|
ಕರ್ನಾಟಕ: ಟ್ರಾಫಿಕ್ ಸಮಸ್ಯೆ
ನಿಲುಕೀತೆ ಗಗನ ಕುಸುಮ?
ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ಸೇರಬಹುದೇ ಎಂಬ ಪ್ರಶ್ನೆ ಕಾಡುತ್ತಿದೆ
ಮೂರು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪಬೇಕು... ನಡುವೆ ಟ್ರಾಫಿಕ್ ಕಿರಿಕಿರಿ. ಎಲ್ಲವನ್ನೂ ಲೆಕ್ಕ ಹಾಕಿ ನೋಡಿದಾಗ ವಿಮಾನ ಹೊರಡುವ ನಿಗದಿತ ಸಮಯಕ್ಕಿಂತ 6- 7 ಗಂಟೆ ಮುಂಚೆ ಹೊರಡಬೇಕು ಅನ್ನುವುದು ಗ್ಯಾರಂಟಿ. ದೇವನಹಳ್ಳಿಯ 'ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ'ದ ವಿಧ್ಯುಕ್ತ ಚಾಲನೆಗೆ ಕೇವಲ ಬೆರಳೆಣಿಕೆಯಷ್ಟು ದಿನಗಳು ಉಳಿದಿದ್ದರೂ ಕಿರಿಕಿರಿ ರಹಿತ ಸುಗಮ ಸಂಚಾರ ಮಾತ್ರ ಸಾಧ್ಯವಾಗಿಲ್ಲ. ಇನ್ನು ನಗರದಿಂದ ವಿಮಾನ ನಿಲ್ದಾಣಕ್ಕೆ ಫಾಸ್ಟ್ ಲೇನ್ ರಸ್ತೆ, ಸೂಪರ್ ಫಾಸ್ಟ್ ರೈಲು ಎಲ್ಲಾ ಬರೀ ಮರೀಚಿಕೆ.
ಬೆಂಗಳೂರಿನಿಂದ ವಿದೇಶಕ್ಕೆ ಹಾರುವುದಲ್ಲ, ಎಲ್ಲಾ ಅಡೆತಡೆಗಳನ್ನು ದಾಟಿ ವಿಮಾನ ನಿಲ್ದಾಣವನ್ನು ತಲುಪುವುದು ಹೇಗೆ ಎನ್ನುವುದೇ ಬೆಂಗಳೂರಿಗರ ಹೊಸ ಸಮಸ್ಯೆ. ವಿಮಾನ ನಿಲ್ದಾಣದ ಸುಗಮ ಸಂಚಾರಕ್ಕೆ ಕೈಗೊಂಡ ಎಲ್ಲಾ ಯೋಜನೆಗಳೂ ಕುಂಟುತ್ತಾ ಸಾಗುತ್ತಿವೆ. ವಿಮಾನ ಹಾರಾಟ ಶುರುವಾಗುವ ಮುನ್ನ ಹೊರ ವರ್ತುಲ ರಸ್ತೆಯಿಂದ ದೇವನ ಹಳ್ಳಿಗೆ ಇರುವ 21.2 ಕಿ.ಮೀ 'ಎಕ್ಸ್‌ಪ್ರೆಸ್ ವೇ' ಯೋಜನೆ ಪೂರ್ಣಗೊಳ್ಳುವ ಯಾವುದೇ ಕುರುಹುಗಳೂ ಇದುವರೆಗೆ ಕಂಡುಬಂದಿಲ್ಲ. ವಿರೋಧಗಳು, ಪ್ರತಿಭಟನೆಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ 7ರ ಟ್ರಾಫಿಕ್ ನಿಭಿಡ ರಸ್ತೆಯನ್ನು ತಡೆಯಲು ಕೈಗೊಂಡಿದ್ದ 180 ಕಿ.ಮೀ ವೇಗದ 6 ಲೇನ್ ಎಕ್ಸ್‌ಪ್ರೆಸ್ ರಸ್ತೆ ಯೋಜನೆ ಕೂಡ ಕಾಲು ಮುರಿದು ಬಿದ್ದಿದೆ.
ವಿಮಾಣ ನಿಲ್ದಾಣಕ್ಕೆ ವೇಗದ ರೈಲು ಮಾರ್ಗದ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಸ್ತಾಪಿಸಿತ್ತು. ರಾಜ್ಯಪಾಲರಿಗೂ ಅಪಾರ ಆಸಕ್ತಿ ಇದ್ದ ಈ ಯೋಜನೆಯಲ್ಲೂ ಹೇಳಿಕೊಳ್ಳುವಂಥ ಪ್ರಗತಿಯೇನಿಲ್ಲ.
ಇಲ್ಲಿಗೇ ಮುಗಿಯಲಿಲ್ಲ, ಬಹು ನಿರೀಕ್ಷಿತ ದೇವನಹಳ್ಳಿ ವಿಮಾನ ನಿಲ್ದಾಣದ ಪೂರಕ ಯೋಜನೆಗಳು. 'ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ' ರಾಷ್ಟ್ರೀಯ ಹೆದ್ದಾರಿ 7ನ್ನು ಅಭಿವೃದ್ಧಿಗೊಳಿಸುವ ಮೂಲಕ ದೇವನಹಳ್ಳಿ ವಿಮಾನ ನಿಲ್ದಾಣ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಇದರ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 'ಮ್ಯಾಜಿಕ್ ಬಾಕ್ಸ್' ಅಂಡರ್ ಪಾಸ್ ಸೇರಿ ಟ್ರಾಫಿಕ್ ಅವಾಂತರಗಳನ್ನು ಕೊಂಚವಾದರೂ ಸುಗಮಗೊಳಿಸಬಹುದು ಅನ್ನುವ ದೂರದ ನಂಬಿಕೆ ಪ್ರಯಾಣಿಕರದು.
ವಿಮಾನ ಹಾರಾಟ ಶುರುವಾದ ನಂತರ 'ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ' 40 ವೋಲ್ವೋ ಬಸ್ಸುಗಳನ್ನು ರಸ್ತೆಗಿಳಿಸುತ್ತದೆನ್ನುವ ಆಶ್ವಾಸನೆ ಸಿಕ್ಕಿದೆ. ಪ್ರತಿ 55 ನಿಮಿಷಕ್ಕೊಮ್ಮೆ ಇಂದಿರಾ ನಗರ, ವೈಟ್ ಫೀಲ್ಡ್, ಕೋರಮಂಗಲ, ಜೆಪಿ ನಗರ, ಮಲ್ಲೇಶ್ವರಂ, ಸದಾಶಿವ ನಗರ, ಎಲೆಕ್ಟ್ರಾನಿಕ್ ಸಿಟಿ, ಎಂಜಿ ರೋಡ್ ಮತ್ತು ಪೀಣ್ಯ 2ನೇ ಹಂತದಿಂದ ವಿಮಾನ ನಿಲ್ದಾಣಕ್ಕೆ ಓಡಾಡುವ ಈ ಬಸ್ಸುಗಳ ಮುಖ್ಯ ಉದ್ದೇಶ ದೇವನಹಳ್ಳಿಗೆ ಅಡೆತಡೆಗಳಿಲ್ಲದ ಸುಗಮ ಸಂಚಾರ.
ಈ ಎಲ್ಲಾ ಗೊಂದಲಗಳ ನಡುವೆ ದೇವನಹಳ್ಳಿ ವಿಮಾನ ನಿಲ್ದಾಣ ಸಿಬ್ಬಂದಿ ನೇಮಕಾತಿಯಲ್ಲೂ ಅಧಿಕಾರಿ ವರ್ಗ ಮಲತಾಯಿ ಧೋರಣೆ ತೋರಿಸುತ್ತಿರುವುದು ಉರಿಯುವ ಬೆಂಕಿಗೆ ಉರುವಲು ಒದಗಿಸಿದೆ. 'ವಿಮಾನ ನಿಲ್ದಾಣಕ್ಕೆ ಮನೆ- ಫಲವತ್ತಾದ ಭೂಮಿ ಬಿಟ್ಟು ಕೊಟ್ಟ ಕನ್ನಡಿಗರನ್ನು ಕಡೆಗಣಿಸಿ ಹೊರ ರಾಜ್ಯದವರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ. ರೈಲ್ವೇ ಇಲಾಖೆಯ ಪಡಿಯಚ್ಚಿನಂತೆ ವಿಮಾನ ನಿಲ್ದಾಣವೂ ವರ್ತಿಸುತ್ತಿದೆ' ಎಂದು ಬಿಜೆಪಿ ಯುವ ಮೋರ್ಚಾ ಆರೋಪಿಸಿದೆ. ಈ ಯೋಜನೆಗೆ ಸುಮಾರು 3000 ಕುಟುಂಬಗಳು ತಮ್ಮ ಫಲವತ್ತಾದ ಭೂಮಿ ಬಿಟ್ಟು ಕೊಟ್ಟಿತ್ತು. ಜಮೀನು ನೀಡಿದ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗದ ಭರವಸೆಯನ್ನೂ ನೀಡಲಾಗಿತ್ತು. ಈಗಾಗಲೇ ಬಹುತೇಕ ನೇಮಕ ಪ್ರಕ್ರಿಯೆಗಳು ಪೂರ್ಣಗೊಂಡಿರುವುದರಿಂದ ಕೆರಳಿದ ಸ್ಥಳೀಯರು ಮರು ನೇಮಕಾತಿಗೆ ಒತ್ತಾಯಿಸಿದ್ದಾರೆ.ಇನ್ನು ಕೇವಲ ಬೆರಳೆಣಿಕೆಯಷ್ಟೇ ದಿನಗಳು ಉಳಿದಿವೆ. ಪ್ರಸ್ತಾವಿತ ಯೋಜನೆಗಳಲ್ಲಿ ಒಂದಾದರೂ ಸಫಲವಾದಲ್ಲಿ ಪರಮಾಶ್ಚರ್ಯವೇ ಸರಿ.
ಟಿಎಸ್‌ಐ
ಕೆ. ದಿವ್ಯದರ್ಶಿನಿ
ಕೇರಳ: ರೈತರ ಆತ್ಮಹತ್ಯೆ
ಗರ ಬಡಿದ 'ಕೇರ' ಕೃಷಿ
ಸರ್ಕಾರಕ್ಕೆ ಷೇರು ಮಾರುಕಟ್ಟೆ ಮೇಲಿರುವ ಪ್ರೀತಿ ರೈತರ ಮೇಲೆ ಯಾಕಿಲ್ಲ?
ಇತ್ತೀಚೆಗೆ ಷೇರು ಮಾರುಕಟ್ಟೆ ಸೂಚ್ಯಂಕ 2603ರಷ್ಟು ಕುಸಿತ ಕಂಡಿದೆ. ಕೆಲವೇ ಗಂಟೆಗಳಲ್ಲಿ ಅದೆಷ್ಟೋ ಮಂದಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಹಾಗೆಂದು ನಷ್ಟ ಆದಾಗ ಅವರ್‍ಯಾರೂ ಆತ್ಮಹತ್ಯೆಗೆ ಶರಣಾಗಿಲ್ಲ. ಆದರೆ ರೈತರು ನಷ್ಟ ಅನುಭವಿಸಿದಾಗ? ಬೆಳೆ ನಾಶವಾದಾಗ ಬಡ ರೈತರು ಕಂಡುಕೊಳ್ಳುವ ಸುಲಭ ದಾರಿ ಆತ್ಮಹತ್ಯೆ! ಸಾಲದ ಸಂಕಷ್ಟ ಎದುರಿಸಲಾಗದೆ ಅಸಹಾಯಕ ರೈತರು ಸಾವಿನಲ್ಲಿ ಸಮಾಧಾನ ಕಾಣುತ್ತಾರೆ. ಕೇರಳದ ವೈನಾಡು ಜಿಲ್ಲೆಯ ಮನೋಹರನ್ (35) ಮತ್ತು ಮೋಹನನ್ (24) ರೈತರ ಕಥೆಯೂ ಇದೇ. ಮನೋಹರನ್ ವಿದ್ಯುತ್ ಶಾಕ್ ತಗುಲಿಸಿಕೊಂಡರೆ, ಮೋಹನನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಕುಟುಂಬದ ಜವಾಬ್ದಾರಿಯೂ ಇವರ ಮೇಲಿತ್ತು. ಆದರೆ ಬೆಳೆದ ಫಸಲು ಫಲ ನೀಡದೆ ಬ್ಯಾಂಕಿನಿಂದ ಪಡೆದಿರುವ ಸಾಲ ತೀರಿಸುವುದು ಅಸಾಧ್ಯವಾದಾಗ ಇವರಿಬ್ಬರಿಗೂ ತೋಚಿದ್ದ ದಾರಿ ಆತ್ಮಹತ್ಯೆ.
'ಕೇರ' (ತೆಂಗು) ಎಂಬ ಶಬ್ದದಿಂದ ಈ ರಾಜ್ಯಕ್ಕೆ ಕೇರಳ ಎಂಬ ಹೆಸರು ಬಂದಿದೆ. ಆದರೆ ತೆಂಗಿನ ನಾಡಿನಲ್ಲಿ ಇದೀಗ ತೆಂಗಿಗೇ ಬರ ಬಂದಿದೆ. ಒಂದೆಡೆಯಿಂದ ತೆಂಗು ಕೃಷಿಗೆ ತಗುಲುವ ನುಸಿ ಪೀಡೆ ರೋಗ ಮತ್ತು ಇನ್ನೊಂದೆಡೆ ಸರ್ಕಾರದ ನಿಯಮಗಳು ತೆಂಗು ಕೃಷಿಕರನ್ನು ಸಂದಿಗ್ಧತೆಯಲ್ಲಿ ಸಿಲುಕಿಸಿವೆ. ಕೇಂದ್ರ ಸರ್ಕಾರ ರಾಜ್ಯದಲ್ಲಿ ತೆಂಗಿನ ಎಣ್ಣೆಯ ಕಾರ್ಖಾನೆಯನ್ನು ಪ್ರೋತ್ಸಾಹಿಸುವ ಬದಲಾಗಿ, ತಾಳೆ ಎಣ್ಣೆ ಆಮದಿಗೆ ನೀಡುತ್ತಿರುವ ಪರವಾನಿಗೆಯನ್ನು ವೃದ್ಧಿಸುತ್ತಿದೆ. ಕತ್ತಲಲ್ಲಿರುವ ತೆಂಗು ಕೃಷಿಕರ ಕುರಿತು ಮಾತ್ರ ಸರ್ಕಾರ ಇನ್ನೂ ಕುರುಡಾಗಿದೆ
ಭತ್ತ ಮಲಯಾಳಿಯರ ಪ್ರಮುಖ ಆಹಾರಧಾನ್ಯ. ಆದರೆ ಭತ್ತ ಬೆಳೆಗೂ ಬರ ಬಂದಿದೆ. ಭತ್ತ ಬೆಳೆಯಲು ಯೋಗ್ಯವಾದ ಜಮೀನುಗಳು ಉದ್ಯಮಗಳ ಪಾಲಾಗುತ್ತಿವೆ. ಪರಿಣಾಮವಾಗಿ ಇತ್ತೀಚೆಗೆ ಒಂದು ಕೆ.ಜಿ. ಅಕ್ಕಿಯ ಬೆಲೆ 20 ರೂಪಾಯಿಗೆ ಏರಿದೆ ಮತ್ತು ಉತ್ಪಾದನೆ ದಿನೇ ದಿನೇ ಕುಸಿಯುತ್ತಿದೆ. ಇನ್ನೊಂದು ಪ್ರಮುಖ ಅಂಶವೆಂದರೆ ಹೊರ ದೇಶಗಳಿಂದ ಏಲಕ್ಕಿ, ಕಾಳುಮೆಣಸು ಮತ್ತು ಗೋಡಂಬಿ ಖರೀದಿಸಲು ವಿದೇಶಿಯರು ಆಗಾಗ ಕೇರಳಕ್ಕೆ ಆಗಮಿಸುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಎಲ್ಲವೂ ಅಪಾಯದ ಸ್ಥಿತಿಯಲ್ಲಿದೆ. ಇಲ್ಲಿ ಸ್ವಲ್ಪ ಮಟ್ಟಿಗೆ ತೃಪ್ತಿಕರ ಎನಿಸುವಂತಹ ಲಾಭ ತರುತ್ತಿರುವ ಒಂದೇ ಒಂದು ಬೆಳೆ ಎಂದರೆ ರಬ್ಬರ್. ಆದರೆ ಅವುಗಳನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ ಬೆಳೆಯಲಾಗುತ್ತಿದೆ.
ಇತ್ತೀಚೆಗೆ 'ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಸೇಷನ್' ವರದಿ ಮಾಡಿರುವ ಪ್ರಕಾರ, ರಾಷ್ಟ್ರದ ಒಟ್ಟು ರಾಷ್ಟ್ರೀಯ ಉತ್ಪನ್ನ ಶೇ.9.6 ರಷ್ಟು ಏರಿದೆ. ಆದರೆ ಕಳೆದ ವರ್ಷ ಶೇ.6.1 ರಷ್ಟು ಇದ್ದ ಕೃಷಿ ಪ್ರಗತಿ ಶೇ.3.8ಕ್ಕೆ ಕುಸಿದಿದೆ. ಬಹುತೇಕರು ಕೃಷಿಯನ್ನೇ ಆಧರಿಸಿ ಬದುಕುತ್ತಿರುವ ದೇಶದಲ್ಲಿ ಇಂಥ ಬೆಳವಣಿಗೆ ಕಳವಳಕಾರಿ. ಷೇರು ಮಾರುಕಟ್ಟೆ ಕುಸಿತ ಕಂಡಾಗ ಪ್ರಧಾನ ಮಂತ್ರಿಯವರು ಕೂಡಲೇ ಎಚ್ಚೆತ್ತು ಪ್ರತಿಕ್ರಿಯಿಸಿದರು ಮತ್ತು ಆಶ್ವಾಸನೆಗಳ ಮಹಾಪೂರವನ್ನೇ ಹರಿಸಿದರು. ಆದರೆ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸರ್ಕಾರ ಕೇವಲ ಸಬೂಬು ನೀಡುತ್ತದೆಯೇ ವಿನಾ ಪರಿಹಾರ ಕನಸಿನ ಮಾತು.
ಸಾಲದ ಉಪಟಳ, ಬೆಳೆ ನಾಶ, ಮತ್ತು ಸರ್ಕಾರದ ದೋಷಪೂರಿತ ನಿಯಮಾವಳಿಗಳಿಂದಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹಲವಾರು ಸರ್ಕಾರೇತರ ಸಂಸ್ಥೆಗಳು ವರದಿ ಮಾಡಿವೆ. ಈ ಅಂಕಿ ಅಂಶಗಳು ಎಚ್ಚರಿಕೆಯ ಕರೆಗಂಟೆ. ಒಂದು ಬಾರಿ ರಾಜ್ಯ ವಿಧಾನಸಭೆ ರೈತರ ಆತ್ಮಹತ್ಯೆ ಕುರಿತು
ಅಂಕಿ ಅಂಶಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರದ ನೆರವಿಗಾಗಿ ಕೈಚಾಚಿತ್ತು. ಆದರೆ ಈ ಬೇಡಿಕೆಯನ್ನೇ ತಳ್ಳಿಹಾಕಲಾಯಿತು.
ರೈತರಿಗೆ ಸಾಲ ನೀಡುವ ಬ್ಯಾಂಕ್‌ಗಳು ಲಾಭ ಗಳಿಸುತ್ತಲೇ ಇವೆ. ಆದರೆ ಬಡ ರೈತರಿಗೆ ಆರ್ಥಿಕ ಒತ್ತಾಸೆ ನೀಡುವ ಯೋಜನೆಯನ್ನು ಜಾರಿಗೊಳಿಸಲು ಯಾವ ಬ್ಯಾಂಕ್‌ಗಳೂ ಮುಂದೆ ಬರುವುದಿಲ್ಲ.
ಕೃಷಿಯನ್ನು 'ಉಪ ಉದ್ಯೋಗ' ಎಂಬಂತೆ ಕಾಣುತ್ತಿದ್ದ ಕೇಂದ್ರ ಕ್ಯಾಬಿನೆಟ್‌ನಲ್ಲಿ ಕುಳಿತಿರುವ 'ಕ್ರಿಕೆಟ್ ಮಾಸ್ಟರ್' ಶರದ್ ಪವಾರ್, ಕೆ. ಕರುಣಾಕರನ್ ಎನ್‌ಸಿಪಿ ಪಕ್ಷಕ್ಕೆ ಸೇರಿದ ಬಳಿಕ ಕೇರಳದ ಬಗ್ಗೆ ಕೊಂಚ ಕಾಳಜಿ ತೋರಿಸಿದ್ದರು. ಆದರೆ ಈ ಕಾಳಜಿಯೂ ಈಗ ಗತ ಇತಿಹಾಸ. ಏಕೆಂದರೆ ಒಂದು ಕಾಲದಲ್ಲಿ ಶರದ್ ಪವಾರ್‌ಗೆ ಸಾಥ್ ನೀಡಿದ್ದ ಕರುಣಾಕರನ್ ತಮ್ಮ ಮಾತೃಸಂಸ್ಥೆಗೇ
ಮರಳಿದ್ದಾರೆ. ಶರದ್ ಪವಾರ್ ಗಾಯಗೊಂಡ ಹುಲಿಯಂತಾಗಿದ್ದಾರೆ!
ಟಿಎಸ್‌ಐ
ಕಾವಲಂ ಶಶಿಕುಮಾರ್
ಪಂಜಾಬ್: ಗಲಭೆ
ದೇರಾ ಮುಖ್ಯಸ್ಥರ ಮೇಲೆ ದಾಳಿ
ಖಾಲೀಸ್ತಾನ ಉಗ್ರಗಾಮಿಗಾಗಿ ಮುಂದುವರಿದ ಶೋಧ
ಉಗ್ರಗಾಮಿ ಬಕ್ಷೀಶ್ ಸಿಂಗ್ ಇನ್ನೂ ತಲೆ ತಪ್ಪಿಸಿಕೊಂಡಿದ್ದಾನೆ. 'ಭಿಂದ್ರನ್‌ವಾಲೆ ಟೈಗರ್ ಫೋರ್ಸ್ ಆಫ್ ಖಾಲೀಸ್ತಾನ್' (ಬಿಟಿಎಫ್‌ಕೆ)ಗೆ ಸೇರಿದ ಬಕ್ಷೀಶ್ ಸಿಂಗ್‌ಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ. 'ದೇರಾ ಸಚಾ ಸೌದ' ಎಂಬ ಧಾರ್ಮಿಕ ಸಂಘಟನೆಯ ಮುಖ್ಯಸ್ಥರ ಅಂಗರಕ್ಷಕ ಪಡೆಯ ಮೇಲೆ ದಾಳಿ ನಡೆಸಲು ಪಟಿಯಾಲದಲ್ಲಿರುವ ತನ್ನ ಮನೆಯಲ್ಲಿ ಒಳಸಂಚು ಹೂಡಿದ ಆಪಾದನೆ ಎದುರಿಸುತ್ತಿದ್ದ ಬಕ್ಷೀಶ್ ಸಿಂಗ್ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ.
ಜನವರಿ ಒಂದ-ರಂದು ನಡೆದ ಟ್ರಕ್ ಟಯರ್ ಬಾಂಬ್ ಸ್ಫೋಟ ತೀವ್ರವಾಗಿತ್ತು ಮತ್ತು ಅದರಲ್ಲಿ ಆರ್‌ಡಿಎಕ್ಸ್ ಬಳಕೆಯಾಗಿತ್ತು ಎಂಬ ಶಂಕೆ ಪೊಲೀಸರಿಗೆ ಇದ್ದರೂ ಫಾರೆನ್ಸಿಕ್ ವರದಿ ಬಂದ ನಂತರ ವಷ್ಟೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬಹುದಾಗಿದೆ. ಫೆಬ್ರುವರಿ ಎರಡರ ಮಧ್ಯಾಹ್ನ ಮೂರು ಗಂಟೆಗೆ ಕರ್ನಾಲ್ ಜಿಲ್ಲೆಯ ಪಿಪ್ಲಿ ಸಮೀಪದ ಭೂತಾನ್‌ನಲ್ಲಿ 'ದೇರಾ ಸಚಾ ಸೌದ' ಮುಖ್ಯಸ್ಥ ಗುರ್‌ಮೀತ್ ಸಿಂಗ್ ರಾಮ್ ರಹೀಂ ಅವರ ಅಂಗರಕ್ಷಕ ಪಡೆಯ ಮೇಲೆ ದಾಳಿ ನಡೆಸಲಾಗಿತ್ತು. ಗುರ್‌ಮೀತ್ ಸಿಂಗ್ ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಬಾಬಾ ಅವರಿಗೆ ಝೆಡ್ ಪ್ಲಸ್ ರಕ್ಷಣೆ ಒದಗಿಸಲಾಗಿತ್ತು.
ಪಟಿಯಾಲಾದ ನಿವಾಸದಲ್ಲಿ ಬಕ್ಷೀಶ್ ಸಿಂಗ್‌ಗಾಗಿ ಹುಡುಕಾಟ ನಡೆಸಿದ ಪೊಲೀಸರು ಆತ ಅಲ್ಲಿ ಸಿಗದೆ ಇದ್ದಾಗ ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ರಾಜ್ಯದಲ್ಲಿ ಶೋಧ ಕಾರ್ಯಕ್ಕಾಗಿ ತೆರಳಿದ್ದಾರೆ.
ದೇರಾ ಮುಖ್ಯಸ್ಥ ಇದ್ದ ಕಾರಿನೆಡೆಗೆ ಸ್ಫೋಟಕ ಎಸೆಯಲಾಗಿತ್ತು. ಆ ಸಂದರ್ಭ ಅವರು ಅಂಬಾಲದ ಕೋರ್ಟ್‌ನಿಂದ ವಾಪಾಸಾಗುತ್ತಿದ್ದರು. ಆರು ಜನ ಅಂಗರಕ್ಷಕರನ್ನು ಒಳಗೊಂಡಂತೆ 11 ಮಂದಿ ವಾಹನ ಸ್ಫೋಟದಲ್ಲಿ ಗಾಯಗೊಂಡಿದ್ದರು.
2003ರಲ್ಲಿ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಬಕ್ಷೀಶ್ ಸಿಂಗ್ ಹೆಸರು ಹೊರಬಂದದ್ದು ಅಸಂಧ್‌ನ ಟ್ರಕ್ ಚಾಲಕ ಮಹೀಂದರ್ (35) ಮತ್ತು ಮನ್ಸಾದ ಕ್ಲೀನರ್ ಸ್ವರನ್ (20) ನೀಡಿದ ಮಾಹಿತಿಯಿಂದಾಗಿ ಎಂದು ಕರ್ನಾಲ್ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಚಾವ್ಲಾ ತಿಳಿಸಿದ್ದಾರೆ.
'ಭಿಂದ್ರನ್‌ವಾಲೆ ಖಾಲೀಸ್ತಾನ್ ಟೈಗರ್ ಫೋರ್ಸ್' ಸದಸ್ಯನಾದ ಸಿಂಗ್, ಬಿಗಿ ಭದ್ರತೆಯಿದ್ದ ನಭಾ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾದ ನಂತರ ಪಟಿಯಾಲಾದಲ್ಲಿ ನೆಲೆಸಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ದಾಳಿಯ ಹಿಂದೆ ಆತನ ಕೈವಾಡವಿದೆ ಎಂದು ಚಾವ್ಲಾ ಅಭಿಪ್ರಾಯ ಪಡುತ್ತಾರೆ.
ಪಂಜಾಬ್ ಹಾಗೂ ಹರಿಯಾಣ ಪೊಲೀಸರು ಬಕ್ಷೀಶ್ ಸಿಂಗ್ ಮನೆ ಇರುವ ರಾಗೋ ಮಜ್ರಾ ಪ್ರದೇಶದ ಸುತ್ತಮುತ್ತ ಮತ್ತು ಸಿರ್‌ಹಿಂದ್ ರಸ್ತೆಯ ಮಜ್ರೀ ಅಕಾಲಿಯನ್ ಹಳ್ಳಿಯಲ್ಲೂ ತನಿಖೆ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಮಾಜಿ ಸಾಧ್ವಿಗಳು ಬಾಬಾ ಮೇಲೆ ಕೊಲೆ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದಾಳಿ ಸಂದರ್ಭ ಅವರು ಇದೇ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ
ದಂತೆ ಅಂಬಾಲ ಕೋರ್ಟ್‌ಗೆ ಹಾಜರಾಗಿ ಮೀರತ್ ಸಮೀಪದ ಬಾರ್ನವ ಆಶ್ರಮಕ್ಕೆ ವಾಪಾಸಾಗುತ್ತಿದ್ದರು.
ದೇರಾ ಮುಖ್ಯಸ್ಥ ಕಳೆದ ಮೇ ತಿಂಗಳಿನಲ್ಲಿ ಧಾರ್ಮಿಕ ಹಾಗೂ ರಾಜಕೀಯ ಕ್ಷೆಭೆಗಳ ಕೇಂದ್ರ ಬಿಂದುವಾಗಿದ್ದರು. ಅವರ ಅನುಯಾಯಿಗಳು ಹಾಗೂ ಅಕಾಲಿ ಪಂಗಡದ ನಡುವೆ ತೀವ್ರ ಕಾದಾಟ ನಡೆದಿತ್ತು. ಜಾಹೀರಾತು ಒಂದರಲ್ಲಿ ಅವರು ನಿಲುವಂಗಿ ಧರಿಸಿ ಅಮೃತ ಹಂಚುವುದರ ವಿರುದ್ಧ ಈ ವಿವಾದದ ಅಲೆ ಎದ್ದಿತ್ತು. ಅಲ್ಲದೆ ಸಿಖ್ಖರು ದೇರಾ ಮುಖ್ಯಸ್ಥರು ಗುರುಗೋವಿಂದ್ ಸಿಂಗ್ ಅವರನ್ನು ಅನುಕರಿಸುತ್ತಿದ್ದಾರೆ ಎಂದು ಆಪಾದಿಸಿದ್ದರು.
ದೇರಾ ಮುಖ್ಯಸ್ಥರಿಗೆ 'ಪಾಠ ಕಲಿಸಬೇಕು' ಎಂಬ ಬೆದರಿಕೆಗಳು ಪಂಜಾಬ್‌ನಲ್ಲಿ ಆರಂಭವಾಗಿದ್ದು, ಹಿಂಸಾತ್ಮಕ ರೂಪ ತಾಳಿವೆ. ಈ ಬೆಳವಣಿಗೆಗಳ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೆ.
ಟಿಎಸ್‌ಐ
ರಾಜೀಂದರ್ ಟಗ್ಗರ್
|