೆ ಎಂದ. ಆ ಬೆಟ್ಟ ಸುತ್ತಲಿನ ಉಳಿದವುಗಳಂತೆಯೇ ಕುರುಚಲು ಕಾಡನ್ನು ಹೊಂದಿದ್ದರೂ ಅವುಗಳ ಸುತ್ತಲಿನ ಬೇಲಿ ಆ ಕಾಡು ಕೂಡ ತುಂಬಾ ದಿನ ಉಳಿಯಲಾರದು ಎನ್ನುತ್ತಿತ್ತು. ನಾನು ಮತ್ತೊಂದಿಷ್ಟು ಗ್ರಾಮಸ್ಥರನ್ನು ಭೇಟಿ ಮಾಡಿದೆ. ಅವರು ಕೂಡ ಖಚಿತವಾಗಿ ಏನನ್ನೂ ಹೇಳಲಿಲ್ಲ. ನಾನು ಆ ಬೆಟ್ಟವನ್ನು ಸಂಪೂರ್ಣ ಜಾಲಾಡಿದೆ. ಪ್ರತಿ ಪೊದೆ, ಮೂಲೆ-ಮೂಲೆಯನ್ನೂ ಎಡತಾಕಿದೆ. ಹುಲಿಯಿರಲಿ ಒಂದು ಇಲಿಯೂ ನನ್ನ ಕಣ್ಣಿಗೆ ಬೀಳಲಿಲ್ಲ. ಅಲ್ಲಿ ಇದ್ದದ್ದೆಲ್ಲಾ ಬರಿ ಭಾರಿ ಆಳದ ಕಲ್ಲು ಕ್ವಾರಿಗಳು ಮಾತ್ರ. ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ನನ್ನ ಡಿಂಪಲ್ ಸಿಕ್ಕಿಬಿದ್ದಿತ್ತು.
ನಾನು ಅದರ ಬೆನ್ನಿನ ಮೇಲೆ ಒರಗಿ ನೀಲಾಕಾಶದಲ್ಲಿ ದೃಷ್ಟಿ ನೆಟ್ಟಿದ್ದೆ. ಮನದಲ್ಲಿ ಎಲ್ಲವೂ ಸುಳಿದು ಹೋಯಿತು. ಹಾಗೇ ಕನಿಷ್ಠ ಆಕಾಶದಲ್ಲಾದರೂ ಹದ್ದು- ಗಿಡುಗಗಳು ಹಾರಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ, ಆ ನಿರೀಕ್ಷೆ ಕೂಡ ಹುಸಿಯಾಯಿತು. ಏಕೆಂದರೆ, ಪಾಪದ ಆ ಜೀವಗಳು ಅಳಿದು ಹಲವು ವರ್ಷಗಳೇ ಉರುಳಿದ್ದವು. ಹಾಗೇ ಅಲ್ಲಿ ಹುಲಿಗಳೂ ಕೂಡ ಇರಲಿಲ್ಲ. ಸದ್ಯದ ಭೂತ ಕಾಲದಲ್ಲಿ ಕೂಡ ಅಲ್ಲಿ ಅವು ಇದ್ದಿರುವ ಸಾಧ್ಯತೆಗಳೂ ಇಲ್ಲ. ಏಕೆಂದರೆ, ಸಮೀಪದ ಸಾರಿಸ್ಕಾ ಅಭಯಾರಣ್ಯದಲ್ಲೇ ಹುಲಿಗಳ ಸಂತತಿ ಸರ್ವನಾಶವಾಗಿ ಬಹಳ ಕಾಲವಾಗಿದೆ. ನೀಲ್ಗಾಯ್ ಹೊರತುಪಡಿಸಿ, ಅಲ್ಲಿ ಯಾವುದೇ ಸಸ್ಯಾಹಾರಿ ಪ್ರಾಣಿಯನ್ನೂ ನಾನು ಕಾಣಲಿಲ್ಲ. ಅಲ್ಲಿ ಕಣ್ಣಿಗೆ ಬಿದ್ದದ್ದು ಎಂದರೆ ವಿರಳ ಪೊದೆಗಳ ತುಂಡುಭೂಮಿ ಮಾತ್ರ. ಅಲ್ಲಿನ ಪ್ರತಿ ಕುರಿ ಮಂದೆಯೂ ಒಂದಾನೊಂದು ಕಾಲದಲ್ಲಿ ಇಲ್ಲಿ ಜಿಂಕೆಗಳು ದಂಡು-ದಂಡಾಗಿದ್ದವು, ರಾತ್ರಿಗಳಿಗೆ ಹುಲಿ, ಚಿರತೆಗಳ ಘರ್ಜನೆಗಳೇ ಜೀವ ತುಂಬುತ್ತಿದ್ದವು ಎಂಬುದನ್ನು ಮಾತ್ರ ನೆನಪಿಸುತ್ತಿದ್ದವು. ಆದರೆ, ಈಗ ಅಲ್ಲಿ ಕತ್ತೆ ಕಿರುಬ, ನರಿಗಳನ್ನು ಬಿಟ್ಟರೆ ಇನ್ನಾವ ಮಾಂಸಹಾರಿ ಪ್ರಾಣಿಗಳು ಕಾಣಸಿಗವು. ಆದರೆ, ಇಂತಹ ನಿರಾಶೆಯ ನಡುವೆಯೂ ಇರುವ ಒಂದು ಭರವಸೆ ಎಂದರೆ, ಕಾಡು ಇದ್ದಲ್ಲಿ ಹುಲಿ ಇದ್ದರೂ ಇರಬಹುದು ಎಂಬ ನಂಬಿಕೆಯಷ್ಟೇ. ಆ ನಂಬಿಕೆಯ ಕಾರಣಕ್ಕಾಗಿ ಈ ನನ್ನ ಪ್ರಯಾಣ ಎಷ್ಟೇ ವ್ಯರ್ಥವೆನಿಸಿದರೂ ಸಹನೀಯ ಅನ್ನಿಸುತ್ತಿದೆ ಅಷ್ಟೆ!
ಅಕ್ರಮ ಬೇಟೆಗೆ ಬಲಿ
ಆ ಹೆಜ್ಜೆಗುರುತುಗಳನ್ನು ಪರೀಕ್ಷೆಗೆ ಕಳುಹಿಸಲು ಪ್ರತ್ಯಕ್ಷದರ್ಶಿಗಳ ವಿರೋಧಾಭಾಸದ ಹೇಳಿಕೆಗಳೇ ಕಾರಣವಾಯಿತು. 'ವೈಲ್ಡ್‌ಲೈಫ್ ಎಸ್‌ಒಎಸ್' ವನ್ಯಜೀವಿ ಸಂಘಟನೆಯ ಸಹಸಂಸ್ಥಾಪಕ ಕಾರ್ತಿಕ್ ಸತ್ಯನಾರಾಯಣನ್ ಪ್ರಕಾರ, ಇವು ಚಿರತೆ, ಕತ್ತೆಕಿರುಬ ಅಥವಾ ಒಂದು ಬಗೆಯ ಚಿಕ್ಕ ತೋಳ (ಕಯೋಟಿ)ದ ಹೆಜ್ಜೆ ಗುರುತುಗಳಿರಬಹುದು. ಆದರೆ ಹುಲಿಯ ಹೆಜ್ಜೆಗುರುತು ಆಗಲು ಸಾಧ್ಯವೇ ಇಲ್ಲ. ಟೀಕ್ಲಿ ಸಮೀಪದ ಸಾರಿಸ್ಕಾ ಅಭಯಾರಣ್ಯದ ಸುತ್ತಮುತ್ತಲ ಹಳ್ಳಿಗಳ ಹೊರವಲಯದಲ್ಲಿ ಹುಲಿಗಳಿವೆ ಎಂಬ ಸುದ್ದಿ ಇದ್ದರೂ, ಅಕ್ರಮ ಬೇಟೆಗೆ ಇಲ್ಲಿನ ಹುಲಿಗಳು ಬಲಿಯಾಗಿರುವುದು ಮಾತ್ರ ಸತ್ಯ. 2004ರ ನಂತರ ಇಲ್ಲಿ ಹುಲಿಯನ್ನು ಕಂಡವರಿಲ್ಲ.
ಮನುಷ್ಯ- ಪ್ರಾಣಿ ಹೋರಾಟ ಹೊಸ ವಿಷಯವೇನಲ್ಲ. ಜನಸಂಖ್ಯಾ ಸ್ಫೋಟ, ಸ್ಥಳಾವಕಾಶದ ಕೊರತೆ, ಪರಿಸರ ನಾಶ, ಅರಣ್ಯ ಪ್ರದೇಶದ ಅಕ್ರಮ ಕಬಳಿಕೆ ಮುಂತಾದ ಸಮಸ್ಯೆಗಳು ಗಂಡಾಂತರವನ್ನೇ ಸೃಷ್ಟಿಸುತ್ತಿವೆ. 2004ರಲ್ಲಿ ಮುಂಬೈ ನಿವಾಸಿಗಳು ಕೊಲೆಗಡುಕ ಚಿರತೆ ಹಾವಳಿಯಿಂದ ಕಂಗೆಟ್ಟಿದ್ದರು. 2007ರಲ್ಲಿ ನರಿಯೊಂದು ದೆಹಲಿಯ ಹೃದಯ ಭಾಗವನ್ನು ನಡುಗಿಸಿತ್ತು. ಹಾಗೆ ದೆಹಲಿಯನ್ನು ತತ್ತರಿಸಿದ ಇನ್ನೊಂದು ಪ್ರಕರಣ ಕೋತಿ ಕಾಟ. ಟೀಕ್ಲಿಯಲ್ಲಿ ಕಂಡು ಬಂದ ಹೆಜ್ಜೆ ಗುರುತು ಹುಲಿಯದ್ದೋ ಚಿರತೆಯದ್ದೋ ಅಥವಾ ಇನ್ನಾವುದೋ ಪ್ರಾಣಿಯದ್ದೇ ಆಗಿರಲಿ. ಅದು ಉಳಿವಿಗಾಗಿ ಪ್ರಾಣಿಯೊಂದರ ಹೋರಾಟದ ಹೊಸ ಕಥೆ ಹೇಳುತ್ತಿದೆ...
ಐಐಪಿಎಂ
ಥಿಂಕ್ ಟ್ಯಾಂಕ್ |