ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಿಚ್ಚು ಮಾತು :ಜೋಧಾ ಅಕ್ಬರ್
ಬೆಳ್ಳಿ ತೆರೆಯ ಅದ್ಭುತ ಕಲಾಕೃತಿ ಮೂಡಿದ ಪರಿ ಜೋಧಾ ಅಕ್ಬರ್
 

''ಲಗಾನ್' ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ನಿರ್ದೇಶಕ ಆಶುತೋಷ್ ಗೋವಾರೀಕರ್ ಈ ಬಾರಿ 'ಜೋಧಾ-ಅಕ್ಬರ್' ಕಲಾಕೃತಿಯನ್ನು ಮೂಡಿಸಿದ್ದಾರೆ. 16ನೇ ಶತಮಾನದ ಪರಾಕ್ರಮಿ ಮೊಘಲ್ ದೊರೆ ಮತ್ತು ಅವಿಧೇಯ ರಜಪೂತ ರಾಜಕುಮಾರಿ ನಡುವಿನ ಪ್ರೇಮ ಸಂಬಂಧದ ಮಹಾಕಾವ್ಯವೇ 'ಜೋಧಾ ಅಕ್ಬರ್'. ಟಿಎಸ್‌ಐನ ಪ್ರಸಿದ್ಧ ಮೆನನ್ ಜೊತೆ ಈ ಚಿತ್ರದ ತ್ರಿಮೂರ್ತಿಗಳು ಮನಬಿಚ್ಚಿ ಮಾತನಾಡಿದ್ದಾರೆ

ಆಶುತೋಷ್ ಗೋವಾರೀಕರ್, ಪರಿಪೂರ್ಣತೆಯ ಅನ್ವೇಷಕ

''ಜೋಧಾ ಅಕ್ಬರ್' ಚಿತ್ರಕ್ಕಾಗಿ ನಡೆಸಿದ ಅಧ್ಯಯನ, ಸಿದ್ಧತೆಗಳು...

'ಜೋಧಾ ಅಕ್ಬರ್' ಈಗಾಗಲೇ ಇತಿಹಾಸದಲ್ಲಿ ಬೇರೂರಿರುವ ನೈಜ ಕಥಾನಕ. ಆಗ್ರಾ ನಮ್ಮೆದುರಲ್ಲೇ ಇದೆ. ಅಮೀರ್ ಅರಮನೆಯೂ ನಮ್ಮ ಕಣ್ಮುಂದೆ ಇದೆ. ಇತಿಹಾಸದ ಮೈಲಿಗಲ್ಲುಗಳಾಗಿ ಮೊಘಲ್ ಆಡಳಿತದ ಕುರುಹುಗಳೆಲ್ಲ ನಮ್ಮೆದುರಿಗಿವೆ. ಹೀಗಾಗಿ ಜನರನ್ನು ಮೂರ್ಖರನ್ನಾಗಿಸುವುದಂತೂ ಸಾಧ್ಯವಾಗದ ಕಾರ್ಯ. ಇತಿಹಾಸವನ್ನು ಬದಲಾಯಿಸುವ ಸ್ವಾತಂತ್ರ್ಯವನ್ನು ನಾನು ತೆಗೆದುಕೊಂಡಿಲ್ಲ ಅಥವಾ ಈ ವಿಚಾರಗಳ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದೂ ಸಾಧ್ಯವಿಲ್ಲ. ಹೀಗಾಗಿ ಈ ಚಿತ್ರಕ್ಕೆ ಹಿಂದಿನ 'ಲಗಾನ್' ಅಥವಾ 'ಸ್ವದೇಶ್' ಚಿತ್ರಗಳಿಗಿಂತ ಹೆಚ್ಚಿನ ತಯಾರಿ ಅಗತ್ಯವಿತ್ತು. ನನ್ನ ಇತಿಹಾಸ ಜ್ಞಾನದಲ್ಲಿ ಎಳ್ಳಷ್ಟೂ ತಪ್ಪು ಸುಳಿಯುವಂತಿರಲಿಲ್ಲ. ಹೀಗಾಗಿ ನಾನು 'ಮೊಘಲ್ ಇತಿಹಾಸ' ಮತ್ತು 'ರಜಪೂತ ಇತಿಹಾಸ' ಎರಡನ್ನೂ ಓದಿಕೊಂಡಿದ್ದೆ. ಘಟನೆಗಳ ಬಗ್ಗೆ ಮಾತ್ರವಲ್ಲ, ಆ ಕಾಲದ ವಾಸ್ತುಶಿಲ್ಪ, ವಸ್ತ್ರವಿನ್ಯಾಸ, ಉಪಕರಣಗಳು, ಯುದ್ಧ ಕಾರ್ಯತಂತ್ರಗಳು, ನಿಯಮಾವಳಿಗಳು ಹೀಗೆ ಚಿತ್ರಕ್ಕೆ ಅಗತ್ಯವೆನಿಸಿದ ಎಲ್ಲ ವಿವರಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದ್ದೆ.

ಅಂದರೆ, ಒಬ್ಬ ಚಿತ್ರ ನಿರ್ದೇಶಕರಾಗಿ ನಿಮ್ಮ ಪರಿಧಿ ತುಂಬಾ ಸೀಮಿತವಾದಂತೆ ಅನಿಸುತ್ತಿದೆಯೆ?

ಇಲ್ಲ. ನನ್ನ ಕೆಲಸ ಇನ್ನೂ ಸರಳವಾಗಿದೆ ಅಷ್ಟೆ. ವಿವರಗಳು ಈಗಾಗಲೇ ಲಭ್ಯವಿದ್ದ ಕಾರಣ ಅದನ್ನು ನಮ್ಮ ಕಲ್ಪನೆಯ ಮೂಲಕ ಸೃಷ್ಟಿಸುವ ಅಗತ್ಯ ಬರಲಿಲ್ಲ. 'ಲಗಾನ್' ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಧ್ವಜದ ಚಿತ್ತಾರ, ಲಾಂಛನ ಹೀಗೆ ಪ್ರತಿಯೊಂದೂ ನನ್ನ ಕಲ್ಪನೆಯ ಕೂಸಾಗಿತ್ತು. ಪ್ರತಿ ಪುಟ್ಟ ವಿಷಯದಲ್ಲೂ ಸೃಜನಶೀಲ ಚಿಂತನೆ ಅಗತ್ಯವಿತ್ತು. ಆದರೆ ಈ ಬಾರಿ ಇಂಥ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಚಿಂತಿಸಲೇ ಇಲ್ಲ. ಅಬುಲ್ ಫಜಲ್ ಅವರ 'ಅಕ್ಬರ್‌ನಾಮಾ' ಮತ್ತು 'ಆಯಿನ್-ಎ-ಅಕ್ಬರಿ' ಗ್ರಂಥದಲ್ಲಿ ಎಲ್ಲವೂ ದಾಖಲಾಗಿದೆ. ಹೀಗಾಗಿ ಅಕ್ಬರ್ ಧರಿಸಿದ ಕವಚವನ್ನು ಹೊಸದಾಗಿ ಸಿದ್ಧ ಪಡಿಸುವ ಆವಶ್ಯಕತೆ ಬರಲಿಲ್ಲ. ಅಲ್ಲೇನು ವಿವರಗಳಿದ್ದವೋ ಅವುಗಳನ್ನೇ ಬಳಸಿಕೊಂಡೆ. ಸೂರ್ಯ ಮತ್ತು ಎರಡು ಸಿಂಹಗಳ ವಿವರ 'ಅಕ್ಬರ್‌ನಾಮಾ'ದಲ್ಲೇ ಇತ್ತು. ಗುರಾಣಿಯ ಗಾತ್ರ ಮತ್ತು ಈಟಿಯ ಉದ್ದ ಎಷ್ಟಿರಬೇಕು ಎಂಬ ಸೂಕ್ಷ್ಮ ವಿವರಗಳೂ ಇದ್ದವು. ಜಲಾಲ್ ಹಿಡಿಯುವ ಗುರಾಣಿಯ ವಿನ್ಯಾಸ ಸೂಕ್ತವಾದದ್ದು ಎಂದು ತಿಳಿದು ಅವುಗಳನ್ನೇ ಆರಿಸಿಕೊಂಡೆವು. ಇಂಥ ಮಾಹಿತಿಗಳ ಬಗ್ಗೆ ಇತಿಹಾಸದಲ್ಲಿ ವಿವರವಾದ ದಾಖಲೆಗಳನ್ನು ಹುಡುಕುವುದು ಕಷ್ಟದ ಕೆಲಸವಲ್ಲ. ಆದರೆ ಜೋಧಾ ಮತ್ತು ಅಕ್ಬರ್ ನಡುವೆ ಹೇಗೆ ಪ್ರೇಮಾಂಕುರವಾಯಿತು ಎನ್ನುವ ಪ್ರಶ್ನೆಗೆ ಇತಿಹಾಸದಲ್ಲಿ ವಿವರಗಳಿಲ್ಲ. ಅದು ನನ್ನ ಕಲ್ಪನೆ! ಅವರಿಬ್ಬರ ಮೈತ್ರಿ, ಮೊದಲ ಭೇಟಿ, ವಿವಾಹಾನಂತರ ಆಕೆ ಮೊದಲ ಬಾರಿ ಆಗ್ರಾ ಕೋಟೆಗೆ ಬಂದದ್ದು, ಅಲ್ಲಿ ಆಕೆಯ ಅಂತಃಪುರದಲ್ಲಿ ಏನು ನಡೆದಿರಬಹುದು, ಹಾರೆಮ್ (ರಾಣಿವಾಸ) ರಾಜಕೀಯ, ಅಂಗುರಿ ಬಾಗ್ ಮತ್ತು ಅವರ ಮೊದಲ ಭೇಟಿ ಹೇಗಿದ್ದಿರಬಹುದು ಮುಂತಾದ ವಿವರಗಳೆಲ್ಲಾ ಕಾಲ್ಪನಿಕವೇ. ಅವರ ಪುತ್ರ ಜಹಾಂಗೀರ್ ಜನನದ ಬಗ್ಗೆ ನಮಗೆ ಗೊತ್ತೇ ಇದೆ. ಆದರೆ ಇಬ್ಬರ ಮಿಲನ ಹೇಗಾಯಿತು ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರವೇ ಇರಲಿಲ್ಲ. ಆದರೆ ನಾನು ಈ ಶೂನ್ಯವನ್ನು ತುಂಬಲೇಬೇಕಿತ್ತು. ಎ ಮತ್ತು ಸಿಯ ವಿವರಗಳು ಲಭಿಸದೆ ನಾನು ಬಿ ಹೇಗೆ ಬಂತು ಎಂದು ಹೇಳಲು ಸಾಧ್ಯವಿಲ್ಲ. ಬೇರೆ ದಾರಿ ಇಲ್ಲದೆ ಎ ಮತ್ತು ಸಿಯ ವಿವರಗಳನ್ನು ಸೃಷ್ಟಿಸಲೇಬೇಕಿತ್ತು.

ಈ ಚಿತ್ರದ ಬಗ್ಗೆ ರಾಶಿಗಟ್ಟಲೆ ಸುದ್ದಿಗಳು ಪ್ರಕಟವಾಗಿವೆ. ಕುತೂಹಲ ಮತ್ತು ವಿವಾದಕ್ಕೆ ಎಡೆ ಮಾಡಿಕೊಟ್ಟದ್ದೂ ಇದೆ. ಇಂತಹ ವಿವಾದಗಳು ಎಷ್ಟರ ಮಟ್ಟಿಗೆ ನಿಮ್ಮನ್ನು ಬಾಧಿಸುತ್ತವೆ ಮತ್ತು ಅವುಗಳನ್ನು ಹೇಗೆ ನಿಭಾಯಿಸುವಿರಿ?

ಪ್ರತಿ ಇತಿಹಾಸಕಾರನೂ ಸತ್ಯವನ್ನೇ ನುಡಿಯುತ್ತಿದ್ದಾನೆ ಎನ್ನುವ ಪ್ರಾಮಾಣಿಕ ಅಭಿಪ್ರಾಯ ನನ್ನದು. ಅಕ್ಬರ್‌ನನ್ನು ವಿವಾಹವಾದ ರಜಪೂತ ಕನ್ಯೆಯ ಹೆಸರು ಹರ್ಕಾಬಾಯಿ ಎನ್ನುವ ಇತಿಹಾಸಕಾರನೂ ಸತ್ಯವನ್ನೇ ಹೇಳುತ್ತಿದ್ದಾನೆ. ಹಾಗೇ ಆಕೆಯ ಹೆಸರು ಮನ್ಮತಿ ಎನ್ನುವುದೂ ನಿಜವೇ, ಶಾಹಿ ಬಾಯಿ ಅಥವಾ ಜಿಯಾ ರಾಣಿ ಎನ್ನುವುದೂ ಸರಿ. ಹಾಗೆಯೇ ಜೋಧಾ ಬಾಯಿ ಎನ್ನುವ ಹೆಸರೂ ಸರಿ. ಇತಿಹಾಸಜ್ಞರಲ್ಲೇ ಅಷ್ಟೊಂದು ಜಿಜ್ಞಾಸೆಗಳಿವೆ. ಪ್ರತಿಯೊಬ್ಬ ಇತಿಹಾಸಕಾರನೂ ಸಾಕಷ್ಟು ಅಧ್ಯಯನ ಮಾಡಿರುತ್ತಾನೆ. ಎಲ್ಲರೂ ಇತಿಹಾಸವನ್ನು ಓದಿದವರೇ. ಪ್ರತಿಯೊಬ್ಬರೂ ತಮ್ಮದೇ ಆದ ವಾದವನ್ನು ಮಂಡಿಸಿದ್ದಾರೆ. ಆದರೆ ಈ ಕುರಿತ ಚಿತ್ರ ನಿರ್ಮಿಸುವ ತೀರ್ಮಾನಕ್ಕೆ ಬಂದ ಮೇಲೆ ನಾನು ಜನಪ್ರಿಯ ಹೆಸರನ್ನೇ ಆರಿಸಿದೆ. ಮೊದಲಿಗೆ ನಾನು ಜೈಪುರ ಮಹಾರಾಜರ ವಂಶಸ್ಥರನ್ನು ಭೇಟಿಯಾದೆ. ಇವರು ಜೋಧಾ ಬಾಯಿ ಮನೆತನಕ್ಕೆ ಸೇರಿದವರು. ಅಂದರೆ 'ಕಛಾವಾ' ವಂಶಸ್ಥರು. ನಾನು ಇನ್ನೂ ಚಿತ್ರೀಕರಣವನ್ನೇ ಆರಂಭಿಸಿರಲಿಲ್ಲ, ಆಗಲೇ ಚಿತ್ರಕಥೆಯನ್ನು ರಾಜಮನೆತನದವರಿಗೆ ತೋರಿಸಿದ್ದೆ. ಅವರು ನನಗೆ ಜೋಧಾ ಹೆಸರನ್ನೇ ಸೂಚಿಸಿದರು. ಜೋಧಾ ನಮ್ಮ ವಂಶಕ್ಕೆ ಸೇರಿದವರು. ನಾವು ಆಕೆಯನ್ನು ಜೋಧಾ ಎಂದೇ ಕರೆಯ ಬಯಸುತ್ತೇವೆ ಎನ್ನುವುದು ರಾಜಮನೆತನದವರ ಹೇಳಿಕೆ. ಅಂತಿಮವಾಗಿ ಒಂದು ಹೆಸರನ್ನು ಆರಿಸಿದ ಮೇಲೂ ನಮಗೆ ಗೊಂದಲ ಇದ್ದೇ ಇತ್ತು. ಅದು ಜೋಧಾ ಬಾಯಿ ಅಥವಾ ಜೋಧ್ ಬಾಯಿ? 'ಮೋಟಾ ರಾಜ ಎಂದು ಕರೆಯಲಾಗುತ್ತಿದ್ದ ಮಹಾರಾಜ ಉದಯ್‌ಸಿಂಗ್ ಅವರ ಮಗಳು ಜೋಧ್' ಎಂದು ಜೆ. ಸರ್ಕಾರ್ ಅವರ 'ಜೈಪುರ ಇತಿಹಾಸ'ದಲ್ಲಿ ದಾಖಲಿಸಲಾಗಿದೆ. ಸರ್ಕಾರ್ ಅವರ ಪ್ರಕಾರ ಜೋಧ್‌ಳ ಮೂಲ ಹೆಸರು ಮೀರಾ ಬಾಯಿ. ಆಮೇಲೆ ಮಣಿ ಬಾಯಿ ಆಯಿತು. ನಂತರ ಆಕೆಯನ್ನು ಜೋಧ್ ಬಾಯಿ ಎಂದೂ ಕರೆಯಲಾಗುತ್ತಿತ್ತು. ಆದರೆ ಆಕೆ ಜೋಧ್. ಈ ಜೋಧ್ ಬಾಯಿ ಜಹಾಂಗೀರ್‌ನನ್ನು ಮದುವೆಯಾಗಿರಬಹುದು. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಜೋಧಾ ಬಾಯಿ ಬಗ್ಗೆ. ಒಂದೇ ರೀತಿಯ ಹೆಸರುಗಳು ಇತಿಹಾಸಜ್ಞರಲ್ಲಿ ಗೊಂದಲ ಸೃಷ್ಟಿಸಿರಬಹುದು. ಆದರೆ ಈ ಎಲ್ಲ ವಿವರಗಳ ಹೊರತಾಗಿಯೂ ನಾನು ರಜಪೂತರು, ರಾಜಸ್ಥಾನ ಮತ್ತು ರಜಪುತಾನರಲ್ಲಿ ಕೇಳಿಕೊಳ್ಳುವುದೊಂದೇ. ಈ ಚಿತ್ರದಲ್ಲಿ ಬಿಂಬಿಸಲಾದ ಕಾಲ್ಪನಿಕ ಸನ್ನಿವೇಶಗಳೂ ಹೊಣೆಯರಿತ ಕಲ್ಪನೆಗಳು. ರಜಪೂತರ ಘನತೆ, ಗೌರವ ಮತ್ತು ಹಿರಿಮೆಯನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಅದಕ್ಕೆ ಚ್ಯುತಿ ಮಾಡುವ ಉದ್ದೇಶ ಖಂಡಿತಾ ನನಗಿಲ್ಲ. ಈ ಚಿತ್ರದಲ್ಲಿ ಎರಡು ಸಂಸ್ಕೃತಿಗಳ ಸಮ್ಮಿಲನವನ್ನು ನಾನು ವಿವರಿಸ ಬಯಸಿದ್ದೇನೆ. ಹೇಗೆ ಜೋಧಾ ಮತ್ತು ಅಕ್ಬರ್ ಒಂದಾದರು ಎಂದು ತಿಳಿಸುತ್ತಿದ್ದೇನೆ. ಅವರ ನಡುವೆ ಹೇಗೆ ಪ್ರೇಮಾಂಕುರವಾಯಿತು ಎನ್ನುವುದು ನನ್ನನ್ನು ಆಕರ್ಷಿಸಿತ್ತು. ಹೀಗಾಗಿ ಇದು ಒಂದು ಚಲನಚಿತ್ರ ಅಷ್ಟೆ.

ಸರಿ, ಹೃತಿಕ್ ಮತ್ತು ಐಶ್ವರ್ಯಾ ಅವರನ್ನೇ ಅಕ್ಬರ್ ಮತ್ತು ಜೋಧಾ ಪಾತ್ರಕ್ಕೆ ಆರಿಸಿದ್ದೇಕೆ?

ಅತ್ತ ನೋಡಿ. (ಅಕ್ಬರ್ ಪಾತ್ರದಲ್ಲಿ ಹೃತಿಕ್ ಚಿತ್ರದ ಕಡೆ ಕೈ ತೋರಿಸುತ್ತಾ) ನಿಮಗೇನನ್ನಿಸುತ್ತದೆ. ಅವನು ಅಕ್ಬರ್‌ನಂತೆ ಕಾಣಿಸುತ್ತಿದ್ದಾನೆಯೆ (ನಗು)! ನಾವು ಅಕ್ಬರ್-ಬೀರಬಲ್‌ನಲ್ಲಿ 55 ವರ್ಷದ ಅಕ್ಬರ್‌ನನ್ನು ಕಾಣುತ್ತೇವೆ. ಹಾಗೇ ಮುಗಲ್-ಎ-ಅಜಮ್‌ನಲ್ಲಿ 60 ವರ್ಷದ ಮುದುಕ ಅಕ್ಬರ್‌ನನ್ನು ನೋಡಿದ್ದೇವೆ. ಆದರೆ ಈ ಚಿತ್ರದಲ್ಲಿ ಯುವ ಅಕ್ಬರ್‌ನನ್ನು ಟರ್ಕಿ ಹಿನ್ನೆಲೆ ಇರುವ ಯೋಧನ ರೂಪದಲ್ಲಿ ಕಾಣುವಿರಿ. ಆತನ ಕಣ್ಣುಗಳ ಆ ಹೊಳಪು, ಅನ್ವೇಷಣೆ, ತವಕ ಎಲ್ಲವನ್ನೂ ತೆರೆ ಮೇಲೆ ತರುವ ಪ್ರಯತ್ನಪಟ್ಟಿದ್ದೇನೆ. ಆಗ ಅವನು ಕೀರ್ತಿವೆತ್ತ ಮಹಾರಾಜನಾಗಿರಲಿಲ್ಲ. ತನ್ನ ಸುತ್ತಮುತ್ತಣ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸೂಕ್ತ ಹೆಜ್ಜೆಗಳನ್ನು ಇಡುವ ಪ್ರಯತ್ನದಲ್ಲಿದ್ದ ರಾಜನಾಗಿದ್ದ. ಈ ಎಲ್ಲ ಗುಣಗಳನ್ನು ಕೇಂದ್ರವಾಗಿರಿಸಿ ಗಮನಿಸಿದಾಗ ಮೊತ್ತ ಮೊದಲ ಬಾರಿ ನನ್ನ ಕಣ್ಣೆದುರು ಬಂದದ್ದು ಹೃತಿಕ್ ಮೈಕಟ್ಟು. ಎರಡನೆಯದಾಗಿ ಅವರ ಅಭಿನಯ. ಅವರೊಬ್ಬ ಅದ್ಭುತ ನಟ. ವಿಭಿನ್ನ ಪಾತ್ರಗಳ ಒಳಹೊಕ್ಕು ಅಭಿನಯಿಸುವ ಕಲೆ ಅವರಿಗೆ ಕರಗತ. 'ಕೋಯಿ ಮಿಲ್ ಗಯಾ' ಮತ್ತು 'ಕ್ರಿಷ್'ನಲ್ಲಿ ಹೃತಿಕ್ ಅದ್ಭುತ ಅಭಿನಯ ನೀಡಿದ್ದಾರೆ. ಚೊಚ್ಚಲ ಚಿತ್ರ 'ಕಹೋ ನಾ ಪ್ಯಾರ್ ಹೈ'ನಲ್ಲಿ ದ್ವಿಪಾತ್ರದಲ್ಲಿ ಅವರ ವಿಶಿಷ್ಟ ಅಭಿನಯವನ್ನು ಪ್ರಶಂಸಿಸದೆ ಇರಲು ಸಾಧ್ಯವೆ? ಸವಾಲೆನಿಸುವ ಅಭಿನಯವನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು ಎನ್ನುವ ವಿಶ್ವಾಸ ನನಗಿತ್ತು. ಅವರಲ್ಲಿ ಆ ಸಾಮರ್ಥ್ಯವಿದೆ. ನೋಡಿ ಆ ಚಿತ್ರದಲ್ಲಿ ಕಾಣುತ್ತಿರುವುದು ಅಕ್ಬರ್. ಮತ್ತಾರೂ ಅಲ್ಲ! ನನ್ನ ಅಭಿಪ್ರಾಯದ ಪ್ರಕಾರ ಮೈಕಟ್ಟು, ಪ್ರತಿಭೆ ಮತ್ತು ಉತ್ಸಾಹ ಎಲ್ಲದರಲ್ಲೂ ಅಕ್ಬರ್ ಪಾತ್ರಕ್ಕೆ ಸೂಕ್ತ ವ್ಯಕ್ತಿ ಹೃತಿಕ್ ಮಾತ್ರ. ಇನ್ನು ಐಶ್ವರ್ಯ ಆಯ್ಕೆ. 'ಔರ್ ಪ್ಯಾರ್ ಹೋಗಯಾ'ದಿಂದ 'ಚೋಕರ್ ಬಾಲಿ' ಚಿತ್ರದವರೆಗೆ ಐಶ್ವರ್ಯಾ ಅಭಿನಯಕ್ಕೆ ಅವಕಾಶವಿರುವ ಚಿತ್ರಗಳನ್ನೇ ಆರಿಸಿಕೊಳ್ಳುತ್ತಿದ್ದರು. ಜೊತೆ ಜೊತೆಗೆ ಮುಖ್ಯವಾಹಿನಿ ಚಿತ್ರಗಳಲ್ಲೂ ತೊಡಗಿಸಿಕೊಂಡಿದ್ದರು. ಹೀಗಾಗಿ ವಿಭಿನ್ನ ಚಿತ್ರಗಳಲ್ಲಿ ನಟಿಸುವ ಉತ್ಸಾಹ ಮತ್ತು ಸಾಮರ್ಥ್ಯ ಆಕೆಯಲ್ಲಿದೆ. ತನಗೆ ದೊರೆತ ಉತ್ತಮ ಅವಕಾಶಕ್ಕೆ ಅವರು ಯಾವತ್ತೂ ಒಲ್ಲೆ ಎಂದಿಲ್ಲ. ಪಾತ್ರಕ್ಕೆ ಎಂದಿಗೂ ಅನ್ಯಾಯ ಮಾಡಿಲ್ಲ. ಇದನ್ನು ನನಗೆ ಅವರು ಪರಿಚಯವಾದ ಮೊದಲ ದಿನದಿಂದಲೂ ಬಲ್ಲೆ. ಹೀಗಾಗಿ ಅವರ ಮೇಲೆ ನನಗೆ ತುಂಬಾ ಭರವಸೆ. ಹಿಂದಿನ ಜನ್ಮದಲ್ಲಿ ಐಶ್ವರ್ಯಾ ರಾಜಕುಮಾರಿಯಾಗಿದ್ದಿರಬಹುದು. ಆ ಘನತೆ-ಗಾಂಭೀರ್ಯ ಅವರಲ್ಲಿದೆ. ಜೋಧಾ ಪಾತ್ರದಲ್ಲಿ ಅವರದು ಸಹಜಾಭಿನಯ. ಆದರೆ ಆ ಸರಳ ಸೌಂದರ್ಯ ತೆರೆ ಮೇಲೆ ಅಷ್ಟು ಪರಿಣಾಮಕಾರಿಯಾಗಿ ತರಲಿಲ್ಲವೇನೋ ಎನ್ನುವ ಕೊರಗು ಇನ್ನೂ ನನ್ನನ್ನು ಕಾಡುತ್ತಿದೆ. ಅಭಿನಯ ಮತ್ತು ಸೌಂದರ್ಯ ಎರಡರ ಸಂಗಮವಾಗಿರುವ ಐಶ್ವರ್ಯಾ, ಜೋಧಾ ಪಾತ್ರಕ್ಕೆ ಸೂಕ್ತ. ಇದೇ ಕಾರಣಕ್ಕೆ ಇವರಿಬ್ಬರನ್ನು ಆರಿಸಿರುವೆ.

ನೀವು, ಹೃತಿಕ್ ಮತ್ತು ಐಶ್ವರ್ಯಾ ಹೊರತುಪಡಿಸಿ ಈ ಚಿತ್ರದಲ್ಲಿ ಹಲವು ಆಕರ್ಷಣೆಗಳಿವೆ. ಸಮರ್ಥ ಸಹನಟರು, ಶ್ರೇಷ್ಠ ಸಂಗೀತ, ಆಕರ್ಷಕ ಸೆಟ್. ಹಾಗಿದ್ದಲ್ಲಿ ಪ್ರೇಕ್ಷಕರು ಈ ಚಿತ್ರವನ್ನು ನೋಡಲೇಬೇಕಾದ ಒಂದು ಅಗತ್ಯವನ್ನು ತಿಳಿಸುವಿರಾ?

 ಇಲ್ಲ. ಹಾಗೆ ಹೇಳಲು ಸಾಧ್ಯವೇ ಇಲ್ಲ. ಚಿತ್ರದ ಯಾವುದೋ ಒಂದು ಸನ್ನಿವೇಶಕ್ಕೆ ಅಥವಾ ಪಾತ್ರಕ್ಕೆ ಮಾತ್ರ ಪ್ರಾಮುಖ್ಯತೆ ಕೊಡಬಾರದು. ಇಷ್ಟು ಮಾತ್ರ ಹೇಳುವೆ: ಚಿತ್ರಮಂದಿರಕ್ಕೆ ಬನ್ನಿ ಮತ್ತು 16ನೇ ಶತಮಾನದ ಅಮೋಘ ಜೀವನವನ್ನು ಅನುಭವಿಸಿ. ಈ ಚಿತ್ರದ ಒಡಲಾಳವೇ ಅದು.

 ಟಿಎಸ್‌ಐ

ಐಶ್ವರ್ಯಾ ಬಚ್ಚನ್, ಸದಾ ರಾಜಕುಮಾರಿ

ಪಯಣ: ಖಾಸಗಿ ಮತ್ತು ವೃತ್ತಿ ಜೀವನ

ಮದುವೆ? ವೃತ್ತಿ ಜೀವನದಿಂದ ತೆಗೆದುಕೊಂಡ ಒಂದು ಪುಟ್ಟ ಬ್ರೇಕ್. ಏನೂ ಬದಲಾವಣೆಯಾಗಿಲ್ಲ. ನೀವು ಅದೇ ಹಳೇ ಐಶ್ವರ್ಯಾ ಎಂಬ ಆಶುತೋಷ್ ಮಾತುಗಳೇ ನನಗೆ ಸಿಕ್ಕ ಅತಿ ದೊಡ್ಡ ಪ್ರಶಂಸೆ. ಮದುವೆಯ ತರುವಾಯ ನಾನು ಮತ್ತೆ ಆಶುತೋಷ್ ಅವರ ಚಿತ್ರೀಕರಣ ಸೆಟ್‌ಗೆ ತೆರಳಿದಾಗ ಅವರು ಈ ಮಾತು ಹೇಳಿದ್ದರು. ವಿವಾಹದ ತರುವಾಯ ಜನರು ಬದಲಾವಣೆ ನಿರೀಕ್ಷಿಸುತ್ತಾರೆ. ಆದರೆ ಚಲನಚಿತ್ರಗಳ ಮಟ್ಟಿಗೆ ಹೇಳಬೇಕೆಂದರೆ ರಾಜಮನೆತನದ ಜನಜೀವನದ ಅನುಭವ ಸಿಕ್ಕಿದ್ದಕ್ಕಾಗಿ ನಾನು ತುಂಬಾ ಉತ್ಸುಕಳಾಗಿರುವೆ.

ಆಶುತೋಷ್ ಕುರಿತು...

ಆಶುತೋಷ್ ಅವರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ವಿಶಿಷ್ಟ ಅನುಭವ. ಜೋಧಾ ಬಾಯಿ ಪಾತ್ರದ ಕುರಿತ ಅವರ ಉತ್ಸುಕತೆ ಮತ್ತು ಅದಕ್ಕಾಗಿ ಅವರು ನಡೆಸಿದ ಅಧ್ಯಯನಗಳಿಂದ ನನಗೆ ಬಹಳಷ್ಟು ಲಾಭವಾಗಿದೆ. ಅವರು ಅದೆಷ್ಟು ಅಧ್ಯಯನ ಮಾಡಿದ್ದಾರೆಂದರೆ ಈ ಪಾತ್ರಗಳ ಬಗ್ಗೆ ವಿವರ ಪಡೆಯಲು ಗ್ರಂಥಾಲಯಗಳಿಗೆ ಭೇಟಿ ನೀಡುವುದಾಗಲೀ ಅಥವಾ ವೈಯಕ್ತಿಕ ಅಧ್ಯಯನದ ಅವಶ್ಯಕತೆಯಾಗಲೀ ಬಂದಿರಲಿಲ್ಲ. ಎಲ್ಲಾ ವಿವರಗಳೂ ಅವರಲ್ಲೇ ಇದ್ದವು. ಆಶುತೋಷ್ ಈ ಮೊದಲೇ ಆ ಪಾತ್ರವನ್ನು ನನ್ನ ಮುಂದೆ ಸಂಪೂರ್ಣವಾಗಿ ತೆರೆದಿಟ್ಟಿದ್ದರು. ನಾನು ಆ ಚಿತ್ರಕಥೆಗೆ ಜೀವ ತುಂಬಿದ್ದೇನೆ ಅಷ್ಟೆ. ಪಾತ್ರದ ಬಗೆಗೆ ಅಧ್ಯಯನಗಳಿಗಿಂತ ಹೆಚ್ಚಾಗಿ ನಾನು ನಿರ್ದೇಶಕರ ದೃಷ್ಟಿಕೋನ ಮತ್ತು ಆಶಯಗಳಿಗೆ ಬೆಲೆ ಕೊಟ್ಟು ಅದಕ್ಕೆ ತಕ್ಕ ಅಭಿನಯ ನೀಡ ಬಯಸುತ್ತೇನೆ.

'ಜೋಧಾ ಅಕ್ಬರ್' ಅನುಭವ?

16ನೇ ಶತಮಾನದ ರಾಜಕುಮಾರಿಯ ಪಾತ್ರವೊಂದರ ಅಭಿನಯಕ್ಕೆ ತಯಾರಾಗುವುದು ಸುಲಭದ ಕೆಲಸವಲ್ಲ. ಆ ಉಡುಗೆ ತೊಡುಗೆ, ಆಭರಣಗಳೊಂದಿಗೆ ಸಿದ್ಧವಾಗಬೇಕಲ್ಲ. ಈ ಬಾರಿ ನಾನು ಮೊಘಲ್ ರಾಜಕುಮಾರಿಯಾಗಿದ್ದೆ! ಆ ಭಾರೀ ಉಡುಗೆ ಮತ್ತು ಆಭರಣಗಳನ್ನು ಧರಿಸಬೇಕಿತ್ತು. ಆದರೆ ಕತ್ತಿವರಸೆ ಮೊದಲಾದ ಕೌಶಲ್ಯಗಳನ್ನು ಪ್ರದರ್ಶಿಸುವುದು ನಿಜಕ್ಕೂ ರೋಮಾಂಚಕಾರಿ ಮತ್ತು ಚಿತ್ರೀಕರಣ ಜಾಲಿಯಾಗಿತ್ತು.

ತೆರೆ ಮೇಲಣ ರಾಜಕುಮಾರಿ ಬಗ್ಗೆ ಈ ಬಾಲಿವುಡ್ ರಾಜಕುವರಿ ಏನನ್ನುತ್ತಾಳೆ?

ಯಾವುದೇ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಅಥವಾ ಆ ಪಾತ್ರದ ಒಳ ಹೊಕ್ಕು ಅಭಿನಯಿಸುವ ಕಲೆಯನ್ನು ನಾನು ಸಿದ್ಧಿಸಿಕೊಂಡಿದ್ದೇನೆ ಎಂದು ನನಗನಿಸುತ್ತಿದೆ. ಯಾವ ಪಾತ್ರವೇ ಆಗಲಿ, ಅದರಲ್ಲಿ ನಟಿಸುವಾಗ ನಿರ್ದೇಶಕನ ಅಭಿಪ್ರಾಯಕ್ಕೇ ನಾನು ಮನ್ನಣೆ ಕೊಡುವೆ. ಅವರ ಆಶಯದಂತೆಯೇ ನಟಿಸುವೆ. ನನ್ನ ಕಡೆಯಿಂದ ನಾನು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ಚಿತ್ರೀಕರಣದ ಸ್ಥಳದಲ್ಲಿ ಇರುವವರೆಗೆ ನಾನೊಂದು ಪಾತ್ರ ಅಷ್ಟೆ. ಯಾವುದೇ ಪಾತ್ರದ ಕುರಿತೂ ನಿರ್ದೇಶಕರ ದೃಷ್ಟಿಕೋನಕ್ಕೆ ವಿರುದ್ಧವಾಗಿ ಹೋದದ್ದೇ ಇಲ್ಲ. ಹಾಗೆಯೇ ಆಶುತೋಷ್ ಆಶಯದಂತೆ ಜೋಧಾ ಬಾಯಿ ಪಾತ್ರಕ್ಕೂ ನಾನು ನ್ಯಾಯ ಒದಗಿಸಿದ್ದೇನೆ ಎನ್ನುವ ವಿಶ್ವಾಸ ನನಗಿದೆ.

ಜೋಧಾ ಪಾತ್ರಕ್ಕೆ ಸಿದ್ಧತೆ...

ನಾನು ಹೆಚ್ಚಿನ ತಯಾರಿ ಏನೂ ನಡೆಸಿರಲಿಲ್ಲ. ಆಶುತೋಷ್ ಅವರು ಈ ಪಾತ್ರವನ್ನು ಅದ್ಭುತವಾಗಿ ವಿವರಿಸಿದ್ದರು. ಹೀಗಾಗಿ ನಾನು ಹೊಸದಾಗಿ ತಯಾರಿ ಮಾಡಿಕೊಳ್ಳುವ ಅಗತ್ಯವೇ ಬೀಳಲಿಲ್ಲ. ನನ್ನ ನಟನಾ ಕೌಶಲ್ಯವನ್ನು ಪ್ರದರ್ಶಿಸಲು ಆಶುತೋಷ್ ಅವರು ಇಂತಹ ಒಂದು ಅದ್ಭುತ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕಾಗಿ ನಾನು ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಆದರೆ ಈ ಪಾತ್ರ ನನ್ನ ನಿಜ ಜೀವನದ ವ್ಯಕ್ತಿತ್ವಕ್ಕಿಂತ ಸಂಪೂರ್ಣ ಭಿನ್ನ.

 ಟಿಎಸ್‌ಐ

 ಹೃತಿಕ್ ರೋಷನ್, ಮೈಕಟ್ಟಿನ ಮಹಾರಾಜ

 ನಿಜ ಅಕ್ಬರ್ v/s ತೆರೆ ಮೇಲಿನ ಅಕ್ಬರ್

ನಾನು ಸ್ವಲ್ಪ ಸಂಕೋಚ ಪ್ರವೃತ್ತಿಯ ವ್ಯಕ್ತಿ. ಅಕ್ಬರ್ ವ್ಯಕ್ತಿತ್ವ ಮತ್ತು ನನಗೆ ಹೋಲಿಕೆಯೇ ಸಲ್ಲದು. ನಾನೇ ಈ ಪಾತ್ರಕ್ಕೆ ಸೂಕ್ತ ವ್ಯಕ್ತಿ ಎಂದು ಎಲ್ಲರೂ ಹೇಳಿರಬಹುದು. ಆದರೆ ನನಗೆ ಮಾತ್ರ ಇದು ನನ್ನ ವ್ಯಕ್ತಿತ್ವಕ್ಕೆ ವಿರುದ್ಧವಾದ ಪಾತ್ರ ಎಂದನಿಸಿತ್ತು ಮತ್ತು ಅದೇ ಕಾರಣಕ್ಕೆ ಈ ಅವಕಾಶವನ್ನು ಒಪ್ಪಿಕೊಂಡೆ. ಇಂತಹ ಸವಾಲೆನಿಸುವ ಪಾತ್ರವನ್ನು ನಿರ್ವಹಿಸುವ ಅವಕಾಶ ಕಳೆದುಕೊಳ್ಳುವುದು ಸಾಧ್ಯವೇ ಇರಲಿಲ್ಲ. ಯಾವುದೋ ಕಾಲದಲ್ಲಿ ಬದುಕಿದ್ದ ವ್ಯಕ್ತಿಯೊಬ್ಬನ ಪಾತ್ರವನ್ನು ನಿರ್ವಹಿಸುತ್ತಿರುವುದು ನಿಜಕ್ಕೂ ಕುತೂಹಲಕರ.

ಸವಾಲು?

ಹೌದು, ಇದು ಸವಾಲೆನಿಸುವ ಪಾತ್ರವೇ ಆಗಿತ್ತು. ಆದರೆ ಈ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ಖುಷಿಯಾಗಿದೆ. ಹೀಗಾಗಿ ಕಷ್ಟಗಳೆಲ್ಲ ಇಷ್ಟವಾದವು. ಓಹ್! ಆ ಭಾಷೆಯೂ ಶುದ್ಧ ಹಿಂದಿ. ಈ ಚಿತ್ರೀಕರಣ ಒಂದು ನಿರಂತರ ಪ್ರಕ್ರಿಯೆ ಎಂಬಂತೆ ಕೆಲಸ ನಡೆಯುತ್ತಲೇ ಇತ್ತು. ಧುತ್ತೆಂದು ಸಮಸ್ಯೆಗಳು ಪ್ರತ್ಯಕ್ಷವಾಗಿ ಬಿಡುತ್ತಿದ್ದವು. ಹಲವು ಸೂಕ್ಷ್ಮಗಳತ್ತ ಗಮನ ಕೊಡಬೇಕಾಗುತ್ತಿತ್ತು. ಬಹಳಷ್ಟು ಒತ್ತಡದ ಕೆಲಸವದು. ಕೆಲ ಬಾರಿ ಕಠಿಣ ಶ್ರಮ ಪಡಬೇಕಾಗಿ ಬರುತ್ತಿತ್ತು. ಹೀಗಾಗಿ ಸುಸ್ತಾಗಿ ಚಿತ್ರೀಕರಣ ಸ್ಥಳದಲ್ಲೇ ನಿದ್ದೆ ಹೋದದ್ದೂ ಇದೆ (ನಗು). ಆದರೆ ಆ ಕೆಲಸ ನನಗೆ ತೃಪ್ತಿ ಕೊಡುತ್ತಿದ್ದುದರಿಂದ ಕೆಡುಕೆನಿಸಲಿಲ್ಲ. ಯಾವುದೇ ಕೆಲಸ ಎಷ್ಟೇ ಕಠಿಣವಾಗಿವಿರಲಿ, ಅದು ನಿಮಗೆ ಖುಷಿ ಕೊಡುತ್ತದೆ ಎಂದಾದಲ್ಲಿ ಸರಾಗವಾಗಿ ಮುಗಿಸಿ ಬಿಡುತ್ತೀರಿ ಮತ್ತು ನಮ್ಮ ಪ್ರಯತ್ನಕ್ಕೆ ಬೆಲೆ ಸಿಕ್ಕಂತಾಗುತ್ತದೆ. ಪ್ರತಿ ಷಾಟ್‌ಗಳೂ ಕಷ್ಟಕರವೇ. ಆದರೆ ಒಂದು ಸನ್ನಿವೇಶವನ್ನು ಹೆಕ್ಕಿ ತೆಗೆದು ಇದು ಕಷ್ಟ ಎಂದು ಹೇಳಲು ಸಾಧ್ಯವಾಗದು ಮತ್ತು ಯಾವುದು ಮಹತ್ವದ ಸನ್ನಿವೇಶ ಎಂದು ಹೇಳುವುದೂ ಸಾಧ್ಯವಿಲ್ಲ.

 ಅಕ್ಬರ್ ಪಾತ್ರಕ್ಕೆ ಸಿದ್ಧತೆ?

ನಾನು ನಟಿಸುವ ಪಾತ್ರ ಅಥವಾ ಈ ಚಿತ್ರದಲ್ಲಿರುವುದು ಯುವ ಅಕ್ಬರ್ ತನ್ನ ಧ್ಯೇಯದ ಅನ್ವೇಷಣೆಯಲ್ಲಿರುವ ಮಹಾರಾಜ. ತನ್ನ ಜೀವನದ ಗುರಿಗಳ ಬಗ್ಗೆ ನೂರಾರು ಪ್ರಶ್ನೆಗಳು ಅಕ್ಬರ್ ಮುಂದಿರುತ್ತದೆ ಮತ್ತು ಸೂಕ್ತ ಉತ್ತರಗಳಿಗಾಗಿ ತಡಕಾಡುತ್ತಿರುತ್ತಾನೆ. ಇದು ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಅಕ್ಬರ್‌ನ ಜೀವನದ ನಿರ್ಣಾಯಕ ಘಟ್ಟ ಎನ್ನಬಹುದು. ಹಿರಿಯರು ಮತ್ತು ಪೋಷಕರು ಆತನನ್ನು ನಿಯಂತ್ರಿಸುತ್ತಿದ್ದ ದಿನಗಳವು. ಸೂಕ್ತ ಉತ್ತರಕ್ಕಾಗಿ ಪರದಾಡುತ್ತಿದ್ದ ಮತ್ತು ಪ್ರಶ್ನೆಗಳು ಆತನ ತಲೆ ತಿನ್ನುತ್ತಿದ್ದ ಕಾಲವದು. ಹೀಗಾಗಿ ಆತ ಜನಪ್ರಿಯತೆಯ ತುತ್ತ ತುದಿಯಲ್ಲಿರುವ ಅಕ್ಬರ್ ಅಥವಾ ಎಲ್ಲವನ್ನೂ ಬಲ್ಲ ಮಹಾರಾಜನಲ್ಲ. ತನ್ನ ಅಜ್ಜಿಯಿಂದ ಪೆಟ್ಟು ತಿನ್ನುತ್ತಿದ್ದ ಅಕ್ಬರ್! ಕಡಿವಾಣವಿಲ್ಲದ ಕುದುರೆಯಾಗಿದ್ದ ಕಾಲ. ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಶ್ರಮ ಪಡುತ್ತಿದ್ದಾತ. ಈ ಚಿತ್ರದಲ್ಲಿ ಅಕ್ಬರ್‌ನ ನಿಜ ವ್ಯಕ್ತಿತ್ವವನ್ನು ಕಾಣುವಿರಿ.

 ತೆರೆ ಮೇಲೆ ಮತ್ತು ತೆರೆ ಹಿಂದಿನ 'ಜೋಧಾ ಅಕ್ಬರ್' ಪಯಣ...

ನನ್ನ ಮೊಗದ ಮೇಲೆ ಸಂತೃಪ್ತಿಯ ಮಂದಹಾಸವನ್ನು ಉಳಿಸಿ ಹೋದ ಪಯಣವದು. ಈ ಅವಕಾಶ ನನ್ನ ವೃತ್ತಿ ಜೀವನಕ್ಕೆ ಸಿಕ್ಕ ಆಶೀರ್ವಾದ ಎಂದು ಹೇಳಬಹುದು. ಸನ್ನಿವೇಶಗಳನ್ನು ನೀವು ಎಷ್ಟು ಅದ್ಭುತವಾಗಿ ಬಳಸಿಕೊಂಡಿದ್ದೀರಿ ಮತ್ತು ಅದರಿಂದ ಎಷ್ಟು ಬೆಳೆದಿದ್ದೀರಿ ಎನ್ನುವುದು ಇಲ್ಲಿ ಮುಖ್ಯ. ನಾನು ಆಶುತೋಷ್ ಅವರಂತಹ ಅನುಭವಿ ಮತ್ತು ಪ್ರತಿಭಾವಂತ ಸಹ ನಟರಿಂದ ಬಹಳಷ್ಟು ಕಲಿತಿರುವೆ. ಚಿತ್ರೀಕರಣ ಅನುಭವವೇ ಒಂದು ರಾಜಮರ್ಯಾದೆ! ಹೀಗಾಗಿ ನಿಜಕ್ಕೂ ಇದೊಂದು ಅದ್ಭುತ ಪಯಣ.

 ಆಶುತೋಷ್ ಗೋವಾರೀಕರ್ ಕುರಿತು

ಒಂದು ವಿಷಯ ಗೊತ್ತೆ? ಅವರು ನಿಜವಾಗಿಯೂ ಈ ಪಾತ್ರಕ್ಕೆ ನನ್ನನ್ನು ಆರಿಸಿದ್ದಾರೆಯೇ ಎಂದು ನಾನು ಮತ್ತೆ ಮತ್ತೆ ಕೇಳಿದೆ. ಒಂದು ತಿಂಗಳ ಕಾಲಾವಕಾಶ ತೆಗೆದುಕೊಂಡು ನಾನೇ ಆ ಪಾತ್ರವನ್ನು ಮಾಡಬೇಕೆ ಎನ್ನುವುದನ್ನು ದೃಢಪಡಿಸಿಕೊಂಡು ಬರಲು ತಿಳಿಸಿದೆ. ಆದರೆ ಅವರು ನನ್ನನ್ನೇ ಆ ಪಾತ್ರಕ್ಕೆ ಆರಿಸಿರುವುದನ್ನು ಖಚಿತ ಪಡಿಸಿದರು. ಆಶುತೋಷ್ ಗೋವಾರೀಕರ್ ಜೊತೆ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂಬ ಅಂತಿಮ ಕಾರಣವೇ ನನ್ನನ್ನು ಈ ಚಿತ್ರವನ್ನು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು. ಅವರ ಚಿಂತನಾ ಸರಣಿ ಮತ್ತು ಅವರ ಕಾರ್ಯ ವೈಖರಿ ನನಗೆ ಹಿಡಿಸಿತ್ತು. ಸನ್ನಿವೇಶಗಳು, ಪಾತ್ರಗಳು ಮತ್ತು ಸಂಬಂಧಗಳನ್ನು ಅವರು ವಿವರಿಸುವ ಪರಿ ಅಮೋಘ. ತಮ್ಮ ಜ್ಞಾನದಿಂದ ನನ್ನ ಚಿಂತನಾ ಶೈಲಿಯನ್ನೇ ಬದಲಾಯಿಸಬಲ್ಲ ಶಕ್ತಿ ಅವರಿಗಿದೆ. ಈ ಚಿತ್ರ ಹಿಟ್ ಆದರೆ ಅದು ನನಗೆ ಸಂದ ಬೋನಸ್ ಎನ್ನಬಹುದು. ಆಶುತೋಷ್ ಜೊತೆ ಸೇರಿ ಅತ್ಯುತ್ತಮ ನಟ ಎನಿಸಿಕೊಳ್ಳುವ ಕನಸು ನನಗಿತ್ತು. ಅವರ ಜೊತೆ ಕೆಲಸ ಮಾಡಿ ಆ ಕನಸು ನಿಜವಾಗಿದೆ.

'ಜೋಧಾ ಅಕ್ಬರ್'ನಿಂದಾಚೆಗೆ...

ಓಹ್! ತುಂಬಾ ಇದೆ. ನಾನು ತುಂಬಾ ವಿಷಯಗಳನ್ನು ಹಂಚಿಕೊಳ್ಳಬೇಕೆಂದಿರುವೆ. ಇಳಾಜಿ (ಇಳಾ ಅರುಣ್) ಜೊತೆ ಹಲವು ಅತ್ಯುತ್ತಮ ಸನ್ನಿವೇಶಗಳಿವೆ. ಅವರು ಮಹಾಂ ಅಂಗ ಪಾತ್ರ ನಿರ್ವಹಿಸುತ್ತಿದ್ದಾರೆ. ಆಕೆಯ ನಟನೆಗೆ ಅತ್ಯುತ್ತಮ ಪ್ರಶಂಸೆ ಸಿಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರದ ಎಲ್ಲಾ ನಟರು ಅತ್ಯುತ್ತಮ ಅಭಿನಯ ನೀಡಿದ್ದಾರೆ. ಶ್ರೀಮತಿ ಸಿನ್ಹಾ ಅವರು ಈ ಚಿತ್ರದಲ್ಲಿ ನನ್ನ ತಾಯಿ. ನನ್ನ ಅಮ್ಮನ ಜೊತೆಯೇ ಕೆಲಸ ಮಾಡುತ್ತಿದ್ದೇನೆ ಎಂದು ನನಗನ್ನಿಸಿತ್ತು. ಪ್ರತಿಯೊಬ್ಬರೂ ನನ್ನನ್ನು ಅಕ್ಕರೆಯಿಂದ ನೋಡಿಕೊಂಡಿದ್ದರು. ಅಂತಹ ಅತ್ಯುತ್ತಮ ಚಿತ್ರ ತಂಡದ ಜೊತೆ ಕೆಲಸ ಮಾಡುವುದು ನಿಜಕ್ಕೂ ತೃಪ್ತಿಕರ ಅನುಭವ. ಖಳ ಪಾತ್ರದಲ್ಲಿ ನಟಿಸುತ್ತಿರುವ ನಿಖಿತನ್ ಅಥವಾ ಜಲಾಲ್‌ನ ವಿರುದ್ಧ ಕಾರ್ಯತಂತ್ರ ರಚಿಸುವ ಪಾತ್ರಗಳಲ್ಲಿ ಉಳಿದ ಸಹನಟರು ತಮ್ಮ ಸನ್ನಿವೇಶಗಳಲ್ಲಿ ಅದ್ಭುತ ನಟನಾ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿರುವ ಸೋನು ಸೂದ್ ಅದ್ಭುತ ಅಭಿನಯ ನೀಡಿದ್ದಾರೆ. ಜಿಮ್‌ನಲ್ಲೂ ನಾವೆಲ್ಲರೂ ಜೊತೆಯಾಗಿ ವ್ಯಾಯಾಮ-ಕಸರತ್ತುಗಳನ್ನು ಮಾಡುತ್ತಿದ್ದೆವು. ಅವರೆಲ್ಲರೂ ಪ್ರತಿಭಾವಂತರು. ಹೀಗಾಗಿ ಎಲ್ಲ ಕಡೆಯೂ ನನಗೆ ಪ್ರೇರಣೆಗಳೇ ಸಿಕ್ಕವು. ಅದ್ಭುತ ಅಭಿನಯಗಳೆಲ್ಲಾ ಸೇರಿ ಇದೊಂದು ಶ್ರೇಷ್ಠ ಚಿತ್ರವಾಗಿ ಮೂಡಿ ಬಂದಿದೆ.

 ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .