ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಣ್ಣದ ಲೋಕ
 
 

ಮೈ ಹೂಂ ಆರ್ ನಾ

ಶಾರುಖ್ ಖಾನ್... 'ಕಿಂಗ್' ಇಮೇಜ್... ಅಯ್ಯೋ, ಕೇಳಿ ಕೇಳಿ ಸಾಕಾಗಿ ಹೋಗಿದೆ ನಿಜ. ಆದರೆ ಸ್ವತಃ ಆರೋಗ್ಯ ಸಚಿವರೇ ಈ ನಟ ಕಮ್ ಸ್ಮೋಕರ್‌ಗೆ ತೆರೆಯ ಮೇಲಾದರೂ ಧೂಮಪಾನ ನಿಲ್ಲಿಸಯ್ಯಾ ಎಂದು ಗೋಗರೆದಿದ್ದಾರೆ. ತಾರೆಯರ ಚಟಗಳನ್ನು ಯುವ ಪೀಳಿಗೆ ಅಂಧಾನುಕರಣೆ ಮಾಡುತ್ತಿದೆ ಎನ್ನುವುದು ಸಚಿವ ರಾಮದಾಸ್ ಗೋಳಾಟ. ಶಾರುಖ್ ಮಾತ್ರ, ನನ್ನ ಕ್ರಿಯಾಶೀಲ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಬೇಡಿ ಎಂದು ಅಲವತ್ತುಕೊಂಡಿದ್ದಾರೆ. ಪುಟ್ಟ ವಿಷಯಕ್ಕೆ ಬಣ್ಣ ಹಚ್ಚಬೇಡಿ ಎಂಬುದು ಬಾದ್‌ಷಾ ಬಿನ್ನಹ. ವಾದ ನಡೆಯುತ್ತಲೇ ಇದೆ, ಹಾಗೆಯೇ ಧೂಮಪಾನ ಸಂಬಂಧೀ ರೋಗಗಳೂ ಹೆಚ್ಚುತ್ತಲೇ ಇವೆ. ಶಾರುಖ್ 'ಮೈ ಹೂಂ ನಾ' ಎಂದಿದ್ದರೆ ಚೆನ್ನಾಗಿತ್ತು.

ಇದೇನೇ ಹೊಸ ರಾಗ?

ಸವಾಲಿರುವ ಪಾತ್ರ ಮತ್ತು ನೈಜತೆಯುಳ್ಳ ಚಿತ್ರಗಳಲ್ಲಷ್ಟೇ ಅಭಿನಯಿಸುವುದು. ಹೀಗೆ ಯಾನಾ ಗುಪ್ತಾ ಅಲ್ಲದೆ ಬೇರೆ ಯಾರೇ ಅಂದಿದ್ದರೂ 'ಅಹುದು ಅಹುದು' ಎಂದು ಗೋಣಾಡಿಸಬಹುದಿತ್ತು. ಐಟಂ ಹಾಡುಗಳಲ್ಲಿ ಕುಣಿದದ್ದೇ ಯಾನಾ ಬಂಡವಾಳ ಎಂದು ಸರ್ವರಿಗೂ ತಿಳಿದಿರುವಾಗ ಈ ಮಟ್ಟದ ನಿರೀಕ್ಷೆಗಳೂ ಇವೆಯೆ? ಅಬ್ಬಾ, ಒಂದಷ್ಟು ದಿನ ಯಾನಾ ಮುಖ ಪರದೆ ಮೇಲೆ ಕಾಣಿಸದು ಎಂದು ನಿಡಿದಾಗಿ ಉಸಿರಾಡೋಣ. ಅಲ್ವೇ ಯಾನಾ, ನಟನೆ ಅಂದ್ರೆ ಅಷ್ಟು ಸುಲಭವೇನೇ?

ಮತ್ತೆ ಬಾಲಿವುಡ್ ಹಾದಿ?

ನಮ್ ಕೊಡಗಿನ ಬೆಡಗಿ ಡೈಸಿ ಬೋಪಣ್ಣ 'ಗಾಳಿಪಟ'ದಲ್ಲಿ ಸಂಪೂರ್ಣ ಇಮೇಜ್ ಬದಲಿಸಿಕೊಂಡಿದ್ದು ನೋಡಿ ಖುಷಿ ಪಟ್ಟಿದ್ದೇವೆ. ದುಂಡು ಮೊಗದ ಮೌನಸುಂದರಿಯನ್ನು ಮೆಚ್ಚದೆ ಇರುವವರಿಲ್ಲ. ಆದರೆ ಗಾಳಿಪಟ ಬಿಡುಗಡೆಯಾದ ಮೇಲೆ ಡೈಸಿಯ ಮಡಿಲಲ್ಲಿ ಇನ್ನೇನಿದೆ? ನಟ ಸುದೀಪ್ ಜೊತೆ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಆದರೆ ಸುದೀಪ್ ಬಾಲಿವುಡ್‌ಗೆ ಹಾರಲು ರೆಡಿಯಾಗಿದ್ದಾರಲ್ಲ? ಈಗಾಗಲೇ ಬಾಲಿವುಡ್ ನೀರು ಕುಡಿದು ಬಂದ ಡೈಸಿ ಸುಮ್ಮನಿರುತ್ತಾಳೆಯೇ? ಆಕೆಯೂ ತನ್ನ ಮನೆಯನ್ನು ಮುಂಬೈಗೆ ಬದಲಾಯಿಸಿದ್ದಾಳೆ ಎನ್ನುವ ಸುದ್ದಿ. ನಟನೆ ಹಾಗೂ ಸೌಂದರ್ಯ ಇದ್ದರೂ ಸ್ಯಾಂಡಲ್‌ವುಡ್ ಡೈಸಿಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವುದು ನಿಜವೇ. ಬಾಲಿವುಡ್‌ನಲ್ಲಾದರೂ ಅದೃಷ್ಟ ಕೂಡಿ ಬರಲಿ. ಗುಡ್‌ಲಕ್!

ಇಂತಿ ನಿನ್ನ ಯೋಗರಾಜ್!

ದುನಿಯಾ ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯ' ಅದ್ಭುತ ಚಿತ್ರ ಎಂದು ಗಾಂಧಿನಗರದಲ್ಲಿ ಗುಲ್ಲೋ ಗುಲ್ಲು. ಈ ಗಾಸಿಪ್‌ಗೆ ಗಾಳಿ ತುಂಬುತ್ತಿರುವವರು ಮತ್ತಾರೂ ಅಲ್ಲ. ಈಗಷ್ಟೇ 'ಗಾಳಿಪಟ' ಹಾರಿಸಿ ಧರ್ಮಸ್ಥಳದಲ್ಲಿ ಸಿಗರೇಟ್ ಸನ್ಯಾಸ ಮುಗಿಸಿ ಬಂದ ಯೋಗರಾಜ್ ಭಟ್! ಅಯ್ಯೋ, ಈ ಮಹಾನುಭಾವ ಅದೇನು ಸೂರೀನಾ ಈ ಪಾಟಿ ಹೊಗಳ್ತಿದಾರೆ ಎಂದು ಆಶ್ಚರ್ಯವೆ? ಯೋಗರಾಜ್ ನೀಡಿದ ಕಥೆಯ ಎಳೆ ಹಿಡಿದೇ ಸೂರಿ ಈ ಸಿನಿಮಾ ನಿರೂಪಣೆ ಮಾಡಿ ಅದ್ಭುತವಾಗಿ ನಿರ್ದೇಶಿಸಿದ್ದಾರೆ! ಬಾಲಿವುಡ್‌ಗೆ ಹಾರಿದ್ದ ನಮ್ಮ ಕನ್ನಡದ ಭಾವನಾ ಮತ್ತೆ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕೆಂದಿದ್ದಾಳೆ. ಸೂರಿ ಜಾದೂ ಮತ್ತು ಭಾವನಾ ಮೋಡಿ ಅದೇನು ಕಡಿಯಲಿದೆಯೋ ನೋಡೇ ಬಿಡೋಣ! ಏನಂತೀರಿ?

ಸಲ್ಮಾನ್ ದುರದೃಷ್ಟ...

ಅಬ್ಬಾ 'ಮೇಡಂ ಟುಸಾಡ್ಸ್'ನಲ್ಲಾದರೂ ಐಶ್ವರ್ಯಾ ಪಕ್ಕ ಜಾಗ ಸಿಕ್ತಲ್ಲಾ ಎಂದು ಸಲ್ಮಾನ್ ಖಾನ್ ಸಮಾಧಾನ ಪಟ್ಟಿದ್ದೇ ಬಂತು. ಆದರೆ ಅದಕ್ಕೂ ಬಂದಿದೆ ಸಂಚಕಾರ! ಈಗಿನ ಸುದ್ದಿ ಎಂದರೆ ಆತನ ವಿರುದ್ಧ 'ಫತ್ವಾ' ಹೊರಡಿಸಲಾಗಿದೆ. 'ಮೇಡಂ ಟುಸಾಡ್ಸ್'ನಲ್ಲಿ ಸಲ್ಮಾನ್ ಮೇಣದ ಪುತ್ಥಳಿ ಸ್ಥಾಪಿಸಿದ ಹಿನ್ನೆಲೆಯಲ್ಲಿ ಮುಸ್ಲಿಂ ಧರ್ಮಕ್ಕೆ ಅಪಚಾರವಾಗದೆ! ಮುಸ್ಲಿಂ ಧರ್ಮದ ಅನುಸಾರ ಬದುಕಿರುವವರ ಮೂರ್ತಿ ನಿರ್ಮಿಸುವುದು ನ್ಯಾಯಸಮ್ಮತವಲ್ಲ. ಇದರ ವಿರುದ್ಧ ನಡೆದವರಿಗೆ ಫತ್ವಾ ಜಾರಿ. ಅದೆಷ್ಟೇ ತಿಪ್ಪರಲಾಗ ಹಾಕಿದರೂ ಲಂಡನ್‌ನಲ್ಲಿ ಸಲ್ಮಾನ್ ಪ್ರತಿರೂಪ ಸೃಷ್ಟಿಯಾಗೇ ಬಿಟ್ಟಿದೆ. ಒಳ್ಳೆ ಕಾರ್ಯಕ್ಕೆ ನೂರೆಂಟು ವಿಘ್ನಗಳು ಬಿಡಿ!

ಮುನಿಸು ತರವೇ?

'ಮೇಜರ್ ಮೂವಿ ಸ್ಟಾರ್' ಜೋಡಿ ಜೆಸ್ಸಿಕಾ ಸಿಂಪ್ಸನ್ ಮತ್ತು ಟೋನಿ ರೋಮೊ ವೆಸ್ಟ್ ಹಾಲಿವುಡ್‌ನ ಇಟಾಲಿಯನ್ ರೆಸ್ಟೋರೆಂಟ್ ಒಂದರಲ್ಲಿ ಲಲ್ಲೆಗರೆಯುತ್ತಿದ್ದರು! ಅದರಲ್ಲೇನು ವಿಶೇಷ ಅಂದಿರಾ? ಇವರಿಬ್ಬರೂ 'ಟೂ ಬಿಟ್ಟರು' ಎಂಬ ಸುದ್ದಿಯ ಹಿನ್ನೆಲೆಯಲ್ಲೇ ಡೇಟಿಂಗ್ ಸುದ್ದಿಯೂ ಬಂದದ್ದು ಕಂಡು ಸ್ವಲ್ಪ ಕಿಸಪಿಸ ಅನ್ನುವಂತಾಗಿದೆ! ಟೂ ಇಲ್ಲ ಮಣ್ಣೂ ಇಲ್ಲ. ಇಬ್ಬರೂ ಏನೂ ಇಲ್ಲದೆಯೂ ಮಾತನಾಡುತ್ತಿದ್ದರು. ಸುಳ್ಳೇ ಸುಳ್ಳೇ ನಕ್ಕರು. ಸಮಾಧಾನವೆ? ಅಂದ್ರೆ 'ಟೂ ಬಿಟ್ಟರು' ಅಂತ ಹೇಳಿದವರ್‍ಯಾರಪ್ಪಾ?

ಪ್ರೇಮ್ ಪ್ರಶ್ನೆ

'ಗ್ರೇಸ್ ಅನಾಟಮಿ' ಚಿತ್ರದ ಬಿನ್ನಾಣಗಿತ್ತಿ ಕ್ಯಾಥರೀನ್ ಹೇಗಲ್ ಮದುವೆಯಾದ ತಕ್ಷಣ ಪತಿ ಜೋಶ್ ಕೆಲ್ಲಿ ಜೊತೆ ಗೃಹಪ್ರವೇಶವನ್ನೂ ಮಾಡಿದ್ದಾಳೆ. ಅಚ್ಚರಿಯ ಸಂಗತಿ ಎಂದರೆ ಎತ್ತುವುದು ಇಳಿಸುವುದರಿಂದ ತೊಡಗಿ ಸಣ್ಣ- ಪುಟ್ಟ ಕೆಲಸಗಳನ್ನೆಲ್ಲಾ ಸ್ವತಃ ಮಾಡುತ್ತಿದ್ದಳು. ಸಂಪ್ರದಾಯದ ಮೇಲೆ ತುಸು ಹೆಚ್ಚೇ ನಂಬಿಕೆ ಬೇರೆ. '೧೦ ಮೋಸ್ಟ್ ಫ್ಯಾಸಿನೇಟಿಂಗ್ ಪೀಪಲ್ ಆಫ್ ೨೦೦೭' ಪಟ್ಟಿಯಲ್ಲಿ ತನ್ನಂಥ ಬೋರಿಂಗ್ ನಟಿಯನ್ನು ಸೇರಿಸಿದ್ದೇಕೆ ಎಂದು ಪ್ರಶ್ನಿಸಿದ್ದೂ ಸಾರ್ಥಕ! ಆದರೂ... ಕಮ್ ಆನ್ ಕ್ಯಾಥಿ! ಇಂತಹ ಪ್ರಶಂಸೆಗಳನ್ನೆಲ್ಲಾ ತಿರಸ್ಕರಿಸುವುದೇ? ಪರವಾಗಿಲ್ಲ. ಸಂಪ್ರದಾಯವಾದಿಯಾದರೇನು? ಒಯ್ಯಾರಕ್ಕೇನು ಕಡಿಮೆ ಇಲ್ಲವಲ್ಲ!

ಎನ್.ಕೆ. ಸುಪ್ರಭಾ, ಪ್ರಸಿದ್ಧ ಮೆನನ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .