|
ಕೊರೆವ ಚಳಿ, ಆತಂಕದ ಮಡಿಲು, ಜೊತೆಗೆ ನಿದ್ದೆಗಣ್ಣು. ಇಂತಹ ಸ್ಥಿತಿಯಲ್ಲಿಯೇ ಇವರು ರಾತ್ರಿಯಿಡೀ ಕಾವಲು ಕಾಯಬೇಕು. ಯಾವುದೋ ಚಿನ್ನದ ಭಂಡಾರವನ್ನು ಕಾಪಾಡಲು ಅಲ್ಲ. ಬದಲಾಗಿ ದೇಶದ ಒಂದು ಅಪರೂಪದ ಪ್ರಾಣಿ ಪ್ರಭೇದವನ್ನು ರಕ್ಷಿಸುವ ಸಲುವಾಗಿ. ಇದು ಕಾಜಿರಂಗ ರಾಷ್ಟ್ರೀಯ ಉದ್ಯಾನದ (ಕೆಎನ್‌ಪಿ) ಕಾವಲು ಪಡೆ ಸಿಬ್ಬಂದಿ ಕಥೆ. ಈಗ ಅವರು ಮೊದಲಿನಂತೆ ಸುಮ್ಮನೆ ಕಾಲ ಕಳೆಯಲು ಸಾಧ್ಯವಿಲ್ಲ. ವನ್ಯಜೀವಿ ರಕ್ಷಣೆ ಕುರಿತಂತೆ ಮಾದರಿ ರಾಷ್ಟ್ರೀಯ ಉದ್ಯಾನ ಎಂದು ಹೆಸರುವಾಸಿಯಾದ ಕಾಜಿರಂಗದಲ್ಲೇ ಕಳೆದ ವರ್ಷ 21 ಘೇಂಡಾಮೃಗಗಳನ್ನು ಬೇಟೆಗಾರರು ಚಂಡಾಡಿದ್ದರು. ಪರಿಣಾಮವಾಗಿ 'ಇಂಡಿಯನ್ ರೈನೋ ವಿಷನ್ 2020' ಎಂಬ ಘೇಂಡಾಮೃಗ ಸಂರಕ್ಷಣಾ ಯೋಜನೆ ಜಾರಿಯಾಗಿದೆ. ಪ್ರಸ್ತುತ ಇರುವ 2000 ಘೇಂಡಾಮೃಗಗಳ ಸಂಖ್ಯೆಯನ್ನು ಮುಂಬರುವ 12 ವರ್ಷಗಳ ಒಳಗಾಗಿ 3000ಕ್ಕೆ ಏರಿಸುವ ಮಹತ್ತರ ಗುರಿಯನ್ನು ಈ ಯೋಜನೆ ಹೊಂದಿದೆ.
ಈ ನಡುವೆ ಕಾಜಿರಂಗ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಬುರಗೊಹೆನ್ ಆತಂಕದಲ್ಲಿದ್ದಾರೆ. ಎಂತಹ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಕೈಗೊಂಡರೂ ಅಕ್ರಮ ವನ್ಯಜೀವಿ ಬೇಟೆ ದಿನೇ ದಿನೇ ಏರುತ್ತಿರುವುದರಿಂದ ಸಹಜವಾಗೇ ಅವರು ಕುಪಿತರಾಗಿದ್ದಾರೆ. ಇಂಡಿಯನ್ ರೈನೋ ವಿಷನ್ ಕುರಿತು ಅಷ್ಟೊಂದು ಮಾತನಾಡುವವರು ಕಾಜಿರಂಗ ಉದ್ಯಾನವನಕ್ಕೆ ಹೆಚ್ಚುವರಿ ಗಾರ್ಡ್‌ಗಳನ್ನು ನೇಮಿಸುವ ಕುರಿತಾಗಿ ಏಕೆ ಮಾತನಾಡುತ್ತಿಲ್ಲ? ಕಾವಲು ಸಿಬ್ಬಂದಿ ಗಾಯಗೊಂಡ ಸಂದರ್ಭದಲ್ಲಿ ಆತನಿಗೆ ಧನಸಹಾಯ ಒದಗಿಸಬೇಕು. ಆಗ ಇವರೆಲ್ಲಿ ಹೋಗಿರುತ್ತಾರೆ? ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಬುರಗೊಹೆನ್.
ಆದರೂ ಘೇಂಡಾಮೃಗ ಹಾಗೂ ಹುಲಿಗಳನ್ನು ರಕ್ಷಿಸಲು ವಿಫಲಾಗಿರುವುದಕ್ಕೆ ಖಂಡಿತಾ ಕ್ಷಮೆಯಿಲ್ಲ. ಕೆಲವೊಂದು ಬಾರಿ ನಮ್ಮಲ್ಲಿ ಕೇವಲ ಎರಡು ಅಥವಾ ಮೂರು ಕಾವಲು ಸಿಬ್ಬಂದಿ ಇರುತ್ತಾರೆ. ಸುಮಾರು 8 ಚ. ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು ಕಾವಲು ಕಾಯುವ ಜವಾಬ್ದಾರಿ ನಮ್ಮ ಮೇಲಿರುತ್ತದೆ ಎನ್ನುತ್ತಾರೆ ಪಬನ್ ಬರುವಾ. ವನ್ಯಮೃಗ ಹಾಗೂ ಅಕ್ರಮ ಬೇಟೆಗಾರರ ವಿರುದ್ಧ ಹೋರಾಡಲು ತನ್ನ ಏಕೈಕ ಅಸ್ತ್ರ ಪಾಯಿಂಟ್ 315 ರೈಫಲ್ ಅನ್ನು ಹೊತ್ತ ಸಿಬ್ಬಂದಿ, ಬುಲೆಟ್ ಕೇಸಿಂಗ್ ಅನ್ನು ಪ್ರತಿ ಬಾರಿ ಹೊರತೆಗೆಯುವಾಗಲೂ ಹರಸಾಹಸ ಪಡಬೇಕಾಗುತ್ತದೆ. ಕಾವಲು ಸಿಬ್ಬಂದಿ ಕೈಯಲ್ಲಿ ಎಂಥಾ ಕಳಪೆ ರೈಫಲ್ ಇದೆ ಎಂಬುದನ್ನು ಇದರಿಂದಲೇ ಅರ್ಥೈಸಿಕೊಳ್ಳಬಹುದು. ನಿಜ ಹೇಳಬೇಕೆಂದರೆ ನಮಗೆ ಕನಿಷ್ಠ 10 ಕಾವಲು ಸಿಬ್ಬಂದಿ ಅಗತ್ಯವಿದೆ. ಅಭಯಾರಣ್ಯದ ನಾಲ್ಕು ದಿಕ್ಕುಗಳ ರಕ್ಷಣೆಗೆ ಎರಡೆರಡು ಸಿಬ್ಬಂದಿಯನ್ನು ನೇಮಿಸಿದರೆ, ಇನ್ನುಳಿದ ಇಬ್ಬರನ್ನು ರಕ್ಷಣಾ ಪಡೆಯ ಆವರಣದಲ್ಲಿ ನೇಮಿಸಬಹುದು ಎಂದು ವೃತ್ತಿಯಲ್ಲಿ 21 ವರ್ಷ ಅನುಭವ ಹೊಂದಿರುವ ಬರುವಾ ಅಭಿಪ್ರಾಯಪಡುತ್ತಾರೆ. ಅತ್ಯಾಧುನಿಕ ಕಾರ್ಬಿನ್ (ಸಣ್ಣ ಬಂದೂಕು) ಹಾಗೂ ಡಾರ್ಟ್ ಗನ್‌ಗಳನ್ನೊಳಗೊಂಡ ಶಸ್ತ್ರಸಜ್ಜಿತ ಬೇಟೆಗಾರರಿಗೆ ಹೋಲಿಸಿದರೆ ಕಾವಲು ಸಿಬ್ಬಂದಿ ಕಳಪೆ ರೈಫಲ್‌ಗಳು ಯಾವ ಕೆಲಸಕ್ಕೂ ಬರುವುದಿಲ್ಲ. ಕಾಜಿರಂಗ ಉದ್ಯಾನವನದ ಕಾವಲು ಸಿಬ್ಬಂದಿಯಂತೆ ಇತರ ಅಭಯಾರಣ್ಯಗಳ ಸಿಬ್ಬಂದಿ ಪಾಯಿಂಟ್ 315 ರೈಫಲ್‌ಗಳನ್ನು ಬಳಸುತ್ತಿದ್ದು ಅವರ ದುಸ್ಥಿತಿಯೂ ಹೇಳತೀರದಂತಾಗಿದೆ.
ಪೊಲೀಸ್ ಪಡೆ ಸೇರಿದಂತೆ ಇತರ ರಕ್ಷಣಾ ಪಡೆಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಲ್ಲಿ ತಿದ್ದುಪಡಿ ತರಲಾಯಿತು. ಆದರೆ ಇದುವರೆಗೆ ನಮ್ಮಲ್ಲಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ ಎನ್ನುತ್ತಾರೆ 'ಕೆಎನ್‌ಪಿ'ಯ ಬಗೋರಿ ವಲಯ ಮೇಲ್ವಿಚಾರಕ ಪಲ್ಲವ್ ಕುಮಾರ್ ದೇಕಾ. ಶೂಟರ್‌ಗಳಂತೆ ಹೆಚ್ಚಿನ ಕೌಶಲ್ಯ ಹೊಂದಿರುವ ಬೇಟೆಗಾರರು ನಮ್ಮಿಂದ ಎಷ್ಟೋ ಪ್ರಬಲರಾಗಿರುತ್ತಾರೆ ಎನ್ನುವ ಬರುವಾ ಅವರಿಗೆ ಸಾಕಷ್ಟು ಅಭ್ಯಾಸವೂ ಇರಬಹುದು ಎಂದು ಅಭಿಪ್ರಾಯ ಪಡುತ್ತಾರೆ.
ಘೇಂಡಾಮೃಗಗಳ ರಕ್ಷಣೆಯ ದೃಷ್ಟಿಯಿಂದ ಕಾಜಿರಂಗ ಉದ್ಯಾನವನ ಒಂದು ಅಭೇದ್ಯ ಕೋಟೆಯಾಗಬೇಕಿತ್ತು. ಆದರೆ ವನ್ಯಜೀವಿಗಳ ಸುರಕ್ಷತೆ ಕುರಿತಂತೆ ನಿರ್ಲಕ್ಷ್ಯ ವಹಿಸಲಾಗಿದೆ. ಹಾಗಿದ್ದರೂ ಇಲ್ಲಿರುವ ಭದ್ರತಾ ಸಿಬ್ಬಂದಿ ಪ್ರಯತ್ನದಿಂದಾಗಿ ಅವು ವಿನಾಶದ ಅಂಚಿನಿಂದ ಹೊರಬಂದಿವೆ. 1950ರ ಸಮಯದಲ್ಲಿ ಇಲ್ಲಿ ಕೇವಲ 15 ಘೇಂಡಾಮೃಗಗಳಿದ್ದವು. ಆದರೆ ಈಗ 1885 ಘೇಂಡಾಮೃಗಗಳಿವೆ. ಈ ಅಂಕಿ-ಸಂಖ್ಯೆಯೇ ಯಶಸ್ಸಿನ ದ್ಯೋತಕವಾಗಿವೆ.
ನಮಗೆ 2,400 ಕಾವಲು ಸಿಬ್ಬಂದಿ ಅಗತ್ಯವಿದೆ. ಆದರೆ ಸದ್ಯ ನಮ್ಮಲ್ಲಿರುವುದು 437 ಜನರು ಮಾತ್ರ ಎನ್ನುತ್ತಾರೆ ಬುರಗೊಹೆನ್. ಕಡಿಮೆ ಸಂಖ್ಯೆಯ ಕಾವಲು ಸಿಬ್ಬಂದಿ, ನಿರ್ವಹಣೆಗೆ ಮಾನವ ಶಕ್ತಿಯ ಕೊರತೆ, ಉದ್ಯಾನವನದ ಅಭಿವೃದ್ಧಿಗಾಗಿ ಹಣಕಾಸಿನ ಕೊರತೆ, ಅಧಿಕಾರಶಾಹಿ ಮತ್ತು ವಿಳಂಬ ನೀತಿಗಳ ಕುರಿತಂತೆ ನಿರ್ದೇಶಕ ಬುರಗೊಹೆನ್ ಅವರು ಕಿಡಿಕಾರುತ್ತಾರೆ.
ಉದ್ಯಾನವನದ ಹೆಸರಲ್ಲಿ ನಡೆಯುತ್ತಿರುವ ರಾಜಕೀಯಕ್ಕೆ ಮುಕ್ತಿ ಹಾಡದಿದ್ದರೆ ಅದರ ವಿನಾಶ ಖಂಡಿತ ಎಂಬುದು ಬುರಗೊಹೆನ್ ಅವರ ಎಚ್ಚರಿಕೆಯ ಮಾತು. ಮೂರು ವರ್ಷಗಳ ಹಿಂದೆ ಇದ್ದ ನಿರ್ದೇಶಕರ ಆಳ್ವಿಕೆಯಲ್ಲೂ ಅಕ್ರಮ ಬೇಟೆಯನ್ನು ಮಾತ್ರ ತಡೆಹಿಡಿಯಲಾಗಿಲ್ಲ. "ಕಾಜಿರಂಗಂತಹ ಅಭಯಾರಣ್ಯಗಳತ್ತ ನಿರ್ಲಕ್ಷ್ಯ ತಾಳುವುದು ಭವಿಷ್ಯದಲ್ಲಿ ಪರಿಣಾಮಕಾರಿಯಾಗಬಹುದು. ಇಂದಿನ ಅನಾಹುತಗಳಿಗೆ ಹಿಂದಿನ ನಿರ್ಲಕ್ಷ್ಯವೇ ಕಾರಣ ಎನ್ನುತ್ತಾರೆ ಬುರಗೊಹೆನ್.
ವನ್ಯಜೀವಿಗಳ ಸಂಖ್ಯೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಕಾಜಿರಂಗದ 430 ಚ. ಕಿ.ಮೀ ವಿಸ್ತೀರ್ಣ ಪ್ರದೇಶಕ್ಕೆ ಹೆಚ್ಚುವರಿ ಸ್ಥಳಗಳನ್ನು ಕಲ್ಪಿಸಿ ಒಟ್ಟು 860 ಚ. ಕಿ.ಮೀ. ಪ್ರದೇಶದ ಉದ್ಯಾನವನವನ್ನಾಗಿ ಪರಿವರ್ತಿಸಲಾಯಿತು. ಆದರೂ ಅಲ್ಲಿನ ಭದ್ರತಾ ವ್ಯವಸ್ಥೆ ಮಾತ್ರ ಅಭಿವೃದ್ಧಿಯ ಪಥ ಹಿಡಿಯಲಿಲ್ಲ.
ಕಾಜಿರಂಗ ಉದ್ಯಾನವನದ ಕೊಹೋರಾ ವಲಯ ಕಚೇರಿಯಲ್ಲಿ ಪ್ರಸಿದ್ಧ ವನ್ಯ ಸಂರಕ್ಷಣಾ ಅಧಿಕಾರಿ ಹಾಗೂ 'ಅಂತರ್ ರಾಷ್ಟ್ರೀಯ ಮತ್ತು ರಾಷ್ಟ್ರೀಯ ವನಪಾಲಕ' ಪ್ರಶಸ್ತಿಗೆ ಪಾತ್ರರಾದ ಧರಣೀಧರ್ ಬೋರೊ ಹಾಗೂ ಬೇಟೆಗಾರರೊಂದಿಗೆ 100ಕ್ಕೂ ಹೆಚ್ಚು ಎನ್‌ಕೌಂಟರ್ ನಡೆಸಿದ ಕಾವಲು ಯೋಧನನ್ನು ನೀವು ಭೇಟಿಯಾಗಬಹುದು. ಇಲ್ಲಿ ಒಂದು ವಿಶೇಷತೆ ಗಮನಿಸಿ ಎಂದು ಹೇಳುವ ಬೋರೊ ಸೇನಾ ಪಡೆಯ ಕಾರ್ಯ ನಮ್ಮ ದೇಶದ ಹಿತದೃಷ್ಟಿಯಿಂದ ಮುಖ್ಯ. ಆದರೆ ನಮ್ಮ ಕಾವಲು ಸಿಬ್ಬಂದಿ ಕಾರ್ಯ ಇಡೀ ಪ್ರಪಂಚಕ್ಕೆ ಮುಖ್ಯವಾದುದು ಎನ್ನುತ್ತಾರೆ. ಧರಣೀಧರ್ ಕಚೇರಿಯ ಎದುರು ಗೌರವದ ಪ್ರತೀಕ ಎಂಬಂತೆ ಒಂದು ಫಲಕವನ್ನು ನೇತು ಹಾಕಿರುವುದನ್ನು ಗಮನಿಸಬಹುದು. ಕಾಜಿರಂಗದ ಯಶಸ್ಸಿನ ಚಿತ್ರಣವನ್ನೇ ಈ ಫಲಕ ವಿವರಿಸುತ್ತದೆ. 2006ರಲ್ಲಿ ಒಟ್ಟು 1,885 ಘೇಂಡಾಮೃಗಗಳು, 2001ರಲ್ಲಿ ಏಷ್ಯಾ ಮೂಲದ 1,431 ಕಾಡುಕೋಣಗಳು, 2000ದಲ್ಲಿ ಈಶಾನ್ಯ ಭಾಗದ ಒಟ್ಟು 468 ಜಿಂಕೆಗಳು ಕಾಜಿರಂಗ ಉದ್ಯಾನವನದಲ್ಲಿದ್ದವು. ಹಾಗೆಯೇ 2002ರಲ್ಲಿ ಏಷ್ಯಾ ಮೂಲದ 1,048 ಆನೆಗಳು ಮತ್ತು 2000ದಲ್ಲಿ ಅತ್ಯಂತ ಹೆಚ್ಚು ಅಂದರೆ 86 ಹುಲಿಗಳು ಕೂಡ ಇಲ್ಲಿ ನೆಲೆಯೂರಿದ್ದವು. ಕಾಜಿರಂಗದ ಇನ್ನೊಂದು ವೈಶಿಷ್ಟ್ಯ ಎಂದರೆ ಅಲ್ಲಿನ ಪಕ್ಷಿ ಸಮೂಹ. ಒಟ್ಟು 478 ಪಕ್ಷಿ ಜಾತಿಗಳು ಇಲ್ಲಿ ಕಂಡುಬಂದಿದ್ದು, 25 ವಿವಿಧ ಜಾತಿಯ ಪಕ್ಷಿಗಳು ಜಾಗತಿಕವಾಗಿ ಅಳಿವಿನಂಚಿಗೆ ಸಾಗಿದ್ದರೆ, 'ಸ್ಥಳೀಯ ಸಮಸ್ಯೆ' ಇತರ 21 ಜಾತಿಯ ಪಕ್ಷಿಗಳಿಗೆ ಹಾನಿಯುಂಟು ಮಾಡಿದೆ. ಆದರೂ ಇದನ್ನು ಅಪರೂಪಕ್ಕೆ ಕಂಡುಬರುವ ಯಶಸ್ವೀ ಕಥೆ ಎಂದು ಬಣ್ಣಿಸಿದಲ್ಲಿ ತಪ್ಪಿಲ್ಲ.
ಒಂದೊಮ್ಮೆ ಕಾಡಿನಲ್ಲಿ ನಿರಾಳವಾಗಿ ನಡೆಯುತ್ತಿದ್ದ ಬೇಟೆಯ ಪರಿಣಾಮ ಮಾತ್ರ ನಿಜವಾಗಿಯೂ ಮನಕಲಕುವಂತದ್ದು. ಘೇಂಡಾಮೃಗಗಳ ಕೊಂಬನ್ನು ಕಿತ್ತ ನಂತರ ಆ ಮೂಕ ಪ್ರಾಣಿಗಳು ರಕ್ತಸ್ರಾವದಿಂದ ನರಳಿ ಸಾಯುವ ದೃಶ್ಯವಂತೂ ಘನಘೋರ. ಒಟ್ಟಾರೆ ಡಜನ್‌ಗಟ್ಟಲೆ ಘೇಂಡಾಮೃಗಗಳನ್ನು ಕೊಂಬಿಗಾಗಿಯೇ ಕೊಲ್ಲಲಾಗಿದೆ. ಕಾವಲು ಸಿಬ್ಬಂದಿ ಅಕ್ರಮ ಬೇಟೆಗಾರರಿಗೆ ಬೆಂಬಲ ನೀಡಿಲ್ಲ ಎಂಬುದನ್ನು ಮಾತ್ರ ನಾನು ಯಾವತ್ತೂ ಹೇಳುವುದಿಲ್ಲ. ಆದರೆ ನಮಗೆ ಹೆಚ್ಚುವರಿ ಸಿಬ್ಬಂದಿಯನ್ನು ನೀಡಿ. ಶೇ.70ರಷ್ಟು ಅಕ್ರಮ ಬೇಟೆಯನ್ನು ಕಡಿಮೆಗೊಳಿಸುತ್ತೇವೆ. ಅದು ಮಾತ್ರ ಸ್ಪಷ್ಟ ಎಂದು ಆತ್ಮವಿಶ್ವಾಸದಿಂದ ಬರುವಾ ನುಡಿಯುತ್ತಾರೆ. ಇಂದಿನ ಆಧುನಿಕ ಯುಗ, ಹೊಣೆಗೇಡಿ ಸರ್ಕಾರದ ನಡುವೆ ಕಾಜಿರಂಗ ಎಲ್ಲಾ ದೋಷಗಳಿಂದ ಮುಕ್ತಿಹೊಂದಿ ವಿಜಯಿಯಾಗಲಿದೆಯೇ? ನಮ್ಮೆಲ್ಲರ ನಿರೀಕ್ಷೆ ಅದೇ ಆಗಿದೆ.
'ಸೂಕ್ತ ವ್ಯಕ್ತಿ ಬಂದರೆ ಕೆಲಸ ಬಿಟ್ಟು ಕೊಡಲು ಸಿದ್ಧ!'

ಕಾಜಿರಂಗ ರಾಷ್ಟ್ರೀಯ ಉದ್ಯಾನವನದ (ಕೆಎನ್‌ಪಿ) ರಕ್ಷಣಾಧಿಕಾರಿ ಧರಣೀಧರ್ ಬೋರೊ ಅವರು, ಪ್ರಸ್ತುತ ಸ್ಥಿತಿಯನ್ನು ಮಾಧ್ಯಮಗಳು ಸೂಕ್ತವಾಗಿ ಚಿತ್ರಿಸಿಲ್ಲ ಎಂದು ಆರೋಪಿಸುತ್ತಾರೆ.
ಪ್ರವಾಹದ ಸಂದರ್ಭದಲ್ಲಿ ಅಭಯಾರಣ್ಯಗಳನ್ನು ತೊರೆಯಬೇಕಾದ ಘೇಂಡಾಮೃಗಗಳು ಈಗಲೇ ತೊರೆಯುತ್ತಿವೆ. ಕಾರಣ?
ಪ್ರವಾಹದ ಸಂದರ್ಭದಲ್ಲಿ ಘೇಂಡಾಮೃಗಗಳು ಅಭಯಾರಣ್ಯಗಳನ್ನು ತೊರೆಯುವುದು ಸಹಜ. ಆದರೀಗ ನಾಚಿಕೆಮುಳ್ಳಿನ (ಮೈಮೋಸಾ ವೀಡ್) ತೀವ್ರ ಹಬ್ಬುವಿಕೆಯಿಂದ ಘೇಂಡಾಮೃಗಗಳು ಅಭಯಾರಣ್ಯ ತೊರೆಯುತ್ತಿವೆ.
ನಾಚಿಕೆಮುಳ್ಳು ಅವುಗಳ ಆಹಾರ ಅಲ್ಲ. ಇನ್ನು ನದಿ, ಕೊಳಗಳಲ್ಲಿ ಹೂಳು ತುಂಬಿರುವುದೂ ಸಮಸ್ಯೆಯಾಗಿದೆ.
ಒಂದು ವರ್ಷದಲ್ಲಿ 21 ಘೇಂಡಾಮೃಗಗಳು ಮೃತಪಟ್ಟಿರುವುದಕ್ಕೆ ಏನು ಹೇಳುತ್ತೀರಿ?
ಕಾಜಿರಂಗ ಉದ್ಯಾನವನದಲ್ಲಿ ಅಕ್ರಮ ಬೇಟೆ ತಡೆಯಲು ನಾವು ಬಹಳ ಹಿಂದೆಯೇ ಸಫಲರಾಗಿದ್ದೇವೆ. ಆದರೆ ಮಾಧ್ಯಮಗಳು ಮಾತ್ರ ನಮ್ಮತ್ತ ದುರ್ನೋಟ ಬೀರಿವೆ. ನಾನು ಮಾಡುತ್ತಿರುವ ಕೆಲಸವನ್ನು ಇನ್ಯಾರಾದರೂ ಮಾಡಲಿಚ್ಛಿಸಿದಲ್ಲಿ ನನ್ನ ಕೆಲಸವನ್ನು ಅವರಿಗೆ ಬಿಟ್ಟುಕೊಡಲು ಸಿದ್ಧ.
ಹಾಗಾದರೆ ಘೇಂಡಾಮೃಗಗಳ ಸಂಖ್ಯೆ ಕಡಿಮೆಯಾಗಿಲ್ಲ. ಮಾಧ್ಯಮಗಳೇ ಜಾಸ್ತಿಯಾಗಿವೆ ಎಂದು ಹೇಳುತ್ತಿರುವಿರಾ?
ಹೌದು. ಅಂದು ಪರಿಸರವಾದಿ ರಾಬಿನ್ ಬ್ಯಾನರ್ಜಿ ಅವರು 2000 ಇಸವಿಯ ಒಳಗಾಗಿ ಕಾಜಿರಂಗ ಉದ್ಯಾನವನದಲ್ಲಿ ಘೇಂಡಾಮೃಗಗಳೇ ಇಲ್ಲವಾಗುತ್ತವೆ ಎಂದು ಹೇಳಿದ್ದರು. ಆದರೆ 'ನಾನಿರುವವರೆಗೆ ಅದು ಸಾಧ್ಯವಿಲ್ಲ' ಎಂದು ಅವರಿಗೆ ಸವಾಲು ಹಾಕಿದ್ದೆ. ಈಗ 2008, ಒಟ್ಟು 2000 ಸಾವಿರ ಘೇಂಡಾಮೃಗಗಳಿರುವುದನ್ನು ನೀವೇ ನೋಡಿರಬಹುದು.
ಆದರೆ ಅಕ್ರಮ ಬೇಟೆಗೆ ನಿಮ್ಮ ಹಾಗೂ ರಕ್ಷಣಾ ಪಡೆಯ ಕುಮ್ಮಕ್ಕಿದೆ ಎಂಬ ಆರೋಪವಿದೆಯಲ್ಲಾ...
ನಮ್ಮ ರಕ್ಷಣಾ ಪಡೆಯ ಬದ್ಧತೆ ಕುರಿತು ಪ್ರಶ್ನಿಸುವಂತಿಲ್ಲ. ಸೇನಾ ಪಡೆ ಕಾರ್ಯ ನಿರ್ವಹಿಸದ ಪ್ರದೇಶಗಳಲ್ಲಿ ನಮ್ಮ ರಕ್ಷಣಾ ಪಡೆ ಕಾರ್ಯನಿರ್ವಹಿಸಿದೆ. ಒಂದು ವೇಳೆ ಅವರು ಅಕ್ರಮ ಬೇಟೆಗೆ ಕುಮ್ಮಕ್ಕು ನೀಡಿದ್ದಾರೆ ಎಂದಾದರೆ ಘೇಂಡಾಮೃಗಗಳ ರಕ್ಷಣೆ ಹೇಗೆ ಸಾಧ್ಯವಾಗುತ್ತಿತ್ತು?
ನಿಮ್ಮ ಯಶಸ್ಸಿನ ಕುರಿತಾಗಿ ತಿಳಿಸಿದ್ದೀರಿ. ಆದರೆ ಜನರನ್ನು ಅರಿಯುವುದರಲ್ಲಿ ಮಾತ್ರ ವಿಫಲರಾಗಿದ್ದೀರಿ. ಹಾಗಾಗಿಯೇ ಅಕ್ರಮ ಬೇಟೆ ನಡೆಯುತ್ತಿದೆ ಎನ್ನಲಾಗುತ್ತಿದೆ...
ಇಲ್ಲ. ಅದು ಖಂಡಿತಾ ತಪ್ಪು. ಕಾಜಿರಂಗ ಉದ್ಯಾನದ ಸುತ್ತಮುತ್ತಲಿನ ಜನರನ್ನು ಅರ್ಥೈಸಿಕೊಳ್ಳುವಲ್ಲಿ ನಾವು ಸಫಲರಾಗಿದ್ದೇವೆ. ಆದರೆ ಬೇಟೆಗಾರರು ಮಣಿಪುರದ ಚುರಾಚಂದ್‌ಪುರ್‌ನಂಥಾ ಪ್ರದೇಶದಿಂದ ಬರುತ್ತಾರೆ.
|
ಇಂಡಿಯನ್ ರೈನೋ ವಿಷನ್ 2020 'ವ್ಯವಸ್ಥೆಯಲ್ಲೇ ಬದಲಾವಣೆ ಆಗಬೇಕಿದೆ'
|
|
ಅಸ್ಸಾಂನ ಅಂತರ್ ಕಲಹದ ಸಂದರ್ಭದಲ್ಲಿ ಮನಾಸ್ ಹಾಗೂ ಒರಂಗ್ ಅಭಯಾರಣ್ಯಗಳಲ್ಲಿ ಘೇಂಡಾಮೃಗಗಳ ಸಂಖ್ಯೆ ತೀವ್ರವಾಗಿ ಕುಸಿದಿತ್ತು.
ಈಗ ಈ ಅಭಯಾರಣ್ಯಗಳ ಮರು ಅಭಿವೃದ್ಧಿಗಾಗಿ ರೈನೋ ಪುನರ್‌ವಸತಿ ಸಮಿತಿಯ ಮುಖ್ಯಸ್ಥ ಬಿ.ಎಸ್. ಬೋನಲ್ ಮುಂದಾಗಿದ್ದಾರೆ
ಪ್ರಶ್ನೆಗಳು ಹಲವಿರಬಹುದು ,
ಆದರೆ ನಿರೀಕ್ಷೆ ಒಂದೇ.
ಒಂದು ಕಾಲದಲ್ಲಿ ಅಸ್ಸಾಂ ರಾಜ್ಯದಲ್ಲಿ
ಸಾವಿರಾರು ಸಂಖ್ಯೆಯಲ್ಲಿದ್ದ ಘೇಂಡಾಮೃಗಗಳು ಅಲ್ಲಿನ ಕಾಡುಗಳಲ್ಲಿ
ಯಾವುದೇ ಭಯವಿಲ್ಲದೆ ನಿರಾಳತೆಯಿಂದ ಜೀವಿಸುತ್ತಿದ್ದವು.
ಭಾರತದ ಅಮೂಲ್ಯ ವನ್ಯಜೀವಿ ಸಂಪತ್ತಾದ
ಘೇಂಡಾಮೃಗಗಳ ಪಾಲಿಗೆ ವೈಭವದ ದಿನಗಳು ಮರುಕಳಿಸಲಿವೆಯೇ?
ಘೇಂಡಾಮೃಗ ಸಂತತಿ ಅಭಿವೃದ್ಧಿಯ
ನಿಟ್ಟಿನಲ್ಲಿ 'ಇಂಡಿಯನ್ ರೈನೋ ವಿಷನ್ 2020' ಯೋಜನೆಯನ್ನು ಜಾರಿಗೆ
ತರಲಾಗಿದೆ. ಅಸ್ಸಾಂನಲ್ಲಿ ಈಗಾಗಲೇ ಇರುವ 2000 ಘೇಂಡಾಮೃಗಗಳ
ಸಂಖ್ಯೆಯನ್ನು 12 ವರ್ಷಗಳ ಒಳಗಾಗಿ 3000ಕ್ಕೆ ಏರಿಸುವ ಮಹತ್ತರ
ಉದ್ದೇಶವನ್ನು ಯೋಜನೆ ಹೊಂದಿದೆ. ಘೇಂಡಾಮೃಗಗಳು ಅತಿ ಹೆಚ್ಚಿನ
ಸಂಖ್ಯೆಯಲ್ಲಿ ಇರುವ ಅಭಯಾರಣ್ಯಗಳಿಂದ ಸ್ಥಳಾಂತರಿಸಲು ಇಲ್ಲಿ ಪ್ರಮುಖ
ಆದ್ಯತೆ ನೀಡಲಾಗಿದೆ. ಕೆಲವೊಮ್ಮೆ ಇಲ್ಲಿ ಅಕ್ರಮ ಬೇಟೆ ಪ್ರಕರಣಗಳು
ಕೇಳಿಬಂದರೂ ಘೇಂಡಾಮೃಗಗಳ ರಕ್ಷಣೆ ಕುರಿತಂತೆ ಉದ್ಯಾನವನ ಯೋಗ್ಯ ತಾಣ
ಎಂದೇ ಪರಿಗಣಿಸಲಾಗಿದೆ. ಯೋಜನೆಯ ಕುರಿತಾಗಿ ಅರಣ್ಯ ರಕ್ಷಣಾ ಇಲಾಖೆಯ
ಮುಖ್ಯ ಸಂರಕ್ಷಣಾಧಿಕಾರಿ ಮತ್ತು ಪುನರ್‌ವಸತಿ ಸಮಿತಿಯ ಮುಖ್ಯಸ್ಥ
ಬಿ.ಎಸ್. ಬೊನಾಲ್ ಅವರೊಂದಿಗೆ ಟಿಎಸ್‌ಐನ ಪ್ರಣಬ್ ಬೋರಾ ನಡೆಸಿದ
ಸಂದರ್ಶನ ಇಲ್ಲಿದೆ.
' ಇಂಡಿಯನ್ ರೈನೋ
ವಿಷನ್'
(ಐಆರ್‌ವಿ)
ಬಗ್ಗೆ...
2020ರ ಒಳಗಾಗಿ ಅಸ್ಸಾಂನಲ್ಲಿ
ಘೇಂಡಾಮೃಗಗಳ ಸಂಖ್ಯೆಯನ್ನು ಏರಿಸುವ ನಿಟ್ಟಿನಲ್ಲಿ ನಾವು ಕೈಗೊಂಡ
ಮಹತ್ವದ ಯೋಜನೆ ಅದು.
ಈ ನಿಟ್ಟಿನಲ್ಲಿ ರಾಜ್ಯದ ಯಾವ ಯಾವ
ಪ್ರದೇಶದತ್ತ ನೀವು ಹೆಚ್ಚಿನ ಗಮನ ಹರಿಸಲಿದ್ದೀರಿ ?
ಮುಖ್ಯವಾಗಿ ಮನಾಸ್, ಲಾವೊಖೋವಾ ಮತ್ತು
ಒರಂಗ್ ಅಭಯಾರಣ್ಯಗಳು. ಏಕೆಂದರೆ 1990ರಲ್ಲಿ ಮನಾಸ್‌ನಲ್ಲಿ
80ಕ್ಕಿಂತಲೂ ಹೆಚ್ಚು ಘೇಂಡಾಮೃಗಗಳಿದ್ದವು. ಹಾಗೇ ಲಾವೊಖೋವಾ ಮತ್ತು
ಒರಂಗ್‌ನಲ್ಲಿ 60ಕ್ಕಿಂತಲೂ ಅಧಿಕ ಸಂಖ್ಯೆಯ ಘೇಂಡಾಮೃಗಗಳಿದ್ದವು.
ಘೇಂಡಾಮೃಗಗಳ ವಂಶವಾಹಿಯನ್ನು ರಕ್ಷಿಸಲು ಈ
ಅಭಯಾರಣ್ಯಗಳು ಸಾಕೇ ?
ಈ ನಿಟ್ಟಿನಲ್ಲಿ ನಾವು ದಿಬ್ರು
ಸೈಕೋವಾದಂತಹಾ ರಾಷ್ಟ್ರೀಯ ಉದ್ಯಾನವನಗಳತ್ತಲೂ ಗಮನ ಹರಿಸಿದ್ದೇವೆ.
1980 -90ರ
ಕ್ರಾಂತಿಯ ಸಂದರ್ಭದಲ್ಲಿ ಲಾವೊ ಖೋವಾ ಮತ್ತು ಮನಾಸ್ ವನ್ಯಜೀವಿ
ಅಭಯಾರಣ್ಯಗಳಲ್ಲಿ ಘೇಂಡಾಮೃಗಗಳ ಸಂಖ್ಯೆ ತೀವ್ರ ಕುಸಿತ ಕಂಡಿತ್ತು.
ಹಾಗಾಗಿ ಆ ಅಭಯಾರಣ್ಯಗಳಲ್ಲಿ ಮತ್ತೊಮ್ಮೆ
ಘೇಂಡಾಮೃಗಗಳನ್ನು ತುಂಬುವುದು ಎಷ್ಟು ಸುರಕ್ಷಿತ?
ನಮ್ಮ ಕಾರ್ಯವನ್ನು ಮುಂದುವರಿಸುವಂತೆ
ಭದ್ರತಾ ಸಮಿತಿ ಸಲಹೆ ನೀಡಿದೆ. ಮೃಗಗಳ ಅಕ್ರಮ ಬೇಟೆ, ರಸ್ತೆಗಳ
ಕುರಿತಂತೆ ಹಾಗೂ ಇತರ ಸುರಕ್ಷತಾ ಕ್ರಮಗಳನ್ನೂ ಉತ್ತಮಗೊಳಿಸಲಾಗಿದೆ.
' ಇಂಡಿಯನ್ ರೈನೋ
ವಿಷನ್'
ಯೋಜನೆ ಘೇಂಡಾಮೃಗಗಳ ಅಭಿವೃದ್ಧಿಗಾಗಿ ಮಾತ್ರ ಇರುವುದು.
ಆದರೆ ಮನಾಸ್‌ನಂಥ ವನ್ಯಧಾಮಗಳಲ್ಲಿ ಪ್ರಾಣಿ
ವರ್ಗ ಮತ್ತು ಅಲ್ಲಿನ ಪರಿಸರಕ್ಕೆ ಹಾನಿಯಾಗಿರುವ ಕುರಿತು ನೀವೇನು
ಹೇಳುತ್ತೀರಿ?
ನಮ್ಮ ಕಾರ್ಯಪಡೆ ವನ್ಯಧಾಮ
ಸಮಿತಿಯೊಂದನ್ನು ಹೊಂದಿದ್ದು, ಈ ಕುರಿತು ಸಮಿತಿ ಸ್ಪಷ್ಟನೆ ನೀಡಿದೆ.
ಉದಾಹರಣೆಗೆ ಮನಾಸ್ ಅಭಯಾರಣ್ಯದಲ್ಲಿ ಕರಡಿಗಳ ಸಂಖ್ಯೆ ತೀವ್ರ ಕುಸಿತ
ಕಂಡಿತ್ತು. ಆದರೆ ಈಗ ಅವುಗಳ ಸಂಖ್ಯೆ ವೃದ್ಧಿಯಾಗುತ್ತಿದೆ.
ಅತ್ಯಂತ ಅಮೂಲ್ಯ ಪ್ರಾಣಿ ಸಂತತಿಯಲ್ಲಿ ಒಂದಾದ
ಘೇಂಡಾಮೃಗಗಳನ್ನು ಸಣ್ಣ ಅಭಯಾರಣ್ಯಗಳಲ್ಲಿರಿಸುವುದು ಹೆಚ್ಚು ಸುರಕ್ಷಿತ .
ಉದಾಹರಣೆಗೆ
16 ಚ.ಕಿ.ಮೀ
ವಿಸ್ತೀರ್ಣದ ಮನಾಸ್ ಅಭಯಾರಣ್ಯದಲ್ಲಿ ಸುಮಾರು
80
ಘೇಂಡಾಮೃಗಗಳಿವೆ.
ಆದರೆ ಮನಾಸ್ ಅಭಯಾರಣ್ಯ ದೊಡ್ಡದಾಗಿದ್ದು ಒಂದು
ಕಾಲದಲ್ಲಿ ಅಲ್ಲಿ ಘೇಂಡಾಮೃಗಗಳೇ ಇಲ್ಲದಿದ್ದದ್ದು ನಿಮಗೆ ತಿಳಿದೇ ಇದೆ...
ಅಭಯಾರಣ್ಯಗಳ ಗಾತ್ರ ಇಲ್ಲಿ ಪ್ರಮುಖ
ಪಾತ್ರ ವಹಿಸುವುದಿಲ್ಲ.
ಬೇಟೆಗಾರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು
ಹೊಂದಿರುವಾಗ ನೀವು ವನ್ಯ ರಕ್ಷಣಾ ಪಡೆಗೆ ಪಾಯಿಂಟ್
315 ರೈಫಲ್
ನೀಡಿರುವುದು ಎಷ್ಟು ಸರಿ?
ಅಕ್ರಮ ಬೇಟೆ ಅಧಿಕವಿರುವ ಕಾಜಿರಂಗಾ
ರಾಷ್ಟ್ರೀಯ ಉದ್ಯಾನವನದಲ್ಲಿ ಸಾಕಷ್ಟು ಪ್ರಮಾಣದ ರಕ್ಷಣಾ ಕ್ರಮಗಳನ್ನೂ
ನೀವು ಕೈಗೊಂಡಿಲ್ಲ...
ಉದ್ಯಾನವನದ ಅವಶ್ಯಕತೆಗಳು ಬೇಕಾದಷ್ಟಿವೆ.
ಉದಾಹರಣೆಗೆ ಹೆಚ್ಚುವರಿ ರಕ್ಷಣಾ ಪಡೆ ಅತ್ಯಗತ್ಯ.
ಹಾಗಾದರೆ ಅಗತ್ಯತೆಗಳನ್ನು ಪೂರೈಸುವಲ್ಲಿ
ಸರ್ಕಾರ ಸಮರ್ಥವಾಗಿಲ್ಲ ಎಂದು ನೀವು ಹೇಳುತ್ತಿದ್ದೀರಾ ?
ನಾನು ಹಾಗೆನ್ನುತ್ತಿಲ್ಲ. ವ್ಯವಸ್ಥೆಯೇ
ಆ ರೀತಿಯಲ್ಲಿದ್ದು, ಬದಲಾವಣೆಯ ಅವಶ್ಯಕತೆಯಿದೆ.
|
ಟಿಎಸ್‌ಐ
|