ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ದೇಸಿ ದನಿ
 
 

ಒರಿಸ್ಸಾ: ಪಿಂಚಣಿ

ಎಚ್‌ಐವಿ ಪೀಡಿತರಿಗೆ ಸರ್ಕಾರಿ ಸಾಂತ್ವನ

ಮೊದಲ ಹಂತದಲ್ಲಿ 6,132 ಏಡ್ಸ್ ಪೀಡಿತರಿಗೆ ಪಿಂಚಣಿ ನೀಡಲು ನಿರ್ಧಾರ

ಒರಿಸ್ಸಾ ರಾಜ್ಯದ ಎಚ್‌ಐವಿ ಪೀಡಿತರಿಗೊಂದು ಸಂತಸದ ಸುದ್ದಿ. ರಾಜ್ಯ ಸರ್ಕಾರ ಎಚ್‌ಐವಿ ಪೀಡಿತರಿಗೆ ಮಾಸಿಕ ಪಿಂಚಣಿ ನೀಡಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಪ್ರಾಯೋಜಿತ 'ಮಧು ಬಾಬು ಪಿಂಚಣಿ ಯೋಜನೆ'ಯಡಿಯಲ್ಲಿ ಇದೇ ಜನವರಿಯಿಂದ ಎಚ್‌ಐವಿ ಪೀಡಿತರು ಮಾಸಿಕ ಪಿಂಚಣಿ ಪಡೆಯಲಿದ್ದಾರೆ. ರೋಗಿಗಳಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಹಾಗೂ ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಒಟ್ಟಾರೆ ಎಚ್‌ಐವಿ ಪೀಡಿತರಿಗೆ ಮಾಸಿಕ ಪಿಂಚಣಿ ನೀಡಲು ಮುಂದಾಗಿರುವ ಮೊದಲ ರಾಜ್ಯ ಎಂಬ ಕೀರ್ತಿಗೆ ಒರಿಸ್ಸಾ ಪಾತ್ರವಾಗಿದೆ. ಒರಿಸ್ಸಾದಲ್ಲಿ ಒಟ್ಟು 6,132 ಎಚ್‌ಐವಿ ಪೀಡಿತರಿದ್ದು, ಮೊದಲ ಹಂತದಲ್ಲಿ ಮಾಸಿಕ ಆದಾಯ ಮತ್ತು ವಯೋಮಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರಿಗೂ ಮಾಸಿಕ ಪಿಂಚಣಿ ನೀಡಲು ನಿರ್ಧರಿಸಿಲಾಗಿದೆ. ಎಚ್‌ಐವಿ ಪೀಡಿತರ ಸಂಖ್ಯೆ ಅಧಿಕವಾಗಿರುವ ಗಂಜಮ್ ಜಿಲ್ಲೆಯ ರೋಗಿಗಳು ಯೋಜನೆಯಿಂದ ಲಾಭ ಪಡೆಯಲಿದ್ದಾರೆ. ಮತ್ತೊಂದು ಅಂಶ ಏನೆಂದರೆ ಈ ಪ್ರದೇಶದಲ್ಲಿ ವಲಸೆ ಕಾರ್ಮಿರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಏಡ್ಸ್ ಹರಡುವಿಕೆ ಕುರಿತಂತೆ ಜಿಲ್ಲೆಯನ್ನು 'ಅತ್ಯಂತ ಅಪಾಯಕಾರಿ ತಾಣ' ಎಂದೂ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಏಡ್ಸ್‌ನಿಂದ ಸಾವನ್ನಪ್ಪಿದ 695 ರೋಗಿಗಳಲ್ಲಿ 238 ಮಂದಿ ಗಂಜಾಮ್ ಜಿಲ್ಲೆಗೆ ಸೇರಿದವರು! ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗಂಜಮ್ ಜಿಲ್ಲೆಯ ಶೇರಗಡದಲ್ಲಿ ಫೆಬ್ರುವರಿ 7ರಂದು 'ಮಧು ಬಾಬು ಪಿಂಚಣಿ ಯೋಜನೆ'ಗೆ ಚಾಲನೆ ನೀಡಿದ್ದರು. ಎಚ್‌ಐವಿ ಪೀಡಿತರಿಗೆ ಹಣಕಾಸು ಸೌಲಭ್ಯ ಒದಗಿಸಬೇಕು. ಆ ಮೂಲಕ ಅವರಿಗೆ ನೈತಿಕ ಬೆಂಬಲವನ್ನೂ ನೀಡಿದಂತಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ಓಗೊಟ್ಟಸರ್ಕಾರ 'ಮಧು ಬಾಬು ಪಿಂಚಣಿ ಯೋಜನೆ'ಯಡಿಯಲ್ಲಿ ಎಚ್‌ಐವಿ ಪೀಡಿತರಿಗೆ ಮಾಸಿಕ ಪಿಂಚಣಿ ನೀಡಲು ನಿರ್ಧರಿಸಿದೆ ಎಂದು 'ಒರಿಸ್ಸಾ ರಾಜ್ಯ ಏಡ್ಸ್ ನಿಯಂತ್ರಣಾ ಸಮಿತಿ'ಯ (ಒಎಸ್‌ಎಸಿಎಸ್) ಯೋಜನಾ ನಿರ್ದೇಶಕ ಪರಮೇಶ್ವರ ಸ್ವೇಯ್ನ್ ಸಂತಸ ವ್ಯಕ್ತಪಡಿಸುತ್ತಾರೆ. ಯೋಜನೆಯ ಅನುಸಾರ ಪ್ರತಿಯೊಬ್ಬ ಎಚ್‌ಐವಿ ಪೀಡಿತ ವ್ಯಕ್ತಿಯ ಖಾತೆಗೆ ಮಾಸಿಕ 200 ರೂ. ಜಮೆ ಮಾಡಲಾಗುತ್ತದೆ. ಸಂಬಂಧಪಟ್ಟ ವಲಯ ಅಭಿವೃದ್ಧಿ ಅಧಿಕಾರಿ (ಬಿಡಿಒ) ಮೂಲಕ ಚೆಕ್ ಅನ್ನು ರೋಗ ಪೀಡಿತ ವ್ಯಕ್ತಿಯ ವಿಳಾಸಕ್ಕೆ ತಲುಪಿಸಲಾಗುತ್ತದೆ. ಹಾಗೇ ಎಚ್‌ಐವಿ ಪೀಡಿತ ವ್ಯಕ್ತಿಯ ಮರಣದ ನಂತರ ಆತನ ಪತ್ನಿಗೆ ಪಿಂಚಣಿ ನೀಡಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದ ಪಿಂಚಣಿಗಳನ್ನು ನೀಡುವ ಉದ್ದೇಶದಿಂದ ನಾವು ಈಗಾಗಲೇ ಏಡ್ಸ್ ಪೀಡಿತರ ಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ತಲುಪಿಸಿದ್ದೇವೆ. ಅವರು ಪಿಂಚಣಿ ನೀಡುವ ಕಾರ್ಯ ಆರಂಭಿಸಿದ್ದಾರೆ ಎನ್ನುತ್ತಾರೆ ಪರಮೇಶ್ವರ್. 2007ರ ಡಿಸೆಂಬರ್‌ನಲ್ಲಿ ಒರಿಸ್ಸಾದಲ್ಲಿ ಒಟ್ಟು 8,200 ಮಂದಿ ಎಚ್‌ಐವಿ ಪೀಡಿತರು ಇದ್ದರು ಎಂಬುದನ್ನು 'ಒರಿಸ್ಸಾ ರಾಜ್ಯ ಏಡ್ಸ್ ನಿಯಂತ್ರಣ ಸಮಿತಿ'ಯ ವರದಿಯಿಂದ ದೃಢ ಪಟ್ಟಿದೆ. ಆದರೂ ಮೊದಲ ಹಂತದಲ್ಲಿ 6,132 ರೋಗಿಗಳಿಗೆ ಪಿಂಚಣಿ ನೀಡಲು ಸಮಿತಿ ನಿರ್ಧರಿಸಿದೆ. ಹಾಗೇ ರಾಜ್ಯದಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಏರಿಕೆಯಾದಲ್ಲಿ ಮುಂದೆ ಫಲಾನುಭವಿಗಳ ಸಂಖ್ಯೆಯನ್ನು ಏರಿಸಲಾಗುವುದು. ಫಲಾನುಭವಿಗಳ ಪಟ್ಟಿ ಈಗಾಗಲೇ ನಮ್ಮ ಕೈಸೇರಿದೆ. ಇನ್ನು ಎರಡು- ಮೂರು ದಿನಗಳಲ್ಲಿ ಪಿಂಚಣಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದೇವೆ ಎಂದು ಅಲ್ಲಿನ ಜಿಲ್ಲಾಧಿಕಾರಿ ವಿ.ಕೆ. ಪಾಂಡ್ಯನ್ ಹೇಳಿದ್ದಾರೆ.

ಟಿಎಸ್‌ಐ

ಹೃಷಿಕೇಶ್ ಮೊಹಂತಿ

ತಮಿಳುನಾಡು: ವಿಶ್ವವಿದ್ಯಾನಿಲಯ

ಅಧ್ಯಾಪಕರಿಗೂ ವಸ್ತ್ರ ಸಂಹಿತೆ!

ಮೊದಲು ಕರ್ತವ್ಯಲೋಪ, ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಸಲಹೆ

ಮೊದಲಿಗೆ ಕಡ್ಡಾಯ ವಸ್ತ್ರ ಸಂಹಿತೆ, ನಂತರ ಮೊಬೈಲ್ ನಿಷೇಧ. ಇದೀಗ ಅವರ ನಿಯಮಾವಳಿಗಳ ಮುಂದಿನ ಗುರಿ ಅಧ್ಯಾಪಕರು! ಈ ಎಲ್ಲ ಕಟ್ಟು ನಿಟ್ಟಿನ ನಿಯಮಗಳ ಸೂತ್ರಧಾರ ಚೆನ್ನೈ ಅಣ್ಣಾ ವಿಶ್ವವಿದ್ಯಾನಿಲಯದ ಉಪಕುಲಪತಿ ಡಿ. ವಿಶ್ವನಾಥ್. ಅಣ್ಣಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯಗೊಳಿಸಿ ಟೀಕಾಕಾರರ ಬಾಯಿಗೆ ವಸ್ತುವಾದ ಬೆನ್ನಲ್ಲೇ ಅಧ್ಯಾಪಕರಿಗೂ ಈ ನಿಯಮ ಕಡ್ಡಾಯಗೊಳಿಸಿದ್ದಾರೆ. ವಿಶ್ವವಿದ್ಯಾನಿಲಯದ ಅನುದಾನಿತ ಎಂಜಿನಿಯರಿಂಗ್ ಕಾಲೇಜಿನ ಕೆಲ ಅಧ್ಯಾಪಕರು ಟೀ- ಶರ್ಟ್, ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸಿ ಕಾಲೇಜಿಗೆ ಬರುತ್ತಿದ್ದರು. ಈ ಅಶಿಸ್ತನ್ನು ತಡೆಯಬೇಕಿತ್ತು. ವಸ್ತ್ರಸಂಹಿತೆ ಕಡ್ಡಾಯಗೊಳಿಸಿದ ಮೇಲೆ ವಿದ್ಯಾರ್ಥಿಗಳ ಓದಿನಲ್ಲಿ ಸುಧಾರಣೆ ಕಂಡು ಬಂದಿದೆ ಎನ್ನುವುದು ಡಿ. ವಿಶ್ವನಾಥ್ ಅವರ ಅಭಿಪ್ರಾಯ. ಈ ಕುರಿತು ಟಿಎಸ್‌ಐ ಜೊತೆ ಮಾತನಾಡಿದ 'ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘ'ದ ಪ್ರಧಾನ ಕಾರ್ಯದರ್ಶಿ ಯು. ಸುಂದರರಾಜನ್ ಉಪಕುಲಪತಿಗಳ ಅಭಿಪ್ರಾಯವನ್ನು ವಿರೋಧಿಸಿದ್ದಾರೆ. ಹೀಗೆ ಅಧ್ಯಾಪಕರ ಮೇಲೆ ವಸ್ತ್ರಸಂಹಿತೆ ಹೇರುವುದು ಸರಿಯಲ್ಲ. ಅಧ್ಯಾಪಕರು ಶಿಸ್ತು ಬದ್ಧ ಉಡುಗೆ ತೊಡಬೇಕು ಎಂದು ಹೇಳಬಹುದು. ಆದರೆ ಅದನ್ನು ಕಡ್ಡಾಯಗೊಳಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಾರೆ ಸುಂದರರಾಜನ್. ಅಧ್ಯಾಪಕರು ಹೇಗೆ ಪಾಠ ಮಾಡುತ್ತಾರೆ ಮತ್ತು ವಿದ್ಯಾರ್ಥಿಗಳು ಹೇಗೆ ಕಲಿಯುತ್ತಾರೆ ಎನ್ನುವುದು ಮುಖ್ಯವೇ ಹೊರತು ಧರಿಸಿರುವ ಉಡುಪು ಮುಖ್ಯವಲ್ಲ. ವಸ್ತ್ರ ಸಂಹಿತೆ ಶಿಕ್ಷಣದ ಗುಣಮಟ್ಟವನ್ನು ಹೇಗೆ ವೃದ್ಧಿಸಲು ಸಾಧ್ಯ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಮಾತ್ರವಲ್ಲ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಉಡುಗೆ- ತೊಡುಗೆಗಳನ್ನು ನಿಯಂತ್ರಿಸುವ ಹಕ್ಕು ಉಪಕುಲಪತಿಗಳಿಗಿಲ್ಲ ಎನ್ನುತ್ತಾರೆ ತಮಿಳುನಾಡಿನ ಹಿರಿಯ ಶಿಕ್ಷಣ ತಜ್ಞ ಎಸ್.ಎಸ್. ರಾಜಗೋಪಾಲನ್. ಟಿಎಸ್‌ಐ ಜೊತೆ ಮಾತನಾಡಿದ 'ಭಾರತೀಯ ವಿದ್ಯಾರ್ಥಿ ಒಕ್ಕೂಟ'ದ ತಮಿಳುನಾಡು ರಾಜ್ಯ ಕಾರ್ಯದರ್ಶಿ ಜಿ. ಸೆಲ್ವ ಪ್ರಕಾರ, ಉಪಕುಲಪತಿ ವಸ್ತ್ರಸಂಹಿತೆ ಮತ್ತು ಮೊಬೈಲ್ ನಿಷೇಧ ಕಡ್ಡಾಯಗೊಳಿಸಿರಬಹುದು. ಆದರೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅವರದು ಆಧುನಿಕ ಚಿಂತನೆಯಲ್ಲ, ಹಳೇ ತಲೆಮಾರಿನ ಸಿದ್ಧಾಂತಗಳು. ಅದರೆ ಈ ಎಲ್ಲಾ ನಿಯಮಗಳ ಸೂತ್ರದಾರ ಡಿ. ವಿಶ್ವನಾಥ್ ಮಾತ್ರ ಕಳವಳಗೊಂಡಿಲ್ಲ. ಅಧ್ಯಾಪಕರು ಶಿಸ್ತು ಬದ್ಧ ಉಡುಗೆಗಳನ್ನು ಧರಿಸಬೇಕೆನ್ನುವುದು ವಿಶ್ವವಿದ್ಯಾನಿಲಯದ ನಿಯಮ. ನಾನು ಹೊಸತೇನನ್ನೂ ಹೇಳುತ್ತಿಲ್ಲ. ಶೇ. 98ರಷ್ಟು ಕಾಲೇಜುಗಳಲ್ಲಿ ಅಧ್ಯಾಪಕರು ಇದನ್ನು ಪಾಲಿಸುತ್ತಿದ್ದಾರೆ. ಆದರೆ ಕೆಲ ಕಾಲೇಜುಗಳಲ್ಲಿ ಅಧ್ಯಾಪಕರು ನಿಯಮಗಳನ್ನು ಪಾಲಿಸುತ್ತಿಲ್ಲವೆಂದು ನನಗೆ ಆರೋಪಗಳು ಬಂದಿವೆ. ಹೀಗಾಗಿ ನಾವು ಕಾಲೇಜುಗಳ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಪಾಲಿಸಲು ನಿರ್ದೇಶಿಸಿದ್ದೇವೆ. ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯಗೊಳಿಸಿರುವುದು ಅವರಿಗೆ ಖುಷಿ ತಂದಿದೆ. ಅಧ್ಯಾಪಕರೂ ಇದನ್ನು ಪಾಲಿಸುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ದೃಢಚಿತ್ತರಾಗಿ ಉತ್ತರಿಸುತ್ತಾರೆ ವಿಶ್ವನಾಥ್. ಇತ್ತೀಚೆಗೆ ಅಣ್ಣಾ ವಿಶ್ವವಿದ್ಯಾನಿಲಯ ಮೂರು ವಿಭಾಗಗಳಾಗಿ ಹಂಚಿ ಹೋಗಿದೆ. ಈ ಕುರಿತು ಟಿಎಸ್‌ಐಗೆ ಪ್ರತಿಕ್ರಿಯೆ ನೀಡಿದ ಅಣ್ಣಾ ವಿಶ್ವವಿದ್ಯಾನಿಲಯ- ತಿರುಚಿ ಉಪಕುಲಪತಿ ಡಾ.ವಿ. ರಾಮಚಂದ್ರನ್ ಅವರು ಕಾಲೇಜುಗಳಲ್ಲಿ ವಸ್ತ್ರ ಸಂಹಿತೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು ನನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿರುವೆ. ಆದರೆ ಈ ರೀತಿಯ ಯಾವುದೇ ದೂರುಗಳನ್ನು ಪಡೆದಿಲ್ಲ. ಆದ್ದರಿಂದ ನಾನು ಈ ಬಗ್ಗೆ ಹೆಚ್ಚೇನು ಯೋಚಿಸಿಲ್ಲ ಎಂದು ಹೇಳಿದ್ದಾರೆ. ತಮಿಳುನಾಡಿನ ಒಟ್ಟು 105 ಎಂಜಿನಿಯರಿಂಗ್ ಕಾಲೇಜುಗಳು ಚೆನ್ನೈಯ ಅಣ್ಣಾ ವಿಶ್ವವಿದ್ಯಾನಿಲಯ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಎರಡು ವರ್ಷಗಳ ಹಿಂದೆ ಇಲ್ಲಿನ ವಿದ್ಯಾರ್ಥಿಗಳಿಗೆ ಕಡ್ಡಾಯ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ.

ಟಿಎಸ್‌ಐ

ಎ. ಪಳನಿಯಪ್ಪನ್

ಬೆಂಗಳೂರು: ಡ್ರ್ಯಾಗ್ ರೇಸ್

ಅನಧಿಕೃತ ರೇಸಿಂಗ್ ಮೋಜು

ಅಪಾರ ಪ್ರಮಾಣದ ಬೆಟ್ಟಿಂಗ್ ವ್ಯವಹಾರದ ಅನುಮಾನ

ಸಿಲಿಕಾನ್ ಸಿಟಿಯ ರಸ್ತೆ ಮೇಲೆ ಮತ್ತು ರಸ್ತೆಯ ಆಚೀಚೆ ಎಂತೆಂತಹ ಅಪಾಯಕಾರಿ ಘಟನೆಗಳು ನಡೆಯುತ್ತವೆ ಮತ್ತು ನಡೆಯುತ್ತಿವೆ ಎನ್ನುವುದರ ನಿಜವಾದ ಅರಿವು ಯಾರಿಗೂ ಇದ್ದಂತಿಲ್ಲ. ಅದರಲ್ಲಂತೂ ಡ್ರ್ಯಾಗ್ ರೇಸಿಂಗ್ ಎಂಬ ಮೋಜು ಕೆಲವೇ ಕೆಲವು ಯುವಕರ ಪಾಲಿಗೆ 'ಥ್ರಿಲ್' ನೀಡಿದರೆ, ಹಲವರ ಪ್ರಾಣಕ್ಕೆ ಅಪಾಯವೊಡ್ಡುತ್ತಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಅಶೋಕ ನಗರ ಪೊಲೀಸರು ಇಂತಹ ಅಪಾಯಕಾರಿ ಮೋಜಿನಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ 8 ಮಂದಿ ಯುವಕರನ್ನು ಬಂಧಿಸಿದ ಘಟನೆ ನಡೆದಿದೆ. ಕೋರಮಂಗಲ ಮತ್ತು ಇಂದಿರಾನಗರ ನಡುವಿನ ರಿಂಗ್ ರಸ್ತೆಯಲ್ಲಿ ಬೆಳಗಿನ ಜಾವ ಬೈಕ್ ರೇಸ್ ಮೋಜು ಅನುಭವಿಸುತ್ತಿದ್ದ ಯುವಕರ ತಂಡದ ಮೇಲೆ ದಾಳಿ ಮಾಡಿದ ಪೊಲೀಸರು ಅದರಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಹಾಗೆ, ನೋಡಿದಲ್ಲಿ ಶನಿವಾರ ಹಾಗೂ ಭಾನುವಾರ ಮುಂಜಾನೆ ನಗರದ ವಿವಿಧ ಹೊರವರ್ತುಲ ರಸ್ತೆಗಳಲ್ಲಿ ನಡೆಯುತ್ತಿರುವ ಈ ನಿಗೂಢ, ಅಪಾಯಕಾರಿ ಮೋಜು ಬೆಂಗಳೂರಿನ ಪಾಲಿಗೆ ಹೊಸದಾಗೇನೂ ಇಲ್ಲ. ಹದಿಹರೆಯದ ಯುವಕರೇ ಪಾಲ್ಗೊಳ್ಳುವ ಈ ಮೋಜಿನಲ್ಲಿ ಸಾಧಾರಣ ವಾಗಿ ಎರಡು ವಿರೋಧಿ ಗುಂಪುಗಳ ನಡುವೆ ಮೋಟಾರ್ ಬೈಕ್ ರೇಸ್ ನಡೆದರೂ, ಕೆಲವೊಮ್ಮೆ ಕಾರುಗಳ ನಡುವೆ ಕೂಡ ರೇಸ್ ನಡೆಯುತ್ತದೆ. ಎರಡೂ ಸಂದರ್ಭಗಳಲ್ಲಿ 400 ಮೀಟರ್‌ನಿಂದ 800 ಮೀಟರ್ ಗುರಿ ನಿಗದಿ ಪಡಿಸಲಾಗುತ್ತದೆ. ಪ್ರತಿಸ್ಪರ್ಧಿ ತಂಡಗಳ ಇಬ್ಬರು ರೈಡರ್ ಅಥವಾ ಡ್ರೈವರ್‌ಗಳು ರೇಸ್‌ಗಾಗಿಯೇ ಅಭಿವೃದ್ಧಿ ಪಡಿಸಲಾದ ಬೈಕ್ ಅಥವಾ ಕಾರುಗಳನ್ನು ಅತ್ಯಂತ ವೇಗವಾಗಿ ಗುರಿಯತ್ತ ಮುನ್ನುಗ್ಗಿಸುತ್ತಾರೆ. ಈ ರೋಮಾಂಚನವನ್ನು ಅನುಭವಿಸುವ ಸಲುವಾಗಿಯೇ 200-300 ಯುವಕರ ಪಡೆ ಅಲ್ಲಿ ನೆರೆದಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತದೆ. ಜೊತೆಗೆ, ಗೆದ್ದ ಚಾಲಕನಿಗೆ ರೇಸ್‌ನಲ್ಲಿ ಸೋತ ಚಾಲಕನ ಗೆಳತಿ ಚುಂಬನ ನೀಡುವುದು, ಗೆಳತಿಯನ್ನೇ ಅವನಿಗೆ ಬಿಟ್ಟುಕೊಡುವುದು...ಮುಂತಾದ 'ರೋಮಾಂಚಕ' ಬೆಟ್ಟಿಂಗ್ ಕೂಡ ಈ ರೇಸಿಂಗ್‌ನಲ್ಲಿ ನಡೆಯುತ್ತದೆ ಎಂದು ಅಂತಹ ಮೋಜಿನಲ್ಲಿ ಭಾಗಿಯಾಗಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ಅಮಿತ್ (ಹೆಸರು ಬದಲಿಸಲಾಗಿದೆ) ಟಿಎಸ್‌ಐಗೆ ತಿಳಿಸಿದ್ದಾನೆ. ಹಿಂದೆ ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ರಾತ್ರಿ ಎರಡು ಗಂಟೆಯ ನಂತರ ಇಂತಹ ಮೋಜಿನ ಆಟ ನಡೆಯುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಅಮಾಯಕ ಪ್ರಯಾಣಿಕರು ಈ ರೇಸಿಂಗ್ ಮೋಜಿಗೆ ಬಲಿಯಾಗಿದ್ದರು ಕೂಡ. ಪೊಲೀಸರು ಕಠಿಣ ಕ್ರಮ ಕೈಗೊಂಡ ಪರಿಣಾಮವಾಗಿ ಈಗ ನಗರದ ಕೇಂದ್ರ ಭಾಗದಿಂದ ಡ್ರ್ಯಾಗ್ ರೇಸಿಂಗ್ ಮಾಯವಾಗಿದೆ. ನಗರದ ಹೊರವರ್ತುಲ, ಒಳವರ್ತುಲ ರಸ್ತೆಗಳು, ದೇವನಹಳ್ಳಿ ರಸ್ತೆ... ಹೀಗೆ ಕೆಲವು ಆಯ್ದ ಜಾಗದಲ್ಲಿ ಈಗ ಕೂಡ ನಿಗೂಢವಾಗಿ ಡ್ರ್ಯಾಗ್ ರೇಸಿಂಗ್ ನಡೆಯುತ್ತದೆ. ಸಾಮಾನ್ಯವಾಗಿ ಈ ಅನಧಿಕೃತ ರೇಸಿಂಗ್ ಮೊದಲೇ ನಿಗದಿಯಾಗಿರುವುದಿಲ್ಲ. ಕೊನೆಯ ಕ್ಷಣದಲ್ಲಿ ಎಸ್‌ಎಂಎಸ್ ಮೂಲಕ ಆಸಕ್ತಿಯಿರುವ ಗುಂಪಿನ ಸದಸ್ಯರಿಗೆ ಸಂದೇಶ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆ ಆರಂಭವಾಗುವುದು ನಡುರಾತ್ರಿಯ ಸಮಯದಲ್ಲಿ. ಯುವಕ-ಯುವತಿಯ ಪಡೆ ನಿರ್ದಿಷ್ಟ ಸ್ಥಳದಲ್ಲಿ ಸೇರಿಕೊಂಡ ಕೆಲವೇ ಕ್ಷಣಗಳಲ್ಲಿ ರೇಸಿಂಗ್ ಆರಂಭವಾಗಿ ಬಿಡುತ್ತದೆ. ಇಂತಹ ರೇಸಿಂಗ್‌ನಲ್ಲಿ ಹಣವಂತರ ಮಕ್ಕಳೇ ಹೆಚ್ಚಾಗಿ ಭಾಗವಹಿಸುತ್ತಾರೆ ಎನ್ನುವುದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅಂಬೋಣ. ಯುವ ಪಡೆಯ ಈ ಅನಧಿಕೃತ ಮೋಜು-ಜೂಜಿಗೆ ಕಠಿಣ ಕ್ರಮಗಳ ಮೂಲಕ ಮಾತ್ರ ಕಡಿವಾಣ ಹಾಕಲು ಸಾಧ್ಯ.

ಟಿಎಸ್‌ಐ

ಕೆ. ರಾಘವ ಶರ್ಮ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .