|
ಭಾರತೀದೇವಿ
|
ಲೇಖಕಿ, ಅಧ್ಯಾಪಕಿ |
ಸಾಹಿತ್ಯ ಎನ್ನುವುದು ಏಕಮುಖಿಯಾದದ್ದಲ್ಲ. ಹಾಗೆಯೇ ಸಾಹಿತ್ಯವನ್ನು ಅರ್ಥೈಸಿ ಕೊಳ್ಳುವ ವಿಧಾನ ಕೂಡಾ ಪಟ್ಟಿ ಕಟ್ಟಿದ ಕುದುರೆಯ ಹಾಗಿರದೇ ಭಿನ್ನ ಆಯಾಮಗಳನ್ನು ಬೇಡುವಂತಹುದು. ಹೀಗಿರುವಾಗ ಒಟ್ಟಂದದ ಸಾಹಿತ್ಯವನ್ನು ಒಂದೇ ಮಾನದಂಡದಿಂದ ಎಲ್ಲ ಸಂದರ್ಭದಲ್ಲೂ ನೋಡುವುದು ಸಾಧ್ಯವಿಲ್ಲ.
ಇದುವರೆಗಿನ ಸಾಹಿತ್ಯ ಚರಿತ್ರೆ, ವಿಮರ್ಶೆಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಾಗ ಇದು ಸ್ಪಷ್ಟವಾಗುತ್ತಾ ಹೋಗುತ್ತದೆ. ತೀರಾ ಇತ್ತೀಚಿನವರೆಗೂ ಯಾವುದೋ ಒಂದು ಪ್ರಬಲ ಸಾಹಿತ್ಯಿಕ ಮಾದರಿಯನ್ನು ನಮ್ಮ ಮುಂದಿಟ್ಟುಕೊಂಡು ಅದಕ್ಕೆ ಹೋಲಿಸುತ್ತಲೇ ಮಹಿಳಾ ಸಾಹಿತ್ಯವನ್ನು ವಿಮರ್ಶೆ ಮಾಡುವ ಮಾದರಿಯೇ ಕಂಡುಬರುತ್ತದೆ. ಉದಾಹರಣೆಗೆ ಒಬ್ಬ ಕವಯಿತ್ರಿಯ ಕವನ ಚೆನ್ನಾಗಿಲ್ಲ ಎನ್ನುವುದಕ್ಕೆ ಕೊಡುವ ಕಾರಣ ಅದು ಅಡಿಗರ ಕವನಗಳಂತೆಯೋ, ಬೇಂದ್ರೆ ಕವನಗಳಂತೆಯೋ ಇಲ್ಲ ಎಂಬುದು. ಚಿ.ನ. ಮಂಗಳಾ ಅವರು ತಿರುಮಲಾಂಬಾ ಅವರ ಕೃತಿಗಳನ್ನು ಹೊರತರುವವರೆಗೂ ನಮ್ಮ ಸಾಹಿತ್ಯಲೋಕದಲ್ಲಿ ಆ ಕುರಿತ ಅರಿವು ಇರಲಿಲ್ಲ. ಮಹಿಳೆಯರ ಸಾಹಿತ್ಯ ಅಡಿಗೆ ಮನೆ ಸಾಹಿತ್ಯ ಎಂದು ಹೀಗಳೆಯುವ ಪರಿ ಕೂಡಾ ಹೊಸದಲ್ಲ. ಹೀಗಿರುವಾಗ ಇದುವರೆಗೆ ಪ್ರಧಾನವಾಹಿನಿಯ ಪುರುಷ ಸಾಹಿತ್ಯದ ಮಾನದಂಡ, ಶ್ರೇಷ್ಠತೆಯ ಪರಿಕಲ್ಪನೆ ಮಹಿಳೆಯರ ಬರಹವನ್ನು ಅರ್ಥೈಸಿಕೊಳ್ಳುವಲ್ಲಿ ಎಷ್ಟರ ಮಟ್ಟಿಗೆ ನೆರವಾಗಬಲ್ಲದು, ಅದರ ನೈಜ ಸತ್ವವನ್ನು ಗುರುತಿಸುವಲ್ಲಿ ನೆರವಾಗಬಲ್ಲದು ಎಂಬ ಪ್ರಶ್ನೆ ಮೂಡುತ್ತದೆ.
ಸಾಹಿತ್ಯ ಮತ್ತು ಅದರ ವಿವಿಧ ಪ್ರಕಾರಗಳ ಸಂವೇದನೆಯ ಆಳವನ್ನು ಅರಿಯುವ ಬಗೆ ಹಲವು. ಒಂದು ಸಾಹಿತ್ಯ ಕೃತಿಯನ್ನು ಅರ್ಥೈಸಿಕೊಳ್ಳುವಲ್ಲಿ ಅದರ ಉದಯಕ್ಕೆ ಕಾರಣವಾದ ಪ್ರೇರಣೆ, ಅದು ಹುಟ್ಟಿದ ಪರಿಸರದ ಅರಿವು ಮುಖ್ಯ. ತನ್ನ ಪ್ರಪಂಚ ಅಡಿಗೆ ಮನೆಗಷ್ಟೇ ಸೀಮಿತವಾಗಬೇಕಾದ ಪರಿಸ್ಥಿತಿಯಲ್ಲಿ ಮಹಿಳೆ ಹೊರ ಜಗತ್ತನ್ನು ತನ್ನ ಪರಿಭಾಷೆಯಲ್ಲೇ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಾಳೆ, ಅಲ್ಲಿಂದ ಹೊರ ಸಾಗುವ ಹಂಬಲವನ್ನೂ ತೋರಿಸುತ್ತಾಳೆ. ಆಗ ವೈದೇಹಿಯವರ 'ಅಡುಗೆ ಮನೆಯ ಹುಡುಗಿ' ಯಂತಹ ಕವನಗಳು ಹುಟ್ಟುತ್ತವೆ ಅಥವಾ ಸಾಸಿವೆ ಚಟಚಟಿಸುವುದು ಪ್ರತಿಭಟನೆಯ ಸಂಕೇತವಾಗಿ ತೋರುತ್ತದೆ.
ಯಾವುದೇ ಸಾಹಿತ್ಯ ಕೃತಿ ಬರಹಗಾರ ತನ್ನ ಪರಿಸರದೊಡನೆ, ಅನುಭವದೊಡನೆ ಮಾಡಿಕೊಳ್ಳುವ ಅನುಸಂಧಾನದಿಂದ ಮೈದಳೆಯುತ್ತದೆ. ಹೀಗಿರುವಾಗ ಮಹಿಳೆ ಮತ್ತು ಪುರುಷ ಇವರಿಬ್ಬರೂ ಲೋಕ ಕಾಣುವ ದೃಷ್ಟಿ ಬೇರೆ ಬೇರೆ, ಅವರ ಸಂವೇದನೆಯ ಸ್ವರೂಪವನ್ನು ಇದು ನಿರ್ಧರಿಸುತ್ತದೆ. ಸಾರಾಸಗಟಾಗಿ ತಿರಸ್ಕರಿಸದೇ ಸಂವೇದನೆಯ ಪ್ರಾಮಾಣಿಕತೆ ಮತ್ತು ಗಹನತೆಯನ್ನು ಗುರುತಿಸುವ ಪ್ರಯತ್ನ ಮಾಡಿದಾಗ ಸಾಹಿತ್ಯ ಕೃತಿಯೊಂದರ ಗಟ್ಟಿತನ ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಸಾಹಿತ್ಯ ಭಿನ್ನ ಓದನ್ನು ಬಯಸುತ್ತದೆ. ಹಳೆಯ ಬೆರಳೆಣಿಕೆಯ ಕೃತಿಗಳು ಮನೆಯೇ ಜಗತ್ತಾಗಬೇಕಾದ ಹೆಣ್ಣಿನ ಮನೋಲೋಕವನ್ನು ಚಿತ್ರಿಸಿದರೆ ಇಂದಿನ ಕೃತಿಗಳು ಮನೆಯ ಹೊಸ್ತಿಲು ದಾಟಿ ಹೊರಬಂದರೂ ಆಕೆ ಸ್ವಾತಂತ್ರ್ಯದ ಸವಿಯ ಜತೆಗೇ ಮುಖಾಮುಖಿಯಾಗುತ್ತಿರುವ ಮಾನಸಿಕ ಲೋಕದ ಬಿಗಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡುತ್ತವೆ.
ಮಹಿಳೆಯರ ಅನುಭವವನ್ನು ಪುರುಷರು ತಮ್ಮ ಕೃತಿಗಳಲ್ಲಿ ತರುವ ಪ್ರಯತ್ನ ಮಾಡಿದ್ದಾರಾದರೂ ಅನುಭವದ ಅಧಿಕೃತತೆ ದಕ್ಕುವುದು ಅದಕ್ಕೆ ಒಳಗಾದ ಮಹಿಳೆ ಅದನ್ನು ಅಭಿವ್ಯಕ್ತಿಸಿದಾಗ. ಒಬ್ಬ ಲೇಖಕಿ ಬರೆಯುತ್ತಾಳೆ ನನ್ನ ದೇಹ ಕೊಲೊನೈಸ್ಡ್ ಆಗಿತ್ತು. ಆದರೆ ಇದು ತಿಳಿಯುವವರೆಗೆ ನಾನು ಅದನ್ನು ಪ್ರೇಮವೆಂದೇ ತಿಳಿದಿದ್ದೆ ಎಂದು. ಇದು ತನ್ನ ದೇಹವೂ ಒಂದು ಸರಕಾಗಿ ನೋಡಲ್ಪಡುತ್ತಿದೆ ಎಂಬ ಕಟುಸತ್ಯಕ್ಕೆ ಮುಖಾಮುಖಿಯಾದ ಹೆಣ್ಣಿನ ಸಂಕಟದ ಅಭಿವ್ಯಕ್ತಿ. ಇಂತಹ ಸೂಕ್ಷ್ಮ ಸಂಗತಿಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೆಣ್ಣಿನ ಲೋಕದ ಅರ್ಥೈಕೆಯನ್ನೊಳಗೊಂಡ ಓದು ಬೇಕಾಗುತ್ತದೆ. ಉದಾ, ಕವಯಿತ್ರಿ ಸುಧಾ ಶರ್ಮ ಚವತ್ತಿ ನಿರಾಳ ಬದುಕನ್ನು ತಮ್ಮ ಪರಿಭಾಷೆಯಲ್ಲಿ ವ್ಯಕ್ತಪಡಿಸುವುದು ಹೀಗೆ
ಇಲ್ಲಿಯ ತನಕ ಬದುಕು
ಸ್ವಸ್ಥ, ನಿಶ್ಚಿತ, ಟ್ರಂಕಿನೊಳಗೆ
ಡಾಂಬರಿ ಗುಳಿಗೆ ಹಾಕಿ
ಮಡಚಿಟ್ಟ ಸೀರೆಯಂತೆ; (ಸೀರೆ)
ತನಗೆ ಆಪ್ತವಾದ ಜಗತ್ತೇ ನಿರಾಳತೆಗೆ ಉಪಮೆಯಾಗಿಬಿಡುತ್ತದೆ. ಹಾಗೇ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಜನ ಪ್ರತಿಕ್ರಿಯಿಸಿದ ಬಗೆಗೆ ವೈದೇಹಿ ಸ್ಪಂದಿಸುವ ರೀತಿ ವಿಶಿಷ್ಟ:
ಈಗಿನ ಸಾಸಿವೆಯ ಸ್ವರವೇ
ಸತ್ತು ನಿಗರಿ ಹೋಗಿದೆ.
ಗುಜುಗುಜಿಸುವ ಎಣ್ಣೆಯೊಳಗೆ
ನುಣ್ಣಗೆ ಹೊರಳಾಡಿ ಗೊರೆಯುತ್ತದೆ, ಸಣ್ಣಗೆ! (ಅಮ್ಮನ ಗೊಣಗಾಟ)
ಸೃಜನಶೀಲ ಸಾಹಿತ್ಯ ಮಾತ್ರವಲ್ಲ ವಿಮರ್ಶಾ ಕ್ಷೇತ್ರದಲ್ಲೂ ಕೂಡಾ ಇಂದಿನ ಮಹಿಳಾ ಸಾಹಿತ್ಯದ ವಿಮರ್ಶೆ, ಹಳೆಯ ಕೃತಿಗಳ ಮರುಓದನ್ನು ಸ್ತ್ರೀವಾದೀ ದೃಷ್ಟಿಕೋನದಲ್ಲಿ ಮಾಡುವ ಬಗೆ ಕೃತಿಯ ಹಿಂದಿನ ತಾತ್ವಿಕತೆ, ರಾಜಕಾರಣವನ್ನು ಬಯಲಿಗೆಳೆಯುತ್ತದೆ. ಯು. ಮಹೇಶ್ವರಿ ಅವರ 'ಇದು ಮಾನುಷಿಯ ಓದು' ಮುಂತಾದ ಕೃತಿಗಳು ಈ ಬಗೆಯವು. ಹಾಗೆಯೇ ಡಿ.ಎಚ್. ಲಾರೆನ್ಸ್‌ನ ಕೃತಿಗಳನ್ನು ಕೇಟ್ ಮಿಲೆಟ್ ಮರುಪರಿಶೀಲನೆ ಮಾಡುವವರೆಗೂ ಅದನ್ನು ಈ ಬಗೆಯಲ್ಲಿ ಓದುವ ಸಾಧ್ಯತೆ ತಿಳಿದಿರಲಿಲ್ಲ. ಪಂಪನ ಕೃತಿಗಳಿಂದ ಹಿಡಿದು ಬೇಂದ್ರೆಯವರ ಸಖಿಗೀತದವರೆಗೂ ಕೂಡಾ ಹೆಣ್ಣು ಇಲ್ಲೆಲ್ಲ ಹೇಗೆ ಪುರುಷನಿಗೆ 'ಸಬಾರ್ಡಿನೇಟ್' ಅನ್ನುವ ರೀತಿಯಲ್ಲೇ ಚಿತ್ರಿತವಾಗಿದ್ದಾಳೆ ಎನ್ನುವುದನ್ನು ಈ ಬಗೆಯ ವಿಮರ್ಶೆ ಹೊರತರುವ ಕೆಲಸ ಮಾಡಿದೆ. ಜತೆಗೇ ಸ್ತ್ರೀವಾದೀ ಸಂವೇದನೆಯ ಅಭಿವ್ಯಕ್ತಿ ಅಥವಾ ವಿಮರ್ಶೆ ಕೇವಲ ಮಹಿಳೆಯ ಮೇಲೆ ಆಗುತ್ತಿರುವ ಶೋಷಣೆ ಅಥವಾ ಮಹಿಳೆಯನ್ನು ಅನ್ಯವಾಗಿ ನೋಡುತ್ತಿರುವುದರ ಶೋಧನೆ ಮಾತ್ರ ಎಂದುಕೊಂಡಾಗ ಸತ್ವವನ್ನು ಪೂರ್ಣವಾಗಿ ಗ್ರಹಿಸಿದಂತಾಗುವುದಿಲ್ಲ. ಮಹಿಳೆಯ ವಿಶಿಷ್ಟ ಮನೋಲೋಕದ ಚಿತ್ರಣ ಇಲ್ಲಿ ಬಹುಮುಖ್ಯವಾಗುತ್ತದೆ.
ಪುರುಷರಿಗೆ ಅಕ್ಷರ ಅನುಭವದ ಅಭಿವ್ಯಕ್ತಿಗೆ ಮಾಧ್ಯಮ ಮಾತ್ರವಾದರೆ ಸ್ತ್ರೀಗೆ ಅದು ಅಭಿವ್ಯಕ್ತಿಯ ಮಾಧ್ಯಮದ ಜೊತೆಗೆ ಬಹುಮುಖ್ಯವಾಗಿ ಸ್ವಾತಂತ್ರ್ಯದ ದಾರಿಯೂ ಆಗಿದೆ. ಯಾವುದನ್ನು ನೇರವಾಗಿ ಹೇಳಿ ಪ್ರತಿಭಟಿಸುವುದಕ್ಕೆ ಸಾಧ್ಯವಿಲ್ಲವೋ ಅದನ್ನು ಅಕ್ಷರದಲ್ಲಿ ಮೂಡಿಸಿ ಆಕೆ ಹಗುರಾಗುತ್ತಾಳೆ. ಹೀಗೆಂದ ಮಾತ್ರಕ್ಕೆ ಮಹಿಳಾ ಸಾಹಿತ್ಯಕ್ಕೆ ಯಾವುದೇ ರಿಯಾಯಿತಿ ಬೇಕೆಂದಾಗಲೀ ಅಥವಾ ಬರೆದುದೆಲ್ಲವೂ ಶ್ರೇಷ್ಠವೇ ಎಂದಲ್ಲ. ಪುರಷರು ಬರೆದ ಸಾಹಿತ್ಯ ಕೃತಿಗಳಂತೆಯೇ ಮಹಿಳಾ ಸಾಹಿತ್ಯ ಕೃತಿಗಳ ಪೈಕಿ ಗಟ್ಟಿಯೂ ಸಿಗುತ್ತದೆ, ಜೊಳ್ಳೂ ದೊರಕುತ್ತದೆ. ಆದರೂ, ಕೆಲವೊಂದು ಸಂದರ್ಭದಲ್ಲಿ ವಿಭಾಗಗಳಾಚೆ ನೋಡಬೇಕಾಗಿ ಬರಬಹುದು. ಏಕೆಂದರೆ ಕೃತಿ ತನ್ನೊಳಗೆ ಓದಿನ ಅನೇಕ ಸಾಧ್ಯತೆಗಳನ್ನು ಹುದುಗಿಸಿಕೊಂಡಿರುತ್ತದೆ. ದಲಿತ ಸಾಹಿತ್ಯಕ್ಕೂ ಇದೇ ಮಾತನ್ನು ಅನ್ವಯಿಸಿ ನೋಡಬಹುದಾಗಿದೆ. ಯಾವುದೇ ಪೂರ್ವಗ್ರಹಗಳಿಲ್ಲದೇ ಸಾಹಿತ್ಯಿಕ ಮೌಲ್ಯವನ್ನು ಮತ್ತು ಸಂವೇದನೆಯ ವೈಶಿಷ್ಟ್ಯವನ್ನು ಗುರುತಿಸುವುದು ಮುಖ್ಯ. ಹಾಗೆಯೇ ಕೃತಿ ತನ್ನ ಅರ್ಥೈಕೆಗೆ ಬೇಕಾದ ಆವರಣವನ್ನು ತಾನೇ ನಿರ್ಮಿಸುವುದೂ ಇದೆ. ಆದರೆ ಸಾಮಾನ್ಯ ಸಂದರ್ಭಗಳಲ್ಲಿ ಕೃತಿಯೊಂದರ ತಾತ್ವಿಕತೆಯನ್ನು ಅರ್ಥಮಾಡಿಕೊಳ್ಳಲು ಪ್ರತ್ಯೇಕವಾಗಿ ನೋಡುವ ಅಗತ್ಯ ಇದ್ದೇ ಇದೆ. ಹೀಗೆ ನೋಡದೇ ಹೋದಲ್ಲಿ ಅನೇಕ ಸಲ ಆ ಕೃತಿಯ ಗಹನತೆಯನ್ನು ಅರಿವಿಗೆ ತಂದುಕೊಳ್ಳದೇ ಅಡುಗೆಮನೆಯ ಸಾಹಿತ್ಯ ಎನ್ನುವ ರೀತಿಯಲ್ಲಿ ಸರಳೀಕೃತ ತೀರ್ಮಾನಕ್ಕೆ ಬರುವ ಅಪಾಯವಿರುತ್ತದೆ.
ಟಿಎಸ್‌ಐ |