ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಆರೋಗ್ಯ ವಿಮೆ
 
ಎರಡು ಯೋಜನೆಗಳ ಒಳಗುಟ್ಟು
 

ಹಿಲರಿ ಅಧಿಕಾರಕ್ಕೆ ಬಂದರೆ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳ್ಳುವ ಸಾಧ್ಯತೆ ಇದೆ

ಪಾಲ್ ಕ್ರುಗ್ಮನ್

ಅರ್ಥಶಾಸ್ತ್ರಜ್ಞ,
’ದ ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ

ಹಿಲರಿ ಕ್ಲಿಂಟನ್ ಮತ್ತು ಬಾರಕ್ ಒಬಾಮಾ ಅವರ ನೀತಿಗಳ ನಡುವಿನ ಪ್ರಧಾನ ವ್ಯತ್ಯಾಸವೆಂದರೆ ಆರೋಗ್ಯ ವಿಮೆಗೆ ಸಂಬಂಧಪಟ್ಟಿದ್ದು. ಈ ವ್ಯತ್ಯಾಸ ತಾಂತ್ರಿಕವಾಗಿದ್ದು ಅರ್ಥ ಮಾಡಿಕೊಳ್ಳಲು ಕಠಿಣ ಎಂಬಂತೆ ಭಾಸವಾಗಬಹುದು. ಆದರೆ ನಾನು ಈ ಯೋಜನೆಗಳಲ್ಲಿನ ಸಮಸ್ಯೆಯ ಬಗೆಗಿನ ಮಾತುಗಳನ್ನು ಕೇಳಿದ್ದೇ ಹೆಚ್ಚು. ಇಲ್ಲಿ ಎರಡೂ ಅಭ್ಯರ್ಥಿಗಳು ಜನರನ್ನು ತಲುಪಲು ಅನುಸರಿಸುತ್ತಿರುವ ವಿಧಾನಗಳಲ್ಲಿ ಬಹಳ ದೊಡ್ಡ ವ್ಯತ್ಯಾಸವಿದೆ. ಈ ಕುರಿತು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೊಸ ಸಂಶೋಧನೆ ನನ್ನ ಹೇಳಿಕೆಯನ್ನು ಖಚಿತಪಡಿಸುತ್ತಿದೆ: ಈ ವ್ಯತ್ಯಾಸ ಅಭಿವೃದ್ಧಿಯ ಬಹುಮುಖ್ಯ ಅಂಶವಾದ ಜಾಗತಿಕ ಆರೋಗ್ಯ ರಕ್ಷಣೆಯ ಗುರಿ ಸಾಧನೆ ಅಥವಾ ಆ ಹಾದಿಯಲ್ಲಿನ ಸಮಸ್ಯೆಗಳ ಕುರಿತದ್ದಾಗಿರಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಹೊಸ ಲೆಕ್ಕಾಚಾರಗಳ ಪ್ರಕಾರ ಒಬಾಮಾ ಅವರ ನೀತಿಗೆ ಹೋಲಿಸಿದರೆ, ಹಿಲರಿ ಕ್ಲಿಂಟನ್ ಅವರ ಯೋಜನೆ ಈಗ ವಿಮಾ ವ್ಯಾಪ್ತಿಗೆ ಒಳಪಡದವರಿಗಿಂತ ಸರಿಸುಮಾರು ಎರಡು ಪಟ್ಟು ಹೆಚ್ಚು ಜನರನ್ನು ಒಳಗೊಳ್ಳಬಹುದು. ಆದರೆ ಅವರ ಯೋಜನೆ ಒಬಾಮಾ ಅವರದಕ್ಕಿಂತ ಕೊಂಚ ದುಬಾರಿಯದ್ದು. ಈಗ ಈ ಎರಡೂ ಯೋಜನೆಗಳ ಸಾದೃಶ್ಯವನ್ನು ಚರ್ಚಿಸೋಣ. ಈ ಎರಡೂ ಯೋಜನೆಗಳಿಗೆ ಖಾಸಗಿ ವಿಮಾ ಕಂಪನಿಗಳು ವಿಮಾದಾರರ ಆರೋಗ್ಯ ಇತಿಹಾಸವನ್ನು ಪರಿಗಣಿಸದೆ ವಿಮೆ ನೀಡಬೇಕಿದೆ. ಇದರ ಬದಲಿಗೆ ಜನರು ಸರ್ಕಾರಿ ಆರೋಗ್ಯ ವಿಮೆಯನ್ನು ಹೊಂದುವುದಕ್ಕೂ ಎರಡೂ ನೀತಿಗಳಲ್ಲಿ ಅವಕಾಶ ಇದೆ. ಈ ಎರಡೂ ಯೋಜನೆಗಳು ಅತ್ಯಲ್ಪ ಆದಾಯ ಹೊಂದಿರುವ ಅಮೆರಿಕನ್ನರಿಗೂ ವಿಮೆ ಭರಿಸಲು ಸಾಧ್ಯವಾಗುವಂತೆ ಮಾಡಲು ಹೆಣಗುತ್ತಿವೆ. ಇಲ್ಲಿ ವಿಮೆಯ ವೆಚ್ಚ ಕುಟುಂಬ ಆದಾಯದ ಅನುಪಾತಕ್ಕೆ ಸಮನಾಗಿರುವಂತೆ ನೋಡಿಕೊಳ್ಳುವ ಭರವಸೆಯ ಮೂಲಕ, ವಿಮೆ ಭರಿಸಲು ಯೋಗ್ಯವಾಗಿರುವಂತೆ ಮಾಡುವಲ್ಲಿ ಕ್ಲಿಂಟನ್ ಯೋಜನೆ ಹೆಚ್ಚು ಪಾರದರ್ಶಕವಾಗಿದೆ. ಅಲ್ಲದೆ ಅದು ಸಹಾಯಧನಕ್ಕಾಗಿ ಹೆಚ್ಚಿನ ನಿಧಿಯನ್ನು ಒಳಗೊಳ್ಳುವಂತೆ ಕಾಣುತ್ತಿದೆ. ಆದರೆ ಈ ಎರಡೂ ಯೋಜನೆಗಳ ನಡುವೆ ಇರುವ ದೊಡ್ಡ ವ್ಯತ್ಯಾಸವೆಂದರೆ ಕಡ್ಡಾಯದ್ದು: ಕ್ಲಿಂಟನ್ ಯೋಜನೆ ಪ್ರತಿಯೊಬ್ಬರೂ ವಿಮೆ ಹೊಂದುವುದನ್ನು ಕಡ್ಡಾಯಗೊಳಿಸಿದರೆ ಒಬಾಮಾ ಯೋಜನೆಯಲ್ಲಿ ಇದು ಇಲ್ಲ. ಯೋಜನೆ ಯೋಗ್ಯವಾಗಿದ್ದರೆ ಜನ ಅದನ್ನು ಕೊಳ್ಳುತ್ತಾರೆ ಎಂಬುದು ಒಬಾಮಾ ನಿಲುವು. ಆದರೆ ದುರದೃಷ್ಟವಶಾತ್, ದಾಖಲೆಗಳು ಬೇರೆಯದನ್ನೇ ಹೇಳುತ್ತಿವೆ. ಅಲ್ಪ ಆದಾಯವುಳ್ಳ ಬಹಳಷ್ಟು ಅಮೆರಿಕನ್ನರಿಗೆ ಉಚಿತ ಅಥವಾ ಅತ್ಯಲ್ಪ ಮೊತ್ತದಲ್ಲಿ ದೊರಕುವ ಆರೋಗ್ಯ ವಿಮೆ ಯೋಜನೆಗಳು ಈಗಾಗಲೇ ಲಭ್ಯ ಇವೆ. ಆದರೂ ನಾನಾ ಕಾರಣಕ್ಕೆ ಹಲವಾರು ಅರ್ಹ ಕುಟುಂಬಗಳು ಈ ಯೋಜನೆಗಳಲ್ಲಿ ನೋಂದಾಯಿಸಿಕೊಳ್ಳುವಲ್ಲಿ ವಿಫಲವಾಗಿವೆ. ಹಾಗೆಯೇ ತಾವು ಖಾಯಿಲೆ ಬೀಳುವವರೆಗೆ ಯಾವುದೇ ವಿಮೆ ಮಾಡಿಸಿಕೊಳ್ಳದಿರುವಂತಹ ಆರೋಗ್ಯವಂತ ಜನರನ್ನು ಒಳಗೊಂಡ ಒಬಾಮಾ ಮಾದರಿಯ ಯೋಜನೆ ಹಲವು ಸಮಸ್ಯೆಗೆ ಕಾರಣವಾಗಲಿದೆ. ಇಂತಹ ಜನರು ಉಳಿದವರ ವಿಮಾ ಕಂತುಗಳ ಮೊತ್ತವನ್ನೂ ಹೆಚ್ಚಿಸುತ್ತಾರೆ. ಒಬಾಮಾ ಈ ಮುನ್ನ, ವಿಮೆ ಭರಿಸಲು ಯೋಗ್ಯವಾಗಿರುವಂತೆ ಮಾಡುವುದೇ ಅದನ್ನು ವಿಸ್ತರಿಸಲು ಇರುವ ಮಾರ್ಗ ಎನ್ನುತ್ತಿದ್ದರು. ಆದರೆ ಈಗ ವಿಮೆಗೆ ನೋಂದಾಯಿಸಲು ತಡಮಾಡುವವರನ್ನು ಶಿಕ್ಷಿಸುವ ಕುರಿತಾಗಿ ಮಾತನಾಡುತ್ತಿದ್ದಾರೆ. ಆದರೆ ಈ ವೈರುಧ್ಯ ವಾಸ್ತವಗೊಳ್ಳುವುದು ಹೇಗೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಹೀಗಾಗಿ ಒಬಾಮಾ ಯೋಜನೆ ಕ್ಲಿಂಟನ್ ಯೋಜನೆಗಿಂತ ಹೆಚ್ಚಿನ ಜನರನ್ನು ವಿಮಾ ವ್ಯಾಪ್ತಿಯಿಂದ ಹೊರಗಿಡಬಹುದು. ಹಾಗಾದರೆ ಈ ವ್ಯತ್ಯಾಸದ ಪ್ರಮಾಣ ಎಷ್ಟು? ಈ ಪ್ರಶ್ನೆಗೆ ಉತ್ತರಿಸಲು ನೀವು ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತಹ ನಿರ್ಧಾರಗಳ ಸಂಪೂರ್ಣ ವಿಶ್ಲೇಷಣೆ ನಡೆಸಬೇಕು. ಅಮೆರಿಕದ ಪ್ರಮುಖ ಆರೋಗ್ಯ ರಕ್ಷಣಾ ಅರ್ಥಶಾಸ್ತ್ರಜ್ಞ, ಮೆಸಾಚ್ಯುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಜೊನಾಥನ್ ಗ್ರೂಬರ್ ಪತ್ರಿಕೆಯೊಂದರಲ್ಲಿ ಇಂತಹ ವಿಶ್ಲೇಷಣೆ ಮಾಡಿದ್ದಾರೆ. ಕಡ್ಡಾಯವಲ್ಲದ ಒಬಾಮಾ ನೀತಿಯಂತಹ ಯೋಜನೆಗಳು ಈಗ ವಿಮಾ ವ್ಯಾಪ್ತಿಗೆ ಒಳಪಡದ 23 ದಶಲಕ್ಷ ಮಂದಿಯನ್ನು ಒಳಗೊಳ್ಳಬಹುದು. ಇದಕ್ಕೆ ತಗಲುವ ವೆಚ್ಚ ವಾರ್ಷಿಕ 102 ಶತಕೋಟಿ ಡಾಲರ್. ಇನ್ನೊಂದೆಡೆ ಹಿಲರಿ ಮಾದರಿಯ ಕಡ್ಡಾಯದ ಯೋಜನೆ ವಿಮಾ ವ್ಯಾಪ್ತಿಗೆ ಒಳಪಡದ 45 ದಶಲಕ್ಷ ಮಂದಿಯನ್ನು ಒಳಗೊಳ್ಳಬಹುದು. ಇದಕ್ಕೆ ತಗಲುವ ವೆಚ್ಚ ವಾರ್ಷಿಕ 124 ಶತಕೋಟಿ ಡಾಲರ್ ಎಂದು ಗ್ರೂಬರ್ ಲೆಕ್ಕ ಹಾಕಿದ್ದಾರೆ. ಒಟ್ಟಾರೆ ಒಬಾಮಾ ಮಾದರಿಯ ಯೋಜನೆಯಲ್ಲಿ ಹೊಸದಾಗಿ ವಿಮೆ ಮಾಡಿಸಿಕೊಂಡ ವ್ಯಕ್ತಿಗೆ 4,400ಡಾಲರ್ ವೆಚ್ಚವಾದರೆ, ಕ್ಲಿಂಟನ್ ಮಾದರಿಯ ಯೋಜನೆಯಲ್ಲಿ ಕೇವಲ 2,700 ಡಾಲರ್ ವೆಚ್ಚವಾಗಲಿದೆ. ಇದು ನನಗೆ ಕ್ಷುಲ್ಲಕ ವ್ಯತ್ಯಾಸ ಎನಿಸುತ್ತಿಲ್ಲ. ಒಂದು ಯೋಜನೆ ಹೆಚ್ಚು ಕಡಿಮೆ ಜಾಗತಿಕ ವ್ಯಾಪ್ತಿ ಸಾಧಿಸುತ್ತದೆ; ಮತ್ತೊಂದು, ಶೇ. 80ಕ್ಕಿಂತ ಹೆಚ್ಚು ವೆಚ್ಚದಾಯಕವಾದರೂ ವಿಮಾ ವ್ಯಾಪ್ತಿಗೆ ಒಳಪಡದ ಅರ್ಧದಷ್ಟು ಮಂದಿಯನ್ನು ಮಾತ್ರ ಒಳಗೊಳ್ಳುತ್ತದೆ. ಇತರ ಆರ್ಥಿಕ ವಿಶ್ಲೇಷಣೆಗಳಿಗೆ ಹೋಲಿಸಿದರೆ, ಗ್ರೂಬರ್ ಕಂಡುಕೊಂಡ ಫಲಿತಾಂಶ ಆತನ ವಿಶ್ಲೇಷಣಾ ಮಾದರಿಯಷ್ಟೇ ಉತ್ತಮವಾಗಿದೆ. ಆದರೆ ಇತರ ವರದಿಗಳ ಕೆಲವು ಅಂಶಗಳನ್ನು ಹೊಂದಿದೆ. ಉದಾಹರಣೆಗೆ 2003ರಲ್ಲಿ ರಾಬರ್ಟ್‌ವುಡ್ ಜಾನ್ಸನ್ ಸಂಸ್ಥೆ ನೀಡಿದ ಅಧ್ಯಯನ ವರದಿಯಲ್ಲೂ ಆರೋಗ್ಯ ಸುಧಾರಣಾ ಯೋಜನೆಗಳನ್ನು ಕಡ್ಡಾಯಗೊಳಿಸಿದರೆ ವಿಮಾ ವ್ಯಾಪಿ ವಿಸ್ತರಿಸುವಲ್ಲಿ ಹಾಗೂ ವೆಚ್ಚ ಕಡಿತ ಸಾಧಿಸುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂದು ಹೇಳಿತ್ತು. ಆದ್ದರಿಂದಲೇ ಗ್ರೂಬರ್‌ನಂತಹ ಹಲವಾರು ಅರ್ಥಶಾಸ್ತ್ರಜ್ಞರು ಕಡ್ಡಾಯ ನೀತಿಯನ್ನು ಬಲವಾಗಿ ಸಮರ್ಥಿಸುತ್ತಾರೆ. ಆದರೂ ಈ ಘೋಷಣೆಗಳ್ಯಾವುವೂ ಗಂಭೀರವಾದದ್ದಲ್ಲ ಎಂದು ಕೆಲವರು ವಾದಿಸಬಹುದು. ಏಕೆಂದರೆ ಸಾಂವಿಧಾನಿಕ ಅಧ್ಯಕ್ಷರಾದ ಮೇಲೆ ಕಾರ್ಯಗತಗೊಳಿಸುವ ಯೋಜನೆಗಳು ಚುನಾವಣಾ ಸಮಯದ ಘೋಷಣಾ ಯೋಜನೆಗಳಿಗಿಂತ ಭಿನ್ನವಾಗಿರುತ್ತವೆ ಎಂಬುದು. ಹಾಗೆಯೇ, ಒಂದು ವೇಳೆ ಕ್ಲಿಂಟನ್ ಚುನಾಯಿತರಾಗಿ ಅಧಿಕಾರಕ್ಕೆ ಬಂದರೆ ಆಕೆ ಈಗ ಘೋಷಿಸಿದ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೆ ತರಬಹುದೆಂಬ ಭರವಸೆಯಿಲ್ಲ. ಆದರೆ ಕ್ಲಿಂಟನ್ ಯೋಜನೆಗಳು ಎಷ್ಟು ನಿರರ್ಥಕ ಎನ್ನುವುದು ಎಷ್ಟು ಸುಲಭವೋ, ಒಬಾಮಾ ಅವರ ಯೋಜನೆಗಳಲ್ಲಿನ ಲೋಪಗಳನ್ನು ತಿದ್ದುವುದು ಹೇಗೆ ಎಂಬುದನ್ನು ನಿರೀಕ್ಷಿಸುವುದು ಅಷ್ಟೇ ಕಠಿಣ. ಏಕೆ? ಏಕೆಂದರೆ ಆರೋಗ್ಯ ರಕ್ಷಣೆಯ ಕುರಿತ ಒಬಾಮಾ ಪ್ರಚಾರ ಅವರ ಸ್ವಂತ ದೃಷ್ಟಿಕೋನವನ್ನೇ ಬುಡಮೇಲು ಮಾಡಿದೆ. ಒಬಾಮಾ ಪ್ರಚಾರದಲ್ಲಿ ಕಡ್ಡಾಯ ನೀತಿಯನ್ನು ಭಯಂಕರವೆಂಬಂತೆ ಚಿತ್ರಿಸುತ್ತಿರುವುದನ್ನು ನೀವು ಕಾಣಬಹುದು. ತೀರಾ ಈಚೆಗೆ ಮತದಾರರಿಗೆ ಕಳುಹಿಸಲಾದ ಮೇಲ್‌ನಲ್ಲಿ ಇಂಥ ಪ್ರಯತ್ನವನ್ನು ಕಾಣಬಹುದು. ಒಂದು ವೇಳೆ ಒಬಾಮ ಅಧ್ಯಕ್ಷರಾಗಿ ಆಯ್ಕೆಯಾಗಿ ಜಾಗತಿಕ ವಿಮಾ ಯೋಜನೆ ಜಾರಿಗೆ ತರಲು ಮುಂದಾದರೆ, ಕಡ್ಡಾಯ ನೀತಿ ಇಲ್ಲದೆ ಅದು ಯಶಸ್ವಿಯಾಗುವುದಿಲ್ಲ ಎಂಬುದನ್ನು ಅವರೇ ಕಂಡುಕೊಳ್ಳುತ್ತಾರೆ. ಆದರೆ ಅವರು ಆಗ ಕಡ್ಡಾಯ ನೀತಿ ಅನುಸರಿಸಲು ಮುಂದಾದರೆ ಸುಧಾರಣಾ ವಿರೋಧಿಗಳು ಅವರದೇ ಹೇಳಿಕೆಗಳನ್ನು ಅವರ ವಿರುದ್ಧ ಬಳಸಬಹುದು. ಆರ್ಥಿಕ ವಿಶ್ಲೇಷಣೆ ಮತ್ತು ರಾಜಕೀಯ ವಾಸ್ತವ ಸೇರಿಸಿ ಹೇಳುವುದಾದರೆ: ಕ್ಲಿಂಟನ್ ಅಧಿಕಾರಕ್ಕೆ ಬಂದ ಪಕ್ಷದಲ್ಲಿ ಮುಂದಿನ ಆಡಳಿತದಲ್ಲಿ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣೆ (ಅದರ ವ್ಯಾಪ್ತಿ ಎಷ್ಟೆಂದು ಯಾರ ಊಹೆಗೂ ನಿಲುಕದು) ಜಾರಿಗೆ ಬರುವ ಸಾಧ್ಯತೆ ಇದೆ. ಬದಲಿಗೆ ಒಬಾಮಾ ಅಧಿಕಾರ ಹಿಡಿದರೆ ಈ ಯೋಜನೆಯ ಜಾರಿ ಸಾಧ್ಯವಿಲ್ಲ.

ಟಿಎಸ್‌ಐ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .