ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

ಗೌರವಯುತವಾಗಿಚಿತ್ರಿಸಿ

ಸ್ತ್ರೀ ಸಮಾಜದ ಪರವಾಗಿರುವ ಟಿಎಸ್‌ಐಗೆ ನಾನು ಮೊದಲು ಧನ್ಯವಾದ ಅರ್ಪಿಸುತ್ತೇನೆ. 'ದುಶ್ಶಾಸನರ ನಡುವೆ ಅಡಗಲು ಸ್ಥಳವೆಲ್ಲಿ?' ಲೇಖನದಲ್ಲಿ ಅರಿಂದಮ್ ಚೌಧುರಿ ಅವರು ಹೇಳಿರುವಂತೆ ಮಹಿಳೆಯರ ಮೇಲಾಗುತ್ತಿರುವ ಅಮಾನವೀಯ ಕೃತ್ಯಗಳಿಗೆ ಸಮಾಜದ ಜನರಲ್ಲಿ ಬೇರೂರಿರುವ ಮನಸ್ಥಿತಿಯೇ ಕಾರಣ. ಹೊಸ ವರ್ಷದ ಸಂದರ್ಭದಲ್ಲಿ ಜುಹುವಿನಲ್ಲಿ ನಡೆದ ಘಟನೆ ದೇಶದ ವರ್ಚಸ್ಸನ್ನು ಕುಂದಿಸಿದ್ದು, ಭಾರತ ಮಹಿಳೆಯರಿಗೆ ರಕ್ಷಣಾ ತಾಣ ಅಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಆದ್ದರಿಂದ ಅಧಿಕಾರಿಗಳು ಮತ್ತು ಮುಖ್ಯವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಮಹಿಳೆಯರ ಮೇಲಿನ ಶೋಷಣೆಗಳ ಹೊಣೆಗಾರರನ್ನಾಗಿಸಬೇಕು. ಸಮಾಜ ರಕ್ಷಣೆಯ ಜವಾಬ್ದಾರಿ ಹೊತ್ತ ಮಾಧ್ಯಮಗಳೂ ಮಹಿಳೆಯರನ್ನು ಗೌರವಯುತವಾಗಿ ಚಿತ್ರಿಸಬೇಕು. ಆ ಮೂಲಕ ಮಾತ್ರ ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನಮಾನ ದೊರಕಲು ಸಾಧ್ಯ.

ಪಿ. ಮರಿಯಮ್ಮ
ಕೇರಳ

ಸಂಸದರು ಎಲ್ಲಿ?

ರೈಲ್ವೆ ಇಲಾಖೆಯ ಅನ್ಯಾಯ ಕುರಿತ 'ಅನ್ಯಾಯದ ಹಳಿಯ ಮೇಲೆ' (ಶಶಿ ಸಂಪಳ್ಳಿ) ಲೇಖನ ಓದಿದೆ. ನೈರುತ್ಯ ರೈಲ್ವೆ ಇಲಾಖೆಯಲ್ಲಿ ಬಿಹಾರಿ ಲಾಬಿ ಕಣ್ಣ ಮುಂದೆಯೇ ನಡೆಯುತ್ತಿದ್ದರೂ, ನಮ್ಮ 40 ಮಂದಿ ಸಚಿವರು ತುಟಿಪಿಟಿಕ್ ಎನ್ನದೆ ಕುಳಿತಿರುವುದು ಅಚ್ಚರಿಯೇ ಸರಿ. ತಮ್ಮ ಸ್ವಾರ್ಥ ಸಾಧನೆಗಾಗಿ ಸಂಸತ್ತಿನಲ್ಲಿ ಬಡಬಡಿಸುವ ಸಂಸದರು ರೈಲ್ವೆ ವಿಷಯ ಬಂದಾಗ ಮಾತ್ರ ಬಾಲ ಮುದುರಿ ತೆಪ್ಪಗೆ ಕುಳಿತಿದ್ದರು. ಕನ್ನಡಪರ ಸಂಘಟನೆಗಳು ಈ ಬಗ್ಗೆ ಗಮನ ಸೆಳೆದ ನಂತರ ಕಾಣೆಯಾದ ರಾಜಕಾರಣಿಗಳು ಒಬ್ಬೊಬ್ಬರಾಗಿಯೇ 'ನಾನಿದ್ದೇನೆ' ಎಂದು ಬೆಂಬಲ ಸೂಚಿಸಿದ್ದು ನಿಜಕ್ಕೂ ನಾಚಿಕೆಗೇಡಿನ ವಿಷಯ. ರೈಲ್ವೆ, ಭಾಷೆ, ನೀರು ಎಲ್ಲದರಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಆದರೆ ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಮಹನೀಯರಿಗೆ ಈ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಅದೇ ಕಾರಣದಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಎನ್ನುವುದು ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ನಾವು ಕನ್ನಡ ಭಾಷೆ, ಶಾಸ್ತ್ರೀಯ ಸ್ಥಾನಮಾನದ ಕುರಿತು ಮಾತೆತ್ತಿದರೆ ಅದೇ ತಪ್ಪಾಗುತ್ತದೆ. ಕನ್ನಡ ಬಾಷೆ - ಕನ್ನಡ ನಾಡು ಇಲ್ಲಿನ ಜನತೆಗೆ ಏನೇ ಅನ್ಯಾಯವಾದರೂ ಎಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ಅನ್ಯ ರಾಜ್ಯಗಳ ಕಪಿ ಮುಷ್ಟಿಯಲ್ಲಿ ನಲುಗುವ ದಿನ ದೂರವಿಲ್ಲ.

ಸವಿತಾ ಶಿರಂಕಲ್ಲು
 ಕನ್ಯಾನ

ಅನ್ಯಾಯದವಿರುದ್ಧಧ್ವನಿ

'ಅನ್ಯಾಯದ ಹಳಿ ಮೇಲೆ...' ಲೇಖನ ಪ್ರಸ್ತುತ ಕನ್ನಡಿಗರ ಮೇಲಾಗುತ್ತಿರುವ ಅನ್ಯಾಯ ಹಾಗೂ ತಾರತಮ್ಯವನ್ನು ಅರ್ಥಪೂರ್ಣವಾಗಿ ವಿವರಿಸಿದೆ. ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ರೈಲ್ವೆಯಲ್ಲಿ ಮಾತ್ರ ಬಿಹಾರಿ ಲಾಬಿ ನಡೆದು ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದಲ್ಲ. ಭಾಷೆ, ನೀರು ಎಲ್ಲದರಲ್ಲೂ ಕನ್ನಡಿಗರಿಗೆ ಅನ್ಯಾಯವಾಗಿದೆ. ರೈಲ್ವೆ ಹುದ್ದೆ ನೇಮಕಾತಿಯಲ್ಲಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಲಾಬಿ ನಡೆಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅನುದಾನಗಳ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದು ಇಂದು- ನಿನ್ನೆಯ ಮಾತಲ್ಲ. ಇದಕ್ಕೆಲ್ಲ ಕಾರಣ ಕನ್ನಡಿಗರ ತಾಳ್ಮೆ ಎಂದರೆ ತಪ್ಪಾಗದು. ಆದರೆ ಇದನ್ನೇ ಹೇಡಿತನ ಅಂದುಕೊಳ್ಳುವುದಕ್ಕಿಂತ ಮುಂಚೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಯಾವುದೇ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ಪ್ರತಿಭಟಿಸುವುದು ಕೇವಲ ಕನ್ನಡಪರ ಸಂಘಟನೆಗಳ ಕೆಲಸವಲ್ಲ, ಸಮಸ್ತ ಕನ್ನಡಿಗರೂ ಒಕ್ಕೊರಲಿನಿಂದ ಪ್ರತಿಭಟಿಸಬೇಕು. ಹೀಗಿದ್ದರೆ ಮಾತ್ರ ಕನ್ನಡಿಗರಿಗಾಗುವ ಅನ್ಯಾಯ ತಡೆಯಲು ಸಾಧ್ಯ.

ಆನಂದ ಜೋಯಿಸ ಶಿವಮೊಗ್ಗ

ಇದ್ದೇನು ಪ್ರಯೋಜನ?

ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ಬೆಳಕು ಚೆಲ್ಲಿದ 'ಅನ್ಯಾಯದ ಹಳಿಯ ಮೇಲೆ' ಮುಖಪುಟ ಲೇಖನ ಸಕಾಲಿಕ. ಕನ್ನಡಿಗರಿಗಾಗುತ್ತಿರುವ ಅನ್ಯಾಯದ ವಿರುದ್ಧ ಕನ್ನಡಿಗರೆಲ್ಲರೂ ಪ್ರತಿಭಟಿಸಬೇಕು. ಈ ಲೇಖನದಲ್ಲಿ ರಾಜ್ಯದ 40 ಸಂಸದರ ವಿಳಾಸ ನೀಡಿದ್ದು ಕಂಡು ನಿಜಕ್ಕೂ ಕರ್ನಾಟಕ ರಾಜ್ಯದಲ್ಲಿ ಇಷ್ಟು ಮಂದಿ ಸಂಸದರು ಇದ್ದಾರೆಯೇ? ಇದ್ದರೂ ಅವರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಜನ ಸಾಮಾನ್ಯನಲ್ಲಿಯೂ ಮೂಡಬಹುದು. ನಾವೇ ಆರಿಸಿ ಕಳುಹಿಸಿರುವ ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ರೈಲ್ವೆ ಇಲಾಖೆಯಲ್ಲಿ 'ಬಿಹಾರಿ ಲಾಬಿ' ಮುಂದುವರೆದಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲಾ ಆದ ಮೇಲೂ ತೆಪ್ಪಗಿರುವ ಇಂಥ ನಾಯಕರು ಇದ್ದೇನು ಪ್ರಯೋಜನ?

ಎಂ. ರಾಮಚಂದ್ರ ಭಟ್
ಉತ್ತರಕನ್ನಡ

ಮುಜಗರದ ಸಂಗತಿ

'ಬಜೆಟ್‌ನಲ್ಲಿ ಕೇಳಿಸಿದ್ದು ಬರೀ ಸಿಳ್ಳೆ' (ಬಿ.ಎಸ್. ನಾರಾಯಣಸ್ವಾಮಿ) ಲೇಖನಕ್ಕೆ ಈ ಪ್ರತಿಕ್ರಿಯೆ. ಲಾಲೂ ಬಿಹಾರಕ್ಕೆ ಕೊಟ್ಟಿದ್ದೆಷ್ಟು? ಕರ್ನಾಟಕಕ್ಕೆ ಬಿಟ್ಟಿದ್ದೆಷ್ಟು? ಲೇಖಕರ ಮಾರ್ಮಿಕ ಪ್ರಶ್ನೆ ಇಡೀ ಲೇಖನದ ಸಾರವನ್ನು ಒತ್ತಿ ಹೇಳುತ್ತಿದೆ. ಸಚಿವ ಆರ್. ವೇಲು ಸಂದರ್ಶನ ಸಕಾಲಿಕ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಕಣ್ಣೆದುರೇ ಅನ್ಯಾಯವಾಗುತ್ತಿದ್ದರೂ 'ರೈಲ್ವೆ ಇಲಾಖೆ ಪಕ್ಷಪಾತ ಮಾಡುತ್ತಿಲ್ಲ' ಎನ್ನುವ ಸಚಿವ ಆರ್. ವೇಲು ಅವರ ಮಾತನ್ನು ನಂಬುವಷ್ಟು ದಡ್ಡರಲ್ಲ ಕನ್ನಡಿಗರು. ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಕರ್ನಾಟಕದ 40 ಸಂಸದರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವುದು ಮುಜಗರದ ಸಂಗತಿ.

ರಮಾ ಕೊಡೇರಿ
ಕುಂದಾಪುರ

ಬಹುಮಾನಿತ ಪತ್ರಗಳು

ನ್ಯಾಯ ವ್ಯವಸ್ಥೆಗೆ ಸಂದ ಗೌರವ

'ಬಿಲ್ಕಿಸ್ ಬಾನುಗೆ ದಕ್ಕಿದ ನ್ಯಾಯ' (ಮಲಿಕ್ ರಶೀದ್ ಫೈಸಲ್) ಲೇಖನದ ಕುರಿತಾಗಿ ಈ ಪತ್ರ. ಗುಜರಾತ್‌ನಲ್ಲಿ ನಡೆದ ಗೋಧ್ರಾ ದುರಂತದಲ್ಲಿ ಸಾವಿರಾರು ಮುಗ್ಧ ಮುಸ್ಲಿಮರು ಸಾವನ್ನಪ್ಪಿದ್ದರು. ಪತಿಯನ್ನು ಕಳೆದುಕೊಂಡ ಮುಸ್ಲಿಂ ಸ್ತ್ರೀಯರು ಮತ್ತು ಅವರ ಹೆಣ್ಣುಮಕ್ಕಳು ನಿರ್ದಯವಾಗಿ ಅತ್ಯಾಚಾರಕ್ಕೊಳಗಾದರು, ಹಲವರ ಬರ್ಭರ ಹತ್ಯೆಯಾಯಿತು. ಆಗ ಹಿಂಸೆಗೆ ಬಲಿಯಾದ ಅಮಾಯಕರ ಕುರಿತು ಬಂದ ಅನುಕಂಪದ ಲೇಖನಗಳು ಅದೆಷ್ಟೋ... ಇಷ್ಟೆಲ್ಲಾ ದುರಂತಗಳು ಕಣ್ಣೆದುರೇ ನಡೆದರೂ ಸರ್ಕಾರ ಮಾತ್ರ ಮೂಕ ಪ್ರೇಕ್ಷಕನ ಪಾತ್ರವಹಿಸಿತು. ಆದರೆ ಇವೆಲ್ಲದರ ನಡುವೆ ಬಿಲ್ಕಿಸ್ ಬಾನು ಪ್ರಕರಣಕ್ಕೆ ನ್ಯಾಯ ದೊರಕಿರುವುದು ಸಾಂತ್ವನ ನೀಡಿತು. ಅಂತಹ ಹೀನ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ದಂಡನೆ ಆಗಬೇಕೆಂದು ದೃಢಸಂಕಲ್ಪ ತೊಟ್ಟ ಬಿಲ್ಕಿಸ್ ಬಾನು ಧೈರ್ಯ ಪ್ರಶಂಸಾರ್ಹ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ಹೊಗಳಿಕೆಯೊಂದಿಗೆ ಪುರಸ್ಕಾರಕ್ಕೆ ಯೋಗ್ಯವಾಗುವುದು ಬಿಲ್ಕಿಸ್ ಬಾನು ಪತಿ ಯಾಕೂಬ್. ಪ್ರೀತಿಯ ಪತಿಯಾಗಿ ಬಿಲ್ಕಿಸ್ ನಡೆಸಿದ ಧರ್ಮಯುದ್ಧಕ್ಕೆ ಜೊತೆಯಾಗಿಯೇ ಇದ್ದರು. ಮಾನಸಿಕ ಯಾತನೆ, ಜೀವ ಭಯ, ನಿರಂತರ ಆರು ವರ್ಷಗಳ ಕಾಲ ಆಪಾದಿತರ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರೂ ಪತ್ನಿಯ ಬೆಂಬಲಕ್ಕಿದ್ದರು. ಪತ್ನಿ ದುಃಖದಲ್ಲಿದ್ದಾಗ ನಿಜವಾದ ಪ್ರೇಮವಿರುವ ಪತಿಯೊಬ್ಬ ಹೇಗೆ ಸಹಕಾರ ನೀಡಬೇಕು ಎಂಬುದಕ್ಕೆ ಯಾಕೂಬ್ ಉತ್ತಮ ನಿದರ್ಶನ. ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳಿಗೆ ರಾಜಕೀಯ ಹಾಗೂ ಇತರ ಕ್ಷೇತ್ರಗಳ ಪ್ರಸಿದ್ಧರ ಹೆಸರು ಕೇಳಿ ಬರುತ್ತಿತ್ತು. ಆದರೆ ನನಗೆ ನೆನಪಾಗಿದ್ದು ಬಿಲ್ಕಿಸ್ ಮತ್ತು ಯಾಕೂಬ್ ಹೆಸರು. ಏಕೆಂದರೆ ಭಾರತೀಯ ದಂಪತಿಗಳಲ್ಲಿ ಇರಬೇಕಾದ ಉನ್ನತ ಗುಣಗಳು ಇವರಲ್ಲಿ ಸಮ್ಮಿಳಿತಗೊಂಡಿವೆ. ಅವರು ತಮ್ಮ ಮೂಲಕ ಭಾರತೀಯ ನ್ಯಾಯ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುದನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ.

ಅನ್ನಾ ಮೇರಿ ವ್ಯೋನೆ
ಚೆನ್ನೈ

ರಾಜೀನಾಮೆ ನೀಡಿ

ಟಿಎಸ್‌ಐ 34ನೇ ಸಂಚಿಕೆಯ ಮುಖಪುಟ ಲೇಖನ 'ಪವಾರ್ ಬ್ಯಾಟಿಂಗ್ ಯಾರ ಪರ?' ಅದ್ಭುತವಾಗಿತ್ತು. ಶರದ್ ಪವಾರ್ ಬಹಳ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಆದರೆ ದೇಶದುದ್ದಕ್ಕೂ ಆತಂಕ ಸೃಷ್ಟಿಸಿದ ಕೋಳಿ ಜ್ವರದ ಕುರಿತಾಗಿ ಕೃಷಿ ಸಚಿವರಾಗಿ ಕಾಳಜಿ ವಹಿಸಿದ್ದಕ್ಕಾಗಿ ಅಲ್ಲ. ಬದಲಿಗೆ ಹಣದ ಹೊಳೆ ಹರಿಯುವ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ! ಸ್ವತಃ 'ವಿಶ್ವ ಆರೋಗ್ಯ ಸಂಸ್ಥೆ' ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗಿರುವ ಸ್ಥಿತಿಯನ್ನು 'ತೀರಾ ಗಂಭೀರ ಮತ್ತು ವಿಭಿನ್ನ' ಎಂದಿದೆ. ಆದರೆ ಪವಾರ್ ಮಾತ್ರ ಕ್ರಿಕೆಟ್ ಪ್ರಚಾರ ಕಾರ್ಯದಲ್ಲೇ ವ್ಯಸ್ತರಾಗಿದ್ದಾರೆ. ಪವಾರ್ ಅವರೇ, ನಮಗೆ ಇನ್ನೊಂದು ವಿದರ್ಭ ಬೇಡ. ದೇಶದ ಅಭಿವೃದ್ಧಿಗೆ ಏನಾದರೂ ಮಾಡಬೇಕೆಂದಿದ್ದರೆ ನೀವು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡುವುದು ಒಳ್ಳೆಯದು. ನೀವು ಕೇಳುತ್ತಿದ್ದೀರಿ ತಾನೇ?

ಅಭಯ್ ಜಲನ್
ಇ-ಮೇಲ್ ಮೂಲಕ

ನ್ಯಾಯಒದಗಿಸಲಿ

ರೋಮ್ ಹೊತ್ತಿ ಉರಿಯುತ್ತಿರುವಾಗ ನೀರೊ ಪಿಟೀಲು ಬಾರಿಸುತ್ತಿದ್ದನಂತೆ. ಈ ಮಾತು ಕ್ರಿಕೆಟ್‌ನಲ್ಲಿ ಕೃಷಿ ಮಾಡುತ್ತಿರುವ ನಮ್ಮ ಕೃಷಿ ಸಚಿವ ಶರದ್ ಪವಾರ್ ಅವರಿಗೆ ಹೇಳಿ ಮಾಡಿಸಿದಂತಿದೆ. ಬಿಸಿಸಿಐ ವ್ಯವಹಾರಗಳ ಬಗ್ಗೆ ಪವಾರ್ ಅವರಿಗಿರುವ 'ಮೋಹ' ಜಗತ್ಪ್ರಸಿದ್ಧ! ಭಾರತ ಕ್ರಿಕೆಟ್ ತಂಡ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ದೇಶದಿಂದ ದೇಶಕ್ಕೆ ಹಾರುತ್ತಿರುವ ಪವಾರ್ ಅವರಿಗೆ ತಮ್ಮ ಸಚಿವಾಲಯದ ಕಡೆ ತಲೆ ಹಾಕಲಾದರೂ ಹೇಗೆ ಸಾಧ್ಯವಾದೀತು? ಪವಾರ್ ತಮ್ಮ ಸಚಿವ ಸ್ಥಾನಕ್ಕೆ ನ್ಯಾಯ ಒದಗಿಸುವತ್ತ ಗಮನ ಹರಿಸಬೇಕಾಗಿದೆ.

ಶ್ವೇತಾ ಸೋಲಂಕಿ
ಇ-ಮೇಲ್ ಮೂಲಕ

ಗೊಂದಲದ ಪ್ರತಿರೂಪವೇ?

ರಾಜಕೀಯ, ಉದ್ಯಮ, ಸಿನಿಮಾ ಹೀಗೆ ವಿವಿಧ ರಂಗಗಳಲ್ಲಿ ನಡೆಸಿದ ಸಮೀಕ್ಷೆ ಆಧರಿಸಿ ಮೂಡಿ ಬಂದ ಟಿಎಸ್‌ಐ ವಿಶೇಷ ಸಂಚಿಕೆ 'ಭಾರತದ ಆ ಮುಖ-ಈ ಮುಖ' ಚೆನ್ನಾಗಿತ್ತು. ಆದರೆ ಸಮೀಕ್ಷೆಯಿಂದ ಹೊರ ಬಂದ ಫಲಿತಾಂಶಗಳು ಮಾತ್ರ ಗೊಂದಲ ಭರಿತ. ಪ್ರೀತಿ ಪಾತ್ರ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸಚಿನ್, ನಿವೃತ್ತಿಯಾಗಬೇಕು ಎಂದು ಬಯಸುವ ಪಟ್ಟಿಯಲ್ಲೂ ಇದ್ದಾರೆ. ಇನ್ನು ಲಾಲೂ ಪ್ರಸಾದ್ ಯಾದವ್ ನೆಚ್ಚಿನ ಕೇಂದ್ರ ಸಚಿವರಿಂದ ತೊಡಗಿ ಅತ್ಯಂತ ಕೆಟ್ಟ ಸಂಸದೀಯ ಪಟುವರೆಗೂ ಎಲ್ಲೆಲ್ಲೂ ರಾರಾಜಿಸುತ್ತಿದ್ದಾರೆ. ಇದು ಯಾವುದರಲ್ಲೂ ಸ್ಪಷ್ಟ ನಿರ್ಧಾರಕ್ಕೆ ಬರಲಾಗದ ಭಾರತೀಯರ ಮಾನಸಿಕ ಗೊಂದಲದ ಪ್ರತಿರೂಪವೇ ಎಂಬುದು ಪ್ರಶ್ನಾರ್ಹ.

ಅರ್ಚನಾ ಮಲ್ನಾಡು
ಶಿವಮೊಗ್ಗ

ಕೃಷಿಯನ್ನು ಬದಿಗೊತ್ತಿದ ಪವಾರ್

'ಭಾರತದ ಆ ಮುಖ- ಈ ಮುಖ' ಮುಖಪುಟದೊಂದಿಗೆ ಮೂಡಿಬಂದ ಟಿಎಸ್‌ಐ ವಿಶೇಷ ಸಂಚಿಕೆ ಮನಸೂರೆಗೊಂಡಿತ್ತು. ರಾಜಕೀಯ, ಉದ್ಯಮ, ಕ್ರೀಡೆ ಮತ್ತು ಕಲಾರಂಗದ ಕುರಿತು ಐಸಿಎಂಆರ್- ಟಿಎಸ್‌ಐ ಮಾಡಿರುವ ಸಮೀಕ್ಷೆ ಪ್ರಶಂಸಾರ್ಹ. ಹಲವೆಡೆ ಅಚ್ಚರಿಯ ಫಲಿತಾಂಶ ಹೊರಹೊಮ್ಮಿದ್ದು ನೋಡಿ ವಿಸ್ಮಯವಾಯಿತು. ಅದರಲ್ಲೂ ರಾಜಕೀಯ ಮತ್ತು ಕ್ರೀಡಾಪಟುಗಳ ಕುರಿತಾದ ಸಮೀಕ್ಷೆ ನನಗೆ ತುಂಬಾ ಇಷ್ಟವಾಯಿತು. ಇನ್ನು ಯಾವ ಕೇಂದ್ರ ಸಚಿವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂಬ ಪ್ರಶ್ನೆಗೆ ಶರದ್ ಪವಾರ್ ಎಂಬ ಫಲಿತಾಂಶ ಬಂದಿದೆ. ಹೌದು! ಕೃಷಿ ಸಚಿವರಾದರೂ ಕೃಷಿಯನ್ನು ಬದಿಗೆ ಸರಿಸಿ ಪೂರ್ಣ ಪ್ರಮಾಣದ 'ಕ್ರಿಕೆಟ್ ಮಾಸ್ಟರ್' ಆಗಿ ಮುಂದುವರಿಯುತ್ತಿರುವ ಶರದ್ ಪವಾರ್ ಅವರನ್ನು ಸಂಪುಟದಿಂದ ಕಿತ್ತೊಗೆಯಲೇ ಬೇಕು.

ಶರತ್ ಎಂ. ಪಾಂಡೆ
ಗೌರಿಬಿದನೂರು

ಸರಿಯೇ?

ನಿಜ ಹೇಳಬೇಕೆಂದರೆ, ಪ್ರತಿ ವಾರ 'ದ ಸಂಡೆ ಇಂಡಿಯನ್'ಗಾಗಿ ಕಾಯುತ್ತಾ ಇರುತ್ತೇನೆ. ಅದನ್ನು ಓದಿಲ್ಲವೆಂದರೆ ಏನನ್ನೋ ಕಳೆದುಕೊಂಡ ಅನುಭವ. ನನ್ನ ಪ್ರಕಾರ ಕನ್ನಡದಲ್ಲಿ ಈ ರೀತಿಯ ಪತ್ರಿಕೆ ಇನ್ನೊಂದಿಲ್ಲ. ದೇಶದ ಪ್ರತಿ ಮೂಲೆಗಳಿಂದ ಸುದ್ದಿ ಆರಿಸಿ ತಂದು ನವೀನವಾಗಿ ಪ್ರಸ್ತುತ ಪಡಿಸುವ ಜೊತೆಗೆ ಆಕರ್ಷಕ ವಿನ್ಯಾಸ ಹೊಂದಿರುವ ಪತ್ರಿಕೆ ಕನ್ನಡಕ್ಕೊಂದು ಅನರ್ಘ್ಯ ರತ್ನ. ಆದರೆ ಕೇವಲ ನೂರು ಅಥವಾ ಸಾವಿರ ಜನರ ಮಾತನ್ನಾಧರಿಸಿ ಸಮೀಕ್ಷೆ ನಡೆಸಿ ರಾಜಕೀಯ, ಉದ್ಯಮ, ಕ್ರೀಡೆ ಹಾಗೂ ಬಾಲಿವುಡ್‌ಗಳ ಬಗ್ಗೆ ವಿಶೇಷ ಸಂಚಿಕೆ ಹೊರ ತರುವುದು ಅಷ್ಟೊಂದು ಸಮಂಜಸವಲ್ಲ ಎನ್ನುವುದು ನನ್ನ ಅನಿಸಿಕೆ. ಅಲ್ಲದೆ ಕೇವಲ ನಾಲ್ಕೈದು ಸಾಲುಗಳಿಗಾಗಿ ಪೂರ್ಣ ಪುಟ ಬಳಕೆಯಾಗುವುದು ಸರಿಯಲ್ಲ. ಆದರೆ ಇದು ಉತ್ತಮ ಪತ್ರಿಕೆ ಎಂಬುದರಲ್ಲಿ ಎರಡು ಮಾತಿಲ್ಲ.

ನರೇಂದ್ರ ಎಸ್. ಗಂಗೊಳ್ಳಿ
ಕುಂದಾಪುರ

ಏಕಾಂಗಿ ಹೋರಾಟ

ರಾಜಕೀಯ, ಉದ್ಯಮ, ಕ್ರೀಡೆ ಮತ್ತು ಕಲಾರಂಗದ ಜನಪ್ರಿಯರ ಕುರಿತಾದ ಅಭೂತಪೂರ್ವ ಮಾಹಿತಿ ಒದಗಿಸಿದ್ದಕ್ಕೆ ಕೃತಜ್ಞತೆಗಳು. 'ಸಾನಿಯಾ ಸಾಧನೆ ನಿಜಕ್ಕೂ ಅಭೂತಪೂರ್ವ' (ಸೈಬಲ್ ಚಟರ್ಜಿ) ಲೇಖನ ಚೆನ್ನಾಗಿತ್ತು. ಹೌದು, ಆಕೆಯದು ಏಕಾಂಗಿ ಹೋರಾಟ ಎನ್ನುವುದು ಸತ್ಯ. ಪುಟ್ಟ ವಯಸ್ಸಿನಲ್ಲೇ ಸಾಧನೆಯ ಬೆನ್ನತ್ತಿದ್ದ ಆಕೆ ಧರ್ಮದ ಹೆಸರಿನಲ್ಲಿ ವಿರೋಧಗಳನ್ನು ಎದುರಿಸಬೇಕಾಯಿತು. ಕ್ರೀಡೆಗೆ ಅನಿವಾರ್ಯವಾದ ಸಮವಸ್ತ್ರ ತೊಟ್ಟಾಗಲೂ ಜನ ಚುಚ್ಚು ಮಾತುಗಳನ್ನಾಡಿ ಅನುಮಾನದ ದೃಷ್ಟಿಯಿಂದಲೇ ನೋಡಿದರು. ಆದರೂ ಧೃತಿಗೆಡದೆ ಆಡಿರುವ ಸಾನಿಯಾ ಕೆಚ್ಚಿಗೆ ಶಹಭಾಸ್ ಎನ್ನಲೇಬೇಕು. ಕ್ರೀಡೆಯನ್ನು ಕೇವಲ ಕ್ರೀಡೆಯಾಗಷ್ಟೇ ನೋಡುವ ಸಮಯ ಬರುವವರೆಗೂ ಸಾನಿಯಾಗೆ ಇಂತಹ ಕಿರಿಕಿರಿ ತಪ್ಪಿದ್ದಲ್ಲ. ಇನ್ನು ಕ್ರೀಡಾರಂಗದ 'ಗುರು' ಮತ್ತು 'ಶನಿ' ವಿಭಾಗದಲ್ಲಿ ನೈಜ ಉತ್ತರವೇ ಮೂಡಿಬಂದಿದೆ. ಶ್ರೇಷ್ಠ ಆಟಗಾರ ಮತ್ತು ಅಗತ್ಯಕ್ಕಿಂತ ಹೆಚ್ಚು ಜನಪ್ರಿಯತೆ ಪಡೆದ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್ ಮುಂದಿದ್ದಾರೆ. ಒಂದು ಕಾಲದಲ್ಲಿ ಸಿಕ್ಸ್, ಫೋರ್ ಚಚ್ಚಿ ಸುದ್ದಿಯಾಗುತ್ತಿದ್ದ ಸಚಿನ್ ಇಂದು ರನ್ ಹೊಡೆಯದೆಯೂ ಪ್ರಚಾರ ಪಡೆಯುತ್ತಿದ್ದಾರೆ.

ರವೀಂದ್ರ ನಾಯಕ್
ಮುಧೋಳ

ಅಮೆರಿಕ ಪ್ರಭಾವ

'ಷೇರು ಮಾರುಕಟ್ಟೆಯ ಶಾಕ್: ಔದ್ಯಮಿಕ ಹೂಡಿಕೆಯೇ ಹಿತ' ಸಂಪಾದಕೀಯ (ಅರಿಂದಮ್ ಚೌಧುರಿ) ಷೇರು ಮಾರುಕಟ್ಟೆಯಲ್ಲಿನ ಸದ್ಯದ ಏರಿಳಿತಗಳನ್ನು ವಿಷದಪಡಿಸಿತು. ಷೇರು ಕುಸಿತ ಕೇವಲ ಭಾರತದ ಮೇಲಷ್ಟೇ ಅಲ್ಲ, ಏಷ್ಯಾದ ಇತರ ಪ್ರಮುಖ ಷೇರು ಮಾರುಕಟ್ಟೆಗಳ ಮೇಲೂ ಭಾರೀ ಪರಿಣಾಮ ಬೀರುತ್ತಿದೆ. ಅಂದರೆ ಎಲ್ಲವೂ ಒಂದಕ್ಕೊಂದು ಬೆಸೆದಿರುವಂತೆ. ಎಲ್ಲೋ ಅಪಸ್ವರ ಎದ್ದರೆ ಅದು ಇನ್ನೆಲ್ಲೋ ಶ್ರುತಿ ತಪ್ಪಿಸುತ್ತದೆ. ಆದರೆ ಈ ಬೆಳವಣಿಗೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಿದ್ದೇ ಪ್ರಮುಖ ಕಾರಣ. ಇದರಿಂದ ಆಘಾತಕಾರಿ ರೀತಿಯಲ್ಲಿ ಷೇರು ಹಿನ್ನಡೆ ಕಂಡಿತು. ಅಮೆರಿಕದ ಮಾರುಕಟ್ಟೆ ಕುಸಿತದ ಸೂಚನೆಯ ಭೀತಿಯೇ ಇದಕ್ಕೆಲ್ಲಾ ಕಾರಣ ಎಂಬುದು ಚಿಂತನಾರ್ಹ.

ಕೆ.ಎನ್. ರಾಜೇಶ್
ಮಂಗಳೂರು

ಮಾರ್ಗದರ್ಶಿ ಸಂಪಾದಕೀಯ

ಸಂಪಾದಕೀಯದಲ್ಲಿ ಕೇವಲ ವಿಷಯ ಮಂಡನೆ ಮಾತ್ರ ಇರುವುದಿಲ್ಲ. ಜೊತೆಗೆ ಅಲ್ಲೊಂದು ಸಲಹೆ, ಮಾರ್ಗದರ್ಶನವೂ ಇರುತ್ತದೆ. ಇದಕ್ಕೆ ನಿದರ್ಶನ 'ಷೇರು ಮಾರುಕಟ್ಟೆಯ ಶಾಕ್: ಔದ್ಯಮಿಕ ಹೂಡಿಕೆಯೇ ಹಿತ' ಸಂಪಾದಕೀಯ. ಭಾರತ ಷೇರು ಮಾರುಕಟ್ಟೆಯಲ್ಲಿ ಕುಸಿತ ಸಂಭವಿಸಲು ಕಾರಣವೇನು ಎಂಬುದರಿಂದ ತೊಡಗಿ ಅದಕ್ಕೆ ಪರಿಹಾರವೇನು ಎಂಬುದನ್ನೂ ತಿಳಿಸಿದ್ದಾರೆ. ಷೇರುಗಳ ಬದಲಿಗೆ ಔದ್ಯಮಿಕ ರಂಗದಲ್ಲಿ ಹೂಡಿಕೆ ಮಾಡಿ ಎಂದಿದ್ದಾರೆ. ಷೇರು ಮಾರುಕಟ್ಟೆ ಗಳಿಕೆಗಿಂತ ಉದ್ಯಮ ಗಳಿಕೆಯೇ ಹೆಚ್ಚು ಲಾಭ ಎಂದು ಸೂಚಿಸಿದ್ದಾರೆ. ಆ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಸಬಲತೆಯ ಲಾಭವೂ ಇದೆ ಎಂದಿರುವ ಅರಿಂದಮ್ ಚೌಧುರಿ ಅವರ ಸಲಹೆಗೆ ಕೃತಜ್ಞತೆಗಳು.

ಮಲ್ಲಿಕಾ ಮಧುಸೂದನ್
ಕಲ್ಯಾಣಪುರ

 ಕಠಿಣ ಶಿಕ್ಷೆ ಅಗತ್ಯ

'ಸಿಲಿಕಾನ್ ಸಿಟಿಯ ಸರಣಿ ಹಂತಕರು' (ಶಶಿ ಸಂಪಳ್ಳಿ) ಲೇಖನ ಓದಿದೆ. ಇತ್ತೀಚೆಗೆ ಮಲ್ಲಿಕಾ ಎಂಬ ಸರಣಿ ಕೊಲೆ ಹಂತಕಿ ಬಂಧನಕ್ಕೊಳಗಾದಾಗ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದರು. ಈ ಪ್ರಕರಣ ಹಸಿರಾಗಿರುವಾಗಲೇ ಈಗ ಶರ್ಮಾ ಕುಟುಂಬ ಸರಣಿ ಕೊಲೆ ಮಾಡಿರುವ ಸುದ್ದಿ. ಶರ್ಮಾ 20 ಕೊಲೆ ಮಾಡಿ ಮುಗಿಸಿದ್ದರೂ, ಪೊಲೀಸರಿಗೆ ಇದರ ಸುಳಿವೇ ಸಿಕ್ಕಿಲ್ಲವೆಂಬುದು ನಿಜಕ್ಕೂ ಅಚ್ಚರಿಯ ಸಂಗತಿ. ನಿತ್ಯ ಪೊಲೀಸರ ಕಣ್ಗಾವಲಿರುವ ಸಿಲಿಕಾನ್ ಸಿಟಿಯಲ್ಲೇ ಹೀಗಾಗುತ್ತದೆ ಎಂದರೆ, ಅಪರೂಪಕ್ಕೊಮ್ಮೆ ಪೊಲೀಸರು ಇಣುಕಿ ನೋಡುವ ಪುಟ್ಟ ಪಟ್ಟಣಗಳ ಪರಿಸ್ಥಿತಿಯ ಬಗ್ಗೆ ಯೋಚಿಸಿ. ಇದನ್ನು ಪೊಲೀಸರ ವೈಫಲ್ಯ ಎನ್ನಬೇಕೆ? ಶರ್ಮಾನಂತಹ ಹಂತಕರಿಗೆ ಕಠಿಣ ಶಿಕ್ಷೆ ನೀಡಿದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಆದರೆ ಕೊಲೆಗಡುಕರಿಗೆ ಶಿಕ್ಷೆ ಎಂಬುದು ಕೇವಲ ಮರೀಚಿಕೆಯಾಗುತ್ತಿದೆ.

ಎಸ್. ಅನುಪಮ
ಹಿರಿಯೂರು

ಎಚ್ಚರಿಕೆಯ ಗಂಟೆ

'ಯುವ ಜನತೆ ರಾಜಕೀಯ ಪ್ರವೇಶಿಸಲು ಸಕಾಲ' (ಜಿತಿನ್ ಪ್ರಸಾದ್) ಅಂಕಣ ಲೇಖನ ಯುವಜನತೆಗೆ ಎಚ್ಚರಿಕೆಯ ಕರೆಗಂಟೆಯಾಗಿತ್ತು. ರಾಜಕೀಯವೆಂದರೆ ಅಭಿವೃದ್ಧಿ, ಉದ್ಯೋಗ, ಸೃಷ್ಟಿ, ಶಿಕ್ಷಣ ಎನ್ನುವ ಲೇಖಕರ ನಿಲುವನ್ನು ಇಂದಿನ ರಾಜಕಾರಣಿಗಳು ಅರ್ಥೈಸಿಕೊಳ್ಳಬೇಕಿದೆ. ಮಾತ್ರವಲ್ಲ, ಇಂದು ರಾಜಕಾರಣ ಎಂದರೆ ಮೂಗುಮುರಿಯುವ ಸ್ಥಿತಿ ಉಂಟಾಗಿದ್ದೂ ಅಧಿಕಾರ ಚಟ ಹಿಡಿದ ರಾಜಕೀಯ ಪುಢಾರಿಗಳಿಂದಲೇ. ರಾಜಕೀಯದಲ್ಲಿ ಯುವಜನರಿಗೆ ಈಗ ಸಾಕಷ್ಟು ಅವಕಾಶಗಳಿವೆ. ರಾಜಕೀಯ ಎಂದರೆ ಭ್ರಷ್ಟಾಚಾರ, ಹೊಲಸು ಹಗರಣ ಎಂಬ ಭಾವವನ್ನು ಬಿಟ್ಟು ಅಭಿವೃದ್ಧಿ ರಾಜಕಾರಣದತ್ತ ಯುವಜನತೆ ಸಾಗಬೇಕಾಗಿದೆ. ತಮ್ಮ ಜನಸೇವೆಯ ನಿಲುವುಗಳ ಮೂಲಕ ರಾಜಕಾರಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಾರ್ಯವಾಗಬೇಕು.

ಎಚ್. ರಂಗನಾಥ್ ಭಟ್
ಮಂಜೇಶ್ವರ

ಸಾಧನೆಗೆ ತಕ್ಕ ಫಲ ಸಿಡ್ನಿ

ಟೆಸ್ಟ್ ವಿವಾದದ ನಂತರ ತಾಳ್ಮೆ ಮೆರೆದಿದ್ದ ಅನಿಲ್ ಕುಂಬ್ಳೆ 600 ವಿಕೆಟ್ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದು ಅವರ ಸಾಧನೆ ಹಾಗೂ ಸಂಯಮಕ್ಕೆ ಸಂದ ಫಲ. ಈ ಹಿನ್ನೆಲೆಯಲ್ಲಿ ಟಿಎಸ್‌ಐ 33ನೇ ಸಂಚಿಕೆಯಲ್ಲಿ ಪ್ರಕಟವಾದ 'ಜಂಬೋ 600ರ ಸಾಧನೆಗೆ ಗೆಲುವಿನ ಗರಿ' (ಸತೀಶ್ ಚಪ್ಪರಿಕೆ) ಲೇಖನ ಸಕಾಲಿಕ. ಆತ್ಮವಿಶ್ವಾಸ ಮತ್ತು ಛಲದಿಂದಲೇ ಈ 'ನಗುಮೊಗದ ಕೊಲೆಗಾರ'ನ ತಂಡ ಪರ್ತ್‌ನ ವಾಕಾಗೆ ಕಾಲಿಟ್ಟಿತ್ತು. ಕುಂಬ್ಳೆ ಅವರು ಅಂಗಣದಲ್ಲಿ ತೆಗೆದುಕೊಂಡ ಚಾಣಾಕ್ಷ ನಿರ್ಧಾರಗಳು ಗೆಲುವಿಗೆ ಕಾರಣವಾಯಿತು. ಕಳೆದ 17 ವರ್ಷಗಳಿಂದ ಸ್ವದೇಶ ಹಾಗೂ ವಿದೇಶದಲ್ಲಿ ಭಾರತ ತಂಡ ದಾಖಲಿಸಿರುವ ಗೆಲುವುಗಳಲ್ಲಿ ಅನಿಲ್ ಕುಂಬ್ಳೆ ಅವರ ಪಾತ್ರ ಮರೆಯುವಂತಿಲ್ಲ. ಅನಿಲ್ ಕುಂಬ್ಳೆ ಸಾಧನೆ ಹೀಗೇ ಮುಂದುವರಿಯಲಿ. ಆನಂದ ಹಿರೇಮಠ ಕಾನೂರು ಕನ್ನಡದಲ್ಲೇ ನೆಲೆಯೂರಲಿ ಚಿತ್ರರಂಗದ ಹೊಸ ತಾರೆ ಪ್ರಜ್ವಲ್ ಸಂದರ್ಶನ 'ಪ್ರಜ್ವಲಿಸುತ್ತಿರುವ ಮುಕ್ತ ಮನಸ್ಸು' (ಎನ್.ಕೆ. ಸುಪ್ರಭಾ) ಚೆನ್ನಾಗಿ ಮೂಡಿಬಂದಿದೆ. ಇಂದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಿಂದಿನಂತೆ ಕನ್ನಡದಲ್ಲೇ ನೆಲೆಯೂರುವ ತಾರೆಯರು ಕಡಿಮೆಯಾಗುತ್ತಿದ್ದಾರೆ. ಅವಕಾಶ ಸಿಕ್ಕೊಡನೆ ಬೇರೆ ಭಾಷೆಯ ಚಿತ್ರರಂಗದತ್ತ ವಲಸೆ ಹೋಗುವ, ಇಲ್ಲಾ ತಪ್ಪು ನಿರ್ಧಾರಗಳ ಮೂಲಕ ತಮ್ಮ ಜನಪ್ರಿಯತೆ ಕಳೆದುಕೊಳ್ಳುವ ತಾರೆಯರ ನಡುವೆ, ಪ್ರಜ್ವಲ್ ಕನ್ನಡ ಚಿತ್ರರಂಗದಲ್ಲೇ ನೆಲೆ ನಿಂತು ಉತ್ತಮ ಚಿತ್ರಗಳನ್ನು ಕೊಡುತ್ತಿರಲಿ. ಕನ್ನಡ ಚಿತ್ರರಂಗದ ಭರವಸೆಯ ತಾರೆಯಾಗಿ ಮೂಡಿಬರಲಿ ಎಂಬುದೇ ಕನ್ನಡಿಗರ ಹಾರೈಕೆ.

ಎಸ್. ಬಸವರಾಜು
ಮೂಡಿಗೆರೆ

ಹೊಸ ಅಲೆ

ನಾನು ಟಿಎಸ್‌ಐ ವಾರ ಪತ್ರಿಕೆಯ ಖಾಯಂ ಓದುಗ. ಇದು ಮಾಧ್ಯಮ ಪ್ರಪಂಚದಲ್ಲಿ ಹೊಸ ಅಲೆ ಎಬ್ಬಿಸಿದೆ. ಪತ್ರಿಕೆ ಸೃಷ್ಟಿಸಿದ ಜಾದೂ ನಿಜಕ್ಕೂ ನನ್ನನ್ನು ಅಚ್ಚರಿಗೊಳಿಸಿದೆ. ಉತ್ತಮ ಗುಣಮಟ್ಟದ ಪುಟಗಳು, ಸಂವೇದನೆಯುಳ್ಳ ಸುದ್ದಿ, ಅತ್ಯುತ್ತಮ ಲೇಖನಗಳು ದೇಶದ ಪ್ರತಿ ಪ್ರಜ್ಞಾವಂತ ಪ್ರಜೆಯ ಗಮನ ಸೆಳೆಯುತ್ತದೆ. ಇಂತಹ ಉತ್ತಮ ಕಾರ್ಯವನ್ನು ಮುಂದುವರಿಸಿ. ಎಂ.ಎಸ್. ಪರಮಾನಂದ್ ಮಂಡ್ಯ ಉತ್ತಮ ಮಾಹಿತಿ ಟಿಎಸ್‌ಐ ವೆಬ್ ಆವೃತ್ತಿ ಬಂದ ನಂತರ ನಾನು ತಪ್ಪದೆ ಟಿಎಸ್‌ಐ ಓದುತ್ತಿದ್ದೇನೆ. ಪ್ರತಿ ವಾರವೂ ಕುತೂಹಲಕರವಾಗಿ ಮೂಡಿಬರುತ್ತಿದೆ. ಕಳೆದ ವಾರದ ವಿಶೇಷ ಸಂಚಿಕೆ ಉತ್ತಮ ಮಾಹಿತಿಯನ್ನು ನೀಡಿದೆ. 'ಭಾರತದ ಆ ಮುಖ- ಈ ಮುಖ' ಹೊತ್ತು ಬಂದ ಟಿಎಸ್‌ಐ ರಾಜಕೀಯ, ಉದ್ಯಮ, ಕ್ರೀಡೆ ಮತ್ತು ಕಲಾರಂಗದ ವಿಭಿನ್ನ ಮುಖಗಳನ್ನು ಪರಿಚಯಿಸಿ ಕೊಟ್ಟಿತು.

ಬಿ.ಸಿ. ಶೆಟ್ಟಿ, ಹೈದರಾಬಾದ್
ಇ-ಮೇಲ್ ಮೂಲಕ

ಸಮರ್ಥ ನಾಯಕರ ಅವಶ್ಯಕತೆ ಇದೆ

'ಭಾರತದ ಆ ಮುಖ-ಈ ಮುಖ' ಐಸಿಎಂಆರ್-ಟಿಎಸ್‌ಐ ವಿಶ್ಲೇಷಣೆ ಭಾರತದ ಜನತೆ ಯುವ ನಾಯಕರಿಗೇ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸಿದೆ. ಮಾತ್ರವಲ್ಲ, ಭವಿಷ್ಯದಲ್ಲಿ ಪ್ರಧಾನಿ ಕುರ್ಚಿಯಲ್ಲಿ ಯುವ ನಾಯಕನೊಬ್ಬ ರಾರಾಜಿಸಬೇಕೆಂಬ ಜನರ ಆಶಯವನ್ನು ಈ ಸಮೀಕ್ಷೆ ದೃಢಪಡಿಸಿದೆ. ಇದರ ಜೊತೆಗೆ ಇದೇ ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ, ಜನರು ಇಷ್ಟಪಡುವ ಭಾರತೀಯ ನಾಯಕರ ಪೈಕಿ ಸೋನಿಯ ಗಾಂಧಿ ಮುಂಚೂಣಿಯಲ್ಲಿದ್ದು, ಭಾರತೀಯರು ಸ್ತ್ರೀಯನ್ನು ತಮ್ಮ ಆದರ್ಶವಾಗಿ ಸ್ವೀಕರಿಸಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಭಾರತದ ಭವಿಷ್ಯತ್ತನ್ನು ರೂಪಿಸಬೇಕಾದ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತಿರುವ ಯುವ ಜನಾಂಗ ಉತ್ತಮ ಕಾನೂನುಗಳನ್ನು ರೂಪಿಸಿ, ದಕ್ಷ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸಬಲ್ಲ ಸರ್ದಾರ್ ವಲ್ಲಭ ಭಾಯಿ ಪಟೇಲ್, ಗಾಂಧೀಜಿ ಮತ್ತು ಅಬುಲ್ ಕಲಾಂ ಆಜಾದ್ ಅವರಂಥ ಪ್ರಾಮಾಣಿಕ ಮತ್ತು ಸಮರ್ಥ ರಾಜಕಾರಣಿಗಳನ್ನು ಆರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಪ್ರತಿವಾರ ಬರುವ ಪತ್ರ ಚರಿತ್ರೆ ಸೊಗಸಾಗಿರುತ್ತದೆ. ಇದು ಜ್ಞಾನ ಹಾಗೂ ಪ್ರೇರಣೆ ನೀಡುತ್ತದೆ. ಟಿಎಸ್‌ಐ ಯುವಕರಿಗೆ ಒತ್ತು ನೀಡುವ ಉದ್ಯೋಗ ಸಂಬಂಧೀ ಅಂಕಣ ಪ್ರಕಟಿಸಿದರೆ ಸ್ವಾಗತಾರ್ಹ. ಶಂತನು ಮಿತ್ರ ಅವರ 'ವಾರದ ವ್ಯಂಗ್ಯ' ಚುರುಕಾಗಿರುತ್ತದೆ.

ಸೈಯದ್ ಅಲಿ ಅಕ್ತ್
ಜಾಮಿಯಾ ನಗರ್

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .