ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ವಿಶೇಷ ವರದಿ :ಎಸ್‌ಇಝಡ್
'ಕಡಲೂರಿ'ನಲ್ಲಿ ಕೋಲಾಹಲ
ಮಂಗಳೂರು ಎಸ್‌ಇಝಡ್ ಸೃಷ್ಟಿಸಿದ ಆತಂಕ
 

ಅಭಿವೃದ್ಧಿಯ ನೊಗಕ್ಕೆ ಹೆಗಲುಕೊಡುತ್ತ, ಪರಿಸರದ ದೃಷ್ಟಿಯಲ್ಲಿ ಕುಸಿಯುತ್ತಲೇ ಬಂದಿರುವ ಕರ್ನಾಟಕದ ಕಡಲ ತೀರದ ಮೇಲೆ ಈಗ ಎಸ್‌ಇಝಡ್ ಭೂತವನ್ನು ಕೂರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಂಗಳೂರು ಎಸ್‌ಇಝಡ್ ಆಗು-ಹೋಗುಗಳ ಮೇಲೆ ಟಿಎಸ್‌ಐನ ಶಶಿ ಸಂಪಳ್ಳಿ ಬೆಳಕು ಚೆಲ್ಲುವ ಯತ್ನ ಮಾಡಿದ್ದಾರೆ

ಆ ಮನೆಗೆ ನಾವು ಕಾಲಿಟ್ಟಾಗ ದುಃಖ ಮಡುಗಟ್ಟಿದ ಮುಖ ಹೊತ್ತ ಆ ಇಳಿ ವಯಸ್ಸಿನ ಮಹಿಳೆ ಅಕ್ಷರಶಃ ದಿಕ್ಕು ತೋಚದ ಸ್ಥಿತಿಯಲ್ಲಿ ಕೂತಿದ್ದರು. ಬದುಕಿನ ಏಕೈಕ ಆಸರೆಯಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಅನಾಥಪ್ರಜ್ಞೆ ಒಂದೆಡೆಯಾದರೆ, ನೆತ್ತಿಯ ಮೇಲಿನ ಸೂರೂ ಇನ್ನೇನು ಕೈತಪ್ಪಿಹೋಗಲಿದ್ದು ನಂತರ ತನ್ನ ಗತಿ ಏನು ಎಂಬ ಆತಂಕ ಕೂಡ ಆಕೆಯ ಮುಖದಲ್ಲಿ ಮನೆಮಾಡಿತ್ತು. -ಇದು ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಂಎಸ್‌ಇಝಡ್) ವ್ಯಾಪ್ತಿಯ ಪೈಲ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಮುತ್ತಪ್ಪ ಸುವರ್ಣ ಅವರ ಮನೆಯಲ್ಲಿ ಸಾವಿನ ಮಾರನೇ ದಿನ ಕಂಡುಬಂದ ಸ್ಥಿತಿ. ಮಂಗಳೂರಿನಿಂದ 17 ಕಿ.ಮೀ. ದೂರದ ಬಜ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆ ಹಳ್ಳಿಯಲ್ಲಿ ಕಳೆದ ಜನವರಿ 31ರಂದು ಬೆಳಿಗ್ಗೆ ರೈತ ಮುತ್ತಪ್ಪ ವಿಷ ಸೇವಿಸಿ ಜೀವ ಬಿಟ್ಟಿದ್ದರು. ಅವರ ಸಾವಿಗೆ ಎಂಎಸ್‌ಇಝಡ್ ಕಾರಣ ಎಂದು ಬಜ್ಪೆ ಪೊಲೀಸರಿಗೆ ಅವರ ಪತ್ನಿ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. ಅವರ ಎರಡೂವರೆ ಎಕರೆ ಕೃಷಿ ಜಮೀನು ಎಂಎಸ್‌ಇಝಡ್ ವ್ಯಾಪ್ತಿಗೆ ಸೇರಿದೆ. ಆದರೆ, ಆ ಜಮೀನನ್ನು ಬೇರೊಬ್ಬರಿಗೆ ಸಾಗುವಳಿಗೆ ಕೊಟ್ಟಿದ್ದರು. ಜಮೀನಿನ ಪರಿಹಾರವಾಗಿ ಬಂದ ಹಣ ಕೌಟುಂಬಿಕ ಕಾರಣಗಳಿಂದಾಗಿ ಅವರ ಕೈ ಸೇರಲಿಲ್ಲ. ನಂತರ ಈಗಿರುವ ನನ್ನ ಮನೆ ಕೂಡ ಭೂಸ್ವಾಧೀನ ವ್ಯಾಪ್ತಿಗೆ ಸೇರಿದೆ. ಮನೆಗೆ 3.80 ಲಕ್ಷ ರೂಪಾಯಿ ಮೌಲ್ಯ ನಿಗದಿ ಮಾಡಿ ನೋಟಿಸ್ ನೀಡಿದ್ದಾರೆ. ಆದರೆ, ಈವರೆಗೆ ಅದರ ಪರಿಹಾರ ಹಣ ಬಂದಿಲ್ಲ. ಹಾಗಾಗಿ ಆ ಚಿಂತೆಯಲ್ಲೇ ಅವರು ಜೀವಬಿಟ್ಟಿದ್ದಾರೆ ಎಂಬುದು ಮುತ್ತಪ್ಪ ಸಾವಿನಿಂದ ಅನಾಥರಾಗಿರುವ ಅವರ ಮೂರನೇ ಪತ್ನಿ ಲಲಿತ (50) 'ಟಿಎಸ್‌ಐ' ತಂಡಕ್ಕೆ ವಿವರಿಸಿದರು. ಸುತ್ತ- ಮುತ್ತ ಭೂಮಿ ಹೋಗಿರುವುದರಿಂದ ನಾವು ನಡುವೆ ಇದ್ದವರು ಮಾತ್ರ ಕೊಡದೆ ಇರುವುದು ಹೇಗೆ. ಹಾಗಾಗಿ ನಾವು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಭೂಸ್ವಾಧೀನಕ್ಕೆ ಒಪ್ಪಿಕೊಂಡೆವು. ಆದರೆ, ಪರಿಹಾರ ಹಣ ಮಾತ್ರ ಇನ್ನೂ ನೀಡಿಲ್ಲ. ಅಕ್ಕ-ಪಕ್ಕದ ಮನೆಯವರಿಗೆಲ್ಲಾ ಪರಿಹಾರ ಬಂದಿದೆ. ನಾನು ಕೇಳಿದರೆ, ಅಧಿಕಾರಿಗಳು ಒಂದು ವಾರದಲ್ಲಿ ಹಣ ನೀಡುವುದಾಗಿ ಹೇಳಿದ್ದರು. ಆದರೆ, ಈವರೆಗೆ ನೀಡಿಲ್ಲ. ಬೀಡಿ ಕಟ್ಟಿ ಜೀವನ ಸಾಗಿಸುವ ನಾನು ಇನ್ನು ಆಸರೆಯೂ ಇಲ್ಲದೆ, ಸೂರೂ ಇಲ್ಲದೆ ಹೇಗೆ ಜೀವನ ಮಾಡಲಿ ಎಂದು ಕಣ್ಣೀರು ಸುರಿಸಿದರು ಮಕ್ಕಳೂ ಇಲ್ಲದ ಲಲಿತ. ಅವರಿಗೆ ಪೈಲ ಗ್ರಾಮದ ಸರ್ವೆ ನಂಬರ್ 177/3ಸಿ ನಲ್ಲಿರುವ 84 ಸೆಂಟ್ಸ್ ಮನೆ (ಮನೆ ಸಂಖ್ಯೆ- 4/246) ಮತ್ತು ಹಿತ್ತಿಲು ಬಿಟ್ಟರೆ ಮತ್ತೇನೂ ಇಲ್ಲ. ಭೂಸ್ವಾಧೀನ ಏಜೆನ್ಸಿಯಾದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಆ ಜಾಗ ಮತ್ತು ಮನೆಗೆ 3,81,380 ರೂಪಾಯಿ ಮೌಲ್ಯ ನಿಗದಿ ಮಾಡಿತ್ತು. ಆದರೆ, ದುಡ್ಡು ಮಾತ್ರ ಇನ್ನೂ ಗಗನಕುಸುಮವಾಗಿಯೇ ಇದೆ. ಇದು ಲಲಿತ ಅವರೊಬ್ಬರ ಸ್ಥಿತಿಯಲ್ಲ, ಬದಲಾಗಿ ಇಂತಹ ದೈನೇಸಿತನ ಕರಾವಳಿಯ ಈ ಭಾಗದ ಹಲವರದ್ದು. ಅದೇ ಗ್ರಾಮದ ಪದ್ಮಾವತಿ (56) ಅವರಿಗೆ ಎರಡು ಎಕರೆ ಜಮೀನಿದೆ. ಭೂಸುಧಾರಣೆ ಕಾಯ್ದೆಯಡಿ ಆ ಜಮೀನು ಅವರಿಗೆ ಬಂದಿದೆ. ಜಮೀನಿನ ಆರ್‌ಟಿಸಿ ಕೂಡ ಅವರ ಹೆಸರಲ್ಲೇ ಇದೆ. ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದರೂ ಅವರಿಗೆ ನೈಯಾಪೈಸೆ ಕೂಡ ಸಿಕ್ಕಿಲ್ಲ. ಏಕೆಂದರೆ, ಅವರ ಜಮೀನು ತನ್ನದು ಎಂದು ಇನ್ನಾರೋ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಹಾಗಾಗಿ ಅವರು ಮನೆ- ಜಮೀನು ಬಿಡಬೇಕಿದೆ. ಆದರೆ, ಪರಿಹಾರ ಹಣ ಬರುವುದು ಗ್ಯಾರಂಟಿ ಇಲ್ಲ. ಕೃಷಿ ಕೂಲಿ ಕಾರ್ಮಿಕ ಸುಧಾಕರ (34) ಅವರದ್ದು ಇನ್ನೊಂದು ಕಥೆ. ಅವರು 10 ಸೆಂಟ್ಸ್ ಜಾಗ ಖರೀದಿಸಿ ಮನೆ (4/179(1)) ಕಟ್ಟಿದ್ದಾರೆ. ಆದರೆ, ಅದೇ ಸರ್ವೆ ನಂಬರಿನ (ಸ.ನಂ. 27) ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿರುವುದರಿಂದ ಇವರ ಜಮೀನು ಭೂಸ್ವಾಧೀನವಾದರೂ ಹಣ ಮಾತ್ರ ಕೈಗೆ ಬರುವುದು ವ್ಯಾಜ್ಯ ಇತ್ಯರ್ಥವಾದ ಬಳಿಕವೇ! ಅವರು ಈ ಹಿಂದೆ ಎಂಆರ್‌ಪಿಎಲ್‌ಗಾಗಿ ಭೂಸ್ವಾಧೀನವಾದಾಗ ಎತ್ತಂಗಡಿಯಾಗಿ ಇಲ್ಲಿ ನೆಲೆ ಕಂಡವರು. ಈಗ ಇಲ್ಲಿಂದಲೂ ಎತ್ತಂಗಡಿಯಾಗಬೇಕಾಗಿದೆ. ಅವರ ಪಕ್ಕದ ಮನೆಯ ಗುಲಾಬಿ ಪೂಜಾರಿ (55) ಸ್ಥಿತಿಯಂತೂ ಇನ್ನೂ ಚಿಂತಾಜನಕ. ಗಂಡನನ್ನು ಕಳೆದುಕೊಂಡಿರುವ, ಮಕ್ಕಳೂ ಇಲ್ಲದ ಅವರ ನೆರಳಿಗೆ ಇರುವುದು ಸಣ್ಣ ಗುಡಿಸಲು ಮಾತ್ರ. ಈಗ ಅದನ್ನೂ ಕಳೆದುಕೊಳ್ಳುತ್ತಿದ್ದು, ಅವರ ಮನೆ ಕೂಡ ಮೇಲಿನ ಸರ್ವೆ ನಂಬರ್ ವ್ಯಾಪ್ತಿಯಲ್ಲೇ ಬರುವುದರಿಂದ ಪರಿಹಾರ ಕನ್ನಡಿ ಗಂಟಾಗಿದೆ. ನೆರೆಮನೆಯ ರಾಜೀವಿ (43) ಅವರ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಗಂಡನ ಸಾವಿನ ಬಳಿಕ ತಾಯಿ ಎಂಕಮ್ಮನನ್ನು ಬಿಟ್ಟರೆ ಅವರಿಗೂ ಯಾರೂ ಆಸರೆ ಇಲ್ಲ. ಜಾಗದ ವಿಷಯದಲ್ಲಿ ನಾದಿನಿ ತಕರಾರು ತೆಗೆದಿರುವುದರಿಂದ ಪರಿಹಾರ ಕೈಸೇರಿಲ್ಲ. ಇದು ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುವ ಬಜ್ಪೆ, ಕಳವಾರು, ಬಾಳ, ತೋಕೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಂತ್ರಸ್ತರ ಸ್ಥಿತಿಯಾದರೆ, ಭೂಸ್ವಾಧೀನಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ತೆಂಕ ಎಕ್ಕಾರು, ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಥೆ ಮತ್ತೊಂದು ಬಗೆಯದು. ಕುತ್ತೆತ್ತ್ತೂರು ಗ್ರಾಮದ ಜಯ ಶೆಟ್ಟಿ 1965ರಲ್ಲಿ ಪಣಂಬೂರು ಬಂದರು ಯೋಜನೆಯಲ್ಲಿ ಭೂಮಿ ಕಳೆದುಕೊಂಡು ನಿರ್ವಸತಿಗರಾದವರು. ಈ ಗ್ರಾಮಕ್ಕೆ ಬಂದು ಜಮೀನು ಮಾಡಿ, ಅಡಿಕೆ, ತೆಂಗು ಬೆಳೆದಿದ್ದಾರೆ. ಈಗ ಅವು ಫಸಲು ಕೊಡುವ ಹೊತ್ತಿಗೆ ಸರಿಯಾಗಿ ಎಂಎಸ್‌ಇಝಡ್ ಬಂದಿದೆ. ಮಜಲಕೋಡಿಯ ಬಾಬು ಶೆಟ್ಟಿ ಅವರ ಸ್ಥಿತಿಯೂ ಇದೆ. ಅವರೂ ಹಿಂದೊಮ್ಮೆ ಸಂತ್ರಸ್ತರಾಗಿ ಬಂದು ಜಮೀನು- ಮನೆ ಮಾಡಿಕೊಂಡು ನೆಲೆ ಕಂಡುಕೊಳ್ಳುವ ಹೊತ್ತಿಗೆ ಮತ್ತೊಂದು ಯೋಜನೆ ಅವರನ್ನು ಎತ್ತಂಗಡಿ ಮಾಡುತ್ತಿದೆ. ಇದು ಎಂಎಸ್‌ಇಝಡ್ ಸೃಷ್ಟಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟವಾದರೆ, ಈಗಾಗಲೇ ಪಣಂಬೂರು ಬಂದರು, ಕೊಂಕಣ ರೈಲ್ವೆ, ಎಂಆರ್‌ಪಿಎಲ್ ಯೋಜನೆಗಳಾಗಿ 17 ಸಾವಿರ ಎಕರೆಗೂ ಅಧಿಕ ಜಮೀನು ಕಳೆದುಕೊಂಡು ಸಂತ್ರಸ್ತರ ನೆಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯದ ಕಥೆ ಮತ್ತೊಂದು. ಜಗತ್ತಿನ 12 ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದಾದ ಪಶ್ಚಿಮಘಟ್ಟ ಮತ್ತು ಮೀನುಗಾರಿಕೆಯ ಕೇಂದ್ರವಾದ ಕರಾವಳಿಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಪರಿಸ್ಥಿತಿಯ ಕುರಿತು ಈ ಹಿಂದೆ ಕರ್ನಾಟಕ ಸರ್ಕಾರವೇ ನೇಮಿಸಿದ್ದ ಐದು ಸಮಿತಿಗಳು ವರದಿ ನೀಡಿವೆ. 1993-95ರ ಡ್ಯಾನಿಡಾ ವರದಿ, ಕರ್ನಾಟಕ ಮೂಲ ಸೌಲಭ್ಯ ಯೋಜನಾ ಕೇಂದ್ರ ಸಿದ್ಧಪಡಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಔದ್ಯಮಿಕ ಮತ್ತು ಆರ್ಥಿಕ ಬೆಳವಣಿಗೆ ಮುನ್ನೋಟ, ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ಸಿದ್ಧಪಡಿಸಿದ ಕರ್ನಾಟಕ ಪರಿಸರ ಪರಿಸ್ಥಿತಿ ವರದಿ ಮತ್ತು ಕಾರ್ಯ ಯೋಜನೆ-2003, ನಾಗ್ಪುರದ 'ನ್ಯಾಷನಲ್ ಎನ್ವಿರಾನ್‌ಮೆಂಟಲ್ ಎಂಜಿನಿಯರಿಂಗ್ ರೀಸರ್ಚ್ ಇನ್ಸ್‌ಸ್ಟಿಟ್ಯೂಟ್' (ನೀರಿ) ನಂದಿಕೂರು ಉಷ್ಣವಿದ್ಯುತ್ ಸ್ಥಾವರ ಯೋಜನೆ ಹಿನ್ನೆಲೆಯಲ್ಲಿ ನೀಡಿದ ಅಧ್ಯಯನ ವರದಿ, ದಕ್ಷಿಣ ಕನ್ನಡ ಜಿಲ್ಲೆಯ ಧಾರಣಾ ಸಾಮರ್ಥ್ಯ ಕುರಿತು ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿ ನೀಡಿದ ವರದಿಗಳು ಸೇರಿದಂತೆ ಹಲವು ಪರಿಸರ ಅಧ್ಯಯನ ವರದಿಗಳು ಇಲ್ಲಿನ ಪರಿಸರದ ಸೂಕ್ಷ್ಮತೆಯನ್ನು ವಿವರಿಸಿ ಬೃಹತ್ ಕೈಗಾರಿಕೆಗಳನ್ನು ಜಿಲ್ಲೆಯಿಂದ ದೂರವಿಡುವಂತೆ ಎಚ್ಚರಿಕೆ ನೀಡಿವೆ. ಈಗಾಗಲೇ ಉದ್ಯಮಗಳಿಂದ ತುಂಬಿ ಹೋಗಿರುವ ದಕ್ಷಿಣ ಕನ್ನಡದ ಕರಾವಳಿ ತೀರದ ಧಾರಣಾ ಶಕ್ತಿಯ ಮಿತಿ ಮೀರಿದೆ ಎಂಬ ಅಂಶ ಕೂಡ ವೈಜ್ಞಾನಿಕವಾಗಿ ಒಪ್ಪಿಕೊಳ್ಳುವಂತಹದಾಗಿದೆ. ಹಾಗೇ ಭೂಕಂಪ ಸಾಧ್ಯತೆ ಹೆಚ್ಚಿರುವ ರಾಷ್ಟ್ರದ ಪ್ರಮುಖ ತಾಣಗಳಲ್ಲಿ ದಕ್ಷಿಣ ಕನ್ನಡದ ಕರಾವಳಿ ತೀರಾ ಒಂದಾಗಿದೆ ಎಂಬುದನ್ನು ಕೂಡ ಇತ್ತೀಚಿನ ಭೂಗರ್ಭ ಅಧ್ಯಯನಗಳು ಹೇಳಿವೆ. ಪರಿಸ್ಥಿತಿ ಹೀಗಿರುವಾಗ ಜಿಲ್ಲೆಯಲ್ಲಿ ಇದೀಗ 3,985 ಎಕರೆ ಹಸಿರು ಭೂಮಿಯನ್ನು ಕಬಳಿಸುವ 35,000 ಕೋಟಿ ರೂಪಾಯಿಯ ಎಂಎಸ್‌ಇಝಡ್ ಸೇರಿದಂತೆ ಒಟ್ಟು ಆರು ಎಸ್‌ಇಝಡ್‌ಗಳು ದಕ್ಷಿಣ ಕನ್ನಡದಲ್ಲಿ ನೆಲೆಯೂರುತ್ತಿವೆ. ಪಡುಬಿದ್ರೆ ಬಳಿ 1200 ಎಕರೆ ಪ್ರದೇಶದಲ್ಲಿ ಸುಜಲಾನ್ ಎಸ್‌ಇಝಡ್, ಬಂಟ್ವಾಳದ ತುಂಬೆ ಬಳಿ ಸುಮಾರು 100 ಎಕರೆ ಪ್ರದೇಶದಲ್ಲಿ ಬಿ.ಎ. ಟೆಕ್ನಾಲಜಿ ಪಾರ್ಕ್ ಎಸ್‌ಇಝಡ್, ಮಂಗಳೂರಿನ ಗಂಜಿಮಠ್ ಬಳಿ ಕಿನ್‌ಫೋಟೆಕ್ ಎಸ್‌ಇಝಡ್, 275 ಎಕರೆ ಪ್ರದೇಶದಲ್ಲಿ ಇನ್ಫೋಸಿಸ್‌ನ ಐಟಿ/ಐಟಿಇಎಸ್ ಎಸ್‌ಇಝಡ್ ಹಾಗೂ 500 ಎಕರೆ ಪ್ರದೇಶದ ಕೆಐಎಡಿಬಿಯ ಐಟಿ/ಐಟಿಇಎಸ್ ಎಸ್‌ಇಝಡ್‌ಗಳು ಈಗಾಗಲೇ ಭಾರತ ಸರ್ಕಾರದ ಮಂಜೂರಾತಿ ಮಂಡಳಿಯ ಅನುಮತಿ ಪಡೆದು ನಿರ್ಮಾಣವಾಗುತ್ತಿವೆ. ಇವು ಸಾಲದು ಎಂಬಂತೆ ಇದೇ ಜಿಲ್ಲೆಯ 74 ಸಾವಿರ ಎಕರೆ ಪ್ರದೇಶದಲ್ಲಿ ಪೆಟ್ರೋಲಿಯಂ, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್‌ಮೆಂಟ್ ರೀಜನ್(ಪಿಸಿಪಿಐಆರ್) ಎಂಬ ವಿಶೇಷ ತೈಲ ಮತ್ತು ರಾಸಾಯನಿಕ ವಲಯ ಸ್ಥಾಪನೆ ಪ್ರಕ್ರಿಯೆಗಳು ಸರ್ಕಾರದ ಮಟ್ಟದಲ್ಲಿ ಆರಂಭಗೊಂಡಿವೆ. ಅದಕ್ಕಾಗಿ ನೆರೆಯ ಉಡುಪಿ ಜಿಲ್ಲೆಯೂ ಸೇರಿದಂತೆ ಒಟ್ಟು 75 ಗ್ರಾಮಗಳ 2-3 ಲಕ್ಷ ಕೃಷಿಕರನ್ನು ಒಕ್ಕಲೆಬ್ಬಿಸುವ ಸಾಧ್ಯತೆ ಇದೆ. ಈಗ ಹೋರಾಟದ ಸಂಗತಿಯಾಗಿರುವ ಎಂಎಸ್‌ಇಝಡ್ ಕೂಡ ಈ ಬೃಹತ್ ಯೋಜನೆಯ ಪೂರ್ವಭಾವಿ ಯೋಜನೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ತೀರದಲ್ಲಿ ವಿವಿಧ ಕೃಷಿ, ಪರಿಸರ ಮತ್ತು ನಾಗರಿಕ ಸಂಘಟನೆಗಳು ಭಾರಿ ಪ್ರತಿಭಟನೆ, ಹೋರಾಟಕ್ಕೆ ಚಾಲನೆ ನೀಡಿದ್ದು, ಮಂಗಳೂರಿನಲ್ಲಿ ಒಂದಿಲ್ಲೊಂದು ಸಮಾವೇಶ, ಸಭೆ, ಜಾಗೃತಿ ಕಾರ್ಯಕ್ರಮಗಳು ಚುರುಕುಗೊಂಡಿವೆ. ಆದರೆ, ದೇಶವನ್ನೇ ತಲ್ಲಣಗೊಳಿಸಿದ ಪಶ್ಚಿಮಬಂಗಾಳದ ನಂದಿಗ್ರಾಮದಂತೆಯೇ ಇಲ್ಲಿಯೂ ಅಧಿಕಾರಶಾಹಿ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳೇ ಮೇಲುಗೈ ಸಾಧಿಸುತ್ತಿದ್ದು, ಸರ್ಕಾರದ ಪರವಾಗಿ ಜಿಲ್ಲೆಯ ಜನತೆಯ ಬೇಕು-ಬೇಡಗಳನ್ನು ವಿವೇಚಿಸಬೇಕಾದ ಉನ್ನತ ಅಧಿಕಾರಿಗಳೇ ಕಾರ್ಪೊರೇಟ್ ವಕ್ತಾರರಂತೆ ವರ್ತಿಸುತ್ತಿದ್ದಾರೆ. ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿರುವ ಕೃಷಿ ಭೂಮಿಯನ್ನು ಮಾಯ ಮಾಡಿ ಸಂಪೂರ್ಣ ಕೈಗಾರಿಕೀಕರಣ ಮಾಡಿದಲ್ಲಿ ಅದನ್ನು ತಡೆದುಕೊಳ್ಳುವ ಶಕ್ತಿ ಅಲ್ಲಿನ ಪರಿಸರಕ್ಕೆ ಇದೆಯೇ? ಎಂಬ ಬಗ್ಗೆ ಯಾರೂ ಚಿಂತನೆ ಮಾಡುತ್ತಿಲ್ಲ. ಅದರಲ್ಲಿಯಂತೂ ಸರ್ಕಾರ ರೈತರ ಭೂಮಿಯನ್ನು ಹೇಗಾದರೂ ಕೈವಶ ಮಾಡಿಕೊಂಡು ಅದನ್ನು ಉದ್ಯಮಿಗಳಿಗೆ ಪರಭಾರೆ ಮಾಡಲು ಆತುರ ತೋರುತ್ತಿದೆ ಎನ್ನುವ ಅಂಶ ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಈ ನಡುವೆ ಎಂಎಸ್‌ಇಝಡ್‌ಗಾಗಿ ಕೆಐಎಡಿಬಿ ಈಗಾಗಲೇ ಬಜ್ಪೆ, ಕಳವಾರು, ಬಾಳ, ತೋಕೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 1800 ಎಕರೆ ಭೂಮಿಯನ್ನು ಸ್ವಾಧೀಪಡಿಸಿಕೊಂಡಿದ್ದು, ಭೂಮಿ ಮತ್ತು ಮನೆ ಕಳೆದುಕೊಳ್ಳುವವರಿಗೆ ಪರಿಹಾರ ವಿತರಣೆ ಕೂಡ ಆರಂಭಿಸಿದೆ. ಇನ್ನುಳಿದ 2095 ಎಕರೆ ಜಮೀನು ಸ್ವಾಧೀನಕ್ಕೆ ಆದೇಶ ಹೊರಡಿಸಿದೆ. ಆದರೆ, ಆ ವ್ಯಾಪ್ತಿಯ ತೆಂಕ ಎಕ್ಕಾರು, ಪೆರ್ಮುದೆ, ಕುತ್ತೆತ್ತೂರು, ದೇಲಂತಬೆಟ್ಟು ಗ್ರಾಮ ಪಂಚಾಯ್ತಿಗಳ ರೈತರು ಮತ್ತು ಸಾರ್ವಜನಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಂಎಸ್‌ಇಝಡ್ ಇಲ್ಲಿಂದ ಕಾಲ್ತೆಗೆಯಲಿ. ಅವರಿಗೆ ನಮ್ಮ ಜೀವ ಹೋದರೂ ಒಂದು ಮೆಟ್ಟು ಭೂಮಿಯನ್ನೂ ನೀಡುವುದಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಎಂಎಸ್‌ಇಝಡ್‌ನೊಂದಿಗೆ ನೇರ ಹಣಾಹಣಿಗೆ ಇಳಿದಿದ್ದಾರೆ. ಹಾಗೇ ಈ ಗ್ರಾಮ ಪಂಚಾಯ್ತಿಗಳ ಗ್ರಾಮಸಭೆಗಳಲ್ಲಿ ಕೂಡ ಎಸ್‌ಇಝಡ್ ವಿರೋಧಿಸಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳಿಸಿವೆ. ಹಾಗೇ ಎಂಎಸ್‌ಇಝಡ್ ಮತ್ತು ಅದಕ್ಕೆ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕೆಐಎಡಿಬಿ ಎಸ್‌ಇಝಡ್ ಕುರಿತ ಭಾರತ ಸರ್ಕಾರದ ನಿರ್ದೇಶನಗಳು, ರಾಷ್ಟ್ರೀಯ ಜಲ ನೀತಿ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆಗಳನ್ನು ಗಾಳಿಗೆ ತೂರಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಕಾನೂನಿನ ಪ್ರಕಾರವೇ ಹೋದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳೇ ಅಂತಿಮ. ಆದರೆ, ಸಂಪೂರ್ಣ ದೃಷ್ಟಿ ಹೀನವಾಗಿರುವ ಆಡಳಿತಶಾಹಿ ಕಣ್ಣಿಗೆ ಪಂಚಾಯತ್ ರಾಜ್ ಕಾಯಿದೆಗಳು ಬೀಳುತ್ತಲೇ ಇಲ್ಲ. ಅದರ ಪರಿಣಾಮವೇ ಈಗ ಎಂಎಸ್‌ಇಝಡ್ ಮೇಲೆ ರಾಚುತ್ತಿದೆ. ಈ ಕುರಿತು 'ಟಿಎಸ್‌ಐ' ಜೊತೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ರಚಿಸಿರುವ 'ಎಂಎಸ್‌ಇಝಡ್ ಪರಿಸರ ಪರಿಣಾಮ ಅಧ್ಯಯನ ಸಮಿತಿ'ಯ ಕಟೀಲು ದಿನೇಶ್ ಪೈ, ಪಾಳುಭೂಮಿಯನ್ನು ಮಾತ್ರ ಎಸ್‌ಇಝಡ್‌ಗೆ ಸ್ವಾಧೀನಪಡಿಸಿಕೊಳ್ಳಬೇಕು, ಕೃಷಿ ಅಥವಾ ಬೆಳೆ ಇರುವ ಜಮೀನನ್ನಲ್ಲ ಎಂದು ಎಸ್‌ಇಝಡ್ ಕಾಯ್ದೆ-2006ರಲ್ಲೇ ಹೇಳಿದೆ. ಆದರೆ, ಇಲ್ಲಿ ಅಡಿಕೆ, ಬಾಳೆ, ಗೇರು, ಭತ್ತ ಇರುವಂತಹ ಹಸಿರು ಭೂಮಿಯನ್ನೇ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಅಲ್ಲಿನ ನೀರಿನ ಅಗತ್ಯಕ್ಕಾಗಿ ಮಂಗಳೂರು ಮತ್ತು ಸುತ್ತಮುತ್ತಲಿನ ಪಟ್ಟಣಗಳ ಕುಡಿಯುವ ನೀರಿನ ಮೂಲವಾಗಿರುವ ನೇತ್ರಾವತಿ ನದಿಗೆ ನಾಲ್ಕು ಕಡೆ ಆಣೆಕಟ್ಟು ನಿರ್ಮಿಸುವುದಾಗಿ ಹೇಳಿದ್ದಾರೆ. ಇದು ರಾಷ್ಟ್ರೀಯ ಜಲನೀತಿ- 2002ರ ಸ್ಪಷ್ಟ ಉಲ್ಲಂಘನೆಯಾಗಲಿದೆ. ಒಟ್ಟಾರೆ, ಸುಮಾರು 18000 ರೈತ ಕುಟುಂಬಗಳನ್ನು ಬೀದಿಪಾಲು ಮಾಡುವ, ಇಲ್ಲಿನ ಸೂಕ್ಷ್ಮ ಪರಿಸರವನ್ನು ಬುಡಮೇಲು ಮಾಡುವ ಯೋಜನೆ ನಮಗೆ ಬೇಡ ಎನ್ನುತ್ತಾರೆ. ಆದರೆ, ಎಂಎಸ್‌ಇಝಡ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಜಿ. ಪೈ ವಾದವೇ ಬೇರೆ. ಟಿಎಸ್‌ಐ ಜೊತೆ ಮಾತನಾಡಿದ ಅವರು, 1800 ಎಕರೆ ಭೂಮಿಯನ್ನು ಈಗಾಗಲೇ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಇನ್ನು 2000 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ಆಗಬೇಕಿದೆ. ನಾವು ಎಲ್ಲೂ ಒತ್ತಾಯಪೂರ್ವಕವಾಗಿ ಭೂಸ್ವಾಧೀನಕ್ಕೆ ಮುಂದಾಗಿಲ್ಲ. ವಾಸ್ತವವಾಗಿ ಭೂಮಿಯ ಮಾಲೀಕರು ತಮ್ಮ ಭೂಮಿಗೆ ಉತ್ತಮ ಬೆಲೆ ಬಂದಿರುವುದರಿಂದ ಬಿಟ್ಟುಕೊಡಲು ಸಿದ್ಧರಿದ್ದಾರೆ. ಆದರೆ, ಮಾಧ್ಯಮವೂ ಸೇರಿದಂತೆ ಕೆಲವರು ಹೊರಗಿನವರು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಎಂಆರ್‌ಪಿಎಲ್, ಕೆಐಎಡಿಬಿ, ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಮತ್ತು ಐರ್‍ಲೆಂಡ್ ಎಫ್‌ಎಕ್ಸ್ ಕಂಪನಿಗಳ ಸಹಯೋಗದಲ್ಲಿ ಅಭಿವೃದ್ಧಿಯಾಗುತ್ತಿರುವ ಈ ಮಂಗಳೂರು ವಿಶೇಷ ಆರ್ಥಿಕ ವಲಯದ ವಿರುದ್ಧ ಜನರ ಆಕ್ರೋಶ, ಅಹವಾಲುಗಳು ಹೆಚ್ಚಾದ ಪರಿಣಾಮ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಮೂಲಸೌಕರ್ಯ ಅಭಿವೃದ್ಧಿ ಕುರಿತ ವಿಶೇಷ ತಜ್ಞರ ತಂಡ ಫೆಬ್ರುವರಿ ಮೊದಲ ವಾರದಲ್ಲಿ ಯೋಜಿತ ಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡಿತ್ತು. ತಂಡ ಭೇಟಿ ನೀಡಿದ ಎಲ್ಲಾ ಕಡೆ 'ಯೋಜನೆಗೆ ಭೂಮಿ ನೀಡಲು ಸಿದ್ಧವಿಲ್ಲ' ಎಂಬ ಜನರ ಒಕ್ಕೊರಲಿನ ನುಡಿಗಳಿಗೆ ಅವರೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿದ್ದ ಟಿಎಸ್‌ಐ ತಂಡ ಸಾಕ್ಷಿಯಾಯಿತು. ಪರಿಸರ ಸಮಸ್ಯೆಗಳ ಜೊತೆಗೆ ನಕ್ಸಲೀಯ ಚಟುವಟಿಕೆಯಿಂದಲೂ ದಿಕ್ಕೆಟ್ಟಿರುವ ಕರಾವಳಿಯ ಜನತೆಯ ಪಾಲಿಗೆ ಇಂತಹ ಬೃಹತ್ ಯೋಜನೆಗಳು ಬೇಕೆ- ಬೇಡವೇ ಎಂಬ ಬಗ್ಗೆ ಈಗ ಅಂತಿಮ ನಿರ್ಧಾರ ಕೈಗೊಳ್ಳಬೇಕಾದ ಕಾಲ ಬಂದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದಂತಹ ಜನರ ಎತ್ತಂಗಡಿ ಮಾಡುವ ಯೋಜನೆಯನ್ನೇ ನೆಪವಾಗಿಸಿಕೊಂಡು ಮಲೆನಾಡು ಮತ್ತು ಕರಾವಳಿಯಲ್ಲಿ ತಮ್ಮ ಜಾಲ ವಿಸ್ತರಿಸುತ್ತಿರುವ ನಕ್ಸಲೀಯ ಶಕ್ತಿಗಳು, ಭೂಕಂಪ ಸಾಧ್ಯತೆಯಂತಹ ಭಯಾನಕ ಆತಂಕವಿರುವ ಕರಾವಳಿಯ ಕಡಲ ತೀರ ಮತ್ತು ಹಲವು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ನಲುಗಿರುವ ಬಡ ಕೃಷಿಕರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಯ ಬಗ್ಗೆ ಸರ್ಕಾರಗಳು ಪುನರಾವಲೋಕನ ಮಾಡಬೇಕಿದೆ. ಇದು ಅತ್ಯಂತ ಜರೂರು. ಸ್ಥಳೀಯ ಜನರು ಬೇಡ ಎನ್ನುವಾಗ ಕೇವಲ ಉದ್ಯಮ ಜಗತ್ತಿನ ದೊರೆಗಳನ್ನು ತೃಪ್ತಿ ಪಡಿಸುವ ಸಲುವಾಗಿ ಇಂತಹ ಯೋಜನೆಗಳನ್ನು ತೆಗೆದುಕೊಂಡು ಹೋಗಿ ಪರಿಸರದ ದೃಷ್ಟಿಯಲ್ಲಿ ಅತ್ಯಂತ ಸೂಕ್ಷ್ಮ ತಾಣವಾದ ಕರಾವಳಿ ಮೇಲೆ ಹೇರುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ, ಬಿಲಿಯಾಧಿಪತಿಗಳಿಗಾಗಿಯೇ ಅಸ್ತಿತ್ವದಲ್ಲಿರುವ ಸರ್ಕಾರ ಅವರ ಉದ್ಧಾರಕ್ಕೆ ತಕ್ಕಂತಹ ವಾತಾವರಣವನ್ನೇ ಸೃಷ್ಟಿಸುತ್ತಾ ಮುಂದಕ್ಕೆ ಹೆಜ್ಜೆ ಹಾಕುತ್ತಿದೆ. ಇದು ಸ್ವಾಗತಾರ್ಹ ಹಾಗೂ ಜನಪರ ನಿಲುವಲ್ಲ. ಇದೇ ಸ್ಥಿತಿ ಮುಂದುವರಿದರೆ ತನ್ನವರು ಎಂಬುವರನ್ನೆಲ್ಲಾ ಕಳೆದುಕೊಂಡು ಅನಾಥ ಪ್ರಜ್ಞೆಯಲ್ಲಿ ದಿಕ್ಕುತೋಚದಂತಾಗಿರುವ ಲಲಿತಾ ಅವರ ಸ್ಥಿತಿಯೇ ಇಡೀ ದಕ್ಷಿಣ ಕನ್ನಡ ಜಿಲ್ಲೆಯದ್ದೂ ಆದರೆ ಆಶ್ಚರ್ಯವಿಲ್ಲ!

ಎಂಎಸ್‌ಇಝಡ್ ವರದಾನ

ಆ ಪ್ರದೇಶದಲ್ಲಿ ಕೇವಲ 22ರಿಂದ 23 ಶೇಕಡ ಮಾತ್ರ ಕೃಷಿ ಭೂಮಿ ಇದೆ. ಆ ಪೈಕಿ ಶೇ.5ರಷ್ಟು ಭೂಮಿಯಲ್ಲಿ ಮಾತ್ರ ಬಹುವಾರ್ಷಿಕ ಬೆಳೆ ಇದೆ. ವಾಸ್ತವವಾಗಿ ಭೂಮಿಯ ಮಾಲೀಕರು ತಮ್ಮ ಭೂಮಿಗೆ ಉತ್ತಮ ಬೆಲೆ ಬಂದಿರುವುದರಿಂದ ಬಿಟ್ಟುಕೊಡಲು ಸಿದ್ಧರಿದ್ದಾರೆ. 1.5ರಿಂದ 2.5 ಲಕ್ಷದವರೆಗೆ ಬೆಲೆ ಇದ್ದ ಭೂಮಿಗೆ ನಾವು 8ರಿಂದ 8.5 ಲಕ್ಷ ರೂಪಾಯಿ ಕೊಡುತ್ತಿದ್ದೇವೆ. ಜೊತೆಗೆ ಅವರಿಗೆ ಬದಲಿ ನಿವೇಶನ, ಫ್ಲಾಟು ಸೇರಿ ಒಟ್ಟು ಒಂದು ಎಕರೆ ಭೂಮಿ ಮತ್ತು ಮನೆ ಹೊಂದಿದವರಿಗೆ ನಾವು 23.5 ಲಕ್ಷ ರೂಪಾಯಿ ಹಾಗೂ ಮನೆಯ ಒಬ್ಬ ವಿದ್ಯಾವಂತರಿಗೆ ನೌಕರಿ ಕೊಡುತ್ತೇವೆ. ಹಾಗಿರುವಾಗ ಯಾರು ತಾನೆ ಬೇಡ ಎನ್ನುತ್ತಾರೆ. ಆದರೆ, ಯಾರೋ ಕೆಲವರು ಪರಿಸರವಾದಿಗಳು, ಎನ್‌ಜಿಒಗಳು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ನೋಡೋಣ, ಜನರಿಗೆ ಇದು ಬೇಕಿದ್ದರೆ, ಆಗುತ್ತದೆ. ಇಲ್ಲವಾದರೆ ಇಲ್ಲ. ಇಲ್ಲಿನ ಶಿಕ್ಷಿತ ಯುವಕರಿಗೆ ಉದ್ಯೋಗ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಬಂದರು, ವಿಮಾನ ಮುಂತಾದ ಎಲ್ಲಾ ರೀತಿಯ ಮೂಲಸೌಕರ್ಯವಿರುವ ಈ ಭಾಗದಲ್ಲಿ ಇಂತಹ ಉದ್ಯಮ ಬೇಕೆ, ಬೇಡವೇ?

.ಜಿ. ಪೈ,
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂಎಸ್‌ಇಝಡ್

ಎಂಎಸ್‌ಇಝಡ್ ಅಪಾಯಕಾರಿ

ಕಂಪನಿಯೇ ಹೇಳಿರುವ ಪ್ರಕಾರ ಎಸ್‌ಇಝಡ್‌ನಲ್ಲಿ ಅಸ್ತಿತ್ವಕ್ಕೆ ಬರಲಿರುವ ಕಾರ್ಖಾನೆಗಳಲ್ಲಿ ಬೆನ್ಜೀನ್, ಹೈಡ್ರೋಜನ್ ಸಲ್ಫೈಡ್, ಸಲ್ಫರ್ ಡಯಾಕ್ಸೈಡ್ ಮುಂತಾದ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಒಂದು ನಿರ್ದಿಷ್ಟ ಉಷ್ಣತೆಯಲ್ಲೇ ಅವುಗಳನ್ನು ಬಳಸುವುದರಿಂದ ವಿದ್ಯುತ್ ಅಗತ್ಯಕ್ಕಾಗಿ ಏನು ವ್ಯವಸ್ಥೆ ಮಾಡುತ್ತೇವೆ ಎಂಬುದನ್ನು ಕಂಪನಿ ಹೇಳಿಲ್ಲ. ಹಾಗೇ ತ್ಯಾಜ್ಯ ವಿಲೇವಾರಿಗೆ ನೀರನ್ನು ಬಳಸುವ ಉದ್ದೇಶದಿಂದ ನೇತ್ರಾವತಿ ನದಿಗೆ ಎರಡು ದೊಡ್ಡ ಆಣೆಕಟ್ಟು ಸೇರಿದಂತೆ ಒಟ್ಟು ನಾಲ್ಕು ಕಡೆ ತಡೆ ನಿರ್ಮಿಸುವುದಾಗಿ ಹೇಳಲಾಗಿದೆ. ಅದರಿಂದಾಗಿ ಮಂಗಳೂರು ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಜೊತೆಗೆ ರಾಸಾಯನಿಕ ಬಳಕೆಯಿಂದ ಈ ಪ್ರದೇಶದ ಅಂತರ್ಜಲ ಕೂಡ ಮಲಿನವಾಗುವ ಸಾಧ್ಯತೆಯಿದೆ. ಇಲ್ಲಿನ ಪರಿಸರ ಧಾರಣಾ ಸಾಮರ್ಥ್ಯದ ಸರಿಯಾದ ಅಧ್ಯಯನ ಮಾಡಿಲ್ಲ. ಯೋಜನೆಯ ಸಾಮಾಜಿಕ- ಆರ್ಥಿಕ ಪರಿಣಾಮಗಳ ಕುರಿತ ಅಧ್ಯಯನವನ್ನು ಕೂಡ ಕಾಟಾಚಾರಕ್ಕೆ ಕಾಲೇಜು ವಿದ್ಯಾರ್ಥಿಗಳಿಂದ ಮಾಡಿಸಲಾಗಿದೆ.

ಕಟೀಲು ದಿನೇಶ್ ಪೈ,
ಪರಿಸರವಾದಿ

ಎಸ್‌ಇಝಡ್ ಹಾದಿಯಲ್ಲಿ ಕರ್ನಾಟಕ....

ಕರ್ನಾಟಕದಲ್ಲಿ ಈವರೆಗೆ ಒಟ್ಟು 39 ವಿಶೇಷ ಆರ್ಥಿಕ ವಲಯ(ಎಸ್‌ಇಝಡ್)ಗಳಿಗೆ ಕೇಂದ್ರ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಜೊತೆಗೆ 15 ಎಸ್‌ಇಝಡ್‌ಗಳಿಗೆ ಷರತ್ತುಬದ್ಧ ಅನುಮೋದನೆ ನೀಡಿದೆ. ಅಲ್ಲದೆ 20 ಎಸ್‌ಇಝಡ್‌ಗಳ ಸ್ಥಾಪನೆಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಎಸ್‌ಇಝಡ್‌ಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಎಸ್‌ಇಝಡ್‌ಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ವ್ಯಾಪ್ತಿಗೆ ಬರುತ್ತಿದ್ದು, ಅವರ ವೆಬ್‌ಸೈಟ್ ಮಾಹಿತಿಯಂತೆ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಆರು ಎಸ್‌ಇಝಡ್‌ಗಳು ಆರಂಭವಾಗುತ್ತಿವೆ.

ಮಂಗಳೂರು- ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್‌ಇಝಡ್) ಲಿ.
ತುಂಬೆ (ಬಂಟ್ವಾಳ)- ಬಿಎ ಟೆಕ್ನಾಲಜಿ ಪಾರ್ಕ್ ಲಿ.
ಗಂಜಿಮಠ್ (ಮಂಗಳೂರು)- ಕಿನ್ಫೋಟೆಕ್ ಸಾಫ್ಟ್‌ವೇರ್ ಲಿ.
ಮಂಗಳೂರು- ಸುಜಲಾನ್ ಇನ್‌ಫ್ರಾಸ್ಟ್ರಕ್ಚರ್ ಲಿ.
ಮಂಗಳೂರು- ಇನ್ಫೋಸಿಸ್ ಲಿ. ಮಂಗಳೂರು- ಕೆಐಎಡಿಬಿ

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .