ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
 
ಪತ್ರ ಚರಿತ್ರೆ
ಚೆಮ್ಸ್‌ಫರ್ಡ್‌ಗೆ ಠ್ಯಾಗೋರ್ ಪತ್ರ
 

ರವೀಂದ್ರನಾಥ ಠ್ಯಾಗೋರ್ 1861 ಮೇ ೭ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಬಂಗಾಳಿ ಕವಿ, ತತ್ವಜ್ಞಾನಿಯಾಗಿದ್ದ ಠ್ಯಾಗೋರರು ಅತ್ಯುತ್ತಮ ಸಾಹಿತಿಯೂ ಹೌದು. ಠ್ಯಾಗೋರರ ಕೃತಿಗಳು ಬಂಗಾಳಿ ಸಾಹಿತ್ಯದ ಚಹರೆಯನ್ನೇ ಬದಲಾಯಿಸಿತು. 1913ರಲ್ಲಿ ಸಾಹಿತ್ಯ ನೋಬೆಲ್ ಪ್ರಶಸ್ತಿ ಪುರಸ್ಕೃತರಾಗುವ ಮೂಲಕ ರವೀಂದ್ರನಾಥ ಠ್ಯಾಗೋರರು ನೋಬೆಲ್ ಪುರಸ್ಕೃತ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಜಲಿಯನ್‌ವಾಲಾ ಬಾಗ್ ದುರಂತದಿಂದ ರೋಸಿ ಹೋದ ರವೀಂದ್ರನಾಥ ಠ್ಯಾಗೋರರು ತಮ್ಮ ನೈಟ್‌ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು. ಆ ಸಂದರ್ಭದಲ್ಲಿ ಅವರು ಲಾರ್ಡ್ ಚೆಮ್ಸ್‌ಫರ್ಡ್‌ಗೆ ಬರೆದ ಪತ್ರ ಇಲ್ಲಿದೆ.

ಮೇ 30, 1919

ಗೌರವಾನ್ವಿತರೇ,                                                                                                          ಕಲ್ಕತ್ತಾ 6, ದ್ವಾರಕಾನಾಥ್ ಠ್ಯಾಗೋರ್ ಲೇನ್

ಸ್ಥಳೀಯ ಗಲಭೆಗಳಿಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಪಂಜಾಬ್‌ನಲ್ಲಿ ತೆಗೆದುಕೊಂಡ ಕ್ರಮಗಳು ಅತಿ ಘೋರವಾದದ್ದು. ತಮ್ಮ ಸರ್ಕಾರದ ಅಧೀನದಲ್ಲಿ ಭಾರತೀಯರು ಎಳ್ಳಷ್ಟೂ ಸುರಕ್ಷಿತರಲ್ಲ ಎಂಬ ನಡುಕ ಹುಟ್ಟಿಸುವ ಸತ್ಯವನ್ನು ಈ ಕ್ರಮ ಹೊರಗೆಡವಿದೆ. ತಮ್ಮ ಸ್ವಂತ ನೆಲದಲ್ಲೇ ಅಸಹಾಯಕರಾದ ಸ್ಥಿತಿ ಭಾರತೀಯರದ್ದು. ನತದೃಷ್ಟ ಜನರ ಮೇಲಿನ ಈ ಅಸಮಂಜಸ ಶಿಕ್ಷೆ, ಅವರನ್ನು ನಡೆಸಿಕೊಂಡ ಹೀನಾಯ ರೀತಿ ಎಲ್ಲವನ್ನೂ ಅವಲೋಕಿಸಿದಾಗ ನಾಗರಿಕ ಸಮಾಜದ ಇತಿಹಾಸದಲ್ಲೇ ಇಂಥ ಘಟನೆಗಳು ಇನ್ನೆಲ್ಲೂ ಸಂಭವಿಸಿಲ್ಲ ಎನ್ನುವುದು ಖಚಿತ. ಮತ್ತಾವ ದೇಶವೂ ಇಂಥ ನಡವಳಿಕೆಗಳನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನರಮೇಧದಲ್ಲಿ ವಿಶೇಷವಾಗಿ ಪಳಗಿದ ಸಂಸ್ಥೆಯೊಂದು ನಿಶ್ಶಸ್ತ್ರರು ಹಾಗೂ ಅಮಾಯಕರ ಮೇಲೆ ನಡೆಸಿದ ಈ ಎಲ್ಲೆ ಮೀರಿದ ಆಕ್ರಮಣವನ್ನು ಗಮನಿಸಿದರೆ ಒಂದು ವಿಷಯ ಸುಸ್ಪಷ್ಟ. ಈ ಆಕ್ರಮಣಗಳಲ್ಲಿ ಯಾವುದೇ ಔಚಿತ್ಯವಿಲ್ಲ ಇನ್ನು ನೈತಿಕತೆಯ ಹತ್ತಿರವೂ ಇದು ಸುಳಿದಿಲ್ಲ. ಪಂಜಾಬಿನ ನಮ್ಮ ಸೋದರರ ಮೇಲೆ ನಡೆದ ಈ ಅಮಾನುಷ ದುರಾಕ್ರಮಣ ಮೌನವಾಗಿಯೇ ಭಾರತದ ಮೂಲೆ ಮೂಲೆ ತಲುಪಿದೆ. ಈ ಆಕ್ರಮಣದ ಪ್ರತಿಯಾಗಿ ಭಾರತೀಯರ ಎದೆಯಲ್ಲಿ ಉಕ್ಕಿದ ಆ ಆಕ್ರೋಶವನ್ನು ಆಡಳಿತಗಾರರು ಕಡೆಗಣಿಸಿದ್ದಾರೆ. ಬಹುಶಃ ನಾವು ತಕ್ಕ ಪಾಠ ಕಲಿಸಿದ್ದೇವೆಂದು ತಮ್ಮನ್ನು ತಾವೇ ಅವರು ಅಭಿನಂದಿಸಿಕೊಳ್ಳುತ್ತಿರಬಹುದು. ಕೆಲವು ಆಂಗ್ಲೋ- ಇಂಡಿಯನ್ ಪತ್ರಿಕೆಗಳು ಈ ಆಕ್ರಮಣವನ್ನು ಶ್ಲಾಘಿಸಿ ಬರೆದಿದ್ದವು. ಕೆಲವು ಪತ್ರಿಕೆಗಳಂತೂ ಆಕ್ರಮಣಕ್ಕೊಳಗಾದವರ ನೋವನ್ನು ಲೇವಡಿ ಮಾಡುವ ಹಂತಕ್ಕೂ ತಲುಪಿದ್ದವು.ನೊಂದವರಿಗೆ ನ್ಯಾಯ ದೊರಕಿಸಬೇಕೆಂಬ ಹಂಬಲವಿರುವ ಯಾವುದೇ ಸಂಘಟನೆಗಳ ಅಭಿಪ್ರಾಯಗಳಿಗೂ ಅವರು ಮನ್ನಣೆ ನೀಡಲಿಲ್ಲ. ನಮ್ಮ ಮನವಿಗಳೆಲ್ಲವೂ ಮೂಲೆ ಸೇರಿರುವ ವಿಚಾರ ನಮಗೆ ತಿಳಿದಿದ್ದು, ನಮ್ಮಲ್ಲಿ ಪ್ರತೀಕಾರದ ಬೆಂಕಿ ಉರಿಯತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಅದೇನೆ ಪರಿಣಾಮವಿದ್ದರೂ ಅದನ್ನು ನಾನು ಎದುರಿಸುತ್ತೇನೆ ಮತ್ತು ನಾನೂ ದೇಶದ ಮಿಲಿಯನ್‌ಗಟ್ಟಲೆ ಜನರ ಪ್ರತಿಭಟನೆಯಲ್ಲಿ ದನಿಗೂಡಿಸುತ್ತೇನೆ. ಕೊನೆಗೂ ನಾನು ನನ್ನ ಜನರ ಪರವಾಗಿ ನಿಲ್ಲುವ ಸಮಯ ಬಂದಿದೆ. ನನ್ನವರ ಮೇಲೆ ಉಗ್ರದೃಷ್ಟಿ ಬೀರಿ, ಅವರ ವಿರುದ್ಧ ಕ್ಷುಲ್ಲಕ ಕ್ರಮ ಕೈಗೊಂಡು ಹಾಗೂ ಅಮಾನವೀಯವಾಗಿ ವರ್ತಿಸಿ ಅವಮಾನಿಸಿದ್ದೀರಿ. ನಿಮ್ಮಿಂದಾಗಿ ಬೇಸತ್ತು ಹೋದ ನನ್ನ ಜನರಿಗೋಸ್ಕರ ನಾನು ಉತ್ತಮ ಶ್ರೇಣಿ ಅಥವಾ ವಿಶೇಷ ಹುದ್ದೆಯಲ್ಲಿದ್ದರೂ ದನಿಗೂಡಿಸುತ್ತೇನೆ. ಗೌರವಾನ್ವಿತರೇ ಈ ಎಲ್ಲಾ ಕಾರಣಗಳಿಂದಾಗಿ ನಾನು ಪತ್ರ ಬರೆಯುತ್ತಿದ್ದೇನೆ. ಅತ್ಯಂತ ಬೇಸರ ಹಾಗೂ ವಿಷಾದದೊಂದಿಗೆ ನಿಮ್ಮ ಹಿಂದಿನ ರಾಜರಿಂದ ಪಡೆದಿದ್ದ ನನ್ನ ಗೌರವದ 'ನೈಟ್‌ಹುಡ್' ಗೌರವವನ್ನು ನಾನೀಗ ಹಿಂದಿರುಗಿಸುತ್ತಿದ್ದೇನೆ. ಆದರೂ ಅವರ ಆದರ್ಶ ಹಾಗೂ ಉದಾತ್ತ ಹೃದಯ ಶ್ರೀಮಂತಿಕೆಗೆ ನಾನು ಸದಾ ಆಭಾರಿಯಾಗಿದ್ದೇನೆ.

ನಿಮ್ಮ ವಿಶ್ವಾಸಿ, ರವೀಂದ್ರನಾಥ ಠ್ಯಾಗೋರ್ v

 

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .