ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
 
ಇತರ ವಿಭಾಗಗಳು
 
ಚಿಲುಮೆ
ಬೆಳಕಿನಿಂದ ಕತ್ತಲೆಡೆಗೆ?
 
80 ಶತಕೋಟಿ ಟನ್ ಕಲ್ಲಿದ್ದಲು ಸಂಗ್ರಹವಿದ್ದರೂ ತಪ್ಪದ ಇಂಧನ ಬಿಕ್ಕಟ್ಟು
Prasoon
ಪ್ರಸೂನ್ ಮಜುಂದಾರ್
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್

ಧಗೆಯನ್ನು ಸಹಿಸುವ ನಿಮ್ಮ ತಾಳ್ಮೆಗೆ ಈ ಬೇಸಿಗೆ ಪರೀಕ್ಷೆ ಒಡ್ಡಲಿದೆ. ಹಸಿರು ಮನೆ ಅನಿಲ ಪರಿಣಾಮ ಹಾಗೂ ಅದು ವಾತಾವರಣದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಹವಾಮಾನಶಾಸ್ತ್ರಜ್ಞರು ಬಡಬಡಿಸಲಿದ್ದಾರೆ; ಪಾಶ್ಚಿಮಾತ್ಯ ರಾಷ್ಟ್ರಗಳು ಕಾವು ಕೊಟ್ಟು ಉಬ್ಬಿಸಿದ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ರಾಜಕಾರಣಿಗಳೂ- ಹವ್ಯಾಸಿ ಪರಿಸರವಾದಿಗಳೂ ಕಣ್ಣು ಕೋರೈಸುವ ಟಿವಿ ಪರದೆಯ ಮೇಲೆ ಘನಗಂಭೀರ ವಾದವಿವಾದಗಳಲ್ಲಿ ತೊಡಗಲಿದ್ದಾರೆ; ಹವಾಮಾನ ಇಲಾಖೆಯ ಭವಿಷ್ಯವಾಣಿಯಂತೆ ಈ ಬೇಸಗೆಯ ಕಾಠಿಣ್ಯಕ್ಕೆ ಮತ್ತೊಂದು ಆಯಾಮವೂ ಇದೆ. ಮನುಕುಲಕ್ಕೇ ಅಪಾಯ ಒಡ್ಡುವ ಈ ಹೊಸ ಆಯಾಮ, ಭಾರತ ಉದ್ದೇಶಪೂರ್ವಕವಾಗಿಯೇ ತಂದುಕೊಂಡ ಇಂಧನ ಬಿಕ್ಕಟ್ಟಿಗೆ ಸಂಬಂಧಿಸಿದೆ. ದೇಶದ ಉಜ್ವಲ ಭವಿಷ್ಯದ ಮಾತುಗಳನ್ನು, ಭಾರತ- ಅಮೆರಿಕ ನಾಗರಿಕ ಅಣು ಒಪ್ಪಂದದ ಸಾಮರ್ಥ್ಯದ ಕುರಿತ ಬಣ್ಣಬಣ್ಣದ ಸುದ್ದಿಗಳನ್ನೆಲ್ಲಾ ಬಿಟ್ಟು ಬಿಡಿ. ಭಾರತ ಶೇ. 15ರಷ್ಟು ವಿದ್ಯುತ್ ಕೊರತೆ ಎದುರಿಸುತ್ತಿದೆ. 1,28,000 ಮೆ.ವ್ಯಾ. ವಿದ್ಯುತ್ ಅಳವಡಿಸಿದರೂ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ವಿದ್ಯುತ್ ಕಡಿತ ಇದ್ದೇ ಇದೆ. ವಿವಿಧ ಪಂಚವಾರ್ಷಿಕ ಯೋಜನೆಗಳ ಮೂಲಕ ವಿದ್ಯುತ್ ಅಳವಡಿಕೆ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳೆಲ್ಲವೂ ವಿಫಲವಾಗಿವೆ. 9ನೇ ಪಂಚವಾರ್ಷಿಕ ಯೋಜನೆ ತನ್ನ ಗುರಿಯ ಕೇವಲ ಶೇ. 47ರಷ್ಟನ್ನು ಮಾತ್ರ ತಲುಪಲು ಶಕ್ಯವಾಯಿತು. ಹಾಗೆ 8ನೇ ಪಂಚವಾರ್ಷಿಕ ಯೋಜನೆಯ ಸಾಧನೆಯೂ ಶೇ. 54ರಷ್ಟು ಮಾತ್ರ. ಶೇ. 8 ಆರ್ಥಿಕ ಪ್ರಗತಿಯ ಗುರಿ ಹೊಂದಿದ್ದ 10ನೇ ಪಂಚವಾರ್ಷಿಕ ಯೋಜನೆಯ ಡಿಸೆಂಬರ್ 2006ರ ತನಕದ ಸಫಲತೆಯೂ ಕೇವಲ ಶೇ. 58ರಷ್ಟು ಮಾತ್ರ! ಭಾರತ ಎದುರಿಸುತ್ತಿರುವಂಥ ಇಂಧನ ಸಮಸ್ಯೆ ಹಲವಾರು. ಈ ಬಿಕ್ಕಟ್ಟಿಗೆ ಕೊನೆಯೇ ಇಲ್ಲ. ಶಕ್ತಿ ಉತ್ಪಾದನಾ ಕಾರ್ಯಕ್ಷೇತ್ರದ ಜಡ ನಿರ್ವಹಣೆಯಿಂದಾಗಿ ವಿಳಂಬ ಹಾಗೂ ಅಧಿಕ ವೆಚ್ಚ ಸಾಮಾನ್ಯವೆನಿಸಿದೆ. ಜಲ ವಿದ್ಯುತ್ ಉತ್ಪಾದನೆಯ ಮೇಲೆ ಪರಿಸರವಾದಿಗಳ ವಿರೋಧದ ಕರಿನೆರಳು ಚಾಚಿದೆ. ಜಲಾನಯನ ಪ್ರದೇಶಗಳಲ್ಲಿನ ಅರಣ್ಯ ನಾಶದಿಂದ ನದಿಗಳಲೆಲ್ಲಾ ಹೂಳು ತುಂಬಿಕೊಂಡು ಯೋಜನೆಗಳು ವಿಫಲವಾಗುತ್ತಿವೆ. ಉಷ್ಣ ವಿದ್ಯುತ್ ಯೋಜನೆಗಳಲ್ಲಿ ಮತ್ತೊಂದು ರೀತಿಯ ತೊಡಕು. ಕಲ್ಲಿದ್ದಲು ಆಧಾರಿತ ಮಿಥೇನ್ ಯೋಜನೆ ಕಲ್ಪನಾವಸ್ಥೆಯಿಂದ ಕಾರ್ಯರೂಪಕ್ಕೆ ಬರಲಾರದು ಎಂಬುದನ್ನು ಭಾರತದ ಸಮೀಪದೃಷ್ಟಿಯ ಕಲ್ಲಿದ್ದಲು ನೀತಿ ಸಾಬೀತು ಮಾಡಿದೆ. 80 ಶತಕೋಟಿ ಟನ್ನುಗಳ ಕಲ್ಲಿದ್ದಲು ಸಂಗ್ರಹವಿದ್ದರೂ ಲಾಭವಿಲ್ಲ. 1970ರ ರಾಷ್ಟ್ರೀಕರಣ ನೀತಿ ಭಾರತದ ಕಲ್ಲಿದ್ದಲು ಉತ್ಪಾದನೆಯನ್ನು ಗಂಡಾಂತರಕ್ಕೀಡುಮಾಡಿದೆ. ಭಾರತೀಯ ಇಂಧನ ಕ್ಷೇತ್ರಕ್ಕೆ ಕಲ್ಲಿದ್ದಲು ಅತೀ ಮುಖ್ಯ. ಏಕೆಂದರೆ, ಶಕ್ತಿ ಉತ್ಪಾದನೆಯ ನಿರೀಕ್ಷೆಯಲ್ಲಿ ಅಳವಡಿಸಲಾದ ಸಾಮರ್ಥ್ಯದ ಶೇ. 61ರಷ್ಟು ಪ್ರಮಾಣ ಕಲ್ಲಿದ್ದಲನ್ನೇ ಅವಲಂಬಿಸಿದೆ. ಇಂಧನ ಉತ್ಪಾದನೆಯ ಇನ್ನೊಂದು ಮೂಲವಾದ ನೈಸರ್ಗಿಕ ಅನಿಲದ ಅಭಾವವನ್ನೂ ದೇಶ ಎದುರಿಸುತ್ತಿದೆ. ಬಹುತೇಕ ಎಲ್ಲಾ ಅನಿಲ ಆಧಾರಿತ ಸ್ಥಾವರಗಳೂ ತಮ್ಮ ಸಾಮರ್ಥ್ಯದ ಶೇ. 60ರಷ್ಟನ್ನು ಮಾತ್ರ ಉತ್ಪಾದಿಸಲು ಶಕ್ಯವಾಗಿರುವ ಈ ಸಂದರ್ಭದಲ್ಲಿ ಮಹತ್ವದ ನಿರ್ಧಾರದ ಅವಶ್ಯಕತೆ ಇದೆ. ಹಾಗಿರುವಾಗ 2012ರೊಳಗಾಗಿ ನೈಸರ್ಗಿಕ ಅನಿಲ ಆಧಾರಿತ ಶಕ್ತಿ ಉತ್ಪಾದನೆಯನ್ನು ಶೇ. 10ರಿಂದ ಶೇ. 25ಕ್ಕೆ ಏರಿಸಲಾಗುವುದು ಎಂಬ ಇಂಧನ ಸಚಿವಾಲಯದ ಮಾತುಗಳು ನಂಬಲರ್ಹವೇ ಎಂಬುದು ಯಕ್ಷ ಪ್ರಶ್ನೆ. ಅಂತರ್ ರಾಷ್ಟ್ರೀಯ ರಾಜಕೀಯದ ಬಹು ಚರ್ಚಿತ ಅಣುಶಕ್ತಿ ಕ್ಷೇತ್ರವೂ 2020ರೊಳಗಾಗಿ 20,000 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಗುರಿ ಮುಟ್ಟುವ ಯಾವುದೇ ಸಾಧ್ಯತೆಗಳೂ ಕಂಡುಬರುತ್ತಿಲ್ಲ. ಶೀಘ್ರ ಗಮನಹರಿಸಬೇಕಾದ ಭಾರತೀಯ ಇಂಧನ ಉತ್ಪಾದನಾ ಕ್ಷೇತ್ರದ ಇನ್ನೊಂದು ಪ್ರಮುಖ ಭಾಗವೆಂದರೆ ರಾಜಕೀಯವಾಗಿ ಹರಿದು ಹಂಚಿ ಹೋದ ಆಡಳಿತ ವೈಖರಿ. ರಾಜ್ಯ ವಿದ್ಯುತ್ ನಿಗಮಗಳ ಅಧಿಕಾರಶಾಹಿ ಹಾಗೂ ರಾಜಕೀಯ ಸ್ವರೂಪ ಭ್ರಷ್ಟತೆಯಲ್ಲೇ ಮುಳುಗಿಹೋಗಿದೆ. ವಿದ್ಯುತ್ ಕಳವು ಹಾಗೂ ವಂಚನೆಯಿಂದ ನಷ್ಟವಾಗುತ್ತಿದೆ. ಆದರೆ ರವಾನೆ ಹಾಗೂ ವಿತರಣೆಯ ನಷ್ಟದ ರೂಪ ನೀಡಿ ಈ ಮೋಸವನ್ನು ಮರೆ ಮಾಚಲಾಗುತ್ತಿದೆ. ಕೇವಲ ರವಾನೆ ಮತ್ತು ವಿತರಣೆಯ ನಷ್ಟದಿಂದ ಭಾರತದ ಆರ್ಥಿಕತೆ 12.5 ಶತಕೋಟಿ ಡಾಲರ್‌ಗಳಷ್ಟು ನಷ್ಟ ಅನುಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ ವಂಚಕ ಹಾಗೂ ವೇಗವಾಗಿ ಓಡುವ ಮೀಟರ್‌ಗಳ ಮೂಲಕ (ಉದಾಹರಣೆ ದೆಹಲಿ) ಖಾಸಗೀ ವಿದ್ಯುತ್ ವಿತರಕರೂ ಪ್ರಮಾಣಿಕ ಗ್ರಾಹಕರನ್ನು ಸಂಕಷ್ಟಕ್ಕೀಡುಮಾಡಿದ್ದಾರೆ. ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾನು ಹೇಳಲು ಬಯಸುವುದು ಇಷ್ಟೇ; ಈ ಬಾರಿಯ ಭಾರೀ ಧಗೆಯನ್ನು ಸಹಿಸಲು ಸಿದ್ಧರಾಗಿ. ಬೇಗನೇ ಮಳೆಗಾಲ ಶುರುವಾಗಲಿ ಎಂದು ಪ್ರಾರ್ಥಿಸಿ. ಶ್ರೀಮಂತ ಹಾಗೂ ಪ್ರಭಾವೀ ವ್ಯಕ್ತಿಗಳ ಜನರೇಟರ್‌ಗಳಿಗೆ ಮಾತ್ರ ವೈರಸ್ ಸೋಂಕು ಹಬ್ಬಲಿ ಎಂದೂ ಪ್ರಾರ್ಥಿಸಿ! ನಮ್ಮನ್ನು ಹೈರಾಣಾಗಿಸಿದ ಈ ಬಿಸಿ ನಮ್ಮ ದೇಶದ ಉನ್ನತವರ್ಗಕ್ಕೂ ತಗುಲಲಿ ಬಿಡಿ!!

ಐಐಪಿಎಂ
'ಥಿಂಕ್ ಟ್ಯಾಂಕ್'

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .