ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಮುಖಪುಟ ಲೇಖನ : ಮಹತ್ವಾಕಾಂಕ್ಷೆ 2012
ಮಹತ್ವಾಕಾಂಕ್ಷೆ 2012

ಭಾರತೀಯ ಅಥ್ಲೆಟಿಕ್ಸ್‌ಗೆ ಮರುಜೀವ ನೀಡಿ, ರಾಜ್ಯವರ್ಧನ ಸಿಂಗ್ ರಾಥೋಡ್ ಒಲಿಂಪಿಕ್ ಸಾಧನೆಯನ್ನು ಪುನರಾವರ್ತನೆ ಮಾಡಲು ಭಾರತೀಯ ಸೇನಾಪಡೆ 'ಮಿಷನ್ ಒಲಿಂಪಿಕ್ಸ್' ಯೋಜನೆ ಹಾಕಿಕೊಂಡಿದೆ. ಈ ಯೋಜನೆಯ ಒಳಹೊರಗನ್ನು ಟಿಎಸ್‌ಐನ ಮಾಯಾಂಕ್ ಸಿಂಗ್ ವಿಶ್ಲೇಷಿಸಿದ್ದಾರೆ

ಹದಿನಾರರ ಹರೆಯದ ಯುವತಿ ಅಭಿಲಾಷ ಜೋಷಿ ಮೇಲ್ನೋಟಕ್ಕೆ ಅಂತಹ ಮಹಾನ್ ಭರವಸೆಯನ್ನು ಹುಟ್ಟಿಸದೇ ಇದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಆಕೆಯ ವ್ಯಕ್ತಿತ್ವ ಹಾಗೆಯೇ ಇದೆ. ಜರ್ಮನ್ ಮೂಲದ ಪಿ-700 ಏರ್ ರೈಫಲ್ ಕೈಗೆತ್ತಿಕೊಂಡು ಅಭಿಲಾಷ ಗುರಿಯಿಡಲು ಸಜ್ಜಾದಾಗ ಕೂಡ 'ಈ ಯುವತಿ ಆ ಸಾಧನೆ ಮಾಡಬಲ್ಲಳೇ?' ಎಂಬ ಪ್ರಶ್ನೆ ಹುಟ್ಟಿಕೊಂಡರೂ ತಪ್ಪಿಲ್ಲ. ಆದರೆ ದಢ್, ದಢ್ ಎಂದು ಗುಂಡು ಹಾರಿಸುತ್ತಾ ಆಕೆ 400ರಲ್ಲಿ 396 ಅಂಕಗಳನ್ನು ಗಳಿಸಿದಾಗ ಮಾತ್ರ ಆಕೆಯ ನಿಜವಾದ ಸಾಮರ್ಥ್ಯ ಎಂತಹುದು ಎನ್ನುವುದು ಮನದಟ್ಟಾಗುತ್ತದೆ. ಹತ್ತು ಮೀಟರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅಭಿಲಾಷ ಎಷ್ಟರ ಮಟ್ಟಿನ ಸಾಧನೆ ಮಾಡಬಲ್ಲಳು ಎನ್ನುವುದನ್ನು ಕಣ್ಣಾರೆ ನೋಡಿದಾಗ ಮಾತ್ರ ಅರ್ಥವಾಗುತ್ತದೆ.
ಐದು ಅಡಿ ಎರಡು ಇಂಚು ಎತ್ತರದ ಅಭಿಲಾಷ ಮೌನದ ಪ್ರತಿರೂಪ. ಚಾಟರ್ ಬಾಕ್ಸ್ ಅಲ್ಲವೇ ಅಲ್ಲ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಪುತ್ರಿ ಅಭಿಲಾಷ ಹನ್ನೆರಡನೇ ತರಗತಿ ವಿದ್ಯಾರ್ಥಿನಿ. 2012ರಲ್ಲಿ ನಡೆಯಲಿರುವ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೇ ಏರಿಸುವ ಕನಸು ಹೊತ್ತ ಈ ಬಾಲೆ ಈಗ ಅಭ್ಯಾಸ ನಿರತಳಾಗಿದ್ದಾಳೆ. ಸಾಮಾನ್ಯವಾಗಿ ಬೆಳಗಿನ ಹೊತ್ತು ವಿದ್ಯಾಭ್ಯಾಸದಲ್ಲಿ ನಿರತರಾಗಿರುವ ಅಭಿಲಾಷ, ರೈಫಲ್ ಶೂಟಿಂಗ್ ಅಭ್ಯಾಸಕ್ಕೆ ಇಳಿಯುವುದು ಮಧ್ಯಾಹ್ನದ ಮೇಲೆ. ಒಮ್ಮೆ ಆಕೆ ಶೂಟಿಂಗ್ ರೇಂಜ್‌ಗೆ ಇಳಿದು ಕೈಯಲ್ಲಿ ರೈಫಲ್ ಹಿಡಿದು, ದೇಹ-ಮನಸ್ಸು ಎರಡರ ಗಮನವನ್ನೂ ಗುರಿಯತ್ತ ಕೇಂದ್ರೀಕರಿಸಿ, ಕಣ್ಣು ಮುಚ್ಚಿ ನಂತರ ತೆರೆದು ಗುರಿಯತ್ತ ದೃಷ್ಟಿ ನೆಟ್ಟು ಟ್ರಿಗ್ಗರ್ ಒತ್ತಿದರೆ ಗುಂಡು ನೇರವಾಗಿ ಮತ್ತು ಖಚಿತವಾಗಿ ಗುರಿ ತಲುಪುತ್ತದೆ.
ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎನ್ನುವುದು ನನ್ನ ಗುರಿ. ಆ ಗುರಿ ತಲುಪುತ್ತೇನೆ ಎಂಬ ವಿಶ್ವಾಸ ನನಗಿದೆ ಎನ್ನುವ ಅಭಿಲಾಷ ಈಗ ದೇಶದ ಭರವಸೆಯ ಶೂಟರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವ ಸಲುವಾಗಿಯೇ ಭಾರತೀಯ ಸೇನೆ 'ಮಿಷನ್ ಒಲಿಂಪಿಕ್ಸ್' ಯೋಜನೆಯಡಿ 'ಕ್ಯಾಚ್ ದೆಮ್ ಯಂಗ್' ಕಾರ್ಯಕ್ರಮ ಹಾಕಿಕೊಂಡಿದೆ. ಆ ಕಾರ್ಯಕ್ರಮದಡಿ ಈಗ 38 ಪ್ರತಿಭಾವಂತರಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ. ಆ ಪೈಕಿ ಅಭಿಲಾಷ ಕೂಡ ಒಬ್ಬರು. ಶೂಟಿಂಗ್, ಲಾನ್ ಟೆನಿಸ್, ಗಾಲ್ಫ್ ಮತ್ತು ಅಥ್ಲೆಟಿಕ್ಸ್... ಹೀಗೆ ನಾಲ್ಕು ವಿಭಾಗಗಳಲ್ಲಿ ಭಾರತದ ಪ್ರತಿಭೆಗಳನ್ನು ಒಲಿಂಪಿಕ್ಸ್‌ಗೆ ಅಣಿಗೊಳಿಸುವ ಯತ್ನದಲ್ಲಿ ಸೇನೆ ಕಾರ್ಯೋನ್ಮುಖವಾಗಿದೆ.
ಭಾರತೀಯ ಸೇನೆ 'ಮಿಷನ್ ಒಲಿಂಪಿಕ್ಸ್' ಯೋಜನೆ ಆರಂಭಿಸಿದ್ದು 2001ರಲ್ಲಿ. ನಂತರ ಈ ಯೋಜನೆಯಡಿ ತರಬೇತಿ ಪಡೆಯುತ್ತಿರುವ ಇಬ್ಬರು ಬಾಕ್ಸಿಂಗ್ ಮತ್ತು ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿದರು. 2007ರಲ್ಲಿ ನಡೆದ ವಿಶ್ವ ಸೇನಾ ಕ್ರೀಡಾಕೂಟದಲ್ಲಿ ಭಾರತ ಒಂದು ಚಿನ್ನ ಹಾಗೂ ನಾಲ್ಕು ಕಂಚಿನ ಪದಕ ಗೆದ್ದಿತು. 2006 ಮತ್ತು 2007ರಲ್ಲಿನ ಜೂನಿಯರ್ ನ್ಯಾಷನಲ್ ಈಕ್ವೆಷ್ಟ್ರಿಯನ್ ಚಾಂಪಿಯನ್‌ಷಿಪ್ ಪ್ರಶಸ್ತಿ ಕೂಡ ಈ ತಂಡದ್ದಾಯಿತು. ಈಗ ಒಟ್ಟು 10 ಪ್ರತಿಭಾವಂತರು ಶೂಟಿಂಗ್‌ನಲ್ಲಿ, ತಲಾ 12 ಮಂದಿ ಕ್ರೀಡಾಪಟುಗಳು ಅಥ್ಲೆಟಿಕ್ಸ್ ಮತ್ತು ಟೆನಿಸ್‌ನಲ್ಲಿ ಹಾಗೂ ನಾಲ್ವರು ಗಾಲ್ಫ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮಿಷನ್ ಒಲಿಂಪಿಕ್ಸ್ ತಂಡದ ಮತ್ತೊಬ್ಬ ಸದಸ್ಯ ಕುಲ್ವೀಂದರ್ ಸಿಂಗ್ ನ್ಯಾಷನಲ್ ಜೂನಿಯರ್ ಶೂಟಿಂಗ್‌ನ 24 ಮೀ. ರ್‍ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗಿದೆ. ಅಹಮದಾಬಾದ್‌ನಲ್ಲಿ ಇದೇ ಜನವರಿಯಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಈ ಸಾಧನೆ ಮಾಡಿದ ಕುಲ್ವೀಂದರ್ ಸಿಂಗ್, ಸೇನೆ ನನಗೆ ನೀಡುತ್ತಿರುವ ಬೆಂಬಲದಿಂದ ರೋಮಾಂಚನಗೊಂಡಿದ್ದೇನೆ. ಶೂಟಿಂಗ್ ಸ್ಪರ್ಧೆಗಾಗಿ ತರಬೇತಿ ಪಡೆಯಬೇಕು ಎಂದರೆ ಬಹಳಷ್ಟು ಹಣ ಬೇಕಾಗುತ್ತದೆ. ಅಷ್ಟು ಹಣವನ್ನು ಹೊಂದಿಸಲು ನನ್ನ ಪೋಷಕರ ಕೈಯಲ್ಲಿ ಸಾಧ್ಯವೇ ಇರಲಿಲ್ಲ. ಆದರೀಗ ಸೇನೆ ಸಂಪೂರ್ಣವಾಗಿ ನನ್ನ ಬೆಂಬಲಕ್ಕೆ ನಿಂತಿದೆ ಎಂದು ಅವರು ಟಿಎಸ್‌ಐ ಬಳಿ ಸಂತೋಷ ಹಂಚಿಕೊಂಡರು.
ಮೊದಲಿನಿಂದಲೂ ಬೃಹತ್ ದೇಶ ಭಾರತ ಮತ್ತು ಒಲಿಂಪಿಕ್ಸ್ ನಡುವೆ ಎಣ್ಣೆ-ಸೀಗೆಕಾಯಿ ಸಂಬಂಧವಿದೆ. ಅದರಲ್ಲಿಯಂತೂ ಭಾರತದ ಅಥ್ಲೀಟ್‌ಗಳು ಒಲಿಂಪಿಕ್ಸ್ ಚಿನ್ನದ ಕನಸನ್ನೂ ಕಾಣುವ ಸ್ಥಿತಿಯ ಸೃಷ್ಟಿ ಇದುವರೆಗೆ ಆಗಿಯೇ ಇಲ್ಲ. ಇಂತಹ ಬರದ ಸನ್ನಿವೇಶದಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ 'ಮಿಷನ್ ಒಲಿಂಪಿಕ್ಸ್.' ಅಂತರ್ ರಾಷ್ಟ್ರೀಯ ಮಟ್ಟದ ಕಠಿಣ ತರಬೇತಿಯಿಂದ ಮಾತ್ರ ಒಲಿಂಪಿಕ್ಸ್ ಪದಕಗಳ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯ ಎಂಬ ಮಾತು ಈಗ ಅರ್ಥ ಪಡೆದುಕೊಳ್ಳುತ್ತಿವೆ. ಉದಾಹರಣೆಗೆ ಅಭಿಲಾಷ ಅವರನ್ನೇ ತೆಗೆದುಕೊಳ್ಳೋಣ. 2006ರಲ್ಲಿ ಪ್ರಥಮ ಬಾರಿಗೆ ಅವರನ್ನು ತರಬೇತಿಗೆ ಆಯ್ಕೆ ಮಾಡಿದಾಗ ಅವರು 400 ಅಂಕಗಳ ಪೈಕಿ 350ನ್ನು ಗಳಿಸಲು ಪರದಾಡುತ್ತಿದ್ದರು. ಆದರೀಗ ಅಭಿಲಾಷ ಸಾಧನೆಯ ಹಾದಿಯಲ್ಲಿ ದೃಢವಾದ ಹೆಜ್ಜೆಯನ್ನು ಹಾಕುತ್ತಿದ್ದಾರೆ.
ತನ್ನ ಸಹಪಾಠಿ ಶ್ರೇಯಾಂಕ ಅವರ ಜೊತೆ ಅಭಿಲಾಷ 2007ರಲ್ಲಿ ನಡೆದ ನ್ಯಾಷನಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು. ಅದಾದ ತಕ್ಷಣ ಅವರನ್ನು ಹಂಗೇರಿ ಓಪನ್ ರೈಫಲ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಕಳುಹಿಸಲಾಯಿತು. ಅಲ್ಲಿ ಅವರಿಗೆ ಐದನೇ ಸ್ಥಾನ ಪ್ರಾಪ್ತಿಯಾಯಿತು. ಹೀಗೆ ಯುವ ಅಥ್ಲೀಟ್‌ಗಳನ್ನು ಅಂತರ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸಿಕೊಟ್ಟಾಗ ಆಗುವ ಸಕಾರಾತ್ಮಕ ಪರಿಣಾಮ ಬೇರೆಯದೇ ಆಗಿರುತ್ತದೆ. ಆ ಕುರಿತು ಟಿಎಸ್‌ಐ ಜೊತೆ ಮಾತನಾಡಿದ 'ಕ್ಯಾಚ್ ದೆಮ್ ಯಂಗ್' ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ಜಾವೇದ್ ಅಸ್ಲಾಂ, ನಮ್ಮಲ್ಲಿ ತರಬೇತಿ ಪಡೆಯುತ್ತಿರುವ ಸ್ಪರ್ಧಿಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಅಂತರ್ ರಾಷ್ಟ್ರೀಯ ಸ್ಪರ್ಧೆಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಹಾಗೆ ಅವರು ನಿರಂತರವಾಗಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಅವರಿಗೆ ಶ್ರೇಷ್ಠರ ಜೊತೆಗೆ ಸ್ಪರ್ಧಿಸುವ ಅನುಭವ ಹೆಚ್ಚಾಗಿ ಲಭ್ಯವಾಗುತ್ತದೆ. ಹೀಗಾಗಿ ಅನಗತ್ಯ ಮಾನಸಿಕ ಒತ್ತಡಗಳಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ರಿಕೆಟ್ ಹೊರತುಪಡಿಸಿ ಬೇರೆ ಯಾವುದೇ ಕ್ರೀಡೆಯನ್ನು ತೆಗೆದುಕೊಂಡರೂ ಭಾರತ ಹೀನಾಯ ಸ್ಥಿತಿಯಲ್ಲಿರುವುದು ಕಣ್ಣಿಗೆ ಬೀಳುತ್ತದೆ. ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ ಮತ್ತು ಫುಟ್‌ಬಾಲ್ ಎರಡರಲ್ಲೂ ನಾವು ಅಧೋಗತಿಗೆ ಇಳಿದಿದ್ದೇವೆ. ಇನ್ನು ಅಥ್ಲೆಟಿಕ್ಸ್ ಎಂದ ಕೂಡಲೇ ಕಳೆದ ಶತಮಾನದ ಎಪ್ಪತ್ತರ ದಶಕದಷ್ಟು ಹಿಂದಕ್ಕೆ ಹೋಗಬೇಕು. ಟಿ.ಸಿ. ಯೊಹಾನನ್, ಶ್ರೀರಾಮ್ ಸಿಂಗ್ ಮತ್ತು ಪ್ರವೀಣ್ ಕುಮಾರ್ ಏಷ್ಯಾದ ಮಟ್ಟಿಗಾದರೂ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು.
ನಂತರ ಎಂಬತ್ತರ ದಶಕದಲ್ಲಿ ಪಿ.ಟಿ. ಉಷಾ ಸಾಧನೆ ಭಾರತೀಯ ಅಥ್ಲೆಟಿಕ್‌ಗೆ ಮರು ಜೀವ ನೀಡಿತು. ಒಮ್ಮೆ ಉಷಾ ತೆರೆಮರೆಗೆ ಸರಿದ ಮೇಲೆ ಮತ್ತೆ ಭಾರತೀಯ ಕ್ರೀಡಾ ಆಗಸದಲ್ಲಿ ಗಾಢಾಂಧಕಾರ ಕವಿಯಿತು.
2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಕರ್ನಲ್ ರಾಜ್ಯವರ್ಧನ ಸಿಂಗ್ ರಾಥೋಡ್ ಭಾರತಕ್ಕೆ ತಂದಿತ್ತ ಬೆಳ್ಳಿಯ ಪದಕ ಕೇವಲ ಒಂದು ವೈಯಕ್ತಿಕ ಸಾಧನೆಯಾಗಿ ಉಳಿಯಲಿಲ್ಲ. ಬದಲಾಗಿ ಅದು ಭಾರತೀಯ ಅಥ್ಲೆಟಿಕ್ ಲೋಕದ ಪುನರುತ್ಥಾನದ ಸಂಕೇತವಾಯಿತು. ರಾಥೋಡ್‌ರಂತಹ ಮತ್ತಷ್ಟು ಶ್ರೇಷ್ಠ ಕ್ರೀಡಾಪಟುಗಳನ್ನು ಸೃಷ್ಟಿಸುವ ಪ್ರಾಮಾಣಿಕ ಯತ್ನಕ್ಕೆ ಭಾರತೀಯ ಸೇನೆ ಮುಂದಾಗಲು ಆ ಬೆಳ್ಳಿಯ ಪದಕವೇ ಸ್ಫೂರ್ತಿಯಾಯಿತು. ಭಾರತದ ಪಾಲಿಗೆ ಸದಾ ಕೈಗೂಡದ ಕನಸಾಗಿ ಕಾಡುತ್ತಿರುವ ಒಲಿಂಪಿಕ್ಸ್ ಚಿನ್ನವನ್ನು ತಂದೇ ತರಬೇಕು ಎಂಬ ಗುರಿ 'ಮಿಷನ್ ಒಲಿಂಪಿಕ್ಸ್'ನದಾಗಿದೆ. ಈ ನಿಟ್ಟಿನಲ್ಲಿ 'ಮಿಷನ್ ಒಲಿಂಪಿಕ್ಸ್' ಯೋಜನೆಯಡಿ ತರಬೇತಿ ಪಡೆಯುತ್ತಿರುವ ಯುವ ಪಡೆ ಮುಂದೆ ಕಠಿಣ ಸವಾಲನ್ನು ಇಡಲಾಗುತ್ತಿದೆ. ಅವರು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಉತ್ತಮ ಫಲಿತಾಂಶ ಬರಲು ಕಾರಣವಾಗುತ್ತಿದ್ದಾರೆ. 2006ರ ದೋಹಾ ಏಷ್ಯನ್ ಗೇಮ್ಸ್‌ನ ಶೂಟಿಂಗ್ ಸ್ಪರ್ಧೆಯಲ್ಲಿ ನಾಯಕ್ ಸುಬೇದಾರ್ ವಿಜಯ್ ಕುಮಾರ್ ಸ್ವರ್ಣ ಗೆಲ್ಲುವ ಮೂಲಕ ಆ ಕನಸನ್ನು ಈಗ ಮತ್ತಷ್ಟು ಗಟ್ಟಿಯಾಗಿಸಿದ್ದಾರೆ. 'ಮಿಷನ್ ಒಲಿಂಪಿಕ್ಸ್' ಯೋಜನೆಯಡಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಈಗಾಗಲೇ 4 ರಜತ ಹಾಗೂ 9 ಕಂಚಿನ ಪದಕಗಳನ್ನು ಗೆದ್ದಾಗಿದೆ.
ಭಾರತೀಯ ಸೇನಾ ಪಡೆಯ ಮುಖ್ಯಸ್ಥರಾಗಿದ್ದ ಜನರಲ್ ಪಿ. ಪದ್ಮನಾಭನ್ ಅವರ ಕನಸಿನ ಕೂಸು 'ಮಿಷನ್ ಒಲಿಂಪಿಕ್ಸ್.' ಅವರ ನಂತರ ಸೇನಾಪಡೆಯ ಮುಖ್ಯಸ್ಥರಾದ ಜನರಲ್ ಜೆ.ಜೆ. ಸಿಂಗ್ ಮತ್ತೆರಡು ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದರು. 'ಕ್ಯಾಚ್ ದೆಮ್ ಯಂಗ್' ಮತ್ತು 'ಬಾಯ್ಸ್ ಸ್ಪೋರ್ಟ್ಸ್ ಕಂಪನಿ' ಆ ಎರಡು ಯೋಜನೆಗಳು.
ಟಿಎಸ್‌ಐ ಜೊತೆ ಮಾತನಾಡಿದ 'ಕ್ಯಾಚ್ ದೆಮ್ ಯಂಗ್' ಕಾರ್ಯಕ್ರಮದ ಮುಖ್ಯಸ್ಥ ಬ್ರಿಗೇಡಿಯರ್ ಎಚ್.ಪಿ.ಎಸ್. ಧಿಲ್ಲೊನ್, ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಪ್ರಾಯೋಜಕತ್ವದ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಆದರೂ, ನಾವು ಅಭ್ಯರ್ಥಿಗಳಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಉದಾಹರಣೆಗೆ ಶೂಟಿಂಗ್ ವಿಭಾಗವನ್ನೇ ತೆಗೆದುಕೊಂಡರೆ, ನಾವು ಜಗತ್ತಿನ ಅತ್ಯಂತ ಶ್ರೇಷ್ಠ ಬಂದೂಕು ಮತ್ತು ಪಿಸ್ತೂಲುಗಳನ್ನು ತರಬೇತಿಗಾಗಿ ನೀಡುತ್ತಿದ್ದೇವೆ. ಎಷ್ಟೇ ದುಬಾರಿಯದಾದರೂ ಅಭ್ಯಾಸಿಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂಬ ವಿವರ ನೀಡಿದರು.
ಇನ್ನು ಈ ರೀತಿಯ ಕಠಿಣ ಹಾಗೂ ಶಿಸ್ತುಬದ್ಧ ತರಬೇತಿ ಪಡೆದ ಅಭ್ಯರ್ಥಿಗಳು ಎಷ್ಟರ ಮಟ್ಟಿಗೆ ಸಿದ್ಧವಾಗಿದ್ದಾರೆ ಎನ್ನುವುದಕ್ಕೆ ಶೂಟಿಂಗ್ ತಾರೆಗಳೇ ಉತ್ತಮ ಉದಾಹರಣೆಯಾಗಿದ್ದಾರೆ. ಶೂಟಿಂಗ್ ತಂಡದಲ್ಲಿರುವ 10 ಮಂದಿಯಲ್ಲಿ ಎಲ್ಲರೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಆ ಪೈಕಿ 7 ಅಭ್ಯರ್ಥಿಗಳು ಅಂತರ್ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿಯಾಗಿದೆ.
ಈ ನಡುವೆಯೂ ಮಹತ್ವಾಂಕ್ಷೆಯ ಗುರಿ ತಲುಪುವುದು ಅಷ್ಟು ಸುಲಭವಲ್ಲ ಎನ್ನುವ ಸತ್ಯವನ್ನೂ ಕೂಡ ಅರಿಯಬೇಕಿದೆ. ದೇಶದ ಪ್ರಖ್ಯಾತ ಶೂಟರ್ ಸಮರೇಶ್ ಜಂಗ್ ಭಾರತ ಮತ್ತು ಚೀನಾ ನಡುವಿನ 'ಬಂಡವಾಳ ಹೂಡಿಕೆ'ಯ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾರೆ. 2012ರ ಒಲಿಂಪಿಕ್ಸ್ ಸಿದ್ಧತೆಗಾಗಿ ಚೀನಾ 2005-2006ರಲ್ಲಿಯೇ 28 ಅಂತರ್ ರಾಷ್ಟ್ರೀಯ ಮಟ್ಟದ ಶೂಟಿಂಗ್ ರೇಂಜ್‌ಗಳನ್ನು ಸಿದ್ಧಗೊಳಿಸಿ ತರಬೇತಿ ಆರಂಭಿಸಿದೆ. ಆದರೆ, ನಾವು 2010ರ ಹೊತ್ತಿಗೆ ಶೂಟಿಂಗ್ ರೇಂಜ್ ಸಿದ್ಧಗೊಳಿಸುವ ಬಗ್ಗೆ ಈಗಲೂ ಮಾತನಾಡುತ್ತಿದ್ದೇವೆ ಅಷ್ಟೆ ಎನ್ನುತ್ತಾರೆ ಸಮರೇಶ್.
ಒಲಿಂಪಿಕ್ಸ್‌ಗೆ ತರಬೇತಿ ಪಡೆಯುವುದು ಅಥವಾ ನೀಡುವುದು ಅಂದರೆ ಸುಲಭದ ಮಾತೇನಲ್ಲ. ಅದರಲ್ಲಂತೂ ಮಿಷನ್ ಒಲಿಂಪಿಕ್ಸ್‌ನಂತಹ ಕನಸು ನನಸಾಗಬೇಕಿದ್ದರೆ ಅಕ್ಷರಶಃ ಅಂತರ್ ರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರಗಳ ಅಗತ್ಯವಿರುತ್ತದೆ. ಈಗ ಪುಣೆಯಲ್ಲಿ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ 30 ಕೋಟಿ ರೂಪಾಯಿ ವೆಚ್ಚ ಮಾಡಿ ಅಂತಹ ಒಂದು ತರಬೇತಿ ಕೇಂದ್ರ ತೆರೆಯಲಾಗಿದೆ.
'ಮಿಷನ್ ಒಲಿಂಪಿಕ್ಸ್' ಜೊತೆಗೆ ಸೇನಾಪಡೆಯು 13 'ಬಾಯ್ಸ್ ಸ್ಪೋರ್ಟ್ಸ್ ಕಂಪನಿ'ಗಳನ್ನು ನಿರ್ಮಾಣ ಮಾಡಿದೆ. 12ರಿಂದ 15 ವಯಸ್ಸಿನೊಳಗಿನ ಎಳೆಯ ಪ್ರತಿಭೆಗಳನ್ನು ಹುಡುಕಿ ತೆಗೆದು 'ಬಾಯ್ಸ್ ಸ್ಪೋರ್ಟ್ಸ್ ಕಂಪನಿ'ಗೆ ಸೇರಿಸಿಕೊಳ್ಳಲಾಗುತ್ತಿದೆ. ಸಬ್ ಜೂನಿಯರ್ (8-12) ಮತ್ತು ಜೂನಿಯರ್ (12-15) ಪ್ರತಿಭೆಗಳನ್ನು 'ಕ್ಯಾಚ್ ದೆಮ್ ಯಂಗ್' ಕಾರ್ಯಕ್ರಮದಡಿ ತರಬೇತಿಗೆ ಆಯ್ಕೆ ಮಾಡಲಾಗುತ್ತಿದೆ.
ಒಂದೆಡೆ ಸೇನಾಪಡೆ 'ಮಿಷನ್ ಒಲಿಂಪಿಕ್ಸ್' ಹೆಸರಿನಲ್ಲಿ ಗಂಭೀರ ಪ್ರಯತ್ನ ನಡೆಸುತ್ತಿದ್ದರೂ, ಅದಕ್ಕೆ ಸರ್ಕಾರ ನೀಡುತ್ತಿರುವ ಹಣಕಾಸಿನ ಬೆಂಬಲ ಅಷ್ಟೇನೂ ಆರೋಗ್ಯಕರವಾಗಿ ಇಲ್ಲ. ತನ್ನ ತರಬೇತಿ ಬಜೆಟ್‌ನಿಂದ ಸೇನಾಪಡೆ 60 ಲಕ್ಷ ರೂಪಾಯಿಗಳನ್ನು ಈ ಯೋಜನೆಗಾಗಿ ಬಳಸಿಕೊಳ್ಳುತ್ತಿದೆ. ಈ ಹಣವನ್ನು ತರಬೇತಿ, ಅಭ್ಯರ್ಥಿಗಳ ಆಹಾರ ವೆಚ್ಚ, ವಸತಿ ವೆಚ್ಚ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ತರಬೇತುದಾರರ ಸೇವಾ ಶುಲ್ಕಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಈ ನಡುವೆ ಸೇನಾಪಡೆಯ ಇನ್ನಿತರ ಸಂಸ್ಥೆಗಳು ಕೂಡ 'ಮಿಷನ್ ಒಲಿಂಪಿಕ್ಸ್'ಗೆ ಬೆಂಬಲ ನೀಡುತ್ತಿವೆ. ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಲು ಅನುವು ಮಾಡಿಕೊಡಲಾಗಿದೆ. ನವದೆಹಲಿಯಲ್ಲಿರುವ ಆರ್ಮಿ ವೈವ್ಸ್ ವೆಲ್‌ಫೇರ್ ಅಸೋಸಿಯೇಷನ್ ಹಾಸ್ಟೆಲ್‌ನಲ್ಲಿ ಬಾಲಕಿಯರಿಗೆ ವಸತಿ ಸೌಕರ್ಯ ಕಲ್ಪಿಸಿಕೊಡಲಾಗಿದೆ.
ನವದೆಹಲಿಯಲ್ಲಿ ಅಥ್ಲೀಟ್‌ಗಳು ನೆಲೆ ನಿಂತಿದ್ದರೆ, ಮೀರತ್‌ನಲ್ಲಿ ಭವಿಷ್ಯದ ಈಕ್ವೆಷ್ಟ್ರಿಯನ್ ಚಾಂಪಿಯನ್‌ಗಳು ತಳವೂರಿದ್ದಾರೆ. ಮೀರತ್‌ನಲ್ಲಿರುವ ರಿಮೌಂಟ್ ವೆಟರ್ನರಿ ಕಾರ್ಪ್ಸ್ ಸೆಂಟರ್ ಅಂಡ್ ಕಾಲೇಜಿನ ಕಮಾಂಡೆಂಟ್ ಮೇಜರ್ ಜನರಲ್, ಜೆ.ಕೆ.ಶ್ರೀವಾಸ್ತವ, ಈ ಅಭ್ಯರ್ಥಿಗಳನ್ನು ನಾವು ಕೇವಲ ಅಂತರ್ ರಾಷ್ಟ್ರೀಯ ಅಥ್ಲೀಟ್‌ಗಳಾಗಿ ಪರಿವರ್ತಿಸುತ್ತಿಲ್ಲ. ಅದರ ಜೊತೆಯಲ್ಲಿಯೇ ತರಬೇತಿ ಮುಗಿದ ತಕ್ಷಣ ಅವರೆಲ್ಲರೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಸೇರುವಂತಾಗಬೇಕು. ಭಾರತೀಯ ಸೇನೆಗೆ ಸೇವೆ ಸಲ್ಲಿಸುವ ಜೊತೆಗೆ ಇನ್ನಷ್ಟು ಕ್ರೀಡಾಪಟುಗಳಿಗೆ ಮಾರ್ಗದರ್ಶಿಯಾಗಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. 'ಮಿಷನ್ ಒಲಿಂಪಿಕ್ಸ್' ಯೋಜನೆಯ ಅಭ್ಯರ್ಥಿಗಳು ಕೇವಲ ತರಬೇತಿ ಮಾತ್ರ ಪಡೆಯುತ್ತಿಲ್ಲ. ಜೊತೆ-ಜೊತೆಯಲ್ಲಿಯೇ ವಿವಿಧ ಸ್ಪರ್ಧೆಗಳಲ್ಲಿ ಕೂಡ ಭಾಗವಹಿಸುತ್ತಾ, ಪ್ರಶಸ್ತಿಗಳನ್ನು ಬಾಚಿಕೊಂಡು ಬರುತ್ತಿದ್ದಾರೆ. ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಈ ಯೋಜನೆಯ ಕೂಸು ಗುರುಪ್ರೀತ್ ಸಿಂಗ್ ಮಹತ್ವದ ದಾಖಲೆ ಮಾಡಿ ಎಲ್ಲರ ಗಮನ ಸೆಳೆದರು.
ಜೂನಿಯರ್ ವಿಭಾಗದಲ್ಲಿನ ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಾನು ಸ್ವರ್ಣ ಪದಕ ಗೆದ್ದೆ. ಅದರೊಂದಿಗೆ ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಕೂಡ ಚಿನ್ನ ದಕ್ಕಿತು. ನನಗೆ 17 ವರ್ಷ ವಯಸ್ಸಾಗಿದ್ದಾಗ ಸೇನೆಯನ್ನು ಸೇರಿದೆ. ಅದು ನನ್ನ ಶೂಟಿಂಗ್ ಸಾಮರ್ಥ್ಯವನ್ನು ಆಧರಿಸಿಯೇ ಆಯ್ಕೆಯಾಗಿದ್ದು. ಈಗ ನನಗೆ 20 ವರ್ಷ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ನನ್ನ ಸಾಮರ್ಥ್ಯದ ಮಟ್ಟದಲ್ಲಿ ಗಣನೀಯ ಬದಲಾವಣೆಗಳು ಆಗಿವೆ ಎಂದು ಗುರುಪ್ರೀತ್ ಹೆಮ್ಮೆಯಿಂದ ಹೇಳುತ್ತಾರೆ.
ಹೌದು ಮೇಲ್ನೋಟಕ್ಕೆ ಇದೊಂದು ಮಹತ್ವಾಕಾಂಕ್ಷೆಯ ಗುರಿಯೆನ್ನಿಸಬಹುದು. ಅದರಲ್ಲಿಯಂತೂ ಭಾರತೀಯ ಅಥ್ಲೆಟಿಕ್ ಲೋಕದ ಆಗು-ಹೋಗುಗಳ ಅರಿವಿದ್ದವರಿಗೆ ಇದು ಕಠಿಣ ಹಾದಿ ಎನ್ನಿಸಲೂಬಹುದು. ಆದರೆ ಮನಸ್ಸಿದ್ದಲಿ ಮಾರ್ಗ. ಲಂಡನ್ ಒಲಿಂಪಿಕ್ಸ್‌ಗೆ ಇನ್ನೂ ನಾಲ್ಕು ವರ್ಷಗಳ ಅವಧಿ ಇದೆ. ಆದರೆ ಜಾಗತಿಕ ಪಟುಗಳ ಜೊತೆಗಿನ ಸ್ಪರ್ಧೆಗೆ ಈ ಸಮಯ ಎಷ್ಟೂ ಸಾಲದು. ಚೀನಾ, ಅಮೆರಿಕ, ಆಸ್ಟ್ರೇಲಿಯಾದ ಕ್ರೀಡಾ ವೃತ್ತಿಪರರು ಈಗಾಗಲೇ ತರಬೇತಿಯ ಹಾದಿಯಲ್ಲಿ ಬಹುದೂರ ಸಾಗಿದ್ದಾರೆ. ನಮ್ಮ ಮಿಷನ್ ಒಲಿಂಪಿಕ್ಸ್ ಒಂದು ಬಹು ದೊಡ್ಡ ಸವಾಲು. ಒಂದಂತೂ ನಿಜ, ಸಾಧನೆಯ ಕಿಚ್ಚು ಮಾತ್ರ ಹೊತ್ತಿಕೊಂಡಾಗಿದೆ. ಆದರೆ, ಈ ಮಹಾತ್ವಾಕಾಂಕ್ಷೆಯ ಕಿಚ್ಚು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂದು ಕಾದು ನೋಡಬೇಕಷ್ಟೆ. ಎಲ್ಲವೂ ಅಂದುಕೊಂಡಂತೆಯೇ ನಡೆದಲ್ಲಿ, 'ಮಿಷನ್ ಒಲಿಂಪಿಕ್ಸ್' ಯಶಸ್ವಿಯಾಗುವ ಎಲ್ಲ ಸಾಧ್ಯತೆಗಳೂ ಇವೆ.

ಟಿಎಸ್‌ಐ

(ಪೂರಕ ಮಾಹಿತಿ: ಅಹಮದಾಬಾದ್‌ನಿಂದ ಮಾಯಾಂಕ್ ವ್ಯಾಸ್ ಮತ್ತು
ಪುಣೆಯಿಂದ ಶಶಾಂಕ್ ಶೇಖರ್)

 

ಇದುವರೆಗಿನ ಸಾಧನೆಗಳು

2005: ಮ್ಯಾಡ್ರಿಡ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಈ ತಂಡಕ್ಕೆ ಬೆಳ್ಳಿಯ ಪದಕ ಪ್ರಾಪ್ತವಾಯಿತು.

2006: ದೋಹಾ ಏಷ್ಯಾಡ್‌ನಲ್ಲಿ ಸುಬೇದಾರ್ ವಿಜಯ್ ಕುಮಾರ್‌ಗೆ ಶೂಟಿಂಗ್ ಸ್ವರ್ಣ ದಕ್ಕಿತು. ಜೊತೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ಸ್ವರ್ಣ; ಎಫ್‌ಇಐ ಮಕ್ಕಳ ಅಂತರ್ ರಾಷ್ಟ್ರೀಯ ಚಾಂಪಿಯನ್‌ಷಿಪ್.

2007: ಜೂನಿಯರ್ ನ್ಯಾಷನಲ್ ಈಕ್ವೆಷ್ಟ್ರಿಯನ್ ಚಾಂಪಿಯನ್‌ಷಿಪ್; ವಿಶ್ವ ಸೇನಾ ಕ್ರೀಡಾಕೂಟದಲ್ಲಿ ಒಂದು ಚಿನ್ನ ಹಾಗೂ ನಾಲ್ಕು ಕಂಚಿನ ಪದಕ.

2008: ಇಬ್ಬರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ; ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ

'ನಾವು ಕೂಡಾ ಅತಿ ಶ್ರೇಷ್ಠ ಮಟ್ಟದ ಅಥ್ಲೀಟ್‌ಗಳೇ'

'ಮಿಷನ್ ಒಲಿಂಪಿಕ್ಸ್' ಯೋಜನೆ ಮೂಲಕ ಬೆಳಕಿಗೆ ಬಂದ ಅತ್ಯಂತ ಶ್ರೇಷ್ಠ ಶೂಟರ್ ಅಭಿಲಾಷ ಜೋಷಿ ಜೊತೆ ಟಿಎಸ್‌ಐ ಸಂದರ್ಶನ.

ನಿಮ್ಮ ಗುರಿ ಏನು?

ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು. ಆ ನಿಟ್ಟಿನಲ್ಲಿ ನಾನು ದೃಢವಾದ ಹೆಜ್ಜೆ ಹಾಕುತ್ತಿದ್ದೇನೆ.

ತಂಡದ ಹಿರಿಯ ಸ್ಪರ್ಧಿಗಳೊಂದಿಗೆ ನೀವು ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ?

ನಾನು ನನ್ನಷ್ಟಕ್ಕೆ ತರಬೇತಿಯಲ್ಲಿ ಮುಳುಗಿರುತ್ತೇನೆ.

ನಿಮ್ಮ ಪೋಷಕರಿಂದ ಬೆಂಬಲ?

ತಂದೆ-ತಾಯಿ ಯಾವಾಗಲೂ ದೂರವಾಣಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿರುತ್ತಾರೆ. ಜಾವೇದ್ ಸರ್ (ಲೆಫ್ಟಿನೆಂಟ್ ಕರ್ನಲ್ ಜಾವೇದ್ ಅಸ್ಲಾಂ) ನನ್ನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಪ್ರತಿ ಬಾರಿ ಮಾತನಾಡಿದಾಗಲೂ ಮಗಳೇ ನಾವು ನಿನ್ನೊಂದಿಗೆ ಇದ್ದೇವೆ ಎಂಬ ಭರವಸೆ ನೀಡುತ್ತಾರೆ.

ತರಬೇತಿಯ ಜೊತೆ ಶಿಕ್ಷಣದತ್ತ ಹೇಗೆ ಹೆಚ್ಚಿನ ಗಮನ ನೀಡುತ್ತೀರಿ?

ಸಾಮಾನ್ಯವಾಗಿ ಸಂಜೆಯ ಹೊತ್ತು ಹೋಮ್ ವರ್ಕ್ ಮಾಡುತ್ತೇನೆ. ಟೂರ್ನಿಯಿಂದ ವಾಪಸಾದ ಮೇಲೆ ಶಿಕ್ಷಕರ ನೆರವಿನ ಮೂಲಕ ಬಾಕಿಯುಳಿದ ಪಾಠ- ಪ್ರವಚನಗಳನ್ನು ಅಭ್ಯಾಸ ಮಾಡಿ ಮನನ ಮಾಡಿಕೊಳ್ಳುವ ಯತ್ನ ಮಾಡುತ್ತೇನೆ.

ಸ್ಪರ್ಧಾಕಣದಲ್ಲಿ ಇರುವ ಉಳಿದ ಸ್ಫರ್ಧಿಗಳಿಗಿಂತ ನೀವು ಶ್ರೇಷ್ಠ ಮಟ್ಟದ ಪ್ರದರ್ಶನ ನೀಡುತ್ತೀರಿ ಎಂಬ ಭರವಸೆ ಹೇಗೆ ಹುಟ್ಟಿಕೊಳ್ಳುತ್ತದೆ?

ವಿದೇಶಗಳಲ್ಲಿನ ಸ್ಪರ್ಧಿಗಳು ಪ್ರತಿ ದಿನ 7-8 ಗಂಟೆ ಗಳಷ್ಟು ದೀರ್ಘ ಕಾಲ ತರಬೇತಿಗೆ ಒಳಗಾಗುತ್ತಾರೆ. ನಾವು ಮಧ್ಯಾಹ್ನದ ನಂತರ, ಅದೂ ದಿನಕ್ಕೆ 4 ಗಂಟೆ ಮಾತ್ರ ಅಭ್ಯಾಸ ಮಾಡುತ್ತೇವೆ. ಆದರೂ, ವಿದೇಶಿ ಅಥ್ಲೀಟ್‌ಗಳಷ್ಟೇ ಶ್ರೇಷ್ಠ ಪ್ರತಿಭೆ ನಮ್ಮಲ್ಲಡಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಭವಿಷ್ಯದ ಯೋಜನೆಗಳು?

ಭಾರತೀಯ ಸೇನಾ ಪಡೆ ಸೇರುತ್ತೇನೆ. ಜೊತೆ-ಜೊತೆಗೆ ವೃತ್ತಿಪರ ಶೂಟರ್ ಆಗುತ್ತೇನೆ.

ಅಥ್ಲೆಟಿಕ್ಸ್ ಮಟ್ಟಿಗೆ 20ರ ಗಡಿ ದಾಟಿದರೆ ಮುಗೀತು

ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ಗೆ ಸುಸ್ವಾಗತ. ಪುಣೆಯಲ್ಲಿ ಭಾರತದ ಒಲಿಂಪಿಕ್ಸ್ ಚಿನ್ನದ ಕನಸಿನ ಸಸಿಗೆ ನೀರೆರೆಯುತ್ತಿರುವ ಸಂಸ್ಥೆ ಇದು. 2000 ಇಸವಿ ಮಾತು. ಆಗಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಸೇನಾ ಪಡೆಯ ಮುಖ್ಯಸ್ಥ ಜನರಲ್ ಎಸ್.ಪದ್ಮನಾಭನ್ ಅವರ ಬಳಿ, ಭಾರತದ ಒಲಿಂಪಿಕ್ಸ್ ಚಿನ್ನದ ಕನಸನ್ನು ನನಸಾಗಿಸಲು ಸೇನೆ ಯಾವುದಾದರೂ ಯೋಜನೆ ಹಾಕಿಕೊಳ್ಳಬಹುದಲ್ಲಾ? ಎಂದು ಕೇಳಿದರು. ಆ ಪ್ರಶ್ನೆಗೆ ಉತ್ತರವಾಗಿ ಹುಟ್ಟಿಕೊಂಡಿದ್ದೇ 'ಮಿಷನ್ ಒಲಿಂಪಿಕ್ಸ್.'
ಆ ಸಂದರ್ಭದಲ್ಲಿ ಕೋಟ್ಯಂತರ ಕಾರಣಗಳು. ಸೊನ್ನೆ ಚಿನ್ನದ ಪದಕ ಎಂಬ ಈ ಮಾತೇ ಪದ್ಮನಾಭನ್ ಸಹೋದ್ಯೋಗಿಗಳ ಪಾಲಿಗೆ ಸ್ಫೂರ್ತಿಯಾಗಿದ್ದು. ಕರ್ನಲ್ ಸತ್ಪಾಲ್ ಅಹ್ಲಾವತ್ ಹಾಗೂ ಇನ್ನೂ ಅನೇಕ ಸೇನಾ ಪಡೆಯ ಅಧಿಕಾರಿಗಳು 'ಮಿಷನ್ ಒಲಿಂಪಿಕ್ಸ್' ಯೋಜನೆಯನ್ನು ಕಾರ್ಯಗತಗೊಳಿಸಿದರು. ಮೇಲಿನ ಘೋಷ ವಾಕ್ಯಕ್ಕೆ ಈಗ ಒಲಿಂಪಿಕ್ಸ್ ಪದಕ ಗೆಲ್ಲಲು ಮತ್ತು ಗೆದ್ದೇ ಗೆಲ್ಲುತ್ತೇವೆ ಎಂಬ ವಾಕ್ಯ ಸೇರಿಸಲಾಗಿದೆ.
ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಒಂದು ವಿಶಿಷ್ಠ ಸಂಸ್ಥೆ. ಸೇನಾಪಡೆ ಈ ಸಂಸ್ಥೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದರೂ, ಇಲ್ಲಿ ಅಂತಹ ಕಟ್ಟುನಿಟ್ಟಿನ 'ಸೇನಾ' ವಾತಾವರಣ ಇಲ್ಲ. ಖಾಸಗಿ ರಕ್ಷಣಾ ಪಡೆಯ ಸಿಬ್ಬಂದಿ ಗೇಟ್ ಮುಂಭಾಗದಲ್ಲಿ ನಿಂತು ಕಾವಲು ಕಾಯುತ್ತಾರೆ ಮತ್ತು ಇಲ್ಲಿ ಸಹಜವಾದ ನಾಗರಿಕ ವಾತಾವರಣವೇ ಇದೆ. ಕ್ರೀಡೆಯನ್ನು ಬಿಟ್ಟು ಬೇರೆ ಯಾವುದೇ ವಿಷಯ ಇಲ್ಲಿ ವಿಜೃಂಭಿಸುವುದು ನಮಗೆ ಬೇಡ ಎಂದು ಕರ್ನಲ್ ಅಹ್ಲಾವತ್ ಹೇಳುತ್ತಾರೆ.
ಕ್ರೀಡಾಸ್ಫೂರ್ತಿ ಮತ್ತು ಸಾಂಘಿಕ ಹೋರಾಟದ ಶಕ್ತಿ-ಸಾಮರ್ಥ್ಯದ ಅರಿವು ಮೂಡಿಸಲು ವಿವಿಧ ವಿಭಾಗಗಳಿಗೆ ಸೇರಿದ ಕ್ರೀಡಾಪಟುಗಳು ವಾರಕ್ಕೆ ಎರಡು ಬಾರಿ ಇಲ್ಲಿಗೆ ಬರುತ್ತಾರೆ. ಸ್ವದೇಶಿ ಹಾಗೂ ವಿದೇಶಿ ಕೋಚ್‌ಗಳು ಇಲ್ಲಿರುವ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಾರೆ. ಪ್ರತಿಯೊಂದು ವಿಭಾಗದಲ್ಲಿನ ಅಭ್ಯರ್ಥಿಗಳಿಗೂ ಅವರದೇ ಆದ ಆಹಾರ ಪದ್ಧತಿ ಜಾರಿಗೆ ತರಲಾಗಿದೆ. ಬೇರೆ ಕ್ರೀಡಾ ಸಂಸ್ಥೆಗಳಂತೆ ಇಲ್ಲಿಯೂ ಹಲವಾರು ವಿದೇಶಿ ತರಬೇತುದಾರರು ಇದ್ದಾರೆ. ಉದಾಹರಣೆಗೆ ಅಥ್ಲೀಟ್‌ಗಳ ವೈಯಕ್ತಿಕ ತರಬೇತಿಯ ಮೇಲ್ವಿಚಾರಣೆ ಯನ್ನು ಕ್ಯೂಬಾದ ಅಡಾಲ್ಬರ್ಟೊ ಕೊಲಾಜೊ ಮಾಸಿಯಾಸ್ ವಹಿಸಿಕೊಂಡಿದ್ದಾರೆ.
ಭಾರತದ ಕ್ರೀಡಾಲೋಕದಲ್ಲಿನ ಪ್ರಮುಖ ಕೊರತೆಯೆಂದರೆ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅತ್ಯಂತ ಸೂಕ್ತವಾದ ಪ್ರತಿಭೆಗಳನ್ನು ಗುರುತಿಸದೇ ಇರುವುದು. ಇಪ್ಪತ್ತರ ಗಡಿ ದಾಟಿದ ನಂತರ ಅಥ್ಲೀಟ್‌ಗಳನ್ನು ತರಬೇತಿಗೊಳಿಸುವುದು ಅಸಾಧ್ಯದ ಮಾತು. ಏನಿದ್ದರೂ ಹದಿಹರೆಯದಲ್ಲಿಯೇ ಸೂಕ್ತ ಪ್ರತಿಭೆಗಳಿಗೆ ತರಬೇತಿ ನೀಡಬೇಕು. ಜೊತೆಗೆ ಭಾರತೀಯ ಕೋಚ್‌ಗಳು ವೈಜ್ಞಾನಿಕ ತರಬೇತಿಗೆ ಹೆಚ್ಚು ಒತ್ತು ಕೊಡುತ್ತಿಲ್ಲ. ಇದರಿಂದಾಗಿ ಪ್ರತಿಭೆಗಳು ಕಮರಿ ಹೋಗುತ್ತಿವೆ ಎಂದು ಮಾಸಿಯಾಸ್ ಹೇಳುತ್ತಾರೆ.
ಕ್ಯೂಬಾದ ಏರಿಯಲ್ ಡುರಾನ್ ವಿಲ್ಸನ್ ಮತ್ತು ರಷ್ಯಾದ ಹಾರ್ಲೊ ಅವರು, ಮೂಲತಃ ಭಾರತೀಯ ಕೋಚ್‌ಗಳಿಗೆ ತಾಂತ್ರಿಕ ಜ್ಞಾನ ಬಹಳ ಕಡಿಮೆ. ಪಾಟಿಯಾಲದಲ್ಲಿರುವ ನೇತಾಜಿ ಸುಭಾಷ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಒಂದು ವರ್ಷ ಕಳೆದರೆ ಭಾರತದ ಕೋಚ್‌ಗಳಿಗೆ ಪದವಿ ಪತ್ರ ದೊರಕಿ ಬಿಡುತ್ತದೆ. ವಿದೇಶದಲ್ಲಾದರೆ ಈ ಪದವಿ ಗಳಿಸಲು ಕನಿಷ್ಠ 5 ವರ್ಷಗಳು ಬೇಕಾಗುತ್ತವೆ ಎಂದು ಅವರಿಬ್ಬರು ಹೇಳುತ್ತಾರೆ.
ಇಲ್ಲಿರುವ ಅಭ್ಯರ್ಥಿಗಳು ಮತ್ತು ಕರ್ನಲ್ ಕೂಡ ಆ ಮಾತಿಗೆ ದನಿಗೂಡಿಸುತ್ತಾರೆ. ನಮ್ಮ ಇಬ್ಬರೂ ಕೋಚ್‌ಗಳು ವಿಶ್ವ ಚಾಂಪಿಯನ್ನರು. ಅವರಿಬ್ಬರೂ ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಪ್ರತಿಯೊಂದು ಕ್ರೀಡೆಯ ನೀತಿ-ನಿಯಮಗಳಿಗೆ ಅನ್ವಯವಾಗಿಯೇ ತಾಂತ್ರಿಕ ಅಂಶಗಳನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಅಮೂಲ್ಯ ಸಲಹೆ ನೀಡುತ್ತಾರೆ ಎಂದು ವಿಶ್ವ ಸೇನಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ಮನೋಜ್ ಕುಮಾರ್ ಅವರ ಅನುಭವ ಹಂಚಿಕೊಳ್ಳುತ್ತಾರೆ. ಒಂದೋ ನೀವು ರಾಷ್ಟ್ರೀಯ ಮಟ್ಟದ ಸಾಧನೆಗಳಿಗೆ ತೃಪ್ತಿ ಪಟ್ಟು ಸುಮ್ಮನಾಗಬಹುದು. ಇಲ್ಲವಾದಲ್ಲಿ ಒಲಿಂಪಿಕ್ಸ್ ಗುರಿ ಮುಂದಿಟ್ಟು ಕೊಂಡು ಸಾಧನೆಯ ಹಾದಿಯಲ್ಲಿ ಮುಂದುವರಿಯಬಹುದು ಎಂಬ ಅವರ ಮಾತಿನಲ್ಲಿ ನೂರಾರು ಅರ್ಥಗಳಿದ್ದವು.

'ಇದು ವಿಶ್ವದರ್ಜೆಯ ತರಬೇತಿ ವ್ಯವಸ್ಥೆ'

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ 'ಮಿಷನ್ ಒಲಿಂಪಿಕ್ಸ್' ಅಭ್ಯರ್ಥಿ ಕುಲ್ವೀಂದರ್ ಸಿಂಗ್‌ಗೆ ಇನ್ನೂ 20ರ ಹರೆಯ. ಟಿಎಸ್‌ಐ ಜೊತೆ ಮಾತನಾಡುತ್ತಾ ಅವರು ಭಾರತೀಯ ಸೇನಾ ಪಡೆಯ ಗರಡಿಯಲ್ಲಿ ನಡೆಯುತ್ತಿರುವ ತರಬೇತಿ ವಿಶ್ವದರ್ಜೆಯದ್ದು ಎಂದಿದ್ದಾರೆ.

ನೀವು ಸೇನಾಪಡೆಯ ತೆಕ್ಕೆಗೆ ಸೇರಿಕೊಂಡಿದ್ದು ಹೇಗೆ?

ನನಗೆ 17 ವರ್ಷ ವಯಸ್ಸಾಗಿದ್ದಾಗ ಸೇನಾ ಪಡೆಯ ಕಣ್ಣಿಗೆ ಬಿದ್ದೆ. ಕೂಡಲೇ ನನ್ನನ್ನು ಸೇನೆಗೆ ಸೇರಿಸಿಕೊಂಡರು. ವಿದ್ಯಾರ್ಥಿ ದಿನಗಳಲ್ಲಿ ನಾನು ಎನ್‌ಸಿಸಿಯಲ್ಲಿದ್ದೆ. ಅಲ್ಲಿ ಒಬ್ಬ ಅತ್ಯುತ್ತಮ ಶೂಟರ್ ಎಂಬ ಹೆಸರು ಗಳಿಸಿದ್ದೆ.

ನಿಮಗೆ ದೊರಕುತ್ತಿರುವ ಬೆಂಬಲದ ಬಗ್ಗೆ ತೃಪ್ತಿಯಿದೆಯೇ?

ಖಂಡಿತ. ಶೂಟಿಂಗ್ ಸ್ಪರ್ಧೆಗೆ ತರಬೇತಿ ಪಡೆಯಬೇಕೆಂದರೆ ಬಹಳಷ್ಟು ಹಣ ಬೇಕು. ನನ್ನ ಪೋಷಕರು ಅಷ್ಟು ಹಣ ಸುರಿದು ನನ್ನನ್ನು ಒಬ್ಬ ಶೂಟರ್ ಆಗಿ ಮಾಡಲು ಸಾಧ್ಯವೇ ಇರಲಿಲ್ಲ. ಸೇನಾ ಕೃಪೆಯಿಂದ ನನ್ನ ಕನಸು ನನಸಾಗುತ್ತಿದೆ.

ನೀವು ಎಲ್ಲಿ ತರಬೇತಿ ಪಡೆಯುತ್ತಿದ್ದೀರಿ?

ಮೊಹ್ವನಲ್ಲಿ ತಾತ್ಕಾಲಿಕ ತರಬೇತಿ ಶಿಬಿರ ಇದೆ. ಅದು ಅಂತರ್ ರಾಷ್ಟ್ರೀಯ ಮಟ್ಟದ ತರಬೇತಿ ವ್ಯವಸ್ಥೆಗಳನ್ನು ಹೊಂದಿದೆ. ಸಾಮಾನ್ಯವಾಗಿ ನಾವು ಅಲ್ಲಿ ಸದಾ ತರಬೇತಿಗೆ ಒಳಗಾಗುತ್ತಿರುತ್ತೇವೆ.

ನಿಮ್ಮ ಕುಟುಂಬ ಎಲ್ಲಿದೆ ಮತ್ತು ಅವರು ಈ ಬಗ್ಗೆ ಏನು ಹೇಳುತ್ತಾರೆ?

ಅಮೃತಸರದಲ್ಲಿ ನನ್ನ ಕುಟುಂಬ ಇದೆ. ನಮ್ಮ ಕುಟುಂಬದ ಯಾವುದೇ ಒಬ್ಬರೂ ಇದುವರೆಗೆ ಸೇನೆಗೆ ಸೇರಿದವರಲ್ಲ. ಆದರೂ, ನಾನು ಸೇನೆ ಸೇರುವುದಕ್ಕೆ ಯಾರೂ ಅಡ್ಡಿ ಮಾಡಲಿಲ್ಲ. ನಮಗಿಲ್ಲಿ ಉತ್ತಮ ವಾತಾವರಣವಿದೆ ಹಾಗೂ ಉತ್ತಮ ತರಬೇತಿ ಕೂಡ ಸಿಗುತ್ತಿದೆ.

ಇದುವರೆಗಿನ ನಿಮ್ಮ ಸಾಧನೆ?

ನ್ಯಾಷನಲ್ ಜೂನಿಯರ್ ಶೂಟಿಂಗ್ ಚಾಂಪಿಯನ್‌ಷಿಪ್‌ನ 24 ಮೀಟರ್ ರ್‍ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದೇನೆ.

'ಕ್ರೀಡಾ ಭವಿಷ್ಯ ಇಲ್ಲಿ ಅಡಗಿದೆ'

ಮಿಲಿಟರಿ ಟ್ರೈನಿಂಗ್ ವಿಭಾಗದ ಮಹಾ ನಿರ್ದೇಶಕ ಮೇಜರ್ ಜನರಲ್ ವಿ.ಕೆ. ಅಹ್ಲುವಾಲಿಯ 'ಮಿಷನ್ ಒಲಿಂಪಿಕ್ಸ್' ಯೋಜನೆಯ ರೂವಾರಿಗಳಲ್ಲಿ ಒಬ್ಬರು. ಅವರು ಟಿಎಸ್‌ಐ ಜೊತೆ 'ಮಿಷನ್ ಒಲಿಂಪಿಕ್ಸ್' ಭವಿಷ್ಯದ ಬಗ್ಗೆ ಮಾತನಾಡುತ್ತಾ ಒಲಿಂಪಿಕ್‌ನ ವೈಯಕ್ತಿಕ ಕ್ರೀಡಾ ವಿಭಾಗದಲ್ಲಿ ಭಾರತ ಉತ್ತಮ ಸಾಧನೆ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.

'ಮಿಷನ್ ಒಲಿಂಪಿಕ್ಸ್' ಯೋಜನೆಗಾಗಿ ಯಾವ್ಯಾವ ಕ್ರೀಡಾ ವಿಭಾಗಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ? ಅವುಗಳನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದು?

ಶೂಟಿಂಗ್, ಈಕ್ವೆಸ್ಟ್ರಿಯನ್, ಅಥ್ಲೆಟಿಕ್ಸ್, ರೋಯಿಂಗ್, ಆರ್ಚರಿ, ಬಾಕ್ಸಿಂಗ್, ವೇಟ್ ಲಿಫ್ಟಿಂಗ್, ಸೈಲಿಂಗ್ ಮತ್ತು ಡೈವಿಂಗ್ ನಾವು ಆಯ್ಕೆ ಮಾಡಿಕೊಂಡ ಕ್ರೀಡಾ ವಿಭಾಗಗಳು. ವೈಯಕ್ತಿಕ ಪ್ರತಿಭೆ ಮತ್ತು ದೈಹಿಕ ಸಾಮರ್ಥ್ಯ ಮೇಳೈಸಿದಲ್ಲಿ ಮಾತ್ರ ಮೇಲಿನ ಕ್ರೀಡಾ ವಿಭಾಗಗಳಲ್ಲಿ ಮಹತ್ತರ ಸಾಧನೆ ಮಾಡಲು ಸಾಧ್ಯ. ವೈಯಕ್ತಿಕ ಕ್ರೀಡಾ ವಿಭಾಗಗಳ ಪೈಕಿ ಇವುಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ನಮ್ಮವರಿಗೆ ಇದೆ. ಇತ್ತೀಚೆಗೆ ನಾವು 'ಫೆನ್ಸಿಂಗ್' ಸ್ಪರ್ಧೆಯನ್ನು ಕೂಡಾ 'ಮಿಷನ್ ಒಲಿಂಪಿಕ್ಸ್' ಸ್ಪರ್ಧೆಗೆ ಸೇರಿಸಿಕೊಂಡಿದ್ದೇವೆ.

ನಿಮ್ಮ ಸಂಸ್ಥೆಯ ಇದುವರೆಗಿನ ಸಾಧನೆ ಬಗ್ಗೆ ನಿಮಗೆ ತೃಪ್ತಿಯಿದೆಯೇ?

'ಮಿಷನ್ ಒಲಿಂಪಿಕ್ಸ್' ಯೋಜನೆಯಡಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಸಾಧನೆಯ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2006ರ ಮೆಲ್ಬರ್ನ್ ಕಾಮನ್‌ವೆಲ್ತ್ ಕ್ರೀಡಾಕೂಟ, ದೋಹಾ ಏಷ್ಯನ್ ಕ್ರೀಡಾಕೂಟ ಮತ್ತು ಹೈದರಾಬಾದ್‌ನಲ್ಲಿ ನಡೆದ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ನಮ್ಮ ಪ್ರತಿನಿಧಿಗಳು ಮಹತ್ತರ ಸಾಧನೆಯನ್ನೇ ಮಾಡಿದ್ದಾರೆ. ಅವೆಲ್ಲವೂ ಸಂಸ್ಥೆಯ ಪಾಲಿಗೆ ಸ್ಫೂರ್ತಿದಾಯಕ ಸಾಧನೆಗಳೇ ಆಗಿವೆ.

ನಿಮ್ಮ ಮುಂದಿರುವ ಗುರಿ?

ಕಾಮನ್ ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವುದು ನಮ್ಮ ಮೂಲ ಗುರಿಯಾಗಿತ್ತು. ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನಮ್ಮ ಮಹತ್ತರ ಗುರಿ.

ಅಂತರ್ ರಾಷ್ಟ್ರೀಯ ಮಟಕ್ಕೆ ಹೋಲಿಸಿ ನೋಡಿದಾಗ ನಿಮ್ಮವರು ಎಲ್ಲಿ ನಿಲ್ಲುತ್ತಾರೆ?

'ಮಿಷನ್ ಒಲಿಂಪಿಕ್ಸ್' ಯೋಜನೆ ಇನ್ನೂ ಬಾಲ್ಯಾವಸ್ಥೆಯಲ್ಲಿಯೇ ಇದೆ. ಆದರೂ, ನಮ್ಮಲ್ಲಿರುವ ಕ್ರೀಡಾಪಟುಗಳು ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡೇ ಇದುವರೆಗೆ ಗಮನಾರ್ಹ ಸಾಧನೆಗಳನ್ನೇ ಮಾಡಿದ್ದಾರೆ. ಆದರೂ, ಗುರಿ ಕಠಿಣ ಹಾಗೂ ಬಹಳ ದೂರದಲ್ಲಿದೆ. ಇದಕ್ಕಾಗಿ ನಮ್ಮ ಕ್ರೀಡಾಪಟುಗಳು ಕಠಿಣ ತರಬೇತಿ ಕೈಗೊಳ್ಳುತ್ತಲೇ ಇದ್ದಾರೆ.

ನಿಮ್ಮ ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆ ಅತ್ಯಂತ ಕಠಿಣವಾದುದೇ?

ಏನಾದರೂ ಸಾಧನೆ ಮಾಡಬೇಕೆಂದರೆ ಕಠಿಣ ತರಬೇತಿ ಕೈಗೊಳ್ಳಬೇಕಾದುದು ಅಗತ್ಯವೆ. ಆದರೆ ತರಬೇತಿಯಲ್ಲಿ ಸಂತೋಷ ಕಾಣುತ್ತಾ ಹೋದರೆ ಯಾವುದೂ ಕಠಿಣ ಎನಿಸದು. ಸೇನಾ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವವರು ಹಾಗೂ ಸಬ್ ಜೂನಿಯರ್- ಜೂನಿಯರ್ ವಿಭಾಗಗಳಲ್ಲಿ ಗಮನ ಸೆಳೆಯುವ ಪ್ರತಿಭಾವಂತರನ್ನು ನಾವು ಆಯ್ಕೆ ಮಾಡಿಕೊಳ್ಳುತ್ತೇವೆ. ಕೋಚ್‌ಗಳು ಮತ್ತು ಕ್ರೀಡಾ ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿ ಪ್ರತಿಭೆಗಳನ್ನು ಗುರುತಿಸಿ ಆಯ್ಕೆ ಮಾಡುತ್ತದೆ. ವೈಯಕ್ತಿಕ ಪ್ರತಿಭೆಗಳಿಗೆ ಅನುಸಾರವಾಗಿ ಪ್ರತಿಯೊಬ್ಬರಿಗೂ ಅವರದೇ ಆದ ತರಬೇತಿಯ ಮಾದರಿಯನ್ನು ಸಿದ್ಧಗೊಳಿಸಲಾಗುವುದು. ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾ ಪರಿಕರಗಳನ್ನು ನಾವು ಒದಗಿಸುತ್ತೇವೆ. ಕಾಲ ಕಾಲಕ್ಕೆ ಪ್ರತಿಯೊಬ್ಬರ ಸಾಧನೆಯ ಅವಲೋಕನ ಕೂಡ ಆಗುತ್ತದೆ. ವಿದೇಶಿ ಕೋಚ್‌ಗಳು, ತಜ್ಞರು ಸದಾ ಅಭ್ಯರ್ಥಿಗಳ ಹಿಂದಿರುತ್ತಾರೆ. ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಕಳುಹಿಸಿಕೊಡುವ ಮೂಲಕ ಅವರನ್ನು ಜಗತ್ತಿಗೆ ತೆರೆದುಕೊಳ್ಳುವಂತೆ ಹುರಿದುಂಬಿಸಲಾಗುತ್ತದೆ.

'ಕ್ಯಾಚ್ ದೆಮ್ ಯಂಗ್' ಯೋಜನೆಯಡಿ ನೀವು ಪ್ರತಿಭೆಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ?

ಸಬ್ ಜೂನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ 'ಆಟ ಮತ್ತು ಪಾಠ' ಎಂಬ ತತ್ವದ ಆಧಾರ ಮೇಲೆ ನಾವņ