ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
 
ಹೆಜ್ಜೆಗಳು
ಅಗ್ಗದ 'ಟಾಂಗ್ರಿ' ಬೇಕಾ ದಾದಾ?
 
 
Prashantho Banerjee
ಪ್ರಶಾಂತೊ ಬ್ಯಾನರ್ಜಿ
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್

ಮಳೆಯಿಂದ ತೋಯ್ದ ಆ ಕರಿ ರಸ್ತೆಯ ಮೇಲೆಲ್ಲಾ ನಿಯಾನ್ ಬೆಳಕಿನ ರಂಗು... ಮಕ್‌ಮಲ್ ಟೋಪಿ ಹಾಕಿದ್ದ ಮಗುವೊಂದು ಬಾಲ ಅಲ್ಲಾಡಿಸುತ್ತಾ ಓಡುತ್ತಿದ್ದ ಕೊಬ್ಬಿದ ಬೀದಿ ನಾಯಿಯ ಹಿಂದೆ ಓಡುತ್ತಿತ್ತು... ತನ್ನ ಖಾಲಿ ಬೋಗಿಗಳನ್ನು ಎಳೆಯುತ್ತಾ ಒಂದು ದೊಡ್ಡ ಟ್ರಾಂ ಮೈದಾನವನ್ನು ಹಾದು ಹೋಯಿತು. ಮಳೆಯಿಂದ ಆರ್ದ್ರಗೊಂಡ ಕೋಲ್ಕತ್ತಾ ನಗರಿ ಆ ಕತ್ತಲಲ್ಲಿ ಮದುಮಗಳಂತೆ ಕಂಗೊಳಿಸುತ್ತಿತ್ತು. ಮೋಜಾ ಮಾಂಗ್ತಾ ದಾದಾ ಕವಳದ ರಸವನ್ನು ಬಾಯಿತುಂಬಾ ತುಂಬಿಕೊಂಡ ಆ ಕೆಂಪು ಕಣ್ಣಿನ ಸಿಖ್ ಟ್ಯಾಕ್ಸಿ ಚಾಲಕ ಕೇಳಿದ. ರಿಯರ್ ವ್ಯೂ ಮಿರರ್‌ನಲ್ಲಿ ನನ್ನ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ. ನನಗೆ ನೀನು ಏನು ಹೇಳುತ್ತಿದ್ದೀಯೋ ಗೊತ್ತಿಲ್ಲ ಆದರೆ ಯಾರ ಬಳಿ ಮಾತನಾಡುತ್ತಿರುವೆ ಎಂಬ ಪ್ರಜ್ಞೆ ನಿನಗಿದೆ ಎಂದು ಭಾವಿಸುತ್ತೇನೆ ಎಂಬಂಥ ಒಂದು ದೃಷ್ಟಿ ಆತನ ಕಡೆ ಬೀರಿದೆ. ಆತನಿಗೆ ಅದು ಅರ್ಥವಾಗಿರಲೇ ಬೇಕು. ಕೋಯಿ ಪತಾ ಚೋಲ್ಬೇನಾ ದಾದಾ... ಆ ರೀತಿಯ ಒಂದು ರಹಸ್ಯ ಜಾಗ ನನಗೆ ಗೊತ್ತು ಹಲ್ಲು ಗಿಂಜುತ್ತಾ ಆತ ಮುಂದುವರಿಸುತ್ತಿದ್ದ. ಅಂದರೆ? ದೇಹವಿಡೀ ವ್ಯಾಪಿಸುತ್ತಿದ್ದ ಕಂಪನವನ್ನು ತೋರಗೊಡದೆ ನನ್ನ ಕುತೂಹಲ ಮಾತ್ರ ಪ್ರದರ್ಶಿಸುತ್ತಾ ಕೇಳಿದೆ. ಟಾಂಗ್ರಿ ದಾದಾ, ಟಾಂಗ್ರಿ ಚಾ? ಟಾಂಗ್ರಿ? ಆತ ನಿಜವಾಗಿಯೂ ನನಗೆ ಏನು ಕೊಡಿಸಬೇಕೆಂದಿದ್ದಾನೆ... ಕಾಯಿಲೆ ಬೀಳದ ಕೋಳಿಯೇ? ಕೊಂಚ ಬೇಸರಗೊಂಡು ಕೇಳಿದೆ ಟಾಂಗ್ರಿ ಅಂದ್ರೆ? ಹುಡುಗಿ ದಾದಾ, ಅಗ್ಗದ ಹುಡುಗಿ... ಬೇಕಾ? ಹಠಾತ್ 'ಆಘಾತ'ದಿಂದ ಬೆಚ್ಚಿಬಿದ್ದೆ! ನನ್ನ ನೀರಸ ಪ್ರತಿಕ್ರಿಯೆಯೇ ನನಗೆ ಆಸಕ್ತಿ ಇಲ್ಲ ಎಂಬುದನ್ನು ಸಾರಿ ಹೇಳಿರಬೇಕು. ಇಕ್ಕಟ್ಟಾದ ರಸ್ತೆ. ಡ್ರೈವರ್ ಸಾಹೇಬರು ತಮ್ಮ 'ರಸ್ತೆ ಕೆಂಪು ಮಾಡುವ' ಕಾಯಕದಲ್ಲಿ ನಿರತರಾದರು. ಆತ ಇನ್ನೊಮ್ಮೆ ಉಗಿಯುವುದಕ್ಕಿಂತ ಮುಂಚೆ ನಾನು ಕಿಟಕಿ ಗಾಜುಗಳನ್ನು ಮೇಲೇರಿಸಿದೆ. ನಂತರ ಆ ಕೆಂಪು ಚಿಮುಕಿಸಿಕೊಂಡ ಗಾಜಿನ ಮೂಲಕವೇ ಕೋಲ್ಕತ್ತಾದ ಸೌಂದರ್ಯ ಆಸ್ವಾದಿಸುವುದರಲ್ಲಿ ತಲ್ಲೀನನಾದೆ. ಆ ಕೆಂಪು ಕಲೆಗಳನ್ನು ನೋಡಿ ನನಗೆ ಕ್ರಾಂತಿ ಸಾಹಿತ್ಯದ ನೆನಪಾಯಿತು. ನನ್ನ ಡ್ರೈವರ್ ಕಮ್ಯುನಿಸ್ಟನಿರಬಹುದೇ ಎಂಬ ಭಾವನೆ ಮಿಂಚಿ ಮರೆಯಾಯಿತು. ಒಂದು ಮಸೀದಿ... ಒಂದು ಸ್ಟೇಟ್ಸ್‌ಮನ್ ಕಟ್ಟಡ... ಒಮ್ಮೆ ಇಲ್ಲಿಗೆ ಬಂದಿದ್ದೆ... ಬಹುಶಃ ಸರಿ ದಾರಿಯಲ್ಲೇ ಹೋಗುತ್ತಿದ್ದೇನೆ. ಖೋತೋಕೋನ್... ಎಷ್ಟು ದೂರ? ಮೌನ ಮುರಿದೆ. ಟ್ಯಾಕ್ಸಿ ಡ್ರೈವರ್‌ಗಳ ಜೊತೆ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲುವುದಿಲ್ಲ. ಅಲ್ಲ... ಇದು ಮೊದಲಬಾರಿಯೇ? ಆತ ಮತ್ತೊಮ್ಮೆ ಸ್ಪಷ್ಟವಾಗಿ ನನ್ನ ಮುಖ ನೋಡಿದ. ದೇವರೇ! ನಾನು ಪೆದ್ದನಂತೆ ಕಾಣುತ್ತಿದ್ದೇನೆಯೇ? ಅರೇ ನನಗೆ ಆಸಕ್ತಿ ಇಲ್ಲ ಅಂತ ಎಷ್ಟು ಬಾರಿ ಹೇಳಬೇಕು? ಸ್ವಲ್ಪ ಖಾರವಾಗೇ ಹೇಳಿದೆ. ಉತ್ತರದಲ್ಲಿ ಅಸಮಾಧಾನ ಸ್ಪಷ್ಟವಾಗಿ ಇಣುಕುತ್ತಿತ್ತು. ಬಿಸಿ ಮುಟ್ಟಿತು ಅನಿಸುತ್ತದೆ, ಆತ ತೆಪ್ಪಗಾದ. ಸ್ವಲ್ಪ ಸಮಯದ ನಂತರ ಆತ ಕ್ಷಮೆ ಯಾಚಿಸಿದ. ಸ್ಸಾರಿ ದಾದಾ... ಕೋಪ ಮಾಡ್ಕೋಬೇಡಿ... ಕಿರುನಗೆ ನಕ್ಕು ತಲೆ ಅಲ್ಲಾಡಿಸಿದೆ. ನಿಧಾನವಾಗಿ ಆತ ಒಂದು ದೊಡ್ಡ ಗೋಡೆಯ ಬಳಿ ಕಾರು ನಿಲ್ಲಿಸಿದ. ಎಟಾ ಕಾಲೇಜ್... ಇಲ್ಲಿ ನನಗೆ ಗೊತ್ತಿರುವ ಹುಡುಗಿಯರಿದ್ದಾರೆ, ನಿಮಗೆ ಬೇಕಾ? ಹಾಸ್ಟೆಲ್ ಪಕ್ಕ ಒಂದೈದು ನಿಮಿಷ ನಿಂತುಕೊಳ್ಳಿ. ತಲೆಬಿಸಿ ಮಾಡ್ಕೋಬೇಡಿ. ಶಾಲೆಗೆ ಹೋಗೋ ಹುಡುಗೀರೂ ಇದಾರೆ. ನನಗೆ ಸುಸ್ತಾಗಿ ಹೋಯಿತು. ಬೇಡವೇ ಬೇಡ ಎಂದು ತಲೆ ಅಲ್ಲಾಡಿಸಿದೆ. ಈ ಮಾತು ಸಾಕಾಗಿಹೋಗಿತ್ತು. ನಹೀ ಯಾರ್... ನನಗೆ ಆಸಕ್ತಿ ಇಲ್ಲ ಆತ ನಿರಾಶನಾದ. ವಿಷಯ ಬದಲಾಯಿಸಿದೆ. ಯಾವಾಗಿನಿಂದ ಕೋಲ್ಕತ್ತಾದಲ್ಲಿದ್ದೀರಾ? ಸುಮಾರು ವರ್ಷಗಳಾಯಿತು ದಾದಾ. ಸಂಸಾರ? ಮದುವೆಯಾಗಿದೆ ಸಾರ್ ನಗುತ್ತಾ ಒಪ್ಪಿಕೊಂಡ. ಮಕ್ಕಳು? ಮೂರು. ಒಂದು ಹೆಣ್ಣು, ಎರಡು ಗಂಡು. ನಿಜಕ್ಕೂ ಬೆಚ್ಚಿಬಿದ್ದೆ. ತುಂಬಿದ ಮನೆಯ ಯಜಮಾನನೊಬ್ಬ ಈ ರೀತಿಯ ಕೆಲಸಕ್ಕೆ ಇಳಿಯುತ್ತಾನೆ ಎಂಬ ಕಲ್ಪನೆಯೂ ಇರಲಿಲ್ಲ. ಅವರೆಲ್ಲಾ ಶಾಲೆಗೆ ಹೋಗುತ್ತಿದ್ದಾರೆಯೇ ಅಂತ ನಾನು ಕೇಳಿದ್ದು ಆತನ ಕಿವಿಗೆ ಬಿದ್ದಂತೆ ತೋರಲಿಲ್ಲ. ಸಸ್ತಾವೋ ಅಚ್ಚೇ ದಾದಾ... ನಾನು ಕಮಿಷನ್ ಏನೂ ತೆಗೆದುಕೊಳ್ಳೋದಿಲ್ಲ... ಇಲ್ಲದಿದ್ರೆ ಹೋಗ್ಲಿ ಬಿಡಿ ನನ್ನ ಕೋಣೆಗೆ ಬನ್ನಿ ಅಲ್ಲಿ ಒಬ್ಬ ಹುಡುಗಿ ಇದ್ದಾಳೆ. ಬೆಲೆ ತುಂಬಾ ಕಡಿಮೆ ದಾದಾ... ಷೇರ್ ಮಾಡಿಕೊಳ್ಳೋಣ... ನೀವು ದುಡ್ಡು ನನಗೆ ಕೊಟ್ಟರಾಯ್ತು... ತುಂಬಾ ಚೀಪ್ ರೇಟಿಗೇ ಸಿಗುತ್ತೆ ಪ್ಲೀಸ್ ದಾದಾ. ಮುಖವಿಲ್ಲದ ಯುವತಿ, ಸಿದ್ಧನಾಗಿ ನಿಂತಿರುವ ಡ್ರೈವರ್, ಕೊಳಕು ಕೋಣೆ ಎಲ್ಲವೂ ಒಂದು ಕ್ಷಣ ಕಣ್ಣಮುಂದೆ ಬಂದು ನಿಂತಂತಾಯಿತು. ಆತ ಆ ಕೊಳಕು ಸಂಭಾಷಣೆ ಮುಂದುವರಿಸುತ್ತಾ ಗೋಗರೆಯುತ್ತಿದ್ದ. ಆತ ಯಾವುದಕ್ಕಾಗಿ ಈ ರೀತಿ ಅಂಗಲಾಚುತ್ತಿದ್ದಾನೆ.... ದುಡ್ಡಿಗಾಗಿಯೇ? ಕರೆವೆಣ್ಣುಗಳಿಗಾಗಿಯೇ? ಅಥವಾ ನನ್ನನ್ನು ಆತನ ಬಲೆಗೆ ಬೀಳಿಸುವ ಹುನ್ನಾರವೇ? ನಾನು ಜಾಗರೂಕನಾದೆ.ಏಡ್ಸ್ ಬಗ್ಗೆ ಗೊತ್ತಿದೆಯಾ? ಉತ್ತರ ಅದೇ ಮೌನ. ಲಿಂಟನ್ ರಸ್ತೆಯ ಮೇಲೆ ಕಾರು ಓಡುತ್ತಿತ್ತು. ಆತ ಕಾರನ್ನು ನಿಧಾನವಾಗಿ ಓಡಿಸುತ್ತಾ ಕತ್ತು ತಿರುಗಿಸಿ ಅಥವಾ ಹುಡುಗ ಬೇಕಿದ್ದರೂ.... ಅರೆ ಬೇಡ ಅಂಥ ಹೇಳಿದೆನಲ್ಲಾ ನಿನಗೆ ಅರ್ಥವಾಗಲ್ಲವೇ? ...ಆ ಮನುಷ್ಯ ನನಗೆ ಚಿಟ್ಟುಹಿಡಿಸುತ್ತಿದ್ದ. ಅದೃಷ್ಟವಶಾತ್ ಇನ್ನು ಉಳಿದಿದ್ದು ಬರೀ ಐದೇ ನಿಮಿಷಗಳ ಪಯಣ. ಆತ ಏಕೆ ಈ ರೀತಿ ಗೋಗರೆಯುತ್ತಿದ್ದಾನೆ...? ಆತನ ಗಾಡಿಯಲ್ಲಿ ಪಯಣಿಸಿದ ಎಷ್ಟು ಜನರಿಗೆ ಆತ ಈ ರೀತಿ ಪ್ರಚೋದನೆಗಳನ್ನು ಒಡ್ಡಿರಬಹುದು...? ಆತ ಸುಮ್ಮನೇ ಇದ್ದ. ಅಂತೂ ಚಿಕ್ಕಪ್ಪನ ಮನೆ ತಲುಪಿದೆ. ಕಾರಿಂದ ಇಳಿದು ನಾನು ಮುಂಬಾಗಿಲ ಬಳಿ ನಡೆಯುತ್ತಿದ್ದೆ. ನಿನಗೆ ಏಡ್ಸ್ ಬಗ್ಗೆ ಅರಿವಿರಬೇಕು... ಗೊತ್ತು ದಾದಾ. ನನಗೆ ಗೊತ್ತು. ತುಂಬಾ ವರ್ಷಗಳಿಂದ ಈ 'ವೃತ್ತಿ'ಯಲ್ಲಿದ್ದೇನೆ. ಅದರ ಬಗ್ಗೆ ಹತ್ತಿರದಿಂದಲೇ ಗೊತ್ತು ಬಿಡಿ. ಆ ಕಲ್ಲು ಹಾಸಿನ ಹಾದಿ ಮೇಲೆ ಉಗಿದು ಆತ ಕಾರಿನ ಬಾಗಿಲು ಎಳೆದುಕೊಂಡ. ಆದರೆ ಇದರಿಂದ ನನಗೇನೂ ಆಗಬೇಕಾಗಿಲ್ಲ... ಬೆಳೆಯುವ ಮಕ್ಕಳಿದ್ದಾರೆ ದಾದಾ... ನನಗೆ ಪುರುಸೊತ್ತಿಲ್ಲ... ಅವರಿಗೆ ನಾನಲ್ಲದೆ ಬೇರೆ ಗತಿ ಇಲ್ಲ... ಎನ್ನುತ್ತಾ ಆತ ಹೊರಟ. ಆತ ಉಗಿದಿದ್ದ 'ಕೆಂಪು ರಸ'ದ ಮೇಲೆ ಇನ್ನೇನು ಹೆಜ್ಜೆ ಇಡುತ್ತಿದ್ದೆ. ಆದರೆ ಎಚ್ಚೆತ್ತುಕೊಂಡು ಮನೆ ಕಡೆ ಹೊರಟೆ. ಕಾರಿನ ಹಿಂದಿನ ಕೆಂಪು ಲೈಟು ಚಿಕ್ಕದಾಗಿ ಕಾಣುತ್ತಿತ್ತು. ಆತನಿಗೆ ಇನ್ನಷ್ಟು ಹಣ ಕೊಡಬಹುದಿತ್ತೇನೋ...

ಕೆಂಪುದೀಪದ ವಿಷವರ್ತುಲ

ಪಶ್ಚಿಮ ಬಂಗಾಳದ ರಾಜಧಾನಿ 'ವಿಕ್ಟೋರಿಯಾ ಮೆಮೋರಿಯಲ್' ಮತ್ತು ಟ್ರಾಮ್‌ಗಳಿಗೆ ಮಾತ್ರ ಪ್ರಸಿದ್ಧವಲ್ಲ. ಬಂಗಾಳಿ ಬಾಬೂಗಳ ಪತ್ನಿಯರ ಆವಾಸ ಸ್ಥಾನವಾಗಿದ್ದ ಸೋನಾಗಚ್ಚಿ ಈಗ ಪ್ರಸಿದ್ಧ 'ಕೆಂಪು ದೀಪದ ಪ್ರದೇಶ'! ದೇಶದಾದ್ಯಂತವಿರುವ ಸುಮಾರು 2.3 ದಶಲಕ್ಷ ವೇಶ್ಯೆಯರಲ್ಲಿ 10000 ಮಂದಿ ಸೋನಾಗಚ್ಚಿಯ 'ಕಾಣಿಕೆ'. ಅಲ್ಲಿನ ಬಹುಮಹಡಿ ಕಟ್ಟಡಗಳು ಇವರ ವಾಸ ಸ್ಥಾನ. ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಈ ಪ್ರದೇಶದಲ್ಲೇ ಅವರ ಜೀವನ. ಕೆಲವರು ಹೊಟ್ಟೆಪಾಡಿಗಾಗಿ ಇಲ್ಲಿದ್ದರೆ, ಇನ್ನು ಕೆಲವರು ತಮ್ಮ ಸ್ನೇಹಿತರು, ಸಂಬಂಧಿಕರಿಂದಲೇ ಮೋಸ ಹೋಗಿ ಇಲ್ಲಿಗೆ ಮಾರಾಟ ಮಾಡಲ್ಪಟ್ಟವರು. ಇವರಲ್ಲಿ ನೇಪಾಳ, ಬಾಂಗ್ಲಾದೇಶದಿಂದ ಭಾರತಕ್ಕೆ ಮಾರಾಟವಾದ ಹುಡುಗಿಯರೇ ಅಧಿಕ. ಅವರಲ್ಲಿ ಶೇ.15ರಷ್ಟು ಅಪ್ರಾಪ್ತ ವಯಸ್ಸಿನ ಬಾಲಕಿಯರು! ಮದುವೆ, ಕೆಲಸದಂತಹ ಆಮಿಷಕ್ಕೊಳಗಾಗಿ ಈ ನರಕಕ್ಕೆ ಬಂದು ನರಳುತ್ತಿರುವವರು. 'ಕಾನೂನು ಬಾಹಿರ' ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ವಿಷ ವರ್ತುಲಕ್ಕ್ಕೆ ಪ್ರತಿವರ್ಷ ಅದೆಷ್ಟು ಮಕ್ಕಳು ಬೀಳುತ್ತಾರೋ ಲೆಕ್ಕವಿಟ್ಟವರ್‍ಯಾರು? ಕಾಂಡೋಮ್ ಬಳಕೆಯ ಪ್ರಾಮುಖ್ಯತೆಯ ಬಗ್ಗೆ ಇವರಲ್ಲಿ ಜಾಗೃತಿ ಮೂಡಿಸುವವರ್‍ಯಾರು? ಇವೆಲ್ಲಕ್ಕಿಂಥ ಮುಖ್ಯವಾಗಿ ದೌರ್ಜನ್ಯದಿಂದ ಇವರನ್ನು ಕಾಪಾಡುವವರು ಯಾರು? ಜಗತ್ತಿನ ಅತಿ ಪುರಾತನ ವೃತ್ತಿಯಾಗಿರುವ ವೇಶ್ಯಾವೃತ್ತಿ ಏಡ್ಸ್‌ನ ಉಗಮ ಸ್ಥಾನ. ಇಂದು ಭಾರತದಲ್ಲಿರುವ 2.5 ದಶಲಕ್ಷ ಎಚ್‌ಐವಿ ಬಾಧಿತರಲ್ಲಿ ಬಹುತೇಕರು ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡವರು. ವೇಶ್ಯಾವೃತ್ತಿಯನ್ನು ಅಧಿಕೃತ ಉದ್ಯಮವೆಂದು ಪರಿಗಣಿಸಿದ ದೇಶಗಳಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಕಡಿಮೆ ಇದೆ ಎಂಬುದು ಅಚ್ಚರಿಯ ಸಂಗತಿ. ಕೊನೆಯೇ ಕಾಣದ ಈ ಸಮಸ್ಯೆಯಿಂದ ಭಾರತ ಏಡ್ಸ್ ರೋಗಿಗಳ ವಿಷಯದಲ್ಲಿ ದಕ್ಷಿಣ ಆಫ್ರಿಕಾ ನಂತರದ ಸ್ಥಾನ ಗಿಟ್ಟಿಸಿಕೊಳ್ಳುವ ಕಾಲ ದೂರವಿಲ್ಲ.

ಐಐಪಿಎಂ
ಥಿಂಕ್ ಟ್ಯಾಂಕ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .