ಸ್ವಾತಂತ್ರ್ಯ ಸಿಕ್ಕು 60 ವರ್ಷಗಳ ನಂತರವೂ ದೇಶದಲ್ಲಿ ಭಾರತೀಯರೇ ಪರಕೀಯರು!!
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್
ಮಲೇಷ್ಯಾದಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆದಾಗ, ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರತೀಯ ಕಾರ್ಮಿಕರನ್ನು ಆ ದೇಶದ ಜನರು ಕೀಳಾಗಿ ಕಂಡಾಗ, ಯುರೋಪ್‌ನಲ್ಲಿ ನೆಲೆ ನಿಂತಿರುವ ಭಾರತ ಮೂಲದ ಪ್ರಜೆಗಳು ವಿವಿಧ ರೀತಿಯಲ್ಲಿ ಜನಾಂಗೀಯ ನಿಂದನೆಗೆ ಒಳಗಾದಾಗ, ಅಷ್ಟೇ ಏಕೆ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯದಲ್ಲಿ ಜನಾಂಗೀಯ ನಿಂದನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ಈ ನೆಲದಲ್ಲಿ ಪ್ರತಿಭಟನೆಯ ಅಲೆಯೇಳುತ್ತದೆ. ಭಾರತೀಯತೆ ಮೊಳಗುತ್ತದೆ. ಅಂತಹ ಅತಿಯಾದ ಪ್ರತಿಕ್ರಿಯೆ ಏಕೆ ಉದ್ಭವಿಸಿಬಿಡುತ್ತದೆ ಎಂಬ ವಿಷಯ ನನಗೆ ಇದುವರೆಗೆ ಸ್ಪಷ್ಟವಾಗಿ ಅರ್ಥವಾಗಿಲ್ಲ. ಏಕೆಂದರೆ ಭಾರತದಲ್ಲಿಯೇ ಒಂದು ಪ್ರದೇಶದ ಜನರನ್ನು ಮತ್ತೊಂದು ಪ್ರದೇಶದವರು ಹೀನಾಯವಾಗಿ ನಡೆಸಿಕೊಳ್ಳುವುದನ್ನು ನಾವು ಪದೇ, ಪದೇ ನೋಡುತ್ತಲೇ ಇರುತ್ತೇವೆ. ಬಿಹಾರ, ಉತ್ತರ ಪ್ರದೇಶ ಮತ್ತು ದೇಶದ ಈಶಾನ್ಯ ಭಾಗದ ನಮ್ಮದೇ ಜನರನ್ನು ನಾವು ಪದೇ, ಪದೇ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯ ಹಾಗೂ ನಮ್ಮ ದ್ವಂದ್ವ ನಿಲುವಿನ ಪ್ರತೀಕ. ಮುಂಬೈನಲ್ಲಿ ಈಗ ನಡೆಯುತ್ತಿರುವ ಇಂತಹ ಒಂದು ಘಟನೆಯನ್ನು ಅವಲೋಕಿಸಿದರೆ ಈ ದೇಶದಲ್ಲಿ ಭಾರತೀಯರೇ ಪರಕೀಯರಾಗುತ್ತಿದ್ದಾರೆಯೇ? ಎಂಬ ಅನುಮಾನ ಹುಟ್ಟಿಕೊಳ್ಳದೇ ಇರುವುದಿಲ್ಲ. ನಿಜ ಹೇಳಬೇಕೆಂದರೆ ಭಾರತೀಯರನ್ನೇ ಪರಕೀಯರನ್ನಾಗಿ ಮಾಡುವ ಪ್ರಕ್ರಿಯೆ ಮುಂಬೈನಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿಯಲ್ಲ. ಐದು ವರ್ಷಗಳ ಹಿಂದೆ ರೈಲ್ವೆ ಇಲಾಖೆಯ ಪರೀಕ್ಷೆಗೆಂದು ಮುಂಬೈಗೆ ಬಂದಿದ್ದ ಬಿಹಾರ ಮೂಲದ ಅಭ್ಯರ್ಥಿಗಳ ಮೇಲೆ ಅಕ್ಷರಶಃ ದೈಹಿಕ ಹಲ್ಲೆ ಮಾಡಿ, ಅವರನ್ನು ಮತ್ತೆ ರೈಲಿಗೆ ತುಂಬಿ ಸ್ವರಾಜ್ಯಕ್ಕೆ ಅಟ್ಟಲಾಗಿತ್ತು. ಆಗ ಕೂಡ ಮುಂಬೈನ ಕೆಲವರಿಗೆ ಬಿಹಾರದ ನಮ್ಮವರೇ ಪರಕೀಯರಾಗಿ ಕಂಡು ಬಂದರು. ಇಂತಹುದೇ ಒಂದು ಪ್ರಕರಣ ಅಸ್ಸಾಂನಲ್ಲಿ ಐದು ವರ್ಷಗಳ ಹಿಂದೆ ನಡೆಯಿತು. ಆ ಸಂದರ್ಭದಲ್ಲಿ ಸುಮಾರು ೩೦ ಬಿಹಾರಿಗಳನ್ನು ಹತ್ಯೆ ಮಾಡಲಾಯಿತು. ಇಂತಹ ಅಮಾನವೀಯ ಪ್ರಕರಣಗಳು ಕರ್ನಾಟಕ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳಲ್ಲಿ ಕೂಡ ಪದೇ, ಪದೇ ನಡೆದಿವೆ. ಇನ್ನು ದೇಶದ ರಾಜಧಾನಿ ನವದೆಹಲಿಯಲ್ಲಿ ಈಶಾನ್ಯ ಭಾರತದ ಮಹಿಳೆಯರನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವ ಅಂಶ ನಿಗೂಢವಾಗೇನೂ ಉಳಿದಿಲ್ಲ!!
ದೇಶದ ಗಡಿಯೊಳಗೇ ಈ ರೀತಿಯ ಅಸಹನೆ ತಾಂಡವವಾಡುತ್ತಿರುವುದಕ್ಕೆ ಪ್ರಮುಖ ಕಾರಣವೇನೆಂದು ಹುಡುಕಿಕೊಂಡು ಹೋದರೆ, ನಮ್ಮ ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿ ಹಾಕಬೇಕಾಗುತ್ತದೆ. ಸತ್ಯಾಂಶವೇನೆಂದರೆ ಕಳೆದ ಅರವತ್ತು ವರ್ಷಗಳ ಅವಧಿಯಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತು ನೇತಾರರು ನಿರಂತರವಾಗಿ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ದೇಶವನ್ನು ಕೊಂಡೊಯ್ಯುವಲ್ಲಿ ಸಫಲರಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ನಮ್ಮ ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನಲ್ಲದೇ ಬೇರೆ ಯಾರನ್ನೂ ದೂಷಿಸಲು ಸಾಧ್ಯವಾಗುವುದಿಲ್ಲ. ಸ್ವಾತಂತ್ರ್ಯಾನಂತರ ಬಹುತೇಕ ವರ್ಷಗಳ ಕಾಲ ಅಧಿಕಾರದ ಗದ್ದುಗೆಗೇರಿ ಕುಳಿತಿದ್ದ ನಮ್ಮ ರಾಷ್ಟ್ರೀಯ ರಾಜಕೀಯ ಪಕ್ಷಗಳು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಮಟ್ಟಿಗೆ ಸಂಪೂರ್ಣವಾಗಿ ವಿಫಲವಾಗಿವೆ ಎಂದರೆ ತಪ್ಪಾಗಲಾರದು. ನಮ್ಮ ಸಾಮಾಜಿಕ-ಆರ್ಥಿಕ ಸೂಚ್ಯಂಕವನ್ನು ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿ ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ದೆಹಲಿ, ಮುಂಬೈ ಹಾಗೂ ದೇಶದ ಇನ್ನಿತರ ರಾಜ್ಯಗಳ ರಾಜಧಾನಿಯ ಸುತ್ತಮುತ್ತ ಏನೋ ಅಲ್ಪ-ಸ್ವಲ್ಪ ಅಭಿವೃದ್ಧಿ ಆಗಿದೆ. ಅದನ್ನು ಹೊರತು ಪಡಿಸಿದರೆ ದೇಶದ ಉಳಿದ ಭಾಗಗಳಲ್ಲಿ ಅಭಿವೃದ್ಧಿ ಎನ್ನುವುದು ಇನ್ನೂ ಮರೀಚಿಕೆಯಾಗಿ ಉಳಿದಿದೆ. ಭಾರತ ಹಿಂದೆ, ಹಿಂದಕ್ಕೆ ಸಾಗುತ್ತಿದ್ದರೆ, ಇಂಡಿಯ ಮಾತ್ರ ಮುಂದಡಿಯಿಡುತ್ತಿದೆ. ಹೀಗೆ ನಿರಂತರವಾಗಿ ಅಭಿವೃದ್ಧಿ ವಿರೋಧಿ ನಿಲುವನ್ನು ಹೊಂದುವ ಮೂಲಕ ನಮ್ಮ ರಾಷ್ಟ್ರೀಯ ಪಕ್ಷಗಳು ಈ ರಾಷ್ಟ್ರದ ಮೇಲಿನ ಅವುಗಳ ಹಿಡಿತವನ್ನೇ ಕಳೆದುಕೊಂಡಿವೆ. ಪರಿಣಾಮ, ಪ್ರಾದೇಶಿಕ ಪಕ್ಷಗಳು ಮಳೆಗಾಲದಲ್ಲಿನ ಅಣಬೆಗಳಂತೆ ಹಬ್ಬಿ ನಿಂತಿವೆ. ರಾಷ್ಟ್ರದ ಭಾವೈಕ್ಯತೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ, ಕೇವಲ ಅಧಿಕಾರದ ಆಸೆಯಿಂದ ಸ್ವಾರ್ಥದ ಮುಖವಾಡ ಧರಿಸಿದ ಪ್ರಾದೇಶಿಕ ಪಕ್ಷಗಳು ಎಂದೂ ದೇಶದ ಸಮಗ್ರತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ವಿಪರ್ಯಾಸವೆಂದರೆ ನಮಗೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಇದ್ದುದು ಕೇವಲ ಬೆರಳೆಣಿಕೆಯಷ್ಟು ರಾಷ್ಟ್ರೀಯ ಪಕ್ಷಗಳು ಮಾತ್ರ. ಆದರೀಗ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿನ ಅಧಿಕೃತ ದಾಖಲೆಯನ್ನೇ ಪರಿಶೀಲಿಸಿದರೆ ಈ ದೇಶದಲ್ಲಿ ಒಟ್ಟು ೭೫೦ಕ್ಕಿಂತಲೂ ಅಧಿಕ ರಾಜಕೀಯ ಪಕ್ಷಗಳು ಇರುವ ಅಂಶ ಕಣ್ಣಿಗೆ ಬೀಳುತ್ತದೆ. ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಪಕ್ಷಗಳು ವಿಫಲವಾಗುತ್ತಿರುವುದರ ಸಂಕೇತ ಎನ್ನದೇ ವಿಧಿಯಿಲ್ಲ.
ರಾಷ್ಟ್ರೀಯ ಪಕ್ಷಗಳು ದೇಶದ ಅಭಿವೃದ್ಧಿಗೆ ಬೆನ್ನು ಮಾಡಿ ನಿಂತ ಪರಿಣಾಮದಿಂದಲೇ ಪ್ರಾದೇಶಿಕ ಅಸಮಾನತೆಯ ಸೃಷ್ಟಿಯಾಗಿದೆ. ಅದರಿಂದಾಗಿಯೇ ಅಭಿವೃದ್ಧಿಯನ್ನೇ ಕಾಣದ, ಬಡತನವನ್ನೇ ಹೊದ್ದ ಪ್ರದೇಶಗಳಿಂದ ಕೂಲಿ ಕಾರ್ಮಿಕರು 'ಅಭಿವೃದ್ಧಿ ಹೊಂದಿರುವ' ನಗರಗಳತ್ತ ವಲಸೆ ಬರುತ್ತಾರೆ. ಸ್ವಾರ್ಥದ ಸಂಕೇತಗಳಾದ ನಗರಗಳಲ್ಲಿ ಕೂಡ ಈಗ ಅವಕಾಶಗಳು ಕಡಿಮೆಯಾಗುತ್ತಲೇ ಹೋಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ವಲಸಿಗರು ನಮ್ಮ ತುತ್ತು ಅನ್ನ ಕಸಿಯಲೇ ಬಂದಿದ್ದಾರೆ ಎಂಬ ಭ್ರಮೆಗೆ ಒಳಗಾಗುತ್ತಾರೆ. ಈ ಭ್ರಮೆಯ ಪರಿಣಾಮವಾಗಿಯೇ ಸ್ಥಳೀಯರು ವಲಸೆ ಬಂದವರ ವಿರುದ್ಧ ಕತ್ತಿ ಮಸೆಯಲು ಆರಂಭಿಸುತ್ತಾರೆ. ಇಂತಹ ವಿಷಯಗಳಿಂದಾಗಿಯೇ ಮುಂಬೈನಂತಹ ಕೆಟ್ಟ ವಾತಾವರಣದ ಸೃಷ್ಟಿಯಾಗುತ್ತದೆ. 'ಬಿಹಾರಿ' ಅಥವಾ 'ಭಯ್ಯಾ ಎಂಬ ಪದಗಳೇ ತಿರಸ್ಕಾರಕ್ಕೆ ಒಳಗಾಗುವ, ದ್ವೇಷಾಗ್ನಿ ಹುಟ್ಟಿ ಉರಿಯುವಂತಾಗಲು ಕಾರಣವಾಗುತ್ತಿರುವುದು ವಿಪರ್ಯಾಸ ಎಂದೇ ಹೇಳಬೇಕು. ಇದೆಲ್ಲಕ್ಕಿಂತ ದುರಂತಮಯ ವಿಷಯವೆಂದರೆ ಇಂತಹ ದ್ವೇಷಾಗ್ನಿ ಹುಟ್ಟಿ ಉರಿಯಲು ಪ್ರಾದೇಶಿಕ ಪಕ್ಷಗಳು ಪ್ರಮುಖ ಕಾರಣವಾಗುತ್ತಿರುವುದು. ಅವುಗಳ ಕುಮ್ಮಕ್ಕಿನಿಂದಲೇ ಅಸಹನೆ ಕುಡಿಯೊಡೆಯುತ್ತಿರುವುದು. ಯಾವುದೇ ರಾಷ್ಟ್ರೀಯ ಪ್ರಣಾಳಿಕೆಗಳನ್ನು ಹೊಂದಿರದೇ, ಕೇವಲ ಪ್ರಾದೇಶಿಕ ಬದ್ಧತೆಯ ಮುಖವಾಡ ಹಾಕಿಕೊಂಡು, ಕೀಳು ಮಟ್ಟದ ಪ್ರಚಾರಕ್ಕಾಗಿ ಹಂಬಲಿಸುತ್ತಾ ಸಮಾಜದಲ್ಲಿ ಜನಾಂಗೀಯ ಗಲಭೆ ಹುಟ್ಟಿಕೊಳ್ಳಲು ಕಾರಣವಾಗುವ ಇಂತಹ ಪಕ್ಷಗಳ ಮುಖಂಡರು ನಂತರ ಹೀರೊಗಳಂತೆ ಪೋಸ್ ಕೊಡುತ್ತಾರೆ. ಇನ್ನೂ ದುರಂತಮಯ ಹಾಗೂ ಸತ್ಯವಾದ ವಿಷಯವೆಂದರೆ ಈ ಪ್ರಾದೇಶಿಕ ಒಡಕು ಎಂಬ ಬೆಂಕಿಗೆ ಮಾಧ್ಯಮಗಳು ಕೂಡ ತುಪ್ಪ ಸುರಿಯುತ್ತಿರುವುದು. ಇಂತಹ ಪರಿಸ್ಥಿತಿ ಎದುರಾದಾಗ ರಾಷ್ಟ್ರೀಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬದಲು, ಆ ಸುದ್ದಿಯನ್ನೇ ವೈಭವೀಕರಿಸುವ ಮಾಧ್ಯಮಗಳು ಉರಿವ ಮನೆಯಿಂದ ಗಳ ಕೀಳುವ ಯತ್ನ ಮಾಡುತ್ತವೆ. ಜವಾಬ್ದಾರಿ ವಹಿಸಿಕೊಂಡು ಉರಿವ ಬೆಂಕಿಯನ್ನು ಆರಿಸುವ ಬದಲು ನಮಗೆಷ್ಟು ಲಾಭ ಸಿಗುತ್ತದೆ ಎಂಬ ಅವಕಾಶವಾದಿತನ ಇದು. ಕೆಲವು ಬುದ್ಧಿವಂತರು ಸಾಕಷ್ಟು ಲಾಭ ಮಾಡಿಕೊಂಡ ಮೇಲೆ ಏನೂ ಆಗಿಲ್ಲದವರಂತೆ ವರ್ತಿಸುವ ಮೂಲಕ ಇಂತಹ ನರಮೇಧಗಳಿಗೆ ಮೂಕಸಾಕ್ಷಿಯಾಗುತ್ತಾರೆ.
ದೇಶಕ್ಕೆ ಸ್ವತಂತ್ರ ಬಂದು 60 ವರ್ಷಗಳು ಕಳೆದು ಹೋಗಿವೆ. ಇಷ್ಟು ವರ್ಷ ಕಳೆದ ಮೇಲೂ ದೇಶದ ಜನರು ಈ ನೆಲದಲ್ಲಿಯೇ ಪರಕೀಯರಂತೆ ಬಾಳಬೇಕಾಗಿ ಬಂದಿರುವುದು ದುರಂತವೇ ಸರಿ! ಈ ನಿಟ್ಟಿನಲ್ಲಿ ನಾವೆಲ್ಲ ಭಾರತದ ರಾಜಕಾರಣ ಮತ್ತು ರಾಜಕಾರಣಿಗಳಿಗೆ ಧನ್ಯವಾದ ಅರ್ಪಿಸಲೇಬೇಕು. ಏಕೆಂದರೆ ಅವರೆಲ್ಲರ ಪ್ರಯತ್ನದ ಫಲವಾಗಿ 'ಭಾರತ ಗಣರಾಜ್ಯ ಎಂಬ ಸತ್ಯವೇ ಮಿಥ್ಯೆಯಾಗುತ್ತಿದೆ. ಆ ಸತ್ಯವನ್ನು ಈಗ ಹಾಡಹಗಲೇ ಕಗ್ಗೊಲೆ ಮಾಡಿ ಸಮಾಧಿ ಕಟ್ಟಲಾಗುತ್ತಿದೆ. ತಾನು ಹುಟ್ಟಿದ ದೇಶದಲ್ಲೇ ಒಬ್ಬ ವ್ಯಕ್ತಿ ಪರಕೀಯನಾಗುವುದಕ್ಕಿಂತ ಬೇರೆ ದೊಡ್ಡ ದುರಂತ ಇನ್ನಾವುದೂ ಇರಲಾರದು. ಆ ನೋವು ಎಂತಹುದು ಎನ್ನುವುದು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ.