ತಿಮಿಂಗಿಲ: ಬೇಟೆ
ಆಸ್ಟ್ರೇಲಿಯ- ಜಪಾನ್ ರಾಜತಾಂತ್ರಿಕ ಬಿಕ್ಕಟ್ಟು
ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ತಿಮಿಂಗಿಲ ಬೇಟೆಗೆ ಆಸ್ಟ್ರೇಲಿಯ ವಿರೋಧ
ಶತಮಾನಗಳ ಇತಿಹಾಸವಿರುವ ಜಪಾನ್‌ನ ತಿಮಿಂಗಿಲ ಬೇಟೆಯ ಕುರಿತ ಆಸ್ಟ್ರೇಲಿಯದ ಅಸಮಾಧಾನ ಹೊಸ ತಿರುವು ಪಡೆದುಕೊಂಡಿದೆ. ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ನಡೆದ ಇತ್ತೀಚೆಗಿನ ಹೊಸ ಬೆಳವಣಿಗೆಗಳು ಆಸ್ಟ್ರೇಲಿಯ ಮತ್ತು ಜಪಾನ್ ನಡುವೆ ರಾಜ ತಾಂತ್ರಿಕ ಬಿಕ್ಕಟ್ಟು ಸೃಷ್ಟಿಸುವ ಹಂತಕ್ಕೆ ತಲುಪಿದೆ. ಜಪಾನ್ ನಡೆಸುತ್ತಿರುವ ತಿಮಿಂಗಿಲ ಬೇಟೆಗೆ ಆಸ್ಟ್ರೇಲಿಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಒಂದು ವರ್ಷಕ್ಕೆ 1,000 ತಿಮಿಂಗಿಲಗಳನ್ನು ಕೊಲ್ಲುವ ತನ್ನ ಪರಂಪರೆಯನ್ನು ಜಪಾನ್ ಸಮರ್ಥಿಸಿಕೊಂಡಿದೆ. ತಮ್ಮ ಸಂಶೋಧನೆಗೆ ಈ ತಿಮಿಂಗಿಲಗಳು ಅತ್ಯಗತ್ಯ ಎನ್ನುವುದು ಜಪಾನ್ ವಾದ. ಈ ಕಾರ್ಯಕ್ರಮ 'ಅಂತರ್ ರಾಷ್ಟ್ರೀಯ ತಿಮಿಂಗಿಲ ಬೇಟೆ ಆಯೋಗ'ದ ನಿಯಮಾವಳಿಗಳ ಅಡಿ ಬರುತ್ತದೆ. ಈ ನಿಯಮಾವಳಿಗಳು ವೈಜ್ಞಾನಿಕ ಅಧ್ಯಯನಕ್ಕಾಗಿ ತಿಮಿಂಗಿಲಗಳ ಹತ್ಯೆಗೆ ಸಮ್ಮತಿ ನೀಡುತ್ತವೆ. ಆದರೆ ಜಪಾನ್‌ನಲ್ಲಿ ವಾಣಿಜ್ಯೋದ್ದೇಶಕ್ಕಾಗಿ ತಿಮಿಂಗಲಗಳ ಹತ್ಯೆ ಮಾಡಲಾಗುತ್ತದೆ ಎಂದು ಟೀಕಾಕಾರರು ಆರೋಪ ಹೊರಿಸುತ್ತಾರೆ. ಇಂತಹ ಹತ್ಯೆಗಳನ್ನು ಆಯೋಗ 1986ರಲ್ಲೇ ನಿಷೇಧಿಸಿದೆ.
ಇದೇ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಯಸುವೋ ಫುಕುಡಾ ತಿಮಿಂಗಿಲ ಬೇಟೆ ವಿವಾದದ ಬಗ್ಗೆ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳಲು ಕೇಳಿಕೊಂಡಿದ್ದಾರೆ. ಈ ವಿವಾದ ಎರಡು ದೇಶಗಳ ಸಂಬಂಧದಲ್ಲಿ ಬಿರುಕು ಮೂಡಿಸದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ನಡುವೆ ಆಸ್ಟ್ರೇಲಿಯ ಕಸ್ಟಮ್ಸ್ (ಸುಂಕದ ಇಲಾಖೆ) ಹಡಗು 'ಓಶನಿಕ್ ವೈಕಿಂಗ್' ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಜಪಾನ್ ದೇಶದ ತಿಮಿಂಗಿಲ ಬೇಟೆ ಮೇಲೆ ನಿಗಾ ವಹಿಸಿದೆ. ಜಪಾನ್ ಭೇಟಿಯಲ್ಲಿರುವ ಆಸ್ಟ್ರೇಲಿಯದ ವಿದೇಶಾಂಗ ಸಚಿವ ಸ್ಟೀಫನ್ ಸ್ಮಿತ್ ಅವರ ಜೊತೆ ಫುಕುಡಾ ತಿಮಿಂಗಿಲ ಬೇಟೆ ವಿವಾದದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆಸ್ಟ್ರೇಲಿಯ ಸರ್ಕಾರ ಒಂದು ಮೀನುಗಾರಿಕಾ ಕಾವಲು ಹಡಗನ್ನು ದಕ್ಷಿಣ ಪೆಸಿಫಿಕ್ ಸಾಗರಕ್ಕೆ ರವಾನಿಸಿದೆ ಮತ್ತು ಜಪಾನಿ ತಿಮಿಂಗಿಲ ಬೇಟೆಗಾರರನ್ನು ಪತ್ತೆ ಹಚ್ಚಲು ಒಂದು ವಿಮಾನವನ್ನೂ ನಿಯೋಜಿಸಿದೆ. ಆ ಮೂಲಕ ಜಪಾನ್‌ನ ತಿಮಿಂಗಿಲ ಬೇಟೆ ಕಾರ್ಯಕ್ರಮದ ವಿವರಗಳನ್ನು ಅಧಿಕೃತವಾಗಿ ಅಂತರ್ ರಾಷ್ಟ್ರೀಯ ಸಮುದಾಯದ ಮುಂದೆ ಪ್ರಶ್ನಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದೇ ಸಂದರ್ಭದಲ್ಲಿ, 'ದ ಸೀ ಶೆಪ್‌ರ್ಡ್ ಕನ್ಸರ್ವೇಷನ್ ಸೊಸೈಟಿ' ಇತ್ತೀಚೆಗೆ ಜಪಾನ್ ಕ್ರಮವನ್ನು ವಿರೋಧಿಸಿ ದೊಡ್ಡ ಸುದ್ದಿ ಮಾಡಿತ್ತು. ತಿಮಿಂಗಿಲ ಬೇಟೆಗೆ ಹೊರಡುವ ಜಪಾನ್ ದೇಶದ ಹಡಗಿನಲ್ಲಿ ಅನಧಿಕೃತವಾಗಿ ಸವಾರಿ ಮಾಡಿದ ಆರೋಪ ಹೊರಿಸಿ 'ಸೀ ಶೆಪರ್ಡ್'ನ ಇಬ್ಬರು ಸದಸ್ಯರನ್ನು ಜಪಾನ್ ಬಂಧಿಸಿತ್ತು. ಈ ಬಂಧನದ ವಿರುದ್ಧ 'ಸೀ ಶೆಪರ್ಡ್'ನ ಹಡಗು 'ದ ಸ್ಟೀವ್ ಇರ್ವಿನ್'ನ ಸಿಬ್ಬಂದಿಗಳು 10 ದಿನಗಳ ತೀವ್ರ ಪ್ರತಿಭಟನಾ ಅಭಿಯಾನ ನಡೆಸಿದ್ದರು. 'ಸ್ಟೀವ್ ಇರ್ವಿನ್'ನ ಕ್ಯಾಪ್ಟನ್ ಪೌಲ್ ವಾಸ್ಟನ್ ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ. ಮತ್ತೊಮ್ಮೆ ದಕ್ಷಿಣ ಪೆಸಿಫಿಕ್ ಸಾಗರಕ್ಕೆ ವಾಪಾಸಾದಾಗ ಮತ್ತೆ ತಮ್ಮ ಹಡಗಿನ ಸಿಬ್ಬಂದಿಗಳನ್ನು ಜಪಾನಿ ತಿಮಿಂಗಿಲ ಬೇಟೆ ಹಡಗಿನಲ್ಲಿ ಕಳುಹಿಸಲು ಹೇಸುವುದಿಲ್ಲ ಎಂದು ವಾಸ್ಟನ್ ಹೇಳಿದ್ದಾರೆ.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
ಆಫ್ರಿಕಾ: ಬಿಕ್ಕಟ್ಟು
ಕೀನ್ಯಾದಲ್ಲಿ ಮುಂದುವರಿದ ಹಿಂಸಾಕಾಂಡ
ಜನಾಂಗೀಯ ಗಲಭೆಯ ದಾವಾನಲದಲ್ಲಿ ನಲುಗುತ್ತಿರುವ ಆಫ್ರಿಕಾ
ಕೀನ್ಯಾದಲ್ಲಿ ತಾರಕಕ್ಕೇರಿರುವ ಜನಾಂಗೀಯ ವೈಷಮ್ಯದ ಕಾವು ಆಫ್ರಿಕಾದ ಸದ್ಯದ ಸ್ಥಿತಿಗೆ ಕನ್ನಡಿ ಹಿಡಿದಿದೆ. ಸಂಪೂರ್ಣ ಆಫ್ರಿಕಾ ಜನಾಂಗೀಯ ಗಲಭೆಗಳೆಂಬ ಸಂಕಷ್ಟದಲ್ಲಿ ನಲುಗುತ್ತಿದೆ. ಇಂದಿನ ಈ ಮಹಾಮಾರಿಗೆ ಪರಿಹಾರವೇ ಇಲ್ಲವೇನೋ ಎಂಬ ಸ್ಥಿತಿ ಏರ್ಪಟ್ಟಿದೆ. ಈವರೆಗೆ ಆಫ್ರಿಕಾ ಖಂಡದ ಸುಸ್ಥಿರ ದೇಶ ಎಂಬ ಹಿರಿಮೆ ಪಡೆದಿದ್ದ ಕೀನ್ಯಾದಲ್ಲಿನ ಸಂಘರ್ಷ ಗಮನಿಸಿದಲ್ಲಿ, ಇಲ್ಲಿನ ದೇಶಗಳಲ್ಲಿ ಯಾವ ಕ್ಷಣದಲ್ಲಿ ಮತ್ತು ಹೇಗೆ ಬೇಕಾದರೂ ಹಿಂಸೆ ಕುಡಿಯೊಡೆಯಬಹುದು ಎನ್ನುವುದು ನಿಚ್ಚಳ. ಈಗಿನ ಹಿಂಸಾಕಾಂಡಕ್ಕೆ ಮೂಲ 2007ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆ. ಈ ಚುನಾವಣೆಯಲ್ಲಿ ಅವ್ಯವಹಾರ ನಡೆಸಿ ಮತ್ತೆ ಆರಿಸಿ ಬಂದಿದ್ದಾರೆ ಎನ್ನಲಾದ ಮ್ವಾಯ್ ಕಿಬಾಕಿ ಅವರ ವಿವಾದಿತ ವಿಜಯದ ಬಳಿಕ ಉಲ್ಬಣಿಸಿದ ಹಿಂಸಾಚಾರದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರೆ ಹಲವರು ತಮ್ಮ ಜೀವನೋಪಾಯಗಳಿಂದ ದೂರವಾಗಿ ಕಂಗಾಲಾಗಿದ್ದಾರೆ. ದೇಶದ ಪ್ರಮುಖ ವಿರೋಧ ಪಕ್ಷ 'ಆರೆಂಜ್ ಡೆಮಾಕ್ರೆಟಿಕ್ ಮೂವ್‌ಮೆಂಟ್'ನ ಮುಖ್ಯಸ್ಥ ರೈಲಾ ಒಡಿಂಗಾ ಅವರು ತಮ್ಮ ಸೋಲಿನಲ್ಲಿ ಅವ್ಯವಹಾರ ನಡೆದಿದೆ ಎನ್ನುವುದನ್ನು ಸಾಬೀತು ಮಾಡುವ ತವಕದಲ್ಲಿದ್ದಾರೆ. ಚುನಾವಣೆಯನ್ನು ತಿರುಚಿ ಅಧಿಕಾರಕ್ಕೇರಿದ ಕಿಬಾಕಿ ಮೇಲಿನ ಪ್ರಕೋಪವನ್ನು ತೀರಿಸಿಕೊಳ್ಳಲು ವಿರೋಧ ಪಕ್ಷ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎನ್ನುವುದು ಒಂದು ವಾದ. ಈ ಎಲ್ಲಾ ಹಿಂಸಾಚಾರವನ್ನು ಸರ್ಕಾರವೇ ಪ್ರಾಯೋಜಿಸುತ್ತಿದೆ ಎನ್ನುವುದು ವಿರೋಧ ಪಕ್ಷದ ಆರೋಪ. ಈ ಗೊಂದಲಗಳ ನಡುವೆ ದೇಶ ನಿಷ್ಕ್ರಿಯವಾಗಿದೆ. ಅಧ್ಯಕ್ಷ ಸ್ಥಾನದ ಹೋರಾಟದ ನೆಪದಲ್ಲಿ ಜನಾಂಗೀಯ ವೈಷಮ್ಯ ಮತ್ತು ಒಳಗುದಿ ವಿಜೃಂಭಿಸುತ್ತಿರುವುದನ್ನು ಇಲ್ಲಿ ಕಾಣಬಹುದು. ದೇಶದ ಎಲ್ಲಾ ರಾಜಕೀಯ ಪಕ್ಷಗಳೂ ಜನಾಂಗೀಯ ಆಧಾರದಲ್ಲಿ ಧ್ರುವೀಕರಣಗೊಂಡಿವೆ. ಕಿಕುಯು, ಲುಹ್ಯಾ, ಲ್ಯುವೋ, ಕಲೆಂಜಿನ್, ಕಾಂಬಾ, ಕಿಸಿ ಮತ್ತು ಮೆನು ಕೀನ್ಯಾದ ಪ್ರಮುಖ ಜನಾಂಗಗಳು. ದೇಶದ ಬಹುಸಂಖ್ಯಾತರ ಜನಾಂಗ ಕಿಕುಯು ಅಧ್ಯಕ್ಷ ಮ್ವಾಯ್ ಕಿಬಾಕಿ ಅವರನ್ನು ಬೆಂಬಲಿಸಿದರೆ, ಲ್ಯುವೋ ಜನಾಂಗದವರು ಒಡಿಂಗಾ ಅವರನ್ನು ಬೆಂಬಲಿಸುತ್ತಾರೆ. ಕಿಬಾಕಿ ಹಾಗೂ ಒಡಿಂಗಾ ನಡುವೆ ಶಾಂತಿ ಮಾತುಕತೆಯಲ್ಲಿ ಮಧ್ಯವರ್ತಿಯಾಗಲು ವಿಶ್ವ ಸಂಸ್ಥೆಯ ಮಾಜಿ ಕಾರ್ಯದರ್ಶಿ ಪ್ರಯತ್ನಿಸಿದ್ದರು. ಆದರೆ ಇದರಿಂದ ಜನಾಂಗೀಯ ಹಿಂಸಾಚಾರ ಇನ್ನೂ ತಾರಕಕ್ಕೇರಿತು.
ನಿರುದ್ಯೋಗ, ಭ್ರಷ್ಟಾಚಾರ ಮತ್ತು ಮೂಲ ಸೌಕರ್ಯಗಳ ಕೊರತೆ, ಎಚ್‌ಐವಿ ಪೀಡಿತರ ಸಂಖ್ಯೆ ಅತೀ ಹೆಚ್ಚಾಗಿರುವ ದೇಶವೊಂದರಲ್ಲಿ ಜನರು ಜನಾಂಗೀಯ ಆಧಾರದಲ್ಲಿ ಧ್ರುವೀಕರಣಗೊಂಡು ಪರಸ್ಪರ ಕಾದಾಡುತ್ತಿರುವುದು ವಿಪರ್ಯಾಸವೇ ಸರಿ. ರ್‍ವಾಂಡಾ, ಕಾಂಗೋ, ಕೀನ್ಯಾ, ನೈಜೀರಿಯಾ, ಸೂಡಾನ್, ಸಿಯೆರಾ ಲಿಯೋನ್ ಅಥವಾ ಚಡ್... ಹೀಗೆ ಆಫ್ರಿಕಾದ ಎಲ್ಲಾ ದೇಶಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಹಿಂಸಾಚಾರ ನಿಲ್ಲುವ ಸೂಚನೆಯೇ ಇಲ್ಲ. ಈ ಅಪಾಯಕಾರಿ ಬೆಳವಣಿಗೆಯನ್ನು ಶಾಂತಿಯುತವಾಗಿ ಪರಿಹರಿಸುವ ಜವಾಬ್ದಾರಿ ಕೀನ್ಯಾದ ಮುಖಂಡರಾದ ಅಧ್ಯಕ್ಷ ಮ್ವಾಯ್ ಕಿಬಾಕಿ ಹಾಗೂ ವಿರೋಧ ಪಕ್ಷ ನಾಯಕ ರೈಲಾ ಒಡಿಂಗಾ ಅವರದ್ದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬನ್ ಕಿ ಮೂನ್ ಇತ್ತೀಚೆಗೆ ಅಡ್ಡಿಸ್ ಅಬಾಬದಲ್ಲಿ ನಡೆದ ಆಫ್ರಿಕಾ ಒಕ್ಕೂಟದ ಶೃಂಗಸಭೆಯಲ್ಲಿ ಹೇಳಿದ್ದಾರೆ.
ಟಿಎಸ್‌ಐ
ಪಥಿಕೃತ್ ಪಾಯ್ನೆ
ತಾಲಿಬಾನ್: ಸಮಸ್ಯೆ
ನ್ಯಾಟೋ ಒತ್ತಾಯಕ್ಕೆ ಮಣಿದ ಜರ್ಮನಿ
ಅಫ್ಘಾನಿಸ್ತಾನದ ಪುನರ್ ನಿರ್ಮಾಣಕ್ಕಾಗಿ ಜರ್ಮನಿಯ ಹೊಸ ಹೆಜ್ಜೆ
ಜರ್ಮನಿ ಕೊನೆಗೂ ಅಂತರ್ ರಾಷ್ಟ್ರೀಯ ಒತ್ತಡಕ್ಕೆ ತಲೆ ಬಾಗಿದೆ. ಅಫ್ಘಾನಿಸ್ತಾನಕ್ಕೆ ತನ್ನ ಸೇನಾ ಪಡೆ ಕಳುಹಿಸಲು ತೀರ್ಮಾನಿಸಿದೆ. ಅಫ್ಘಾನಿಸ್ತಾನದಲ್ಲಿ ಕ್ಷಿಪ್ರ- ಪ್ರತಿಕ್ರಿಯೆ ಪಡೆಯ ಅಂಗವಾಗಿ 250 ಸೈನಿಕರ ತಂಡವೊಂದನ್ನು ನಿಯೋಜಿಸಲು ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಎರಡನೇ ಬಾರಿ ಜರ್ಮನಿ ಸರ್ಕಾರವನ್ನು ಕೋರಿಕೊಂಡಿತ್ತು. ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯದಲ್ಲಿ ನಾರ್ವೆ ದೇಶದ 350 ಸೈನಿಕರ ಬಲಿಷ್ಠ ಪಡೆಯ ಬದಲಾಗಿ ಜರ್ಮನಿ ಸೈನಿಕರನ್ನು ನಿಯೋಜಿಸಲಾಗುವುದು. ಹಾಗಿದ್ದಾಗ್ಯೂ ನ್ಯಾಟೋ ಪಡೆಯ ಸವಾಲುಗಳು ಕಡಿಮೆಯಾಗುವ ಸೂಚನೆಗಳೇನೂ ಕಾಣಿಸುತ್ತಿಲ್ಲ.
ಇತ್ತ ನ್ಯಾಟೋ ಪಡೆ ಜರ್ಮನ್ ರಕ್ಷಣಾ ಸಚಿವಾಲಯಕ್ಕೆ ಸೇನಾ ಸಹಕಾರಕ್ಕಾಗಿ ಅಧಿಕೃತ ಕೋರಿಕೆ ಸಲ್ಲಿಸಿದ ಮರುದಿನವೇ, ಅತ್ತ ಮಾಜಿ ನ್ಯಾಟೋ ಮುಖ್ಯಸ್ಥ ಹೆರಾಲ್ಡ್ ಕುಜತ್ ಈ ಬಗ್ಗೆ ಕೊಂಕು ನುಡಿದಿದ್ದರು. ಜರ್ಮನ್ ಸೈನಿಕರು ತಾಲಿಬಾನ್ ಹಾಗೂ ಆಲ್‌ಖೈದಾ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಪಡೆದಿಲ್ಲ ಎನ್ನುವುದು ಕುಜತ್ ಅಭಿಪ್ರಾಯ. ಕುಜತ್ ಅವರು ಈ ಹಿಂದೆ ನ್ಯಾಟೋ ಸೇನಾ ಸಮಿತಿಯ ಮುಖ್ಯಸ್ಥರಾಗಿದ್ದರು. ಜರ್ಮನಿ ಸೇನೆಯ ಬಳಿ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆಗೆ ಅಗತ್ಯವಾದ ತಂತ್ರಜ್ಞಾನಗಳು ಇರುವ ಬಗ್ಗೆ ಕುಜತ್ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಜರ್ಮನ್ ಚಟುವಟಿಕೆಗಳ ಬಗ್ಗೆ ವಿವರ ನೀಡಿದ ಜರ್ಮನಿ ರಕ್ಷಣಾ ಸಚಿವಾಲಯ, ಸೇನೆ ನಿಯೋಜಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದನ್ನು ದೃಢಪಡಿಸಿದೆ. ಇದೇ ಸಂದರ್ಭದಲ್ಲಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಜರ್ಮನ್ ರಕ್ಷಣಾ ಸಚಿವ ಫ್ರಾಂಜ್ ಜೋಸೆಫ್ ಜುಂಗ್ ಅವರು ಅಫ್ಘನ್ ಪ್ರಧಾನಿ ಹಮೀದ್ ಕರ್ಜಾಯಿ ಜೊತೆ ಸಭೆ ನಡೆಸಿದ್ದಾರೆ. ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ ಜರ್ಮನ್ ಸೇನಾ ನಿಯೋಜನೆಗೆ ಬಹುತೇಕ ಜರ್ಮನ್ನರು ಬೆಂಬಲ ವ್ಯಕ್ತ ಪಡಿಸಿದ್ದಾರೆ. ಅಫ್ಘಾನಿಸ್ತಾನದ 'ರಾಷ್ಟ್ರೀಯ ಭದ್ರತಾ ಪಡೆ'ಗಳಿಗೆ ತರಬೇತಿ ನೀಡುವ ಮೂಲಕ ಬೆಂಬಲವನ್ನು ಮತ್ತಷ್ಟು ವಿಸ್ತರಿಸಲಾಗುವುದು" ಎಂದು ತಿಳಿಸಿದ್ದಾರೆ. ನ್ಯಾಟೋ ನೇತೃತ್ವದಲ್ಲಿ ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯಗಳಲ್ಲಿ ಕಾರ್ಯಾಚರಣೆಯಲ್ಲಿ 3,100ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸುವ ಜೊತೆಗೆ ಅಫ್ಘನ್ ಪೊಲೀಸರಿಗೆ ತರಬೇತಿ ನೀಡುವಲ್ಲಿಯೂ ಜರ್ಮನಿ ಮಹತ್ವದ ಪಾತ್ರ ವಹಿಸಲಿದೆ.
ಹಾಗಿದ್ದಾಗ್ಯೂ ತಜ್ಞರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ದಕ್ಷಿಣಾತ್ಯ ಪ್ರದೇಶದಲ್ಲಿ ಅಮೆರಿಕದ ಬೀಭತ್ಸ ಕಾರ್ಯಾಚರಣೆ ಬಗ್ಗೆ ಜರ್ಮನಿ ಹಿಂದಿನಿಂದಲೇ ಟೀಕಿಸುತ್ತಲೇ ಬಂದಿದೆ. ನ್ಯಾಟೋ ನೇತೃತ್ವದಲ್ಲಿ ಪುನಶ್ಚೇತನ ಮತ್ತು ತರಬೇತಿ ನೀಡುವ ತನ್ನ ಎರಡೂ ಉದ್ದೇಶಗಳನ್ನು ವಿಭಿನ್ನವಾಗಿ ಸಾಧಿಸುವ ಗುರಿ ಜರ್ಮನಿಗಿದೆ ಎಂದು ಮ್ಯುನಿಚ್‌ನಿಂದ ಟಿಎಸ್‌ಐ ಜೊತೆ ಮಾತನಾಡಿದ ಬರ್ಲಿನ್‌ನ 'ಜರ್ಮನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಷನಲ್ ಆಂಡ್ ಸೆಕ್ಯೂರಿಟಿ ಅಫೇರ್‍ಸ್'ನ ಅಫ್ಘಾನಿಸ್ತಾನ ತಜ್ಞ ಸಿತಾ ಮಾಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಮೊದಲು, ಉತ್ತರ ಪ್ರಾಂತ್ಯಗಳಿಂದ ತಾಲಿಬಾನ್ ಉಗ್ರರು ಹೆಚ್ಚು ಕ್ರಿಯಾಶೀಲರಾಗಿರುವ ಯುದ್ಧ ಪೀಡಿತ ದಕ್ಷಿಣ ಪ್ರಾಂತ್ಯಕ್ಕೆ ತಮ್ಮ ಪಡೆ ವರ್ಗಾಯಿಸುವುದಕ್ಕೆ ಜರ್ಮನಿ ವಿರೋಧ ವ್ಯಕ್ತಪಡಿಸಿತ್ತು. ಪಾಶ್ಚಾತ್ಯ ಮೈತ್ರಿ ಕೂಟಗಳ ಸುಮಾರು 37,000 ಸೈನಿಕರು ಅಫ್ಘಾನಿಸ್ತಾನದಲ್ಲಿ ಯುದ್ಧನಿರತರಾಗಿದ್ದಾರೆ. ಆದರೆ ತಾಲಿಬಾನ್ ಉಗ್ರರನ್ನು ಸಮರ್ಥವಾಗಿ ಎದುರಿಸಲು 7,500 ಹೆಚ್ಚುವರಿ ಸೈನಿಕರ ಅಗತ್ಯವಿದೆ ಎಂದು ನ್ಯಾಟೋ ಸೇನಾ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಅಫ್ಘಾನಿಸ್ತಾನ ಸೇನೆಯಲ್ಲಿ 58,000 ಸೈನಿಕರಿದ್ದಾರೆ ಮತ್ತು ಅದು ಒಟ್ಟು 70,000 ಸೈನಿಕರ ಗುರಿ ಹೊಂದಿದೆ. 2001ರಲ್ಲಿ ತಾಲಿಬಾನ್ ಪ್ರಭುತ್ವ ನಾಶವಾದ ಮೇಲೆ ಅಫ್ಘಾನಿಸ್ತಾನದ ಪುನರ್ ನಿರ್ಮಾಣಕ್ಕಾಗಿ ಜರ್ಮನಿ ಸುಮಾರು 800 ದಶಲಕ್ಷ ಯೂರೋಗಳನ್ನು ಕೊಡುಗೆಯಾಗಿ ನೀಡಿತ್ತು.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ