|
ಪವಾರ್ ಕೃಷಿಯತ್ತ ಗಮನ ಹರಿಸಲಿ
'ಪವಾರ್ 'ಬ್ಯಾಟಿಂಗ್' ಯಾರ ಪರ?' ಟಿಎಸ್‌ಐ ವಿಸ್ತೃತ ವರದಿ ಚೆನ್ನಾಗಿತ್ತು. ಕೃಷಿ ಸಚಿವರಾಗಿದ್ದುಕೊಂಡು ಕ್ರಿಕೆಟ್‌ನಲ್ಲಿ 'ಪವರ್' ತೋರಿಸುತ್ತಿರುವ ಶರದ್ ಪವಾರ್ ಸಾಧನೆ ಮೆಚ್ಚಲೇಬೇಕು! ಪವಾರ್ ಎರಡು ದೋಣಿಗೆ
ಕಾಲಿಟ್ಟಿದ್ದಾರೆ ನಿಜ. ಆದರೆ ಕರ್ತವ್ಯಕ್ಕಿಂತ ಪ್ರತಿಷ್ಠೆ ಮುಖ್ಯವಾಗಬಾರದಲ್ಲವೇ? ಬಿಸಿಸಿಐನ ಅಧ್ಯಕ್ಷರಾದ ಶರದ್ ಪವಾರ್ ಇತ್ತೀಚೆಗೆ ಅಸ್ಟ್ರೇಲಿಯಾ ಪ್ರವಾಸದಲ್ಲಿ ಹರಭಜನ್ ಸಿಂಗ್ ಮೇಲಾದ ಜನಾಂಗೀಯ ನಿಂದನೆಯ ಆರೋಪದ ವಿಚಾರಣೆಗೆ ಟೊಂಕ ಕಟ್ಟಿ ನಿಂತಿದ್ದರು. ಹರಭಜನ್ ಮೇಲೆ ಹೇರಿದ್ದ ಮೂರನೇ ಟೆಸ್ಟ್ ನಿಷೇಧ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ನಿಷೇಧ ರದ್ದಾಗದಿದ್ದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಮಂಗಳ ಹಾಡುವುದಾಗಿ ಐಸಿಸಿಯನ್ನು ಪರೋಕ್ಷವಾಗಿ ಬೆದರಿಸಿ ತೀರ್ಪು ಹರಭಜನ್ ಪರ ಮಾಡುವಲ್ಲಿ ಅವರು ಯಶಸ್ವಿಯಾದರು. ಇದೆಲ್ಲಾ ಸರಿ. ಕ್ರೀಡೆಗೆ ಬೆಂಬಲ ನೀಡುವ ಅವರ ಕಾರ್ಯವನ್ನು ಒಪ್ಪಿಕೊಳ್ಳೋಣ. ಆದರೆ ಅದೇ ರೀತಿ ದೇಶದ ಬೆನ್ನೆಲುಬಾದ ರೈತರು ಇತರರ ಬಾಯಿ ಸಿಹಿಯಾಗಿಸಲು ಕಬ್ಬು ಬೆಳೆದು ಕಹಿ ಅನುಭವಿಸುತ್ತಿರುವುದು ಅವರಿಗೇಕೆ ಕಾಣಿಸುತ್ತಿಲ್ಲ? ತಾನು ಬೆಳೆದ ಬೆಳೆಗೆ ಕೈಯಾರೆ ಬೆಂಕಿಯಿಟ್ಟು ತನ್ನನ್ನೇ ಆತ್ಮಾಹುತಿಗೊಡ್ಡುವಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಅವರೇಕೆ ಕ್ರಿಕೆಟ್ ಬಗ್ಗೆ ತೋರಿಸುವ ಕಾಳಜಿ ಕೃಷಿಗೆ ತೋರಿಸುತ್ತಿಲ್ಲ? ಪವಾರ್ ಅವರು ತಾವು ಕೃಷಿ ಸಚಿವ ಎಂಬುದನ್ನು ಮರೆತಿರುವರೇ? ಇಲ್ಲವಾದಲ್ಲಿ ಕೃಷಿ ಸಚಿವರಾದ ಪವಾರ್ ಕೃಷಿಕರ ಸಮಸ್ಯೆಗೂ ಸ್ಪಂದಿಸುವುದು ಅಗತ್ಯ.
ಎಂ. ಇರ್ಷಾದ್
ವೇಣೂರು
ಸಮಾಧಿಯಿಂದ ಎದ್ದೇಳಿ
ಒಂದೆಡೆ ಇಡೀ ದೇಶದ ಆಹಾರ ಭದ್ರತಾ ವ್ಯವಸ್ಥೆಯೇ ಹದಗೆಡುತ್ತಾ ಸಾಗುತ್ತಿದೆ. ಆದರೆ ಈ ಕುರಿತು ಗಮನ ನೀಡಬೇಕಾಗಿರುವಂತಹ ವ್ಯಕ್ತಿಗಳಿಗೆ ಕಾಳಜಿಯೇ ಇದ್ದಂತಿಲ್ಲ. ತಾನು ಬೆವರು ಸುರಿಸಿ, ಅಷ್ಟು ಅಕ್ಕರೆಯಿಂದ ಬೆಳೆಸಿದ
ಬೆಳೆಗೆ ಬೆಲೆಯೇ ಇಲ್ಲವೆಂದಾದಾಗ ಕೃಷಿಕನ ಪಾಡು ಏನಾಗಬೇಕು? ಸಮೃದ್ಧವಾಗಿ ಬೆಳೆದು ನಿಂತ ಕಬ್ಬಿನ ಗದ್ದೆಗೇ ಬೆಂಕಿ ಕೊಡುತ್ತಿರುವ ರೈತ ಅದೆಷ್ಟು ನೊಂದಿರಬಹುದು? ಸಕ್ಕರೆ ಕಾರ್ಖಾನೆಗಳ ವಿಳಂಬ ನೀತಿ ರೈತರ ಪಾಲಿಗೆ ಸಂಕಷ್ಟ ತಂದಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್‌ಗೆ ರೂ. 850 ಇದ್ದ ಗೋಧಿಯ ಬೆಲೆ ಕುಸಿದು, ಇಂದು ಅದರ ಕನಿಷ್ಟ ಬೆಂಬಲ ಬೆಲೆಯೇ ಕೇವಲ ರೂ. 1000 ಆಗಿರುವುದೂ ಈ ವಿಚಿತ್ರ ಸನ್ನಿವೇಶ ಸೃಷ್ಟಿಗೆ ಮತ್ತೊಂದು ಕಾರಣ. ಈ ನಡುವೆ ಆಹಾರದ ಕೊರತೆಯನ್ನು ಸರಿದೂಗಿಸಲು ಅಪಾರ ಪ್ರಮಾಣದ ಗೋಧಿಯನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಾ ಇದ್ದರೂ ನಮ್ಮ ಕೃಷಿ ಸಚಿವರು ಇನ್ನೂ ಸಮಾಧಿ ಸ್ಥಿತಿಯಲ್ಲೇ ಇರುವಂತಿದೆ. ತಾವು ಕೃಷಿ ಸಚಿವ ಎಂಬುದನ್ನು ಸಂಪೂರ್ಣವಾಗಿ ಮರೆತು, ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಇನ್ನೂ ಕನವರಿಸುತ್ತಲೇ ಇದ್ದಾರೆ. ಆದಷ್ಟು ಬೇಗ ಅವರು ಎಚ್ಚೆತ್ತುಕೊಂಡಲ್ಲಿ ದೇಶದ ಅರ್ಥ ವ್ಯವಸ್ಥೆ ಬಿಗಡಾಯಿಸುವುದನ್ನು ತಪ್ಪಿಸಬಹುದು. ಕೃಷಿಕರೂ ಚೇತರಿಸಿಕೊಳ್ಳಬಹುದು.
ಅಂಕಿತಾ ರೂಪೇಶ್
ಬೆಳವಾಡಿ
ಸರ್ಕಾರಕ್ಕೆ ಕಾಳಜಿ ಏಕಿಲ್ಲ?
'ಅನ್ನದಾತನೇ ಹಸಿದಿರುವಾಗ ದೇಶದ ಕೃಷಿ ಭವಿಷ್ಯ ಹೇಗಿದ್ದೀತು ಹೇಳಿ?' ಎಂಬ ಪ್ರೊ.ಎಂ.ಎಸ್. ಸ್ವಾಮಿನಾಥನ್ ಪ್ರಶ್ನೆ ಇಂದು ದೇಶದ ಪ್ರತಿಯೊಬ್ಬರ ಪ್ರಶ್ನೆಯೂ ಆಗಿದೆ. ಆದರೆ ಇಡೀ ದೇಶವೇ ಕೃಷಿಕರ ಬಗ್ಗೆ ಬೊಬ್ಬಿಟ್ಟರೂ, ರೈತ ತಾನು ಬೆಳೆದ ಬೆಳೆಗೆ ತಾನಾಗಿಯೇ ಬೆಂಕಿಯಿಟ್ಟರೂ ಕೃಷಿ ಸಚಿವಾಲಯ ಮಾತ್ರ ಇನ್ನೂ ನಿದ್ದೆಯಿಂದ ಎಚ್ಚೆತ್ತಿಲ್ಲ. ಸದ್ಯಕ್ಕೆ ಏಳುವಂತಹ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇನ್ನು 'ಸಿಹಿ ಹಂಚುವ ರೈತರ ಕಹಿ ಕಥೆ' (ಶಶಿ ಸಂಪಳ್ಳಿ) ಲೇಖನ ಓದಿ ಕಣ್ಣಂಚಿನಲ್ಲಿ ನೀರು ಜಿನುಗಿತು. ಉತ್ತರ ಪ್ರದೇಶದ ಕಬ್ಬು ಬೆಳೆಗಾರರ ಪರಿಸ್ಥಿತಿ ಇಂದು ದೇಶದ ಎಲ್ಲಾ ರೈತರಿಗೂ ಎದುರಾಗಿದೆ. ದಿನೇ ದಿನೇ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದ್ದರೂ, ಸರ್ಕಾರ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವಿಫಲವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿರುವಂತೆ ಕಾಣುತ್ತಿಲ್ಲ. ಇದರಿಂದಾಗಿ ಬೆಳೆಗಾಗಿ ಸಾಲ ಪಡೆದ ರೈತ ಅದನ್ನು ತೀರಿಸಲಾಗದೆ ಕೊನೆಗೆ ಆತ್ಮಹತ್ಯೆಯೇ ಪರಿಹಾರ ಎಂದುಕೊಳ್ಳುವ ಸ್ಥಿತಿ ಎದುರಾಗಿದೆ. ಅಂಬಾನಿ, ಮಿತ್ತಲ್‌ರಂತಹ ಉದ್ಯಮ ರಂಗದ ಖ್ಯಾತನಾಮರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಾಗ ನಮ್ಮ ದೇಶ ಪ್ರಗತಿಯ ಪಥದತ್ತ ಸಾಗುತ್ತಿದೆ ಎಂದು ಬೀಗುತ್ತೇವೆ. ಆದರೆ ವಾಸ್ತವ ಇದಕ್ಕಿಂತ ಭಿನ್ನ. ಇತ್ತೀಚೆಗೆ ಷೇರು ಮಾರುಕಟ್ಟೆ ಕುಸಿದಾಗ, ಮಾಧ್ಯಮಗಳಿಂದ ಹಿಡಿದು, ಪ್ರಧಾನಿ ಮನಮೋಹನ್ ಸಿಂಗ್‌ವರೆಗೆ ಎಲ್ಲರೂ ಈ ಬಗ್ಗೆ ನಿದ್ದೆಕೆಡಿಸಿಕೊಂಡವರೇ. ಆದರೆ ಈ ದೇಶದ ಬೆನ್ನೆಲುಬು(!) ಎಂದು ಹೆಸರಾದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅದು ಮಾಮೂಲು ಸುದ್ದಿಯಾಗಿಬಿಡುತ್ತದೆ.
ಎನ್. ಶ್ರೀಶಾಂತ್
ಹುನಗುಂದ
ಸಕಾಲಿಕ ಲೇಖನ
'ಪವಾರ್ 'ಬ್ಯಾಟಿಂಗ್' ಯಾರ ಪರ?' ಮುಖಪುಟ ಹೊತ್ತು ಬಂದ 3೪ನೇ ಸಂಚಿಕೆ ಮನಸೂರೆಗೊಂಡಿತ್ತು. ಕೃಷಿ ಸಚಿವರು ಕೃಷಿ ಮೇಲೂ ಕಾಳಜಿ ತೋರುತ್ತಿದ್ದರೆ, ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ ಹೀಗಾಗದಿರುವುದು ವಿಪರ್ಯಾಸವಲ್ಲದೆ ಮತ್ತೇನು? ಈ ಸಂದರ್ಭದಲ್ಲಿ ಸಂಸದ ಶರದ್ ಜೋಶಿ ಅವರು ತಮ್ಮ ಅಂಕಣದಲ್ಲಿ 'ಭಾರತಕ್ಕೆ ತುರ್ತಾಗಿ ಬೇಕಿದೆ ರೈತ ಪರ ಆಡಳಿತ' ಎಂದಿರುವುದು ಸ್ವಾಗತಾರ್ಹ. ಒಂದು ವೇಳೆ ನಮ್ಮ ದೇಶದಲ್ಲಿ ಕೃಷಿ ಪರ ಆಡಳಿತ ವ್ಯವಸ್ಥೆ ಬಂದರೆ ಮಾತ್ರ ಕೃಷಿಕರ ತಲೆನೋವು ಕಡಿಮೆಯಾದೀತು. ಸಕಾಲದಲ್ಲಿ ಉತ್ತಮ ಲೇಖನ ನೀಡಿ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸ ಟಿಎಸ್‌ಐ ಮಾಡಿದೆ.
ಅರ್ವಿನ್ ಡಿಸೋಜಾ
ಬಾಗಲಕೋಟೆ
ದಾನವರಾದ ವೈದ್ಯರು!
'ಸಣ್ಣ ಪ್ರಮಾಣದ ಅಂಗಾಂಗ ಮಾರುಕಟ್ಟೆ ಉದ್ಯಮಕ್ಕೆ ತಕ್ಕ ವಾತಾವರಣ ಈ ದೇಶದಲ್ಲಿದೆ!' (ಅರಿಂದಮ್ ಚೌಧುರಿ) ಸಂಪಾದಕೀಯ ಪ್ರಸ್ತುತ ವಿದ್ಯಮಾನಗಳಿಗೆ ಹಿಡಿದ ಕೈಗನ್ನಡಿ. ವೈದ್ಯರು ಮಾನವರಾಗಿರುವ ತನಕ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಯಾವಾಗ ವೈದ್ಯ ಹಣದ ಲಾಲಸೆಗೆ ಬಲಿಯಾಗಿ ದಾನವನಾದನೋ ಅಂದೇ ಪ್ರತಿಯೊಬ್ಬ ವೈದ್ಯನನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಇಂದು ಅಂಗಾಂಗ ಕಳ್ಳತನ ಮಾತ್ರವಲ್ಲ ಸಾಮಾನ್ಯ ಹೆರಿಗೆಯಲ್ಲೂ ಸಿಸೇರಿಯನ್ ಮಾಡುವುದು, ಸಣ್ಣ- ಪುಟ್ಟ ಖಾಯಿಲೆಗಳಿಗೂ ಎಕ್ಸ್-ರೇ, ಸ್ಕಾನಿಂಗ್ ಅಪರೇಷನ್ ಎಂದೆಲ್ಲಾ ರೋಗಿಗಳಿಂದ ಹಣ ಸುಲಿಗೆ ಮಾಡುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಗಮನಾರ್ಹ ಸಂಪಾದಕೀಯ.
ಅಹ್ಮದ್ ಕುದ್ರಡ್ಕ
ಉಪ್ಪಿನಂಗಡಿ
| ಬಹುಮಾನಿತ ಪತ್ರಗಳು |
ನೂತನ ಪೀಳಿಗೆಗೆ ಮುನ್ನುಡಿ
ಉದ್ಯಮ ಲೋಕದ ಧ್ರುವತಾರೆ ರತನ್ ಟಾಟಾ ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆಯ ಕುರಿತು ಟಿಎಸ್‌ಐ ಅರ್ಥವತ್ತಾಗಿ ವಿವರಿಸಿದೆ. ಐಐವಿದ್ಯಾರ್ಥಿಯಾಗಿರುವ ನಾನು ಆರ್.ಎಂ. ಲಾಲ ಬರೆದಿರುವ 'ಕ್ರಿಯೇಷನ್ ಆಫ್ ವೆಲ್ತ್' ಓದಿದ್ದೆ. ಅದರಲ್ಲಿ ಟಾಟಾ ಹೇಗೆ ಸಂಪತ್ತು 'ಸೃಷ್ಟಿ'ಸಿದರು ಎಂಬುದನ್ನು ತಿಳಿಸಿದ್ದಾರೆ. ಆದರೆ ಆ ಹೊತ್ತಿಗೆ ಬಹುತೇಕ ಭಾರತೀಯರು ಇನ್ನೂ ಸಂಪತ್ತು 'ಸಂಗ್ರಹ' ಮಾಡುವುದರಲ್ಲೇ ನಿರತರಾಗಿದ್ದರು. ದೇಶದಲ್ಲಿ ಮೊದಲ ಉಕ್ಕಿನ ಕಾರ್ಖಾನೆ, ಮೊದಲ ಟ್ರಕ್ಕು ಕಾರ್ಖಾನೆ ಮತ್ತು ಮೊದಲ ವಿಜ್ಞಾನ ಸಂಸ್ಥೆಯನ್ನು ಹುಟ್ಟು ಹಾಕಿದವರು ಟಾಟಾ. ಪ್ರತಿ ಬಾರಿ ಅವರು ಹೊಸ ನೆಲೆಗಳಲ್ಲಿ ತಮ್ಮ ಹಸ್ತ ಚಾಚಿದರು. ಅಷ್ಟೇ ಅಲ್ಲದೆ ಬಹುರಾಷ್ಟ್ರೀಯರ ಸಾಮರ್ಥ್ಯಕ್ಕೇ ಸವಾಲೊಡ್ಡಿದರು. ಭಾರತದ ನೂತನ ಪೀಳಿಗೆಯ ಸಾಧನೆಯ ಹಾದಿಗೆ ಮುನ್ನುಡಿ ಬರೆದರು. ಜಗತ್ತಿನ ಅತೀ ಅಗ್ಗದ ಕಾರನ್ನು ರೂಪಿಸಿದ್ದು ಮಾತ್ರವಲ್ಲ, ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಪ್ರಭುತ್ವ ಸಾಧಿಸಿರುವ ಕ್ಷೇತ್ರಗಳಲ್ಲೂ ಭಾರತ ಭದ್ರವಾಗಿ ನೆಲೆಯೂರಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ರತನ್ ಟಾಟಾ, ಟಿಎಸ್‌ಐ ಮತ್ತು 21ನೇ ಶತಮಾನದ ಎಲ್ಲಾ ಭಾರತೀಯರಿಗೆ ಹ್ಯಾಟ್ಸ್ ಆಫ್!
ಡಾ. ಅಲಿ ಖ್ವಾಜಾ
ಬೆಂಗಳೂರು
ಪುಸ್ತಕಗಳಿಂದ ವಿಮುಖರಾದವರು
ಇಂಟರ್‌ನೆಟ್‌ನಲ್ಲಿ ಮುಳುಗಿರುವ, ವಿಡಿಯೋ ಗೇಮ್ಸ್ ಎನ್ನುತ್ತಿರುವ ಮಕ್ಕಳಿಗೆ ಪುಸ್ತಕ ಓದುವುದೆಂದರೆ ಹಳೆಯ ಅಜ್ಜಿ ಕಾಲದ ಕೆಲಸ ಎಂದೆನಿಸಬಹುದೇನೋ. ಶಾಲಾ ಮಕ್ಕಳಲ್ಲಿ ಕಥೆ ಪುಸ್ತಕ ಓದುವ ಹವ್ಯಾಸ ಮಾಯವಾಗುತ್ತಿದೆ ಎಂದು ಅರಿಂದಮ್ ಚೌಧುರಿ ಹೇಳಿರುವ ವಿಚಾರ ಕಟು ವಾಸ್ತವ. 'ಹ್ಯಾರಿ ಪಾಟರ್' ಮೇನಿಯಾ ಈಗ ಮಕ್ಕಳಲ್ಲಿ ಹೆಚ್ಚುತ್ತಿದ್ದರೂ ಮಲ್ಟಿಮಿಡೀಯಾ ಗೇಮ್ಸ್ ಪುಸ್ತಕವನ್ನು ಮಕ್ಕಳಿಂದ ದೂರವೇ ಇಟ್ಟಿದೆ. ಆದರೆ ಇದಕ್ಕೆ ಕೇವಲ ಮಕ್ಕಳನ್ನಷ್ಟೇ ದೂಷಿಸುವಂತಿಲ್ಲ. ಶೈಕ್ಷಣಿಕವಾಗಿ ಮಕ್ಕಳು ಉತ್ತಮ ಸಾಧನೆ ಮಾಡಬೇಕೆಂದು ಹೆತ್ತವರು ಅವರ ಮೇಲೆ ಅತಿಯಾದ ಒತ್ತಡ ಹೇರುತ್ತಿರುವುದೇ ಪುಸ್ತಕ ಪ್ರೀತಿ ಮಾಯವಾಗುತ್ತಿರುವುದಕ್ಕೆ ಕಾರಣ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಓದುವ ಹವ್ಯಾಸ ರೂಢಿಯಾಗಿಲ್ಲ ಎಂದರೆ ಕಾಲೇಜ್ ಮಟ್ಟದಲ್ಲಿ ಅದನ್ನು ಬೆಳೆಸುವುದು ಅಸಾಧ್ಯ. ನನ್ನ ಪ್ರಕಾರ ಮಕ್ಕಳು ಶಾಲಾ ಮಟ್ಟದಲ್ಲಿರುವಾಗಲೇ ಪಠ್ಯೇತರ ಪುಸ್ತಕ ಓದುವುದನ್ನು ಕಡ್ಡಾಯ ಮಾಡಬೇಕು.
ಹೇಮಂತ್ ಪರೇಖ್
ಇ-ಮೇಲ್ ಮೂಲಕ
ಸ್ವವಿಮರ್ಶೆಯಿಂದ ಸಾಧನೆ
'ಒಲಿಂಪಿಕ್ಸ್'ನಲ್ಲಿ ಭಾರತ ಸ್ಪರ್ಧೆ ನೀಡಲು ಸಾಮರ್ಥ್ಯವಿರುವ ಒಂದು ಪ್ರಬಲ ಪಡೆ ಅಲ್ಲವೇ ಅಲ್ಲ ಎಂಬ ವಿಚಾರವೇ ಆಶ್ಚರ್ಯಕರ. ಬರಲಿರುವ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗಳಿಸುವಲ್ಲಿ ಅತ್ಯಲ್ಪ ಅವಕಾಶಗಳನ್ನು ಪಡೆದಿದೆ. ಪ್ರತಿಷ್ಠಿತ ಅಂತರ್ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆಲ್ಲುವಂತಹ ತರಬೇತಿಯನ್ನು ಯುವಕರಿಗೆ ನೀಡಬೇಕು. ಪಿ.ಟಿ. ಉಷಾ, ನನಗೆ ಅನುಭವದ ಕೊರತೆ ಇದ್ದುದರಿಂದಲೇ ಲಾಸ್‌ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಂಚಿತಳಾದೆ ಎಂದು ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು. ನಮ್ಮಲ್ಲಿ ಕ್ರೀಡೆಗೆ ಅಗತ್ಯವಾದ ಮೂಲ ಸೌಕರ್ಯದ ಕೊರತೆ ಇದೆ. ಪ್ರತಿಭೆ ಇಲ್ಲ ಎನ್ನಲು ಖಂಡಿತ ಸಾಧ್ಯವಿಲ್ಲ. ಕ್ರೀಡೆಗೆ ಪ್ರೋತ್ಸಾಹ ನೀಡುವ ವ್ಯವಸ್ಥೆಯೇ ಇಲ್ಲ. ಕ್ರೀಡಾಳು ಪ್ರಸಿದ್ಧಿ ಹೊಂದಿದರೆ ಅಥವಾ ಪ್ರಸಿದ್ಧಿಯ ಹಂತದಲ್ಲಿ ಇದ್ದಾಗ ಮಾತ್ರ ಪ್ರಾಯೋಜಕರು ಮುಂಬರುತ್ತಾರೆ. ಬೃಹತ್ ಕ್ರೀಡಾಕೂಟ ಏರ್ಪಡಿಸುವುದೆಂದರೆ ಮೂಲಸೌಕರ್ಯಗಳ ಅಭಿವೃದ್ಧಿ, ಕಂಪನಿಗಳೊಂದಿಗೆ ಒಡಂಬಡಿಕೆ ಮತ್ತು ಹಲವರಿಗೆ ಉದ್ಯೋಗ ನೀಡುವುದು ಎಂಬ ವಿಚಾರವನ್ನು ತಿಳಿದುಕೊಳ್ಳಬೇಕಿದೆ.
ನೀಲು ಅಗರ್‌ವಾಲ್
ಇ-ಮೇಲ್ ಮೂಲಕ |
ಅಪರಾಧಿಗಳಿಗೆ ಶಿಕ್ಷೆಯಾಗಲಿ
ಭಾರತದಲ್ಲಿರುವ ದುರ್ಬಲ ಕಾನೂನು ವ್ಯವಸ್ಥೆಯಿಂದಾಗಿ ಇಲ್ಲಿ ಅಕ್ರಮ ದಂಧೆಗಳು ಸಾಮಾನ್ಯ. ಅದರಲ್ಲಿ ಮೂತ್ರಪಿಂಡ ಮಾರಾಟವೂ ಸೇರಿದೆ. ವಿದೇಶಗಳಲ್ಲಿರುವ ಕಠಿಣ ಕಾನೂನು ಅಲ್ಲಿ ಇಂಥ ದಂಧೆಗಳಿಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ವಿದೇಶಿಯರು ಸುಲಭವಾಗಿ ಹಣದ ಆಮಿಷವೊಡ್ಡಿ ಇಲ್ಲಿನ ಬಡವರನ್ನು ಆ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥ ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡುವಲ್ಲಿ ನಮ್ಮ ರಾಜಕಾರಣಿಗಳು, ವೈದ್ಯರು ಶಾಮೀಲಾಗಿದ್ದಾರೆನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ದುರಾಸೆಯಿಂದ ದೇಶವೇ ತಲೆತಗ್ಗಿಸುವಂತೆ ಮಾಡಿರುವ ಇಂಥ ಕೃತ್ಯಗಳಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ನೀಡಲು ಸರ್ಕಾರ ಮುಂದಾದರೆ ಮಾತ್ರ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ. ಈ ಕುರಿತ ಕಳೆದ ವಾರದ ಸಂಪಾದಕೀಯ 'ಸಣ್ಣ ಪ್ರಮಾಣದ ಅಂಗಾಂಗ ಮಾರುಕಟ್ಟೆ ಉದ್ಯಮಕ್ಕೆ ತಕ್ಕ ವಾತಾವರಣ ಈ ದೇಶದಲ್ಲಿದೆ!' (ಅರಿಂದಮ್ ಚೌಧುರಿ) ಅರ್ಥಪೂರ್ಣ ವಿವರಣೆ ನೀಡಿದೆ.
ಲಕ್ಷ್ಮಿಕಾಂತ್ ಕೊಂಪಲ್
ಲಿಂಗಸುಗೂರು
ದುರದೃಷ್ಟ!
ಭಾರತದಲ್ಲಿ ಮಾತ್ರ ಹೀಗಾಗಲು ಸಾಧ್ಯ! ಕ್ರಿಕೆಟ್‌ಗೆ ಸಿಕ್ಕ ಮಾನ್ಯತೆ, ಪುರಸ್ಕಾರ, ಪ್ರಚಾರ ಯಾವ ಭಾರತೀಯ ಕ್ರೀಡೆಗಳಿಗೂ ಸಿಕ್ಕಿಲ್ಲ. ಮಾಧ್ಯಮಗಳಿಂದ ಹಿಡಿದು ಉದ್ಯಮರಂಗದವರೆಗೂ ಕ್ರಿಕೆಟ್ ಅನ್ನು ಅಂಗೈ ಮೇಲಿಟ್ಟು ಪೂಜಿಸುವವರೇ. ಈ ದೇಶದಲ್ಲಿ ಬೇರೆ ಕ್ರೀಡೆಗಳೂ ಇವೆ ಎಂಬುದನ್ನು ಮರೆತವರೇ ಹೆಚ್ಚು. ಅದರ ಮುಂದುವರಿದ ಭಾಗವಾಗಿ ಇದೀಗ ಬಾಲಿವುಡ್ ಥಳಕು ಸೇರಿಕೊಂಡಿದೆ. ಜಾಹೀರಾತು ಮೂಲಕ ಬೇಕಾದಷ್ಟು ಹಣ ಪಡೆಯುವ ಬಾಲಿವುಡ್ ಮತ್ತು ಉದ್ಯಮರಂಗ ಈಗ ಕ್ರಿಕೆಟ್ ರಂಗಕ್ಕೂ ಕಾಲಿಟ್ಟಿರುವುದು ದುರದೃಷ್ಟ. ಕ್ರಿಕೆಟ್ ಆಟವನ್ನು ಬೃಹತ್ ಉದ್ಯಮವಾಗಿ ಪರಿವರ್ತಿಸುವ ಉದ್ದೇಶದಿಂದ ಈ ಒಪ್ಪಂದ ನಡೆದಿದೆ ಎನ್ನುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. 'ತಾರೆಗಳ ತೆಕ್ಕೆಗೆ ಕ್ರಿಕೆಟ್ ಎಂಬ ಚಿನ್ನದ ಗಣಿ' (ಪಲ್ಲವಿ ಶ್ರೀವಾಸ್ತವ) ವಿಶೇಷ ವರದಿ ಬಾಲಿವುಡ್- ಕ್ರಿಕೆಟ್ ಮತ್ತು ಉದ್ಯಮರಂಗದ ಮಿಲನದ ಕುರಿತು ಅರ್ಥವತ್ತಾಗಿ ಓದುಗರಿಗೆ ತಿಳಿಸಿದೆ.
ಎಚ್. ಕಾವೇರಿ ರಂಗನಾಥ್
ಪೊನ್ನಂಪೇಟೆ
ಸರ್ಕಾರದ ವೈಫಲ್ಯ
ಕರ್ನಾಟಕದಂಥ ಸಾಂಸ್ಕೃತಿಕ ರಾಜ್ಯ ಇಂದು ಉಗ್ರರ ಬೀಡಾಗುತ್ತಿರುವುದು ವಿಪರ್ಯಾಸ. ಕಳೆದ ಹತ್ತು ದಶಕಗಳಿಂದ ಉಗ್ರರು ಕರ್ನಾಟಕದಲ್ಲಿ ನೆಲೆಯೂರಿರುವ ಸಂಗತಿ ತಿಳಿದಿದ್ದರೂ, ನಮ್ಮ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮತ್ತೆ ಮತ್ತೆ ಉಗ್ರರ ಹೆಜ್ಜೆಗುರುತುಗಳು ಕಂಡುಬಂದರೂ, ಜನಪ್ರತಿನಿಧಿಗಳು ತಮ್ಮ ಅಧಿಕಾರ ಕಿತ್ತಾಟಗಳಲ್ಲಿ ಮುಂದುವರೆದಿದ್ದರು. ಸರ್ಕಾರ, ಭದ್ರತಾ ವ್ಯವಸ್ಥೆಯ ವೈಫಲ್ಯದಿಂದ ಇಂದು ಕರ್ನಾಟಕ ಉಗ್ರರ ತಾಣವಾಗಿದೆ. 'ಗಂಧದ ನಾಡು, ಉಗ್ರರ ಬೀಡು?' (ಚಿತ್ರಾ ಕರ್ಕೇರಾ) ಲೇಖನ ಸಕಾಲಿಕ.
ಅನುರಾಧ ರಾವ್
ಶಿರಸಿ
ಮಾದರಿ ಗ್ರಾಮ
'ಹೊಸ ಬಾಳಿಗೆ ರಹದಾರಿ: ಅಹಿಂಸಾ ಗ್ರಾಮ' (ಅಮರ್‌ಪಾಲ್ ಮಾಲ್ಹಿ) ಲೇಖನ ಚೆನ್ನಾಗಿತ್ತು. ಬಡವರಿಗೆ ನೆರವು ನೀಡುತ್ತಾ ಅವರನ್ನು ಪರಾವಂಬಿಗಳಾಗಿ ಮಾಡುವ ಬದಲು, ಬಡತನವನ್ನೇ ಕಿತ್ತು ಹಾಕಬೇಕು ಎನ್ನುವ
ಸಂಕಲ್ಪದೊಂದಿಗೆ ದಿಟ್ಟ ಹೆಜ್ಜೆಯಿಟ್ಟು 'ಅಹಿಂಸಾ ಗ್ರಾಮ'ಕ್ಕೆ ಮುನ್ನುಡಿ ಬರೆದ ಚೇತನ್ ಕಶ್ಯಪ್ ಅವರಿಗೆ ಕೃತಜ್ಞತೆಗಳು. ಪುರುಷ- ಮಹಿಳೆಯರೆಂಬ ಭೇದವಿಲ್ಲದೆ ಸ್ವಾವಲಂಬನೆಯ ಬದುಕು ನಡೆಸುತ್ತಿರುವ 'ಅಹಿಂಸಾ ಗ್ರಾಮ' ದೇಶಕ್ಕೇ ಮಾದರಿ. ಇಂಥ ಕೆಲಸ ಪ್ರತಿ ರಾಜ್ಯದಲ್ಲಿಯೂ ನಡೆದರೆ ಬಡತನ ಸಂಪೂರ್ಣ ನಿರ್ಮೂಲನೆಯಾಗಬಹುದು.
ಎಂ. ರಶೀದ್
ತೊಕ್ಕೊಟ್ಟು
ನವಿರಾಗಿರುವ 'ಚಿಗುರು'
ನಮ್ಮ ಬದುಕಿನಲ್ಲಿ ದಿನನಿತ್ಯ ನಡೆಯುವ ಸಂಭಾಷಣೆಗಳು, ಸಣ್ಣ ಮುನಿಸುಗಳು, ಮತ್ತೆ ಒಂದಾಗುವುದು ಇವೆಲ್ಲವೂ ಸುಮಂಗಲಾ ಅವರ 'ಚಿಗುರು' ಕಥೆಯಲ್ಲಿ ನವಿರಾಗಿ ಮೂಡಿಬಂದಿದೆ. ನಮ್ಮ ದೈನಂದಿನ ಬದುಕಿನಲ್ಲಿ ನಡೆಯುವ ಪುಟ್ಟ ಸಂತೋಷಗಳೇ ಜೀವನದಲ್ಲಿ ಖುಷಿ ನೀಡುವುದು ಎಂಬುದನ್ನು ಅಷ್ಟೇ ಚೆನ್ನಾಗಿ ನಿರೂಪಿಸಿದ್ದಾರೆ. ಕಥೆಯಲ್ಲಿ ಎಲ್ಲೂ ಅದ್ಭುತ ಎನ್ನುವ ಬದಲಾವಣೆಗಳಾಗದೆ ಸಾಮಾನ್ಯ ಜೀವನವನ್ನೇ ನಮ್ಮೆದುರು ಇಟ್ಟಿದ್ದಾರೆ. ಇವೆಲ್ಲವೂ ಕಥೆಯನ್ನು ಓದಿಸಿಕೊಂಡು ಹೋಗುತ್ತದೆ. ಕಥೆಯಲ್ಲಿ ಬರುವ ಪಾತ್ರಗಳ ಭಾವ ಸಂಬಂಧವೂ ಉತ್ತಮವಾಗಿ ಪಡಿಮೂಡಿದೆ.
ಎಂ. ಚೇತನಾ
ಹುಬ್ಬಳ್ಳಿ
ಸರ್ಕಾರದ ಬೇಜವಾಬ್ದಾರಿ
|
'ಸುಗ್ಗಿಯ ಸಂಕಷ್ಟ' ಲೇಖನವು ಉತ್ತರ ಪ್ರದೇಶದ ರೈತರ ಸಂಕಷ್ಟಗಳನ್ನು ಹಾಗೂ ಕೇಂದ್ರದ ಆಹಾರ ಹಾಗೂ ಕೃಷಿ ನೀತಿಯನ್ನು ವಿವರಿಸಿ ದೇಶದಲ್ಲಿ ಸರ್ಕಾರ ತನ್ನ ಹೊಣೆ ಮರೆತು ನಡೆಯುತ್ತಿರುವುದನ್ನು ಮನದಟ್ಟು ಮಾಡಿಕೊಟ್ಟಿದೆ. ರೈತನ ನೋವುಗಳು ಇಡೀ ದೇಶದ ನೋವು ಎಂಬುದನ್ನು ಸರಕಾರ ತಿಳಿಯುತ್ತಿಲ್ಲ. ಕಬ್ಬು ಬೆಳೆಯ ವಹಿವಾಟಿನಲ್ಲಿ ಸಮಸ್ಯೆಯಾಗಿ, ಗೋಧಿ ಉತ್ಪಾದನೆಗೆ ತೊಡಗಿದೆ. ಇದರಿಂದ ದೇಶದ ಆಹಾರ ಭದ್ರತೆಯಲ್ಲಿ ವ್ಯತ್ಯಯ! ಹೀಗೆ ಪರಿಸ್ಥಿತಿ ಒಂದಕ್ಕೊಂದು ತಳಕು ಹಾಕಿರುವುದರಿಂದ ರೈತನ ಜೀವನ ನಿಯಂತ್ರಣ ತಪ್ಪಿದೆ. ಕೇಂದ್ರ ಆಹಾರ- ಕೃಷಿ ಸಚಿವರು, ತಮ್ಮ ಬಗಲಿಗೆ ಕ್ರಿಕೆಟ್ ಹಾಕಿಕೊಂಡು ಎರಡರಲ್ಲಿಯೂ ಎಡವಿರುವುದು ವಿದಿತ. ಸಕ್ಕರೆಗಾಗಿ ಕಬ್ಬನ್ನು ಅರೆಯುವಾಗ, ಕಬ್ಬೊಂದೇ ಸಿಪ್ಪೆಯಾಗುವುದೆಂದು ತಿಳಿದಿತ್ತು. ಆದರೆ ಟಿಎಸ್‌ಐ ಲೇಖನ ಓದಿದ ಮೇಲೆ ಕಬ್ಬಿನ ಸಿಪ್ಪೆಯ ಜೊತೆಗೆ ರೈತನೂ ಸಿಪ್ಪೆಯಾಗುತ್ತಾನೆಂಬುದು ತಿಳಿಯಿತು. ಇದು ಸಿಹಿ ಹಂಚುವ ಭಾರತದ ಕೃಷಿಕನ ಕರುಣ ಕಥೆ.
ದೇಶದ ಕೃಷಿಕರು ಈಗ ಆತ್ಮಹತ್ಯೆಯನ್ನೇ ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದಾರೆ. ಲಕ್ಷಾಂತರ ಕೃಷಿಕರು ಸಾವನ್ನಪ್ಪುತ್ತಿದ್ದಾರೆ. ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಇದಕ್ಕೆ ಸೂಕ್ತ ಪರಿಹಾರ ಕ್ರಮ ಕಂಡುಕೊಂಡಿಲ್ಲ. ಕೃಷಿಕನೊಂದಿಗೆ ಆತನ ಫಲವತ್ತಾದ ಭೂಮಿಯೂ ಕಾಣೆಯಾಗುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವೇ ಇಲ್ಲ.
ಬಿ. ರಾಮರಾವ
ಗುಲ್ಬರ್ಗಾ
|
|