ತಸ್ಲೀಮಾ ನಸ್ರೀನ್ ನಡೆಸಿಕೊಳ್ಳುತ್ತಿರುವ ರೀತಿ
ಅತಿದೊಡ್ಡ ಪ್ರಜಾಪ್ರಭುತ್ವ ಭಾರತಕ್ಕೇ ಅವಮಾನಕಾರಿ ಯಾರಾದರೂ ತಕ್ಷಣ ನ್ಯಾಯ ಒದಗಿಸುತ್ತೀರಾ?
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್
ನಾನು ಇದನ್ನು ನನ್ನ ಸಂಪಾದಕೀಯವಾಗಿ ಬರೆಯುತ್ತಿಲ್ಲ. ಬದಲಾಗಿ ಪ್ರತಿಭಟನೆಯ ಸಂಕೇತವಾಗಿ ಈ ಮಾತುಗಳನ್ನು ಆಡುತ್ತಿದ್ದೇನೆ. ಯಾರ ಕಿವಿಗಾದರೂ ನನ್ನ ಕೂಗು ಬೀಳುವುದೇ? ಯಾರಾದರೂ ಕೇಳುಗರು ಈ ದೇಶದಲ್ಲಿ ಇದ್ದಾರೆಯೇ? ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಕೊಚ್ಚಿಕೊಳ್ಳುವ ನಾಡಿನಲ್ಲಿಯೇ ಮಾನವ ಜೀವಿಯೊಂದನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದನ್ನು ಕಂಡರೆ ನನ್ನ ರಕ್ತ ಕುದಿಯುತ್ತಿದೆ. ಅದೂ ಒಬ್ಬ ಸೃಜನಾತ್ಮಕ ಹೆಣ್ಣು ಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡು ಆಕೆಯನ್ನು ಗೃಹಬಂಧನದಲ್ಲಿ ಇಡಲಾಗಿದೆ. ಮುಖ್ಯ ವಾಹಿನಿಯಲ್ಲಿರುವ ಮಾಧ್ಯಮಗಳನ್ನು ಒಳಗೊಂಡು ಯಾರೊಬ್ಬರೂ ಆ ಬಗ್ಗೆ ದನಿಯೆತ್ತುತ್ತಿಲ್ಲ. ಇದು ಕೂಡ ಒಂದು ಸಂಚಾಗಿದೆ! 'ಲಜ್ಜಾ' ಮತ್ತು ಈಗ ವಿವಾದ ಹುಟ್ಟಿಸಿರುವ 'ದ್ವಿಖಾಂದಿತೊ' ಎಂಬ ಕೃತಿ ಬರೆದು ದ್ವೇಷಾಗ್ನಿಯಲ್ಲಿ ಬೇಯುತ್ತಿರುವ ಲೇಖಕಿ ತಸ್ಲೀಮಾ ನಸ್ರೀನ್ ವಿಷಯಕ್ಕೆ ಸಂಬಂಧಿಸಿದಂತೆ ನಾನು ಈ ಮಾತುಗಳನ್ನು ಆಡುತ್ತಿದ್ದೇನೆ. ಪಶ್ಚಿಮ ಬಂಗಾಳದ ವಿವಿಧ ಮುಸ್ಲಿಂ ಸಂಘಟನೆಗಳ ಒತ್ತಾಯಕ್ಕೆ ಮಣಿದು ತಸ್ಲೀಮಾ 'ದ್ವಿಖಾಂದಿತೊ' ಕೃತಿಯಲ್ಲಿದ್ದ ಕೆಲವು ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕಲು ಒಪ್ಪಿಕೊಂಡಿದ್ದಾರೆ. ಆದರೂ ಅವರನ್ನು ನವದೆಹಲಿಯ ಮನೆಯೊಂದರಲ್ಲಿ ಅಕ್ಷರಶಃ ಗೃಹಬಂಧನಕ್ಕೆ ಒಳಪಡಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ತಸ್ಲೀಮಾ ಪಾಲಿಗೆ ಕೋಲ್ಕತ್ತ ಮನೆಯಾಗಿತ್ತು. 'ದ್ವಿಖಾಂದಿತೊ' ವಿವಾದದ ನಂತರ ಪಶ್ಚಿಮ ಬಂಗಾಳ ಸರ್ಕಾರ ಅವರನ್ನು ಅವರ ಮನೆ ಕೋಲ್ಕತ್ತಾದಿಂದ ಹೊರಗಟ್ಟಿತು. (ಸಲ್ಮಾನ್ ರಶ್ದಿ ಅವರಂತೆಯೇ ತಸ್ಲೀಮಾ ಕೂಡ ಮಹಮದ್ ಪೈಗಂಬರ್ ಅವರ ಪತ್ನಿಯ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ನಂತರ ಅತಿಯಾದ ಒತ್ತಡದ ಪರಿಣಾಮವಾಗಿ ಪುಸ್ತಕದ ಪ್ರಕಾಶಕರ ಬಳಿ ಆ ವಿವಾದಿತ ಭಾಗ ತೆಗೆದು ಹಾಕಿ ಎಂದು ತಸ್ಲೀಮಾ ಹೇಳಿದ್ದರು.) ಹಾಗೆ ನೋಡಿದಲ್ಲಿ ಹಿಂದು ಧರ್ಮ ಕಾಲಕಾಲಕ್ಕೆ ಪರಿವರ್ತನೆಯಾಗಿದೆ. ಆದರೆ ಮುಸ್ಲಿಮರು ಮಾತ್ರ ಅವರ ಧರ್ಮದ ವಿಕಸನಕ್ಕೆ ಮತ್ತು ಪರಿವರ್ತನೆಗಳಿಗೆ ಮುಕ್ತ ಮನಸ್ಸನ್ನು ತೋರುತ್ತಲೇ ಇಲ್ಲ. ಯಾರಾದರೂ ಧರ್ಮವನ್ನು ಪ್ರಶ್ನಿಸಲು ಮುಂದಾದರೆ ಮೂಲಭೂತವಾದಿಗಳು ಅವರ ದನಿ ಅಡಗಿಸಿ ಬಿಡುತ್ತಾರೆ.
ಇಲ್ಲಿ ನಾನು ಹೇಳಲು ಹೊರಟಿರುವುದು ಮೂಲಭೂತವಾದಿಗಳ ಕುರಿತಾದ ವಿಷಯವನ್ನಲ್ಲ. ನಮ್ಮ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಮುಸ್ಲಿಮರನ್ನು ಹೇಗೆ ಓಲೈಸುವ ಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ ಎಂದು. ಒಂದೆಡೆ ರಾಜ್ ಠಾಕ್ರೆಯಂತಹ ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಇವರು ರೈಲು ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಅಮಾಯಕ ಮನುಷ್ಯರನ್ನು ಕೆಳಗೆಳೆದು, ಅವರು ಉತ್ತರ ಭಾರತದವರು ಎಂದು ಗೊತ್ತಾದ ಕೂಡಲೇ ಹಲ್ಲೆ ಮಾಡುವಂತಹ ಗೂಂಡಾ ಪಡೆ ಕಟ್ಟುತ್ತಾರೆ. ಇನ್ನು ಕೋಲ್ಕತ್ತದಲ್ಲಿ ಮುಸ್ಲಿಂ ಮೂಲಭೂತವಾದಿಗಳು. ಇವರಿಬ್ಬರೂ ಸರ್ಕಾರಗಳೇ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿ ಬಿಡುತ್ತಾರೆ. ಕೋಲ್ಕತ್ತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನಂದಿಗ್ರಾಮದಲ್ಲಿ ನಡೆದ ಗಲಭೆಯಿಂದಾಗಿ ಸಿಪಿಐ(ಎಂ) ತನ್ನ ಮುಸ್ಲಿಂ ಮತಬ್ಯಾಂಕ್‌ಗೆ ಹಾನಿ ಮಾಡಿಕೊಂಡಿತ್ತು. ಆ ಹೊಡೆತ ಕಡಿಮೆ ಮಾಡಿಕೊಳ್ಳಲು ಹೊರಟ ಬುದ್ಧದೇವ ಭಟ್ಟಾಚಾರ್ಯ ಅವರು ತಸ್ಲೀಮಾ ನಸ್ರೀನ್‌ರನ್ನು ಹೊರ ಹಾಕಿದರು. ಆ ಮೂಲಕ ಮುಸ್ಲಿಂ ಮತಬ್ಯಾಂಕನ್ನು ಓಲೈಸುವ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ತಸ್ಲೀಮಾ ನಸ್ರೀನ್ ಅವರು ಗೃಹಬಂಧನದಲ್ಲಿರುವ 'ಸುರಕ್ಷಿತ ಮನೆ'ಯಲ್ಲಿ ಕೂತೇ ಕೆಲವು ಕವಿತೆಗಳನ್ನು ರಚಿಸಿದ್ದಾರೆ. ಅವು ಅವರ ಹೃದಯಾಳದಲ್ಲಿ ನೋವಿನ ಸಾಗರದಲ್ಲಿ ಎದ್ದ ಅಲೆಗಳು. 'ನನ್ನ ಮಾತೃಭೂಮಿ ಎಂದು ಕರೆದುಕೊಳ್ಳಬಹುದಾದ ಒಂದು ಭೂಭಾಗ ಕೂಡ ನನಗಿಲ್ಲ' ಎಂಬ ಕವಿತೆಯಲ್ಲಿ ಅವರು ಹೀಗೆ ಬರೆಯುತ್ತಾರೆ...
ನಾನೊಬ್ಬ ಎಂತಹ ಅಪರಾಧಿ ಮತ್ತು ಮನುಷ್ಯತ್ವದ ವಿರೋಧಿ
ನಾನೊಬ್ಬ ದೇಶಭ್ರಷ್ಟ ಮೋಸಗಾತಿ
ನನ್ನದೇ ಎಂದು ಹೇಳಿಕೊಳ್ಳುವ ದೇಶ ಕೂಡ ನನಗಿಲ್ಲ...
...ನಾನು ಸತ್ಯ ಹೇಳಿದ್ದಕ್ಕಾಗಿ ಇಂದು ರಾಜದ್ರೋಹಿ
ನೀವು ಸುಳ್ಳು ಹೇಳುವವರ ಭುಜಕ್ಕೆ ಭುಜ ಕೊಟ್ಟು ನಡೆಯಿರಿ
ಆದರೆ ನಾನು ಮಾತ್ರ ರಾಜದ್ರೋಹಿಯಾದ ಮನುಷ್ಯಳು
ಪಶ್ಚಿಮ ಬಂಗಾಳವನ್ನು ತೃಪ್ತಿಪಡಿಸುವ ಸಲುವಾಗಿ ಅವರನ್ನು ನವದೆಹಲಿಯಲ್ಲಿನ 'ಸುರಕ್ಷಿತ ಮನೆ'ಯಲ್ಲಿ ಇಡಲಾಗಿದೆ. ಅದು ನಿಗೂಢವಾದ 'ಸುರಕ್ಷಿತ ಮನೆ'ಯಲ್ಲಿ. ಆ ಮನೆಗೆ ಯಾರೂ ಹೋಗುವ ಹಾಗಿಲ್ಲ. ತಸ್ಲೀಮಾ ಕೂಡ ಭದ್ರತಾ ವ್ಯವಸ್ಥೆಯ ಕಣ್ಣು ತಪ್ಪಿಸಿ ಹೊರ ಹೋಗುವ ಹಾಗಿಲ್ಲ. ಇದು ಎಲ್ಲ ದೃಷ್ಟಿಗಳಲ್ಲಿ ಮಾನವ ಹಕ್ಕುಗಳ ಮಾರಣಹೋಮವೇ ಸರಿ. ಆಕೆಗೆ ಅವರದೇ ಆದ ರೀತಿಯಲ್ಲಿ ಬದುಕುವ ಹಕ್ಕಿಲ್ಲ. ವಾಕ್ ಸ್ವಾತಂತ್ರ್ಯವೂ ಇಲ್ಲ. ಸೃಜನಾತ್ಮಕ ಸ್ಪಂದನೆಗೆ ಕೂಡ ಅಲ್ಲಿ ಅವಕಾಶ ಇಲ್ಲ. ತಸ್ಲೀಮಾ ಯಾರನ್ನಾದರೂ ಭೇಟಿ ಮಾಡಬೇಕೆಂದರೆ ಅವರನ್ನು ಕಪ್ಪು ಕಿಟಕಿಗಳಿರುವ ಕತ್ತಲೆಯ ಪ್ರತಿರೂಪವಾದ ಕಾರಿನಲ್ಲಿ ತುಂಬಿ ಕರೆದುಕೊಂಡು ಹೋಗಲಾಗುತ್ತದೆ. ಅದೂ ನಿಗದಿತ ಸಮಯದವರೆಗೆ ಭೇಟಿ ಮಾಡಲು ಅವಕಾಶ ನೀಡಲಾಗುತ್ತದೆ. ನಂತರ ತಸ್ಲೀಮಾ ಅವರನ್ನು ಬಂಧಿತಳಂತೆ ಎಳೆದೊಯ್ಯಲಾಗುತ್ತದೆ. ಸ್ಟೇಟ್ಸ್‌ಮನ್‌ಗೆ ನೀಡಿದ ಸಂದರ್ಶನದಲ್ಲಿ ಅವರೆಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಸೃಜನಾತ್ಮಕ ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಿ ಕೂರಿಸಲಾಗಿದೆ ಎಂದು ಆ ಲೇಖಕಿ ಹೇಳಿದ್ದಾರೆ. ಇಲ್ಲಿ ನನಗೆ ಆಹಾರ ಮತ್ತು ಇನ್ನಿತರ ಅಗತ್ಯವಾದ ವಸ್ತುಗಳನ್ನು ನೀಡಲಾಗುತ್ತಿದೆ. ಆದರೆ, ಮನೆಯಿಂದ ಒಂದು ಹೆಜ್ಜೆ ಹೊರಗಿಡುವ ಸ್ವಾತಂತ್ರ್ಯವೂ ನನಗಿಲ್ಲ. ಬದುಕೇ ನಿಶ್ಚಲವಾದಂತೆ ನಾನು ಒಂದು ಕೋಣೆಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ಒಬ್ಬ ಸೃಜನಾತ್ಮಕ ಲೇಖಕಿಯ ಪಾಲಿಗೆ ಇದು ನರಕವೇ ಸರಿ. ಅಂತಹ ಒಂದು 'ಸುರಕ್ಷಿತ ಮನೆ'ಯಲ್ಲೇ ಕೂತು ಅವರು 'ಬಲವಂತವಾಗಿ ಕೂಡಿಟ್ಟ ಮನೆ' ಎಂಬ ಕವಿತೆ ರಚಿಸಿದ್ದಾರೆ:
ನಾನು ಕಿಟಿಕಿಗಳನ್ನು ಮುಚ್ಚಿದ ಒಂದು ಮನೆಯಲ್ಲಿ ವಾಸವಾಗಿದ್ದೇನೆ
ಇಚ್ಛಿಸಿದರೂ ಆ ಕಿಟಕಿಗಳನ್ನು ನಾನು ತೆಗೆಯಲಾಗುವುದಿಲ್ಲ॒
...ನಾನು ಇಷ್ಟವಿಲ್ಲದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದೇನೆ
ಏಕೆಂದರೆ ನನ್ನನ್ನು ಬಲವಂತವಾಗಿ ಇರಿಸಲಾಗಿದೆ
ನೋವು, ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುವಂತೆ ಒತ್ತಡ ಹೇರಲಾಗಿದೆ
ಈ ಪ್ರಜಾಪ್ರಭುತ್ವದಿಂದ (ಭಾರತ)
ಈ ಕೋಣೆಯಲ್ಲಿ ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವದ ಮೇಲಾಟ
ಈ ಕೋಣೆಯಲ್ಲಿ ಭರವಸೆಯ ಬೆಳಕಿಲ್ಲ, ಭಯ ಮಾತ್ರ
ಜಾತ್ಯತೀತ ಹೆಸರಲ್ಲಿ ಪ್ರತಿ ಕ್ಷಣವೂ ಆ ಕೋಣೆಯಲ್ಲಿ ನನ್ನ ಕೊಲೆಯಾಗುತ್ತಿದೆ
ನನ್ನ ಪ್ರೀತಿಯ ಭಾರತವೇ ನನ್ನನ್ನು ಬಂಧಿಸಿಟ್ಟಿದೆ
ಇಲ್ಲಿ ಅತ್ಯಂತ ಕಾರ್ಯನಿರತ ಪ್ರಜೆಗಳಿದ್ದಾರೆ, ನನಗೊಂದು ಅನುಮಾನ
ಇವರಿಗೆ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮಟ್ಟಿಗಾದರೂ
ಒಂದೆರಡು ನಿಮಿಷ ಕಾಲಾವಕಾಶ ಇದೆಯೇ...
...ಹೆಚ್ಚೆಂದರೆ ಒಂದು ದಿನ ಪ್ರಜಾಪ್ರಭುತ್ವದ ಧ್ವಜದೊಂದಿಗೆ
ನನ್ನ ದೇಹವನ್ನು ಸುತ್ತಿ, ನನ್ನ ಪ್ರಿಯ ಭಾರತದಲ್ಲಿ,
ಯಾರಾದರೂ ಒಬ್ಬರು ನನ್ನನ್ನು ಗೋರಿಗೆ ಹಾಕುತ್ತಾರೆ, ಹೆಚ್ಚಿನ ಪಕ್ಷ
ಒಬ್ಬ ಸರ್ಕಾರಿ ಅಧಿಕಾರಿ ಆ ಕೆಲಸ ಮಾಡಬಹುದು ಎಂಬ ಶಂಕೆ ನನ್ನದು...
ಪ್ರಶ್ನೆಯೊಂದನ್ನು ಕೇಳುವ ಮೂಲಕ ಮಾತ್ರ ನಾನು ನನ್ನ ಈ ಪ್ರತಿಭಟನೆಗೆ ಕೊನೆ ಹಾಡಬಹುದು. ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿರುವ ಈ ದೇಶದಲ್ಲಿ ಯಾರಿಗಾದರೂ ಆ ಒಂಟಿ ಲೇಖಕಿಯ ಎದೆಯಾಳದ ನೋವು ಎಷ್ಟು ತೀವ್ರವಾದದು ಎಂದು ಅರ್ಥವಾಗುತ್ತಿದೆಯೇ? ಅಂತಹ ಒಬ್ಬ ಸೃಜನಶೀಲ ವ್ಯಕ್ತಿಗೆ ಈ ಪ್ರಜಾಪ್ರಭುತ್ವದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಇಲ್ಲಾ ಎಂದಾದಲ್ಲಿ ಯಾರಿಗೆ ಅದು ದೊರೆಯುತ್ತದೆ?