ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಮುಖಾಮುಖಿ:ಶರದ್ ಯಾದವ್

ಕರ್ನಾಟಕದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ
 

ಅವರು ಜನತಾ ದಳ(ಸಂಯುಕ್ತ) ನಾಯಕತ್ವದ ಹೊಣೆಗಾರಿಕೆಯನ್ನು ಮಾಜಿ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡೀಸ್ ಅವರ ಹೆಗಲಿಂದ ತಮ್ಮ ಹೆಗಲಿಗೆ ಹಾಕಿಕೊಂಡಾಗ ಕೇಸರೀಕರಣದಿಂದ ದೂರ ಸರಿಯುವ ಸೂಚನೆಗಳನ್ನು ನೀಡಿದ್ದರು. ಆದರೆ, ಅದೇ ವ್ಯಕ್ತಿ ಇಂದು ಎಲ್.ಕೆ. ಆಡ್ವಾಣಿ ಅವರನ್ನು ಎನ್‌ಡಿಎಯ ವಿವಾದಾದೀತ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಇಂತಹ ವೈರುಧ್ಯಗಳ ನಾಯಕ, ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಅವರೊಂದಿಗೆ 'ಮುಖಾಮುಖಿ'ಯಾಗಿದ್ದಾರೆ ಟಿಎಸ್‌ಐನ ಪ್ರಮೋದ್ ಕುಮಾರ್.


ಯುಪಿಎ ಸರ್ಕಾರದ ಸಾಧನೆಯನ್ನು ನೀವು ಹೇಗೆ ವಿವರಿಸುತ್ತೀರಿ?

ಯುಪಿಎ ಅಧಿಕಾರಕ್ಕೆ ಬಂದಾಗ ತಾನು 'ಜನ ಸಾಮಾನ್ಯ'ರ ಪರ ಎಂದಿತ್ತು. ಅದಾಗಿ ನಾಲ್ಕು ವರ್ಷಗಳೇ ಉರುಳಿದವು. ಆದರೂ ಈವರೆಗೆ ಜನ ಸಾಮಾನ್ಯರ ಪರವಾಗಿ ಏನೊಂದನ್ನೂ ಮಾಡಿಯೇ ಇಲ್ಲ. ಈ ನಾಲ್ಕು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣದುಬ್ಬರ ದರ ಮಿತಿ ಮೀರಿದೆ, ನಕ್ಸಲೀಯರ ಹಿಂಸೆ ಅವ್ಯಾಹತವಾಗಿ ಮುಂದುವರಿದಿದೆ. ಹಾಗಾಗಿ ಈ ಸರ್ಕಾರ ಎಲ್ಲಾ ರಂಗದಲ್ಲೂ ವಿಫಲವಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ? ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪಿ. ಚಿದಂಬರಂ, ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ವಾಣಿಜ್ಯ ಸಚಿವ ಕಮಲ್‌ನಾಥ್ ಸೇರಿ ನಾಲ್ಕೂ ಮಂದಿ ಯುಪಿಎ ಸರ್ಕಾರದ ಶವಯಾತ್ರೆ ನಡೆಸುತ್ತಿರುವಂತೆ ಕಾಣುತ್ತಿದೆ...

ಆದರೆ, ಪ್ರತಿ ವರ್ಷವೂ ಯುಪಿಎ ತಾನು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಎಸ್‌ಇಝಡ್ ಕಾಯ್ದೆ ತಿದ್ದುಪಡಿ ತಂದಿದ್ದು ಮತ್ತು ಹಣದುಬ್ಬರಕ್ಕೆ ಕಡಿವಾಣ ಹಾಕಿದ್ದನ್ನು ಸಾರಿ- ಸಾರಿ ಹೇಳುತ್ತಿದೆಯಲ್ಲಾ?

ಪ್ರಧಾನಿ ಮತ್ತು ಹಣಕಾಸು ಸಚಿವರಿಬ್ಬರೂ ಆರ್ಥಿಕ ತಜ್ಞರು, ಹಾಗಾಗಿ ಸಹಜವಾಗೇ ಏನೇ ಹೇಳಿದರೂ ಅವರು ಅಂಕಿ-ಅಂಶಗಳ ಕಣ್ಣಾಮುಚ್ಚಾಲೆಯಾಡುತ್ತಾರೆ. ಅವರ ಆರ್ಥಿಕ ನೀತಿಗಳು ಬಡವರ ಪರವಲ್ಲ, ಬದಲಾಗಿ ಕಾರ್ಪೊರೇಟ್ ಸಂಸ್ಥೆಗಳ ಹಿತರಕ್ಷಣೆಗೆ ನಿಂತಿವೆ. ಈ ದೇಶದ ಮೂರನೇ ಒಂದು ಭಾಗದಷ್ಟು ಮಂದಿ ಹಳ್ಳಿಗಳಲ್ಲೇ ವಾಸಿಸುತ್ತಿದ್ದಾರೆ ಮತ್ತು ಬಹಳಷ್ಟು ಸಂಖ್ಯೆಯ ಸಣ್ಣ ವ್ಯಾಪಾರಿಗಳು ದೇಶದ ಪ್ರಜೆಗಳೇ ಎಂಬುದನ್ನು ಅವರು ಅವರು ಸಂಪೂರ್ಣ ಮರತೇಬಿಟ್ಟಂತಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂಬುದನ್ನು ಸರ್ಕಾರದ ಅಧಿಕೃತ ಅಂಕಿ-ಅಂಶಗಳೇ ಹೇಳುತ್ತಿರುವುದರಿಂದ ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವುದು ಸರ್ಕಾರಕ್ಕೆ ಅನಿವಾರ್ಯವಾಯಿತು. ಇನ್ನು ಎಸ್‌ಇಝಡ್ ವಿಷಯದಲ್ಲಿ ಹೇಳಬೇಕೆಂದರೆ, ಕೃಷಿಯೋಗ್ಯ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಸರ್ಕಾರವೇ ಬೃಹತ್ ಉದ್ಯಮಿಗಳಿಗೆ ಪರಭಾರೆ ಮಾಡುತ್ತಿದೆ. ಇದು ದೇಶದ ಆಹಾರ ಭದ್ರತೆಗೆ ಅಪಾಯಕಾರಿಯಾಗಲಿದೆ.

ಎನ್‌ಡಿಎ ಒಗ್ಗಟ್ಟಿನ ಬಗ್ಗೆ ನೀವು ಸದಾ ಹೇಳುತ್ತಿರುತ್ತೀರಿ. ಆದರೆ, ಗುಜರಾತ್ ಚುನಾವಣೆಯಲ್ಲಿ ಜೆಡಿ(ಯು) ಬಿಜೆಪಿ ವಿರುದ್ಧವೇ ಸ್ಪರ್ಧಿಸಿತು. ಲೋಕಸಭಾ ಚುನಾವಣೆಯಲ್ಲೂ ಅದನ್ನೇ ಮುಂದುವರಿಸುತ್ತೀರಾ?

ಗುಜರಾತ್‌ನಲ್ಲಿ ಸ್ಪರ್ಧಿಸಿದ್ದು ಬಿಜೆಪಿ ಅಲ್ಲ, ನರೇಂದ್ರ ಮೋದಿ. ನಾವು ಮೋದಿ ನೀತಿಗಳನ್ನು ಒಪ್ಪುವುದಿಲ್ಲ. ಒಂದು ವಿಷಯ ನಿಮಗೆ ಸ್ಪಷ್ಟಪಡಿಸಬಯಸುತ್ತೇನೆ. ಅದೇನೆಂದರೆ, ಜೆಡಿ(ಯು) ಎಲ್ಲಿ ಹೆಚ್ಚು ಸಂಘಟಿತವಾಗಿದೆಯೋ ಅಂತಹ ಕಡೆ ಬಿಜೆಪಿಯ ವಿರುದ್ಧವೂ ನಾವು ಸ್ಪರ್ಧೆಗಿಳಿಯುತ್ತೇವೆ. ಜಾರ್ಖಂಡ್, ಮಧ್ಯಪ್ರದೇಶ, ಗುಜರಾತ್, ಉತ್ತರಪ್ರದೇಶ ಮತ್ತು ಕರ್ನಾಟಕಗಳಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ.

ಆದರೆ, ಬಿಜೆಪಿಯೊಂದಿಗೆ ನೀವು ಒಪ್ಪಲು ಸಾಧ್ಯವೇ ಇಲ್ಲದ ಕೆಲವು ಪ್ರಮುಖ ಸಂಗತಿಗಳಿವೆ, ಉದಾಹರಣೆಗೆ ಸಂವಿಧಾನದ ೩೫೬ನೇ ವಿಧಿ, ಏಕರೂಪದ ನಾಗರಿಕ ಸಂಹಿತೆ, ರಾಮಮಂದಿರ ನಿರ್ಮಾಣ ಮತ್ತು ರಾಮಸೇತು... ಆದರೂ ನೀವು ಎನ್‌ಡಿಎಯೊಂದಿಗೇ ಇದ್ದೀರಿ... ಇದರರ್ಥ ಏನು?

ನೀವು ಹೇಳುವುದು ಸರಿ. ಅಂತಹ ಕೆಲವು ಕೂತು ಚರ್ಚಿಸಲೇಬೇಕಾದ ವಿವಾದಾತ್ಮಕ ವಿಷಯಗಳಿವೆ. ಅಂತಹ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ನಿಲುವು ಬಿಜೆಪಿಗಿಂತ ಭಿನ್ನ.

ಹಾಗಾದರೆ, ಅದೊಂದು ರೀತಿಯಲ್ಲಿ ಒಲ್ಲದ ದಾಂಪತ್ಯವೇ?

ಹಾಗಲ್ಲ. ಆದರೆ, ಮೈತ್ರಿ ರಾಜಕಾರಣದಲ್ಲಿ ಇಂತಹ ಭಿನ್ನಮತ, ಹೊಂದಾಣಿಕೆಗಳು ಅನಿವಾರ್ಯ. ಇವತ್ತಿನ ಸ್ಥಿತಿಯಲ್ಲಿ ಎನ್‌ಡಿಎ ಬಿಟ್ಟರೆ, ಯುಪಿಎ ಅಷ್ಟೇ ನಮಗಿರುವ ಆಯ್ಕೆಗಳು ಅಲ್ಲವೇ?

ಅದರರ್ಥ ತಾವು ಜಾತ್ಯತೀತ ತೃತೀಯ ರಂಗದ ಯೋಚನೆಯನ್ನು ಬಿಟ್ಟಂತೆಯೇ?

ತೃತೀಯ ರಂಗ ಅನ್ನೋದು ಎಲ್ಲಿದೆ? ಅದು ಮಾಧಮದ ಸೃಷ್ಟಿ ಅಷ್ಟೆ. ಮುಲಾಯಂ ಸಿಂಗ್ ಯಾದವ್ ತಮ್ಮ ಯುಎನ್‌ಪಿಎನಲ್ಲಿ ಎಡರಂಗವೂ ಇದೆ ಎನ್ನುತ್ತಾರೆ. ಆದರೆ, ವಾಸ್ತವವಾಗಿ ಮುಲಾಯಂರ ಈ ರಂಗದಿಂದ ಎಡಪಕ್ಷಗಳು ಗಾವುದ ದೂರದಲ್ಲೇ ಉಳಿದಿವೆ.

ಜೆಡಿ(ಯು)ನಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಪ್ರಸ್ತುತ ಸ್ಥಾನಮಾನ ಏನು?

ಜಾರ್ಜ್ ಫರ್ನಾಂಡೀಸ್ ಬಗ್ಗೆ ಈಗ ಏನನ್ನೂ ಹೇಳಲಾರೆ.

ನೀವು ಅಧ್ಯಕ್ಷರಾದಾಗ ಹೇಳಿದ ಜನತಾ ಪರಿವಾರ ಒಗ್ಗೂಡಿಸುವ ಸಾಧ್ಯತೆ ಇನ್ನೂ ಇದೆಯೇ?

ಅದು ನಿಜವಾದರೆ ಖುಷಿ. ಆದರೆ, ಈ ಹಂತದಲ್ಲಿ ನಾವು ದೇಶದಾದ್ಯಂತ ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸುವತ್ತ ಮಾತ್ರ ಹೆಚ್ಚಿನ ಆಸಕ್ತಿ ಹೊಂದಿದ್ದೇವೆ.

ಮಾಯಾವತಿ ಅವರ ದಿಢೀರ್ ಬೆಳವಣಿಗೆಯನ್ನು ಹೇಗೆ ಅರ್ಥೈಸುತ್ತೀರಿ?

ಅಂತಹದ್ದೇನೂ ಇಲ್ಲ. ಮುಂದಿನ ಚುನಾವಣೆ ವೇಳೆಗೆ ಮಾಯಾವತಿಗೆ ದೊಡ್ಡ ಸೋಲು ಕಟ್ಟಿಟ್ಟಬುತ್ತಿ. ಉತ್ತರಪ್ರದೇಶ ಅವರ ಕೈಜಾರಲಿದೆ. ಉತ್ತರಪ್ರದೇಶದಲ್ಲೇ ಹೀನಾಯ ಸೋಲು ಕಾದಿರುವಾಗ ಅವರು, ಅಲ್ಲಿ ತಮ್ಮನ್ನು ಬಲಪಡಿಸಿಕೊಳ್ಳುವ ಬದಲು ಬೇರೆ- ಬೇರೆ ರಾಜ್ಯಗಳತ್ತ ಗಮನ ಹರಿಸುತ್ತಿದ್ದಾರೆ. ಇದೇ ಅವರಿಗೆ ಮುಳುವಾಗಲಿದೆ.

ಕಾಂಗ್ರೆಸ್ 'ರಾಹುಲ್ ಗಾಂಧಿ ಮುಂದಿನ ತಲೆಮಾರಿನ ನಾಯಕ' ಎಂದು ಹೇಳುತ್ತಿದೆಯಲ್ಲಾ?

ರಾಹುಲ್ ಗಾಂಧಿ 'ಪೇಪರ್ ಟೈಗರ್' ಅಷ್ಟೆ. ರಾಹುಲ್ ರಾಜಕೀಯ ನಾಯಕರು ಎಂಬುದು ಕೇವಲ ಮಾಧ್ಯಮದ ಸೃಷ್ಟಿ. ಉತ್ತರಪ್ರದೇಶ ಮತ್ತು ಗುಜರಾತ್‌ನಲ್ಲಿ ರಾಹುಲ್ ಸಾಕಷ್ಟು ಶ್ರಮಿಸಿದರು. ಆದರೂ ಅವರು ಎಲ್ಲೆಲ್ಲಾ ಹೋದರೋ ಅಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುಂಡರು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಫಲಿತಾಂಶ ತೀರಾ ಕಳಪೆ. ಪ್ರಸಿದ್ಧ ಕುಟುಂಬದಲ್ಲಿ ಹುಟ್ಟಿದ ಅಥವಾ ಲಕಲಕಿಸುವ ರೋಡ್ ಶೋ ಗಳನ್ನು ನೀಡಿದ ಮಾತ್ರಕ್ಕೆ ಯಾರೂ ದೊಡ್ಡ ನಾಯಕರಾಗಿಬಿಡುವುದಿಲ್ಲ. ರಾಜಕೀಯದಲ್ಲಿ ಏನಾದರೂ ಒಂದು ಆಗಬೇಕೆಂದರೆ ನೀವು ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಬೇಕಾಗುತ್ತದೆ. ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಪಡೆದು, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತೇನೆ ಎಂದಾಕ್ಷಣ ಯಾರೊಬ್ಬರೂ ನಾಯಕರಾಗುವುದು ಸಾಧ್ಯವಿಲ್ಲ.

ಗುಜರಾತ್ ಮತ್ತು ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶಗಳ ಬಗ್ಗೆ ಏನನ್ನಿಸುತ್ತದೆ?

ನಾನು ಈಗಾಗಲೇ ಹೇಳಿರುವಂತೆ, ಗುಜರಾತ್‌ನಲ್ಲಿ ಅದು ಮೋದಿಗೆ ಸಂದ ಜಯ. ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಸೋಲಿಗೆ 'ಆಡಳಿತ ವಿರೋಧಿ ಅಲೆ' ಮಾತ್ರ ಕಾರಣವಲ್ಲ. ಬದಲಾಗಿ ಯುಪಿಎ ಸರ್ಕಾರದ ನೀತಿಗಳ ವಿರುದ್ಧದ ಜನಮತ ಅದು. ಆ ಮೂಲಕ ಯುಪಿಎ ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆಯ ಘಂಟೆ ಮೊಳಗಿದೆ, ದಿನಗಣನೆ ಆರಂಭವಾಗಿದೆ. ಯುಪಿಎ ಒಡಕು ಬೀದಿಗೆ ಬರಲು ಇನ್ನೇನು ಕೆಲವೇ ದಿನವಷ್ಟೇ ಬಾಕಿ.

ಹಾಗಾದರೆ, ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದಾಯಿತು?

ಒಂದು ವೇಳೆ ಯುಪಿಎ ತನ್ನ ಜನವಿರೋಧಿ ನೀತಿಗಳನ್ನು ಹೀಗೇ ಮುಂದುವರಿಸಿಕೊಂಡು ಹೋದರೆ, ನಾವು ಅಧಿಕಾರಕ್ಕೆ ಬರುವುದು ಮತ್ತಷ್ಟು ಸುಲಭವಾಗಲಿದೆ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .