|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ವಿವಾಹಪೂರ್ವ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಯೋಚಿಸುತ್ತಿದೆ. ಒಂದು ವೇಳೆ ಈ ಕಾನೂನು ಜಾರಿಗೆ ಬಂದಲ್ಲಿ ಇಂಥ ವಿವೇಚನಾಯುಕ್ತ ಕಾನೂನು ಜಾರಿಗೆ ತಂದ ಮೊತ್ತ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಲಿದೆ. ಎಚ್‌ಐವಿ/ಏಡ್ಸ್ ಬಾಧಿತರ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ದೇಶದಲ್ಲೇ ಎರಡನೇ ಅತೀ ಹೆಚ್ಚು ಎಚ್‌ಐವಿ ಬಾಧಿತರ ರಾಜ್ಯವಾಗಿರುವುದರಿಂದ ಮಹಾರಾಷ್ಟ್ರ ಇಂಥ ಒಂದು ಮಹತ್ತರ ಕಾನೂನನ್ನು ಜಾರಿಗೆ ತರುವತ್ತ ಆಸಕ್ತಿ ವಹಿಸಿದೆ. ಏಡ್ಸ್‌ನ ಕರಾಳ ನ್ಯಾಯವೆಂದರೆ ತನ್ನ ಸಂಪರ್ಕಕ್ಕೆ ಬಂದ 'ತಪ್ಪಿತಸ್ಥರು' ಮತ್ತು ಮುಗ್ಧರನ್ನು ಯಾವ ಭೇದವೂ ಇಲ್ಲದಂತೆ ಬಲಿ ಹಾಕುವುದು! ಹೀಗಾಗಿಯೇ ಏನೂ 'ತಪ್ಪು' ಮಾಡದ ಹಲವಾರು ಮುಗ್ಧ ಹೆಣ್ಣು ಮಕ್ಕಳು ಏಡ್ಸ್‌ಗೆ ಬಲಿಯಾಗಿ ಸಮಾಜಕ್ಕೂ ಮುಖ ತೋರಿಸಲಾಗದೆ, ಸತ್ಯವನ್ನೂ ಅರುಹಲಾಗದೆ ತಮ್ಮೊಳಗೆ ವೇದನೆ ಅನುಭವಿಸುವಂತಹ ಪ್ರಕರಣಗಳು ಕಡಿಮೆ ಏನೂ ಇಲ್ಲ. ಈ ದೃಷ್ಟಿಯಿಂದ ಏಡ್ಸ್ ಪೀಡೆಯನ್ನು ಕಿತ್ತೊಗೆಯುವಲ್ಲಿ ಮಹಾರಾಷ್ಟ್ರ ಸರ್ಕಾರದ ಶತಾಯ-ಗತಾಯ ಪ್ರಯತ್ನ ಶ್ಲಾಘನಾರ್ಹ ಎಂದನಿಸಿದರೂ ಈ ಕ್ರಮ ಎಷ್ಟರಮಟ್ಟಿಗೆ ಸಫಲವಾಗಲಿದೆ ಎಂಬುದು ಮಾತ್ರ ಯಕ್ಷಪ್ರಶ್ನೆ.
ಎರಡು ವರ್ಷಗಳ ಹಿಂದೆ ಜನರ ವ್ಯಾಪಕ ವಿರೋಧದಿಂದ ಈ ರೀತಿಯ ಕಾನೂನನ್ನು ಜಾರಿಗೆ ತರುವಲ್ಲಿ ಗೋವಾ ಮತ್ತು ಆಂಧ್ರಪ್ರದೇಶ ರಾಜ್ಯಗಳು ವಿಫಲವಾಗಿದ್ದು ಸರ್ವವೇದ್ಯ. ಜನರ ವಿರೋಧ, ಆಕ್ಷೇಪಣೆಗಳು ಒತ್ತಟ್ಟಿಗಿರಲಿ ಒಂದು ವೇಳೆ ಆ ಕಾನೂನು ಜಾರಿಗೆ ಬಂದರೂ ಅದು ತನ್ನ ಗುರಿ ಮುಟ್ಟುತ್ತದೆಯೇ ಎಂಬುದರಲ್ಲಿ ಯಾವುದೇ ಖಚಿತತೆ ಇಲ್ಲ.
ಈ ಕಾನೂನಿನ ಯಶಸ್ಸು ಜನರ ಕೈಯಲ್ಲೇ ಇದೆ. ತಿಳಿದೋ ತಿಳಿಯದೆಯೋ ಎಚ್‌ಐವಿ ಪೀಡಿತರಾದವರು ಮದುವೆಗಿಂತ ಮೊದಲು ಪ್ರ್ರಾಮಾಣಿಕವಾಗಿ ವಿಷಯವನ್ನು ಬಹಿರಂಗಪಡಿಸಿದರೆ ಸರ್ಕಾರದ ಪ್ರಯತ್ನ ಸಾರ್ಥಕ. ಸಮಸ್ಯೆ ಇರುವುದು ಇಲ್ಲೇ. ಇತರ ಯಾವುದೇ ಸೋಂಕುರೋಗಗಳಿಗಿಂತ ಭಿನ್ನವಾಗಿ ನಮ್ಮಲ್ಲಿ ಎಚ್‌ಐವಿ/ಏಡ್ಸ್ ಬಗ್ಗೆ ವಿಚಿತ್ರವಾದ ಪೂರ್ವಗ್ರಹ ಪೀಡಿತ ಭಾವನೆಗಳಿವೆ. ಇದರಿಂದ ಸೋಂಕಿನ ಬಗ್ಗೆ ಅರಿವಿದ್ದರೂ ಅಥವಾ ಸೋಂಕು ತಗಲಿದ್ದು ಆಕಸ್ಮಿಕವಾಗಿದ್ದರೂ ನಮ್ಮ ಸಮಾಜದ ಮುಂದೆ ಅದನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ಮುಖ್ಯವಾಗಿ ತಮಗಿರುವ ಸೋಂಕಿನ ಬಗ್ಗೆ ಅರಿವೇ ಇಲ್ಲದವರು, ಮಹಿಳೆಯರು ಮತ್ತು ಪೋಷಕರಿಂದ 'ಬಳುವಳಿ'ಯಾಗಿ ಎಚ್‌ಐವಿ ಪಡೆದುಕೊಂಡು ಬಂದವರಿಗೆ ಹಠಾತ್ ಆಘಾತ ಒಂದು ಕಡೆ ಯಾರೋ ಮಾಡಿದ ತಪ್ಪಿಗೆ ಸಮಾಜದ ಮುಂದೆ ಅವಮಾನಕ್ಕೀಡಾಗುವ ಭೀತಿ ಇನ್ನೊಂದು ಕಡೆ. ಇನ್ನು ನಮ್ಮ ಸಾಂಪ್ರದಾಯಿಕ ಮದುವೆಗಳ ಸ್ಥಿತಿ ಹೇಗಿದೆ ಎಂದು ಗೊತ್ತೇ ಇದೆಯಲ್ಲಾ? ವರ ಕೇಳಿದ್ದ ಕೆಂಪು ಬಣ್ಣದ ಬೈಕ್ ಬದಲಿಗೆ ಕಪ್ಪು ಬಣ್ಣದ ಬೈಕ್ ನೀಡಿದ್ದಕ್ಕಾಗಿಯೇ ಸಿಟ್ಟಿಗೆದ್ದು ಮದುವೆ ಮುರಿದು ಹಾಕುವಂತಹ ಪ್ರಕರಣಗಳು ನಡೆಯುವ ಸಮಾಜದಲ್ಲಿ ಎಚ್‌ಐವಿ ಪರೀಕ್ಷೆ ನಡೆಸುವಂತೆ ವರನ ಕಡೆಯವರನ್ನು ಕೇಳುವುದಾದರೂ ಹೇಗೆ?
ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣದಂತಿರುವ ನಮ್ಮ ಸಮಾಜದಲ್ಲಿ ಎಚ್‌ಐವಿ ಸೋಂಕು ತಗಲಿದ ಮಹಿಳೆಯ ಪಾಡು ಮಾತ್ರ ಶೋಚನೀಯ. ಇವೆಲ್ಲದರ ಸಮಗ್ರ ಪರಿಣಾಮವೆಂದರೆ, ಪರಿಸ್ಥಿತಿಯಿಂದ ನುಣುಚಿಕೊಳ್ಳಲು ಜನರು ವೈದ್ಯರ ಆಶ್ರಯ ಪಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ನಕಲಿ ಪ್ರಮಾಣ ಪತ್ರವನ್ನು ಕೊಡುವ ವೈದ್ಯರು, ದಲ್ಲಾಳಿಗಳು, ಅಧಿಕಾರಿಗಳು, ಇಂಥ ಕೆಲಸಗಳಿಗೇ ಇರುವ ಸಂಸ್ಥೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂಬುದನ್ನೂ ನಾವು ಗಮನಿಸಬೇಕು. ನಕಲಿ 'ಕ್ಲೀನ್ ಚಿಟ್' ನೀಡಿ ಕಾನೂನಿನ ಮೂಲ ಗುರಿಯನ್ನೇ ಹಾಳುಗೆಡವುವವರಿಗೆ ನಮ್ಮಲ್ಲಿ ಬರವಿಲ್ಲ.
ಈ ಕಾನೂನು ಈಗಾಗಲೇ ಅಪರಾಧಗಳಿಂದ ಕಂಗೆಟ್ಟಿರುವ ನಮ್ಮ ಸಮಾಜವನ್ನು ಬಾಣಲೆಯಿಂದ ಬೆಂಕಿಗೆ ಹಾಕುವ ಸಾಧ್ಯತೆಗಳೂ ಇವೆ. ಜನಜೀವನದ ಮೇಲಿನ ಈ ಕಾನೂನು ನಿರ್ಬಂಧದಿಂದ ಜನ ರೊಚ್ಚಿಗೆದ್ದರೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತವೆ. ಆದ್ದರಿಂದ ಇಂಥ ಪರ್ಯಾಯ ಅಪರಾಧಗಳಂಥ ಬೆಳವಣಿಗೆಗಳನ್ನು ತಡೆಯಬೇಕೆಂದರೆ ಇಂಥ ಸೂಕ್ಷ್ಮ ಕಾನೂನುಗಳಲ್ಲಿ ಜನರ ಭಾವನೆಗಳಿಗೆ ಸ್ಪಂದಿಸುವಂಥ ಪೂರಕ ಹೆಜ್ಜೆಗಳು ಇರಬೇಕು. ಎಚ್‌ಐವಿ ಬಾಧಿತರೂ ಸಮಾಜ ಒಪ್ಪುವಂಥ ರೀತಿಯಲ್ಲಿ, ಘನತೆಗೆ ಧಕ್ಕೆಯಾಗದಂತೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸೂಕ್ತ ವೇದಿಕೆಯನ್ನೂ ಸರ್ಕಾರವೇ ಒದಗಿಸಬೇಕು. ಇಂಥ ಯಾವುದೇ ಪೂರಕ ಹೆಜ್ಜೆಗಳಿಲ್ಲದೆ ಮನಸೋ ಇಚ್ಛೆ ಕಾನೂನುಗಳನ್ನು ಜಾರಿಗೆ ತಂದಲ್ಲಿ ಫಲಿತಾಂಶಗಳಿಗಿಂತ ವಿಪರೀತ ಪರಿಣಾಮಗಳನ್ನೇ ಎದುರಿಸಬೇಕಾಗುತ್ತದೆ.
ಐಐಪಿಎಂ
'ಥಿಂಕ್ ಟ್ಯಾಂಕ್' |