|
ಇತ್ತೀಚೆಗೆ ದಾವಣಗೆರೆಯ ಹೊನ್ನಾಳಿಯಲ್ಲಿ ಯಃಕಶ್ಚಿತ್ ಬೈಕ್ ಕಳ್ಳತನ ಆರೋಪದ ಮೇಲೆ ಬಂಧಿಸಲಾಗಿರುವ ಮಹಮ್ಮದ್ ಗೌಸ್ ಅಲಿಯಾಸ್ ರಿಯಾಸುದ್ದಿನ್ ನಾಸೀರ್ ಮತ್ತು ಅಸಾದುಲ್ಲಾ ಇಸ್ಮಾಯಿಲ್ ಅಬೂಬಕರ್ ಪ್ರಕರಣದ ಹಿಂದಿರುವ ರಹಸ್ಯ ಬೆಚ್ಚಿಬೀಳಿಸುವಂತಿದೆ. ಅಂತರ್ ರಾಷ್ಟ್ರೀಯ ಭಯೋತ್ಪಾದನೆಯ ಕರಾಳ ಹಸ್ತ ಕರ್ನಾಟಕದ ಮೂಲೆ-ಮೂಲೆಗೆ ಚಾಚಿದೆ ಎಂಬ ಅಂಶ ಈಗ ಬಯಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಬೈಕ್ ಕಳ್ಳತನ ಆರೋಪದ ಮೇಲೆ ಪೊಲೀಸರು ಬಂಧಿಸಿದ ಶಂಕಿತ ಉಗ್ರರ ಬಾಯಿಂದ ಹೊರಬಂದಿರುವ ಮಾಹಿತಿಗಳು ಅತ್ಯಂತ ಭಯಾನಕ. ಈ ಉಗ್ರರು ಇಸ್ರೇಲ್ ನಿರ್ಮಿತ ಅತ್ಯಾಧುನಿಕ ಸಬ್‌ಮೆಶಿನ್‌ಗನ್ 'ಹುಜಿ' ಸೇರಿದಂತೆ ಹಲವು ಶಸ್ತ್ರಾಸ್ತ್ರಗಳ ತರಬೇತಿ ಪಡೆದಿದ್ದಾರೆಂದು ವಿಚಾರಣೆಯಿಂದ ತಿಳಿದುಬಂದಿದ್ದು, ಭಾರತದಲ್ಲಿ ಈವರೆಗೆ ಯಾವ ಉಗ್ರವಾದಿಗಳ ಸಂಘಟನೆಯೂ ಇಂಥ ಅತ್ಯಾಧುನಿಕ ಶಸ್ತ್ರಾಸ್ತ್ರ ತರಬೇತಿ ಪಡೆದಿಲ್ಲ. ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಗಳಿಸಿದ ಉಗ್ರರ ಬಳಿ ಮಾತ್ರ ಇಂಥ ಶಸ್ತ್ರಾಸ್ತ್ರಗಳಿರುತ್ತವೆ ಎನ್ನುವುದು ಪೊಲೀಸರ ಅಂಬೋಣ.
ರಾಜ್ಯದ ರಾಜಧಾನಿಯನ್ನು ತಮ್ಮ ಚಟುವಟಿಕೆಗಳ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿರುವ ಉಗ್ರರು ವಿದ್ಯಾವಂತ ಯುವಕರನ್ನು ಉಗ್ರವಾದಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಐಟಿ ಉದ್ಯೋಗಿಗಳ ಕೂಟವನ್ನು ಕಟ್ಟಿದ್ದಾರೆ. ವಿಚಾರಣೆ ವೇಳೆ ಮಹಮ್ಮದ್ ಗೌಸ್ ಮತ್ತು ಅಸಾದುಲ್ಲಾ ಇಬ್ಬರೂ ತಾವು ಧಾರವಾಡದ ಕಲಘಟಗಿ ಅರಣ್ಯದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡಿರುವುದಾಗಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಗಟ್ಟಿಗೊಳಿಸಲು 'ದಾರ್-ಇ-ರಿಬಾತ್' ಎಂಬ ಎರಡು ತಿಂಗಳ ತರಬೇತಿ ಪಡೆದಿರುವ ಗೌಸ್, ಪೊಲೀಸರ ಚಲನವಲನ, ಮಾಹಿತಿ ಸಂಗ್ರಹ, ಸಿಕ್ಕಿಬಿದ್ದಾಗ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಕುರಿತು ತರಬೇತಿ ಪಡೆದೇ ಕರ್ನಾಟಕಕ್ಕೆ ಬಂದಿರುವುದಾಗಿ ಹೇಳಿದ್ದಾನೆ.
ಇವರಿಬ್ಬರೂ ನೀಡಿದ ಮಾಹಿತಿಯನ್ವಯ ಕಿಮ್ಸ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಆಸೀಫ್ ಬಂಧನ, ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಆಸಿಫ್ ನಿಷೇಧಿತ 'ಸಿಮಿ' ಉಗ್ರವಾದಿ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದು, ಹುಬ್ಬಳ್ಳಿಯ ಸಿಮಿ ಘಟಕಕ್ಕೆ ಆತನೇ ನಾಯಕ. ಕರ್ನಾಟಕ ಮತ್ತು ಗೋವಾದ ಒಟ್ಟು 11 ಪ್ರಮುಖ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಲು ಸಂಚು ಹೂಡಿರುವುದಾಗಿ ತನಿಖೆಯಿಂದ ದೃಢಪಟ್ಟಿದೆ. ಉಗ್ರರು ಕರ್ನಾಟಕದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ, ಸಿದ್ಧಾರೂಢ ದೇವಾಲಯ, ಉಡುಪಿ ಶ್ರೀಕೃಷ್ಣ ಮಠ, ಕೈಗಾ ಅಣು ಸ್ಥಾವರ, ಬೆಂಗಳೂರಿನ ಇಸ್ಕಾನ್ ಮತ್ತು ಕೆಲವು ಐಟಿ ಕಂಪನಿಗಳ ಮೇಲೆ ದಾಳಿಗೆ ಸಂಚು ನಡೆಸಿದ್ದರು. ಕೆಲವು ಕಿಮ್ಸ್ ವಿದ್ಯಾರ್ಥಿಗಳೂ ತನ್ನ ಕಾರ್ಯಚಟುವಟಿಕೆಗಳಿಗೆ ಸಹಕರಿಸುತ್ತಿದ್ದು, ಕಾಲೇಜಿನಲ್ಲಿ ಪ್ರಾರ್ಥನೆ ನೆಪದಲ್ಲಿ ಸಿಮಿ ಚಟುವಟಿಕೆಗಳ ಕುರಿತು ಚರ್ಚಿಸುತ್ತಿದ್ದರು. ಅಫ್ಘಾನಿಸ್ತಾನದ ಉಗ್ರ ಉಮರ್ ಮುಲ್ಲಾ ಜೊತೆ ಸಂಪರ್ಕ ಹೊಂದಿರುವ ಮಹಮ್ಮದ್ ಆಸೀಫ್ ಉತ್ತರ ಕರ್ನಾಟಕದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯನ್ನು ಬಲಪಡಿಸಲು ಯೋಜನೆ ರೂಪಿಸಿದ್ದ. ಜನವರಿ 30ರಂದು ರಾಜ್ಯದೆಲ್ಲೆಡೆ ಸ್ಫೋಟ ನಡೆಸಲು ಸಂಚು ಹೂಡಿದ್ದು, ಬೆನಜೀರ್ ಭುಟ್ಟೊ ಹತ್ಯೆಯಿಂದಾಗಿ ಪಾಕಿಸ್ತಾನದಿಂದ ರಾಜ್ಯಕ್ಕೆ ಸಕಾಲದಲ್ಲಿ ಆರ್‌ಡಿಎಕ್ಸ್ ತರಲು ಸಾಧ್ಯವಾಗದ್ದರಿಂದ ಸಂಚು ಕಾರ್ಯಗತವಾಗಲಿಲ್ಲ ಎಂದು ಆತ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಉತ್ತರ ಕರ್ನಾಟಕದ ಬಾಗಲಕೋಟೆ, ರಾಯಚೂರು, ಹೊಸಪೇಟೆ, ಗದಗ, ಬೀದರ್ ಜಿಲ್ಲೆಗಳಲ್ಲಿ ಸಿಮಿ ಸಂಘಟನೆ ಸಕ್ರಿಯವಾಗಿದೆ. ಸಂಘಟನೆಗಾಗಿ ನಿಧಿ ಸಂಗ್ರಹಕ್ಕಾಗಿ ಹಲವು ಗಣ್ಯರು ನೆರವಾಗಿದ್ದಾರೆ ಎಂಬ ಗುಪ್ತಚರ ವರದಿಗಳ ಆಧಾರದ ಮೇಲೆ ಪೊಲೀಸರು ಮತ್ತಿಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲವು ದಶಕಗಳಿಂದ ಭಯೋತ್ಪಾದಕರು ದುಷ್ಕೃತ್ಯಗಳ ಸಂಚು ಹೂಡುತ್ತಲೇ ಇದ್ದಾರೆ. ರಾಜ್ಯದಲ್ಲಿ ಬಂದವರಿಗೆಲ್ಲ 'ಅತಿಥಿ ದೇವೋಭವ' ಎಂದು ಸ್ವಾಗತಿಸಲಾಗುತ್ತಿದೆ. ಎಲ್ಲಿಂದಲೋ ಬಂದ ಉಗ್ರನೊಬ್ಬ ಕರ್ನಾಟಕದಲ್ಲಿ ಬಂದು ವ್ಯಾಪಾರ ನಡೆಸಬಹುದು. ತನ್ನ ಪುಟ್ಟ ಅಂಗಡಿಯಲ್ಲಿಯೇ ಕುಳಿತು ಆತ ಇಡೀ ಭಾರತವನ್ನೇ ಕೆಡವಿ ಹಾಕುವ ಯೋಜನೆ ರೂಪಿಸುತ್ತಾನೆ. ಒಂದು ಬೈಕ್ ಕಳ್ಳನ ಹಿಂದೆ ಎಲ್‌ಇಟಿ ಸಂಪರ್ಕ ಅಥವಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ ಎಂದು ಕನಸಿನಲ್ಲೂ ಊಹಿಸದ ಸಂಗತಿಗಳು ಈಗ ನಿಜವಾಗಿದೆ.
ರಾಜ್ಯದಲ್ಲಿ ಭಯೋತ್ಪಾದನೆಯನ್ನು ತಡೆಗಟ್ಟಲು ಸರ್ಕಾರ ಭಯೋತ್ಪಾದನಾ ನಿಗ್ರಹ ದಳ ಸ್ಥಾಪಿಸುವುದಾಗಿ ಹೇಳಿ ವರ್ಷಗಳೇ ಸರಿದುಹೋಗಿವೆ. ಆದರೆ ಈವರೆಗೆ ಉಗ್ರಗಾಮಿ ಚಟುವಟಿಕೆಗಳ ನಿಯಂತ್ರಣಕ್ಕೆ ಯಾವುದೇ ಕಟ್ಟುನಿಟ್ಟಿನ ಕಾಯ್ದೆಯನ್ನು ಸರ್ಕಾರ ರೂಪಿಸಿಲ್ಲ. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಸಂಘಟಿತ ಉಗ್ರಗಾಮಿ ಚಟುವಟಿಕೆ ನಿಗ್ರಹ ಕಾಯ್ದೆ (ಪೋಟಾ)ಯನ್ನು ರದ್ದು ಮಾಡಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಆದರೆ, ಆ ಬಳಿಕ ಅದಕ್ಕೆ ಪರ್ಯಾಯವಾಗಿ ಹೊಸ ಕಾಯ್ದೆಯನ್ನು ತರುವಲ್ಲಿ ಮಾತ್ರ ಎಲ್ಲಾ ಸರ್ಕಾರಗಳೂ ವಿಫಲವಾದವು.
ಕರಾವಳಿಯಲ್ಲಿ 'ಅಲ್ ಬದರ್' ಉಗ್ರವಾದಿ ಚಟುವಟಿಕೆಗಳ ಕುರಿತು ಕಳೆದ ವರ್ಷವೇ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿತ್ತು. ಕಳೆದ ವರ್ಷ ಜುಲೈನಲ್ಲಿ ಗುಜರಾತ್‌ನಲ್ಲಿ ಕರಾವಳಿ ಗಸ್ತು ಪಡೆ 'ಅಲ್ ಬದರ್' ಸಂಘಟನೆಯ ಆರು ಮಂದಿಯನ್ನು ಬಂಧಿಸಿ, ಅಪಾರ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ. ನಂತರ ವಿಚಾರಣೆ ವೇಳೆ ಅವರು ಹೇಳಿದ್ದು ಕರ್ನಾಟಕ ತಮ್ಮ ಕಾರ್ಯಕ್ಷೇತ್ರವೆಂದು. ಬೆಂಗಳೂರಿನಲ್ಲಿ ಎಲ್‌ಟಿಟಿಇ ಉಗ್ರರು ನೆಲೆಯೂರಿದ್ದಾರೆನ್ನುವುದು ತಿಳಿದದ್ದು 2002ರಲ್ಲಿ. ಅದೇ ವರ್ಷ ತಮಿಳುನಾಡಿನ ಪೊಲೀಸರು ಬೆಂಗಳೂರಿನ ಮನೆಯೊಂದರ ಮೇಲೆ ದಾಳಿ ನಡೆಸಿ, ಅಪಾರ ಮದ್ದುಗುಂಡುಗಳ ಸಹಿತ, 12 ಮಂದಿ ಉಗ್ರರನ್ನು ಬಂಧಿಸಿದ್ದರು. 2006ರಲ್ಲಿ ಅಲ್-ಖದರ್ ಭಯೋತ್ಪಾದನಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಮಹಮದ್ ಫಹಾದ್ ಮತ್ತು ಮಹಮದ್ ಅಲಿಯನ್ನು ಬಂಧಿಸಲಾಗಿತ್ತು. ಆದರೆ, ಇವ್ಯಾವುದರ ವಿಚಾರಣೆಯೂ ಈವರಗೆ ಆರಂಭವಾಗಿಲ್ಲ. ಪ್ರತಿ ಬಾರಿ ಉಗ್ರರು ಪತ್ತೆಯಾದಾಗಲೂ ಅವರನ್ನು ಬಂಧಿಸಿ ಕೈತೊಳೆದುಕೊಳ್ಳಲಾಗುತ್ತಿದೆ, ಹೊರತು ಶೀಘ್ರಗತಿಯಲ್ಲಿ ವಿಚಾರಣೆಗೆ ಪ್ರಯತ್ನಿಸುವುದು ಅಪರೂಪವೇ. ನಮ್ಮ ಪೊಲೀಸರು ವರ್ಷಗಟ್ಟಲೆ ಹುಡುಕಿದರೂ, ಖಚಿತ ಮಾಹಿತಿ ಸಂಗ್ರಹದ ಕೆಲಸವೇ ಮುಗಿದಿರುವುದಿಲ್ಲ. ಇದರಿಂದ ವಿಚಾರಣೆ ಮತ್ತಷ್ಟು ವಿಳಂಬವಾಗುತ್ತದೆ. ಇದಕ್ಕೊಂದು ಉದಾಹರಣೆ 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಮೇಲೆ ನಡೆದ ದಾಳಿ. ಈವರೆಗೆ ಈ ದುಷ್ಕೃತ್ಯ ಎಸಗಿ ಬಂಧಿತನಾದ ಮಹಮ್ಮದ್ ಬಿಲಾಲ್ ಭಯೋತ್ಪಾದಕ ಎಂಬುದಕ್ಕೆ ಅಗತ್ಯ ಪುರಾವೆಗಳು ಪೊಲೀಸರಿಗೆ ಸಿಕ್ಕೇ ಇಲ್ಲ! ಪ್ರತಿ ಬಾರಿ ಭಯೋತ್ಪಾದಕರ ದಾಳಿಯಾದಾಗಲೂ ನಮ್ಮ ಆಡಳಿತದ ಚುಕ್ಕಾಣಿ ಹಿಡಿದ ನಾಯಕರು ಹೇಳುವ ಮಾತು ಸಮರ್ಥ ಭದ್ರತಾ ವ್ಯವಸ್ಥೆ ರೂಪಿಸಲಾಗುವುದು ಎಂದೇ. ಆದರೆ ಈವರೆಗೆ ಸಮರ್ಥ ಭದ್ರತಾ ವ್ಯವಸ್ಥೆ ಎಂಬುದು ರಾಜ್ಯದ ಅಣು ಸ್ಥಾವರ, ಬೃಹತ್ ಜಲಾಶಯ ಮತ್ತು ಮಹತ್ವದ ಕಟ್ಟಡಗಳಿಗೇ ಲಭ್ಯವಾಗಿಲ್ಲ ಎಂದ ಮೇಲೆ ಇನ್ನು ಜನಸಾಮಾನ್ಯರು ಓಡಾಡುವ ಸಾಮಾನ್ಯ ಪ್ರದೇಶಗಳ ಸ್ಥಿತಿ ಏನು ಎಂಬುದನ್ನು ಯಾರಾದರೂ ಊಹಿಸಬಹುದು. ಇದೀಗ ಉಗ್ರರ ಜಾಲದ ನೈಜ ಸ್ವರೂಪ ಬಿಚ್ಚಿಕೊಳ್ಳುತ್ತಿದ್ದಂತೆ ಮಂಪರಿನಿಂದ ಎಚ್ಚೆತ್ತಂತೆ ಕೇಂದ್ರ ಗೃಹ ಸಚಿವಾಲಯ ಮೈಕೊಡವಿ ನಿಂತಿದೆ. ರಾಜ್ಯದ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಮೂವರೂ ಶಂಕಿತ ಉಗ್ರರನ್ನು ಸಿಒಡಿ ತನಿಖೆಗೆ ಒಪ್ಪಿಸಲಾಗಿದ್ದು, ಮಂಪರು ಪರೀಕ್ಷೆಗೆ ಅನುಮತಿ ನೀಡಲಾಗಿದೆ.
ಆದರೆ, ಅಷ್ಟುಮಾತ್ರ ಸಾಲದು. ಪ್ರತಿಯೊಂದು ಉಗ್ರರ ಪ್ರಕರಣಕ್ಕೂ ಸಂಬಂಧಿಸಿದಂತೆ ಆಮೂಲಾಗ್ರ ತನಿಖೆಯಾಗಬೇಕು. ಇದಕ್ಕಿಂತ ಮುಖ್ಯವಾದುದು ಕನಿಷ್ಠ ಇಂತಹ ಪ್ರಕರಣಗಳಲ್ಲಾದರೂ ನಮ್ಮ ನ್ಯಾಯಾಂಗ ವ್ಯವಸ್ಥೆ ಒಂದಿಷ್ಟು ಚುರುಕುತನ ತೋರಬೇಕಿರುವುದು. ಆರೋಪಿಯೊಬ್ಬ ಅಪರಾಧಿ ಎಂದು ಘೋಷಣೆಯಾದಾಗಲೇ ದಶಕಗಳು ಉರುಳುವುದಾದರೆ ಅದರಿಂದ ಪ್ರಯೋಜನವೇನು? ಹಾಗೇ ಭಾರತೀಯ ವ್ಯವಸ್ಥೆಯ ದೊಡ್ಡ ಕಳಂಕವಾದ ಎಲ್ಲವನ್ನೂ ಮತಬ್ಯಾಂಕ್ ದೃಷ್ಟಿಯಿಂದ ನೋಡುವುದನ್ನು ಬಿಟ್ಟು ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ವರ್ತಿಸಬೇಕಿದೆ.
ಕೇಳಿದ್ದು ಬೇಲ್, ದಕ್ಕಿದ್ದು ಜೈಲು
ಬೈಕ್ ಕಳ್ಳತನ ಆರೋಪದಲ್ಲಿ ಬಂಧಿತರಾದ ಮಹಮ್ಮದ್ ಗೌಸ್ ಮತ್ತು ಅಸಾದುಲ್ಲಾ ಇಸ್ಮಾಯಿಲ್ ಜಾಮೀನಿಗೆ ಅಸಾದುಲ್ಲಾ ತಂದೆ ಅಬೂಬಕರ್ ಎಲ್ಲಾ ಸಿದ್ಧತೆ ಮಾಡಿಕೊಂಡು ದಾವಣಗೆರೆಗೆ ಬಂದಿದ್ದರು. ಇನ್ನೇನು ಜಾಮೀನು ಪಡೆದು ಆರೋಪಿಗಳು ಹೊರಬರುವಷ್ಟರಲ್ಲಿ ಜೈಲು ಅಧೀಕ್ಷಕ ಓಬಳೇಶಪ್ಪ ಅವರಿಗೆ ಬಂಧಿತರ ಮೇಲೆ ಅನುಮಾನ ಬಂತು.
ಬಂಧಿತ ಮಹಮ್ಮದ್ ಗೌಸ್ ತಾನು ಗುಲ್ಬರ್ಗದ ನಿವಾಸಿ, ಅಡುಗೆಭಟ್ಟನಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ. ಬೆಳಗ್ಗಿನ ಹೊತ್ತು ಜೈಲಿನ ಎಲ್ಲಾ ಕೈದಿಗಳು ರಾಷ್ಟ್ರಗೀತೆಯನ್ನು ಗೌರವದಿಂದ ಹಾಡುತ್ತಿದ್ದರೆ, ಇವರಿಬ್ಬರೂ ಅಗೌರವದಿಂದ ನಡೆದುಕೊಳ್ಳುತ್ತಿದ್ದರು. ಅವರ ಈ ನಡವಳಿಕೆಯ ಬಗ್ಗೆ ಜೈಲು ಅಧಿಕಾರಿ ಮಾಹಿತಿ ನೀಡಿದ್ದರಿಂದ ದಾವಣಗೆರೆ ಪೊಲೀಸರು, ಆ ಇಬ್ಬರನ್ನು ಮತ್ತೆ ವಿಚಾರಣೆಗೊಳಪಡಿಸಿದರು. ಆಗ ಅವರು ಕೇವಲ ಬೈಕ್ ಕಳ್ಳರಲ್ಲ, ಉಗ್ರಗಾಮಿಗಳು ಎಂಬುದು ಖಚಿತವಾಯಿತು.
ಭಯೋತ್ಪಾದಕನಲ್ಲ
ನನ್ನ ಮಗ ನಿರಪರಾಧಿ. ನಮ್ಮ ಕುಟುಂಬ ಯಾವುದೇ ದುಷ್ಕರ್ಮಿಗಳೊಂದಿಗೆ ಸಂಪರ್ಕ ಹೊಂದಿಲ್ಲ. ಆತ ನಿಜಕ್ಕೂ ತಪ್ಪೆಸಗಿದ್ದಾನೆ ಎಂದಾದರೆ ಆತನಿಗೆ ಶಿಕ್ಷೆಯಾಗಲಿ
- ಮಹಮದ್ ಮೊಹಿನುದ್ದೀನ್ ಖಾದರ್,
ಮಹಮ್ಮದ್ ಆಸೀಫ್ ತಂದೆ
ನನ್ನ ತಮ್ಮ ಅತ್ಯಂತ ಧರ್ಮನಿಷ್ಠ. ಒಂದು ದಿನವೂ ನಮಾಜು ತಪ್ಪಿಸುತ್ತಿರಲಿಲ್ಲ. ಈತ ನಿರಪರಾಧಿ ಎಂದೇ ಹೇಳುತ್ತೇನೆ ಹಾಗೂ ಬಲವಾಗಿ ನಂಬಿದ್ದೇನೆ
- ಸಾದುಲ್ಲಾ,
ಅಸಾದುಲ್ಲಾ ಇಸ್ಮಾಯಿಲ್ ಅಬೂಬಕರ್ ಅಣ್ಣ
ನಮಗೆ ಸತ್ಯ ಏನೆಂದು ತಿಳಿಸಿ. ಗೌಸ್ ಬಂಧನ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ
- ರಫಿ ಉದ್ದೀನ್,
ಗೌಸ್ ಚಿಕ್ಕಪ್ಪ.
ಪಾಕಿಸ್ತಾನದಲ್ಲಿ ಗೌಸ್ ತರಬೇತಿ
2006 ಮೇನಿಂದ 2007 ಜನವರಿವರೆಗೆ ಪಾಕಿಸ್ತಾನದಲ್ಲಿ ದಾರ್-ಇ-ಅಮರ್ (21 ದಿನಗಳ ಪ್ರಾಥಮಿಕ ತರಬೇತಿ)
ದಾರ್-ಇ-ಖಾಸ್ (ಶಸ್ತ್ರಾಸ್ತ್ರ, ಸ್ಫೋಟಕಗಳ ಬಳಕೆ, ದಾಳಿ ಮತ್ತು ಸೇನೆ ದಾಳಿಯನ್ನು ಎದುರಿಸುವುದು, ಅಡಗುದಾಣಗಳಲ್ಲಿ ಉಳಿದುಕೊಳ್ಳುವ ಕುರಿತು 4 ತಿಂಗಳ ತರಬೇತಿ)
ದಾರ್-ಇ-ಲಷ್ಕರ್ (ವೈರ್‌ಲೆಸ್ ಸಂಪರ್ಕ ತರಬೇತಿ)
ದಾರ್-ಇ-ರಿಬಾತ್ (ಪೊಲೀಸರ ಚಲನವಲನಗಳ ಮೇಲೆ ನಿಗಾ ವಹಿಸಲು ಮತ್ತು ಗುಪ್ತಚರ ಮಾಹಿತಿಯನ್ನು ಪಡೆಯಲು ಎರಡು ತಿಂಗಳ ತರಬೇತಿ)
ಟಿಎಸ್‌ಐ
ಚಿತ್ರಾ ಕರ್ಕೇರಾ
|