|
ಸುಗ್ಗಿಯ ಕಾಲದ ದ್ರಾಕ್ಷಿ ತೋಟಗಳ ಸೊಬಗನ್ನು ಟೆಲಿವಿಷನ್‌ನ ಟ್ರಾವೆಲ್ ಷೋಗಳು ಹಾಗೂ ಅಂತರ್ ರಾಷ್ಟ್ರೀಯ ಚಲನಚಿತ್ರಗಳಲ್ಲಿ ಕಂಡು ಸಂಭ್ರಮಿಸಿದ್ದೇವೆ. ತಮ್ಮ ಪ್ಯಾಂಟುಗಳನ್ನು ಮೊಣಕಾಲಿನವರೆಗೂ ಎತ್ತಿ ಕಟ್ಟಿಕೊಂಡು ಮೊರದಗಲದ ಪಾತ್ರೆಯಲ್ಲಿ ತುಂಬಲಾದ ದ್ರಾಕ್ಷಿಗಳ ಮೇಲೆ ಹೆಜ್ಜೆ ಹಾಕುವ ಪುರುಷರು, ತಮ್ಮ ಬಟ್ಟೆಗಳನ್ನು ಬಿಗಿಯಾಗಿ ಎತ್ತಿ ಹಿಡಿದ ಯುವತಿಯರು ದ್ರಾಕ್ಷಿ ಮೇಲೆ ನಲಿದಾಡುವ ಮಜಾ ನೋಡಿದ್ದೇವೆ. ಹೀಗೆ ದ್ರಾಕ್ಷಿ ರಾಶಿಯಲ್ಲಿ ಕುಣಿದು ಕುಪ್ಪಳಿಸಿ ಮೊಗ ತುಂಬಾ ನಗೆ ಚೆಲ್ಲುತ್ತಿರುವವರನ್ನು ನೋಡಿ ನಾವೂ ಉಲ್ಲಾಸದ ಅಲೆಯಲ್ಲಿ ತೇಲಿ ಹೋದದ್ದೂ ಇದೆ. ಇಲ್ಲಿನ ಸಂಸ್ಕೃತಿಯಲ್ಲಿಯೇ ದ್ರಾಕ್ಷಿಗಳಿಂದ ತಯಾರಾಗುವ ವೈನ್ ಬೆರೆತು ಹೋಗಿದೆ. ದ್ರಾಕ್ಷಿ ಹದ ಮಾಡುವ ಕುರಿತ ಈ ರೋಮಾಂಚಕ ಟಿವಿ ಕಾರ್ಯಕ್ರಮಗಳು ನಮ್ಮನ್ನು ಆ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸುವ ಪ್ರಪಂಚ ಪರ್ಯಟನೆ ಮಾಡಿಸುತ್ತವೆ. ಚಲನಚಿತ್ರಗಳಲ್ಲಿ ದ್ರಾಕ್ಷಿ ತುಳಿಯುತ್ತಾ ಸಂಭ್ರಮ ಪಡುವ ಯುವಕ- ಯುವತಿಯರು ನಮ್ಮ ಮನದಲ್ಲೇನೋ ಹೊಸ ರೋಮಾಂಚನ ಮೂಡಿಸುತ್ತಾರೆ. ಹಳೇ ಕಂದೀಲು ಉರಿಸಿ ವೈನ್ ಬಾಟಲನ್ನು ಹಿಡಿದು ಎಲ್ಲೋ ಕಳೆದು ಹೋದ ಪ್ರೇಮದ ಉನ್ಮಾದವನ್ನು ಅನುಭವಿಸುವ ಭಾವೋದ್ರೇಕವನ್ನು ನಮ್ಮಲ್ಲಿ ತುಂಬುತ್ತದೆ. ಆದರೆ ಇಂಥಾ ಮೋಜುಗಳು ಇಂದು ಬರೀ ಯುರೋಪಿಯನ್ನರ ಸೊತ್ತಲ್ಲ. ಈ ಸಂಸ್ಕೃತಿ ಇಂದು ಭಾರತಕ್ಕೂ ಕಾಲಿಟ್ಟಿದೆ. ಇಲ್ಲೂ ಹಲವಾರು ದ್ರಾಕ್ಷಿ ತೋಟಗಳು ತಲೆ ಎತ್ತಿವೆ. ಅಂದ ಹಾಗೆ, ಪ್ರೇಮಿಗಳ ದಿನಕ್ಕೆ ನೀವು ಇನ್ನೂ ಯಾವುದೇ ಯೋಜನೆ ಹಾಕಿಕೊಂಡಿಲ್ಲವೇ? ಹಾಗಿದ್ದಲ್ಲಿ ದ್ರಾಕ್ಷಿತೋಟಕ್ಕೆ ಭೇಟಿ ನೀಡಲು ಇದು ಸಕಾಲ. ಇದು ಸುಗ್ಗಿಯ ಸಮಯವೂ ಹೌದು. ನಿಮ್ಮ ಪ್ರೇಯಸಿಯೊಂದಿಗೆ ಪ್ರೇಮಿಗಳ ದಿನದಂದು ಸಂತಸದ ಸಮಯವನ್ನು ಕಳೆಯಲು ಸುಂದರ ದ್ರಾಕ್ಷಿತೋಟ ಅದ್ಭುತ ತಾಣವಾಗಬಹುದು.
'ಸುಲಾ ದ್ರಾಕ್ಷಿತೋಟ'ದ 'ಟೇಸ್ಟಿಂಗ್ ರೂಂ'ನ ಬಾಲ್ಕನಿಯಲ್ಲಿ ನಿಂತು ಸುತ್ತ ಒಮ್ಮೆ ದಿಟ್ಟಿಸಿ ನೋಡಿದಲ್ಲಿ ಕಣ್ಣಳತೆಯಲ್ಲೆಲ್ಲ ದ್ರಾಕ್ಷಿ ಗೊಂಚಲುಗಳ ರಾಶಿಯೋ ರಾಶಿ. ಎಡಬದಿಗೆ ತಿರುಗಿದರೆ ದೂರದಲ್ಲಿ ಗಂಗಾಪುರ್ ಸರೋವರ ಕಣ್ಮನ ಸೆಳೆದರೆ, ಎದುರಲ್ಲಿ ಆಕರ್ಷಕ ದ್ರಾಕ್ಷಿತೋಟ. ಹಾಗೇ ಸಹ್ಯಾದ್ರಿ ಬೆಟ್ಟಗಳ ಸಾಲು. ಕೋಣೆಯೊಳಗಿನ ಸುಮಧುರ ಸಂಗೀತ ಆ ಪ್ರಶಾಂತ ಪರಿಸರಕ್ಕೆ ಪೂರಕವಾಗಿದೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 11ರವರೆಗೆ ಪ್ರವಾಸಿಗರು ಇಲ್ಲಿನ ಪ್ರಕೃತಿ ವೈಭವವನ್ನು ಸವಿಯಬಹುದು. ಬರೀ 100 ರೂ. ತೆತ್ತರೆ ಐದು ವಿಧದ ವೈನ್‌ಗಳ ರುಚಿ ಪಡೆಯಬಹುದು. ಹಾಗೇ ದ್ರಾಕ್ಷಿ ತೋಟ ಮತ್ತು ಘಟಕದ ಸುತ್ತ ತಿರುಗಿ ಬರುವ ಅವಕಾಶವನ್ನೂ ಕಲ್ಪಿಸಲಾಗುತ್ತದೆ. ಇಷ್ಟು ಕಡಿಮೆ ವೆಚ್ಚದಲ್ಲಿ ಇಂಥ ವೈಭೊಗ ಅನುಭವಿಸುವ ಅವಕಾಶ ಸಿಕ್ಕರೆ ಬಿಡುವವರಾರು? ಹೀಗಾಗಿ ಇಲ್ಲಿ ಪ್ರವಾಸಿಗರಿಗೇನೂ ಕಡಿಮೆ ಇಲ್ಲ.
ನಾನು ವೈನ್ ಪೇಯವನ್ನು ಗ್ಲಾಸ್‌ಗೆ ಸುರಿಯುತ್ತ ಅದಕ್ಕೆ ಸೇಬು ಅಥವಾ ಸ್ಟ್ರಾಬರಿ ಸುವಾಸನೆ ಇದೆಯೆ ಎಂದುಕೊಳ್ಳುತ್ತಿರುವಾಗಲೇ, ಅಲ್ಲಿಗೆ ಬಂದ ಅಪ್ಪಟ ಭಾರತೀಯ ಮಧ್ಯಮ ವರ್ಗದ ದಂಪತಿ ಮತ್ತು ಮೂವರು ಆಧುನಿಕ ಯುವಕರು ಅದೇ ರೀತಿ ವೈನ್ ರುಚಿ ಸವಿದು ಘಟಕಕ್ಕೆ ಒಂದು ಸುತ್ತು ಹಾಕಿದರು.
ಪ್ರತಿನಿತ್ಯ ಇಲ್ಲಿಗೆ ಸುಮಾರು 100 ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ವಾರದ ಕೊನೆಯಲ್ಲಿ ಸುಮಾರು 200-250 ಜನರು ಸೇರುತ್ತಾರೆ. ಸ್ಥಳೀಯರು, ರೈತರು ಮತ್ತು ಮುಂಬೈ, ಪುಣೆಯ ಜನರೂ ಬರುತ್ತಾರೆ ಎನ್ನುತ್ತಾರೆ ಸುಲಾ ದ್ರಾಕ್ಷಿತೋಟದ 'ಇವೆಂಟ್ಸ್ ಅಂಡ್ ಮಾರ್ಕೆಟಿಂಗ್' ಕಾರ್ಯನಿರ್ವಾಹಕರಾದ ರಾಬಿನ್ ಜೋಸೆಫ್.
ಆ ಪ್ರದೇಶದ ನೀರವತೆ ಹಾಗೂ ವೈನ್ ಸವಿಯುತ್ತಾ ಸಂತೋಷದಿಂದ ಸಮಯ ಕಳೆಯಲು ಬಯಸುವವರಿಗಾಗಿಯೇ ಪ್ರತ್ಯೇಕ 'ಬಿಯಾಂಡ್' ಎಂಬ ಬಂಗಲೆಯನ್ನು ನಿರ್ಮಿಸಲಾಗಿದೆ. 'ಟೇಸ್ಟಿಂಗ್ ರೂಂ'ನಿಂದ ಕೇವಲ 2 ಕಿ.ಮೀ. ದೂರದಲ್ಲಿ, ಬೆಟ್ಟದಿಂದ ಆಚೆಗಿರುವ ಈ ಅದ್ಭುತ ಬಂಗಲೆ ದ್ರಾಕ್ಷಿತೋಟ ಹಾಗೂ ಸರೋವರದ ನಡುವೆ ಇದೆ. ಬಿಯಾಂಡ್‌ನಲ್ಲಿರುವ ಮೂರು ಕೋಣೆಗಳಲ್ಲಿ ಸುಮಾರು 9 ಮಂದಿ ಉಳಿದುಕೊಳ್ಳುವಷ್ಟು ಸ್ಥಳಾವಕಾಶವಿದೆ. ವಿದೇಶಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ತಾಜ್ ಹೋಟೇಲ್‌ಗಳಲ್ಲಿ ಉಳಿದುಕೊಳ್ಳುವ ಬದಲಾಗಿ ಬಿಯಾಂಡ್‌ನಲ್ಲಿ ಉಳಿದುಕೊಳ್ಳಲೇ ಅವರು ಬಯಸುತ್ತಾರೆ. ವೆಚ್ಚವೂ ಕಡಿಮೆ. ಇಲ್ಲಿ ಒಂದು ರಾತ್ರಿ ಕಳೆಯಬೇಕಾದರೆ ಸುಮಾರು ರೂ. 16,000 ತೆರಬೇಕು. ಶನಿವಾರ- ಭಾನುವಾರದಂದು ರೂ. 20,000. ರಾಷ್ಟ್ರೀಯ ರಜಾದಿನಗಳಲ್ಲಿ ರೂ. 25,000 ತೆರಬೇಕು. ಇಲ್ಲಿ ನಾವು ಈಜುಕೊಳವನ್ನೂ ನಿರ್ಮಿಸಿದ್ದೇವೆ. ಇಲ್ಲಿನ ಹವಾಮಾನವಂತೂ ಅತ್ಯದ್ಭುತ. ವಾರದ ಕೊನೆಯಲ್ಲಿ ಬರುವ ರಜಾದಿನಗಳನ್ನು ಕಳೆಯಲು ಅತ್ಯುತ್ತಮ ತಾಣವಿದು ಎನ್ನುತ್ತಾರೆ ರಾಬಿನ್.
ಬಿಯಾಂಡ್ ಅನ್ನು ನಾವು ಇತ್ತೀಚೆಗಷ್ಟೇ ಆರಂಭಿಸಿದೆವು. ಈ 'ಬಿಯಾಂಡ್' ಕಳೆದ ತಿಂಗಳಡೀ ಹೌಸ್‌ಫುಲ್! 17 ದಿನಗಳ ಮೊದಲೇ ಎಲ್ಲಾ ರೂಂಗಳೂ ಬುಕ್ ಆಗಿದ್ದವು. ಇದು ನಿಜವಾಗಿಯೂ ಅದ್ಭುತವೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ 'ಟೇಸ್ಟಿಂಗ್ ರೂಂ'ನ ವ್ಯವಸ್ಥಾಪಕ ಚೈತನ್ಯ ರತಿ.
ಆಶ್ಚರ್ಯವೆಂದರೆ ಅಲ್ಲಿನ ರೈತರೂ ಗ್ರಾಹಕರೇ! ಧೋತಿ ಹಾಗೂ ನೆಹರೂ ಟೋಪಿ ಧರಿಸಿದ ರೈತರು ಪ್ರತಿ ದಿನವೂ 'ಟೇಸ್ಟಿಂಗ್ ರೂಂ'ನಲ್ಲಿ ವೈನ್‌ನ ರುಚಿ ಪಡೆಯುತ್ತಾರೆ. ಇದು ಅವರ ನಿತ್ಯ ದಿನಚರಿ ಎಂದರೂ ತಪ್ಪಿಲ್ಲ. ಈ ಹಿನ್ನೆಲೆಯಲ್ಲೇ ಆ ಪ್ರದೇಶದಲ್ಲಿ ಹಲವಾರು ದ್ರಾಕ್ಷಿ ತೋಟಗಳು ತಲೆ ಎತ್ತುತ್ತಿರುವುದು ಆರ್ಥಿಕ ಲಾಭಕ್ಕೆ ಕಾರಣವಾಗಿದೆ.
ಟೇಬಲ್ ದ್ರಾಕ್ಷಿಯನ್ನು ಬೆಳೆಯುವ ಪ್ರದೇಶ ಎಂದು ನಾಸಿಕ್ ಪ್ರಸಿದ್ಧಿ. ರಾಜೀವ್ ಸಮಂತ್ ಅವರು ಇಲ್ಲಿಗೆ ಬಂದು ವೈನ್ ದ್ರಾಕ್ಷಿಯನ್ನು ಬೆಳೆಸಲಾರಂಭಿಸಿದ ನಂತರವೇ ಈ ಖ್ಯಾತಿಗೆ ನಾಸಿಕ್ ಪಾತ್ರವಾದದ್ದು. ಸಮಂತ್ ಅವರು ಸುಲಾ ದ್ರಾಕ್ಷಿತೋಟ ನಿರ್ಮಿಸಿದ ನಂತರ ಇಲ್ಲಿ ಹಲವು ವೈನ್ ತಯಾರಿಕಾ ಘಟಕಗಳು ತಲೆ ಎತ್ತಲು ಆರಂಭವಾಗಿವೆ. ಹಣದ ಅಭಾವದಿಂದ ಸೈಕಲ್ ಖರೀದಿಸಲು ಒದ್ದಾಡುತ್ತಿದ್ದ ಜನರು ಇಂದು ಕಾರಿನಲ್ಲಿ ತಿರುಗಾಡುತ್ತಿದ್ದಾರೆ! ಎಂದು ದಿಗ್ಭ್ರಮೆ ವ್ಯಕ್ತಪಡಿಸುತ್ತಾರೆ ರಾಬಿನ್. ವೈನ್ ತಯಾರಿಕಾ ಘಟಕದ ಕೆಲಸಕ್ಕೆ ಹಳ್ಳಿಗಳಿಂದ ಕಾರ್ಮಿಕರನ್ನು ಕರೆಸಲಾಯಿತು. ನಿರುದ್ಯೋಗಿಗಳಿಗೆ ಬಾಟಲಿಂಗ್ ಕಾರ್ಯ, ಲೇಬಲ್ ಹಾಕುವುದು ಮತ್ತು ಯಂತ್ರ ನಿರ್ವಹಣಾ ಕೌಶಲ್ಯವನ್ನೂ ಕಲಿಸಿದೆವು ಎನ್ನುವ ರಾಬಿನ್ ಸುಲಾ ತಮ್ಮ ಸಾಮಾಜಿಕ ಕಳಕಳಿಯನ್ನು ನಮ್ಮ ಮುಂದಿಟ್ಟರು. ತಿಂಗಳ ಹಿಂದೆ ಸಿಐಐ ಜೊತೆ ಸೇರಿ ನಾವು 'ಮಹಾ ವೈನ್' ಎಂಬ ಸಮಾವೇಶ ಏರ್ಪಡಿಸಿದ್ದೆವು. ಸುಮಾರು 400- 500 ರೈತರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ದ್ರಾಕ್ಷಿಗೆ ಯಾವ ರೀತಿಯ ಕೀಟಗಳಿಂದ ಹಾನಿಯುಂಟಾಗಬಹುದು ಎಂಬ ವಿಷಯದ ಕುರಿತಾಗಿ ಮಾತನಾಡಲು ಫ್ರಾನ್ಸ್, ಇಟಲಿ ದೇಶಗಳ ತಜ್ಞರು ಕೂಡ ಇಲ್ಲಿಗೆ ಬಂದಿದ್ದರು. ಇತರ ದೇಶಗಳಲ್ಲಿ ಹೇಗೆ ವೈನ್ ತಯಾರಿಸಲಾಗುತ್ತದೆ ಹಾಗೂ ನಾವು ಯಾವ ರೀತಿಯಲ್ಲಿ ತಯಾರಿಸುತ್ತೇವೆ ಎಂಬುದನ್ನು ಮನಗಾಣಿಸಲು ನಮ್ಮ ಕೆಲವು ರೈತರಿಗೆ ಅಂತರ್ ರಾಷ್ಟ್ರೀಯ ಪ್ರವಾಸವನ್ನೂ ಏರ್ಪಡಿಸಿದ್ದೆವು ಎನ್ನುತ್ತಾರೆ ರಾಬಿನ್.
ಮಾರ್ಚ್ 15ರಂದು ಸುಲಾ ದ್ರಾಕ್ಷಿತೋಟದಲ್ಲಿ ಬಯಲು ರಂಗ ಮಂದಿರ ಉದ್ಘಾಟನೆಗೊಳ್ಳಲಿದ್ದು, ಗ್ರೀಕ್ ಶೈಲಿಯ ಈ ಬಯಲು ರಂಗಮಂದಿರ ಸಂಗೀತ ಕಾರ್ಯಕ್ರಮ ಸೇರಿದಂತೆ ನಾಟಕ ಪ್ರದರ್ಶನಗಳ ತಾಣವಾಗಲಿದೆ. ಆದರೆ ಒಂದು ವಿಷಯ ಮಾತ್ರ ನೆನಪಿಟ್ಟುಕೊಳ್ಳಿ, ದ್ರಾಕ್ಷಿತೋಟವನ್ನು ವೀಕ್ಷಿಸಲು ಮಾರ್ಚ್ ಕೊನೆಯವರೆಗೆ ಸಮಯಾವಕಾಶವಿದೆ. ಆ ನಂತರ ಭೇಟಿ ನೀಡಿದರೆ ಈಗಿನಂತಹ ಮೋಜು ಸಿಗದು! ನೀವು ಬೆಂಗಳೂರಿನಿಂದ 35 ಕಿ.ಮೀ. ದೂರವಿರುವ ಗ್ರೋವರ್ ದ್ರಾಕ್ಷಿತೋಟ ಅಥವಾ ಈ ಸುಲಾ ದ್ರಾಕ್ಷಿತೋಟವನ್ನೇ ಆರಿಸಿಕೊಳ್ಳಬಹುದು... ಆಯ್ಕೆ ನಿಮ್ಮದು... ಹಾ! ಒಂದು ವಿಷಯ, ಸುಲಾದಲ್ಲಿ ದ್ರಾಕ್ಷಿ ಹದಮಾಡುವ ಕಾರ್ಯ ಈ ವಾರದ ಕೊನೆಯಲ್ಲೂ ಇದೆ!
ಟಿಎಸ್‌ಐ
|