|
ಭುವನೇಶ್ವರದಿಂದ 5 ಕಿ.ಮೀ. ದೂರದಲ್ಲಿ ಪುರಿ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಸಿಗುವುದೇ ಪುರಾತನ ನಗರಿ ಶಿಶುಪಾಲ್‌ಗಢ. ಕಟ್ಟಡಗಳು, ವಾಹನಗಳು, ರಿಲೆಯನ್ಸ್ ಮತ್ತು ಏರ್‌ಟೆಲ್‌ಗಳ ಬೃಹತ್ ಜಾಹೀರಾತು ಭಿತ್ತಿಬರಹಗಳನ್ನು ಕಂಡ ಮೇಲೆ ಈ ನಗರಿಯನ್ನು ಹಳ್ಳಿ ಎನ್ನಲಂತೂ ಸಾಧ್ಯವಿಲ್ಲ. ಇಲ್ಲಿ ನಾವು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರಜ್ಞೆ ಮೋನಿಕಾ ಎಲ್. ಸ್ಮಿತ್ ಹಾಗೂ ಪುಣೆಯ ಡೆಕನ್ ಕಾಲೇಜ್‌ನ ಪುರಾತತ್ವ ತಜ್ಞ ಡಾ.ಆರ್. ಮೊಹಾಂತಿ ಅವರನ್ನು ಭೇಟಿಯಾಗಲಿದ್ದೆವು. 2001ರಿಂದೀಚೆಗೆ ಇವರಿಬ್ಬರು ಇಲ್ಲಿನ ಸುಮಾರು 1.2 ಚದರ ಕಿ.ಮೀ ವ್ಯಾಪ್ತಿಯಲ್ಲಿ ಉತ್ಖನನ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ಅಧ್ಯಯನ ಮತ್ತು ಉತ್ಖನನದ ಕುರುಹುಗಳು ಅಲ್ಲಿದ್ದವು.
ಸಲ್ವಾರ್ ಕಮೀಜ್ ಧರಿಸಿದ ಮೋನಿಕಾ ನೀಲ ಕಂಗಳನ್ನು ಅರಳಿಸುತ್ತಾ ತಮ್ಮ ಅಧ್ಯಯನದ ಸಾಧನೆಗಳನ್ನು ವಿವರಿಸಿದರು. ಅವರ ತಂಡ ನಿಧಾನವಾಗಿ ಐತಿಹಾಸಿಕ ಪ್ರಾಮುಖ್ಯತೆ ಇರುವ ಕುರುಹುಗಳನ್ನು ಪತ್ತೆ ಹಚ್ಚುತ್ತಿದೆ. ನಮ್ಮ ಈ ಅಧ್ಯಯನ ಭಾರತ ಮತ್ತು ದಕ್ಷಿಣ ಏಷ್ಯಾ ಕುರಿತ ಐತಿಹಾಸಿಕ ದಾಖಲೆಗಳಿಗೆ ಹೊಸ ವ್ಯಾಖ್ಯಾನವನ್ನು ನೀಡಲಿವೆ ಎನ್ನುತ್ತಾರೆ ಮೋನಿಕಾ. ಅಧ್ಯಯನ ತಂಡದ ಪ್ರಕಾರ ಈ ಸ್ಥಳ 5ನೇ ಶತಮಾನದಲ್ಲಿ ನಗರ ಕೇಂದ್ರಿತ ನಾಗರಿಕತೆಯ ಕೇಂದ್ರವಾಗಿತ್ತು. ಇನ್ನೂ ಸ್ವಲ್ಪ ಆಳವಾಗಿ ಉತ್ಖನನ ಮಾಡಿದಲ್ಲಿ 4,500 ವರ್ಷಗಳಷ್ಟು ಹಳೆಯ ನಾಗರಿಕತೆ ಪತ್ತೆಯಾದರೂ ಆದೀತು ಎಂದು ಅವರು ಅಭಿಪ್ರಾಯಪಡುತ್ತಾರೆ.
ಆ ಉತ್ಖನನ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಪುರಾತನ ನಗರ ಕೇಂದ್ರಿತ ನಾಗರಿಕತೆಯ ಸ್ಪರ್ಶ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಆ ಪ್ರದೇಶದಲ್ಲಿರುವ ಸ್ವತಂತ್ರ ಮನೆಗಳನ್ನು ಕಂಡರೆ ಅಂದಿನ ಜನಜೀವನದ ಬಗ್ಗೆ ಆಶ್ಚರ್ಯವಾಗದೆ ಇರದು. ಆ ಕಾಲದಲ್ಲೂ ಸಾಮಾಜಿಕ ಒತ್ತಡಗಳಿದ್ದುವೆ? ಜನಸಾಮಾನ್ಯರು ಗಂಡು ಮಗುವನ್ನೇ ಆಶಿಸುತ್ತಿದ್ದರೆ? ಆಗಲೂ ವರದಕ್ಷಿಣೆ ಪದ್ಧತಿ ಇತ್ತೆ? ಆ ಮನೆಯಲ್ಲಿ ನೆಲೆಸಿದ್ದಾತ ಕರಕುಶಲ ಕೆಲಸ ಮಾಡುತ್ತಿದ್ದನೆ? ಅಥವಾ ವ್ಯಾಪಾರಿಯೆ? ಆಗಲೂ ವಿವಾಹೇತರ ಸಂಬಂಧಗಳಿದ್ದವೆ? ಹೀಗೆ ಮನದಲ್ಲಿ ಪ್ರಶ್ನೆಗಳು ಕಾಡುತ್ತಿದ್ದವು.
ನಾವು ಅಲ್ಲಿಂದ ವಾಪಾಸಾಗುತ್ತಿದ್ದಾಗ ನಮ್ಮ ಕಾರಿನಲ್ಲಿ ಪುರಾತತ್ವ ಶಾಸ್ತ್ರದಲ್ಲಿ ವಿದ್ಯಾಭ್ಯಾಸ ಮುಂದುವರಿಸ ಬಯಸುವ ಟೊಸಬಂಟಾ ಪ್ರಧಾನ್ ಮತ್ತು ಅರುಣಾ ಪ್ರಧಾನ್ ಜೊತೆಯಲ್ಲಿದ್ದರು. ಇವರಿಬ್ಬರೂ ಒರಿಸ್ಸಾ ನಿವಾಸಿಗಳು. ಯಾವುದೇ ಪುರಾತತ್ವ ಇಲಾಖೆಯ ಉತ್ಖನನ ಕಾರ್ಯದಲ್ಲಿ ಭಾಗವಹಿಸುವುದು ರೋಮಾಂಚಕಾರಿ. ಆದರೆ ನಮ್ಮ ಈ ಬಡ ಒರಿಸ್ಸಾದಲ್ಲಿ ಒಂದು ಕಾಲದಲ್ಲಿ ಆಧುನಿಕ ನಾಗರಿಕತೆ ಇತ್ತು ಎಂದು ತಿಳಿದು ಹೆಮ್ಮೆ ಎನಿಸುತ್ತಿದೆ ಎನ್ನುತ್ತಾರೆ ಪ್ರಧಾನ್‌ದ್ವಯರು. ಅವರ ಆ ಉತ್ಸಾಹ ಕಂಡು ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಆಗಿನ ಕಾಲದಲ್ಲಿ ಭಾಷಾವಾರು ಸಮಸ್ಯೆಯನ್ನು ಹೇಗೆ ನಿವಾರಿಸಿಕೊಂಡಿದ್ದರು? ಅವರು ಪರಸ್ಪರ ಸಂಪರ್ಕಿಸುತ್ತಿದ್ದರೇ ಅಥವಾ ರಾಜ್ ಠಾಕ್ರೆಯಂತಹ ರಾಜಕೀಯ ಪುಢಾರಿಗಳ ಬೆನ್ನು ಹಿಡಿಯುತ್ತಿದ್ದರೆ? ಇತರ ಜನಾಂಗದವರ ಜೊತೆ ವ್ಯಾಪಾರ ಮತ್ತು ವ್ಯಾವಹಾರಿಕ ಜ್ಞಾನ ಹರಡುವಾಗ ತಮ್ಮ ಭಾಷೆ ಮತ್ತು ಜನಾಂಗೀಯ ಅನನ್ಯತೆಗೇ ಪ್ರಾಮುಖ್ಯತೆ ನೀಡುತ್ತಿದ್ದರೇ ಅಥವಾ ತಮ್ಮ ವಹಿವಾಟೇ ಮುಖ್ಯವಾಗಿರುತ್ತಿತ್ತೆ? ಮೊದಲಾದ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡಿದ್ದವು.
ಆದರೆ ಈ ಉತ್ಖನನದ ಬಗ್ಗೆ ಸ್ಥಳೀಯರನ್ನು ಕೇಳಿದಾಗ ಅವರು ಅಂತಹ ವಿಶೇಷ ಸಂತೋಷ ವ್ಯಕ್ತಪಡಿಸಲಿಲ್ಲ. ಬೆಳೆನಾಶ, ಸಾಲಬಾಧೆ ಮತ್ತು ಮಕ್ಕಳ ಮದುವೆ ಚಿಂತೆಯೇ ಅವರನ್ನು ಕಾಡುತ್ತಿತ್ತು. ಕಳೆದ ವರ್ಷ ನಾನು ಬೆಳೆದ ಅರ್ಧದಷ್ಟು ಬೆಳೆ ನಾಶವಾಗಿದೆ. ನನ್ನ ಮಗಳ ಮದುವೆಗೆ ವರದಕ್ಷಿಣೆ ಹಣ ಕೂಡಿಡಬೇಕಿದೆ. ಇದಕ್ಕಾಗಿ ಸಾಲ ಕೇಳುವಲ್ಲಿ ವ್ಯಸ್ತನಾಗಿರುವೆ. ಈ ಇತಿಹಾಸಗಳತ್ತ ಗಮನ ಕೊಡಲು ನನ್ನ ಬಳಿ ಸಮಯವೇ ಇಲ್ಲ ಎನ್ನುತ್ತಾರೆ ಸ್ಥಳೀಯ ರೈತ ಗೋಕುಲ್ ಸಾಮಂತ.
ಭುವನೇಶ್ವರಕ್ಕೆ ವಾಪಾಸಾದ ಮೇಲೆ ನಾವು 'ಗೂಗಲ್'ನಲ್ಲಿ ಈ ಬಗ್ಗೆ ವಿವರಗಳನ್ನು ಹುಡುಕಲಾರಂಭಿಸಿದೆವು. ಭಾರತ ಸ್ವತಂತ್ರ ರಾಷ್ಟ್ರವಾಗಿತ್ತು. 1948ರಲ್ಲಿ ಮಹಾತ್ಮಾ ಗಾಂಧಿ ಅವರ ಹತ್ಯೆಯ ನಂತರ ದೇಶವೇ ಹೊತ್ತಿ ಉರಿಯುತ್ತಿತ್ತು. ಇದನ್ನೆಲ್ಲ ಬದಿಗೊತ್ತಿ ಶಿಶುಪಾಲ್‌ಗಢ್‌ಗೆ ಬಂದು ಉತ್ಖನನ ಕಾರ್ಯಕ್ಕೆ ತೊಡಗಿದ ಎಂಟೆದೆ ಬಿ.ಬಿ. ಲಾಲ್ ಅವರದು. ಲಾಲ್ ಮತ್ತು ಅವರ ತಂಡದ ಕಾರ್ಯವನ್ನು ಏನೋ ಮೋಜು ನೋಡುತ್ತಿರುವಂತೆ ಸ್ಥಳೀಯರು ವೀಕ್ಷಿಸಿದ್ದರು. ಲಾಲ್ ಬಳಿ ಆಧುನಿಕ ತಂತ್ರಜ್ಞಾನಗಳಿರಲಿಲ್ಲ. ಆದರೂ 1948 ಮತ್ತು 1950ರ ತಮ್ಮ ಆ ಉತ್ಖನನದಿಂದ ಶಿಶುಪಾಲ್‌ಗಢ್ ಪುರಾತನ ನಗರ ಕೇಂದ್ರಿತ ನಾಗರಿಕತೆಯ ಕೇಂದ್ರ ಸ್ಥಾನ ಎನ್ನುವುದನ್ನು ಕಂಡುಕೊಂಡಿದ್ದರು. ಆದರೆ ಈ ಸತ್ಯವನ್ನು ಸಾಕ್ಷೀಕರಿಸಲು ಅವರಿಗೆ ತಂತ್ರಜ್ಞಾನಗಳ ಆಸರೆ ಇರಲಿಲ್ಲ. ಹಿಂದುತ್ವವಾದಿಗಳು ಲಾಲ್ ಅವರ ಅಧ್ಯಯನವನ್ನು ತಮ್ಮ 'ಅಖಂಡ ಭಾರತ'ದ ಕಲ್ಪನೆಯನ್ನು ಪ್ರೋತ್ಸಾಹಿಸಲು ಬಳಸಿಕೊಂಡರೆ, ಮಾರ್ಕ್ಸ್‌ವಾದಿ ಇತಿಹಾಸಜ್ಞರು ಇದನ್ನು ಹುರುಳಿಲ್ಲದ ವಾದವೆಂದು ನಿರ್ಲಕ್ಷಿಸಿದರು. ಹೀಗೆ ಕಾಲಾನುಕ್ರಮವಾಗಿ ಇವೆಲ್ಲಾ ಇತಿಹಾಸ ಸೇರಿ ಹೋದವು. ಸೂಕ್ತ ದಾಖಲೆಗಳ ಅಭಾವದಿಂದ ಕ್ರಿಸ್ತಪೂರ್ವ 5ನೇ ಶತಮಾನ ಮತ್ತು ಕ್ರಿಸ್ತಶಕ 5ನೇ ಶತಮಾನದ ನಡುವಿನ ನಾಗರಿಕತೆ ಕಾಲಗರ್ಭದಲ್ಲೇ ಉಳಿಯಿತು. ಮೌರ್ಯರು ಮತ್ತು ಗುಪ್ತರ ಆಳ್ವಿಕೆಯ ಕೆಲ ಚಹರೆಗಳು ಮಾತ್ರ ಅಲ್ಲಲ್ಲಿ ಕಂಡು ಬರುತ್ತವೆ.
ಆದರೆ ಇತಿಹಾಸ ಮರುಕಳಿಸಿದೆ. ವಿಶ್ವದಾದ್ಯಂತ ಮಾರ್ಕ್ಸ್‌ವಾದ ಬೆಲೆ ಕಳೆದುಕೊಳ್ಳುತ್ತಿದ್ದಂತೆ ಭಾರತದಲ್ಲಿಯೂ ಅದರ ಮೌಲ್ಯ ಕುಸಿಯಿತು. ನಾವು ಮತ್ತೆ ಉದಾರವಾದವನ್ನು ಅಪ್ಪಿಕೊಂಡೆವು. ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಭಾರತದ ಪ್ರಜೆಗಳು ಮತ್ತೆ ದೂರ ದೂರದ ರಾಷ್ಟ್ರಗಳೊಡನೆ ವಹಿವಾಟು ಆರಂಭಿಸಿದ್ದಾರೆ. ಸದ್ಯ ಯಾವುದೇ ದೇಶವು ಭಾರತವನ್ನು ಕಡೆಗಣಿಸಲು ಸಾಧ್ಯವೇ ಇಲ್ಲದಂತಹ ಆರ್ಥಿಕ ಪ್ರಗತಿಯನ್ನು ನಾವು ಸಾಧಿಸುತ್ತಿದ್ದೇವೆ.
ಮತ್ತೆ ದೆಹಲಿಗೆ ವಾಪಾಸಾಗುತ್ತಿದ್ದಾಗ ನನ್ನ ತಲೆಯಲ್ಲಿ ಒಂದು ಪ್ರಶ್ನೆ ಗಿರಕಿ ಹೊಡೆಯುತ್ತಿತ್ತು. ಈ ಪುರಾತನ ನಗರ ಕೇಂದ್ರಿತ ನಾಗರಿಕತೆ ನಮ್ಮ 21ನೇ ಶತಮಾನಕ್ಕೆ ಯಾವ ಪಾಠ ಕಲಿಸಬಹುದಿತ್ತು? ಒಂದು ಅತ್ಯುತ್ತಮ ಪಾಠ ಅಲ್ಲಿದೆ ಎನ್ನುವುದು ನಿಜ. ಶಿಶುಪಾಲ್‌ಗಢ್ ಮತ್ತು 45 ಇತರ ಪುರಾತನ ನಗರದ ನಿವಾಸಿಗಳು 1,000 ವರ್ಷಗಳ ಹಿಂದೆಯೇ ತಮ್ಮ ವೈವಿಧ್ಯ, ವಿಭಿನ್ನ ಭಾಷೆ ಮತ್ತು ಜನಾಂಗೀಯ ಅನನ್ಯತೆಯನ್ನು ಸಂಭ್ರಮಿಸುತ್ತಿದ್ದರು. ಅವರು ಪರಸ್ಪರ ಸಂಪರ್ಕದಲ್ಲಿದ್ದರು. ತಮ್ಮ ಸಂಸ್ಕೃತಿ ಮತ್ತು ಆರ್ಥಿಕ ವ್ಯವಹಾರಗಳನ್ನು ಜನಾಂಗೀಯ ಅಥವಾ ಪ್ರಾದೇಶಿಕ ಭಿನ್ನತೆಗಳಿಂದ ಹೊರಗಿಟ್ಟಿದ್ದರು. ರಾಜ್ ಠಾಕ್ರೆ ಮತ್ತು ಅಬು ಅಜ್ಮಿ ಅವರಂತಹ ರಾಜಕಾರಣಿಗಳಿಗೆ ಇದು ಅತ್ಯುತ್ತಮ ಪಾಠ. ನೀರಿಗಾಗಿ ಕಾದಾಡುವ ಕನ್ನಡಿಗರು ಮತ್ತು ತಮಿಳರು ಕಲಿಯಬೇಕಾದ ಪಾಠ. ಪಶ್ಚಿಮ ಏಷ್ಯಾ ಮತ್ತು ಯೂರೋಪ್‌ಗಳ ನಿಯಂತ್ರಣದಲ್ಲಿ 1,200 ವರ್ಷಗಳ ಹಿಂದೆಯೇ ಭಾರತ ತನ್ನ ಸಾರ್ವಭೌಮತೆಯನ್ನು ಕಳೆದುಕೊಂಡಿದೆ ಮತ್ತು ಪ್ರಜೆಗಳು ತಮ್ಮ ಮೂಲ ಸಂಸ್ಕೃತಿಯನ್ನು ಮರೆತಿದ್ದಾರೆ. ಆದರೆ ರಾಜಕಾರಣಿಗಳು ಈ ಪಾಠ ಕಲಿಯಲಾರರು ಎಂದಾದಲ್ಲಿ ನಾವು ಪ್ರಜೆಗಳು ಎಚ್ಚೆತ್ತು ಅವರಿಗೆ ಈ ಪಾಠ ಕಲಿಸಬೇಕಾಗಿದೆ.
ಶಿಶುಪಾಲ್‌ಗಢ್ ಪ್ರಾಮುಖ್ಯತೆ
ಆಡಂ ಸ್ಮಿತ್ ಮತ್ತು ಅವರ ಸಮಕಾಲೀನ ಆರ್ಥಿಕ ತಜ್ಞರ ಅಭಿಪ್ರಾಯ ತಪ್ಪು. ಬಂಡವಾಳ ಶಾಹಿ ಮತ್ತು ಮುಕ್ತ ಮಾರುಕಟ್ಟೆ ಯುರೋಪಿನ ಔದ್ಯೋಗಿಕ ಕ್ರಾಂತಿಯ ಕೂಸಲ್ಲ. ಶಿಶುಪಾಲ್‌ಗಢ್ ಮತ್ತು ಇಲ್ಲಿನ ಜನರು ವ್ಯವಹಾರ ನಡೆಸುತ್ತಿದ್ದ ಸುಮಾರು 45 ನಗರ ಕೇಂದ್ರಿತ ನಾಗರಿಕತೆ ಇದ್ದ ಪ್ರದೇಶಗಳಲ್ಲಿ ಇಂಥ ಭಾರೀ ಪ್ರಮಾಣದ ಉತ್ಪಾದನೆಯ ಕುರುಹುಗಳಿವೆ.
ಕಂದಾಹಾರ್ (ಅಫ್ಘಾನಿಸ್ತಾನ್)ನಿಂದ ತಮಿಳುನಾಡಿನ ಗ್ರಾಮೀಣ ಪ್ರದೇಶದವರೆಗೆ ಮುಕ್ತ ಮಾರುಕಟ್ಟೆಯ ಸಮಾನ ಸಾಮಾಜಿಕ, ಆರ್ಥಿಕ ಅನನ್ಯತೆಯನ್ನು ಕಾಣಬಹುದು. ಭಾರತ ಎಂದೂ ಏಕ ರಾಷ್ಟ್ರವಾಗಿರಲಿಲ್ಲ, ಅದು ಹರಿದು ಹಂಚಿ ಹೋಗಿತ್ತು ಎನ್ನುವ ಚಿಂತನೆಗೆ ಇದು ಸಂಪೂರ್ಣ ವ್ಯತಿರಿಕ್ತ.
ಇತರ ನಾಗರಿಕತೆಗಳಿಗೆ ಹೋಲಿಸಿದರೆ ದಕ್ಷಿಣ ಏಷ್ಯಾ ನಾಗರಿಕತೆಯ ವ್ಯಾಪ್ತಿ ವಿಸ್ತಾರವಾಗಿತ್ತು.
ಶಿಶುಪಾಲ್‌ಗಢ್ ಆಧುನಿಕ ನಗರಿಯನ್ನು ಹೋಲುತ್ತಿರುವುದು ಸ್ಪಷ್ಟ. 2,500 ವರ್ಷ ಗಳ ಹಿಂದೆ ಇಲ್ಲಿ 25,000 ಜನರು ನೆಲೆಸಿದ್ದರೂ ಅವರು ರೈತರಾಗಿದ್ದ ಕುರುಹುಗಳಿಲ್ಲ. ಆಧುನಿಕ ನಾಗರಿಕತೆಯನ್ನು ಹೋಲುವ ವ್ಯವಹಾರ ಪದ್ಧತಿ ಇಲ್ಲಿ ಪತ್ತೆಯಾಗಿದೆ.
ಸ್ವತಂತ್ರ ಸಾಮಾಜಿಕ ಗುತ್ತಿಗೆ ಪದ್ಧತಿ ಮತ್ತು ನಿಯಂತ್ರಿತ ಆಡಳಿತ ನಿರ್ವಹಣೆ ಪ್ರಕ್ರಿಯೆಗಳು ಕಂಡು ಬಂದಿವೆ.
ಇಲ್ಲಿನ ರಾಜಕೀಯ ಗತಿ-ಸ್ಥಿತಿಗಳ ಬಗ್ಗೆ ಕಾಲ್ಪನಿಕ ಉತ್ತರ ನೀಡಲು ಅಧ್ಯಯನ ತಂಡ ಸಿದ್ಧವಿಲ್ಲ. ರಾಜಮನೆತನದ ಆಡಳಿತದ ಕುರುಹು ಇಲ್ಲಿಲ್ಲ. ಆದರೆ ಪ್ರಜೆಗಳನ್ನು ನಿಯಂತ್ರಿಸುವ ಆಡಳಿತಗಾರರು ಇದ್ದರು ಎನ್ನುವುದು ನಿಜ.
ಯುದ್ಧಗಳಿಂದ ದೇಶಗಳು ನಾಶವಾಗುತ್ತವೆ ಎನ್ನುವ ಸಾಮಾನ್ಯ ನಂಬಿಕೆ ಇಲ್ಲಿಗೆ ಅನ್ವಯಿಸುವುದಿಲ್ಲ. ಕ್ರಿ.ಪೂ. 269ನೇ ಇಸವಿಯಲ್ಲಿ ಮಹಾರಾಜ ಅಶೋಕ ಶಸ್ತ್ರ ತ್ಯಜಿಸಿದ ಭೀಕರ 'ಕಳಿಂಗ' ಯುದ್ಧದ ರಣಭೂಮಿಗೆ 2 ಕಿ.ಮೀ. ದೂರದಲ್ಲಿರುವ ಶಿಶುಪಾಲ್‌ಗಢ್‌ಗೆ ಮಾತ್ರ ಆ ಯುದ್ಧದ ಸ್ಪರ್ಶವೇ ಆಗಿರಲಿಲ್ಲ.
ಟಿಎಸ್‌ಐ |