ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಕ್ರಿಕೆಟ್ ಅಂಕಣ
 
'ಮಂಕಿಗೇಟ್' ಪ್ರಕರಣಕ್ಕೆ ಕೊನೆಗೂ ತೆರೆ
 

ಟೆಸ್ಟ್ ಸರಣಿ ನಂತರದ ವಿದಾಯ ಪರ್ವ: 'ಇಷ್ಟು ಬೇಗನೆ?' ಎನಿಸುವಂತೆ ನಿವೃತ್ತಿಯಾದ ಗಿಲ್‌ಕ್ರಿಸ್ಟ್

ಗೌತಮ್ ಭಿಮಾನಿ

ಭಾರತ-ಆಸ್ಟ್ರೇಲಿಯ ನಡುವಿನ ಟೆಸ್ಟ್ ಸರಣಿ ಅಂತ್ಯವಾದ ಸಂದರ್ಭ. ಎಲ್ಲಿ ನೋಡಿದರೂ ವಿದಾಯದ ಮಾತುಗಳೇ ಕೇಳಿಬರುತ್ತಿದ್ದವು. ಭಾರತ ತಂಡದಲ್ಲಿ ನಾಲ್ವರು ಹಿರಿಯಣ್ಣರ ಪೈಕಿ ಮೂವರು ಆಸ್ಟ್ರೇಲಿಯಕ್ಕೆ ವಿದಾಯ ಹೇಳಲು ಸಿದ್ಧರಾಗಿದ್ದರು. ವಿ.ವಿ.ಎಸ್.ಲಕ್ಷ್ಮಣ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಪಾಲಿಗೆ ಈ ಟೆಸ್ಟ್ ಸರಣಿ ಕಾಂಗರೂ ನೆಲದಲ್ಲಿನ ಕೊನೆಯ ಸರಣಿಯಾಗಿತ್ತು. ಅಡಿಲೇಡ್ ಟೆಸ್ಟ್ ಕೊನೆಯ ದಿನ ಈ ಅಂಶಕ್ಕಿಂತ ಹರಭಜನ್ ಸಿಂಗ್ ಅವರ ಪ್ರಕರಣದ ವಿಚಾರಣೆಯೇ ಸುದ್ದಿಯ ಕೇಂದ್ರ ಬಿಂದುವಾಗಿ ಹೋಯಿತು. ಅಡಿಲೇಡ್‌ನಲ್ಲಿ ನಡೆದ ವಿಚಾರಣೆಯ ನಂತರ ಕೊನೆಗೂ 'ಮಂಕಿಗೇಟ್' ಪ್ರಕರಣಕ್ಕೆ ತೆರೆ ಬಿತ್ತು (ಹಾಗೆಂದು ಕೊಳ್ಳೋಣ). ಬ್ರಿಸ್ಬೇನ್ ಏಕ ದಿನ ಅಂತರ್ ರಾಷ್ಟ್ರೀಯ ಪಂದ್ಯ ಆರಂಭವಾಗುವುದಕ್ಕಿಂತ ಮೊದಲು ಮೈಕಲ್ ಕ್ಲಾರ್ಕ್ ಅವರ ಬ್ರಹ್ಮಚರ್ಯಕ್ಕೆ ವಿದಾಯ ಹೇಳಲು ಸಿದ್ಧತೆ ನಡೆಸಿದ್ದರು. ರೂಪದರ್ಶಿ ಲಾರಾ ಬಿಂಗ್ಲ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮೈಕಲ್ ಕ್ಲಾರ್ಕ್ ಸಿದ್ಧರಾಗಿದ್ದಾರೆ ಎಂಬ ಪಿಸುಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದವು. ಈ ಎಲ್ಲದರ ನಡುವೆ ಕ್ರಿಕೆಟ್ ಲೋಕ ಕಂಡ ಅತ್ಯದ್ಭುತ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಡಮ್ ಗಿಲ್‌ಕ್ರಿಸ್ಟ್ ವಿದಾಯದ ಬಾಂಬ್ ಸಿಡಿಸಿದರು. ಗಿಲ್‌ಕ್ರಿಸ್ಟ್ ಹೀಗೆ ಅನಿರೀಕ್ಷಿತವಾಗಿ ವಿದಾಯದ ಬಾಂಬ್ ಸಿಡಿಸುತ್ತಾರೆ ಎನ್ನುವುದರ ಸುಳಿವು ಯಾರಿಗೂ ಇರಲಿಲ್ಲ. ಆದರೂ, ಅತ್ಯನ್ನುತ ಫಾರ್ಮ್‌ನಲ್ಲಿ ಇರುವಾಗಲೇ ನಿವೃತ್ತಿ ಹೊಂದುವ ಶ್ರೇಷ್ಠ ಸಂಪ್ರದಾಯಕ್ಕೆ ಗಿಲ್‌ಕ್ರಿಸ್ಟ್ ತಮ್ಮನ್ನು ತಾವು ಒಡ್ಡಿಕೊಂಡರು. ಗಿಲ್‌ಕ್ರಿಸ್ಟ್ ನಿವೃತ್ತಿಯ ನಿರ್ಧಾರ ಪ್ರಕಟವಾದ ಹಿನ್ನೆಲೆಯಲ್ಲಿ ಅಡಿಲೇಡ್ ಟೆಸ್ಟ್‌ನ ಕೊನೆಯ ದಿನ ಎಲ್ಲರ ಗಮನವೂ ಅವರ ಮೇಲೆ ಕೇಂದ್ರೀಕೃತವಾಗಿತ್ತು. ಅದರಲ್ಲಿಯಂತೂ ಟೆಸ್ಟ್‌ನ ಕೊನೆಯ ಕ್ಷಣ ಗಿಲ್‌ಕ್ರಿಸ್ಟ್‌ಮಯವಾಗಿದ್ದು ಸಹಜವೇ. ಮೈದಾನದ ಒಳಗೆ ಮತ್ತು ಹೊರಗೆ...ಎಲ್ಲಿ ನೋಡಿದರೂ ಗಿಲ್‌ಕ್ರಿಸ್ಟ್ ನಿವೃತ್ತಿಯ ಮಾತೇ ಕೇಳಿ ಬರುತ್ತಿತ್ತು. ಬೌಂಡರಿ ಗೆರೆಯ ಅಂಚಿನಲ್ಲಿ 'ಥ್ಯಾಂಕ್ಸ್ ಗಿಲ್ಲಿ' ಎಂಬ ಅಭಿನಂದನಾ ಫಲಕವನ್ನು ಆತುರಾತುರವಾಗಿ ಹಾಕಲಾಗಿತ್ತು. ಗಿಲ್‌ಕ್ರಿಸ್ಟ್ ತಲೆ ಹೊರ ಹಾಕಿದ ಕ್ಷಣ ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿಶ್ವಶ್ರೇಷ್ಠನಿಗೆ ಗೌರವ ಸಲ್ಲಿಸುತ್ತಿದ್ದರು. ಸ್ಥಳೀಯ ಮುದ್ರಣ ಮಾಧ್ಯಮದವರಂತೂ ವಿಶೇಷ ಪುರವಣಿಗಳನ್ನು ಪ್ರಕಟ ಮಾಡಿ ಗಿಲ್ಲಿಗೆ ಗೌರವ ಸಲ್ಲಿಸಿದರು. ಟೆಸ್ಟ್ ಮುಗಿದು ಬಹುಮಾನ ವಿತರಣೆ ಸಮಾರಂಭ ಆರಂಭವಾದಾಗ ಗಿಲ್‌ಕ್ರಿಸ್ಟ್ ಕುಟುಂಬದ ದರ್ಶನವಾಯಿತು. ಅವರ ಪತ್ನಿ ಮೆಲ್ ಮತ್ತು ಮೂವರು ಮಕ್ಕಳು ಪ್ರಶಸ್ತಿ ಪ್ರದಾನ ನಡೆಯುತ್ತಿದ್ದ ಮೈದಾನದ ಭಾಗದಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಅವರ ಹಿರಿಯ ಪುತ್ರ ಹ್ಯಾರಿ ಮತ್ತು ಕೋಚ್ ಟಿಮ್ ನೆಲ್ಸನ್ ಪುತ್ರ ಹಾಗೂ ಆಸ್ಟ್ರೇಲಿಯ ಕ್ರಿಕೆಟ್‌ನ ಭವಿಷ್ಯದ ಪ್ರತಿಭೆಗಳು ಕೆಲವು ಕ್ಷಣ ಮೈದಾನದ ನಡುವೆ ಕ್ರಿಕೆಟ್ ಆಡುವ ಮೂಲಕ ಮುದ ನೀಡಿದರು. ಆದರೆ, ಹೃದಯ ಮೀಟುವ ಒಂದು ಘಟನೆ ನಡೆದದ್ದು ಈ ಎಲ್ಲ ಸಮಾರಂಭಗಳು ಮುಗಿದು ಹೋದ ಹಲವಾರು ಗಂಟೆಗಳ ನಂತರ. ರಾತ್ರಿ ಹತ್ತು ಗಂಟೆ ಕಳೆದು ಹೋಗಿತ್ತು. ಅಡಿಲೇಡ್ ಓವಲ್ ಕತ್ತಲೆಯ ನಡುವೆ ಕರಗಿ ನಿಂತಿತ್ತು. ಮೈದಾನದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ಕೂಡ ಮನೆಗೆ ಹೋಗಿಯಾಗಿತ್ತು. ಆದರೆ ಎರಡು ಜೀವಗಳು ಮಾತ್ರ ಮೈದಾನದ ನಡುವೆ ಆಡುತ್ತಲ್ಲಿದ್ದವು. ಪುತ್ರ ಹ್ಯಾರಿ ಗಿಲ್‌ಕ್ರಿಸ್ಟ್ ಮತ್ತು ತಂದೆ ಆಡಮ್ ಗಿಲ್‌ಕ್ರಿಸ್ಟ್ ಇಬ್ಬರೇ ಅಲ್ಲಿ ಕ್ರಿಕೆಟ್ ಆಡುವುದರಲ್ಲಿ ನಿರತರಾಗಿದ್ದರು. ಇಷ್ಟು ದಿನಗಳ ಕಾಲ ಆಸ್ಟ್ರೇಲಿಯ ತಂಡದ ಭಾಗವಾಗಿದ್ದ ಆಡಮ್ ಪಾಲಿಗೆ ಇನ್ನು ಮಂದೆ ನೂತನ ಸಹ ಆಟಗಾರನೆಂದರೆ ಹ್ಯಾರಿ! ಕಳೆದು ಹೋದ ದಿನಗಳಲ್ಲಿನ ಲೆಕ್ಕಾಚಾರವನ್ನು ಚುಕ್ತಾ ಮಾಡುವುದರಲ್ಲಿ ಇಬ್ಬರೂ ನಿರತರಾಗಿದ್ದರು. ಭಾವೋದ್ರೇಕದ ಆಗರವಾಗಿದ್ದ ಟೆಸ್ಟ್ ಸರಣಿ ಮುಗಿದ ಮೇಲೆ ಟ್ವೆಂಟಿ-20 ರೋಮಾಂಚನದ ಅಲೆಯೆಬ್ಬಿಸುವ ಲಕ್ಷಣಗಳಿದ್ದವು. ಆದರೆ, ಭಾರತ ತಂಡದ ಹೀನಾಯ ಬ್ಯಾಟಿಂಗ್ ಆ ಪಂದ್ಯವನ್ನು ಏಕಪಕ್ಷೀಯವಾಗಿ ಪರಿವರ್ತನೆ ಮಾಡಿತು. ಗಾಬ್ಬಾದಲ್ಲಿ 84,000 ಪ್ರೇಕ್ಷಕರು ಆ ಪಂದ್ಯ ವೀಕ್ಷಿಸಲು ಬಂದಿದ್ದರು. ಕ್ರಿಕೆಟ್ ಪಂದ್ಯವೊಂದನ್ನು ನೋಡಲು ಪ್ರೇಕ್ಷಕರು ಈ ರೀತಿ ಗಾಬ್ಬಾಕ್ಕೆ ದಾಳಿಯಿಟ್ಟಿದ್ದು ಇದೇ ಮೊದಲ ಬಾರಿಯಂತೆ. ನಂತರ ಬ್ರಿಸ್ಬೇನ್‌ನಲ್ಲಿ ಆರಂಭವಾದ ಏಕದಿನ ಪಂದ್ಯಗಳ ತ್ರಿಕೋನ ಸರಣಿಯ ಮೊದಲ ಪಂದ್ಯದ ಮೇಲೆ ಮಳೆರಾಯ ತಣ್ಣೀರು ಎರಚಿದ. ಆ ನಡುವೆಯೂ ಭಾರತ ತಂಡದಲ್ಲಿನ ನಿಗೂಢ ಪ್ರತಿಭೆಗಳು ಬೆಳಕಿಗೆ ಬಂದವು. ಗಾಬ್ಬಾದ ಒದ್ದೆಯಾಗಿದ್ದ ಮೈದಾನದಲ್ಲಿ ರಿಮೋಟ್ ಕಂಟ್ರೋಲ್ ಕಾರ್ ರೇಸಿಂಗ್ ನಡೆಯಿತು. ಆ ಸ್ಪರ್ಧೆಯಲ್ಲಿ ರಾಬಿನ್ ಉತ್ತಪ್ಪ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಅವರನ್ನು ಮೀರಿ ನಿಂತರು. ಈ ನಡುವೆ ಒದ್ದೆಯಾದ ಮೈದಾನವನ್ನು ಆಟಕ್ಕೆ ಸಿದ್ಧಗೊಳಿಸುವ ಯತ್ನ ಮುಂದುವರಿದಿದ್ದವು. ಆದರೂ, ಏನೂ ಪ್ರಯೋಜನ ಆಗಲಿಲ್ಲ. ಆಹಾರ ಬೇಟೆಯ ಮಟ್ಟಿಗೆ ಬ್ರಿಸ್ಬೇನ್ ವಿಶ್ವದಲ್ಲಿಯೇ ಅತ್ಯಂತ ಸರಳವಾದ ನಗರ. ನಾನು ಗ್ರ್ಯಾಂಡ್ ಸೆಂಟ್ರಲ್ ಸ್ಟೇಷನ್‌ನ ಮೆಕ್ ಡೊನಾಲ್ಡ್‌ನಲ್ಲಿ ಒಂದಿಷ್ಟು ಹೊಟ್ಟೆ ತುಂಬಿಸಿಕೊಳ್ಳುವ ಯತ್ನದಲ್ಲಿ ನಿರತನಾಗಿದ್ದೆ. ನನ್ನ ಮುಂದೆ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಇದ್ದರು. ಫಿಶ್ ಮತ್ತು ಫ್ರೈ ಬೇಕೆಂದು ಆರ್ಡರ್ ಮಾಡಿದ ಅವರನ್ನು ಗುರುತಿಸಿದ್ದು ಅವರಿಗೆ ಆಹಾರ ನೀಡಿದ ಒಬ್ಬ ಜೂನಿಯರ್ ಕ್ರಿಕೆಟ್ ಆಟಗಾರ. ತೆಂಡೂಲ್ಕರ್ ಆ ಹುಡುಗನ ಕೈಕುಲುಕಿದರು. ತೆಂಡೂಲ್ಕರ್ ಆಹಾರ ಸೇವನೆ ಮಾಡಿ ಅಲ್ಲಿಂದ ಹೊರ ನಡೆದ ಮೇಲೆ ಆ ಹುಡುಗ ಅವರು ಕಸದ ತೊಟ್ಟಿಯಲ್ಲಿ ಹಾಕಿ ಹೋಗಿದ್ದ ಖಾಲಿ ಆಹಾರದ ಬಾಕ್ಸ್ ಹುಡುಕಿ ತೆಗೆದುಕೊಂಡ. ಏಕೆಂದರೆ, ಅದನ್ನು ನೆನಪಿನ ಕಾಣಿಕೆಯಾಗಿ ಅವನ ಮನೆಯ ಗೋಡೆಯಲ್ಲಿ ನೇತು ಹಾಕಲೆಂದು!!

ಟಿಎಸ್‌ಐ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .