|
| ಪಾಲ್ ಕ್ರುಗ್ಮನ್ |
ಅರ್ಥಶಾಸ್ತ್ರಜ್ಞ,
’ದ ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ |
ಅಡ್ಲಾಯಿ ಸ್ಟೀವನ್‌ಸನ್ 1956ರಲ್ಲಿ ಅಧ್ಯಕ್ಷ ಪದವಿಯ ಆಕಾಂಕ್ಷಿಯಾಗಿದ್ದಾಗ ಅಂದಿನ ಅಧ್ಯಕ್ಷ ಡ್ವೈಟ್ ಐಸೆನ್‌ಹೋವರ್ ಅಧಿಕಾರಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ಅವರ ಕಾರ್ಯ ವೈಖರಿಯನ್ನೇ ಟೀಕೆಯ ಪ್ರಮುಖ ವಿಷಯವನ್ನಾಗಿಸಲು ಯತ್ನಿಸಿದ್ದರು. ಆ ಅವಧಿಯಲ್ಲಿ ಅಮೆರಿಕ ಆತಂಕ, ಅವಮಾನ, ಪೊಳ್ಳು ಭರವಸೆಗಳಿಂದ ತುಂಬಿದ 'ನಿಕ್ಸನ್ ನಾಡು' ಆಗುವ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದರು.
ಈ ಹೇಳಿಕೆ, ಶೀಘ್ರದಲ್ಲೇ ಪ್ರಕಟವಾಗಲಿರುವ 'ಬಿಫೋರ್ ದಿ ಸ್ಟಾರ್ಮ್'ನ ಲೇಖಕ ರಿಕ್ ಪರ್ಲ್‌ಸ್ಟೀನ್ ಅವರು ಬರೆದ, 1964ರಿಂದ 1922ರವರೆಗಿನ ರಾಜಕೀಯ ಇತಿಹಾಸ ಗ್ರಂಥ 'ನಿಕ್ಸನ್‌ಲ್ಯಾಂಡ್'ನಲ್ಲಿದೆ. ಈ ಗ್ರಂಥದಲ್ಲಿ ಪರ್ಲ್‌ಸ್ಟೀನ್ ಅವರು, ಸ್ಟೀವನ್‌ಸನ್ ಎಚ್ಚರಿಕೆ ವ್ಯರ್ಥಾಲಾಪ ಎನ್ನುತ್ತಾರೆ: ಏಕೆಂದರೆ ಆ ಅವಧಿಯಲ್ಲಿ ಅಮೆರಿಕ ಅವಮಾನ, ಭಯ ಮತ್ತು ದ್ವೇಷ ರಾಜಕಾರಣದ ನಾಡಾಗಿ ಪರಿವರ್ತಿತವಾಗೇಬಿಟ್ಟಿತು. ಅದು ಇಂದಿಗೂ ಮುಂದುವರಿದಿದೆ. ನಿಜ ಹೇಳಬೇಕೆಂದರೆ ಇಂದು ಡೆಮಾಕ್ರೆಟಿಕ್ ಪಕ್ಷ ಕೂಡಾ ನಿಕ್ಸನ್ ನಾಡಾಗಿ ಬದಲಾಗುತ್ತಿರುವಂತೆ ಭಾಸವಾಗುತ್ತಿದೆ.
ಡೆಮಾಕ್ರೆಟಿಕ್ ನಾಮನಿರ್ದೇಶನಕ್ಕಾಗಿ ನಡೆಯುತ್ತಿರುವ ಜಿದ್ದಾ ಜಿದ್ದಿನ ಸ್ಪರ್ಧೆ ತೀರಾ ತುರುಸಿನದ್ದು. ಈಗ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ಕೂಡಾ ಬುದ್ಧಿವಂತರಾಗಿದ್ದು ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ. ಇಬ್ಬರೂ ಪ್ರಗತಿಪರ ಯೋಜನೆಗಳ ಪ್ರಸ್ತಾವ ಮಂಡಿಸಿದ್ದಾರೆ. (ಆದರೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿ ಸಾಧಿಸುವಲ್ಲಿ ಹಿಲರಿ ಹೆಚ್ಚು ಗಂಭೀರವಾಗಿದ್ದಾರೆ. ಅತ್ತ ಬಾರಕ್ ಒಬಾಮ ಈ ಹೊಣೆ ನಿರ್ವಹಿಸುವಲ್ಲಿ ಕೊಂಚ ಎಡವಿರುವುದು ಅವರ ಪ್ರಯತ್ನಗಳನ್ನು ದುರ್ಬಲಗೊಳಿಸಿದೆ).ಇಬ್ಬರೂ ಡೆಮಾಕ್ರೆಟಿಕ್ ಪಕ್ಷದ ಬೇರುಮಟ್ಟದ ಕಾರ್ಯಕರ್ತರ ಬೆಂಬಲ ಪಡೆದಿದ್ದಾರೆ. ಮತದಾರರಿಂದಲೂ ಉತ್ತಮ ಪ್ರತಿಕ್ರಿಯೆಯನ್ನೇ ಪಡೆದಿದ್ದಾರೆ. ಇವರಿಬ್ಬರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯಾರೊಬ್ಬರಿಗೇ ಒಪ್ಪಿಗೆ ದೊರೆತರೂ, ಆ ಸ್ಪರ್ಧಿಯ ಪರ ಪ್ರಚಾರ ಮಾಡಲು ಇಬ್ಬರ ಬೆಂಬಲಿರಿಗೂ ಯಾವುದೇ ಸಮಸ್ಯೆ ಇಲ್ಲ.
ಹೀಗಿರುವಾಗ ಪ್ರಚಾರ ಕಣದಲ್ಲಿ ಈ ಸ್ಪರ್ಧಿಗಳ ನಡುವೆ ಅಷ್ಟೊಂದು ಮತ್ಸರ ಮೂಡಿರಲು ಕಾರಣವೇನು?
ನಾನು ಖೊಟ್ಟಿ ನ್ಯಾಯ ಹೇಳಲು ಬಯಸುವುದಿಲ್ಲ: ನಾನು ಕಂಡಂತೆ ಮತ್ಸರದ ಅಲೆಯ ಬಿರುಸು ಹೆಚ್ಚಾಗಿರುವುದು ಒಬಾಮ ಬೆಂಬಲಿಗರಲ್ಲೇ. ತಮ್ಮ ನಾಯಕನನ್ನು ಬಿಟ್ಟು ಇತರರು ಆಯ್ಕೆಯಾಗುವುದನ್ನು ಅವರು ಬಯಸುವುದಿಲ್ಲ. ಒಬಾಮ ಅವರ ಚುನಾವಣಾ ಪ್ರಚಾರದ ವೈಖರಿ ಒಬ್ಬ ವ್ಯಕ್ತಿಯನ್ನು ಆರಾಧ್ಯದೈವದ ಮಟ್ಟಕ್ಕೇರಿಸುವ ಅಪಾಯಕಾರಿ ಹಂತ ತಲುಪುತ್ತಿದೆ. ಇದನ್ನು ಗುರುತಿಸಿದವರಲ್ಲಿ ನಾನೇನು ಮೊದಲಿಗನಲ್ಲ. ಈಗಾಗಲೇ ಬುಷ್ ಆಡಳಿತದಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣವನ್ನು ನಾವು ಕಂಡಿದ್ದೇವೆ. (ಆಪರೇಷನ್ ಫ್ಲೈಟ್ ಸೂಟ್ ನೆನಪಿದೆಯೆ?) ಮತ್ತೊಮ್ಮೆ ಅಂಥ ಸ್ಥಿತಿಯನ್ನು ಯಾರೂ ಬಯಸುವುದಿಲ್ಲ.
ಇಲ್ಲಿ ನಿಜವಾಗಿಯೂ ಬೇಸರ ತರುವ ಸಂಗತಿಯೆಂದರೆ, ಒಬಾಮ ಬೆಂಬಲಿಗರು 'ಕ್ಲಿಂಟನ್ ನಿಯಮ' (ಕ್ಲಿಂಟನ್ ಮಾಡುವ ಕಾರ್ಯ ಹಾಗೂ ನೀಡುವ ಹೇಳಿಕೆಗಳಿಗೆ ಹಲವಾರು ತಜ್ಞರು ಹಾಗೂ ವಾರ್ತಾ ಸಂಸ್ಥೆಗಳು ಹೆಸರಿಸಿರುವ ಪದ) ಎಷ್ಟೇ ಸೌಮ್ಯವಾಗಿದ್ದರೂ, ಅದನ್ನು ಕೆಟ್ಟದ್ದೆಂದೇ ಪರಿಗಣಿಸುವುದು.
1990ರಲ್ಲಿ 'ವೈಟ್‌ವಾಟರ್' ಪ್ರಕರಣವನ್ನು ಪತ್ರಿಕೆಗಳು ಬಿಂಬಿಸಿದ ಬಗೆಯೇ 'ಕ್ಲಿಂಟನ್ ನಿಯಮ'ಕ್ಕೆ ಉತ್ತಮ ಉದಾಹರಣೆ ಎನ್ನಬಹುದು. ಒಂದು ಸಣ್ಣ, ವಿಫಲ ಭೂವ್ಯವಹಾರವೊಂದು ಬಹುವರ್ಷಗಳ, ಬಹುಮಿಲಿಯನ್ ಡಾಲರ್ ಮೊತ್ತದ ತನಿಖೆಯೊಂದಕ್ಕೆ ಕಾರಣವಾಯಿತು. ಆದರೆ ಇದು ಕ್ಲಿಂಟನ್ ವಿರುದ್ಧ ಯಾವುದೇ ಪುರಾವೆ ಒದಗಿಸಲಿಲ್ಲ. ಆದರೂ ಈ ಹಗರಣ ಕ್ಲಿಂಟನ್ ಆಡಳಿತದ ಭ್ರಷ್ಟಾಚಾರ ಆರೋಪಕ್ಕೆ ಸಂಕೇತವಾಗಿಬಿಟ್ಟಿತು.
ಪ್ರಸ್ತುತ ಪ್ರಚಾರದ ಸಂದರ್ಭದಲ್ಲಿ ಹಿಲರಿ ಕ್ಲಿಂಟನ್ ಅವರ ತರ್ಕಬದ್ಧ ಪ್ರತಿಕ್ರಿಯೆಗಳು ಲಿಂಡನ್ ಬಿ ಜಾನ್ಸನ್ ಅವರ (ಅಮೆರಿಕದ ಮಾಜಿ ಅಧ್ಯಕ್ಷ) ರಾಜನೀತಿಯ ದಿಟ್ಟತನ ಮತ್ತು ಚಾಣಾಕ್ಷತೆಯನ್ನು ಒಳಗೊಂಡಿದ್ದು; ಜೊತೆಗೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಕನಸುಗಳನ್ನು ಸಾಕಾರಗೊಳಿಸುವಂತೆ ಇವೆ. ಆದರೂ ಆ ಹೇಳಿಕೆಗಳನ್ನು ಲೂಥರ್ ಕಿಂಗ್‌ನಿಗೆ ಅಪಮಾನ ಮಾಡಿದವೆಂದು ಬಿಂಬಿಸಲಾಗಿದೆ. ಈಚೆಗೆ ಎಂಎಸ್‌ಎನ್‌ಬಿಸಿ ಸುದ್ದಿ ಸಂಸ್ಥೆಯ ಡೇವಿಡ್ ಶಸ್ಟರ್ ಅವರ ಟೀಕೆಯನ್ನೇ ನೋಡಿ: ತನ್ನ ತಾಯಿಯ ಚುನಾವಣಾ ಪ್ರಚಾರದಲ್ಲಿ ಚೆಲ್ಸಿಯಾ ಕ್ಲಿಂಟನ್ ಭಾಗಿಯಾಗಿರುವುದನ್ನು ಉಲ್ಲೇಖಿಸಿ ಆತ ಇದು ಅಪರೂಪವಾಗಿ ಕಾಣುವುದಿಲ್ಲವೇ ಎನ್ನುತ್ತಾನೆ. ಹಾಗೆ ನೋಡಿದರೆ ಅಧ್ಯಕ್ಷ ಅಭ್ಯರ್ಥಿಯ ಮಕ್ಕಳು ಪ್ರಚಾರದಲ್ಲಿ ಕಾಣಿಸಿಕೊಳ್ಳುವುದು ಅಪರೂಪವೇನಲ್ಲ. ಸುದ್ದಿ ಸಂಸ್ಥೆ ಶಸ್ಟರ್‌ನನ್ನು ಅಮಾನತುಗೊಳಿಸಿದೆ, ಆ ಮಾತು ಬೇರೆ. ಆದರೆ ಹಿಲರಿ ಚುನಾವಣಾ ಪ್ರಚಾರ ಎಷ್ಟೆಲ್ಲಾ ಸುದ್ದಿಗೆ ಕಾರಣವಾಗುತ್ತದೆ ನೋಡಿ!
ನಾನು ಇಂಥವುಗಳನ್ನು ಕ್ಲಿಂಟನ್ ನಿಯಮಗಳೆಂದೇ ಕರೆಯುತ್ತೇನೆ. ಆದರೆ ಇವುಗಳ ಸ್ವರೂಪ ಕ್ಲಿಂಟನ್ ಕುಟುಂಬದ ವ್ಯಾಪ್ತಿಯನ್ನೂ ಮೀರಿ ನಿಲ್ಲುತ್ತದೆ. ಉದಾಹರಣೆಗೆ 2000ದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಲ್‌ಗೋರ್ ಅವರು ಕ್ಲಿಂಟನ್ ನಿಯಮಗಳಿಗೆ ತುತ್ತಾದರು. ಅವರು ಹೇಳಿದ ಹಾಗೂ ಹೇಳದೇ ಇದ್ದ ವಿಚಾರಗಳೂ ಅವರ ಚಾರಿತ್ರ್ಯವಧೆಗೆ ಕಾರಣವಾಗುತ್ತಿತ್ತು.
ಈಗಿನ ಸ್ಥಿತಿಗೆ ಹೋಲಿಸುವುದಾದರೆ ಕ್ಲಿಂಟನ್ ನಿಯಮಗಳು ಒಬಾಮ ಪರವಾಗಿ ಕೆಲಸಮಾಡುತ್ತಿವೆ. ಇಷ್ಟಾದರೂ ಅವರ ಬೆಂಬಲಿಗರಿಗೆ ತೃಪ್ತಿಯಾದಂತಿಲ್ಲ.
ಒಂದು ವಿಷಯ, ಹಿಲರಿ ಕ್ಲಿಂಟನ್ ಈಗ ಕೇವಲ ನಾಮಕರಣ ಗೊಂಡಿರುವ ಅಭ್ಯರ್ಥಿಯಾಗಿರಬಹುದು. ಆದರೆ ಒಬಾಮ ಬೆಂಬಲಿಗರು ತಮ್ಮ ನಾಯಕನ 'ಮೂರ್ತಿಪೂಜೆ'ಯನ್ನೂ ಮೀರಿ ಮುಂದುವರಿದಲ್ಲಿ ಮುಂದಿನ ನವಂಬರ್‌ನಲ್ಲಿ ಆಕೆ ಗೆಲ್ಲುವುದನ್ನು ಕಣ್ಣಾರೆ ಕಾಣಬೇಕಾದೀತು. ಇನ್ನು ಇತಿಹಾಸ ಅವಲೋಕಿಸಿ ಹೇಳುವುದಾದರೆ, ಒಂದು ವೇಳೆ ಒಬಾಮ ಅಭ್ಯರ್ಥಿಯಾಗಿ ನಾಮಕರಣಗೊಂಡರೆ, ತಕ್ಷಣ ಆತನೂ ಡೆಮಾಕ್ರೆಟ್ ಸಂಪ್ರದಾಯದಂತೆ ಕ್ಲಿಂಟನ್ ನಿಯಮಗಳಿಗೆ ತುತ್ತಾಗುತ್ತಾನೆ.
ಆದರೆ ನಮಗೆ ಈಗ ಬೇಕಾಗಿರುವುದು ನಿಕ್ಸನ್ ನಾಡಲ್ಲ ಎಂಬುದನ್ನು ಎಲ್ಲಾ ಪ್ರಗತಿಪರರು ಅರಿತುಕೊಳ್ಳಬೇಕು. ಜನಾಂಗೀಯ, ಮಹಿಳಾ ವಿರೋಧಿ ನೀತಿ, ಮತ್ತು ಚಾರಿತ್ರ್ಯವಧೆಯಂತಹ ತಂತ್ರಗಳು ಮತದಾರರ ಗಮನವನ್ನು ಬೇರೆಡೆಗೆ ಸೆಳೆಯುತ್ತವಷ್ಟೆ. ಆದರೆ ಪ್ರಜ್ಞಾವಂತ ನಾಗರಿಕರು ದ್ವೇಷದ ರಾಜಕೀಯವನ್ನು ಎಂದಿಗೂ ಒಪ್ಪುವುದಿಲ್ಲ.
ಕಳೆದ ತಿಂಗಳು, ಈ ಅಧ್ಯಕ್ಷೀಯ ಚುನಾವಣೆಯ ಭರವಸೆಯ ಕ್ಷಣವೊಂದು ಕಂಡುಬಂತು: ಅದು ಒಬಾಮ ಒಬ್ಬ ರಹಸ್ಯ ಮುಸ್ಲಿಮ್ ಆಗಿದ್ದರು ಎಂಬ ವ್ಯಾಪಕ ಪ್ರಚಾರವನ್ನು ಖಂಡಿಸುವಂತಹ ಪತ್ರಕ್ಕೆ ಯಹೂದಿ ನಾಯಕರೆಲ್ಲರೂ ಸಹಿ ಹಾಕಿದ ಸಂದರ್ಭ. ಅವರಲ್ಲಿ ಕೆಲವು ನಾಯಕರು ಒಬಾಮ ಅಧ್ಯಕ್ಷರಾಗುವುದಿಲ್ಲವೆಂಬ ಭರವಸೆ ಹೊಂದಿದ್ದರೆನ್ನುವುದೂ ಉತ್ತಮ ಊಹೆಯೇ. ಅದೇನೆ ಇದ್ದರೂ ಅವರಿಗೆ ಅಲ್ಪಾವಧಿಯ ರಾಜಕೀಯ ಲಾಭಕ್ಕಿಂತಲೂ ಮೌಲ್ಯಗಳು ಅತಿ ಮುಖ್ಯ ಎನ್ನುವುದು ಅರಿವಾಗಿದೆ. ನಾನು ಇಂತಹ ಕ್ಷಣಗಳನ್ನು ಇನ್ನಷ್ಟು ನೋಡಲು ಇಚ್ಚಿಸುತ್ತೇನೆ.
ಪ್ರಾಯಶಃ ಡೆಮಾಕ್ರೆಟ್‌ನ ಇಬ್ಬರೂ ಅಭ್ಯರ್ಥಿಗಳು, ತಮ್ಮ ಪ್ರತಿಸ್ಪರ್ಧಿಯನ್ನು ಗೌರವಿಸುವ ಹಾಗೂ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವ ಭರವಸೆ ನೀಡುವ ಮೂಲಕ ಇದಕ್ಕೆ ನಾಂದಿ ಹಾಡಬಹುದು.
ಟಿಎಸ್‌ಐ |