ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರಸ್ತುತ

ಅಂಗಾಂಗ ಮಾರಾಟ ಜಾಲ: ನಿಥಾರಿ ತಿರುವು?

 

ಆರೋಪಿ ಡಾ. ಅಮಿತ್ ನೋಯ್ಡಾದ ಕುಖ್ಯಾತ 'ಕಸಾಯಿಖಾನೆ' 'ಡಿ-5'ನ್ನು ಆಗಾಗ ಸಂದರ್ಶಿಸುತ್ತಿದ್ದ!

ನಿಥಾರಿ ಪ್ರಕರಣಕ್ಕೂ ಅಂಗಾಂಗ ಮಾರಾಟ ಜಾಲಕ್ಕೂ ಸಂಬಂಧವಿದೆಯೇ? ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಸಂಬಂಧವೆ ಎಂದು ಪೊಲೀಸರು, ಸಿಬಿಐ ಅಧಿಕಾರಿಗಳು ಈ ಪ್ರಶ್ನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಆದರೆ ನ್ಯಾಯಾಲಯದ ಸಮ್ಮುಖದಲ್ಲಿ ಸಾಕ್ಷಿ ಹೇಳಿದ ಹಲವರು ಬೇರೆಯದೇ ಕಥೆ ಹೇಳುತ್ತಾರೆ. ಅವರ ಪ್ರಕಾರ ಅಂಗಾಂಗ ಮಾರಾಟ ಜಾಲದ 'ಅಧಿಪತಿ' ಡಾ. ಅಮಿತ್, ನೋಯ್ಡಾದ ಕುಖ್ಯಾತ 'ಕಸಾಯಿಖಾನೆ' 'ಡಿ-5'ನ್ನು ಆಗಾಗ ಸಂದರ್ಶಿಸುತ್ತಿದ್ದ! ಈ ಹೇಳಿಕೆ ಸಾಕ್ಷಿದಾರರ ಮಕ್ಕಳನ್ನೂ ಅಂಗಾಂಗ ಮಾರಾಟಕ್ಕಾಗಿಯೇ ಕೊಲೆಗೈಯಲಾಗಿದೆ ಎಂಬ ಗುಮಾನಿಗೆ ನೀರೆರೆಯುತ್ತದೆ. ಡಾ. ಅಮಿತ್‌ನನ್ನು ವಶಕ್ಕೆ ತೆಗೆದುಕೊಂಡಿರುವ ಸಿಬಿಐ ನಿಥಾರಿ ಕೊಲೆಯಲ್ಲಿ ಆತನ ಕೈವಾಡ ಹಾಗೂ ನಗರದ ಪ್ರತಿಷ್ಠಿತರ ಜೊತೆಗಿನ ಆತನ ನಂಟನ್ನು ಸಾಬೀತುಗೊಳಿಸುವ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ವಿಚಾರಣೆಯ ಮೊದಲ ಹಂತದಲ್ಲೇ ಅಮಿತ್ ಕೆಲವು ಅಧಿಕಾರಿಗಳ ಹಾಗೂ ರಾಜಕೀಯ ಪುಢಾರಿಗಳ ಹೆಸರುಗಳನ್ನು ಬಾಯಿಬಿಟ್ಟಿದ್ದಾನೆ. ಸಿಬಿಐ ಈಗಾಗಲೇ ರಹಸ್ಯ ಕಾರ್ಯಾಚರಣೆ ಆರಂಭಿಸಿದೆ. ನಿಥಾರಿ ಪ್ರಕರಣಕ್ಕೂ ಅಂತರ್ ರಾಷ್ಟ್ರೀಯ ಅಂಗಾಂಗ ಮಾರಾಟ ಜಾಲಕ್ಕೂ ಸಂಬಂಧ ಇದೆ ಎನ್ನುವುದೇ ಇಲ್ಲಿನ ಬಲಿಪಶುಗಳ ಒಮ್ಮತ. ನಿಥಾರಿ ಬಲಿಪಶುಗಳ ಅಭಿಯಾನದ ನೇತೃತ್ವ ವಹಿಸಿದ ಸಾಮಾಜಿಕ ಕಾರ್ಯಕರ್ತೆ ಉಷಾ ಠಾಕೂರ್ ಪ್ರಕಾರ ಡಿ-5ನಲ್ಲಿ ದೊರೆತ ಕೊಳೆತ ದೇಹಗಳು ಹಾಗೂ ಅಸ್ಥಿಪಂಜರಗಳು ಮೋಸದಾಟದ ಕಥೆ ಹೇಳುತ್ತವೆ. ನಿಜ ಹೇಳಬೇಕೆಂದರೆ, ಈ ಸರಣಿ ಕೊಲೆಗೂ ಅಂಗಾಂಗ ಮಾರಾಟಕ್ಕೂ ಸಂಬಂಧವಿದೆ ಎಂದು ನಾನು ಪೊಲೀಸರು, ಸಿಬಿಐ ಅಧಿಕಾರಿಗಳಲ್ಲಿ ಬಹು ಬಾರಿ ಹೇಳಿದ್ದೆ. ಆದರೆ ಈ ನಿಟ್ಟಿನಲ್ಲಿ ಅವರು ತನಿಖೆ ನಡೆಸಲೇ ಇಲ್ಲ ಎನ್ನುತ್ತಾರೆ. ಆ ಕೊಳೆತ ದೇಹಗಳಲ್ಲಿ ಕಿಬ್ಬೊಟ್ಟೆ ಹಾಗೂ ದೇಹದ ಇತರ ಅಂಗಗಳೇ ಇಲ್ಲ. ಕಟ್ಟಡದಲ್ಲಿ ದೊರೆತ ಎಲ್ಲಾ ಅಸ್ಥಿಪಂಜರಗಳೂ ಹೀಗೇ ಇದ್ದವು. ನಿಥಾರಿಯ ಚಬ್ಬೂ ಲಾಲ್ ಹಾಗೂ ಕುಸುಮ್ ಗುಪ್ತಾ ಪತ್ರಿಕೆಗಳಲ್ಲಿ ಡಾ. ಅಮಿತ್ ಫೋಟೋ ನೋಡಿದ ಕೂಡಲೇ ಆತನ ಗುರುತು ಪತ್ತೆಹಚ್ಚಿದರು. ಚಬ್ಬೂ ಲಾಲ್ ಡಿ-5 ಕಟ್ಟಡದ ಮುಂದಿನ ಒಬ್ಬ ಪುಟ್ಟ ವ್ಯಾಪಾರಿ. ಅಲ್ಲೇ ಆತ ತನ್ನ 10 ವರ್ಷದ ಪುಟ್ಟ ಮಗಳು ಜ್ಯೋತಿಯನ್ನು ಕಳೆದುಕೊಂಡಿದ್ದು. ಅಮಿತ್ ಎರಡು ಬಾರಿ ಪಂಧೇರ್‌ನನ್ನು ಭೇಟಿಯಾಗಿದ್ದನ್ನು ನಾನು ನೋಡಿದ್ದೇನೆ ಎಂದು ಚಬ್ಬೂ ಟಿಎಸ್‌ಐಗೆ ವಿವರ ನೀಡಿದ್ದಾರೆ. ನಿಥಾರಿಯ ದಿನಸಿ ಅಂಗಡಿ ವ್ಯಾಪಾರಿ ಕುಸುಮ್ ಗುಪ್ತಾ ಅವರ ವಿವರಣೆಗಳೂ ಇದೇ ರೀತಿ ಇವೆ. ನಗರದ ರಿಕ್ಷಾ ಎಳೆಯುವ ಸುನಿಲ್ ಬಿಸ್ವಾಸ್ ಪುತ್ರಿ ಪುಷ್ಪಾ ಕಾಣೆಯಾದ 2006ರ ಏಪ್ರಿಲ್ 19ರಂದು ನಾನು ಅಮಿತ್‌ನನ್ನು ಪಂಧೇರ್ ಜೊತೆ ನೋಡಿದ್ದೆ ಎನ್ನುತ್ತಾರೆ ಕುಸುಮ್. ಡಾ. ಅಮಿತ್ ಪೊಲೀಸರ ವಶದಲ್ಲಿರುವುದರಿಂದ ಈ ಪ್ರಕರಣಗಳ ನಡುವಿನ ಕೊಂಡಿ ಹುಡುಕುವುದು ಕಷ್ಟವಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ನಾವು ಎಲ್ಲಾ ಸಾಧ್ಯತೆಗಳ ಕುರಿತೂ ತನಿಖೆ ನಡೆಸುತ್ತಿದ್ದೇವೆ. ಡಾ. ಅಮಿತ್‌ನ ಎಲ್ಲಾ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಕೊಂಡಿಗಳನ್ನೂ ಪರಿಶೀಲಿಸುತ್ತಿದ್ದೇವೆ ಎನ್ನುತ್ತಾರೆ ಸಿಬಿಐ ವಕ್ತಾರ ಜಿ. ಮೊಹಂತಿ. ಇಂಟರ್ ಪೋಲ್‌ನಿಂದ ರೆಡ್ ಕಾರ್ನರ್ ನೋಟೀಸ್ ಪಡೆದ ಬಳಿಕ ಡಾ. ಅಮಿತ್‌ನನ್ನು ಕಠ್ಮಂಡು ಬಳಿಯಿರುವ ಪ್ರವಾಸಿ ಮಂದಿರದಲ್ಲಿ ಬಂಧಿಸಿ, ಫೆಬ್ರುವರಿ 9ರಂದು ನೇಪಾಳದಿಂದ ಭಾರತಕ್ಕೆ ಅಟ್ಟಲಾಯಿತು. ಆ ಬಳಿಕ ಫೆಬ್ರುವರಿ 10ರಂದು ನೇರವಾಗಿ ಮಹಾನಗರ ಮುಖ್ಯ ಮ್ಯಾಜಿಸ್ಟ್ರೇಟ್ ಸಂಜೀವ್ ಜೈನ್ ಅವರ ಬಳಿ ಕರೆತರಲಾಯಿತು ಮತ್ತು ಫೆಬ್ರುವರಿ 22ರವರೆಗೆ ಡಾ. ಅಮಿತ್‌ನನ್ನು ಸಿಬಿಐ ವಶಕ್ಕೆ ಒಪ್ಪಿಸಲಾಯಿತು. ಎರಡು ಪ್ರತ್ಯೇಕ ಕಾಯ್ದೆ, ಭಾರತೀಯ ನೀತಿ ಸಂಹಿತೆ (ಅನುಚ್ಛೇದ 420, 342, 326, 506 ಮತ್ತು 120-ಬಿ), ಹಾಗೂ ಮಾನವ ಅಂಗಾಂಗ ಕಸಿ ಕಾಯ್ದೆ, 1994 (ಅನುಚ್ಛೇದ 18 ಮತ್ತು 19) ಅಧೀನದಲ್ಲಿ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಅದೇ ಸಂದರ್ಭದಲ್ಲಿ, ಇನ್ನೊಬ್ಬ ಆರೋಪಿ ಡಾ. ಸರಜ್ ಕುಮಾರ್ ಗುರ್‌ಗಾಂವ್‌ನ ಒಂದು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಡಾ. ಉಪೇಂದರ್ ಹಾಗೂ ಆತನ ಸಹಚರರಾದ ಜಗದೀಶ್ ಮತ್ತು ಘಯಾಸುದ್ದೀನ್ ಎಂಬವರನ್ನು ಉತ್ತರ ಪ್ರದೇಶದ ಪೊಲೀಸರು ಸಿಬಿಐಗೆ ಒಪ್ಪಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಸಿಬಿಐಗೆ ಹಲವು ಮಾಹಿತಿಗಳು ದೊರೆತಿವೆ. ಆರೋಪಿಗಳು ಹಲವು ರಾಜಕಾರಣಿಗಳ ಹಾಗೂ ಅಧಿಕಾರಿಗಳ ಹೆಸರುಗಳನ್ನು ಹೇಳಿದ್ದಾರೆ. ಅದರಲ್ಲಿ ಹರಿಯಾಣದ ಇಬ್ಬರು ಪ್ರಮುಖ ರಾಜಕಾರಣಿಗಳು (ಕೇಂದ್ರ ಸಚಿವರಾಗಿದ್ದ ಒಬ್ಬ ವ್ಯಕ್ತಿ, ಹಾಗೂ ಒಬ್ಬ ಮಾಜಿ ಶಾಸಕ) ಹಾಗೂ ಉತ್ತರ ಪ್ರದೇಶದ ಒಬ್ಬ ಉನ್ನತ ಅಧಿಕಾರಿ ಪ್ರಮುಖರು. ತನಿಖಾಧಿಕಾರಿಯೊಬ್ಬರು ಟಿಎಸ್‌ಐಗೆ ಪ್ರಕರಣದ ಗೊಂದಲಗಳ ಬಗ್ಗೆ ಪ್ರಸ್ತುತ ಈ ಪ್ರಕರಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೈವಾಡವಿದೆಯೇ ಎಂದು ತಿಳಿಯಲು ನಾವೂ ಸತತ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ. ಒಂದಂತೂ ನಿಜ, ಮಾನವ ಅಂಗಾಂಗ ಮಾರಾಟದಂಥ ಈ ಬೃಹತ್ ಜಾಲ ಯಾವುದೇ ಪ್ರಭಾವೀ ವ್ಯಕ್ತಿಗಳ ಪ್ರೋತ್ಸಾಹವಿಲ್ಲದೆ ಇಷ್ಟು ಸುದೀರ್ಘ ಕಾಲ ಸಾಗಲು ಸಾಧ್ಯವಿಲ್ಲ!

ಟಿಎಸ್‌ಐ

ಅನಿಲ್ ಪಾಂಡೆ

ಇತರ ಪ್ರಸ್ತುತ ಲೇಖನಗಳು

ಭಾರತದ ಮರು ಸಂಶೋಧನ

ಅಂಗಾಂಗ ಮಾರಾಟ ಜಾಲ: ನಿಥಾರಿ ತಿರುವು?

ಮುಂಬೈ ಸಂಘರ್ಷ :ಉರಿವ ಬೆಂಕಿಗೆ ತುಪ್ಪ ಸುರಿದವರು

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .