ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಣ್ಣದ ಲೋಕ
 
 

ಶ್ರೀಮತಿ ಐಶ್ವರ್ಯಾ ಕನ್ಯಾ ಕಾಲೇಜು!

ಈ ಲಖನೌ ಮಂದಿಗೆ ಏನಾಗಿದೆ? ಶಾಲೆಯಿಂದ ಹೊರಟು ಬಂಗಲೆಯುದ್ದಕ್ಕೂ ಐಶ್ವರ್ಯಾ ರೈ ನಾಮಾರ್ಚನೆ ಕೇಳಿ ಬರುತ್ತಿದೆ. ಬಚ್ಚನ್ ಕುಟುಂಬ ಕೊಡುಗೆ ನೀಡಿದ ಭೂಮಿಯಲ್ಲಿ ನಿರ್ಮಿಸಲಾದ ಶಾಲೆಗೆ ಹಳ್ಳಿಗರು 'ಶ್ರೀಮತಿ ಐಶ್ವರ್ಯಾ ಬಚ್ಚನ್ ಕನ್ಯಾ ಮಹಾವಿದ್ಯಾಲಯ' ಎಂದು ಹೆಸರಿಟ್ಟಿದ್ದಾರೆ. ಇನ್ನು ಅಮರ್ ಸಿಂಗ್ ಎಂಬ ರಾಜಕಾರಣಿ ತನ್ನ ಭವ್ಯ ಬಂಗಲೆಗೆ 'ಐಶ್ವರ್ಯಾ' ಎಂದು ನಾಮಕರಣ ಮಾಡಿದ್ದಾರೆ. ಐಶ್ವರ್ಯ ಎಂದರೆ ಸಮೃದ್ಧಿ ಎಂದುಕೊಳ್ಳಬಹುದು. ಆದರೆ ನಾವು ಅಷ್ಟು ಮೂರ್ಖರೆ? ಐಶ್ವರ್ಯಾ... ಬೇಗ ನಿನ್ನ ಹೆಸರಿಗೊಂದು ಕಾಪಿ ರೈಟ್ ತಗಳಮ್ಮಾ!

ಕುಣಿಯೋಣು ಬಾರಾ

ಮೊದಲೇ ಕಿಂಗ್ ಖಾನ್ ಅವರ ಹೊಗಳುಭಟ್ಟರೇನು ಕಡಿಮೆ ಇರಲಿಲ್ಲ. ಈಗ ಹೃತಿಕ್ ರೋಷನ್ ಕೂಡಾ ಆ ಸಾಲಿಗೆ ಸೇರಿದ್ದಾರೆ. ಅಯ್ಯೋ, ಯಾಕಪ್ಪಾ? ರಾಕೇಶ್ ರೋಶನ್ ಅವರ ಮುಂದಿನ ಚಿತ್ರ 'ಕ್ರೇಜಿ ೪'ನಲ್ಲಿ ಶಾರುಕ್ ಐಟಮ್ ನೃತ್ಯ ಮಾಡುತ್ತಿದ್ದಾರೆ! ಹೃತಿಕ್‌ಗೆ ಮಂಡಿ ನೋವು. ಹೀಗಾಗಿ ಶಾರುಕ್ 'ಒಕೆ' ಎಂದು ಬಿಟ್ಟರು. ಚಿತ್ರದ ಪ್ರಚಾರದಲ್ಲಿ ಮಾತ್ರ ಇದೇ ಹಾಡಿಗೆ ಹೃತಿಕ್ ಕುಣಿಯುತ್ತಾರೆ. ಅರೆ, ಹೋಲಿಕೆಗಳು ಶುರುವಾದರೆ? ಚಿಂತೆ ಇಲ್ಲ ಬಿಡಿ ಎನ್ನುತ್ತಾರೆ ಬಾಲಿವುಡ್ 'ಸೂಪರ್‌ಮ್ಯಾನ್'. ನೃತ್ಯದಲ್ಲಿ ನನ್ನನ್ನು ಮೀರಿಸುವವರಿಲ್ಲ ಎನ್ನುವ ಒಣಜಂಭವೆ?

'ಸುಕುಮಾರ'ನ ಗೌರಿ!

ಕನ್ನಡದಲ್ಲಿ ಒಂದೆರಡು ಚಿತ್ರದಲ್ಲಿ ನಟಿಸಿದ 'ನಮ್ಮ ಬಸವ'ದ ಗೌರಿ ಮುಂಜಾಲ್ ಎಲ್ಲಿ ಅಂತ ಯಾರೂ ಚಿಂತೆ ಮಾಡಿರಲ್ಲ ಬಿಡಿ. ಆದರೂ ತೆಲುಗಿಗೆ ಹಾರಿದ ಈ ದಿಲ್ಲಿ ಬೆಡಗಿಯ ಬಗ್ಗೆ ಹೇಳುವುದು ನಮ್ಮ ಕರ್ತವ್ಯ. 'ಗಂಡ ಹೆಂಡತಿ' ಮತ್ತು 'ಗೋಪಿ' ಚಿತ್ರಗಳಲ್ಲಿ ನಟಿಸಿ ಒಂದೊಮ್ಮೆ ಪುನೀತಳಾಗಿದ್ದಳು! ಕಥೆಯ ಮುಂದಿನ ಭಾಗ ಕೇಳುವಂಥವರಾಗಿ... ಈಗ ಈಕೆ 'ಸುಕುಮಾರ'ನಿಗೆ ನಾಯಕಿ. ಮಲಯಾಳಂ ನಿರ್ದೇಶಕ ರಾಜಸೇನನ್ ನಿರ್ದೇಶನದ ಈ ಚಿತ್ರಕ್ಕೆ ನಟಿ ಸಿಂಧು ಮೆನನ್ ಸಹೋದರ ಕಾರ್ತಿಕ್ ನಾಯಕ. ಮತ್ತೊಂದು ಶುಭಸುದ್ದಿ ಎಂದರೆ 'ಸುಕುಮಾರ'ದಲ್ಲಿ ಈಕೆಗೆ ಸಿನಿಮಾ ನಟಿ ಪಾತ್ರ.

ಅಮೀರ್ ನಮ್ರತೆ

ಅಮೀರ್ ಖಾನ್ ಇತ್ತೀಚೆಗೆ ಜೈಪುರದ ಚಿಂತಕರ ಲೋಕದ ರುಚಿ ಸವಿದಿದ್ದಾರೆ. ಲೇಖಕ, ಓದುಗ, ಪ್ರಕಾಶಕ, ಪತ್ರಕರ್ತರಿರುವ ಬೃಹತ್ ಸಾಹಿತ್ಯ ಸಮಾವೇಶದಲ್ಲಿ 'ತಾರೆ ಜಮೀನ್ ಪರ್' ಚಿತ್ರದ ಪ್ರಶಂಸೆ ಕೇಳಿ ಅವರ ಕಿವಿಗಳು ಪಾವನವಾಗಿದ್ದವು. ಇವುಗಳ ನಡುವೆ ಕೆಲವರು ತಾವು ಬರೆದ ಚಿತ್ರಕಥೆಯನ್ನು ಅಮೀರ್‌ಗೆ ನೀಡಿ ಜೀವಮಾನದ ಸಾಧನೆ ಮೆರೆದರೂ, ಅಸಂಬದ್ಧ ಪ್ರಶ್ನೆ ಕೇಳಿ ಗಮನ ಸೆಳೆಯಲು ಪ್ರಯತ್ನಿಸಿದರೂ ಅಮೀರ್ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದ್ದಾರೆ! ಎಲ್ಲಾ ಚಿತ್ರಕಥೆಗಳನ್ನೂ ಸ್ವೀಕರಿಸಿ, ಟೀಕೆಗಳಿಗೆ ಮೌನವಾಗಿದ್ದು ವಿನಮ್ರತೆ ಮೆರೆದಿದ್ದಾರೆ. ಇಶಾನ್ ಅವಾಸ್ತಿ ಕಲಿಸಿಕೊಟ್ಟ ತಾಳ್ಮೆಯೇ?

ಓಡಲಿ ಮಾರಾಯ್ರೆ?

'ಮಿಂಚಿನ ಓಟ'ದ ಸಂಗತಿ ಎಂತ ಗೊತ್ತಾ ಮಾರಾಯ್ರೆ? ಇದು ಮಂಗಳೂರು- ಬೆಂಗಳೂರು ನಡುವಿನ ೧೨ ಗಂಟೆಗಳ ಪ್ರಯಾಣದ ಕಥೆ. 'ಸೈನೈಡ್' ಖ್ಯಾತಿಯ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಮುರಳಿ- ವಿಜಯ್ ಜೋಡಿ ಇದೆ. ಸ್ಯಾಂಡಲ್‌ವುಡ್ ಸುಂದರಿ ಲಕ್ಷ್ಮೀ ರೈ ಚಿತ್ರದ ನಾಯಕಿ. ಆದರೆ ಇದೆಲ್ಲಕ್ಕಿಂತ ಭಯಂಕರ ಸಂಗತಿ ಒಂದಿದೆ. ಚಿತ್ರದಲ್ಲಿ ಮುಕ್ಕಾಲು ಗಂಟೆ ಬರೀ ಕ್ಲೈಮ್ಯಾಕ್ಸೇ ಕ್ಲೈಮ್ಯಾಕ್ಸಂತೆ! ಅದೂ ಸಂಪೂರ್ಣ ಥ್ರಿಲ್ಲಿಂಗ್ ಎಂಬ ಸುದ್ದಿ ಬೇರೆ. ಮಂಗಳೂರಿಂದ ಬೆಂಗಳೂರಿಗೆ ಎಷ್ಟು ಓಡಿಯಾರು? ಓಡಲಿ ಬಿಡಿ!

ಧಿಂ ಧಿಂ ಧಿಮಾಕು!

'ಧಿಮಾಕು' ಎಂಬ ಹೊಸ ಚಿತ್ರ ಬರುತ್ತಿದೆ ಕಣ್ರೀ. ನಾಯಕಿ ಖಂಡಿತ ರಮ್ಯಾ ಆಗಿರುತ್ತಾಳೆ ಎಂದುಕೊಳ್ಳುವುದು ಬೇಡ! ಆಕೆಗಿರುವ ಧಿಮಾಕು ಆಕೆಗಾಯಿತು. ಈ 'ಧಿಮಾಕು' ನವೀನ್ ಕೃಷ್ಣ ಅವರದು. ನವೀನ್ ಕೃಷ್ಣ ಯಾರು ಎಂದಿರಾ? 'ಗುಡ್‌ಲಕ್' ಚಿತ್ರಕ್ಕಾಗಿ ಅಕ್ಷಯ್ ಕೃಷ್ಣ ಎಂದು ಹೆಸರಿಟ್ಟುಕೊಂಡು ತೋಪೆದ್ದು ಹೋದ ಪುಣ್ಯಾತ್ಮ! ಈಗ ಅಡ್ಡನಾಮಗಳನ್ನೆಲ್ಲಾ ಕಿತ್ತುಹಾಕಿ ಅದೇ ಹಳೆ ಹೆಸರಿನ ಪಾದ ಹಿಡಿದು ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಭಯ ಬೇಡ, ಈ ಬಾರಿ ಭರ್ಜರಿ ತಯಾರಿ ಮಾಡಿಯೇ ಬ್ಯಾಟಿಂಗ್‌ಗೆ ಇಳಿದಿದ್ದಾರೆ. ಚಿತ್ರದಲ್ಲಿ ಒಂದು ಹಾಡು ಬರೆದಿದ್ದಾರೆ ಮತ್ತೊಂದು ಹಾಡು ಹಾಡಿದ್ದಾರೆ. ಚಿತ್ರಕಥೆಯಲ್ಲೂ ಕೊಂಚ ಇರಲಿ ಎಂದು ಸಹಾಯ ಮಾಡಿದ್ದಾರೆ. ನೀವು ದೇವರೇ ಗತಿ ಅಂದಿದ್ದು ನಮಗಂತೂ ಕೇಳಿಸಿಲ್ಲ!

ಕಮ್ ಆನ್ ಕ್ಯಾಥಿ!

'ಗ್ರೇಸ್ ಅನಾಟಮಿ' ಚಿತ್ರದ ಬಿನ್ನಾಣಗಿತ್ತಿ ಕ್ಯಾಥರೀನ್ ಹೇಗಲ್ ಮದುವೆಯಾದ ತಕ್ಷಣ ಪತಿ ಜೋಶ್ ಕೆಲ್ಲಿ ಜೊತೆ ಗೃಹಪ್ರವೇಶವನ್ನೂ ಮಾಡಿದ್ದಾಳೆ. ಅಚ್ಚರಿಯ ಸಂಗತಿ ಎಂದರೆ ಎತ್ತುವುದು ಇಳಿಸುವುದರಿಂದ ತೊಡಗಿ ಸಣ್ಣ- ಪುಟ್ಟ ಕೆಲಸಗಳನ್ನೆಲ್ಲಾ ಸ್ವತಃ ಮಾಡುತ್ತಿದ್ದಳು. ಸಂಪ್ರದಾಯದ ಮೇಲೆ ತುಸು ಹೆಚ್ಚೇ ನಂಬಿಕೆ ಬೇರೆ. '೧೦ ಮೋಸ್ಟ್ ಫ್ಯಾಸಿನೇಟಿಂಗ್ ಪೀಪಲ್ ಆಫ್ ೨೦೦೭' ಪಟ್ಟಿಯಲ್ಲಿ ತನ್ನಂಥ ಬೋರಿಂಗ್ ನಟಿಯನ್ನು ಸೇರಿಸಿದ್ದೇಕೆ ಎಂದು ಪ್ರಶ್ನಿಸಿದ್ದೂ ಸಾರ್ಥಕ! ಆದರೂ... ಕಮ್ ಆನ್ ಕ್ಯಾಥಿ! ಇಂತಹ ಪ್ರಶಂಸೆಗಳನ್ನೆಲ್ಲಾ ತಿರಸ್ಕರಿಸುವುದೇ? ಪರವಾಗಿಲ್ಲ. ಸಂಪ್ರದಾಯವಾದಿಯಾದರೇನು? ಒಯ್ಯಾರಕ್ಕೇನು ಕಡಿಮೆ ಇಲ್ಲವಲ್ಲ!

ಎನ್.ಕೆ. ಸುಪ್ರಭಾ, ಸ್ವಾತಿ ಹೋರಾ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .