|
| ರಾಮದಾಸ ಭಟ್ಕಳ್ |
ಪಾಪ್ಯುಲರ್ ಪಬ್ಲಿಕೇಶನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು
|
ಮುರಳೀಧರ ದೇವಿದಾಸ ಆಮ್ಟೆ ಅವರು ಒಬ್ಬ ಸಮರ್ಥ ನ್ಯಾಯವಾದಿ. ಅವರನ್ನು ಎಲ್ಲೆಡೆ ವಿಶಿಷ್ಟವಾಗಿ ಗುರುತಿಸುವಂತೆ ಮಾಡಿದ ಅವರ ಧ್ಯೇಯಗಳಿಗೆ ಆಮ್ಟೆ ಸಾಕಷ್ಟು ಬದ್ಧರಾಗಿದ್ದರು. ಸಾಧ್ನಾ ಗೋಲೆ ಅವರಲ್ಲಿ ತಮ್ಮ ಜೀವನ ಸಂಗಾತಿಯನ್ನು ಕಂಡ ಆಮ್ಟೆ, ನಾಟಕೀಯವಾಗಿ ಸಾಧ್ನಾ ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆಮ್ಟೆಯವರ ಮದುವೆ ಸಂದರ್ಭದಲ್ಲಿ ಕೆಲವು ಡಕಾಯಿತರು ಅವರನ್ನು ಕೊಳ್ಳೆ ಹೊಡೆಯುವ ಯತ್ನ ಮಾಡಿದ್ದರು. ಈ ಪ್ರಯತ್ನದಲ್ಲಿ ಆಮ್ಟೆಯವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಆದರೂ ಅವರು ವಿಚಲಿತರಾಗದೆ ದೇಹಪೂರ್ತಿ ಬ್ಯಾಂಡೇಜ್ ಸುತ್ತಿಕೊಂಡೇ ತಮ್ಮ ಮದುವೆ ಶಾಸ್ತ್ರವನ್ನು ಮುಗಿಸಿದ್ದರು.
ಆದರೆ ಈ ದಿಟ್ಟ ನ್ಯಾಯವಾದಿಗೆ 'ಧೈರ್ಯ'ಕ್ಕೂ ಕೆಲ ಇತಿಮಿತಿಗಳಿವೆ ಎಂಬುದು ತೀರಾ ಬೇಗನೇ ಅರಿವಾಯಿತು. ಬಹಳ ಧೈರ್ಯವಂತರೆಂದು ಹೆಸರಾದವರೂ ಕೂಡಾ ಕುಷ್ಠರೋಗಿಗಳನ್ನು ಮುಟ್ಟಲು ಹಿಂಜರಿಯು ತ್ತಿದ್ದುದು ಆಮ್ಟೆ ಅವರ ಮೇಲೆ ಗಾಢ ಪರಿಣಾಮ ಬೀರಿತು. ಇದೇ ಸಂದರ್ಭದಲ್ಲಿ ಬಾಬಾ ತಮ್ಮ ಉಳಿದ ಜೀವನವನ್ನು ಕುಷ್ಠರೋಗಿಗಳಿಗೆ ಸಹಾಯ ಮಾಡುತ್ತಾ ಕಳೆಯಲು ನಿರ್ಧರಿಸಿದರು. ಅಲ್ಪಸಮಯದಲ್ಲೇ ಅವರು ಕುಷ್ಠರೋಗ ಸೇವಾ ಕೇಂದ್ರವನ್ನು ಸ್ಥಾಪಿಸಿದರು. ವರೋರ ಸಮೀಪ ಕುಷ್ಠದಿಂದ ಬಳಲುತ್ತಿರುವ ವ್ಯಕ್ತಿಗಳಿಗಾಗಿ ಕೇಂದ್ರವೊಂದು ಅಸ್ತಿತ್ವಕ್ಕೆ ಬಂತು. ಮುಂದೆ ಇದೇ ಆನಂದವನ ಎಂದು ಪ್ರಸಿದ್ಧವಾಯಿತು. ಆಮ್ಟೆಯವರ ಪತ್ನಿ ಸಹ ತಮ್ಮ ಪತಿಯ ಧ್ಯೇಯಕ್ಕೆ ಸಹಕರಿಸಿದರು. ಮುಂದೆ ಅಲ್ಲಿಯೇ ಬೆಳೆದ ಅವರ ಮಕ್ಕಳೂ ಈ ಮಹತ್ಕಾರ್ಯದಲ್ಲಿ ನೆರವಾದರು.
ಬಾಬಾ ಅವರು ಮಹಾತ್ಮ ಗಾಂಧಿ ಹಾಗೂ ರವೀಂದ್ರನಾಥ ಠ್ಯಾಗೋರ್ ಅವರಿಗೆ ಬಹಳ ಆಪ್ತರಾಗಿದ್ದರು. ಗಾಂಧಿ ಅವರೊಂದಿಗೆ ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಆಮ್ಟೆಯವರ ಕಾರ್ಯಗಳಲ್ಲಿ ಗಾಂಧಿ ತತ್ವದ ಗಾಢ ಛಾಯೆಯಿತ್ತು. ಗಾಂಧೀಜಿಯವರ 'ಅಂತ್ಯೋದಯ' ಎಂಬ ಗುರಿಯನ್ನು ಬಾಬಾ ಅವರು ಬಡವರಿಗೋಸ್ಕರ ಮಾಡಿದ ಪ್ರತಿಯೊಂದು ಕಾರ್ಯಗಳಲ್ಲೂ ಮುಂದುವರಿಸಿಕೊಂಡು ಹೋದರು. ಬಾಬಾ ತಮ್ಮ ಬಳಿ ಸಹಾಯಕ್ಕಾಗಿ ಬರುತ್ತಿದ್ದವರಲ್ಲಿ ಭೇದ-ಭಾವ ಮಾಡುತ್ತಿರಲಿಲ್ಲ. ತಮ್ಮ ಜೀವನದ ಕೆಲವು ವರ್ಷಗಳನ್ನು 'ಭಾರತ್ ಜೋಡೋ ಅಭಿಯಾನ'ಕ್ಕಾಗಿಯೂ ಮೀಸಲಾಗಿರಿಸಿದ್ದರು. ಭಾರತದ ವಿವಿಧ ಭಾಗಗಳಲ್ಲಿ ಸಂಚರಿಸಿ ಯುವಕರನ್ನು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಿದರು. ಇದೇ ಉದ್ದೇಶಕ್ಕಾಗಿ ಅವರು ಪಾಕಿಸ್ತಾನಕ್ಕೆ ಹೋಗಲು ಬಯಸಿದ್ದರು. ಆದರೆ ಈ ಬಯಕೆ ಕೊನೆಗೂ ಕೈಗೂಡಲಿಲ್ಲ.
ಒಬ್ಬ ಮಾನವನಿಗೆ ಆಹಾರ, ಬಟ್ಟೆ ಹಾಗೂ ವಸತಿಗಿಂತ ಮಿಗಿಲಾದ ಅವಶ್ಯಕತೆಗಳಿರುತ್ತವೆ ಎಂದು ಬಾಬಾ ಬಲವಾಗಿ ನಂಬಿದ್ದರು. ಆನಂದವನಕ್ಕೆ ಬಂದ ರೋಗಿಗಳಿಗೆ ಕೇವಲ ಚಿಕಿತ್ಸೆ ಮಾತ್ರ ದೊರೆಯುತ್ತಿರಲಿಲ್ಲ, ಬದಲಾಗಿ ಜೀವನಾವಶ್ಯಕ ಪರಿಕರಗಳನ್ನೂ ಒದಗಿಸಲಾಗುತ್ತಿತ್ತು. ಮೊದಲಿಗೆ ಆನಂದವನದಲ್ಲಿ ಕೇವಲ ಕುಷ್ಠರೋಗಿಗಳಿದ್ದರು. ಆದರೆ ಆನಂದವನದ ಬಗ್ಗೆ ಹೆಚ್ಚು ಜನಕ್ಕೆ ತಿಳಿಯುತ್ತಿದ್ದಂತೆ ಅಶಕ್ತರೂ ಅಲ್ಲಿಗೆ ಬರಲಾರಂಭಿಸಿದರು. ವಿಶೇಷ ಅಗತ್ಯಗಳಿರುವ ವ್ಯಕ್ತಿಗಳಿಗೂ ಅಲ್ಲಿ ಸ್ಥಾನ ಕಲ್ಪಿಸಲಾಯಿತು. ಬಾಬಾ ಅಲ್ಲಿಗೇ ನಿಲ್ಲಲಿಲ್ಲ. ವಿವಿಧ ಕಾರಣಕ್ಕಾಗಿ ಸಮಾಜದಿಂದ ಬಹಿಷ್ಕೃತರಾದವರಿಗೂ ಆನಂದವನದಲ್ಲಿ ಜೀವನವ್ಯವಸ್ಥೆ ಮಾಡಿಕೊಡಲಾಯಿತು. ಪ್ರತಿಯೊಬ್ಬರೂ ಕೂಡಾ ಸಮರ್ಥರೇ ಎಂಬುದನ್ನು ಬಾಬಾ ಪ್ರತಿಪಾದಿಸಿದರು. ಉಳಿವಿಗಾಗಿ ಇನ್ನೊಬ್ಬರನ್ನು ಸಂಪೂರ್ಣವಾಗಿ ಅವಲಂಬಿಸುವುದು ತಮ್ಮತನವನ್ನು ನಾಶಮಾಡುತ್ತದೆ ಎಂಬುದು ಅವರ ದೃಢನಂಬಿಕೆಯಾಗಿತ್ತು.
ಆಶ್ರಯ ಅರಸಿ ಬಂದವರಿಗೆ ಉದ್ಯೋಗ ಒದಗಿಸಲು ಆನಂದವನದಲ್ಲಿ 60ರಿಂದ 70 ವಿವಿಧ ಘಟಕಗಳಿವೆ. ಇವೆಲ್ಲವೂ ಆಶ್ರಮವಾಸಿಗಳ ಸ್ವಂತ ಆಸಕ್ತಿಯಿಂದ ಪ್ರಾರಂಭವಾಗಿ ಈಗ ಅಲ್ಲಿನ ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಿವೆ. ಪರಾವಲಂಬಿಯಾಗಬೇಕಿದ್ದ ವ್ಯಕ್ತಿಗಳಲ್ಲಿ ಸ್ವಾವಲಂಬನೆಯ ಆತ್ಮವಿಶ್ವಾಸ ಮೂಡಿಸಿದೆ. ಇಲ್ಲಿನ ಹುಡುಗನೊಬ್ಬ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ ಕಾಲುಗಳಿಂದ ಕಸೂತಿ ಮಾಡುವ ಅಚ್ಚರಿಯೇ ಬಾಬಾ ಪ್ರಭಾವಕ್ಕೆ ಅತ್ಯುತ್ತಮ ಉದಾಹರಣೆ.
ಜೀವನ ಎಂಬುದು ಒಂದು ಅತ್ಯದ್ಭುತ ಪಯಣ. ಪ್ರತಿಯೊಬ್ಬರಿಗೂ ಅದನ್ನು ಆನಂದಿಸುವ ಹಕ್ಕು ಇದೆ ಎಂದು ಬಾಬಾ ನಂಬಿದ್ದರು. ಪ್ರತಿಯೊಂದು ಸಂಸ್ಥೆಗಳಿಗೂ ಅವುಗಳದೇ ಆದ ನಿಯಮಗಳಿರುತ್ತವೆ. ಆದರೆ ಆನಂದವನದ ನಿವಾಸಿಗಳು ಯಾವತ್ತಿಗೂ ತಮ್ಮ ಸಂತಸಕ್ಕೆ ಭಂಗ ತರುವಂತಹ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿಲ್ಲ. ಆರೋಗ್ಯ ಹಾಗೂ ಶುಚಿತ್ವಕ್ಕೆ ಅಲ್ಲಿ ಬಹಳ ಪ್ರಾಮುಖ್ಯ ನೀಡಲಾಗಿದೆ. ನನ್ನ ಪ್ರಕಾರ ಆನಂದವನ ಈ ದೇಶದಲ್ಲಿರುವ ಅತ್ಯಂತ ಸ್ವಚ್ಛ ಪ್ರದೇಶಗಳಲ್ಲೊಂದು. ಈ ಎಲ್ಲಾ ಅಂಶಗಳೂ ಆನಂದವನವನ್ನು ಅಲ್ಲಿನ ನಿವಾಸಿಗಳಿಗೆ ಸಂತೋಷದ ತಾಣವನ್ನಾಗಿಸಿದೆ.
ಬಹಳಷ್ಟು ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿ ಕುಷ್ಠರೋಗದಿಂದ ಸಂಪೂರ್ಣವಾಗಿ ಗುಣಮುಖನಾದ ಮೇಲೂ ಆತನ ಕುಟುಂಬ ಅವನನ್ನು ಸ್ವೀಕರಿಸಲು ನಿರಾಕರಿಸುತ್ತದೆ. ಹೀಗಿರುವಾಗ ಸಮಾಜ ಆತನನ್ನು ಒಪ್ಪಿಕೊಳ್ಳುತ್ತದೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ? ಗುಣಮುಖನಾದ ವ್ಯಕ್ತಿ ಇನ್ನೊಬ್ಬರಿಗೆ ರೋಗ ಹರಡುವುದಿಲ್ಲ ಎಂಬುದು ಖಚಿತವಾದರೂ ಈ ಕುರಿತಾದ ಭಯ ಆತನ ಜೀವನವನ್ನು ಕಠಿಣವಾಗಿಸುತ್ತದೆ. ಆದರೆ ಬಾಬಾರ ನಿರಂತರ ಸ್ಫೂರ್ತಿ ಸಮಾಜದಲ್ಲಿ ಇವರಿಗೂ ಒಂದು ಸ್ಥಾನಮಾನ ಕಲ್ಪಿಸಿಕೊಟ್ಟಿತು. ಇಲ್ಲದಿದ್ದಲ್ಲಿ ಇಂದಿಗೂ ಈ ಕಾರ್ಯ ಅಸಾಧ್ಯವಾಗಿರುತ್ತಿತ್ತು. ಹಿಂದೆ ಕುಷ್ಠದಿಂದ ಬಳಲಿದವರು ಮದುವೆಯಾಗಿ ಸ್ವಂತ ಕುಟುಂಬವನ್ನು ಹೊಂದುವಂತಹ ಯೋಚನೆ ಕನಸಿನ ಮಾತಾಗಿತ್ತು. ಆದರೆ ಆನಂದವನದಲ್ಲಿ ಇಂದು ಅಂತಹ ಕನಸನ್ನು ಸಾಕಾರಗೊಳಿಸಿಕೊಂಡ ಹಲವಾರು ಕುಟುಂಬಗಳಿವೆ.
ಬಾಬಾ ಆಮ್ಟೆ ಎಂದಾಕ್ಷಣ ಕುಷ್ಠರೋಗಿಗಳಿಗೆ ನೆರವಾಗುವಂತಹ ವ್ಯಕ್ತಿ ಎಂಬ ಚಿತ್ರಣ ಮೂಡುತ್ತದೆ. ಆದರೆ ಅದಷ್ಟೇ ಅಲ್ಲ. ಬಾಬಾ ಕೇವಲ ಅಶಕ್ತರನ್ನಷ್ಟೇ ನೋಡಿಕೊಳ್ಳುತ್ತಿರಲಿಲ್ಲ. ಅನ್ಯಾಯದ ವಿರುದ್ಧವೂ ಹೋರಾಡುತ್ತಿದ್ದರು. ದೇಶದ ವಿಭಜನೆಯನ್ನು ನೋಡಲಾಗದೆ ಅವರು 'ಭಾರತ್ ಜೋಡೋ ಚಳವಳಿ'ಯನ್ನು ಪ್ರಾರಂಭಿಸಿದರು. ಬಾಬಾ ವಿಜ್ಞಾನವನ್ನು ಪ್ರೀತಿಸುತ್ತಿದ್ದ ಹಾಗೂ ಆರ್ಥಿಕತೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಂತಹ ವ್ಯಕ್ತಿ. ಈ ಜ್ಞಾನವನ್ನು ಅವರು ಬಡವರ ಕಲ್ಯಾಣಕ್ಕಾಗಿ ಬಳಸಿದರು. ಬಾಬಾ ಯಾವುದೇ ಪ್ರಗತಿ ಮಾನವನ ಒಳಿತಿನತ್ತ ಕೇಂದ್ರೀಕೃತವಾಗಿರಬೇಕು ಎಂದು ನಂಬಿದ್ದ ಕಾರಣ ನರ್ಮದಾ ಬಚಾವೋ ಆಂದೋಲನದಲ್ಲಿ ಭಾಗವಹಿಸಿದ್ದರು. ಅವರ ಕಾರಣದಿಂದಾಗಿಯೇ ಆಂದೋಲನ ಎಲ್ಲರ ಗಮನ ಸೆಳೆಯಿತು. ಬಾಬಾ ಒಬ್ಬ ಸಾಹಿತ್ಯಜ್ಞಾನಿ ಹಾಗೂ ಕವಿಯಾಗಿದ್ದರು. ಇದೆಲ್ಲಾ ಅವರ ಸಾಮರ್ಥ್ಯಕ್ಕೆ ಉದಾಹರಣೆಯಲ್ಲ; ಬದಲಾಗಿ 'ರವಿ ಕಾಣದ್ದನ್ನು ಕವಿ ಕಂಡ' ಎಂಬುದಕ್ಕೆ ಉದಾಹರಣೆ.
ಅವರು ಒಬ್ಬ ಮಹಾಮಾನವನಿಗಿರಬೇಕಾಗಿದ್ದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದರು. ಅವರ ಈ ಮಹತ್ಕಾರ್ಯವನ್ನು ಕೇವಲ ಅವರ ಕುಟುಂಬ ಮಾತ್ರ ಮುಂದುವರಿಸಿಕೊಂಡು ಹೋಗುತ್ತಿಲ್ಲ. ಬಾಬಾ ಸಲಹಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.
ಬಾಬಾ ಈಗ ನಮ್ಮೊಂದಿಗಿಲ್ಲದಿದ್ದರೂ ನಾನೀಗಲೂ ಅವರ ವರ್ತಮಾನದ ಬಗ್ಗೆ ಬರೆಯಲು ಇಚ್ಛಿಸುತ್ತೇನೆಯೇ ಹೊರತು ಭೂತಕಾಲದ ಕುರಿತಲ್ಲ. ಗಾಂಧೀಜಿ ಯಾವಾಗಲೂ ಹೇಳುತ್ತಿದ್ದಂತೆ, 'ನನ್ನ ಜೀವನವೇ ಇತರರಿಗೆ ಸಂದೇಶ' ಎನ್ನುವ ಮಾತನ್ನು ಬಾಬಾ ನಿರೂಪಿಸಿ ತೋರಿಸಿದರು. ಅವರು ನಮ್ಮನ್ನು ಬಿಟ್ಟು ಹೋಗಿದ್ದರೂ ಅವರ ಕಾರ್ಯಗಳು, ಸಂಸ್ಥೆ ಹಾಗೂ ಅವರ ಸ್ಫೂರ್ತಿ ಇನ್ನೂ ನಮ್ಮೊಂದಿಗಿವೆ.
ಟಿಎಸ್‌ಐ |