ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಅತಿಥಿ ಅಂಕಣ
 
ಸಲಿಂಗಕಾಮ : ಹೆಣ್ಣು-ಹೆಣ್ಣಿನ ಪ್ರೀತಿ, ಪ್ರೇಮ, ಪ್ರಣಯ...
 

ನಿಸರ್ಗದತ್ತವಾದ ಒಂದು ಸಹಜ ಜೈವಿಕ ಕ್ರಿಯೆಗೆ ನಾಗರಿಕ ಸಮಾಜದಲ್ಲಿ ಇನ್ನೂ ಗೌರವದ ಸ್ಥಾನ ಸಿಕ್ಕೇ ಇಲ್ಲ

ಡಾ. ಶುಭಾ ದಾಸ್ ಮರವಂತೆ

ಲೇಖಕಿ

ನಾವು ಒಬ್ಬರನ್ನೊಬ್ಬರು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ನಮ್ಮ ಸಲಿಂಗ ಪ್ರೇಮವನ್ನು ಈ ಸಮಾಜ ಒಪ್ಪಿಕೊಳ್ಳುವುದಿಲ್ಲ. ಈ ವಿಷಯ ಗೊತ್ತಾದ ಮೇಲೆ ನಮ್ಮ ಸಂಬಂಧದ ಬಗ್ಗೆ ಹಲವಾರು ಮಾತುಗಳು ಕೇಳಿ ಬರುತ್ತಿವೆ. ನಾವಿಬ್ಬರೂ ಮದುವೆಯಾದರೂ ಜೊತೆಯಾಗಿ ಬದುಕಲು ಇವರು ಬಿಡುವುದಿಲ್ಲ
- ಗೀತಾಲಕ್ಷ್ಮೀ ಮತ್ತು ಸುಮತಿ ಎಂಬ ಪ್ರೇಮಿಕೆಯರು ಬರೆದಿಟ್ಟು ಹೋದ ಆತ್ಮ(ಹತ್ಯಾ)ಕಥನವಿದು. ಸಲಿಂಗ ಸಂಬಂಧದಲ್ಲಿ ಪ್ರೇಮಿಸತೊಡಗಿದ ಒಂದೇ ಕಾರಣಕ್ಕಾಗಿ ಬದುಕುವ ಅವಕಾಶವನ್ನು ಸಮಾಜ ಇವರಿಗೆ ನೀಡಲಿಲ್ಲ. ಇದು ಇವರಿಬ್ಬರ ಕಥೆಯಲ್ಲ; 'ಹಮ್ ಜಿನ್ಸಿ' ಎಂಬ ಕೃತಿಯೊಂದು ಕಳೆದ 5 ವರ್ಷಗಳಲ್ಲಿ ನಡೆದ ಇಂತಹ 30 ದುರಂತ ಕಥೆಗಳನ್ನು ದಾಖಲಿಸಿದೆ. ಬಯಸಿದ ಜೀವನವನ್ನು ಬದುಕಲಾಗದೆ, ಕುಟುಂಬ, ಬಂಧು ವರ್ಗದ ಸಹಕಾರವಿಲ್ಲದೆ, ಸಮಾಜ ಕಾನೂನಿನ ರಕ್ಷಣೆಯಿಲ್ಲದೆ ನೋವು-ನಿರಾಶೆಯಲ್ಲಿ ನರಳುವ ಎಷ್ಟೋ ನತದೃಷ್ಟ ಜೀವಗಳು ನಮ್ಮೊಂದಿಗಿವೆ. ಸಲಿಂಗ ಕಾಮದ ಬಗ್ಗೆ ಮುಕ್ತವಾಗಿ ಮಾತನಾಡುವುದೂ ಅಪರಾಧ, ಪ್ರತಿಷ್ಠೆಯ ವಿಷಯವೆಂದು ಭಾವಿಸುವ ಬುದ್ಧಿಜೀವಿಗಳು ಇದನ್ನು ಒಪ್ಪಿಕೊಳ್ಳುವುದಂತೂ ದೂರವೇ ಉಳಿಯಿತು.
ಸಲಿಂಗ ಸಂಬಂಧ ಪ್ರಕೃತಿಯ ಒಂದು ವೈಚಿತ್ರ್ಯ. ತೀರಾ ಸೂಕ್ಷ್ಮವಾದ ಆದರೆ ಅಷ್ಟೇ ಗಂಭೀರವಾದ ವಾಸ್ತವ ಸಂಗತಿ. ಗಂಡು-ಗಂಡಿನ ನಡುವೆ, ಹೆಣ್ಣು-ಹೆಣ್ಣಿನ ನಡುವೆ ಲೈಂಗಿಕ ಸಂಬಂಧ ಏರ್ಪಡಲು ಸಾಧ್ಯವೇ? ಇದು ಪ್ರಕೃತಿ ವಿರೋಧಿಯಲ್ಲವೇ? ಇಂತಹ ಆಧುನಿಕ ಯುಗದ ವಿಕೃತಿಗಳು ಸಮಾಜ ಜೀವನದ ಸ್ವಾಸ್ಥ್ಯವನ್ನು ಕೆಡಿಸುವುದಿಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿದರೂ ಆಶ್ಚರ್ಯವಿಲ್ಲ. ಹಾಗೆ ನೋಡಿದರೆ ಮನುಷ್ಯ- ಜೀವಜಗತ್ತು - ಪ್ರಕೃತಿ ಇವುಗಳ ಎಷ್ಟೋ ಸಂಗತಿಗಳು ಇಂದಿಗೂ ನಮಗೆ ಅಪರಿಚಿತವಾಗೇ ಉಳಿದಿವೆ. ಸಲಿಂಗ ಸಂಬಂಧವೂ ಇದಕ್ಕೆ ಹೊರತಾದುದಲ್ಲ. ಮಾನವ ಕುಲದ ಹುಟ್ಟಿನಿಂದಲೂ ಈ ಬಗೆಯ ವರ್ತನೆ ಇದೆ. ಈ ಬಗ್ಗೆ ಪುರಾಣ, ಇತಿಹಾಸಗಳಿಂದ ಸಾಕಷ್ಟೂ ಉದಾರಣೆಗಳು ನಮಗೆ ದೊರೆಯುತ್ತವೆ.
ಸಲಿಂಗ ಸಂಬಂಧ ಸಮಾಜ ಜೀವನಕ್ಕೆ ಮಾರಕವಾದುದು ಎಂಬ ಅಭಿಪ್ರಾಯ ಸರ್ವೇ ಸಾಮಾನ್ಯ. ಕುಟುಂಬವೆಂಬ ಚಿಕ್ಕ ಘಟಕದಿಂದಲೇ ಇದಕ್ಕೆ ವಿರೋಧ ಪ್ರಾರಂಭವಾಗುತ್ತದೆ. ಮನೆಬಿಟ್ಟು ಎಲ್ಲಾದರೂ ಹೋಗಿ ಬದುಕೋಣವೆಂದರೆ ಉದ್ಯೋಗ ಕ್ಷೇತ್ರದಲ್ಲೂ ಸಮಸ್ಯೆ ಎದುರಾಗುತ್ತದೆ. ಕಾನೂನಿನ ರಕ್ಷಣೆಯೂ ದೊರೆಯುವುದಿಲ್ಲ. ಇಂಥವರು ಬೇರೆ ದಾರಿಯಿಲ್ಲದೆ ಸಾವಿಗೆ ಶರಣಾಗುತ್ತಾರೆ. ಹಲವು ಸಲಿಂಗ ಪ್ರೇಮಿಗಳು ಇದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ. 1995ರಲ್ಲಿ ಗೀತಾ ಮತ್ತು ಸೈಜಾ ಎಂಬ ಯುವತಿಯರು ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದು, ಇದರಲ್ಲಿ ಗೀತಾ ಎಂಬ ಹುಡುಗಿಗೆ ಬಲವಂತವಾಗಿ ಮದುವೆ ಮಾಡಲಾಯಿತು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರೂ ವಿಷ ಕುಡಿದು ಸತ್ತು ಹೋದರು. 2005ರಲ್ಲಿ ಗೇರು ಬೀಜದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹುಡುಗಿಯರು ಜೊತೆಯಾಗಿ ಬದುಕುವ ಇಂಗಿತವನ್ನು ವ್ಯಕ್ತಪಡಿಸಿದರು. ಕಾನೂನು ಅವರಿಗೆ ಅನುಮತಿ ಕೊಡಲಿಲ್ಲ. ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಯತ್ನಿಸಿದರು. ಅವರ ದುಸ್ಥಿತಿಯನ್ನು ಕಂಡ ವೃದ್ಧ ಮಹಿಳೆಯೊಬ್ಬಳು ಅವರಿಗೆ ಆಶ್ರಯ ನೀಡಿದಳು. ಆದರೆ ಪೊಲೀಸ್ ಪಡೆ ಹುಡುಕಾಟ ನಡೆಸಿ ಅವರಿಬ್ಬರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು. ಕಾನೂನಿನ ಆದೇಶ ಪಾಲಿಸುವುದು ಅವರಿಗೆ ಅನಿವಾರ್ಯವಾಯಿತು. 2001ರಲ್ಲಿ ವೈವಾಹಿಕ ಬಂಧನಕ್ಕೆ ಒಳಗಾದ ತನುಜಾ ಚವ್ಹಾಣ್-ಜಯಾವರ್ಮ ಎಂಬುವವರು ಸಲಿಂಗ ದಂಪತಿ ಎಂಬ ವಿಷಯ ತಿಳಿದ ತಕ್ಷಣ ಅವರ ಮನೆಯ ಮಾಲೀಕ ಅವರನ್ನು ಮನೆ ಬಿಟ್ಟು ಹೊರ ನಡೆಯುವಂತೆ ಸೂಚಿಸಿದ. ಮಧ್ಯ ಪ್ರದೇಶದ ಗ್ರಾಮೀಣ ಪ್ರದೇಶದಿಂದ ಬಂದ ಊರ್ಮಿಳ ಶ್ರೀವಾಸ್ತವ-ಲೀಲಾ ನಾಮ್ ದೇವ್ 40 ಜನರ ಮುಂದೆ ವಿಧ್ಯುಕ್ತವಾಗಿ ದೇವಸ್ಥಾನದಲ್ಲಿ ಮದುವೆಯಾದ ವಿಷಯ ಪತ್ರಿಕೆಯಲ್ಲಿ ಬಂದ ಕೂಡಲೇ ಪೊಲೀಸ್ ಇಲಾಖೆ ಅವರನ್ನು ಕೆಲಸದಿಂದ ವಜಾ ಮಾಡಿತು.
ಈ ಮೇಲಿನ ಎಲ್ಲಾ ಘಟನೆಗಳು ಸಲಿಂಗ ಸಂಬಂಧವನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ? ಎಂಬುದಕ್ಕೆ ಉದಾಹರಣೆಗಳಾಗಿವೆ. ಇದರ ಬಗೆಗಿನ ತಪ್ಪು ಗ್ರಹಿಕೆಗಳೆ ಇದಕ್ಕೆಲ್ಲ ಕಾರಣವೆನ್ನಬಹುದು. ಸಲಿಂಗ ಕಾಮವನ್ನು ರೋಗವೆಂದು ಪರಿಗಣಿಸುವವರೂ ಇದ್ದಾರೆ. ಅಕ್ಕ-ತಂಗಿ, ತಾಯಿ-ಮಗಳು, ಸ್ನೇಹಿತೆ-ಸ್ನೇಹಿತೆಯರು, ಅತ್ತೆ-ಸೊಸೆ ಈ ಮೊದಲಾದ ಸಂಬಂಧಗಳಲ್ಲೂ ಸಮಾನ ಲಿಂಗದ ಬಾಂಧವ್ಯವಿದೆ. ಇದು ಯಾವುದೇ ಕಾರಣಕ್ಕೂ ಪ್ರಶ್ನಾರ್ಹವಲ್ಲ. ಯಾವಾಗ ಅದು ದೈಹಿಕ ಹಾಗೂ ಭಾವನಾತ್ಮಕ ಸಂಬಂಧದ ಮೂಲಕ ಪರಸ್ಪರ ಅವಲಂಬನೆಗೆ ಕಾರಣವಾಗಿ ಮದುವೆ ಎಂಬ ವ್ಯವಸ್ಥೆಯನ್ನು ಧಿಕ್ಕರಿಸುತ್ತದೊ ಆಗ ಅದು ಪ್ರಶ್ನಾರ್ಹವಾಗುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಲೈಂಗಿಕತೆ ಎನ್ನುವುದು ವಿವಾಹವೆಂಬ ಸಂಸ್ಥೆಯಿಂದ ನಿರ್ಬಂಧಿಸಲ್ಪಟ್ಟ್ಟಿದೆ. ಸಂತಾನೋತ್ಪತ್ತಿ ಇದರ ಪ್ರಧಾನ ಕಾರ್ಯ. ಸ್ತ್ರೀ-ಪುರುಷರ ಸಂಬಂಧವೇ ಇದರ ಜೀವ. ಈ ವ್ಯವಸ್ಥೆಯೊಳಗೆ ಜೀವಿಸುವ ಜೀವನ ವಿಧಾನಕ್ಕೊಂದು ಸಾಮಾಜಿಕ, ಧಾರ್ಮಿಕ ಮಾನ್ಯತೆ ದೊರೆಯಿತು. ಅದರಾಚೆಗಿನ ವಸ್ತು-ವಿಷಯಗಳೆಲ್ಲ ಅಸಹಜವೆನಿಸತೊಡಗಿತು. ಈ ಕೆಲವು ಕಾರಣಕ್ಕಾಗಿಯೆ ಸಲಿಂಗ ಸಂಬಂಧ ಜೀವ ವಿರೋಧಿ, ಅನೈಸರ್ಗಿಕ, ಅಸಹಜವೆನಿಸಿತು.
ಆದರೆ ನಿಸರ್ಗದ ನಿಗೂಢತೆಯನ್ನು ಆರ್ಥೈಸಿಕೊಂಡವರಿಗಾರಿಗೂ ಸಲಿಂಗಕಾಮ ಪ್ರಕೃತಿ ವಿರೋಧಿ ಎನಿಸುವುದಿಲ್ಲ. ಸಾಮಾನ್ಯವಾಗಿ ಈ ಪ್ರಕೃತಿಯಲ್ಲಿ ಮೂರು ಬಗೆಯ ಲೈಂಗಿಕ ಪ್ರವೃತ್ತಿಗಳಿವೆ. ಭಿನ್ನ ಲೈಂಗಿಕತೆ (Hetrosexual): ಸ್ತ್ರೀ-ಪುರುಷರೆಂಬ ಭಿನ್ನ ಶಾರೀರಿಕ ಅವಯವಗಳಲ್ಲಿ ನಡೆಯುವ ಲೈಂಗಿಕ ಸಂಬಂಧ. ಸಲಿಂಗಕಾಮ (Homosexual): ಸ್ತ್ರೀ-ಸ್ತ್ರೀಯರ ನಡುವೆಯೂ, ಪುರುಷ-ಪುರುಷರ ನಡುವೆಯೂ ಸಮ ಲಿಂಗೀಯ ಸಂಬಂಧ. ಉಭಯ ಲೈಂಗಿಕತೆ (Bisexual): ಸ್ತ್ರೀ-ಪುರುಷರಿಬ್ಬರೂ ಪರಸ್ಪರ ಸಮ ಲಿಂಗೀಯರಲ್ಲೂ, ಭಿನ್ನ ಲಿಂಗೀಯರಲ್ಲೂ ಇರಿಸಿಕೊಳ್ಳಬಹುದಾದ ದೈಹಿಕ ಸಂಬಂಧ. ಸ್ತ್ರೀ ಪುರುಷರೆಂಬ ಭಿನ್ನ ಜೈವಿಕ ಶಕ್ತಿಗಳು ಒಂದೇ ಜೀವಿಯಲ್ಲಿರುವ ವಿಸ್ಮಯವನ್ನು gynandromorphisn (ನಮ್ಮ ಪುರಾಣದಲ್ಲಿರುವ ಅರ್ಧ ನಾರೀಶ್ವರನ ಪರಿಕಲ್ಪನೆ) ಎಂದೂ, ಪುರುಷನ ಸಂಪರ್ಕವಿಲ್ಲದೆ ಅಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡಬಲ್ಲ ವಿಧಾನವನ್ನು ಪಾರ್ಥನೋಜೆನೆಟಿಕ್ (parthenogenetic) ಎಂದು ವಿಜ್ಞಾನ ಗುರುತಿಸುತ್ತದೆ. ಈ ಬಗೆಯ ವರ್ತನೆಗಳು ಸೃಷ್ಟಿಯಲ್ಲಿ ಸರ್ವೇ ಸಾಮಾನ್ಯ. ಕ್ರಿಮಿ-ಕೀಟ, ಕೆಲವು ಜಾತಿಯ ಮೀನು, ಉಭಯವಾಸಿಗಳು, ಸರೀಸೃಪಗಳು, ಸಸ್ತನಿಗಳು, ಪಕ್ಷಿಗಳಲ್ಲಿ ಸಲಿಂಗಕಾಮ ತೀರಾ ಸಹಜವಾದುದು. ಅದಕ್ಕೆ ಯಾವುದೇ ಬಗೆಯ ನಿರ್ಬಂಧ ಪ್ರಕೃತಿಯಿಂದ ಒದಗಿ ಬಂದಿಲ್ಲ. ಈ ಕುರಿತು ಹೆಚ್ಚಿನ ಅಧ್ಯಯನಗಳು ಜೀವ ವಿಜ್ಞಾನ ಕ್ಷೇತ್ರದಲ್ಲಿ ನಡೆಯಬೇಕಾದ ಅಗತ್ಯವಿದೆ.
ಸಲಿಂಗ ಸ್ನೇಹಕ್ಕೆ ಪೂರಕವಾದ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗುವುದರಿಂದ ಅಪಾಯಗಳಿಗಿಂತ ಅನುಕೂಲಗಳೇ ಜಾಸ್ತಿ ಎನಿಸುತ್ತದೆ. ವಿವಾಹ ಅಥsವಾ ಒಂಟಿತನ ಎಂಬೆರಡು ಆಯ್ಕೆಯ ನಡುವೆ ಮಹಿಳೆಗೆ ಪರ್ಯಾಯ ಜೀವನ ವಿಧಾನವೊಂದು ದೊರೆತಂತಾಗುತ್ತದೆ. ಸ್ತ್ರೀ ಲೈಂಗಿಕ ಉಪಭೋಗದ ವಸ್ತುವೆಂಬ ಪುರುಷ ಪ್ರಧಾನ ಅಹಮಿಕೆಗೊಂದು ಸರಿಯಾದ ಸವಾಲನ್ನು ಇದು ಒಡ್ಡುತ್ತದೆ. ನಮ್ಮ ಕಾನೂನಿನ ಪ್ರಕಾರ ಇದು ಶಿಕ್ಷಾರ್ಹ ಅಪರಾಧವೆನಿಸಿದರೂ ಡೆನ್ಮಾರ್ಕ್, ಸ್ವೀಡನ್, ನಾರ್ವೆಗಳಲ್ಲಿ ಲೆಸ್ಬಿಯನ್ ದಾಂಪತ್ಯ, ಮದುವೆಗೆ ಅವಕಾಶವಿದೆ. ಭಾರತದಲ್ಲೂ ಇಂತಹ ಅವಕಾಶ ನಿರ್ಮಾಣಕ್ಕಾಗಿ ಎಷ್ಟೋ ಗುಪ್ತ ಸಲಿಂಗ ಸಂಘಟನೆಗಳು ಪ್ರಯತ್ನಿಸುತ್ತಿವೆ. ಅಂತರ್ಜಾಲದ ವಿಶ್ವ ಸಂಬಂಧ, ಜಾಗತೀಕರಣ ಇಂತಹ ಸಂಘಟನೆಗಳಿಗೆ ಇನ್ನಷ್ಟು ಬಲವನ್ನು ನೀಡಿವೆ. ಸಹಜ ಜೀವ ಸಂವೇದನೆಯ ಪ್ರಜ್ಞಾವಂತ ಪರಿಸರದಲ್ಲಿ ಇದು ಕಾರ್ಯಗತವಾಗಬೇಕಾದರೆ ಇನ್ನೆಷ್ಟು ದಿನಗಳು ಬೇಕಾಗಬಹುದೋ? ಕಾದು ನೋಡಬೇಕಾಗಿದೆ.

ಟಿಎಸ್‌ಐ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .