ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ದೂರದೂರಿಂದ
 
 

ಆಫ್ರಿಕಾ: ಬಿಕ್ಕಟ್ಟು

ಅಂತರ್ ಕಲಹದ ಬೇಗೆಯಲ್ಲಿ ಚಡ್

ಅಂತರ್ ರಾಷ್ಟ್ರೀಯ ನೆರವು, ದೇಶದ ಪರಿಸ್ಥಿತಿಯನ್ನು ಬದಲಿಸಬಲ್ಲುದೆ?

ಕಳೆದ ಬಾರಿ ಕೀನ್ಯಾ ಜನಾಂಗೀಯ ಗಲಭೆ ಸುದ್ದಿ ಮಾಡಿದರೆ ಈ ಬಾರಿ ಚಡ್ ಸರದಿ. ಹೌದು, ಇವೆರಡೂ ಆಫ್ರಿಕಾ ಖಂಡದ ರಾಷ್ಟ್ರಗಳೇ. ಎರಡೂ ರಾಷ್ಟ್ರಗಳು ಸುದ್ದಿಯಲ್ಲಿರುವ ಕಾರಣವೂ ಒಂದೇ. ಆದರೆ ಈ ಕಾರಣ ದೇಶಕ್ಕೆ ಒಳಿತುಂಟು ಮಾಡುತ್ತಿಲ್ಲ, ಈಗಾಗಲೇ ಹದಗೆಟ್ಟಿರುವ ದೇಶದ ಪರಿಸ್ಥಿತಿಯನ್ನು ಇನ್ನೂ ಪ್ರತಾಪಕ್ಕೆ ತಳ್ಳುತ್ತಿದೆ ಎನ್ನುವುದು ಮಾತ್ರ ವಿಪರ್ಯಾಸ. ಬಡತನ ನಿವಾರಣೆ, ನೈರ್ಮಲ್ಯ, ಆರೋಗ್ಯ ಅಥವಾ ಆರ್ಥಿಕ ಪ್ರಗತಿಗೆ ಪೂರಕವಾಗುವ ಕಾರ್ಯಗಳ ಸೂಚನೆಯೇ ಇಲ್ಲ. ಅದೇ ಹಳೇ ಅರಾಜಕತೆ, ಜನಾಂಗೀಯ ಗಲಭೆಗಳು, ಸೇನಾ ಕ್ರಾಂತಿ, ಶೋಷಣೆ, ಸಾವು ನೋವು ಮತ್ತು ಆಫ್ರಿಕಾ ದೇಶಗಳಲ್ಲಿ ಸಾಮಾನ್ಯವೆನಿಸಿರುವ ಅದಕ್ಷತೆ ಮತ್ತು ಆರ್ಥಿಕ ವೈಫಲ್ಯಗಳ ಕಥೆ ಚಡ್‌ನಲ್ಲೂ ಮುಂದುವರೆದಿದೆ. ಕಳೆದ ವಾರವಿಡೀ ಚಡ್ ರಾಜಧಾನಿ ಅಂಜಮೆನಾ ಸಮರಾಂಗಣವಾಗಿ ಪರಿವರ್ತನೆಯಾಗಿತ್ತು. ಅಧ್ಯಕ್ಷ ಇದ್ರಿಸ್ ಡೆಬಿ ಅವರ ಸರ್ಕಾರ ಉರುಳಿಸುವ ಕ್ರಾಂತಿಯ ಫಲಶ್ರುತಿ ಈ ಗಲಭೆ. ಚಡ್‌ನ ಈ ಹಿಂದಿನ ವಸಾಹತುಶಾಹಿ ಒಡೆಯ ಫ್ರಾನ್ಸ್‌ನಿಂದ ಸೇನಾ ಸಹಕಾರ ಪಡೆದ ಡೆಬಿ ಅವರು ಈಗ ಕ್ರಾಂತಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ಸೂಡಾನ್ ಮೂಲದ ಕ್ರಾಂತಿಕಾರಿಗಳು ಚಡ್‌ನಲ್ಲಿ ಕ್ರಾಂತಿಯ ಕಹಳೆ ಊದುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೀಗ ಈ ಕ್ರೋಧದ ಅಲೆಯನ್ನು ತಕ್ಕ ಮಟ್ಟಿಗೆ ಅಡಗಿಸಲಾಗಿದೆ. ಸುಮಾರು 200 ಸೇನಾ ಟ್ರಕ್‌ಗಳನ್ನು ಬಳಸಲಾಗಿದ್ದ ಸೇನಾ ಕಾರ್ಯಾಚರಣೆಯ ಮೂಲಕ ದಾಳಿಯನ್ನು ನಿಯಂತ್ರಿಸಿ ಕ್ರಾಂತಿಕಾರಿಗಳನ್ನು ರಾಜಧಾನಿಯಿಂದ ಹೊರಗಟ್ಟಲಾಗಿದೆ. ಆದರೆ ಭವಿಷ್ಯದಲ್ಲಿ ಇಂಥ ದಾಳಿಗಳ ಪುನರಾವರ್ತನೆಯಾಗುವುದನ್ನು ಅಲ್ಲಗಳೆಯುವಂತಿಲ್ಲ. ವರದಿಗಳ ಪ್ರಕಾರ ಈಗಾಗಲೇ ಈ ಗಲಭೆಯಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಚಡ್‌ನಲ್ಲಿ ಕ್ಷಿಪ್ರ ಕ್ರಾಂತಿ ಪ್ರಯತ್ನ ಮತ್ತು ಅಧಿಕಾರಕ್ಕಾಗಿ ಹಣಾಹಣಿ ನಡೆಯುತ್ತಿರುವುದು ಇದೇ ಮೊದಲ ಬಾರಿ ಏನಲ್ಲ. ಫ್ರಾನ್ಸ್‌ನ ವಸಾಹತು ದೇಶವಾಗಿದ್ದ ಚಡ್ 1960ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಸ್ವತಂತ್ರ ರಾಷ್ಟ್ರವಾದ ಮೂವತ್ತು ವರ್ಷಗಳ ಒಳಗೇ ಅಂತರ್‌ಯುದ್ಧದ ಪ್ರಕೋಪದಲ್ಲಿ ಬೆಂದ ಹಿರಿಮೆ ಈ ದೇಶಕ್ಕಿದೆ. ನೆರೆ ರಾಷ್ಟ್ರಗಳಾದ ಲಿಬಿಯಾ ಮತ್ತು ಸೂಡಾನ್ ಈ ದೇಶದ ಹಿಂಸೆಗೆ ತಮ್ಮ ಕಾಣಿಕೆಗಳನ್ನು ನೀಡುತ್ತಿವೆ. ಚಡ್ ಅಧ್ಯಕ್ಷ ಡೆಬಿ ಅವರು ದೇಶದಲ್ಲಿ ಶಾಂತಿ ಕಾಪಾಡಲು ಯುರೋಪಿಯನ್ ದೇಶಗಳತ್ತ ಕೈಯೊಡ್ಡಿದ್ದಾರೆ. ದೇಶದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಯುರೋಪಿಯನ್ ಒಕ್ಕೂಟ ಹೆಚ್ಚು ಪರಿಣಾಮಕಾರಿ ನಿಲುವು ತಳೆಯಬೇಕಿದೆ ಎಂದು ಬಯಸಿದ್ದಾರೆ. ಆದರೆ ತಮ್ಮದೇ ಖಂಡದ ದೇಶಗಳ ಬಿಕ್ಕಟ್ಟನ್ನು ಪರಿಹರಿಸಲು ಹರಸಾಹಸ ಪಡುತ್ತಿರುವ ಅಂತರ್ ರಾಷ್ಟ್ರೀಯ ಸಂಘಟನೆಗಳು ಎಷ್ಟು ದಿನ ಆಫ್ರಿಕಾ ಖಂಡಕ್ಕೆ ಆರ್ಥಿಕ ಮತ್ತು ಸೇನಾ ನೆರವು ನೀಡುವ ಕಾರ್ಯವನ್ನು ಮುಂದುವರಿಸಲಿದೆ ಎನ್ನುವುದು ಪ್ರಶ್ನಾರ್ಹ. 2008ರ ಮಾನವ ಹಕ್ಕು ಸೂಚ್ಯಂಕದಲ್ಲಿ 170ನೇ ಸ್ಥಾನ ಪಡೆದಿದ್ದ ದೇಶ ಚಡ್. ಈ ದೇಶದ ಜನಸಾಮಾನ್ಯರು ಅಮೆರಿಕ ಮತ್ತು ಫ್ರಾನ್ಸ್‌ನಂಥ ಸಂಸ್ಥೆಗಳ ಅನುದಾನವನ್ನು ಆಶ್ರಯಿಸಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ, ಅಧ್ಯಕ್ಷ ಪಟ್ಟಕ್ಕಾಗಿ ಹೋರಾಡುವುದಕ್ಕಿಂತಲೂ ಭಯಾನಕ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ ಎನ್ನುವುದು ನಿಚ್ಚಳ. ಆಫ್ರಿಕಾ ಖಂಡದಲ್ಲಿ ಶಾಂತ ಜೀವನದ ಕನಸನ್ನು ಮರೆತಿರುವ ಜನ ಸಾಮಾನ್ಯರ ಪರಿತಾಪ ಕಂಡು ದುಃಖ ವ್ಯಕ್ತಪಡಿಸುವ ಬದಲಾಗಿ ಮತ್ತೇನೂ ಮಾಡಲು ಸಾಧ್ಯವಿಲ್ಲ. ಅಲ್ಲಿನ ದೇಶಗಳ ಅಧಃಪತನವನ್ನು ತಡೆಯುವುದು ಮಾತ್ರ ಅಸಾಧ್ಯದ ಮಾತಾಗಿ ಪರಿಣಮಿಸುತ್ತಿದೆ.

ಟಿಎಸ್‌ಐ

ಪಥಿಕೃತ್ ಪಾಯ್ನೆ

ಟರ್ಕಿ: ಸಮಸ್ಯೆ

ಮರುಕಳಿಸಿದ ಪರ್ದಾ ವಿವಾದ

ಜನಮತ ಸಂಗ್ರಹದಲ್ಲಿ ಪರ್ದಾ ನಿಷೇಧ ಹಿಂತೆಗೆತಕ್ಕೆ ಭಾರೀ ಬೆಂಬಲ

ಟರ್ಕಿಯಲ್ಲಿ ಮತ್ತೆ ಪರ್ದಾ ವಿವಾದ ಉದ್ಭವವಾಗಿದೆ. ಪರ್ದಾ ನಿಷೇಧವನ್ನು ಹಿಂತೆಗೆಯುವ ಸಂಸತ್ತಿನ ನಿರ್ಣಯ ಈ ಹಳೇ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ. ಕಳೆದ ವಾರವಿಡೀ ದೇಶ ಈ ವಿವಾದದ ಕಾವಿನಲ್ಲಿ ಬೆಂದು ಹೋಯಿತು. ಸಂಸತ್ತಿನಲ್ಲಿ ನಡೆದ ಜನಮತಸಂಗ್ರಹದಲ್ಲಿ ಪರ್ದಾ ನಿಷೇಧ ಹಿಂತೆಗೆಯಲು ಭಾರೀ ಬೆಂಬಲ ವ್ಯಕ್ತವಾಗಿದೆ. 28 ವರ್ಷಗಳಷ್ಟು ಹಳೆಯದಾದ ಈ ಪರ್ದಾ ನಿಷೇಧ ಹಿಂತೆಗೆಯಲು ಸಂವಿಧಾನದಲ್ಲಿ ತಿದ್ದುಪಡಿ ತರಲು ಸಂಸತ್ತಿನಲ್ಲಿ ಅಭಿಪ್ರಾಯ ಸಂಗ್ರಹ ನಡೆಸಲಾಗಿತ್ತು. ಈ ಮತಗಣನೆಯಲ್ಲಿ ಪರ್ದಾ ನಿಷೇಧ ಹಿಂತೆಗೆತಕ್ಕೆ 401- 110 ಮತ್ತು 404- 99 ಮತಗಳಿಂದ ಬೆಂಬಲ ದೊರೆತಿದೆ. ಈ ನಡೆ ವಿವಾದಕ್ಕೆ ಎಡೆಮಾಡಿಕೊಡುವುದು ಖಚಿತ. ಇದು ಟರ್ಕಿಯ ಜಾತ್ಯತೀತ ನೆಲೆಗಟ್ಟಿಗೆ ಅಪಾಯ ತಂದೊಡ್ಡುತ್ತಿದೆ ಎಂದು ವಿರೋಧಿಗಳು ಹುಯಿಲೆಬ್ಬಿಸಿದ್ದಾರೆ. ಆದರೆ ನಿಷೇಧ ಹಿಂತೆಗೆಯುವ ವಿರುದ್ಧ ಪ್ರತಿಭಟನೆಗಳೂ ಕೇಳಿ ಬರುತ್ತಿವೆ. ಆದರೂ, ಜನಾಭಿಪ್ರಾಯ ಸಂಗ್ರಹಕ್ಕಾಗಿ ವಾರದಿಂದೀಚೆಗೆ ನಡೆದಿರುವ ಸಮೀಕ್ಷೆಗಳಲ್ಲಿ ಬಹುತೇಕ ಟರ್ಕಿ ಜನರು ಈ ನಿಷೇಧ ಹಿಂತೆಗೆಯುವುದನ್ನು ಬೆಂಬಲಿಸಿದ್ದಾರೆ. ಹತ್ತರಲ್ಲಿ ಆರು ಟರ್ಕಿ ಸ್ತ್ರೀಯರು ಪರ್ದಾ ಧರಿಸುವವರೇ. ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಕಾಪಾಡುವ ನಿಟ್ಟಿನಲ್ಲಿ ಪರ್ದಾ ಧರಿಸಲು ಅವಕಾಶ ಕಲ್ಪಿಸಿಕೊಡಬೇಕು ಎನ್ನುವುದು ಇಸ್ಲಾಂ ಪರ ಒಲವು ತೋರುವ ಆಡಳಿತ ಪಕ್ಷ ಎ.ಕೆ. ಪಾರ್ಟಿ ಅಭಿಪ್ರಾಯ. ಆದರೆ ನ್ಯಾಯಾಂಗ, ಉದ್ಯಮಿಗಳು ಮತ್ತು ಶಿಕ್ಷಣ ಕ್ಷೇತ್ರದ ಕೆಲವರು ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ನಡುವೆ ಜಾತ್ಯತೀತ ನಿಲುವಿಗೆ ಬದ್ಧವಾಗಿರುವ ಸೇನೆ ಈ ಬಗ್ಗೆ ತಮ್ಮ ನಿಲುವು ಪ್ರಕಟಿಸಲು ನಿರಾಕರಿಸಿದೆ. ವಿವಾದಕ್ಕೆ ಸಿಕ್ಕಿಕೊಳ್ಳಲು ನಿರಾಕರಿಸಿದ್ದರೂ ಪ್ರಸ್ತುತ ಸನ್ನಿವೇಶವನ್ನು ಗಂಭೀರವಾಗಿ ಗಮನಿಸುತ್ತಿರುವುದಾಗಿ ತಿಳಿಸಿದೆ. ಸಂಸತ್ತಿನ ನಿರ್ಧಾರಕ್ಕೆ ತೀಕ್ಷ್ಣ ಹಾಗೂ ರಚನಾತ್ಮಕ ವಾದ- ಪ್ರತಿವಾದಗಳು ಕೇಳಿ ಬರುತ್ತಿವೆ. ಈ ಸ್ವಾತಂತ್ರ್ಯ ಎಲ್ಲಾ ಸಾರ್ವಜನಿಕ ಸ್ಥಳಗಳಿಗೂ ಅನ್ವಯವಾಗಲಿದೆ ಎನ್ನುವುದೇ ಭಯಕ್ಕೆ ಕಾರಣ. ನಿಧಾನವಾಗಿ ಇದೇ ನಿಯಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು, ಆಸ್ಪತ್ರೆಗಳು ಮತ್ತು ನ್ಯಾಯಾಲಯಗಳಿಗೂ ವಿಸ್ತರಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಟಿಎಸ್‌ಐಗೆ ಪ್ರತಿಕ್ರಿಯೆ ನೀಡಿದ ಟರ್ಕಿಯ ರಾಜಕೀಯ ಮತ್ತು ಸಾಮಾಜಿಕ ವ್ಯವಹಾರಗಳ ವಿಮರ್ಶಕಿ ಮೆಹಮತ್ ಅಲಿ ಬಿರಂಡ್. ಮತ್ತೊಂದು ಕಡೆ ರಾಜಕೀಯ ವಿಮರ್ಶಕ ಪ್ರೊ. ಇಹ್ಸಾನ್ ಡಗಿ ವಿಶ್ವ ವಿದ್ಯಾನಿಲಯಗಳು ನಿಷೇಧಗಳ ನೆರಳಲ್ಲಿ ನಡೆಯಬಾರದು. ಅಲ್ಲಿ ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕೆ ಮಾತ್ರ ಅವಕಾಶ ನೀಡಬೇಕು ಎನ್ನುತ್ತಾರೆ ಡಗಿ. ಈ ನಡುವೆ ಆಡಳಿತ ವಿರೋಧಿ ವಿಮರ್ಶಕ ವರ್ಗ ಈ ವಿವಾದಕ್ಕೆ ಹೊಸ ಆಯಾಮವನ್ನು ನೀಡುತ್ತಿದೆ. ಯುರೋಪಿಯನ್ ಒಕ್ಕೂಟದ ಸದಸ್ಯತ್ವ ಪಡೆಯಲು ತವಕಿಸು ತ್ತಿರುವ ಟರ್ಕಿ, ನಿರ್ಬಂಧಿತ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ಕಡೆ ಜಾರುವ ಇಂತಹ ವಿವಾದಗಳಿಂದ ತನ್ನ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದೆ ಎಂದು ಒಂದು ವರ್ಗದ ವಿಮರ್ಶಕರ ಅಭಿಪ್ರಾಯ. ಇದಕ್ಕೆ ವ್ಯತಿರಿಕ್ತವಾಗಿ, ಈ ನಡೆಯನ್ನು ಬೆಂಬಲಿಸುತ್ತಿರುವವರು, ಪಾಶ್ಚಾತ್ಯ ದೇಶಗಳಲ್ಲಿ ಇರುವಂತಹ ವೈಯಕ್ತಿಕ ಸ್ವಾತಂತ್ರ್ಯ ನೀಡುವ ಕಡೆಗಿನ ಹೊಣೆಯರಿತ ನಿರ್ಧಾರವಿದು ಎನ್ನುತ್ತಾರೆ.

ಟಿಎಸ್‌ಐ

ಸೌರಭ್ ಕುಮಾರ್ ಶಾಹಿ

ಅಮೆರಿಕ: ಚುನಾವಣೆ

ಹಿಲರಿ-ಒಬಾಮ ತೀವ್ರ ಪೈಪೋಟಿ

ದೇಶವನ್ನು ಒಗ್ಗೂಡಿಸಲು ವಿರೋಧಾಭಾಸದ ಅಭಯ!

ಅಮೆರಿಕದ ಇಬ್ಬರು ಪ್ರಮುಖ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಗಳೂ ತಮ್ಮ ಸಿದ್ಧಾಂತಗಳ ಮೂಲಕ ದೇಶವನ್ನೇ ಇಬ್ಭಾಗ ಮಾಡುತ್ತಿರುವಂತೆ ತೋರುತ್ತಿದೆ. ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಗಳಾದ ಬಾರಕ್ ಒಬಾಮ ಮತ್ತು ಹಿಲರಿ ಕ್ಲಿಂಟನ್ ಇಬ್ಬರೂ ಇತ್ತಂಡವಾದಗಳನ್ನು ಮತ್ತು ನೀತಿಗಳನ್ನು ಜನರ ಮುಂದಿಡುತ್ತಿದ್ದಾರೆ ಮತ್ತು ಜೊತೆಯಲ್ಲೇ ಹರಿದು ಹಂಚಿ ಹೋಗಿದ್ದ ದೇಶವನ್ನು ಒಂದು ಮಾಡುವ ಅಭಯ ಹಸ್ತವನ್ನೂ ನೀಡುತ್ತಿದ್ದಾರೆ! ಅವರ ಅಭಿಯಾನದಿಂದಾಗಿ ದೇಶದಲ್ಲಿ ಎರಡು ವರ್ಗಗಳು ಸೃಷ್ಟಿಯಾಗಿವೆ. ಲಿಂಗ, ಜನಾಂಗ, ಧರ್ಮ ಮತ್ತು ಜೀವನ ಮಟ್ಟ ಹೀಗೆ ಸಾಧ್ಯವಾದ ಎಲ್ಲ ರೀತಿಯ ಭೇದ-ಭಾವಗಳನ್ನೂ ಪ್ರಧಾನವಾಗಿ ಬಿಂಬಿಸುತ್ತಿದ್ದಾರೆ. ಮಂಗಳವಾರ ಮತ್ತು ಅದೇ ವಾರಾಂತ್ಯದಲ್ಲಿ ಪ್ರಕಟವಾದ ಪ್ರಾಥಮಿಕ ಮತ್ತು ಕಾಕಸಸ್ ಚುನಾವಣಾ ಫಲಿತಾಂಶಗಳಲ್ಲಿ ಇದೆಲ್ಲ ಸುಸ್ಪಷ್ಟವಾಗಿದೆ. ಇಲ್ಲಿ ಆಸಕ್ತಿ ಮೂಡಿಸುವ ವಿಚಾರವೊಂದಿದೆ. ದೇಶವನ್ನು ನಾಮಾವಶೇಷ ಮಾಡಿದ ಆರೋಪ ಹೊತ್ತಿರುವ ರಿಪಬ್ಲಿಕನ್ನರು ತಮ್ಮ ಪ್ರತಿಸ್ಪರ್ಧಿಗಳಿಗೆ ಸಿಕ್ಕ ಬೆಂಬಲಕ್ಕೆ ಗೌರವ ತೋರಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ. ಆ ಮೂಲಕ ಮೂಲೆಗುಂಪಾಗಿರುವ ಪಕ್ಷಕ್ಕೆ ತಿಲಮಾತ್ರದ ಗೌರವ ಮತ್ತು ಘನತೆ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡೆಮಾಕ್ರಟ್‌ನಲ್ಲಿ ಸ್ಪಷ್ಟ ವಿಜಯಿಯನ್ನು ಹುಡುಕುವುದು ಕಷ್ಟವಾಗುತ್ತಿದೆ. ಅವರ ಪರವಾಗಿ ಬಂದ ಫಲಿತಾಂಶಗಳಲ್ಲಿ ಇಬ್ಬರೂ ವಿಜಯಿಗಳೇ! ಸೆನೆಟರ್ ಬಾರಕ್ ಒಬಾಮ (13) ಅತೀ ಹೆಚ್ಚು ರಾಜ್ಯಗಳಲ್ಲಿ ಬಹುಮತ ಪಡೆದಿದ್ದಾರೆ ಎನ್ನುವುದೇನೋ ನಿಜ. ಆದರೆ ರಾಜ್ಯಗಳ ಭೂಪ್ರದೇಶದ ವಿಸ್ತಾರವನ್ನು ಗಣನೆಗೆ ತೆಗೆದುಕೊಂಡಲ್ಲಿ ಅವು ಚಿಕ್ಕ ರಾಜ್ಯಗಳು. ದೊಡ್ಡ ರಾಜ್ಯಗಳ ಗೆಲುವು ಹಿಲರಿ ಕ್ಲಿಂಟನ್ (8) ಪಾಲಾಗಿವೆ. ಜಯದ ಅಂತರ ದೊಡ್ಡದಾಗಿರಲಿಲ್ಲ ಎನ್ನುವುದನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ. ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವಲ್ಲಿಂದ ಒಬಾಮ ಜೊತೆ ಆರಂಭವಾಗಿದ್ದ ಕ್ಲಿಂಟನ್ ಪೈಪೋಟಿ ಇನ್ನೂ ಮುಗಿಯುವ ಸೂಚನೆ ಕಾಣುತ್ತಿಲ್ಲ. ಲ್ಯಾಟಿನೋ ಮತದಾರರು ಕ್ಲಿಂಟನ್‌ಗೆ ಬೆಂಬಲ ನೀಡಿದ್ದಾರೆ. ಆಫ್ರಿಕಾ ಅಮೆರಿಕನ್ನರು ಮತ್ತು ಬಿಳಿಯರ ಒಲವು ಪಡೆದಿರುವ ಒಬಾಮ ದಕ್ಷಿಣದಲ್ಲಿ ದಿಗ್ವಿಜಯ ಸಾಧಿಸಿದ್ದಾರೆ. 2,025 ನಾಮಾಂಕಿತರ ನಡುವೆ ಕ್ಲಿಂಟನ್ ಅತೀ ಕಷ್ಟದಲ್ಲಿ ತೃತೀಯ ಸ್ಥಾನಕ್ಕೆ ಆಗಮಿಸಿದ್ದರು. ಒಬಾಮಾ ಬಹಳಷ್ಟು ಅಂತರ ಕಾಯ್ದು ಕೊಂಡಿದ್ದರು. ಆದರೆ ಈ ಮಂಗಳವಾರದ ಫಲಿತಾಂಶ ಎಲ್ಲವನ್ನೂ ಸ್ಪಷ್ಟಗೊಳಿಸಿದೆ. ಇಬ್ಬರು ಡೆಮಾಕ್ರಟಿಕ್ ಅಭ್ಯರ್ಥಿಗಳು ಪರಸ್ಪರ ಪೈಪೋಟಿಗಿಳಿದಿದ್ದು, ಮುಂದಿನ ದಿನಗಳಲ್ಲಿ ತಮ್ಮ ಗೆಲುವಿಗಾಗಿ ಹಣವನ್ನು ನೀರಿನಂತೆ ಪೋಲು ಮಾಡುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಟಿಎಸ್‌ಐಗೆ ಪ್ರತಿಕ್ರಿಯೆ ನೀಡಿದ 'ಕ್ಲಾರಮಾಂಟ್ ಕಾಲೇಜ್ ಆಫ್ ಗವರ್ನೆನ್ಸ್'ನ ರಾಜಕೀಯ ಪಕ್ಷಗಳ ವ್ಯವಹಾರಗಳ ತಜ್ಞ ಜಾಕ್ ಪಿಟ್ನೆ. ಈ ನಡುವೆ ಸೆನೆಟರ್ ಜಾನ್ ಮೆಖೈನ್ ಅವರು ಪ್ರಬಲ ವಿರೋಧವನ್ನು ಎದುರಿಸಿ ಕೊನೆಗೂ ರಿಪಬ್ಲಿಕನ್ ಪರ ಜಯ ದಾಖಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಯೆಟ್ನಾಂ ಯುದ್ಧದ ಅನುಭವಿ ನೇತಾರ ಫೆಬ್ರುವರಿಯ ರಿಪಬ್ಲಿಕನ್ ಪ್ರಾಥಮಿಕ ಮತ್ತು ಕಾಕಸಸ್ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ದುಪ್ಪಟ್ಟು ಮತಗಳನ್ನು ಪಡೆದಿದ್ದಾರೆ. ಮತ್ತೊಬ್ಬ ರಿಪಬ್ಲಿಕನ್ ಸ್ಪರ್ಧಿ ಮಾರ್ಮನ್ ಪಂಥದ ಅನುಯಾಯಿ ಉದ್ಯಮಿ ಮಿಟ್ ರೋಮ್ನಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಉತ್ಸುಕತೆಯಲ್ಲಿ ತಮ್ಮ ಬೊಕ್ಕಸದಿಂದ ಮಿಲಿಯನ್‌ಗಟ್ಟಲೆ ಹಣ ಸುರಿದಿದ್ದಾರೆ. ಆದರೆ ಸೋಲಿನ ರುಚಿ ಕಂಡು ಸೊರಗಿ ಹೋಗಿರುವ ಅವರು ಸ್ಪರ್ಧೆಯಿಂದ ಹೊರ ಬರಲು ತೀರ್ಮಾನಿಸಿದ್ದಾರೆ. ಸದ್ಯದ ಚುನಾವಣಾ ಫಲಿತಾಂಶ ಗಮನಿಸಿ ಆದಷ್ಟು ಶೀಘ್ರ ಒಬ್ಬ ಪ್ರಬಲ ಸ್ಪರ್ಧಿಯನ್ನು ಕಣದಲ್ಲಿ ಉಳಿಸುವ ಆತುರ ಆ ಪಕ್ಷದಲ್ಲಿ ಕಂಡು ಬರುತ್ತಿದೆ. ಇತ್ತ ಡೆಮಾಕ್ರಟ್‌ಗಳು ಸಂಪೂರ್ಣ ಭಿನ್ನ ಅಭಿಪ್ರಾಯದಲ್ಲಿದ್ದಾರೆ. ಇಬ್ಬರು ಪ್ರಬಲ ಸ್ಪರ್ಧಿಗಳು ಸಮಬಲದಲ್ಲಿದ್ದಾರೆ. ಇವರಿಬ್ಬರಲ್ಲಿ ಯಾರಾದರೂ ಒಬ್ಬ ಸ್ಪರ್ಧಿ ಹಿಂದೆ ಸರಿಯುವುದು ಹೇಗೆ? ಹಣದ ಕೊರತೆ ಅನುಭವಿಸಬೇಕಷ್ಟೆ! ಕುತೂಹಲವೆಂದರೆ, ಕಳೆದ ತಿಂಗಳು ಬಾರಕ್ ಒಬಾಮ ಅವರ ಚುನಾವಣಾ ನಿಧಿಗೆ 32 ದಶಲಕ್ಷ ಡಾಲರ್‌ಗಳು ಸಂಗ್ರಹವಾಗಿದ್ದವು. ಹಿಲರಿ ಕ್ಲಿಂಟನ್ 13.5 ದಶಲಕ್ಷ ಡಾಲರ್‌ಗಳನ್ನಷ್ಟೇ ಸಂಗ್ರಹಿಸಲು ಸಾಧ್ಯವಾಯಿತು. ಅಂದ ಮೇಲೆ ಪೈಪೋಟಿ ಹೇಗೆ ಕೊನೆಗಾಣಬಹುದು ಎನ್ನುವುದು ಸ್ಪಷ್ಟ ಎನ್ನಬಹುದು.

ಟಿಎಸ್‌ಐ

ಸೌರಭ್ ಕುಮಾರ್ ಶಾಹಿ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .