ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
 
ಪತ್ರ ಚರಿತ್ರೆ
ಗಾಂಧೀಜಿಗೆ ಬೋಸ್ ಬರೆದ ಪತ್ರ
 

ಸುಭಾಷ್‌ಚಂದ್ರ ಬೋಸ್ 1897ರಲ್ಲಿ ಒರಿಸ್ಸಾದ ಕಟಕ್‌ನಲ್ಲಿ ಜನಿಸಿದರು. 1925ರಲ್ಲಿ ಕೋಲ್ಕತ್ತಾದ ಮೇಯರ್ ಆಗಿದ್ದ ಸುಭಾಷ್‌ಚಂದ್ರ ಬೋಸ್ ಒಬ್ಬ ತೀವ್ರಗಾಮಿ ಸ್ವಾತಂತ್ಯ್ರ ಹೋರಾಟಗಾರ. ಆದರೆ ಮಹಾತ್ಮಾಗಾಂಧಿಯವರ ಅಹಿಂಸಾ ತತ್ವಗಳಿಗೂ ಸುಭಾಷ್‌ಚಂದ್ರ ಬೋಸ್ ಅವರ ತೀವ್ರಗಾಮಿ ಹೋರಾಟದ ಮನೋಭಾವಗಳಿಗೂ ಪರಸ್ಪರ ಹೊಂದಿಕೆಯಾಗುತ್ತಿರಲಿಲ್ಲ. 1938ರಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದರು. ಮಹಾತ್ಮಾ ಗಾಂಧಿಯವರ ತೀವ್ರ ವಿರೋಧದಿಂದಾಗಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುಭಾಷ್‌ಚಂದ್ರ ಬೋಸ್ 1939ರಲ್ಲಿ 'ಆಲ್ ಇಂಡಿಯ ಫಾರ್ವರ್ಡ್ ಬ್ಲಾಕ್' ರಚಿಸಿದರು. ನಂತರ 'ಆಜಾದ್ ಹಿಂದ್ ಫೌಜ್' ಸ್ಥಾಪಿಸಿ ಬ್ರಿಟಿಷರ ವಿರುದ್ಧ ಸಮರ ಸಾರಿದರು.

ಮಾರ್ಚ್ 31, 1939

ಪ್ರಿಯ ಮಹಾತ್ಮಾಜೀ,

ಪಂತ್ ನಿರ್ಣಯಗಳಿಗೆ ತಮ್ಮ ಪ್ರತಿಕ್ರಿಯೆ ಏನು ಎಂಬುದನ್ನು ತಿಳಿಸಿದರೆ ನಾನು ನಿಮಗೆ ಆಭಾರಿಯಾಗಿರುತ್ತೇನೆ. ವಿಷಯಗಳ ಬಗೆಗೆ ಪಕ್ಷಪಾತ ತೋರದೆ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ತಾವಿರುವಿರಿ. ಆದರೆ ತ್ರಿಪುರಿಯ ಸಂಪೂರ್ಣ ಕಥೆ ತಮಗೆ ತಿಳಿದಿರಬೇಕು. ಪಂತ್ ಅವರ ನಿರ್ಣಯಗಳನ್ನು ಬೆಂಬಲಿಸುವ ಪಂಗಡದ ಬಗ್ಗೆ ಏನು ಹೇಳೋಣ. ಅವರು ಪತ್ರಿಕೆಗಳನ್ನು ನೋಡಿ ತಮ್ಮನ್ನು ವಿಮರ್ಶಿಸುವ ವರ್ಗಕ್ಕೆ ಸೇರಿದವರು. ಹೋಗಲಿ ಬಿಡಿ. ತಮ್ಮನ್ನು ಭೇಟಿಯಾಗ ಬರುವವರು ಯಾರೇ ಇರಲಿ, ವಸ್ತು ವಿಷಯವನ್ನು ಅದರ ಮೌಲ್ಯಕ್ಕೆ ಅನುಗುಣವಾಗಿ ಇತ್ಯರ್ಥ ಮಾಡುವ ವಿಶಿಷ್ಟ ಸಾಮರ್ಥ್ಯ ತಮ್ಮಲ್ಲಿದೆ. ಪಂತ್ ನಿರ್ಣಯಗಳ ಬಗ್ಗೆ ನನ್ನ ಅಭಿಪ್ರಾಯವನ್ನು ತಾವು ಸುಲಭವಾಗಿ ಊಹಿಸಬಹುದು. ಇಲ್ಲಿ ನನ್ನ ವೈಯಕ್ತಿಕ ಭಾವನೆಗಳಿಗೆ ಪ್ರಾಶಸ್ತ್ಯ ನೀಡಬೇಕಾಗಿಲ್ಲ. ಸಮಾಜದ ಹಿತಾಸಕ್ತಿಗಳಿಗಾಗಿ ನಾವು ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗಿಡಬೇಕಾಗುತ್ತದೆ. ಸಂವಿಧಾನಾತ್ಮಕ ದೃಷ್ಟಿಯಿಂದ ಪಂತ್ ನಿರ್ಣಯಗಳನ್ನು ಯಾರು ಹೇಗೆ ಬೇಕಾದರೂ ಅವಲೋಕಿಸಲಿ, ಆದರೆ ಇದನ್ನು ಕಾಂಗ್ರೆಸ್ ಜಾರಿಗೆ ತಂದಿರುವುದರಿಂದ ನಾನು ಅದಕ್ಕೆ ಬದ್ಧನಾಗಿರಬೇಕು. ಆ ನಿರ್ಣಯಗಳ ಮೇಲೆ ನನಗೆ ಭರವಸೆ ಇಲ್ಲ ಎಂದು ನಾನು ರಾಜೀನಾಮೆ ನೀಡಬೇಕೆನಿಸುತ್ತಿದೆಯೇ? ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯ ನನಗೆ ಅವಶ್ಯಕ. ಈ ಬಾರಿ ವಸಂತದಿಂದ ಬೇಸಗೆಯವರೆಗೆ ಯುರೋಪ್ ಬಿಕ್ಕಟ್ಟು ಎದುರಿಸಲಿದೆ ಎಂದು ನಾನು ಹಲವು ತಿಂಗಳುಗಳಿಂದ ನನ್ನ ಗೆಳೆಯರ ಬಳಿ ಹೇಳುತ್ತಿದ್ದೇನೆ. ಅಂತರ್ ರಾಷ್ಟ್ರೀಯ ಹಾಗೂ ನಮ್ಮ ದೇಶದ ಪರಿಸ್ಥಿತಿಯ ಕುರಿತು ಅವಲೋಕಿಸಿದಾಗ 8 ತಿಂಗಳ ಹಿಂದೆಯೇ ನನಗೆ ಒಂದು ವಿಷಯ ಮನದಟ್ಟಾಗಿತ್ತು; ಪೂರ್ಣ ಸ್ವರಾಜ್ಯಕ್ಕೆ ಇದೇ ತಕ್ಕ ಸಂದರ್ಭ. 'ರಾಷ್ಟ್ರೀಯ ಬೇಡಿಕೆ'ಯನ್ನು ಅಂತಿಮ ನಿರ್ಧಾರವಾಗಿ ಬ್ರಿಟಿಷ್ ಸರ್ಕಾರದ ಮುಂದಿಡುವಲ್ಲಿ ನಾವು ಕಾಲಹರಣ ಮಾಡಬಾರದು. ಈ ನಿಟ್ಟಿನಲ್ಲಿ ತಾವು ಪ್ರವರ್ತನಾಶೀಲರಾಗಿ ಮುಂದಿನ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾದಲ್ಲಿ, ನಾವು ಖಂಡಿತವಾಗಿಯೂ ಪೂರ್ಣ ಸ್ವರಾಜ್ಯವನ್ನು ಪಡೆಯುತ್ತೇವೆ. ಹೋರಾಟ, ಸಮಸ್ಯೆಗಳಿಗೆ ಎಡೆ ಮಾಡಿಕೊಡದೆ ಅವರು ನಮ್ಮ ಬೇಡಿಕೆಗಳನ್ನು ಒಪ್ಪಬಹುದು ಅಥವಾ ಹೋರಾಟ ನಡೆಯಿತೆಂದಾದರೂ ಅದು ದೀರ್ಘಕಾಲದ ಹೋರಾಟವೇನೂ ಆಗಿರುವುದಿಲ್ಲ. ನನಗೆ ಈ ಬಗ್ಗೆ ಭರವಸೆ ಇದೆ. ಇದಕ್ಕಾಗಿ ಯಾವುದೇ ರೀತಿಯ ತ್ಯಾಗಕ್ಕೂ ನಾನು ಸಿದ್ಧ. ನನ್ನಿಂದ ಸಾಧ್ಯವಾಗುವಷ್ಟು ಸಹಕಾರವನ್ನು ನಾನು ಸಂತಸದಿಂದಲೇ ನೀಡುತ್ತೇನೆ. ಇನ್ನೊಬ್ಬ ಅಧ್ಯಕ್ಷನ ಮುಖಂಡತ್ವ ಅಥವಾ ಹೊಸ ಕಾರ್ಯಕಾರಿ ಸಮಿತಿಯಿಂದ ಸೂಕ್ತ ಹೋರಾಟ ಸಾಧ್ಯ ಎಂಬುದು ತಮ್ಮ ಅಭಿಪ್ರಾಯವಾದರೆ, ತಮ್ಮ ಇಚ್ಛೆಗನುಗುಣವಾಗಿ ನನ್ನ ಸ್ಥಾನದಿಂದ ಕೆಳಗಿಳಿಯಲೂ ನಾನು ಸಿದ್ಧ. ಈ ನಿರ್ಣಾಯಕ ಘಟ್ಟದಲ್ಲಿ ಕಾಂಗ್ರೆಸ್ ಹಾಗೂ ತಮ್ಮ ಏಕಮಾತ್ರ ಗುರಿ ಪೂರ್ಣ ಸ್ವರಾಜ್ಯವಾಗಿರಬೇಕು ಎಂಬುದು ಮಾತ್ರ ನನ್ನ ಆಶಯ. ನನ್ನ ಇಲ್ಲದಿರುವಿಕೆ ಸ್ವರಾಜ್ಯಕ್ಕೆ ಸಹಕಾರಿ ಎಂದಾದರೆ ಚಿತ್ರಣದಿಂದಲೇ ಸಂಪೂರ್ಣ ಮಾಯವಾಗಲೂ ನಾನು ಸಿದ್ಧ. ಇವನ್ನೆಲ್ಲಾ ಮಾಡುವಷ್ಟು ಗಾಢವಾಗಿ ನಾನು ನನ್ನ ದೇಶವನ್ನು ಪ್ರೀತಿಸುತ್ತಿದ್ದೇನೆ ಎಂಬ ನಂಬಿಕೆ ನನ್ನದು. ಕ್ಷಮೆ ಇರಲಿ, ಇತ್ತೀಚಿನ ದಿನಗಳಲ್ಲಿ ನೀವು ದೇಶದ ಜನತೆಯ ಹೋರಾಟವನ್ನು ಆಯೋಜಿಸುತ್ತಿರುವ ರೀತಿ ನನಗೆ ಹಿಡಿಸುತ್ತಿಲ್ಲ. ಪತ್ರ ಬಹಳ ಉದ್ದವಾಯಿತು. ತಿಳಿಗೇಡಿತನದಿಂದ ಏನಾದರೂ ಬರೆದಿದ್ದಲ್ಲಿ ಅದನ್ನು ತಾವು ಕ್ಷಮಿಸುವಿರೆಂಬ ಭರವಸೆ ನನಗಿದೆ. ನೇರ ನಡವಳಿಕೆಯ ಜನರನ್ನು ಕಂಡರೆ ತಮಗೆ ಇಷ್ಟ ಎಂಬುದನ್ನೂ ನಾನು ಬಲ್ಲೆ. ಅದೇ ನನ್ನನ್ನು ಈ ಪತ್ರ ಬರೆಯುವಂತೆ ಪ್ರೇರೇಪಿಸಿತು. ಪ್ರಣಾಮಗಳೊಂದಿಗೆ.

ಪ್ರಣಾಮಗಳೊಂದಿಗೆ. ತಮ್ಮ ಪ್ರೀತಿಯ, ಸುಭಾಷ್

 

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .