ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಿಚ್ಚು ಮಾತು :ಮಿಥ್ಯ
ಮಿಥ್ಯ ಸತ್ಯಾಸತ್ಯತೆ
 

'ಮಿಥ್ಯ' ಎಂಬ ರೊಮಾಂಚಕ ಪಯಣದಲ್ಲಿ ಮಾಫಿಯಾ, ರಕ್ತಪಾತ, ಪ್ರಣಯ, ಮೋಸ, ವಿಶ್ವಾಸಘಾತುಕತನ, ಮುಗ್ಧತೆ, ಅಪಾಯ ಮತ್ತು ನನಸಾಗದ ಕನಸುಗಳಿವೆ. ಇವೆಲ್ಲವೂ ಈ ಅದ್ಭುತ ಹಾಸ್ಯಚಿತ್ರದ ಓಘಕ್ಕೆ ಜೊತೆಯಾಗಿವೆ. ಚಿತ್ರದ ಪ್ರಮುಖರೊಂದಿಗೆ ಮಾತನಾಡಿದ ನೇಹಾ ಸರೀನ್ 'ಮಿಥ್ಯ'ದ ಸತ್ಯಾಸತ್ಯತೆಯ ದರ್ಶನ ಮಾಡಿಕೊಟ್ಟಿದ್ದಾರೆ.

 ರಣವೀರ್ ಶೋರೆ, ನಟ

'ಮಿಥ್ಯ' ಚಿತ್ರದ ವಿಕೆ ಇದುವರೆಗಿನ ನಿಮ್ಮ ಅತ್ಯುತ್ತಮ ಪಾತ್ರ ಎನ್ನಲಾಗಿದೆ. ಈ ಪಾತ್ರಕ್ಕೆ ನೈಜತೆ ಮೂಡಿಸಲು ಎಷ್ಟು ಪ್ರಯತ್ನ ಪಟ್ಟಿದ್ದೀರಿ?

ಚಿತ್ರಕಥೆಯೇ ಹಾಗಿತ್ತು. ವಿಶೇಷ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಪ್ರತಿಭೆಯನ್ನು ಸಾಬೀತು ಮಾಡಲು ಶ್ರಮ ಪಡುತ್ತಿರುವ ನಟನ ಪಾತ್ರ! ನೈಜ ಅನುಭವವೇ ನನ್ನ ಬೆನ್ನಿಗಿತ್ತು, ಜೊತೆಗೆ ಬಹಳಷ್ಟು ನಟರು ಅವಕಾಶಕ್ಕಾಗಿ ಕಾತರಿಸುವುದು ಮತ್ತು ಕಷ್ಟ ಪಡುವುದನ್ನು ನೋಡಿದ್ದೇನೆ. ಹೊರಗಡೆ ಹೋಗಿ ಮಾಹಿತಿ ಸಂಗ್ರಹಿಸುವ ಅಗತ್ಯವಿರಲಿಲ್ಲ. ಕಥೆಯಲ್ಲಿ ಏನು ಹೇಳಿದ್ದರೋ ಅದನ್ನು ಅಭಿನಯಿಸುವುದಷ್ಟೇ ನನ್ನ ಕೆಲಸವಾಗಿತ್ತು, ಆದರೂ ನಟನೆಗೆ ಪೂರ್ವತಯಾರಿ ಮಾಡಿಕೊಂಡಿದ್ದೆ. ಆರಂಭದಲ್ಲಿ ವಿಕೆ ವ್ಯಕ್ತಿತ್ವ ಹೇಗಿರಬೇಕು ಮತ್ತು ಬದಲಾದ ಮೇಲೆ ಹೇಗೆ ಕಾಣಿಸಿಕೊಳ್ಳಬೇಕು ಎನ್ನುವ ಬಗ್ಗೆ ಕಾರ್ಯಾಗಾರಗಳಲ್ಲಿ ಚರ್ಚಿಸಿದ್ದೆವು. ಲುಕ್ ಪರೀಕ್ಷೆ ಬಿಟ್ಟರೆ ಪಾತ್ರದ ನಡವಳಿಕೆ ಹೇಗೆ ವಿಭಿನ್ನವಾಗಿರಬೇಕು ಮತ್ತು ಪಾತ್ರದ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತಾ ಹೋದಂತೆ ಧ್ವನಿಯಲ್ಲಿ ಕಂಡು ಬರಬೇಕಾದ ಏರುಪೇರುಗಳು ಮುಂತಾದ ಸಂಗತಿಗಳ ಬಗ್ಗೆಯೂ ಚರ್ಚಿಸಿದ್ದೆವು.

ಈ ಪಾತ್ರ ನಿಮಗೆ ಸಿಕ್ಕಿದ್ದು...

ರಜತ್ ಜೊತೆ ನಾನು ಈಗಾಗಲೇ 'ಮಿಕ್ಸ್‌ಡ್ ಡಬಲ್ಸ್' ಚಿತ್ರದಲ್ಲಿ ಕೆಲಸ ಮಾಡಿದ್ದೆ. ಅದರಲ್ಲಿ ನಾನು ಪ್ರಧಾನ ಪಾತ್ರ ನಿರ್ವಹಿಸಿದ್ದೆ. ಪಾತ್ರಗಳ ಆಯ್ಕೆಯ ಸಂದರ್ಭದಲ್ಲಿ ಅವರು ನನಗೆ ಈ ಬಗ್ಗೆ ಸೂಚ್ಯವಾಗಿ ತಿಳಿಸಿದ್ದರು. 'ಸೈಫ್ ಮತ್ತು ಅರ್ಶದ್‌ಗಾಗಿ ಪ್ರಯತ್ನಿಸುತ್ತಿದ್ದೇನೆ. ಅವರ ಡೇಟ್ಸ್ ಸಿಗದೆ ಇದ್ದ ಪಕ್ಷದಲ್ಲಿ ಮುಖ್ಯ ಪಾತ್ರ ನಿರ್ವಹಿಸಬೇಕಾಗುತ್ತದೆ' ಎಂದಿದ್ದರು. ನಾನು ಸಂಭ್ರಮ ಪಟ್ಟಿದ್ದೆ. ತುಂಬಾ ಉತ್ಸುಕನಾಗಿದ್ದೆ.

'ಮಿಥ್ಯ'ದಲ್ಲಿ ವ್ಯಕ್ತಿತ್ವದ ಗೊಂದಲದಲ್ಲಿ ತೊಳಲಾಡುವ ವ್ಯಕ್ತಿಯ ಪಾತ್ರ ನಿರ್ವಹಿಸುತ್ತಿದ್ದೀರಿ. ನಿಜಜೀವನದಲ್ಲಿ ಇಂತಹ ಜಿಜ್ಞಾಸೆ ಅನುಭವಿಸಿದ್ದಿದೆಯೇ?

ಆಗಾಗ ಇಂತಹ ಅನುಭವಗಳಾಗಿವೆ. ನಾನೊಬ್ಬ ಟಿವಿ ನಿರ್ದೇಶಕನಾಗಿದ್ದೆ. ನಟನಾಗುವ ತವಕದಿಂದ ನಿರೂಪಕನಾಗಿ ಬದಲಾದೆ. ಇಲ್ಲೆಲ್ಲಾ ವ್ಯಕ್ತಿತ್ವದ ಬದಲಾವಣೆ ಗುರುತಿಸಿದ್ದೇನೆ. ಆ ತಳಮಳ ಏನು ಎನ್ನುವ ಸ್ಪಷ್ಟ ಅರಿವು ನನಗಿದೆ. ಕೆಲಸದ ಕಡೆಗೇ ಗಮನ ಹರಿಸಿ, ಉಳಿದ ಗೊಂದಲವನ್ನು ಪಕ್ಕಕ್ಕಿಡಬೇಕು. ಏಕೆಂದರೆ ಅಕ್ಕ ಪಕ್ಕದಲ್ಲಿದ್ದವರು ಸಲಹೆ- ಸೂಚನೆಗಳನ್ನು ಕೊಡುತ್ತಲೇ ಇರುತ್ತಾರೆ. ಅದನ್ನೆಲ್ಲಾ ತಲೆಗೆ ಹಚ್ಚಿಕೊಂಡು ಗೊಂದಲ ಸೃಷ್ಟಿಸಿಕೊಳ್ಳುವ ಅಗತ್ಯವಿಲ್ಲ.

'ಮಿಥ್ಯ'ಗೆ ಪ್ರತಿಕ್ರಿಯೆ ಹೇಗಿದೆ?

ಕಳೆದ ವರ್ಷ ದೆಹಲಿಯಲ್ಲಿ ಜರುಗಿದ ಓಸಿಯಾನ್ ಸಿನಿಫ್ಯಾನ್ ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರದರ್ಶಿಸಿದ್ದೇವೆ. ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ ನಿಜವಾದ ಪ್ರತಿಕ್ರಿಯೆ ಸಿಗಬೇಕಾದರೆ ಚಿತ್ರ ಬಿಡುಗಡೆಯಾಗಬೇಕು.

ನೀವು ಮತ್ತು ವಿನಯ್ 'ಒಂದು ಕೊಂಡರೆ ಮತ್ತೊಂದು ಉಚಿತ' ಕೊಡುಗೆ ಇದ್ದಂತೆ. ರಜತ್ ಕೂಡ ಇದಕ್ಕೆ ಬದ್ಧರಾದದ್ದು ಹೇಗೆ?

ಓಹ್! ಅವರು ನನ್ನ ಹಳೇ ಸ್ನೇಹಿತರು. ಈ ಹಿಂದೆ ನಾವು ಜೊತೆಯಾಗಿ ನಾಟಕಗಳಲ್ಲಿ ಕೆಲಸ ಮಾಡಿದ್ದೆವು. ಆ ಬಳಿಕ ನಾವು 'ಮಿಕ್ಸ್‌ಡ್ ಡಬಲ್ಸ್'ನಲ್ಲಿ ಕೆಲಸ ಮಾಡಿದೆವು. ಹೀಗಾಗಿ ಜೊತೆಯಾಗಿ ಕೆಲಸ ಮಾಡಿದ ಅನುಭವ ನಮಗಿದೆ.

'ಪ್ಲಾನ್‌ಮನ್ ಮೋಷನ್ಸ್' ಜೊತೆ ಎರಡು ಚಿತ್ರಗಳನ್ನು ಮಾಡಿದ ಅನುಭವ ಹೇಗಿತ್ತು?

ಒಂದೇ ಮಾತಿನಲ್ಲಿ ಹೇಳುವುದಾದರೆ ಅಮೋಘ. ಚಿತ್ರೀಕರಣದ ಸಮಯ ದಲ್ಲಂತೂ ನಾವೆಲ್ಲಾ ಒಂದೇ ಕುಟುಂಬದವರಂತೆ ಇದ್ದೆವು.

 ಟಿಎಸ್‌ಐ

ನೇಹಾ ಧೂಪಿಯಾ, ನಟಿ

'ಮಿಥ್ಯ' ಚಿತ್ರದಲ್ಲಿ ವೃತ್ತಿ ಜೀವನದ ಶ್ರೇಷ್ಠ ಅಭಿನಯ ನೀಡಿದ್ದೀರಿ ಎನ್ನಲಾಗುತ್ತಿದೆ. ಆ ಪಾತ್ರಕ್ಕೆ ಹೇಗೆ ಸಿದ್ಧವಾದಿರಿ?

ನಾನು ಶೇಕಡಾ ನೂರರಷ್ಟು ಶ್ರಮ ಹಾಕಿದ್ದೇನೆ. ಆದರೆ ಈ ಅದ್ಭುತ ಅಭಿನಯ ಮತ್ತು ಆ ಪಾತ್ರದ ವ್ಯಕ್ತಿತ್ವಕ್ಕೆ ತಕ್ಕಂತೆ ನಟಿಸಿರುವುದರಲ್ಲಿ ರಜತ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಬಯಸಿದ ಅಭಿನಯವನ್ನು ನನ್ನಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ನಿಜಕ್ಕೂ ರೋಮಾಂಚಕ ಅನುಭವ. ಆ ಚಿತ್ರಕಥೆಯನ್ನು ಓದಿದಾಗಲೇ ಅದು ಅತ್ಯದ್ಭುತ ಎಂದನ್ನಿಸಿತ್ತು. ಆದರೆ ತೆರೆ ಮೇಲೆ ಕಂಡ ಮೇಲೆ ನನ್ನ ಅಭಿಪ್ರಾಯ ಇನ್ನೂ ಕೆಲ ಮೆಟ್ಟಿಲು ಮೇಲೇರಿದೆ

ಒಬ್ಬ ವ್ಯಕ್ತಿಯ ಅನನ್ಯತೆಯನ್ನು ಗುರುತಿಸುವುದೇ 'ಮಿಥ್ಯ'ದ ಸಾರಾಂಶ. ನಿಮ್ಮಲ್ಲಿ ಇಂತಹ ಜಿಜ್ಞಾಸೆ ಬಂದಿದ್ದಿದೆಯೆ?

ನನ್ನಲ್ಲಿ ಈ ಎಲ್ಲಾ ತಳಮಳಗಳು ಇದ್ದವು. ಆದರೆ ಅಂತಿಮವಾಗಿ ಈಗ ನಾನು ನಾನಾಗಿದ್ದೇನೆ! ಚಿತ್ರರಂಗದಲ್ಲಿ ನಾವು ಬಹಿರಂಗವಾಗಿ ಪ್ರದರ್ಶಿಸುವ ವ್ಯಕ್ತಿತ್ವ ನಮ್ಮದಾಗಿರುವುದೇ ಇಲ್ಲ. ನಮ್ಮ ನಿಜ ವ್ಯಕ್ತಿತ್ವವನ್ನು ನಾವು ತೆರೆಮರೆಯಲ್ಲೇ ಇಟ್ಟಿರುತ್ತೇವೆ. ಎಲ್ಲೋ ಒಂದು ಕಡೆ, ಈ ಎರಡು ವ್ಯಕ್ತಿತ್ವಗಳಲ್ಲಿ ನಮ್ಮದು ಯಾವುದು ಎಂದು ತಿಳಿಯದೆ ತೊಳಲಾಡುತ್ತೇವೆ. ಇದೇ ಕಾರಣಕ್ಕೆ ರಣವೀರ್, ವಿನಯ್, ನಾಸೀರ್ ಸಾಹಿಬ್ ಅವರನ್ನು ಕಂಡರೆ ನನಗೆ ಆದರಾಭಿಮಾನವಿದೆ. ಇವರೆಲ್ಲಾ ಎಂದಿಗೂ ಕಪಟ ಇಮೇಜ್ ಪ್ರದರ್ಶಿಸಲು ಪ್ರಯತ್ನಿಸಲೇ ಇಲ್ಲ

'ಮಿಥ್ಯ' ಚಿತ್ರಕ್ಕೆ ಬಾಯಿ ಮಾತಿನಿಂದಲೇ ಸಾಕಷ್ಟು ಪ್ರಚಾರ ಸಿಕ್ಕಿದೆ ಎಂದು ಅರಿವಾದಾಗ ಏನನ್ನಿಸುತ್ತದೆ? ಒಬ್ಬ ಅಭಿನೇತ್ರಿಗೆ ಇದು ಬಹು ದೊಡ್ಡ ಹಿರಿಮೆಯಲ್ಲವೆ?

ಹೌದು, ಇದು ನಿಜವಾಗಿಯೂ ಅತೀ ದೊಡ್ಡ ಹಿರಿಮೆ. ಮುಖ್ಯವಾಗಿ ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ. ಆದರೂ, 'ನಿಮ್ಮಲ್ಲೇನೂ ಬದಲಾವಣೆ ಕಾಣುವುದಿಲ್ಲ. ಹಾಗಿದ್ದಲ್ಲಿ ಆ ಚಿತ್ರದ ಪಾತ್ರದ ವಿಶೇಷತೆ ಏನು' ಎಂದು ಮಾಧ್ಯಮಗಳು ನನ್ನನ್ನು ಪ್ರಶ್ನಿಸುತ್ತಲೇ ಇವೆ. ಎಲ್ಲಾ ರಜತ್ ಕೌಶಲ್ಯ ಎನ್ನಬಹುದು. ಅವರು ನನ್ನಿಂದ ಅದ್ಭುತ ನಟನೆಯನ್ನು ಹೊರತೆಗೆದಿದ್ದಾರೆ. ನಾನು ನನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸುವಂತೆ ಮಾಡಿದ್ದಾರೆ. ಈ ಎಲ್ಲದರ ಮಿಶ್ರಣದಿಂದ ಇದು ವಿಭಿನ್ನ ಚಿತ್ರವೆನಿಸಿದೆ.

ನಿಮ್ಮ ನಟನೆ ಕಂಡು ರಜತ್ ಬೆರಗಾಗಿದ್ದಾರೆ ಎಂದು ಕೇಳಿರುವೆ. ಇದು ಹೇಗೆ ಸಾಧ್ಯವಾಯಿತು?

ನಿಜವೆ? ನಾನು ಹಾಗೆ ಮಾಡಿರುವೆನೆ? ಆ ಪ್ರಶಂಸೆಯನ್ನು ಕೇಳಲು ಸಂತೋಷವಾಗುತ್ತಿದೆ. ಒಬ್ಬ ನಿರ್ದೇಶಕ ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಹೊಗಳುವುದಕ್ಕಿಂತ ದೊಡ್ಡ ಪ್ರಶಂಸೆ ಬೇರೆ ಇದೆಯೆ? ಚಿತ್ರೀಕರಣ ಸಂದರ್ಭದಲ್ಲಿ ರಜತ್ ಸಂಪೂರ್ಣ ತನ್ಮಯರಾಗಿರುತ್ತಿದ್ದರು. ಚಿಕ್ಕ ಚಿಕ್ಕವಿಷಯಕ್ಕೂ ಮಹತ್ವ ನೀಡುತ್ತಿದ್ದರು. ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಶೇಕಡಾ ನೂರರಷ್ಟು ಖಚಿತತೆ ಅವರಲ್ಲಿತ್ತು. ಇದೇ ಸಂಪೂರ್ಣ ಚಿತ್ರವನ್ನು ವಿಭಿನ್ನವಾಗಿಸಿದೆ.

'ಪ್ಲಾನ್‌ಮನ್ ಮೋಷನ್' ಜೊತೆ ಎರಡು ಚಿತ್ರಗಳನ್ನು ಮಾಡಿದ್ದೀರಿ. ಈ ಅನುಭವ?

'ಪ್ಲಾನ್‌ಮನ್' ನಮ್ಮನ್ನು ತುಂಬಾ ಚೆನ್ನಾಗಿ ನಡೆಸಿಕೊಂಡಿದೆ. ಶುಭೋ ಅವರಂತೂ ಅಮೋಘ. ನಿರ್ಮಾಪಕ ಅರಿಂದಮ್ ಚೌಧುರಿ ಅವರು ಸೆಟ್‌ನಲ್ಲಿ ಇಲ್ಲದೇ ಇದ್ದರೂ ನಮ್ಮೆಲ್ಲರಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಅವರ ನಿರ್ಮಾಣದ ಚಿತ್ರದಲ್ಲಿ ಕೆಲಸ ಮಾಡುವುದು ತೃಪ್ತಿ ನೀಡಿದೆ. ಹಾಗೆಯೇ ಶ್ರೀಶ ಮತ್ತು ವೆರೆನ್ ಅವರ ಜೊತೆ ಕೆಲಸ ಮಾಡುವ ಅವಕಾಶವು ಸಿಕ್ಕಿದೆ. ಇವರೆಲ್ಲಾ ಬಹಳಷ್ಟು ನೆರವು ನೀಡಿದ್ದಾರೆ. ನಿಜಕ್ಕೂ ಅದ್ಭುತ ಅನುಭವ.

ನಾಸಿರುದ್ದೀನ್ ಶಾ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು? ಅವರ ಜೋಡಿಯಾಗಿ ನಟಿಸುವಾಗ ಅಂಜಿಕೆಯಾಗಿದ್ದಿದೆಯೆ?

ಅಂಜಿಕೆಯಾಗುವುದು ಸಹಜವೇ ತಾನೆ? (ನಗು) ಅಂತಹ ಮಹಾನ್ ನಟನ ಜೊತೆ ನಟಿಸುವಾಗ ಸ್ವಲ್ಪ ಭಯವಾಗಿದ್ದು ನಿಜ. ಅವರು ಮಾತ್ರವಲ್ಲ, ರಣವೀರ್ ಮತ್ತು ವಿನಯ್ ಜೊತೆಗೆ ಅಭಿನಯಿಸುವಾಗಲೂ.. ಪಾತ್ರದ ಒಳಹೊಕ್ಕು ಅಭಿನಯಿಸುವುದರಲ್ಲಿ ಅವರೆಲ್ಲ ಸಿದ್ಧ ಹಸ್ತರು ಎನ್ನುವುದು ಗೊತ್ತಿದ್ದದ್ದೇ ತಾನೆ. ಅದಕ್ಕೆ ಸ್ವಲ್ಪ ಅಳುಕೆನಿಸಿತ್ತು. ಆದರೆ ಅವರೆಲ್ಲಾ ನನ್ನ ಭಯ ದೂರ ಮಾಡಿದರು.

ಮಾದಕ ನಟಿ ಇಮೇಜ್ ಇರುವ ನಿಮಗೆ 'ಮಿಥ್ಯ'ದಲ್ಲಿ ಅಭಿನಯಕ್ಕೆ ಅವಕಾಶವಿರುವ ಪಾತ್ರ ಸಿಕ್ಕಿದೆ. ಇದು ಪ್ರಜ್ಞಾಪೂರ್ವಕ ಆಯ್ಕೆಯೇ?

ಅಭಿನಯಕ್ಕೆ ಅವಕಾಶ ಇರುವ ಪಾತ್ರ ಸಿಕ್ಕಿದ್ದು ಪುಣ್ಯವೇ ಸರಿ. ನಾನು ಸಂತುಷ್ಟಳು ಮತ್ತು ಈ ಪಾತ್ರ ನನಗೆ ತೃಪ್ತಿ ನೀಡಿದೆ.'ಪ್ಲಾನ್‌ಮನ್' ನಿರ್ಮಿಸುತ್ತಿರು ವಂತಹ ಮಾದರಿಯ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು. ಇದು ಖಂಡಿತಾ ಕ್ಷುಲ್ಲಕ ಪ್ರಯತ್ನವಲ್ಲ. ನಿರ್ದೇಶಕರೂ ಪ್ರಾಯೋಗಿಕ ಚಿತ್ರಕಥೆಯನ್ನು ಆರಿಸಿಕೊಳ್ಳಬೇಕು ಮತ್ತು ಎಂಥ ಚಿತ್ರಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ತಿಳಿದುಕೊಳ್ಳುವ ಅಗತ್ಯವಿದೆ. ನಾನು ಯಾರನ್ನೂ ಹೋಲಿಸುತ್ತಿಲ್ಲ ಅಥವಾ ಅವರ ಮಟ್ಟವನ್ನು ಕಡಿಮೆ ಮಾಡುತ್ತಿಲ್ಲ. ಇದನ್ನು ಮಾತಿನಲ್ಲಿ ವಿವರಿಸುವುದು ಅಸಾಧ್ಯ.

 'ಮಿಥ್ಯ'ದಲ್ಲಿ ನಟರ ದಂಡೇ ಹೆಚ್ಚಾಗಿತ್ತು. ಅವರ ಆ ಹುಡುಗಾಟದಲ್ಲಿ ಭಾಗಿಯಾಗಿದ್ದಿರೇನು?

ನನ್ನ ದಿರಿಸುಗಳು ಗಂಡುಬೀರಿಯಂತೆಯೇ ಇತ್ತು. ಇದಕ್ಕಿಂತ ಬೇರೆ ಆಯ್ಕೆಯೇ ಇರಲಿಲ್ಲ.

 ಟಿಎಸ್‌ಐ

 ರಜತ್ ಕಪೂರ್, ನಿರ್ದೇಶಕ

 ನೀವು ನಟ- ನಿರ್ದೇಶಕ. ಯಾವುದು ನಿಮಗೆ ತುಂಬಾ ಅಚ್ಚುಮೆಚ್ಚು?

 ಹದಿನೈದರ ಬಾಲಕನಾಗಿದ್ದಾಗಲೇ ಚಿತ್ರ ನಿರ್ದೇಶನದ ಹುಚ್ಚು ನನ್ನ ತಲೆಗೇರಿತ್ತು. ನಿರ್ದೇಶನ ಎಂದರೆ ಅದು ನನ್ನ ಸಿನಿಮಾ, ನನ್ನ ಕಲ್ಪನೆ, ನನ್ನ ಕನಸನ್ನು ಸಾಕಾರಗೊಳಿಸುವುದು. ಆದರೆ ನಟನೆಯಲ್ಲಿ ಈ ಸ್ವಾತಂತ್ರ್ಯವಿಲ್ಲ.

 'ಮಿಥ್ಯ' ಸಂಪೂರ್ಣ ಸಿದ್ಧವಾಗಲು ನೀವು ಹಲವು ವರ್ಷಗಳ ತಪಸ್ಸು ಮಾಡಿದ್ದೀರಿ. ಆ ಕನಸು ನಿಜವಾದದ್ದು ಹೇಗೆ?

 ನಾನು 1998ರಲ್ಲೇ 'ಮಿಥ್ಯ'ದ ಕಥೆ ಬರೆದಿದ್ದೆ. ನಾಸಿರ್ ಜೊತೆ ಸೇರಿ ಈ ಚಿತ್ರ ನಿರ್ದೇಶಿಸುವ ಕನಸಿತ್ತು. ನಾನು ನನ್ನ ಚಿತ್ರಕಥೆಯನ್ನು ಬಹಳಷ್ಟು ನಿರ್ಮಾಪಕರಿಗೆ ಕಳುಹಿಸಿದ್ದೆ. ಅದರಲ್ಲಿ 'ಪ್ಲಾನ್‌ಮನ್ ಮೋಷನ್ಸ್' ಕೂಡಾ ಒಂದು. ಅವರು ಒಪ್ಪಿದ್ದಾರೆ ಎಂದು ತಿಳಿದಾಗ ಅಚ್ಚರಿಯಾಗಿತ್ತು. ಅವರಿಂದ ನಾನು ಪ್ರತಿಕ್ರಿಯೆಯನ್ನೇ ನಿರೀಕ್ಷಿಸಿರಲಿಲ್ಲ. ಶುಭೋ ಅವರನ್ನು ಸಂಧಿಸಿದಾಗ ಅವರ ಆ ಸಕಾರಾತ್ಮಕ ಮನೋಭಾವ ನನಗೆ ಹಿಡಿಸಿತ್ತು.

 ಒಬ್ಬ ವ್ಯಕ್ತಿಯ ಅನನ್ಯತೆಯನ್ನು ಗುರುತಿಸುವುದೇ 'ಮಿಥ್ಯ'ದ ಸಾರಾಂಶ. ನಿಮ್ಮಲ್ಲಿ ಇಂತಹ ಜಿಜ್ಞಾಸೆ ಬಂದಿದ್ದಿದೆಯೆ?

ಹೌದು, ಕೆಲ ಬಾರಿ ನಾನು ಆ ರೀತಿಯಲ್ಲಿ ಚಿಂತಿಸುವುದಿದೆ. ಯಾರು ಈ ರಜತ್? ರಜತ್ ಅಂದರೆ ಏನು? ನೀವು ಬೆಳೆಯುತ್ತಿದ್ದಂತೆಯೇ ಈ ಜೀವನವನ್ನು ನಿಮಗಾಗಿ ಮುಡಿಪಾಗಿಡುತ್ತೀರಿ. ಆದರೆ ಕೊನೆಯಲ್ಲಿ ಇದೆಲ್ಲವೂ ಒಂದು ಮಾಯೆ...

 'ಮಿಥ್ಯ'ದಲ್ಲಿ ರಣ್‌ವೀರ್ ಮತ್ತು ನೇಹಾ ಅಭಿನಯ ಕಂಡು ನೀವು ಬೆರಗಾಗಿದ್ದೀರಿ ಎಂದು ಕೇಳಿರುವೆ. ಅವರ ನಟನಾ ಸಾಮರ್ಥ್ಯವನ್ನು ಹೊರ ತರುವಲ್ಲಿ ಒಬ್ಬ ನಿರ್ದೇಶಕನಾಗಿ ನಿಮ್ಮ ಕೊಡುಗೆ ಏನು?

 ಹೌದು, ಇದು ರಣ್‌ವೀರ್ ಈವರೆಗೆ ಅಭಿನಯಿಸಿದ ಅತ್ಯುತ್ತಮ ಪಾತ್ರ. ನಾನು ನಟನಾಗಿದ್ದಾಗ ಇಂಥ ಪಾತ್ರ ಸಿಗಲಿ ಎಂದು ಹಾತೊರೆದಿದ್ದೆ. ಅವರು ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಅವರ ಇಂಥ ಶ್ರೇಷ್ಠ ಅಭಿನಯದಲ್ಲಿ ನನ್ನ ಪಾತ್ರವೇನು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಚಿತ್ರಕಥೆ ಎಲ್ಲವನ್ನೂ ಮಾಡಿಸಿದೆ ಎನ್ನಬಹುದು.

 'ಮಿಥ್ಯ' ಚಿತ್ರೀಕರಣ ಸಂದರ್ಭದಲ್ಲಿ ಅತೀ ಕ್ಲಿಷ್ಟ ಎನಿಸಿದ ಸನ್ನಿವೇಶ?

 ರಣ್‌ವೀರ್ ಬೀಳುವ ಸನ್ನಿವೇಶವನ್ನು ಚಿತ್ರೀಕರಿಸುವುದು ಬಹಳ ಕಷ್ಟವೆನಿಸಿತ್ತು. ಇರಾವತಿ ಮತ್ತು ರಣ್‌ವೀರ್ ನಡುವಿನ ಅಂತಿಮ ವಿದಾಯ ಸನ್ನಿವೇಶ ನಿರ್ದೇಶಿಸುವುದೂ ತ್ರಾಸವೆನಿಸಿತ್ತು. ದೋಣಿ ಮೇಲೆ ನಡೆದ ಎರಡು ದಿನಗಳ ಚಿತ್ರಕರಣ ನಿಜಕ್ಕೂ ಪ್ರಯಾಸದ ಕೆಲಸವಾಗಿತ್ತು...

 'ಮಿಥ್ಯ' ಚಿತ್ರಕ್ಕೆ ಬಾಯಿ ಮಾತಿನಿಂದಲೇ ಸಾಕಷ್ಟು ಪ್ರಚಾರ ಸಿಕ್ಕಿದೆ ಎಂದು ಅರಿವಾದಾಗ ಏನನ್ನಿಸುತ್ತದೆ?

 ನಿಜಕ್ಕೂ ಅದ್ಭುತ. ಸಣ್ಣ ಬಜೆಟ್ ಚಿತ್ರವಾದ್ದರಿಂದ ಬಾಯಿ ಮಾತಿನ ಪ್ರಚಾರ ಅಗತ್ಯ. 'ಪ್ಲಾನ್‌ಮನ್ ಮೋಷನ್ಸ್ ಪಿಕ್ಚರ್‍ಸ್'ಗೆ ಚಿತ್ರದ ಮೇಲೆ ನಂಬಿಕೆ ಇದೆ. ನಿರ್ದೇಶಕನಾಗಿ ನನಗೆ ಉತ್ತೇಜನ ಸಿಕ್ಕಿದೆ. ನೀವೆಲ್ಲ ಇದನ್ನು ನೋಡುವಿರೆಂದು ನಂಬುವೆ.

 ಟಿಎಸ್‌ಐ

 ಶುಭೋ ಭಟ್ಟಾಚಾರ್‌ಜೀ, ಪ್ಲಾನ್‌ಮನ್ ಮೋಷನ್ ಪಿಕ್ಚರ್‍ಸ್

 ಪ್ಲಾನ್‌ಮನ್ ಮೋಷನ್ ಪಿಕ್ಚರ್‍ಸ್ 'ಮಿಥ್ಯ'ದಂತಹ ಚಿತ್ರಕಥೆಯನ್ನು ಕೈಗೆತ್ತಿಕೊಂಡದ್ದೇಕೆ?

ಸುಮಾರು ಎಂಟು ವರ್ಷಗಳಿಂದ ರಜತ್ ಅವರು 'ಮಿಥ್ಯ' ಕಥೆಯನ್ನು ಹಿಡಿದು ವಿವಿಧ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ. ಆದರೆ ಅಂತಹ ಕಥೆಯನ್ನು ಓದಿಯೂ ಅದರ ಲಾಭ ಪಡೆದುಕೊಳ್ಳಲಿಲ್ಲವಲ್ಲ ಎಂದೇ ನನಗೆ ಅಚ್ಚರಿ ಎನಿಸುತ್ತಿದೆ. ಇದು ಒಂದು ನೈಜ, ಅದ್ಭುತ, ಗ್ಯಾಂಗ್‌ಸ್ಟರ್ ಚಿತ್ರ. ನಾವು ಆ ಚಿತ್ರಕಥೆಯನ್ನು ಓದುತ್ತಲೇ ಅದನ್ನು ತೆರೆ ಮೇಲೆ ತರಲೇಬೇಕು ಎಂಬ ನಿರ್ಧಾರಕ್ಕೆ ಬಂದೆವು. ಇಂತಹ ಹಾಸ್ಯ, ಕಾಠಿಣ್ಯ, ಮನೋರಂಜನೆ ಮತ್ತು ಹುಚ್ಚು ಉತ್ಸಾಹ ಇದ್ದ ಆ ಕಥೆ ಕೈಗೆತ್ತಿಕೊಳ್ಳದೆ ಪಕ್ಕಕ್ಕಿಡುವುದಾದರೂ ಹೇಗೆ?

ಪ್ಲಾನ್‌ಮನ್ ಪ್ರಾಯೋಗಿಕ ಚಿತ್ರವನ್ನು ನಿರ್ಮಿಸುವ ಚಿಂತನೆ ಮಾಡಿದ್ದೆಂದು?

ಇದು ಪ್ರಜ್ಞಾಪೂರ್ವಕ ತೆಗೆದುಕೊಂಡ ತೀರ್ಮಾನವಲ್ಲ. ಜನರ ಮನ ಸೆಳೆಯುವಂತಹ ಉತ್ತಮ ಚಿತ್ರ ನಿರ್ಮಾಣ ಮಾತ್ರ ನಮ್ಮ ಉದ್ದೇಶ. ಪ್ರತಿ ಪ್ರೊಡಕ್ಷನ್ ಸಂಸ್ಥೆಗಳಿಗೂ ವಸ್ತು ವಿಷಯದ ಬಗ್ಗೆ ತಮ್ಮದೇ ಆಯ್ಕೆಗಳಿರುತ್ತವೆ. 'ಮಿಥ್ಯ' ನಮ್ಮ ಚಿಂತನಾಲಹರಿಗೆ ತಕ್ಕಂತಿತ್ತು.

'ಮಿಥ್ಯ' ಚಿತ್ರಕ್ಕೆ ಬಾಯಿ ಮಾತಿನಿಂದಲೇ ಸಾಕಷ್ಟು ಪ್ರಚಾರ ಸಿಕ್ಕಿದೆ ಎಂದು ಅರಿವಾದಾಗ ಏನನ್ನಿಸುತ್ತದೆ?

 ಚಿತ್ರ ತೆರೆ ಕಂಡ ಮೊದಲ ಮೂರು ದಿನಗಳಲ್ಲಿ ಗಳಿಕೆ ಹೆಚ್ಚಾಗುವ ಉದ್ದೇಶ ದಿಂದ ಅದಕ್ಕೆ ಪ್ರಚಾರ ನೀಡಲಾಗುತ್ತದೆ. ಆದರೆ ಕಥೆ ಚೆನ್ನಾಗಿದ್ದರಿಂದ ಮತ್ತು ಅತ್ಯುತ್ತಮ ನಿರೂಪಣೆಯಿಂದಾಗಿ 'ಮಿಥ್ಯ' ಬಗ್ಗೆ ಪ್ರಚಾರ ದೊರೆಯಿತು. ಓಸಿಯಾನ್‌ನಲ್ಲಿ ನಾವು ಚಿತ್ರವನ್ನು ಪ್ರದರ್ಶಿಸಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಚಿತ್ರ ಪ್ರದರ್ಶನದ ಸಂದರ್ಭ ಜನರು ಕಿಕ್ಕಿರಿದು ಸೇರಿದ್ದರು.

'ಮಿಥ್ಯ'ಗೆ ಪ್ಲಾನ್‌ಮನ್ ಕೊಡುಗೆ ಏನು?

ಸಣ್ಣ ಬಜೆಟ್‌ನಿಂದ ಈ ಕಥೆಗೆ ನ್ಯಾಯ ಒದಗಿಸುವುದು ಸಾಧ್ಯವಿಲ್ಲ ಎನ್ನುವುದು ಚಿತ್ರಕಥೆಯನ್ನು ಓದಿದಾಗಲೇ ಮನವರಿಕೆಯಾಯಿತು. ಹೀಗಾಗಿ ದೊಡ್ಡ ಬಂಡವಾಳವನ್ನೇ ಹೂಡಿದೆವು. ಪ್ರೊಡಕ್ಷನ್‌ನಲ್ಲಿ ಸಮಸ್ಯೆಯಾಗಬಾರದು ಎಂದು ನಾವು ಅತ್ಯುತ್ತಮ ತಂತ್ರಜ್ಞರ ನೆರವು ಪಡೆದುಕೊಂಡೆವು.

 ರಜತ್ ನಿಮ್ಮನ್ನು ಸಂಪರ್ಕಿಸಿದಾಗ ಪಾತ್ರಗಳ ಆಯ್ಕೆ ಮಾಡಿದ್ದರೆ?

ಅವರು ಆಯ್ಕೆಗಳನ್ನು ಇಟ್ಟುಕೊಂಡು ನಮ್ಮ ಬಳಿಗೆ ಬಂದಿದ್ದರು. ಆದರೆ ಈ ಚಿತ್ರಕ್ಕೆ ಸೂಕ್ತ ವ್ಯಕ್ತಿ ರಣವೀರ್ ಎನ್ನುವುದೇ ನಮ್ಮ ಅಭಿಪ್ರಾಯವಾಗಿತ್ತು. ಆ ಸಂದರ್ಭದಲ್ಲಿ ರಣವೀರ್ ಅಪರಿಚಿತ ವ್ಯಕ್ತಿಯಾಗಿದ್ದ. ಆದರೆ ರಜತ್ ಅವರಲ್ಲಿ ಯಾರಿಂದಲೂ ಕೆಲಸ ಮಾಡಿಸಬಲ್ಲ ಸಾಮರ್ಥ್ಯವಿತ್ತು. ಉಳಿದ ಪಾತ್ರಗಳನ್ನು ಜೊತೆಯಾಗಿ ಆರಿಸಿದೆವು.

'ಮಿಥ್ಯ'ಗೆ ಪ್ರತಿಕ್ರಿಯೆಗಳು ಹೇಗಿವೆ? ಪ್ಲಾನ್‌ಮನ್‌ನ ಭವಿಷ್ಯದ ಯೋಜನೆಗಳು?

'ಮಿಥ್ಯ' ನೋಡಿ ರೋಮಾಂಚನಗೊಂಡ ಟ್ಯಾಂಗರಿನ್ ಡಿಜಿಟಲ್ ಎಂಟರ್‌ಟೈನ್ ಮೆಂಟ್ ಒಂದು ಉತ್ತಮ ಅವಕಾಶ ಮುಂದಿಟ್ಟಿದೆ. ಮೂರೇ ವಾರಗಳ ಅಭಿಯಾನದಲ್ಲಿ ಮಾರುಕಟ್ಟೆಯಲ್ಲಿ ನಮ್ಮ ಪರವಾಗಿ ಒಲವು ಕಂಡು ಬಂದಿರುವುದನ್ನು ಗಮನಿಸಿದ್ದೇವೆ. ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದ್ದೇವೆ. ಚಿತ್ರದ ಪ್ರಿಂಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮುಂದೆ ನಮ್ಮ ಸಂಸ್ಥೆ ಸೌರಭ್ ಶುಕ್ಲಾ ಅವರ 'ಐ ಆಮ್ 24', 'ದ ಲಾಸ್ಟ್ ಲಿಯರ್', 'ಸನ್‌ಗ್ಲಾಸ್' ಎನ್ನುವ ಕಾಲ್ಪನಿಕ ಹಾಸ್ಯ ಚಿತ್ರವನ್ನು ಪ್ರೇಕ್ಷಕರ ಮುಂದಿಡಲಿದೆ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .